ಕಳೆದ ಒಂದೂವರೆ ವರ್ಷದಿಂದ ಇಡೀ ಪ್ರಪಂಚದ ಆರ್ಥಿಕ ಪರಿಸ್ಥಿತಿ ಕರೋನಾದಿಂದಾಗಿ ಕೆಟ್ಟುಕೆರ ಹಿಡಿದು ಹೋಗಿರುವ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಇದರ ಪರಿಣಾಮದಿಂದಾಗಿ ಭಾರತದ ಆರ್ಥಿಕ ಪರಿಸ್ಥಿತಿ ಅಧೋಗತಿ ತಲುಪಿರುವುದನ್ನೇ ಎತ್ತಿ ತೋರಿಸುತ್ತಾ, ಜನರಿಗೆ ಎರಡು ಹೊತ್ತು ಊಟ ಸಿಗುತ್ತಿಲ್ಲ ಈ ಸರ್ಕಾರ ಏನು ಮಾಡ್ತಾ ಇದೇ? ಎಂದು ಜನರನ್ನು ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಿ ಅವರ ದಿಕ್ಕು ತಪ್ಪಿಸುವ ಕಾರ್ಯದಲ್ಲಿರುವಾಗಲೇ ಈ ವಾರ ಬಹುನಿರೀಕ್ಷಿತವಾಗಿದ್ದ ಎರಡು ಸುಪ್ರಸಿದ್ಧ ನಾಯಕರುಗಳ ಸಿನಿಮಾ ಬಿಡುಗಡೆಯಾಗಿದೆ. ಬಿಡುಗಡೆಯಾದ ಎರಡೇ ದಿನಗಳಲ್ಲಿಯೇ ಕೋಟಿ ಕೋಟಿ ರೂಪಾಯಿಗಳನ್ನು ಬಾಚಿಕೊಂಡ ಸುದ್ದಿಯನ್ನು ಮಾಧ್ಯಮದವರು ತೋರಿಸುತ್ತಿದ್ದಾರೆ.
ನಮ್ಮ ದೇಶದಲ್ಲಿ ಉನ್ನತ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು, ಅಧಿಕಾರಿಗಳು ಮುಂತಾದವರು ವರ್ಷಕ್ಕೆ 30-40 ಲಕ್ಷ ಅದಕ್ಕಿಂತ ಸ್ವಲ್ಪ ಹೆಚ್ಚು ಎಂದರೆ 50-60 ಲಕ್ಷ ರೂಪಾಯಿಗಳಷ್ಟು ಪಡೆಯುತ್ತಾರೆ. ಆದರೆ ಅದೇ ಈ ದೇಶದಲ್ಲಿ ಚಲನಚಿತ್ರ ನಟ ನಟಿಯರು ಪ್ರತಿ ಚಿತ್ರಕ್ಕೂ ಕೋಟ್ಯಾಂತರ ಹಣವನ್ನೇ ಪಡೆಯುತ್ತಾ, ವರ್ಷಕ್ಕೆ 10 ಕೋಟಿಯಿಂದ 100 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ಆದರೆ ಆ ಹಣವನ್ನು ಏನು ಮಾಡ್ತಾರೆ? ಎನ್ನುವುದೇ ಇದುವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಈ ದೇಶದ ಅಭಿವೃದ್ಧಿಗೆ ಈ ನಟಿಯರ ಕೊಡುಗೆ ಏನು? ಅಷ್ಟು ದುಡಿದರೂ ಸರಿಯಾಗಿ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಯತ್ನಿಸುವುದು ವಿಪರ್ಯಾಸವೇ ಸರಿ. ಈ ನಟ ನಟಿಯರು ಒಂದು ವರ್ಷ ಗಳಿಸುವಷ್ಟು ಹಣವನ್ನು ದೇಶದ ಉನ್ನತ ವಿಜ್ಞಾನಿಗಳಿಸಲು ತಮ್ಮ ಜೀವಮಾನವನ್ನು ಕೆಲಸ ಮಾಡ ಬೇಕಾದರೆ ಇನ್ನು ಸಾಮಾನ್ಯ ವ್ಯಕ್ತಿ ಅಷ್ಟೊಂದು ಹಣ ಗಳಿಸಲು 100 ವರ್ಷಗಳಾದರು ಆಗುತ್ತದೆ ಎಂದರೂ ಅತಿಶಯವಲ್ಲ.
ಇತ್ತಿಚಿನ ವರ್ಷಗಳಲ್ಲಿ ನಮ್ಮ ದೇಶದ ಯುವ ಜನತೆಯನ್ನು ಆಕರ್ಷಿಸುತ್ತಿರುವ ಮೂರು ಕ್ಷೇತ್ರಗಳೆಂದರೆ, ಸಿನಿಮಾ, ಕ್ರಿಕೆಟ್ ಮತ್ತು ರಾಜಕೀಯ. ಇದಕ್ಕೆ ಮುಖ್ಯ ಕಾರಣ ಈ ಮೂರೂ ಕ್ಷೇತ್ರಗಳಲ್ಲಿ ದೊರೆಯುವ ಕೀರ್ತಿ, ಪ್ರತಿಷ್ಠೆ ಮತ್ತು ಹಣ. ಹಾಗಾಗಿ ಈ ಮೂರು ಕ್ಷೇತ್ರಗಳು ಇಂದಿನ ಆಧುನಿಕ ಯುವಕರ ಅದ್ಯತೆಗಳಾಗಿರುವುದು ನಿಜಕ್ಕೂ ವಿಪರ್ಯಾಸ. ಹಾಗಾಗಿಯೇ ಈ ಮೂರೂ ಕ್ಷೇತ್ರಗಳಲ್ಲಿರುವವರು ಇಂದು ದೇಶ ಮತ್ತು ಸಮಾಜಕ್ಕೆ ನಿಷ್ಪ್ರಯೋಜಕರಾಗಿದ್ದಾರೆ ಎಂದರೂ ತಪ್ಪಾಗದೇನೋ?
ಸಿನಿಮಾ ರಂಗದಲ್ಲಿ ಪ್ರತಿಷ್ಟೆ ಗಳಿಸುತ್ತಿದ್ದಂತೆಯೇ, ಮಾದಕ ದ್ರವ್ಯ, ಮತ್ತು ವೇಶ್ಯಾವಾಟಿಕೆಯಾದರೆ, ಕ್ರಿಕೆಟ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಜೊತೆಗೆ ಗೂಂಡಾಗಿರಿಯಾದರೇ ರಾಜಕೀಯದಲ್ಲಿಯೂ ಗೂಂಡಾಗಿರಿ ಮತ್ತು ಭ್ರಷ್ಟಾಚಾರ ತಾಂಡಾವವಾಡುತ್ತಿದೆ. ಈ ರೀತಿಯ ಕುಕೃತ್ಯಗಳ ಹಿಂದೆ ಆವರು ಗಳಿಸುವ ಹಣವನ್ನು ಹೇಗೆ ಖರ್ಚು ಮಾಡುವುದು ಎಂಬುದರ ಪರಿವಿಲ್ಲದಿರುವುದು ಒಂದು ಕಾರಣವಾಗಿದೆ ಎನ್ನಬಹುದೇನೋ? ಇಂತಹವರನ್ನು ಉದ್ಧಾರ ಮಾಡಲು ನಾವು ಬೆವರು ಸುರಿಸಿದ ಹಣವನ್ನು ಖರ್ಚು ಮಾಡುವುದು ಒಂದು ರೀತಿಯ ಮೂರ್ಖತನದ ಪರಮಾವಧಿಯೇನೋ?
ನಿಜ ಹೇಳಬೇಕೆಂದರೆ, 70-80 ವರ್ಷಗಳ ಹಿಂದಿನ ಸುಪ್ರಸಿದ್ಧ ನಟರು ತಿಂಗಳು ಸಂಬಳಕ್ಕೆ ಅಭಿನಯಿಸುತ್ತಿದ್ದರು. 30-40 ವರ್ಷಗಳ ಹಿಂದಿನ ಕ್ರಿಕೆಟಿಗರ ಗಳಿಕೆ ಈಗಿನ ಫಸ್ಟ್ ಕ್ಲಾಸ್ ಆಟಗಾರರು ಗಳಿಸುವುದಕ್ಕಿಂತಲೂ ಕಡಿಮೆ ಗಳಿಸುತ್ತಿದ್ದರು. ವಿದೇಶಗಳಿಗೆ ಹೋದಾಗ ಈಗಿನಂತೆ ಐಶಾರಾಮ್ಯ ಹೋಟೆಲ್ಲಿನ ಬದಲಾಗಿ ರೈಲ್ವೇ ಕೋಚಿನಲ್ಲಿಯೇ ಉಳಿದುಕೊಂಡ ಉದಾಹರಣೆಯೂ ಇದೆ. ಇನ್ನು 30-40 ವರ್ಷಗಳ ಹಿಂದಿನ ರಾಜಕಾರಣಿಗಳು ನಿಸ್ವಾರ್ಥ ಸೇವೆಗೆ ಖ್ಯಾತರಾಗಿದ್ದರೇ ಹೊರತು ಖಂಡಿತವಾಗಿಯೂ ಈಗಿನಷ್ಟು ಲೂಟಿಯಂತೂ ಇರಲಿಲ್ಲ.
ಕೆಲ ವರ್ಷಗಳ ಹಿಂದಿನವರೆಗೂ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳ ಮೇಲೆ ನಮ್ಮವರಿಗೆ ಎಲ್ಲರಿಗೂ ಅಪಾರವಾದ ನಂಬಿಕೆ ಇತ್ತು. ನಮ್ಮ ಆಚಾರ ವಿಚಾರಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಹೋಗುತ್ತಿದ್ದರು. ಚಲನಚಿತ್ರಗಳಲ್ಲಿ ಅಸಭ್ಯ ಮತ್ತು ಅನಾಗರೀಕವಾದ ವಿಷಯಗಳನ್ನು ತೋರಿಸುತ್ತಿರಲಿಲ್ಲ. ಕ್ರಿಕೆಟಿಗರು ಮತ್ತು ರಾಜಕಾರಣಿಗಳು ಇಷ್ಟೊಂದು ಸೊಕ್ಕಿನಿಂದ ಇರುತ್ತಿರಲಿಲ್ಲ. ದುರಾದೃಷ್ಟವಷಾತ್ ಇಂದು ಅದೇ ಚಿತ್ರ ನಟರು, ಕ್ರಿಕೆಟಿಗರು ಮತ್ತು ರಾಜಕಾರಣಿಗಳನ್ನು ದೇವರನ್ನಾಗಿಸಿ ಅವರನ್ನು ಆರಾಧಿಸುವ ಬೌದ್ಧಿಕ ದಿವಾಳಿತನದವರೇ ಹೆಚ್ಚಾಗಿದ್ದಾರೆ.
ನಿಧಾನವಾಗಿ ಅವರೆಲ್ಲರೂ ನಮ್ಮನ್ನು ದೋಚಲು ಆರಂಭಿಸಿದರೆ ನಮಗೆ ಗೊತ್ತಿಲ್ಲದಂತೆಯೇ ಸಂತೋಷದಿಂದ ನಾವುಗಳು ಅವರ ಅಂಧಾಭಿಮಾನಿಗಳಾಗಿಯೋ ಇಲ್ಲವೇ ಹಿಂಬಾಲಕರಾಗಿ ಒಂದಿ ರೀತಿಯ ಮಾಫಿಯಾದ ಹಿಡಿತದಲ್ಲಿ ಸಿಕ್ಕಿಹಾಕಿಕೊಳ್ಳುವ ಹಾಗೆ ಸಿಕ್ಕಿಕೊಳ್ಳುವ ಮೂಲಕ, ನಮ್ಮ, ನಮ್ಮ ಮಕ್ಕಳ ಮತ್ತು ನಮ್ಮ ದೇಶದ ಭವಿಷ್ಯವನ್ನು ನಾಶ ಮಾಡುತ್ತಿರುವುದಲ್ಲದೇ ನಮ್ಮೆಲ್ಲರ ಶ್ರಮವೆಲ್ಲವನ್ನೂ ವ್ಯರ್ಥಗೊಳಿಸುತ್ತಿದ್ದೇವೆ.
ಅದೊಮ್ಮೆ ವಿಯೆಟ್ನಾಂ ಅಧ್ಯಕ್ಷರಾಗಿದ್ದ ಹೋ-ಚಿ-ಮಿನ್ಹ್ ಭಾರತಕ್ಕೆ ಬಂದಿದ್ದಾಗ. ಭಾರತೀಯ ಮಂತ್ರಿಗಳೊಂದಿಗೆ ಮಾತನಾಡುತ್ತಾ, ನೀವೇನು ಮಾಡಿಕೊಂಡಿದ್ದೀರಿ? ಎಂದು ವಿಚಾರಿಸಿದಾಗ ನಮ್ಮ ಮಂತ್ರಿಗಳೊಬ್ಬರು, ನಾವು ರಾಜಕೀಯ ಮಾಡಿಕೊಂಡಿದ್ದೇವೆ ಎಂದು ಉತ್ತರಿಸಿದರಂತೆ.
ಮಂತ್ರಿಗಳ ಉತ್ತರದಿಂದ ವಿಚಲಿತರಾದ ವಿಯಟ್ನಾಂ ಅಧ್ಯಕ್ಷರು ಮತ್ತೊಮ್ಮೆ ನೀವೇನು ಕೆಲಸ ಮಾಡುತ್ತಿದ್ದೀರೀ? ಎಂದು ಬಿಡಿಸಿ ಕೇಳಿದಾಗಲೂ, ರಾಜಕೀಯವೇ ನಮ್ಮ ವೃತ್ತಿ ಎಂದರಂತೆ ನಮ್ಮ ಮಂತ್ರಿಗಳು.
ಮಂತ್ರಿಗಳ ಈ ರೀತಿಯ ಉತ್ತರದಿಂದ ಸ್ವಲ್ಪ ಸಿಟ್ಟಾದ ಹೋ-ಚಿ-ಮಿನ್ಹ್ ಬಹುಶಃ ನೀವು ನನ್ನ ಪ್ರಶ್ನೆಯನ್ನು ಅರ್ಥವನ್ನು ಅರ್ಥಮಾಡಿಕೊಂಡಿಲ್ಲ ಎನಿಸುತ್ತದೆ ನಾನೂ ಸಹಾ ರಾಜಕೀಯವನ್ನೂ ಮಾಡುತ್ತೇನೆ. ಆದರೆ ವೃತ್ತಿಯಲ್ಲಿ ನಾನು ಕೃಷಿಕ ಮತ್ತು ಜೀವನೋಪಾಯಕ್ಕಾಗಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಕ್ಕಲುತನವನ್ನು ನಿಷ್ಠೆಯಿಂದ ಮಾಡುತ್ತೇನೆ. ಹಗಲಿನಲ್ಲಿ ನಮ್ಮ ದೇಶದ ರಾಷ್ಟ್ರಪತಿಯಾಗಿ ದೇಶದ ಜವಾಬ್ದಾರಿಯನ್ನು ಹೊರುತ್ತೇನೆ ಎಂದಾಗ ನಮ್ಮ ದೇಶದ ನಿಯೋಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಂತೆ.
ಅಮೇರಿಕಾವೂ ಸೇರಿದಂತೆ ಅದೆಷ್ಟೋ ದೇಶಗಳ ಅಧ್ಕಕ್ಷರು ಮತ್ತು ಪ್ರಧಾನಿಗಳು ತಮ್ಮ ಅಧಿಕಾರಧ ಅವಧಿ ಮುಗಿದ ನಂತರ ಜೀವನೋಪಾಯಕ್ಕಾಗಿ ಮಾಜೀ ಅಧ್ಯಕ್ಷರು ಎನ್ನುವ ಹಮ್ಮು ಬಿಮ್ಮು ಇಲ್ಲದೇ, ಯಾವುದೋ ಒಂದು ಕೆಲಸವನ್ನು ಮಾಡುವುದನ್ನು ನೋಡಬಹುದಾಗಿದೆ. ದುರಾದೃಷ್ಟವಷಾತ್ ನಮ್ಮ ದೇಶದಲ್ಲಿ ಒಂದು ಪಂಚಾಯಿತಿ ಸದಸ್ಯರೋ ಇಲ್ಲವೇ ನಗರ ಪಾಲಿಕೆ ಸದಸ್ಯರಾದರೂ ಸಾಕೂ ತಮ್ಮ ಮುಂದಿನ ಹತ್ತಾರು ತಲೆಮಾರಿಗೆ ಆಗುವಷ್ಟು ಅಕ್ರಮ ಆಸ್ತಿಗಳನ್ನು ಸಂಪಾದನೆ ಮಾಡುವುದು ನಿಜಕ್ಕೂ ಛೇಧಕರವೇ ಸರಿ. ಕಲ ವರ್ಷಗಳ ಹಿಂದಿನ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯಕ್ಕೆ ರಾಜಕೀಯವನ್ನೇ ಆಶ್ರಯಿಸಿರುವುದಲ್ಲದೇ, ಈಗ ಅವರ ಸಂಖ್ಯೆ ಕೋಟಿಗಳಿಗಿಂತಲು ಅಧಿಕವಾಗಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿಯಾಗಿದೆ.
ಕೆಲವೇ ತಿಂಗಳುಗಳ ಹಿಂದೆ, ಕರೋನಾದಿಂದ ಇಡೀ ದೇಶದಲ್ಲಿ ತಿನ್ನಲು ಆಹಾರವೇ ಇಲ್ಲ, ಲಸಿಕೆ ಇಲ್ಲಾ ಎಂದು ಎಲ್ಲವನ್ನು ಸರ್ಕಾರವೇ ಉಚಿತವಾಗಿ ಕೊಡಬೇಕು ಎಂದು ಗೀಳಿಡುತ್ತಿದ್ದವರೇ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವಂತೆ ಇಂದು ತಮ್ಮ ನೆಚ್ಚಿನ ನಾಯಕರುಗಳ ಸಿನಿಮಾ ಟಿಕೆಟ್ಟಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲು ಸಿದ್ದರಿದ್ದಾರೆ ಎಂದರೆ ನಮ್ಮ ಇಂದಿನ ಯುವ ಜನತೆಯ ಆದ್ಯತೆಗಳು ಮತ್ತು ಆದರ್ಶಗಳು ಬದಲಾಗುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹಣೆಯಾಗಿದೆ.
ಹಾಗೆ ಟಿಕೆಟ್ ಸಿಗಲಿಲ್ಲ ಎಂದು ಬ್ಲಾಕ್ ಟಿಕೇಟ್ ತೆಗೆದುಕೊಂಡು ನೋಡುತಿದ್ದರೆ, ಇನ್ನೂ ಕೆಲವರು ಬ್ಲಾಕ್ ಟಿಕೇಟ್ ಸಹಾ ಸಿಗಲಿಲ್ಲ ಎಂದು ಥಿಯೇಟರ್ ಮುಂದೆ ಥರಣಿ ನಡೆಸಿದ ಉದಾರಣೆಯನ್ನೂ ಅದೇ ಮಾಧ್ಯಮದವರು ತೋರಿಸುತ್ತಿದ್ದಾರೆ. ಹಾಗಾದರೆ ತಿನ್ನಲು ಆಹಾರವಿಲ್ಲ ಎಂದು ಜನರು ಹಸಿವಿನಿಂದ ಸಾಯುತ್ತಿದ್ದಾರೆ ಎಂದರೆ, ಒಬ್ಬ ನಾಯಕ ನಟನ ಸಿನಿಮಾಕ್ಕೆ ನೂರಾರು ರೂಪಾಯಿಗಳನ್ನು ಖರ್ಚು ಮಾಡಲು ಹಣ ಎಲ್ಲಿಂದ ಬರುತ್ತದೆ? ಎಂದು ಯಾರಾದರೂ ಹೇಳಲು ಸಾಧ್ಯವೇ?
ಇಂದಿನ ಯುವ ಜನತೆಗೆ ವಿಜ್ಞಾನಿಗಳು, ಸಂಶೋಧಕರು, ಶಿಕ್ಷಣತಜ್ಞರು ಆದರ್ಶವಲ್ಲ. ಬದಲಾಗಿ ಸಿನಿಮಾ ನಟರು, ರಾಜಕಾರಣಿಗಳು ಮತ್ತು ಕ್ರಿಕೆಟ್ ಆಟಗಾರರು ಆದರ್ಶ ಮತ್ತು ಆದ್ಯತೆಗಳಾಗುತ್ತಿದ್ದಾರೆ ಯಾವ ದೇಶದಲ್ಲಿ ಇಂತಹ ಬೌದ್ಧಿಕ ದೀವಾಳಿತನ ಹೆಚ್ಚುತ್ತದೆಯೋ ಅಂತಹ ದೇಶ ಖಂಡಿತವಾಗಿಯೂ ಎಂದಿಗೂ ಪ್ರಗತಿಯಾಗುವುದಿಲ್ಲ. ಅಂತಹ ದೇಶವು ಸಾಂಸ್ಕೃತಿಕವಾಗಿ, ಕಾರ್ಯತಂತ್ರವಾಗಿ ದೇಶವು ಹಿಂದುಳಿಯುವುದಲ್ಲದೇ ಅಂತಹ ದೇಶಗಳ ಏಕತೆ ಮತ್ತು ಸಮಗ್ರತೆಯು ಯಾವಾಗಲೂ ಅಪಾಯದಲ್ಲಿರುತ್ತದೆ.
ಈ ರೀತಿಯಾಗಿ ಅನಗತ್ಯ ಮತ್ತು ಅಪ್ರಸ್ತುತ ವಲಯದ ಪ್ರಾಬಲ್ಯವು ಬೆಳೆಯುತ್ತಿರುವ ದೇಶವು ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತದೆ ಮತ್ತು ಅಂತಹ ದೇಶಗಳಲ್ಲಿ ಭ್ರಷ್ಟರು ಮತ್ತು ದೇಶವಿರೋಧಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಅಂತಹ ದೇಶದಲ್ಲಿ ಪ್ರಾಮಾಣಿಕರು ಬದುಕಲು ನಿಜಕ್ಕೂ ಬವಣೆ ಪಡಬೇಕಾಗುತ್ತದೆ.
ಹಾಗಂದ ಮಾತ್ರಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಟ್ಟವರೇ ಇದ್ದಾರೆ ಎನ್ನುವಂತಿಲ್ಲ ಅಲ್ಲಿಯೂ ಕೆಲವು ಒಳ್ಳೆಯ ಜನರಿದ್ದಾರೆ. ಅಂತಹ ವ್ಯಕ್ತಿ ಮತ್ತು ವ್ಯಕ್ತಿತ್ವ ನಮಗೆ ಸದಾಕಾಲವೂ ಗೌರವವಿದೆ. ಹಾಗಾಗಿ ಅಂತಹ ಪ್ರತಿಭಾವಂತರು, ಪ್ರಾಮಾಣಿಕರು, ನಿಸ್ವಾರ್ಥ ಆತ್ಮಸಾಕ್ಷಿಯುಳ್ಳ ಸಮಾಜ ಸೇವಕರು, ನಿಜವಾದ ದೇಶಭಕ್ತ ಹೋರಾಟಗಾರು, ಸ್ವಾರ್ಥವಿಲ್ಲದೇ ದೇಶಕ್ಕಾಗಿ ಆಡುವ ಆಟಗಾರು ಮತ್ತು ಸ್ವಾರ್ಥ ಕಡಿಮೆ ಸಮಾಜಕ್ಕೆ ಸರ್ವಸ್ವ ಎನ್ನುವಂತಹ, ಪರೋಪಕಾರಾಯ ಇದಂ ಶರೀರಂ ಎಂದು ಮತ್ತೊಬ್ಬರ ಸಹಾಯಕ್ಕೆ ತುಡಿಯುವಂತಹ ಮನಸ್ಸುಳ್ಳವರನ್ನು ಬೆಳಸುವಂತಹ ವಾತಾವರಣವನ್ನು ಸೃಷ್ಟಿಸುವ ಗುರುತರವಾದ ಜವಾಬ್ಧಾರಿಯು ನಮ್ಮ ನಿಮ್ಮೆಲ್ಲರ ಮೇಲಿದೆ.
ಏನಂತೀರೀ?
ನಿಮ್ಮವನೇ ಉಮಾಸುತ
ಸಾಮಾಜಿಕ ಜಾಲತಾಣವೊಂದರಲ್ಲಿ ಓದಿದ್ದ ಆಂಗ್ಲ ಸಂದೇಶವೊಂದರಿಂದ ಪ್ರೇರಿತವಾದ ಲೇಖನವಾಗಿದೆ.