ಅತ್ತ ದರಿ ಇತ್ತ ಪುಲಿ

ಅದು 2014 ಲೋಕಸಭಾ ಚುನಾವಣಾ ಸಮಯ. ಅದಾಗಲೇ ಎರಡು ಆಡಳಿತಾವಧಿಯಲ್ಲಿ ಹಗರಣದ ಮೇಲೆ ಹಗರಣಗಳ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್ ಅವರ ಸರ್ಕಾರದ ಮೇಲೆ ಇಡೀ ದೇಶವಾಸಿಗಳ ಆಕ್ರೋಶವಿದ್ದಾಗ ಶುದ್ಧ ಹಸ್ತನಾಗಿ, ದಕ್ಷ ಆಡಳಿತಗಾರನಾಗಿ ಗುಜರಾತನ್ನು ಮುನ್ನೆಡೆಸಿದ್ದ ನರೇಂದ ಮೋದಿಯವರು ಇಡೀ ದೇಶಕ್ಕೆ ಆಶಾವಾದಿಯಾಗಿ ಕಂಡ ಪರಿಣಾಮವಾಗಿ ಅದ್ಭುತವಾದ ಬಹುಮತದೊಂದಿಗೆ ಆಡಳಿತಕ್ಕೆ ಬಂದಿದ್ದು ಈಗ ಇತಿಹಾಸ.

ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲುಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಸಂಸತ್ತನ್ನು ಪ್ರವೇಶಿಸಿ ನಾ ಮೇ ಖಾವುಂಗಾ ಔರ್ ಖಾನೇ ದೂಂಗಾ! ಎಂಬ ಮಾತನ್ನು ಹೇಳಿದ್ದ ಪ್ರಧಾನಮಂತ್ರಿಗಳು ಇದುವರೆವಿಗೂ ಅದನ್ನೇ ಅಕ್ಷರಶಃ ಪಾಲಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. ಮೋದಿಯವರು ಆಡಳಿತಕ್ಕೆ ಬಂದಾಗ ಜನರ ನಿರೀಕ್ಷೆಗಳು ಬೆಟ್ಟದಷ್ಟಿದ್ದವು. ಆಂತರಿಕವಾಗಿ ಮತ್ತು ಬಾಹ್ಯವಾಗಿ ಬಹಳಷ್ಟು ಸಮಸ್ಯೆಗಳು ಇದ್ದವು. ಮೋದಿಯವರು ಅವುಗಳನ್ನು ಒಂದೊಂದಾಗಿ ನಿಭಾಯಿಸುತ್ತಲೇ, ದೂರದೃಷ್ಟಿಯಿಂದಾಗಿ, ಪ್ರತಿಯೊಂದು ಸರ್ಕಾರೀ ಧಾಖಲೆ ಮತ್ತು ಸೇವೆಗಳಿಗೆ ಆಧಾರ್ ಕಾರ್ಡ್ ಜೋಡಣೆ, ನೋಟ್ ಅಮಾನಿಕರಣ, ಜಿ.ಎಸ್.ಟಿ. ಎಲ್ಲವನ್ನೂ ಒಂದೊಂದಾಗಿ ಜಾರಿಗೆ ತಂದಾಗ ಬಹಳಷ್ಟು ಜನರಿಗೆ ತತ್ ಕ್ಷಣದಲ್ಲಿ ತೊಂದರೆ ಎನಿಸಿದರೂ, ದೇಶದ ಹಿತದೃಷ್ಟಿಯಿಂದಾಗಿ ಮೋದಿಯವರು ತೆಗೆದುಕೊಂಡ ನಿರ್ಧಾರಗಳನ್ನು ಸಮರ್ಥನೆ ಮಾಡಿದರು. ಇದರ ಮಧ್ಯೆ, ಪುಲ್ವಾಮಾ ಧಾಳಿಯಾದಾಗ, ನಮ್ಮ ಸೈನ್ಯವನ್ನು ಶತ್ರುಗಳ ನೆಲೆಯೊಳಗೆ ನುಗ್ಗಿಸಿ ತಕ್ಕ ಪಾಠ ಕಲಿಸಿದ ಮೇಲಂತೂ ನಮ್ಮ ಸರ್ಕಾರದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿದ ಕಾರಣ ಎಲ್ಲಾ ವಿರೋದಾಭಾಸಗಳನ್ನು ಬದಿಗಿಟ್ಟು ಎರಡನೇ ಬಾರಿ ಮೋದಿಯವನ್ನು ಮತ್ತಷ್ಟೂ ದೊಡ್ಡದಾದ ಬೆಂಬಲದೊಂದಿಗೆ ಅದರಲ್ಲೂ ಕರ್ನಾಟಕದಲ್ಲಿ 25+1 ಬಿಜೆಪಿ ಸಂಸಾದರನ್ನು ಆಯ್ಕೆ ಮಾಡುವ ಮೂಲಕ ಅಧಿಕಾರಕ್ಕೆ ತಂದರು.

ಮೋದಿಯವರು ಎರಡನೇ ಬಾರೀ ಅಧಿಕಾರಕ್ಕೆ ಬಂದ ಕೂಡಲೇ ತ್ರಿವಳಿ ತಲಾಖ್, article-370 & 35A ದಿಟ್ಟತನದಿಂದ ತೆಗೆದು ಹಾಕುವ ಮೂಲಕ ಕಾಶ್ಮೀರದ ಜನರಿಗೆ ಸ್ವಾಯುತ್ತತೆ ದೊರೆಯುವಂತೆ ಮಾಡಿದ್ದಲ್ಲದೇ, CAA & NRC ಜಾರಿಗೆ ತರುವ ಮೂಲಕ ನುಸುಳುಕೋರರನ್ನು ಹೊರದಬ್ಬಲು ಮುಂದಾದರು. ಬಹಳ ದಿನಗಳಿಂದಲೂ ನೆನೆಗುದಿಗೆ ಬಿದ್ದಿದ್ದ ರಾಮ ಜನ್ಮಭೂಮಿಯ ವಿಷಯವನ್ನು ನಾಜೂಕಾಗಿ ನ್ಯಾಯಾಲಯದ ಮೂಲಕವೇ ಬಗೆಹರಿಸಿ, ರಾಮ ಮಂದಿರದ ಶಿಲಾನ್ಯಾಸಕ್ಕೆ ಪ್ರಧಾನಿಗಳು ಪೂಜೆ ಮಾಡಿದಾಗಲಂತೂ, ಅಬ್ಭಾ, ಎರಡನೇ ಬಾರಿ ಮೋದಿಯವರನ್ನು ಆಯ್ಕೆಮಾಡಿದ್ದು ಸಾರ್ಥಕವಾಯಿತು ಎಂದು ತಮ್ಮ ಬೆನ್ನನ್ನೇ ತಟ್ಟಿಕೊಂಡ ಭಾರತಿಯರ ಸಂಖ್ಯೆ ಕಡಿಮೆಯೇನಲ್ಲ.

ಇಷೃರ ಮಧ್ಯೆ ಕರ್ನಾಟಕದಲ್ಲೊಂದು ರಾಜಕೀಯ ಕ್ಷಿಪ್ರಕ್ರಾಂತಿಯನ್ನು ನಡೆಸಿ ಅಪರೇಷನ್ ಕಮಲದ ಮೂಲಕ ಕಾಂಗ್ರೇಸ್ ಮತ್ತು ಪಕ್ಷೇತರ ಶಾಸಕರ ರಾಜೀನಾಮೆ ಕೊಡಿಸಿ ಕರ್ನಾಟಕದಲ್ಲೂ ಮತ್ತೊಮ್ಮೆ ಯಡೆಯೂರಪ್ಪಾ ಅವರ ಮುಖಾಂತರ ಕಮಲವನ್ನು ಅರಳಿಸುವ ಮುಖಾಂತರ ಕೇಂದ್ರ ಮತ್ತು ರಾಜ್ಯಸರ್ಕಾರ ಎರಡೂ ಕಡೆ ಬಿಜೆಪಿ ಸರ್ಕಾರವಿದ್ದಲ್ಲಿ ಕೇಂದ್ರದಿಂದ ಆರ್ಥಿಕ ನೆರವಿನ ಹೊಳೆಯೇ ಹರಿಯುವುದಲ್ಲದೇ ಎರಡೂ ಸರ್ಕಾರದ ನಡುವಿನ ಬಾಂಧ್ಯವ್ಯ ಸುಂದರವಾಗಿರುತ್ತದೆ ಎಂಬ ಭ್ರಮೆಯನ್ನು ಹರಿಸಿದ್ದಂತೂ ಸುಳ್ಳಲ್ಲ.

ನಾವೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ಕೊರೋನಾ ಮಹಾಮಾರಿ ಇಡೀ ಪ್ರಪಂಚಕ್ಕೆ ವಕ್ಕರಿಸಿ ಎಲ್ಲವೂ ಲಾಕ್ಡೌನ್ ಆದ ನಂತರ ಅದೇಕೋ ಕೇಂದ್ರ ಮತ್ತು ರಾಜ್ಯಸರ್ಕಾರ ಎರಡಕ್ಕೂ ಗರ ಬಡಿದಂತಾಗಿ, ಹೈವೇನಲ್ಲಿ ವೇಗವಾಗಿ ಹೋಗುತ್ತಿದ್ದ ವಾಹನಕ್ಕೆ ಏಕಾಏಕಿ ಬ್ರೇಕ್ ಹಾಕಿದಾಗ ಹೇಗೆ ವಾಹನ ಅಲ್ಲೋಲ ಕಲ್ಲೋಲವಾಗಿ ದಿಕ್ಕಾಪಾಲಾಗುತ್ತದೆಯೋ ಅದೇ ರೀತಿ ಈ ಸರ್ಕಾರದ್ದಾಯಿತು ಎಂದರೂ ತಪ್ಪಾಗದು.

ಹೌದು ನಿಜ ಕೋವಿಡ್ ಸಮಯದಲ್ಲಿ ಸರ್ಕಾರ ತೆಗೆದುಕೊಂಡ ನಿಯಮಗಳು ಮತ್ತು ಲಸಿಕಾ ಅಭಿಯಾನಗಳು ಜನಪರವಾಗಿದ್ದರೂ ಅದಕ್ಕೆ ಜನಸಾಮಾನ್ಯರು ತೆರಬೇಕಾದ ಬೆಲೆಯಂತೂ ತಾಳಲಾಗದಾಗಿದೆ. ಜನಾವಶ್ಯಕವಾದ ಪೆಟ್ರೋಲಿಯಂ ಉತ್ಪನ್ನಗಳನ್ನು ಪದೇ ಪದೇ ಏರಿಸುತ್ತಲೇ ಹೋಗಿರುವುದರಿಂದ ಬೇರೆಲ್ಲಾ ಬೆಲೆಗಳು ಗಗನಕ್ಕೇರಿ, ಕೋವಿಡ್ ನಿಂದ ಅದಾಗಲೇ ಗಾಯಗೊಂಡಿದ್ದ ಮಧ್ಯಮವರ್ಗದ ಜನರ ಮೇಲೆ ಬರೆ ಎಳೆದಂತಾಗಿದೆ. ಇದೇ ಸಮಯದಲ್ಲಿ ಸರ್ಕಾರ ಘೋಷಿಸಿದ ಲಕ್ಷಾಂತರ ಕೋಟಿ ರೂಪಾಯಿಗಳ ಪರಿಹಾರ ಧನ ಯಾರಿಗೆ ತಲುಪಿತು ಎಂಬುದರ ಕುರಿತಾದ ಮಾಹಿತಿಯೇ ಇಲ್ಲ. ಹೀಗೆ ಕಣ್ಣಿಗ ಕಾಣದ ಪುಸ್ತಕಗಳಲ್ಲೇ ಸರಿಹೊಂದಿ ಹೋಗಬಹುದಾದ ಪರಿಹಾರಗಳನ್ನು ಘೋಷಿಸುವ ಬದಲು ಅದೇ ಧನವನ್ನು ಜನರಿಗೆ ಕಣ್ಣಿಗೆ ಕಾಣುವಂತೆ ದಿನ ನಿತ್ಯಉಪಯೋಗಿ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಬಳಸಿದ್ದಲ್ಲಿ ಎಲ್ಲರಿಗೂ ಅನುಕೂಲವಾಗುತ್ತಿತ್ತಲ್ಲವೇ?

ಪೆಟ್ರೋಲಿಯಂ ಬಿಡಿ, 80-120ರ ಆಸುಪಾಸಿನಲ್ಲಿದ್ದ ಅಡುಗೆ ಎಣ್ಣೆಯ ಬೆಲೆಯೂ 160-180ಕ್ಕೆ ಏರಿದ ಪರಿಣಾಮ ಜನರು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಂತೂ ಸುಳ್ಳಲ್ಲ. ವಿದೇಶದಿಂದ ಅಮದು ಮಾಡುವ ತಾಳೇ ಎಣ್ಣೆಯ ಬೆಲೆ ಹೆಚ್ಚಾದರೆ ದೀಪದ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕಡಲೇ ಕಾಯಿ ಎಣ್ಣೆಯ ಬೆಲೆ ಹೆಚ್ಚೇಕೆ ಆಯಿತು? ಎಂಬುದನ್ನು ಅದನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ಸರ್ಕಾರ ಯೋಚಿಸಿಯೇ ಇಲ್ಲ.

ಕೇಂದ್ರ ಸರ್ಕಾರದ ಪರ ಮಾತನಾಡುವ ದೇಶಭಕ್ತ ಮತ್ತು ವಿರುದ್ಧ ಮಾತನಾಡುವ ದೇಶದ್ರೋಹಿಗಳು ಎಂಬ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿರುವ ಕಾರಣ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ ಯಾರೂ ಸಹಾ ಇದರ ಬಗ್ಗೆ ಮಾತನಾಡುವವರೇ ಇಲ್ಲ. ಇನ್ನು ಈ ಸರ್ಕಾರಕ್ಕೆ ಪ್ರಜೆಗಳು ಎಂದರೆ ಕೇಳಿ ಕೇಳಿದಾಗಲೂ ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬಂತಾಗಿದೆ.

ಇನ್ನು ಕರ್ನಾಟಕದ ರಾಜ್ಯ ಸರ್ಕಾರದ ಬಗ್ಗೆ ಹೇಳುವುದಕ್ಕಿಂತಲಲೂ ಸುಮ್ಮನಿರುವುದೇ ಲೇಸೇನೋ? ಕಾಂಗ್ರೇಸ್ ಮತ್ತು ಜನತಾದಳದ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಆಡಳಿತಕ್ಕೆ ಬಂದಾಗಲಿಂದಲೂ ಸುಲಲಿತವಾಗಿ ಅಧಿಕಾರವನ್ನು ನಡಸಲು ಆಗಲೇ ಇಲ್ಲಾ. ಅದಕ್ಕೆ ಪ್ರಕೃತಿಯೂ ಬಿಡಲಿಲ್ಲ ಎನ್ನುವುದೂ ಸತ್ಯ. ಆರಂಭದಲ್ಲಿ ಬರ ನಂತರ ಪ್ರವಾಹ ಅದಾದ ನಂತರ ಮಂತ್ರಿಮಂಡಲ ರಚನೆ, ಉಪಚುನಾವಣೆಯಲ್ಲಿ ಕೈಪಾಳಯವನ್ನು ಬಿಟ್ಟು ಬಂದವರನ್ನು ಗೆಲ್ಲಿಸಿಕೊಳ್ಳುವುದು ಅದಾದ ನಂತರ ಮತ್ತೊಮ್ಮೆ ಮಂತ್ರಿಮಂಡಲದ ವಿಸ್ತರಣೆ. ಅತೃಪ್ತರ ಮೂಗಿಗೆ ಬೆಣ್ಣೆ ಸವರಿದಂತೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಶ ಪಟ್ಟ ಕೊಡುವುದರಲ್ಲಿ ಹೈರಾಣದ ಸರ್ಕಾರಕ್ಕೆ ಕೋವಿಡ್ ವಕ್ಕರಿಸಿದ ಮೇಲಂತೂ ರಾಜ್ಯ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಅನುಮಾನ ಕಾಡುವಂತೆ ಅದೃಷ್ಯವಾಗಿಹೋಯಿತು. ಎಲ್ಲವೂ ಪಟ್ಟಭಧ್ರ ಅಧಿಕಾರಿಗಳದ್ದೇ ಕಾರುಬಾರು. ಲಾಕ್ಡೌನ್ ಮಾಡುವುದು ನಂತರ ಅದಾವುದೋ ಸಿನಿಮಾ ನಟನ ಸಿನಿಮಾಕ್ಕೆ ಹೊಡೆತ ಬೀಳುತ್ತದೆ ಎಂದು ವಿನಾಯಿತಿ ಕೊಡುವುದು. ನೈಟ್ ಕರ್ಫೂ ಹೇರುವುದು ನಂತರ ಮತ್ತೊಬ್ಬರಿಗೆ ತೊಂದರೆ ಆಗುತ್ತದೆ ಎಂದು ಸಡಿಲಿಸುವುದು. ಲಾಕ್ದೌನ್ ಸಮಯದಲ್ಲಿ ಸರ್ಕಾರದ ನಿಯಮಗಳನ್ನು ಮೀರಿ ಅಂಡೆಲೆದು ಕೋವಿಡ್ ಹರಡಿದ ಮತ್ತು ಆಶಾ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದು. ಯಾವುದೋ ಕ್ಷುಲ್ಲುಕ ಕಾರಣಕ್ಕೆ ಸಂಬಂಧವೇ ಇಲ್ಲದ ಶಾಸಕನ ಮನೆಯನ್ನು ಸುಟ್ಟು ಹಾಕಿದವರ ಸಂಪೂರ್ಣ ವಿವರಗಳು ಇದ್ದರೂ ಅವರನ್ನು ಬಂಧಿಸಲು ಮೀನಾ ಮೇಷ ಎಣಿಸುವ ಮೂಲಕ ಸರ್ಕಾರದ ಅಸ್ಥಿತ್ವವೇ ಇಲ್ಲದಂತಾಯಿತು.

ಇಷ್ಟರ ಮಧ್ಯೆ ಕಂಡ ಕಂಡವರೆಲ್ಲಾ ಮುಖ್ಯಮಂತ್ರಿ ಕುರ್ಚಿಗೆ ಕರ್ಛೀಘ್ ಹಾಕಿದರೇ ಕೆಲವರಂತೂ ಟವೆಲ್ ಹಾಕಿ ತಾವೇ ಭಾವಿ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿ ತೇಲಾಡಿ, ಕಡೆಗೆ ಜಾತೀ ಸಮೀಕರಣದಲ್ಲಿ ಅಂದರಕೀ ಮಂಚಿವಾಡು ಅನಂತರಾಮಯ್ಯ ಎನ್ನುವ ತೆಲುಗು ಗಾದೆಯಂತೆ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮಠಾಧೀಶರ ಲಾಬಿಗೆ ತನ್ನನ್ನೇ ತಾನು ಬಲಿಷ್ಟ ಎಂದು ಕರೆದುಕೊಳ್ಳುವ ಬಿಜೆಪಿ ಹೈಕಮಾಂಡ್ ಮಣಿದಿದ್ದು ಅಚ್ಚರಿ ಎನಿಸಿತು.

ಈ ಬಿಜೆಪಿ ನಾಯಕರುಗಳು ಅಧಿಕಾರಕ್ಕೆ ಬರುವ ಮನ್ನಾ ತಮ್ಮದು ಹಿಂದು ಪರ ಪಕ್ಷ ಎಂದು ಬಿಂಬಿಸಿಕೊಳ್ಳುವವವರು ಅಧಿಕಾರ ಸಿಕ್ಕ ಕೂಡಲೇ ನಿಜವಾದ ಜಾತ್ಯಾತೀತರಿಗಿಂತಲೂ ಅಧಿಕವಾದ ಜಾತ್ಯಾತೀತನವನ್ನು ತೋರುತ್ತಾ ತಮಗೆ ಮತ ನೀಡಿ ಅಧಿಕಾರಕ್ಕೆ ತಂದ ಹಿಂದೂಗಳ ಮೇಲೆಯೇ ದಬ್ಬಾಳಿಕೆ ನಡೆಸುವುದು ನಿಜಕ್ಕೂ ಅಚ್ಚರಿ ಮತ್ತು ಅಕ್ಷಮ್ಮ್ಯ ಅಪರಾಧವೇ ಸರಿ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ 9.12.2009 ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಈಗ ಪಾಲಿಸಲು ಮುಂದಾಗಿ ಏಕಾಏಕಿ ರಾತ್ರೋ ರಾತ್ರಿ ಹಿಂದೂಗಳ ಶ್ರದ್ಧಾ ಕೇಂದ್ರವಾದ ದೇವಾಲಯಗಳನ್ನು ಕೆಡವಲು ಮುಂದಾಗಿರುವುದು ನಿಜಕ್ಕೂ ಖಂಡನೀಯವಾಗಿದೆ. ಚೋಳರ ಕಾಲದ್ದು ಎಂಬ ನಂಬಿಕೆ ಇರುವ ಸುಮಾರು 800 ವರ್ಷಗಳ ಇತಿಹಾಸವಿದ್ದ ನಂಜನಗೂಡಿನ ಬಳಿಯ ದೇವಾಲಯವನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಕೆಡವಿ ಹಾಕುವ ಮೂಲಕ ನಿಜಕ್ಕೂ ಹಿಂದೂಗಳ ಔದಾರ್ಯತೆಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದರು ತಪ್ಪಾಗಲಾರದು.

ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ, ಇತ್ತೀಚೆಗೆ ಅನಧಿಕೃತವಾಗಿ ನಿರ್ಮಾಣವಾಗಿರುವ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುವಂತಹ ದೇವಸ್ಥಾನಗಳನ್ನು ಕೆಡವಿ ಹಾಕಬಹುದು ಎಂಬ ನಿಯಮದ ಆಧಾರವಿದೆಯೇ ಹೊರತು, ಹಳೆಯ ದೇವಾಲಯಗಳನ್ನಲ್ಲ. ಹಾಗೆ ದೇವಾಲಯಗಳನ್ನು ಏಕಾ ಏಕಿ ಕೆಡುವಿ ಎಂದು ಎಲ್ಲೂ ಹೇಳಿಲ್ಲ. ಬದಲಾಗಿ ಪ್ರತಿಯೊಂದು ದೇವಾಲಯದ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಲು ಸೂಚಿಸಿದೆಯೇ ಹೊರತು ಏಕಾ ಏಕಿ ರಾತ್ರೋ ರಾತ್ರಿ ಕೆಡವಲು ಯಾವುದೇ‌ ಹಕ್ಕಿಲ್ಲ.

ಈಗ ಕೆಡವಲು ನಿರ್ಧರಿಸಿರುವ ನೂರಾರು ದೇವಾಲಯಗಳು ನೆನ್ನೆ ಮೊನ್ನೆ ನಿರ್ಮಾಣವಾಗಿರದೇ, ಈ ರಸ್ತೆಗಳ ನಿರ್ಮಾಣವೇಕೇ? ಬದಲಿಗೆ ಭಾರತದ ಸಂವಿಧಾನ,ಕಾನೂನುಗಳು ರೂಪುಗೊಳ್ಳುವುದಕ್ಕೂ ಮೊದಲೇ ನೂರಾರು ವರ್ಷಗಳ ಹಿಂದೆ ನಿರ್ಮಾಣವಾದದ್ದು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿ ಹೋಗಿ ಅವುಗಳನ್ನು ಅಕ್ರಮವೆಂದು ಘೋಷಿಸಿ ರಾತ್ರೋರಾತ್ರಿ ಒಡೆದು ಹಾಕುವುದಕ್ಕೇ ಇವರನ್ನು ಕಷ್ಟ ಪಟ್ಟು ಆಡಳಿತಕ್ಕೆ ತಂದಿದ್ದು?

ಹೀಗೆಯೇ ಸುಮ್ಮನಾಗಿ ಹೋದಲ್ಲಿ, ನದಿ ಪಾತ್ರಕ್ಕೆ ಸಮೀಪವಾಗಿದೆ ಎಂಬ ನೆಪವೊಡ್ಡಿ ನಾಳೆ ನಂಜನಗೂಡಿನ ನಂಜುಂಡೇಶ್ವರನ ದೇವಾಲಯವನ್ನೂ ಕೆಡವಿ ಹಾಕಿದರೂ ಅಚ್ಚರಿ ಪಡಬೇಕಿಲ್ಲ.

ಹಿಂದೂಸ್ಥಾನದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಹಿಂದುಗಳ ಶ್ರದ್ಧಾ ಭಕ್ತಿಗಳಿಗೆ ಬೆಲೆಯೇ ಇಲ್ಲದಂತಾಗಿ ಹೋಗಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಹಿಂದೂಗಳಿಗೆ ಒಂದು ಕಾನೂನು ಅನ್ಯ ಮತದವರಿಗೆ ಮತ್ತೊಂದು ಕಾನೂನು ಎಂಬುವಂತಾಗಿರುವುದು ವಿಪರ್ಯಾಸವಾಗಿದೆ.

ಅದೇ ಸುಪ್ರೀಂ ಕೋರ್ಟ್ ಹೊತ್ತಲ್ಲದ ಹೊತ್ತಿನಲ್ಲಿ ಕರ್ಕಶವಾಗಿ ಪ್ರತೀ ದಿನವೂ ಎತ್ತರದ ಧ್ವನಿವರ್ಧಕಗಳ ಮೂಲಕ ಕೂಗುವುದನ್ನೂ ನಿಷೇಧಿಸಲು ಆದೇಶನೀಡಿದೆ, ಬಲವಂತದ ಮತಾಂತರ ಮಾಡಬಾರದು ಎಂಬ ಆದೇಶವಿದೆ. ಲವ್ ಜಿಹಾದ್ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ. ಆದರೆ ಈ ಯಾವುದೇ ಆದೇಶಗಳಿಗೂ ಕವಡೆಯ ಕಾಸಿನ ಕಿಮ್ಮತ್ತೂ ಕೊಡದವರು ಈಗ ದೇವಾಲಯಗಳನ್ನು ಒಡೆಯುತ್ತಿರುವುದು ನಿಜಕ್ಕೂ ಅಮಾನವೀಯ ಕ್ರಿಯೆಯಾಗಿದೆ.

ದೇಶ ಮೊದಲು ಧರ್ಮ ಆನಂತರ ಹಾಗಾಗಿ ಇಡೀ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಂತೆ ಇದೇ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಜಾರಿಗೆ ತರುವುದಕ್ಕೆ ಹಿಂದೇಟು ಹಾಕುತ್ತಿರುವ ಈ ಸರ್ಕಾರಕ್ಕೆ ಪುರಾತನ ದೇವಾಲಯಗಳನ್ನು ಒಡೆಯಲು ಮುಂದಾಗಿರುವುದು ಎಷ್ಟು ಸರಿ?

ಹಿಂದೂಗಳು ಅತ್ಯಂತ ಶ್ರದ್ಧೆಯಿಂದ ಗೋಮಾತೆ ಎಂದು ಪೂಜಿಸುವ ಹಸುಗಳನ್ನು ಅಕ್ರಮವಾಗಿ ಕಳ್ಳತನ ಮಾಡಿ ಎಗ್ಗಿಲ್ಲದೇ ಅನಧಿಕೃತ ಕಸಾಯಿಖಾನೆಗಳಲ್ಲಿ ಕತ್ತರಿಸುವುದನ್ನು ನಿಯಂತ್ರಿಸಲಾಗದ ಈ ಸರ್ಕಾರ ದೇವಾಲಯಗಳಲ್ಲಿ ಭಕ್ತಿಯಿಂದ ಪೂಜಿಸುವ ಆನೆಗಳನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಮುಂದಾಗುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ದ್ರೋಹ ಮಾಡುವುದು ಎಷ್ಟು ಸರಿ?

ತಮಿಳುನಾಡಿನಲ್ಲಿ ಜಲ್ಲಿಕಟ್ಟು ವಿರುದ್ಧ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅದನ್ನು ತಡೆಯಲು ಅಲ್ಲಿನ ಸರ್ಕಾರ ದಿಟ್ಟ ಕ್ರಮ ತೆಗೆದು ಕೊಳ್ಳ ಬಹುದಾದರೇ, ನಮ್ಮ ರಾಜ್ಯ ಸರ್ಕಾರಕ್ಕೇಕೆ ದೇವಾಲಯಗಳನ್ನು ಕೆಡವುದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ನಿಜ ಹೇಳ ಬೇಕೆಂದರೆ ಸರ್ಕಾರಕ್ಕೆ ಅಬಕಾರಿ ಇಲಾಖೆಯನ್ನು ಬಿಟ್ಟರೆ ಅತ್ಯಂತ ಹೆಚ್ಚಿನ ಆದಾಯವನ್ನು ಬರುವುದು ನಮ್ಮ ಹಿಂದೂ ದೇವಾಲಯಗಳಿಂದಲೇ. ಅದೇ ಕಾರಣಕ್ಕಾಗಿಯೇ ರಾಜ್ಯದಲ್ಲಿ ಆರ್ಥಿಕವಾಗಿ ಸಧೃಢವಾಗಿರುವ ಬಹುತೇಕ ಖಾಸಗೀ ದೇವಾಲಯಗಳನ್ನು ಯಾವುದೋ ಕುಂಟು ನೆಪವೊಡ್ಡಿ ಒಂದೊಂದಾಗಿ ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ಮುಖಾಂತರ ಅಲ್ಲಿನ ಆದಾಯವನ್ನು ಬಾಚಿಕೊಳ್ಳುತ್ತಿದೆ. ಸರ್ಕಾರಕ್ಕೆ ದೇವಾಲಯಗಳ ಹುಂಡೀ ಕಾಸಿನ ಹಣ ಬೇಕು ಅದರೆ ದೇವಾಲಯಗಳು ಬೇಡ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕತ್ತರಿಸಲು ಹೊರಟಿರುವುದು ಎಷ್ಟು ಸರಿ?

ರಾಜಕಾಲುವೆ ಮೇಲೆ ಕಟ್ಟಿರುವ ರಾಜಕಾರಣಿ ಮತ್ತು ಖ್ಯಾತ ನಟರ ಮನೆಗಳನ್ನು ಒಡೆಯುವುದನ್ನು ಸರ್ಕಾರ ತಪ್ಪಿಸ ಬಹುದಾದರೇ, ನೂರಾರು ವರ್ಷಗಳಿಂದಲೂ ಶ್ರದ್ಧಾ ಭಕ್ತಿಯಿಂದ ಪೂಜಿಸಿಕೊಂಡು ಬಂದಿರುವ ದೇವಾಲಯಗಳನ್ನು ರಕ್ಷಿಸಲು ಸಾಧ್ಯವಿಲ್ಲವೇ?

ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾವುದೂ ಅಸಾಧ್ಯ ಎನ್ನುವುದೇ ಇಲ್ಲ. ನಿಜವಾದ ಇಚ್ಛಾಶಕ್ತಿ ಇದ್ದಲ್ಲಿ ದೇವಾಲಯಗಳನ್ನು ನಾಶ‌ ಪಡಿಸುವುದರ ಬದಲು ಯಥಾವತ್ತಾಗಿ ಸ್ಥಳಾಂತರ ಮಾಡ ಬಹುದಾಗಿದೆ. ಈರೀತಿಯ ಪ್ರಯೋಗಗಳು ಈಗಾಗಲೇ ಹತ್ತು ಹಲಾವಾರು ಕಡೆಗಳಲ್ಲಿ ಯಶಸ್ವಿಯಾಗಿದೆ.

ಈ‌ ಲೇಖನ ಬರೆದು ಮುಗಿಸುವ ವೇಳೆಗೆ ಹಿಂದೂಗಳು ಮತ್ತು ಹಿಂದೂಪರ ಸಂಘಟನೆಗಳ ಎಚ್ಚರಿಕೆ, ಆಗ್ರಹ ಮತ್ತು ಪ್ರತಿಭಟನೆಗಳಿಗೆ ಮಣಿದು ಸರ್ಕಾರ ದೇವಾಲಯಗಳ ನಾಶಕ್ಕೆ ತಾತ್ಕಾಲಿಕವಾದ ತಡೆ ಹಾಕಿ ಈ ಕುರಿತಂತೆ ಸಮಗ್ರವಾಗಿ ಪರಿಶೀಲಿಸುವುದಾಗಿ ಹೇಳಿದೆ.

ಒಟ್ಟಿನಲ್ಲಿ ಕಾಂಗ್ರೇಸ್ ಸರ್ಕಾರದ ಭ್ರಷ್ಟಾಚಾರಗಳಿಂದ ರೋಸೆತ್ತು ಪರ್ಯಾಯವಾಗಿ ಬಿಜೆಪಿ ಸರ್ಕಾರವನ್ನು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತಕ್ಕೆ ತಂದರೆ ಹೇಳಿಕೊಳ್ಳುವಂತಹ ಭ್ರಷ್ಟಾಚಾರ ನಡೆಯಲಿಲ್ಲವಾದರೂ ಜನಸಾಮಾನ್ಯರ ದೈನಂದಿನ ಜೀವನ ಮತ್ತು ಧಾರ್ಮಿಕ ನಂಬಿಕೆಗಳಿಗೇ ಪೆಟ್ಟು ಬೀಳುವಂತಾಗಿರುವುದು ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದಂತಾಗಿ, ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿದೆ.

ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿ ಕೊಳ್ಳಲಾಗದು ಅಲ್ವೇ? ಆಧಿಕಾರಕ್ಕೆ ತಂದವರು ತಮ್ಮ ಹಿತಾಸಕ್ತಿಗಳನ್ನು ಕಾಪಡಲಾರರು ಎಂದು ತಿಳಿದಾಗ ಅವರನ್ನು ಕೆಳಗಿಳಿಸುವ ಶಕ್ತಿಯೂ ಇರುತ್ತದೆ ಅಲ್ಲವೇ?

ಕಾಲ ಇನ್ನೂ ಮಿಂಚಿಲ್ಲ. ಮಿಂಚಿ ಹೋದ ನಂತರ ಚಿಂತಿಸಿ ಫಲವಿಲ್ಲ ಎನ್ನುವಂತೆ ಎರಡೂ ಸರ್ಕಾರಗಳು ಈ ಕೂಡಲೇ ಎಚ್ಚೆತ್ತುಕೊಂಡು ಜನಪರ ಆಡಳಿತ ನೀಡದೇ ಹೋದಲ್ಲಿ ಮುಂದೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಅತ್ತ ದರಿ ಇತ್ತ ಪುಲಿ

  1. ಮಾನ್ಯ ಶೀ್ರ ಶೀ್ರಕಂಠ ಬಾಳಕಂಚಿ ಯವರ ಈ ಲೇಖನ ಬಿ.ಜಿ.ಪಿ. ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಇದೇತರಹ ದೇವಾಲಯ ಗಳನ್ನು ಮಾತ್ರ ನಾಷಪಡುಸುತ್ತಿದ್ದರೆ ಮುಂದೀನ ಚುನಾವಣೆಯಲ್ಲಿ ಹಿಂದುಗಳ ಒಂದೇ ಒಂದು ಓಟು ಸಿಗುವುದಿಲ್ಲ ನಾವುಏನೇ ಮಾಡಿದರು ಹಿಂದುಗಳು ಸಹಿಸಿ ಕೊಳ್ಳುತ್ತಾರೆ ಎಂದು ತಿಳಿದಿದ್ದರೆ ಬಿ.ಜೆ.ಪಿ ಮತಗಳೇ Non ಯಾರಿಗೂ ಇಲ್ಲ ಅನ್ನುವ ಗುಂಡಿ ಒತ್ತುವುದರಲ್ಲಿ ಸಂಶಯವಿಲ್ಲ
    ಈ ನಿಮ್ಮ ಲೇಖನ ಓದಿ ರೋಮಾಂಚನ ವಾಯಿತು ಹೃದಯದ ಬಡಿತ ಎಲ್ಲಾ ಹಿಂದುಗಳು ಮತ್ತು ದೈವಭಕ್ತರಿಗೆ 120 ರಿಂದ 130 ಕ್ಕೆ ಹೋಗುವುದಂತು ಸತ್ಯ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s