ನಮಗೆಲ್ಲಾ ತಿಳಿದಿರುವಂತೆ ಆಗಸ್ಟ್ 15, 1947 ರಂದು ಸುಮಾರು 300 ವರ್ಷಗಳ ಕಾಲ ಬ್ರಿಟೀಶರ ದಾಸ್ಯದಿಂದ ಹೊರಬಂದು ಸ್ವತ್ರಂತ್ಯದೇಶವಾಯಿತು. ಆದರೆ ಹಾಗೆ ಸ್ವಾತ್ರಂತ್ಯವಾಗುಬುದಕ್ಕೂ ಮುನ್ನಾ ಧರ್ಮಾಧಾರಿತವಾಗಿ ಬ್ರಿಟೀಷರು ಭಾರತವನ್ನು ಮೂರು ಭಾಗಗಳನ್ನಾಗಿ ಮಾಡಿ ಭಾರತದ ಎಡ ಮತ್ತು ಬಲಗಳಲ್ಲಿ ಪೂರ್ವ ಮತ್ತು ಪಶ್ಛಿಮ ಪಾಕಿಸ್ಥಾನ (70ರ ದಶದಲ್ಲಿ ಸ್ವತಂತ್ರವಾದ ಬಾಂಗ್ಲಾ ದೇಶವಾಯಿತು) ಎಂದು ತುಂಡರಿಸಿ ಮಧ್ಯದ ಭಾಗವನ್ನು ಸ್ವತಂತ್ರ ಹಿಂದೂಸ್ಥಾನ ಎಂದು ಕರೆದು ಹೋದರು.
ಹಾಗೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಭಾರತ ದೇಶ ಸಣ್ಣ ಸಣ್ಣದಾದ ಸುಮಾರು 565 ರಾಜ್ಯಗಳು/ಸಂಸ್ಥಾನಗಳಾಗಿ ವಿವಿಧ ರಾಜ ಮಹಾರಾಜರುಗಳ ಆಳ್ವಡಿಗೆ ಒಳಪಟ್ಟಿತ್ತು. ಸ್ವಾತ್ರಂತ್ರ್ಯಾ ನಂತರದ ಭಾರತದ ಸರ್ಕಾರದ ಪ್ರಥಮ ಗೃಹಸಚಿರಾದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಶ್ರಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ನೇತೃತ್ವದಲ್ಲಿ ಇಂತಹ ಸಣ್ಣ ಸಣ್ಣ ರಾಜ್ಯಗಳಿಗೆ/ಸಂಸ್ಥಾನಗಳಿಗೆ ಹೊಸದಾಗಿ ರಚಿಸಲ್ಪಡುವ ಭಾರತ ಅಥವಾ ಪಾಕಿಸ್ತಾನದ ಜೊತೆ ವಿಲೀನವಾಗಲು ಅಥವಾ ಸ್ವತಂತ್ರವಾಗಿಯೇ ಇರಬಹುದಾದ ಆಯ್ಕೆಗಳನ್ನು ಅವರಿಗೆ ಕೊಡಲಾಗಿತ್ತು.
ಈ ರೀತಿಯ ಆಯ್ಕೆಯನ್ನು ಬಹುತೇಕ ರಾಜ್ಯಗಳು/ಸಂಸ್ಥಾನಗಳು ಆರಂಭದಲ್ಲಿ ಒಪ್ಪಲು ಹಿಂದೇಟು ಹಾಕಿದರು, ಪಟೇಲರ ರಾಜಕೀಯ ಮುತ್ಸದ್ದಿತನ ಮತ್ತು ಚಾಣಾಕ್ಷತನದಿಂದ ಮತ್ತು
ಭವಿಷ್ಯದ ದೃಷ್ಟಿಯಿಂದ ಬಹುತೇಕ ಎಲ್ಲಾ ರಾಜ್ಯಗಳೂ ಭಾರತದೊಂದಿಗೆ ವಿಲೀನವಾಗಲು ಶರತ್ತುಬದ್ಧವಾಗಿ ಒಪ್ಪಿಕೊಂಡರೆ, ಮೈಸೂರು ಸಂಸ್ಥಾನದ ನಮ್ಮ ಒಡೆಯರ್ ಅವರು ಮಾತ್ರಾ ಯಾವುದೇ ಷರತ್ತುಗಳು ಇಲ್ಲದೇ ಹೃತ್ಪೂರ್ವಕವಾಗಿ ಸ್ವತಂತ್ರ್ಯ ಭಾರತಕ್ಕೆ ವಿಲೀನವಾಗಲು ಒಪ್ಪಿಕೊಂಡು ಸಹಿ ಹಾಕಿದ ಮೊತ್ತಮೊದಲನೇ ರಾಜರು ಎಂದೆನಿಸಿಕೊಂಡರೆ, ಅವರನ್ನೇ ಅನುಸರಿಸಿ, ಕೊಚ್ಚಿ, ತಿರುವನಂತಪುರ, ಭೋಪಾಲ್, ಗುಜರಾತ್ ಪ್ರಾಂತ್ಯದ ಬಹುತೇಕ ಚಿಕ್ಕ ಚಿಕ್ಕ ರಾಜ್ಯಗಳು ಸಹಾ ಭಾರತಕ್ಕೆ ಸೇರಿಕೊಂಡವು. ದುರಾದೃಷ್ಟವಷಾತ್ ಹೈದರಾಬಾದಿನ ನಿಜಾಮ ಮತ್ತು ಜುನಾಗಢದವರು ಪಾಕೀಸ್ಥಾನದೊಂದಿಗೆ ಸೇರಲು ಇಚ್ಚಿಸಿದರೆ, ಕಾಶ್ಮೀರದ ರಾಜ ಅಲಿಪ್ತನೀತಿಯನ್ನು ತಾಳಿ ಸ್ವತಂತ್ರ್ಯವಾಗಿ ಉಳಿಯಲು ನಿರ್ಧರಿಸಿದರು. ಮುಂದೆ ನಾನಾರೀತಿಯ ರಾಜಕೀಯ ಕಾರಣಗಳಿಂದಾಗಿ ಕಾಶ್ಮೀರ ಮತ್ತು ಜುನಾಗಢ ಭಾರತಕ್ಕೆ ಸೇರಿಕೊಂಡರೆ, ದಕ್ಷಿಣ ಭಾಗದಲ್ಲಿದ್ದ ಹೈದರಾಬಾದಿನ ನಿಜಾಮ ಮಾತ್ರ ಪಾಕೀಸ್ಥಾನದ ಪರ ಕಠಿಣ ಒಲವು ತೋರಿದ್ದು ಪಟೇಲರಿಗೆ ತಲೆ ನೋವನ್ನು ತರಿಸಿತ್ತು.
ಹೈದರಾಬಾದ್ ರಾಜ್ಯದ ಅಥಿಕಾರ ಮುಸಲ್ಮಾನರದ ದೊರೆಯ ಹಿಡಿತದಲ್ಲಿ ಇದ್ದರೂ, ಆ ಪ್ರಾಂತ್ಯಕ್ಕೆ ಸೇರಿದ್ದ, ತೆಲಂಗಾಣ, ಮಹಾರಾಷ್ಟ್ರದ ಮರಾಠವಾಡ, ಕರ್ನಾಟಕದ ಹೈದರಾಬಾದ್ ಕರ್ನಾಟಕ ಪ್ರದೇಶಗಳನ್ನೊಳಲ್ಲಿ ಬಹುಸಂಖ್ಯಾತರಾಗಿ ಹಿಂದೂಗಳೇ ಇದ್ದ ಕಾರಣ ಅವರೆಲ್ಲರೂ ಹಿಂದೂಸ್ಥಾನದ ಪರವಾಗಿರಲು ಇಚ್ಚಿಸುತ್ತಿದ್ದರು. ಇದನ್ನು ಗಮನಿಸಿದ ಹೈದರಾಬಾದಿನ ನಿಜಾಮ ಕೂಡಲೇ ತನ್ನದು ಸ್ವತಂತ್ರ ರಾಜ್ಯ ಎಂದು ಘೋಷಿಸಿಕೊಂಡಿದ್ದಲ್ಲದೇ ಒಳಗೊಳಗೇ, ಪಾಕಿಸ್ತಾನದ ಮುಸ್ಲಿಮ್ ಲೀಗ್ ಜೊತೆ ಸಂಪರ್ಕವನ್ನು ಬೆಳಸಿ ಹೇಗಾದರೂ ಮಾಡಿ ತನ್ನ ಪ್ರದೇಶವನ್ನು ಪಾಕೀಸ್ಥಾನದೊಂದಿಗೆ ಸೇರಿಸಲು ಸಾಧ್ಯವೇ ಎಂದು ಹೊಂಚುಹಾಕುತ್ತಿದ್ದ. ಆಗ ತಾನೇ ಕಾಶ್ಮೀರದ ಸಮಸ್ಯೆ ಗಂಭೀರವಾಗುತ್ತಿದ್ದ್ದನ್ನು ಗಮನದಲ್ಲಿ ಇಟ್ಟುಕೊಂಡಿದ್ದ ಮತ್ತು ನಿಜಾಮನ ಈ ರೀತಿಯ ಕುತಂತ್ರದ ಬಗ್ಗೆ ಅರಿತಿದ್ದ ವಲ್ಲಭಭಾಯಿ ಪಟೇಲರು ಇದು ಮತ್ತೊಂದುಕಾಶ್ಮೀರ ಆಗುವುದು ಬೇೆಡ ಎಂದು ನಿರ್ಧರಿಸಿ, ಬಹು ಜನರ ಆಶಯದಂತೆ ಈ ಪ್ರಾಂತ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ಕಾರ್ಯತಂತ್ರ ರೂಪಿಸಿದರು.
ಹೈದರಾಬಾದ್ ರಾಜ್ಯದ ಬಹುಸಂಖ್ಯಾತ ಹಿಂದೂಗಳು ಭಾರತ ಪರ ಒಲವಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಪಟೇಲರು ಏನಾದರೂ ತಂತ್ರಗಾರಿಕೆ ಮಾಡಬಹುದು ಎಂಬುದನ್ನುಊಹಿಸಿದ್ದ ಹೈದರಾಬಾದ್ ನಿಜಾಮನೂ ಸಹಾ, ತನ್ನ ರಾಜ್ಯದಲ್ಲಿ ರಜಾಕಾರರೆಂಬ ಧಾರ್ಮಿಕ ಮತಾಂಧರ ಖಾಸಗಿ ಸೈನ್ಯವನ್ನು ಪರೋಕ್ಶವಾಗಿ ಕಟ್ಟಿ ಖಾಸಿಂ ರಜ್ವಿ ಎಂಬ ಮತಾಂಧನನ್ನು ಅದರ ಮುಖ್ಯ ಸೇನಾಧಿಕಾರಿಯಾಗಿ ನೇಮಿಸಿ ತನ್ನ ರಾಜ್ಯದಲ್ಲಿರುವ ಯಾವ ಪ್ರಜೆಗಳು ಭಾರತದ ಜೊತೆ ವಿಲೀನವಾಗಲು ಬಯಸಿದ್ದರೋ ಅಂತಹವರನ್ನು ಸದೆ ಬಡಿಯುವ ಕಾರ್ಯಕ್ಕೆ ನಿಯೋಜಿಸಿದ. ಶೇ 90ರಷ್ಟಿದ್ದ ಹಿಂದೂಗಳ ಮೇಲೆ ರಜಾಕಾರ ಕ್ರೂರತನದ ದೌರ್ಜನ್ಯ ದಿನೇ ದಿನೇ ಹೆಚ್ಚಾಗತೊಡಗಿತು.
ಅದೇ ಸಮಯದಲ್ಲಿ ಅಲ್ಲಿನ ಜನ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ, ಸರದಾರ ಶರಣಗೌಡ ಇನಾಮದಾರ್, ಸ್ವಾಮಿ ರಾಮನಂದ ತೀರ್ಥರು ಮುಂತಾದ ಪ್ರಮುಖರ ಮುಂದಾಳತ್ವದಲ್ಲಿ ಹೋರಾಟ ನಡೆಸಲು ಆರಂಭಿಸಿದ್ದಲ್ಲದೇ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಯತ್ನಿಸುವ ಸಂಧರ್ಭದಲ್ಲಿ ರಜಾಕರಗಳು ಅವರನ್ನು ನಿರ್ದಯವಾಗಿ ಗುಂಡು ಹಾರಿಸಿ ಕೊಂದು ಹಾಕಿದ್ದರು. ಈ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸತ್ಯಾಗ್ರಹಿಗಳೂ ಸಹಾ ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ಸಕ್ರಿಯವಾಗಿ ಬೆಂಬಲಿಸಿದ್ದಲ್ಲದೇ, . ಆಗಸ್ಟ್ 1946 ರಲ್ಲಿ, ತೆಲಂಗಾಣದ “ವರಂಗಲ್” ನಗರದಲ್ಲಿ ರಜಾಕರರು ಹಿಂದೂಗಳನ್ನು ಹತ್ಯೆ ಮಾಡಿದಾಗ, ಸಂಘದ ಸ್ವಯಂ ಸೇವಕರು ವಾರಂಗಲ್ ಕೋಟೆಯ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು.
ಇವೆಲ್ಲದರ ಮಧ್ಯೆ ಇಸ್ಲಾಮ್ ಮತಾಂಧ ರಜಾಕಾರರ ಜೊತೆಗೆ, ಕಮ್ಯುನಿಸ್ಟರೂ ಸಹಾ ಸದ್ದಿಲ್ಲದೇ ಈ ಪ್ರಕ್ರಿಯೆಯನ್ನು ಪರೋಕ್ಷವಾಗಿ ಎಂಬಲಿಸಿದ್ದರು ಎಂಬುದನ್ನು ಹಿರಿಯ ಲೇಖಕರಾದ ಲೇಖಕ
ಶ್ರೀ ವಿ.ಪಿ.ಮೆನನ್ ಅವರು ತಮ್ಮ. ದಿ ಸ್ಟೋರಿ ಆಫ್ ಇಂಟಿಗ್ರೇಷನ್ ಆಫ್ ಇಂಡಿಯನ್ ಸ್ಟೇಟ್ಸ್ ಎಂಬ ತನ್ನ ಪುಸ್ತಕದಲ್ಲಿ ಈ ರೀತಿಯಾಗಿ ವಿವರಿಸಿದ್ದಾರೆ.
….ಆ ಪ್ರಾಂತ್ಯದ ಜನರನ್ನು ರಜಾಕಾರರು ಹಗಲಿನ ಹೊತ್ತು ದಂಡಿಸಿದರೆ, ಕಮ್ಯೂನಿಸ್ಟರು ರಾತ್ರಿಯ ಹೊತ್ತಿನಲ್ಲಿ ದಬ್ಬಾಳಿಕೆ ನಡೆಸಿದರು. ತದನಂತರ ಕಮ್ಯೂನಿಸ್ಟರು ರಜಾಕಾರರೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುವ ಮೂಲಕ ಅಕ್ಷರಶಃ ಭಾರತದ ಪರ ಒಲವಿದ್ದ ಹಿಂದೂಗಳನ್ನು ಹತ್ಯೆಮಾಡುವ ಮೂಲಕ ಹತ್ತಿಕ್ಕುವ ಪಯತ್ನ ಮಾಡಿದರು. ಈ ಎಲ್ಲಾ ಕುಕೃತ್ಯಗಳಿಗೆ ಹೈದರಾಬಾದಿನ ನಿಜಮಾನ ಕೃಪಾಶೀರ್ವಾದವಿತ್ತು ಎಂಬುದು ನಿಜಕ್ಕೂ ವಿಪರ್ಯಾಸವೇ ಸರಿ. ನಿಜಾಮ, ರಜಾಕಾರರು ಮತ್ತು ಕಮ್ಯುನಿಸ್ಟರು ಈ ಮೂವರು ಸಂಘಟಿತರಾಗಿ ಇಡೀ ಪ್ರಾಂತ್ಯವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸಲು ಉದ್ದೇಶಿಸಿದ್ದರು. ರಜಾಕಾರರ ಈ ಪರಿಯ ಕಿರುಕುಳಗಳನ್ನು ರಜಾಕಾರರ ಕಿರುಕುಳ ತಾಳದೆ ಪ್ರಾಣ ರಕ್ಶಣೆಗಾಗಿ ಅದಾಗಲೇ ಭಾರತದ ಪರವಾಗಿದ್ದ ಆಕ್ಕ ಪಕ್ಕದ ಜಿಲ್ಲೆಗಳಾದ ಬಿಜಾಪುರ ಮತ್ತು ಸೋಲಾಪುರಕ್ಕೆ ಬಂದು ಆಶ್ರಯವನ್ನು ಪಡೆಯತೊಡಗಿದರು. ಇದೆಲ್ಲವನ್ನು ಸೂಕ್ಶ್ಮವಾಗಿ ಗಮನಿಸುತ್ತಿದ್ದ ಪಟೇಲರು ನಿಜಾಮನೊಂದಿಗೆ ಮಾತುಕತೆಗಳನ್ನು ನಡೆಸಿದ್ದಲ್ಲದೇ, ನಿರಂತರ ರಾಜತಾಂತ್ರಿಕ ಒತ್ತಡಗಳನ್ನು ಹೇರಿದರೂ ಅವರ ಷರತ್ತುಗಳಿಗೆ ನಿಜಾಮ ಒಪ್ಪದಿದ್ದಾಗ ಅಂತಿಮವಾಗಿ ಪಟೇಲರು ನಮ್ಮ ಭಾರತೀಯ ಸೇನೆಯನ್ನು ಹೈದರಾಬಾದ್ ಪ್ರಾಂತ್ಯಕ್ಕೆ ನುಗ್ಗಿಸಿ, ದಂಡಂ ದಶಗುಣಂ ಭವೇತ್ ಎಂದು ಪೊಲೀಸ್ ಕಾರ್ಯಾಚರಣೆ ಮೂಲಕ ಹೈದರಾಬಾದ್ ನಿಜಾಮನನ್ನು ಶರಣಾಗುವಂತೆ ಮಾಡುವ ಮೂಲಕ ಆತನ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದಲ್ಲದೇ, ಅವನ ಪ್ರಾಂತ್ಯವನ್ನು ಭಾರತದೊಂದಿಗೆ 17ನೇ ಸಪ್ಟೆಂಬರ್ 1948 ರಂದು ವಿಲೀನ ಮಾಡಿಲಾಯಿತು. ಮುಂದೆ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ದೇಶದ ಎಲ್ಲಾ ಭಾಗಗಳು ಪುನರ್ವಿಂಗಡಣೆಯಾದ ಸಂಧರ್ಭದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಕನ್ನಡ ಭಾಷಿಕರ ಪ್ರಾಂತ್ಯಗಳು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಕೊಂಡಿತು.
ಹೀಗೆ ಮೈಸೂರು ಪ್ರಾಂತ್ಯಕ್ಕೆ ಸೇರಿಕೊಂಡರೂ ಅಲ್ಲಿನ ಜನರು, ಹೈದಾರಾಬಾದಿನ ನಿಜಾಮನಿಂದ ಬಿಡುಗಡೆ ಹೊಂದಿದ ಶುಭಗಳಿಕೆಯನ್ನು ಪ್ರತೀವರ್ಷವೂ ಸಪ್ಟೆಂಬರ್ 17 ರಂದು ಅತ್ಯಂತ ಸಂಭ್ರನ ಸಡಗರಗಳಿಂದ, ಮತ್ತು ಬಹಳ ವಿಜೃಂಭಣೆಯಿಂದ ವಿಮೋಚನಾ ದಿನಾಚರಣೆಯನ್ನು ಆಚರಿಸುವುದನ್ನು ರೂಢಿಗೆ ತಂದಿದ್ದಲ್ಲದೇ, ಅಂದು ಆಗಸ್ಟ್ 15 ರಂದು ಸ್ವಾತ್ರಂತ್ರ್ಯ ದಿನಾಚರಣೆಯನ್ನು ಅಚರಿಸುವಂತೆಯೇ ಧ್ವಜಾರೋಹಣ ಮಾಡಿ ಆನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಆ ಪ್ರಾಂತ್ಯದಲ್ಲಿ ಅದೊಂದು ಸರ್ಕಾರಿ ಹಬ್ಬವನ್ನಾಗಿ ಆಚರಿಸಿಕೊಂಡು ಬಂದಿದ್ದಾರೆ.
ತದನಂತರ ಅದೇ ಸಪ್ಟೆಂಬರ್ 17ರ 2019 ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡೆಯೂರಪ್ಪನವರ ಸಾರಥ್ಯದಲ್ಲಿ ಅದೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಉತ್ಸವದ ಹೆಸರನ್ನು ಬದಲಾಯಿಸಿ ಅದನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸುವ ಪದ್ದತಿಯನ್ನು ರೂಢಿಗೆ ತಂದರು. ಕರ್ನಾಟಕದ ಉಳಿದ ಎಲ್ಲಾ ಭಾಗಗಳಲ್ಲಿ ವರ್ಷಕ್ಕೆ ಒಂದು ಬಾರಿ ಸ್ವಾತಂತ್ರ್ಯ ದಿನವನ್ನು ಆಚಾರಿಸಿದರೆ ಕಲ್ಯಾಣ ಕರ್ನಾಟಕದ ಜನರು ಮಾತ್ರಾ ಎರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಾರೆ. ಆಗಸ್ಟ್ 15 ರಂದು ಬ್ರಿಟೀಷರ ದಾಸ್ಯದಿಂದ ಹೊರಬಂದ ಸಂಭ್ರಮವಾದರೇ, ಸಪ್ಟೆಂಬರ್ 17 ನಿಝಾಮ ಮತ್ತು ರಝಾಕಾರ ದಬ್ಬಾಳಿಕೆಯಿಂದ ಹೊರಬಂದು ಭಾರತದ ಒಕ್ಕೂಟಕ್ಕೆ ಸೇರಿದ ಸುದಿನವನ್ನು ನೆನಪಿಸಿಕೊಳ್ಳುತ್ತಾರೆ.
ಈ ದಿನದ ಸಂಪೂರ್ಣ ಶ್ರೇಯ ಭಾರತ ಪರ ಸೇರಿಕೊಳ್ಳಲು ರಜಾಕರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಸ್ವಾತ್ರಂತ್ಯ್ರ ಹೋರಾಟಗಾರರಿಗೂ ಮತ್ತು ಹೈದರಾಬಾದಿನ ನಿಝಾಮನ ಎಲ್ಲಾ ಕುತಂತ್ರವನ್ನೂ ಚಾಣಾಕ್ಷತನದಿಂದ ಮೆಟ್ಟಿ ಆತನನ್ನು ಶರಣಾಗುವಂತೆ ಮಾಡಿ ಹೈದರಾಬಾದ್ ಪ್ರಾಂತ್ಯವನ್ನು ಮತ್ತೊಂದು ಕಾಶ್ಮೀರವಾಗದಂತೆ ತಡೆದ ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಅಂತಹ ಮಹಾನುಭಾವರನ್ನು ಇಂದು ನಾವೆಲ್ಲರು ಹೃತ್ಪೂರ್ವಕವಾಗಿ ನೆನಸಿಕೊಳ್ಳೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ