ಅರೇ! ಇದೇನಿದು ಈ ರೀತಿಯ ಶೀರ್ಷಿಕೆ? ನಿಮ್ಮ ಮಕ್ಕಳು ಅದೇನು ಅಷ್ಟು ದೊಡ್ಡ ಸಾಧಕರೇ? ಎಂದು ಕೇಳಿದರೆ, ನಾನು ಯಾವುದೇ ಮುಚ್ಚುಮರೆ ಇಲ್ಲದೇ ಹೇಳುತ್ತೇನೆ. ಇಲ್ಲಾ ನನ್ನ ಮಕ್ಕಳು ಸರಾಸರಿಯವರು ಮತ್ತು ನಾನು ಸರಾಸರಿ ಮಕ್ಕಳ ತಂದೆ. ನನ್ನ ಮಕ್ಕಳು ಶಾಲೆಯ ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವಲ್ಲಿ ಸರಾಸರಿ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಓಹೋ!! ಎಂದು ಹೇಳಿಕೊಳ್ಳುವಂತಿಲ್ಲದ ಸರಾಸರಿಯವರು. ಹಾಗಾದರೆ ಆವರ ವಿಶೇಷತೆಗಳೇನು? ಎಂದು ಕೇಳಿದರೆ ಸದ್ಯಕ್ಕೆ ಸಮಾಜದ ದೃಷ್ಟಿಯಲ್ಲಿ ಮತ್ತು ಶೈಕ್ಷಣಿಕವಾಗಿ ಅವರು ಅಂತಹದ್ದೇನನ್ನೂ ಸಾಧಿಸಿಲ್ಲ ಎನ್ನುತ್ತೇನೆ.
ಯಾರಾದರೂ ನಿಮ್ಮ ಮಕ್ಕಳು ಬಿಡಿ ಅವರು ತುಂಬಾ ಬುದ್ದಿವಂತರು ಬಿಡಿ. ಎಷ್ಟೇ ಆದರೂ ಅವರು ನಿಮ್ಮ ಮಕ್ಕಳಲ್ಲವೇ? ಎಂದು ಹೇಳಿದರೆ, ನಾನು ದಯವಿಟ್ಟು ಕ್ಷಮಿಸಿ, ನೀವು ತಪ್ಪು ತಿಳಿದಿದ್ದೀರಿ. ನಾನು ಮತ್ತು ನನ್ನ ಮಕ್ಕಳು ಅಷ್ಟೇನೂ ಬುದ್ಧಿವಂತರಲ್ಲ. ನಾವೆಲ್ಲರೂ ಶೈಕ್ಷಣಿಕವಾಗಿ ಸರಾಸರಿಯವರು ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯನ್ನೇನು ಪಡುವುದಿಲ್ಲ. ಸುಮ್ಮನೇ ಯಾರನ್ನೋ ಮೆಚ್ಚಿಸುವುದಕ್ಕೋ ಇಲ್ಲವೇ ಪ್ರತಿಷ್ಠೆಗಾಗಿ ಎಲ್ಲರ ಮುಂದೆ ಇಲ್ಲ ಸಲ್ಲದ ಸುಳ್ಳನ್ನು ಹೇಳಿಕೊಂಡು ಅನಗತ್ಯವಾದ ನಿರೀಕ್ಷೆಯನ್ನು ಹುಟ್ಟಿಸಿ ನಂತರ ನಿಜಾಂಶ ತಿಳಿದು ಒಡೆದ ಬೆಲೂನ್ ನಂತೆ ಆಗುವುದು ನನಗೆ ಖಂಡಿತವಾಗಿಯೂ ಇಷ್ಟವಿಲ್ಲ.
ಶೈಕ್ಷಣಿಕವಾಗಿ ನನ್ನ ಮಕ್ಕಳು ಇತರರಂತೆ ಸದಾಕಾಲವೂ 100ಕ್ಕೆ 90ರ ಮೇಲೆ ಅಂಕ ಗಳಿಸದೇ 80-85 ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ ಗಳಿಸಬಹುದು ಆದರೆ ಅವರು ಗಳಿಸಿದ ಅಂಕಗಳ ಹಿಂದೆ ಖಂಡಿತವಾಗಿಯೂ ಆವರ ಪರಿಶ್ರಮವಿರುತ್ತದೆ ಮತ್ತು ಅದು ಉರು ಹೊಡೆದು ಗಳಿಸಿದ ಅಂಕವಾಗಿರದೇ, ವಿಷಯವನ್ನು ಅರ್ಥಮಾಡಿಕೊಂಡು ಗಳಿಸಿದ ಅಂಕವಾಗಿರುತ್ತದೆ. ಆವರ ನಡತೆ, ಸ್ನೇಹಪರ ವ್ಯಕ್ತಿತ್ವ, ದಯೆಯ ನಡವಳಿಕೆ, ಸೌಮ್ಯ ನಡವಳಿಕೆ ಮತ್ತು ಮತ್ತೊಬ್ಬರ ಕಷ್ಟದಲ್ಲಿ ಸಹಾಯ ಮಾಡುವ ಸ್ವಭಾವವನ್ನು ಜನರು ಗಮನಿಸಲು ವಿಫಲರಾಗುತ್ತಾರೆ ಏಕೆಂದರೆ ಆವರಿಗೆ ಅಂಕಗಳಷ್ಟೇ ಮಾನದಂಡವಾಗಿ ಇಳಿದೆಲ್ಲಾ ಅಂಶಗಳು ನಗಣ್ಯವಾಗಿ ನನ್ನ ಮಕ್ಕಳನ್ನು ಸಾಮಾನ್ಯ ಸರಾಸರಿಯ ಮಕ್ಕಳು ಎಂದೇ ಎಲ್ಲರೂ ಹಣೆಪಟ್ಟಿ ಕಟ್ಟಿಬಿಡುತ್ತಾರೆ.
ಇನ್ನು ಈ ಸಮಾಜದಲ್ಲಿ ಶಾಲೆಗೆ ಸೇರಿಸಿಕೊಳ್ಳುವಾಗ ಸಣ್ಣ ಪುಟ್ಟ ಕಂದಮ್ಮಗಳ ಬುದ್ಧಿ ಮತ್ತೆಗಿಂತಲೂ ಅವರ ಪೋಷಕರು ಕೊಡಬಹುದಾದ ದೇಣಿಗೆಗಳಿಂದ, ವಿದ್ಯಾರ್ಥಿಗಳಾಗಿದ್ದಲ್ಲಿ ಅವರು ಗಳಿಸುವ ಅಂಕಗಳಿಂದ, ಕ್ರೀಡಾಪಟುಗಳಾಗಿದ್ದಲ್ಲಿ ಅವರು ಆಟ ಆಡಿದ್ದಕ್ಕಿಂತಲೂ ಅವರು ಗಳಿಸಿದ ವಿಜಯ/ಪದಕಗಳಿಂದ, ಇನ್ನು ಕೆಲಸ ಮಾಡುವವರು ಅಥವಾ ವ್ಯಾಪಾರಿಗಳಾಗಿದ್ದಲ್ಲಿ, ಅವರು ಕೆಲಸ ಮಾಡುತ್ತಿರುವ ಸಂಸ್ಥೆ ಮತ್ತು ಅವರು ಗಳಿಸುವ ದೊಡ್ಡ ಮೊತ್ತದ ಸಂಬಳಗಳಿಂದ, ಹೆಣ್ಣು ಮಕ್ಕಳಿಗೆ ಗಂಡು ಹುಡುಕುವಾಗ ಹುಡುಗನ ವಿದ್ಯಾರ್ಹತೆ ಮತ್ತು ನಡತೆಗಳಿಗಿಂತಲೂ ಆತನ ಮನೆಯ ಆಸ್ತಿ ಮತ್ತು ಅಂತಸ್ತುಗಳಿಂದ, ಅದೇ ರೀತಿ ಗಂಡು ಮಕ್ಕಳಿಗೆ ಹೆಣ್ಣುಗಳನ್ನು ಹುಡುಕುವಾಗ ಆಕೆಯ ಸ್ವಭಾವ, ಹೊಂದಿಕೊಳ್ಳುವ ಗುಣಗಳಿಗಿಂತಲೂ ಅವರ ಪೋಷಕರು ಹೊಂದಿರಬಹುದಾದ ಆಸ್ತಿ ಮತ್ತು ಅವರು ಕೊಡಬಹುದಾದ ವರದಕ್ಷಿಣೆಯಿಂದ ಅಳೆಯುವ ಕೆಟ್ಟ ಸಂಪ್ರದಾಯ ರೂಢಿಯಲ್ಲಿರುವುದರಿಂದ ಅವರಿಗೆ ಸರಾಸರಿಯವರನ್ನು ಗಣನೆಗೇ ತೆಗೆದುಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಈ ಎಲ್ಲದರ ನಡುವೆ, ನನ್ನ ಸರಾಸರಿ ಮಕ್ಕಳು ಮೂಕ ಪ್ರೇಕ್ಷಕರಾಗಿ ತಮ್ಮ ಸುತ್ತಮುತ್ತಲಿರುವವರನ್ನು ಪೂರ್ಣ ಹೃದಯದಿಂದ ಹುರಿದುಂಬಿಸುವುದನ್ನು ಗಮನಿಸದೆ ಹೋಗುತ್ತದೆ. ನಮ್ಮ ಮಕ್ಕಳು ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡದೇ ಹೋದರೂ ಅವರಿಗೆ ಆ ಕ್ರೀಡೆಯ ಬಗ್ಗೆ ಇರುವ ಸಂಪೂರ್ಣ ಜ್ಞಾನದ ಬಗ್ಗೆ ಇತರರಿಗೆ ಪರಿಜ್ಞಾನವೇ ಇರುವದಿಲ್ಲ. ಅವರು ಇತರರಂತೆ ವೇದಿಕೆಯ ಮೇಲೆ ತಮ್ಮ ಸಂಗೀತದ ಸುಧೆಯನ್ನು ಹರಿಸದೇ ಇರಬಹುದು ಆದರೆ ಅವರಿಗೆ ಸಂಗೀತದ ಮೇಲಿರುವ ಪ್ರೀತಿ ಮತ್ತು ಸ್ವರ ಜ್ಞಾನದ ಬಗ್ಗೆ ಇರುವ ಜ್ಞಾನವನ್ನು ತಿಳಿದುಕೊಳ್ಳುವುದಕ್ಕೆ ಯಾರೂ ಪ್ರಯತ್ನಿಸುವುದೇ ಇಲ್ಲಾ ಏಕೆಂದರೆ ಆ ರೀತಿಯ ಪರೀಕ್ಷಿಸುವವರಿಗೇ ಅದರ ಬಗ್ಗೆ ಹೆಚ್ಚಿನ ಅರಿವಿಲ್ಲದೇ ಬಹುತೇಕರು ಸ್ವಂತಿಕೆ ಇಲ್ಲದೇ ಮತ್ತೊಬ್ಬರನ್ನು ಅನುಸರಿಸುತ್ತಾ ಆಯಾಯಾ ಕ್ಷೇತ್ರಗಳಲ್ಲಿ ಮೇಲೆ ಬರುವುದಷ್ಟೇ ಸಾಧನೆ ಎಂದು ಭಾವಿಸಿರುತ್ತಾರೆ.
ಇವೆಲ್ಲದರ ಅರಿವಿದ್ದೂ ನಾನೂ ಸಹಾ ಹಲವಾರು ಬಾರಿ ನನ್ನ ಮಕ್ಕಳು ಪರೀಕ್ಷೆಗಳಲ್ಲಿ ಎಲ್ಲರಂತೆ ಅಥವಾ ನನ್ನ ನಿರೀಕ್ಷೆಯಂತೆ ಅಂಕಗಳನ್ನು ಗಳಿಸದೇ ಇದ್ದಾಗ ತಾಳ್ಮೆ ಕಳೆದುಕೊಂಡು ಅವರ ಮೇಲೆ ರೇಗಿರುವ ಅಥವಾ ಕೆಲವೊಮ್ಮೆ ಕೈ ಎತ್ತಿರುವ ಸಂದರ್ಭಗಳೂ ಉಂಟು. ಏಕೆಂದರೆ ನಮಗೆ ಆವರ ಇಚ್ಚೆಗಳೇನು? ಅವರ ಮನಸ್ಸಿನಲ್ಲಿ ಅವರು ಮುಂದೆ ಏನಾಗ ಬಯಸಲು ಇಚ್ಚಿಸುತ್ತಾರೆ? ಎಂದು ತಾಳ್ಮೆಯಿಂದ ಕೇಳುವ ಬದಲು, ನಾವು ಸಾಧಿಸಲು ಆಗದೇ ಹೋದದ್ದನ್ನೋ ಇಲ್ಲವೇ ನಮ್ಮ ಬಂಧು-ಮಿತ್ರರ ಮಕ್ಕಳೋ ಇಲ್ಲವೇ ಅಕ್ಕ ಪಕ್ಕದ ಮನೆಯ ಮಕ್ಕಳು ಸಾಧಿಸಿದ್ದನ್ನು ನಮ್ಮ ಮಕ್ಕಳು ಸಾಧಿಸಲಿ ಎಂಬುವ ಹಪಾಹಪಿ ಇರುತ್ತದೆ. ಹಾಗಾಗಿ ನಾವು ನಮ್ಮ ಮಕ್ಕಳ ಮೇಲೆ ಅನಗತ್ಯವಾಗಿ ಹೇರಿಕೆಯನ್ನು ಹಾಕುತ್ತೇವೆ. ನಮ್ಮಲ್ಲಿ ಬಹುತೇಕರು ನಮ್ಮ ಮಕ್ಕಳ ಇಚ್ಚೆಗಳನ್ನೂ ಗೌರವಿಸಬೇಕು. ಈಗ ಅವರೇನೂ ಸಣ್ಣವರೇನಲ್ಲಾ. ಆವರೂ ವಯಸ್ಕರಾಗಿದ್ದು ಅವರಿಗೂ ಮುಂದೆ ತಾನು ಏನಾಗಬೇಕು ಎಂಬುದರ ಅರಿವಿರುತ್ತದೆ ಎಂಬ ವಿಷಯ ಗೊತ್ತಿದ್ದೂ ಜಾಣ ಮೌನವನ್ನು ತಾಳುತ್ತೇವೆ.
ನಮ್ಮಲ್ಲಿ ಪದವಿ ಎಂದ ತಕ್ಷಣ ಐ.ಐ.ಟಿ, ಐ.ಎ.ಎಮ್. ಡಾಕ್ಟರ್ ಇಂಜೀನಿಯರ್ ಇಲ್ಲವೇ ಕಡೇ ಪಕ್ಷ ಚಾರ್ಟಡ್ ಅಕೌಂಟೆಟ್/ವಕೀಲರಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹಾರುವ ಮೂಲಕ ಪ್ರತಿಭಾಪಲಾಯನ ಮಾಡಿ ಅಲ್ಲಿ ಯಾವುದೋ ವಿದೇಶೀ ಕಂಪನಿಗಳಿಗೆ ಕೆಲಸ ಮಾಡುತ್ತಾ ಅವರು ಕಳುಹಿಸುವ ವಿದೇಶೀ ವಿನಿಮಯದ ಹಣ ಮತ್ತು ಮಕ್ಕಳು ವಿದೇಶದಲ್ಲಿ ಇದ್ದಾರೆ ಎಂದು ಎಲ್ಲರ ಬಳಿ ಹೇಳಿ ಕೊಳ್ಳುವುದೇ ಗೌರವ ಮತ್ತು ಘನತೆ ಎಂದು ಭಾವಿಸಿರುತ್ತೇವೆ. ನಮಗೆ ಮಕ್ಕಳ ಅವಶ್ಯತೆ ಇದ್ದಾಗ ಅವರು ಬಾರದೇ ಹೋದಲ್ಲಿ ಅದೇ ಕೊರತೆಯಲ್ಲಿಯೇ ಖಿನ್ನರಾಗಿ ಹೋದ ಅದೆಷ್ಟೋ ಜನರನ್ನು ನಾವೇ ನೋಡಿದ್ದೇವೆ.
ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||
ಲಂಕೆ ಚಿನ್ನದ ನಗರಿಯೇ ಆಗಿದ್ದರೂ ನಮಗೆ ನಮ್ಮ ಜನ್ಮಭೂಮಿಯೇ ಸ್ವರ್ಗಕ್ಕೆ ಸಮಾನ. ಹಂಗಿನ ಅರಮನೆಗಿಂತ ವಿಂಗಡದ ಗುಡಿ ಲೇಸು ಎಂದು ಲಕ್ಷಣನಿಗೆ ಪ್ರಭು ಶ್ರೀರಾಮ ಚಂದ್ರನು ತಿಳುವಳಿಕೆ ಹೇಳಿದಂತೆ ಇಂದು ನಮ್ಮ ಮಕ್ಕಳಿಗೆ ನಮ್ಮ ದೇಶದ ಹಿರಿಮೆ ಗರಿಮೆ ಬಗ್ಗೆ ತಿಳುವಳಿಕೆ ಹೇಳುವ ಮನೋಭಾವನೆಯನ್ನು ಬಹುತೇಕರು ಬೆಳಸಿಕೊಳ್ಳದೇ, ತಮ್ಮ ವಯಕ್ತಿಕ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನೇ ಬಲಿ ಕೊಡುತ್ತಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.
ಲೊಕದ ವ್ಯವಹಾರಕ್ಕೆ ತಕ್ಕಷ್ಟು ವಿದ್ಯೆ ಮತ್ತು ಜೀವನೋಪಾಯಕ್ಕಾಗಿ ತಕ್ಕಷ್ಟು ದುಡಿಮೆಯಿದ್ದು ತಂದೆ ತಾಯಿ ಮತ್ತು ಸಂಸಾರದೊಂದಿಗೆ ತಮ್ಮ ಇಷ್ಟಾನುಸಾರವಾದ ಹವ್ಯಾಸಗಳೊಂದಿಗೆ ನೆಮ್ಮದಿಯಾಗಿ ಎರಡು ಹೊತ್ತು ಊಟ ಮತ್ತು ಕಣ್ತುಂಬ ನಿದ್ದೆ ಮಾಡಿಕೊಂಡು ಹಾಯಾಗಿ ಇರುತ್ತಿದ್ದ ನಮ್ಮ ಪೂರ್ವಜರ ಜೀವನ ಶೈಲಿ ಇಂದಿನವರಿಗೆ ತುಚ್ಚವಾಗಿದೆ.
ಆನಂದವಾಗಿ ಜೀವನ ನಡೆಸಬೇಕೆಂದರೆ ಐಶಾರಾಮ್ಯವಾಗಿಯೇ ಇರಬೇಕು ಎಂದೇನಿಲ್ಲ. ನಿಜ ಹೇಳ ಬೇಕೆಂದರೆ . ನಾಳೆಯ ಬಗ್ಗೆ ಸುದೀರ್ಘವಾಗಿ ಯೋಚಿಸದೇ ದೈನಂದಿನ ಕೂಲೀ ಕೆಲಸ ಮಾಡಿ ಸಂಪಾದನೇ ಮಾಡಿ ಪ್ರತೀದಿನವೂ ಹೊಟ್ಟೆಯ ತುಂಬಾ ಊಟ ಕಣ್ತುಂಬ ನಿದ್ದೇ ಮಾಡುವವರೇ ನಿಜಕ್ಕೂ ಯಾವುದೇ ರೀತಿಯ ಖಾಯಿಲೆಗಳು ಇಲ್ಲದೇ ನೆಮ್ಮದಿಯಾಗಿ ಜೀವನ ನಡೆಸುತ್ತಿರುತ್ತಾರೆ ಎಂಬು ಪರಮ ಸತ್ಯವನ್ನು ಅರಿಯಲಾರದಷ್ಟು ಬೌದ್ಧಿಕ ದಿವಾಳಿತನದಿಂದ, ಅಂಧ ಪಾಶ್ಚಾತ್ಯ ಅನುಕರಣೆಯಲ್ಲೇ ಮುಳುಗಿರುವ ಇಂದಿನ ಯುವ ಜನತೆಯ ಬಗ್ಗೆ ಕನಿಕರ ಮೂಡುತ್ತದೆ.
ಹಾಗಂತ ಯಾವುದೇ ವಿದ್ಯಾ ಬುದ್ಧಿ ಇಲ್ಲದೇ ನನ್ನ ಮಕ್ಕಳು ಕೂಲಿ ಕೆಲಸ ಮಾಡಲಿ ಎಂದೇನೂ ನಾನು ಬಯಸುವುದಿಲ್ಲ. ಅದೇ ರೀತಿ 100 ಕ್ಕೆ 100 ಅಂಕಗಳನ್ನು ಗಳಿಸಿ ನಾಲ್ಕಾರು ಪದವಿಗಳನ್ನು ಪಡೆದು ಸಣ್ಣ ವಯಸ್ಸಿನಲ್ಲಿಯೇ ವಿದೇಶೀ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಾ ಆನಾವಶ್ಯಕವಾದ ಕೆಲಸದ ಒತ್ತಡಕ್ಕೆ ಒಳಗಾಗಿ ಸಣ್ಣ ವಯಸ್ಸಿಗೇ ಹತ್ತಾರು ಖಾಯಿಲೆಗಳಿಗೆ ತುತ್ತಾಗಿ, ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ನೋಡಲು ನಾನು ಖಂಡಿತವಾಗಿಯೂ ಬಯಸುವುದಿಲ್ಲ.
ನನಗೆ ನನ್ನ ಮಕ್ಕಳು ಸರಾಸರಿ ಮಕ್ಕಳಾಗಿದ್ದರೂ ಪರವಾಗಿಲ್ಲ. ಆದರೆ ಅವರು ತಮ್ಮ ಇಚ್ಚೆಗೆ ಅನುಗುಣವಾಗಿ ವಿದ್ಯೆಯನ್ನು ಪಡೆಯುವ ಜೊತೆ ಸಂಸ್ಕಾರವಂತರಾಗಿ ದೇಶ ಮತ್ತು ಧರ್ಮದ ಬಗ್ಗೆ ಅಭಿಮಾನ, ಉತ್ತಮ ನಡೆ ನುಡಿಗಳೊಂದಿಗೆ ಲೋಕಜ್ಞಾನವನ್ನು ಹೊಂದುವ ಮೂಲಕ, ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ಕೊಡುವ ಹಿಂದೂ ಸ್ಥಾನವು ಎಂದೂ ಮರೆಯದಂತಹ ಭಾರತ ರತ್ನಗಳಾದರೆ ಸಾಕು ಎಂದು ಬಯಸುತ್ತೇನೆ. ನಮ್ಮ ಮುಂದಿನ ಪೀಳಿಗೆಯವರಿಗೆ ಆಸ್ತಿ ಮಾಡುವುದಕ್ಕಿಂತಲೂ ನಾವು ಪ್ರಸ್ತುತ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಸಂಪಾದಿಸುವುದನ್ನು ಇಚ್ಚಿಸುತ್ತೇನೆ.
ಹೀಗಾಗಿಯೇ ನನ್ನ ಮಕ್ಕಳು ಎಲ್ಲರಂತಹವರಲ್ಲ ಮತ್ತು ನಾನೂ ಸಹಾ ಲೋಕದ ದೃಷ್ಟಿಯಲ್ಲಿ ಸಾಧಾರಣ ಸರಾಸರಿ ಮಕ್ಕಳ ತಂದೆ ಎಂದು ಹೇಳಿಕೊಳ್ಳುತ್ತೇನೆ. ಇನ್ನು ನೀವೂ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ ಸಾಮಾಜಿಕ ಜಾಲತಾಣದಲ್ಲಿ ಓದಿದ ಲೇಖನವೊಂದರಿಂದ ಸ್ಪೂರ್ತಿ ಪಡೆದ್ದಾಗಿದೆ.
ನಿಮ್ಮ ಮಾತುಗಳು ಅಕ್ಷರಹ: ಸತ್ಯವಾದುದು. ನಿಮ್ಮ ಹಾಗೆ ನಾವು ಕೂಡ . ದೇವರು ಆಶೀರ್ವಾದ ಮಕ್ಕಳಿಗೆ ಸದಾ ಇರಲಿ 🙏
LikeLiked by 1 person