ನವರಾತ್ರಿ ನಮ್ಮ ರಾಷ್ಟ್ರೀಯ ಹಬ್ಬವಾಗಿದ್ದು ಇದನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ ಈ ರೀತಿಯ ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದೇ ಇಲ್ಲವಾಗಿರುವುದು ವಿಪರ್ಯಾಸವೇ ಸರಿ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯ ಕುರಿತಾಗಿ ತಿಳಿಯೋಣ ಬನ್ನಿ.
1336 ರಲ್ಲಿ ಉತ್ತರಭಾರತದವನ್ನು ಆಳುತ್ತಿದ್ದ ಮುಸಲ್ಮಾನರು ನಿಧಾನವಾಗಿ ತಮ್ಮ ಪ್ರಾಭಲ್ಯವನ್ನು ದಕ್ಷಿಣ ಭಾರತದ ಕಡೆಗೆ ವಿಸ್ತರಿಸಿಕೊಳ್ಳುತ್ತಾ ಬಲವಂತವಾಗಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಕಾಲದಲ್ಲಿ ತುಘಲಕ್ ಆಡಳಿತದ ವಿರುದ್ಧದ ಬಂಡಾಯದ ರಣಕಹಳೆಯನ್ನು ಊದಿ ಹಕ್ಕ ಬುಕ್ಕರೆಂಬ ಇಬ್ಬರು ಯುವಕರ ಸಾರಥ್ಯದಲ್ಲಿ ಶೃಂಗೇರಿ ಶಾರದಾ ಪೀಠಾಧ್ಯಕ್ಷರಾಗಿದ್ದ ಗುರು ವಿದ್ಯಾರಣ್ಯರ ನೇತೃತ್ವದಲ್ಲಿ ಹಿಂದವೀ ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಪ್ರಬಲ ಶಕ್ತಿಯಾಗಿ ರೂಪುಗೊಂಡು ಸುಮಾರು ಮೂರು ಶತಮಾನಗಳಿಗೂ ಹೆಚ್ಚು ಕಾಲ ವಿಜೃಂಭಿಸಿದ್ದು ಈಗ ಇತಿಹಾಸ.
ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುರುಗಳಾದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳಿಗೆ ಗುರು ಕಾಣಿಕೆಯಾಗಿ ಹರಿಹರ ರಾಯ ಮತ್ತು ಬುಕ್ಕ ರಾಯರು ಕೃತಜ್ಞತಾ ಪೂರ್ವಕವಾಗಿ ಮತ್ತು ಭಕ್ತಿಯ ಸಂಕೇತವಾಗಿ, ತಮ್ಮ ಇಡೀ ರಾಜ್ಯ, ಚಿನ್ನದ ಸಿಂಹಾಸನ, ಬಗೆ ಬಗೆಯ ಮುತ್ತು ಮಾಣಿಕ್ಯಗಳಿಂದ ಮಾಡಿದ ಕಿರೀಟ, ಚಿನ್ನದ ಪಲಕ್ಕಿ, ಛತ್ರಿ ಚಾಮರಗಳು ಮತ್ತು ರಾಜ್ಯದ ರಾಜಮುದ್ರೆಗಳನ್ನು ಆಚಾರ್ಯರ-ಪಾದಕಮಲಗಳಲ್ಲಿ ಅರ್ಪಿಸಿದ್ದಲ್ಲದೇ, ತಮ್ಮ ಪರಮ ಪೂಜ್ಯ ಗುರುಗಳಾದ ಶ್ರೀ ವಿದ್ಯಾರಣ್ಯರನ್ನು ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ, ಶ್ರೀಮದ್ರಜಾಧಿರಾಜಗುರು, ಭೂಮಂಡಲಾಚಾರ್ಯ ಇನ್ನು ಮುಂತಾದ ಶ್ರೇಷ್ಠ ಬಿರುದುಗಳಿಂದ ಗೌರವಿಸಿದರು. ತಮ್ಮ ಶಿಷ್ಯರ ವಿನಮ್ರ ವಿನಂತಿ ಮತ್ತು ಭಕ್ತಿಯನ್ನು ಬಲವಂತದಿಂದ ಒಪ್ಪಿಕೊಂಡ ಗುರುಗಳು ಪ್ರತೀ ನವರಾತ್ರಿಯಂದು ಶೃಂಗೇರಿಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ಶಾರದಾ ದೇವಿಗೆ ವಿವಿಧ ರೀತಿಯ ಅಲಂಕಾರಗಳ ನವರಾತ್ರಿಯ ಆಚರಣೆಯನ್ನು ಆರಂಭಿಸಿದ್ದಲ್ಲದೇ, ಆದೇ ಕಾಲದಲ್ಲಿ ಈ ರತ್ನ ಖಚಿತ ಸಿಂಸಾಸದನದ ಮೇಲೆ ಕುಳಿತು ವಿಶೇಷ ದರ್ಬಾರ್ ನಡೆಸುವ ಸತ್ ಸಂಪ್ರದಾಯವನ್ನು ರೂಡಿಗೆ ತಂದರು. ಶೃಂಗೇರಿಯಲ್ಲಿ ಆರಂಭವಾದ ಈ ರೀತಿಯ ಆಚರಣೆ ಹಂಪೆಯಲ್ಲಿ ಮುಂದುವರೆದು ನಂತರ ವಿಜಯ ನಗರದ ಸಾಮಂತರಾಗಿದ್ದ ಮೈಸೂರು ಅರಸರು ವಿಜಯನಗರದ ಆರಸರಿಂದ ಹೊರಬಂದ ತಮ್ಮದೇ ಸ್ವತಂತ್ರವಾದ ರಾಜ್ಯವನ್ನು ಸ್ಥಾಪನೆ ಮಾಡಿಕೊಂಡಾಗ ಅದೇ ರತ್ನ ಖಚಿತ ಸಿಂಹಾಸವನ್ನು ಬಳುವಳಿ ಪಡಿದು ದಸರಾ ದರ್ಬಾರ್ ಪದ್ದತಿಯನ್ನು ಮೈಸೂರಿನಲ್ಲಿ ಆರಂಭಿಸುವ ಮೂಲಕ ಜಗದ್ವಿಖ್ಯಾತಿಯನ್ನಾಗಿಸಿದ್ದಲ್ಲದೇ ನವರಾತ್ರಿಯನ್ನು ನಮ್ಮ ನಾಡಹಬ್ಬವನ್ನಾಗಿಸಿದರು.
ಹೀಗೆ ಗುರು ವಿದ್ಯಾರಣ್ಯರಿಂದ ಆರಂಭವಾದ ನವರಾತ್ರಿಯ ಸತ್ ಸಂಪ್ರದಾಯವನ್ನು ಶ್ರೀಮಠದಲ್ಲಿ ನವರಾತ್ರಿ ಉತ್ಸವ ಮತ್ತು ದರ್ಬಾರ್ ಗಳನ್ನು ಇಂದಿಗೂ ಬಹಳ ಅದ್ದೂರಿಯಿಂದ ಮುಂದುವರೆಸಿಕೊಂಡು ಹೊಗುತ್ತಿರುವುದು ಗಮನಾರ್ಹವಾಗಿದೆ. ನವರಾತ್ರಿಯ ಸಮಯದಲ್ಲಿ ಶೃಂಗೇರಿಯ ಜಗದ್ಗುರುಗಳು ಅಹ್ನಿಕ ಮತ್ತು ಅನುಷ್ಠಾನದ ನಂತರ, ಪರಮ ಪೂಜ್ಯ ಆಚಾರ್ಯರು ಗುರು ಪಾದುಕೆಗಳಿಗೆ ಮತ್ತು ಶ್ರೀ ಚಕ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬೆಳಿಗ್ಗೆ 9.30 ಕ್ಕೆ ಆಚಾರ್ಯರು ಶ್ರೀ ಮಠದ ಆವರಣದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಎಲ್ಲಾ ದೇವತೆಗಳ ದರ್ಶನ ಪಡೆಯುತ್ತಾರೆ. ನಿಯಮಿತ ಬೆಳಿಗ್ಗೆ ಮತ್ತು ಮಧ್ಯಾಹ್ನದ ಪೂಜೆಯ ನಂತರ, ಶ್ರೀ ಜಗದ್ಗುರು ಮಹಾಸ್ವಾಮಿಗಳು ಮಧ್ಯಾಹ್ನ 12 ರಿಂದ 2.30 ರ ನಡುವೆ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆಚಾರ್ಯರು ಸಂಜೆ 5.30 ರಿಂದ 6.30 ರವರೆಗೆ ಭಕ್ತರಿಗೆ ದರ್ಶನ ನೀಡಿ, ಸಂಜೆ 6.30 ಕ್ಕೆ ಶ್ರೀ ಶಾರದಾಂಬಾ ರಥೋತ್ಸವದಲ್ಲಿ ಪಾಲ್ಗೊಂಡ ನಂತರ ಪುನಃ ಶುಚಿರ್ಭೂತರಾಗಿ ಸಂಜೆ 7.30 ಕ್ಕೆ ಅಹನಿಕ ಮುಗಿಸಿದ ನಂತರ ರಾತ್ರಿ 8 – 9.30 ರವರೆಗೂ ಪ್ರತಿನಿತ್ಯವೂ ನಡೆಯುವ ಶ್ರೀ ಚಂದ್ರಮೌಳೀಶ್ವರ ಪೂಜೆಯಲ್ಲಿ ಪಾಲ್ಗೊಂಡ ನಂತರ ಆಚಾರ್ಯ ದರ್ಬಾರ್ ಅಧ್ಯಕ್ಷತೆ ವಹಿಸುವರು.
ಈ ದರ್ಬಾರ್ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಂಪ್ರದಾಯದಂತೆ ಕಿರೀಟ ಮತ್ತು ಆಭರಣಗಳನ್ನು ಧರಿಸಿದ ಶ್ರೀ ಜಗದ್ಗುರುಗಳು ಚಂದ್ರಮೌಳೀಶ್ವರ ಸಭಾಂಗಣದ ಮೂಲಕ ಮೆರವಣಿಗೆಯಲ್ಲಿ ಶಾರದ ದೇವಸ್ಥಾನದ ದರ್ಬಾರ್ ಪ್ರವೇಶಿಸಿ ರತ್ನ ಖಚಿತ ಸಿಂಹಾಸನದಲ್ಲಿ ಇರಿಸಲಾಗಿರುವ ಶಾರದಾಂಬೆಯ ಮೂರ್ತಿಯನ್ನು ಚಿನ್ನದ ರಥದಲ್ಲಿ ಕುಳ್ಳರಿಸಿ ಅದನ್ನು ದೇವಾಲಯದ ಪ್ರಾಂಗಣದ ಒಳಗೆ ಮೂರು ಬಾರಿ ವೇದಘೋಷ, ವಾದ್ಯ ಘೋಷ ಮತ್ತು ಚತ್ರ-ಚಾಮರಗಳೊಂದಿಗೆ ರಥೋತ್ಸವ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಗುರುಗಳು, ತಾಯಿಯ ಕಡೆಗೆ ಮುಖ ಮಾಡುತ್ತಾ ಹಿಮ್ಮುಖವಾಗಿ ನಡೆಯುವುದು ವಿಶೇಷವಾಗಿದೆ. ರಥೋತ್ಸವದ ನಂತರ, ಆಚಾರ್ಯರು ಶಾರದಾಂಬೆಯ ಕಡೆಗೆ ಮುಖಮಾಡಿರುವ ಚಿನ್ನದ ಸಿಂಹಾಸನದ ಮೇಲೆ ಕುಳಿತ ನಂತರ ಸಪ್ತಶತಿಯ ಒಂದು ಅಥವಾ ಎರಡು ಅಧ್ಯಾಯಗಳ ಪಠಣ ಮಾಡಲಾಗುತ್ತದೆ.ದುರ್ಗಾ ಸಪ್ತಶತಿಯನ್ನು ಹತ್ತೂ ದಿನವೂ .ದಿನಕ್ಕೆ ಎರಡು ಅಧ್ಯಾಯಗಳ ಹಾಗೆ ಪಾರಾಯಣ ಮಾಡಲಾಗುತ್ತದೆ. ಈ ಪಾರಾಯಣದ ನಂತರ ಗುರುಗಳು ಆಶೀರ್ವಚನ ನೀಡುವ ಸಂಪ್ರದಾಯ ರೂಢಿಯಲ್ಲಿದೆ.
ನವರಾತ್ರಿಯ 7ನೆ ದಿನದ ಗುರುಗಳ ಧರ್ಭಾರ್ ಮುಗಿದು, ದುರ್ಗಾ ಸಪ್ತಶತಿ ಪಾರಾಯಣ, ಮಂಗಳಾರತಿ ನಂತರ, ಅಷ್ಟಾವದಾನ ಸೇವೆ ಮುಗಿದಾದ ಮೇಲೆ ಗುರುಗಳು ಅಲ್ಲಿಂದ ವಿರಮಿಸಿದ ನಂತರ ಗುರುಗಳು ಆಸೀನರಾಗಿದ್ದ ಸಿಂಹಾಸನಕ್ಕೆ ಪೂಜೆ ಮಾಡಲಾಗುತ್ತದೆ.ಈ ರೀತಿಯ ಸಿಂಹಾಸನದ ಪೂಜೆ 7 ನೇ ದಿನದಿಂದ 10ನೆ ದಿನದವರೆಗೆ ಮುಂದುವರೆಯುತ್ತದೆ.
ಇನ್ನು ಶರನ್ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಅನೇಕ ವೈವಿದ್ಯಮಯ ಕಾರ್ಯಕ್ರಮಗಳನ್ನು ಬಹಳ ಅದ್ಧೂರಿಯಾಗಿ ಇಂದಿಗೂ ಆಚರಿಸಲಾಗುತ್ತದೆ. ತಾಯಿ ಶಾರದಾಂಬೆಯನ್ನು ಅಮೂಲ್ಯವಾದ ಮತ್ತು ಆಕರ್ಷಕವಾದ ಮುತ್ತು, ರತ್ರ್ನ ವಜ್ರ ವೈಢೂರ್ಯಗಳ ಖಚಿತವಾದ ಸುಂದರ ಆಭರಣಗಳಿಂದ ಅಲಂಕರಿಸಲಾಗುತ್ತದೆ.
ನವರಾತ್ರಿಯ ಸಂದರ್ಭದಲ್ಲೇ ಕ್ರೂರ ರಾಕ್ಷಸರಾದ ಮಧು-ಕೈಟಭ, ಶುಂಭ-ನಿಶುಂಭ, ಮಹಿಷಾಸುರ ಇತ್ಯಾದಿಗಳನ್ನು ಸಂಹರಿಸಿದ ನೆನಪಿಗಾಗಿಯೇ ಒಂಬತ್ತು ರಾತ್ರಿಗಳಲ್ಲಿ ಜಗನ್ಮಾತೆಗೆ ವಿವಿಧ ರೀತಿಯಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ಈ ರೀತಿಯಾಗಿ ಜಗನ್ಮಾತೆಯ ವಿಶೇಷ ಪೂಜೆಯ ಮೂಲಕ ಮತ್ತು ಶರತ್ಕಾಲದಲ್ಲಿ (ಶರಧೃತು) ದೇವಿ ಮಹಾತ್ಮ್ಯವನ್ನು ಪಠಿಸುವುದರಿಂದ ದೇವಿ ಸಂತೃಷ್ಟಳಾಗಿ ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಮೃದ್ಧಿಯನ್ನು ನೀಡುತ್ತಾಳೆ ಎನ್ನುವುದು ಎಲ್ಲರ ನಂಬಿಕೆಯಾಗಿದೆ.
ನವರಾತ್ರಿಯ ಹಿಂದಿನ ದಿನ ಮಹಾಲಯ ಅಮಾವಾಸ್ಯೆಯಂದು ಶಾರದಾಂಬೆಗೆ ಮಹಾಭಿಷೇಕ ಮಾಡಿ ನಾನಾ ರೀತಿಯ ಫಲ-ಪಂಚಾಮೃತ ಅಭಿಷೇಕದ ನಂತರ ಶತಾಯ ರುದ್ರಾಭಿಷೇಕ ಮತ್ತು ಮಹಾನ್ಯಾಸ ಮತ್ತು 108 ಅಭಿಷೇಕದೊಂದಿಗೆ ಶ್ರೀ ಸೂಕ್ತವನ್ನು ಪಠಿಸುತ್ತಾರೆ.
ಮುಂದಿನ ಒಂಭತ್ತು ದಿನಗಳು ಶಾರದಾಂಬೆಗೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಿ ಪೂಜಿಸುವುದರ ಹಿಂದೆಯೂ ಮಹತ್ವವಿದೆ. ಶ್ರೀ ದೇವಿ ಮಹಾತ್ಮದಲ್ಲಿ ಉಲ್ಲೇಖಿಸಿರುವಂತೆ, ಏಕೈವಾಹಂ ಜಗತ್ಯಾತ್ರ ದ್ವಿತೀಯಾ ಕಾ ಮಾಮಾಪರ (ನಾನು ಪ್ರಪಂಚದ ಏಕೈಕ ಶಾಶ್ವತ ಶಕ್ತಿ ಮತ್ತು ಅದರ ಹೊರತಾಗಿ ಬೇರೇನೂ ಅಲ್ಲ). ಆದ್ದರಿಂದ ಈ ಎಲ್ಲಾ ವಿಭಿನ್ನ ಅಲಂಕಾರಗಳು ಮತ್ತು ಅವತಾರಗಳು ಜಗನ್ಮಾತೆಯ ಮಾತ್ರ. ಆ ಜಗನ್ಮಾತೆಯು ಸರಸ್ವತಿಯ ರೂಪವನ್ನು ಪಡೆಯುತ್ತದೆ ಮತ್ತು ಶಿಕ್ಷಣ ಮತ್ತು ಜ್ಞಾನವನ್ನು ನೀಡುತ್ತದೆ, ಮಹಾಲಕ್ಷ್ಮಿಯ ರೂಪವನ್ನು ಪಡೆಯುತ್ತದೆ ಮತ್ತು ಸಂಪತ್ತು, ಆಹಾರ ಇತ್ಯಾದಿಗಳನ್ನು ನೀಡುತ್ತದೆ ಮತ್ತು ದುಷ್ಟ ಮನಸ್ಸಿನ ಜನರ ನಾಶದ ಸಮಯದಲ್ಲಿ ಮಹಾಕಾಳಿಯ (ಚಾಮುಂಡಿ) ರೂಪವನ್ನು ಪಡೆಯುತ್ತದೆ, ದುರ್ಗಾ ಪರಮೇಶ್ವರಿ ತನ್ನ ಭಕ್ತರನ್ನು ಎಲ್ಲಾ ಭಯವನ್ನು ಹೋಗಲಾಡಿಸುವಂತೆ ಮಾಡಲು. ಅವಳು ತನ್ನ ಭಕ್ತರನ್ನು ವಿವಿಧ ಹೆಸರುಗಳು ಮತ್ತು ರೂಪಗಳ ಮೂಲಕ ರಕ್ಷಿಸುತ್ತಾಳೆ. ಜಗದಂಬೆಯ ರೂಪಗಳು ಮತ್ತು ಹೆಸರುಗಳು ಹಲವಾರು ಇದ್ದರೂ, ಚೈತನ್ಯವು ಒಂದೇ ಆಗಿರುತ್ತದೆ. ದೇವರಿಗೆ ವಿಭಿನ್ನ ಅಲಂಕಾರಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಅಂತಹ ದೊಡ್ಡ ತಾತ್ವಿಕ ಸತ್ಯವಿದೆ. ದೇವನೊಬ್ಬ ನಾಮ ಹಲವು ಎಂಬುದರ ಜ್ವಲಂತ ಉದಾಹರಣೆಯಾಗಿದೆ.
ಪ್ರತೀ ವರ್ಷದ ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಾಡಲಾಗುವ ಅಲಂಕಾರಗಳು ಈ ಪ್ರಕಾರವಾಗಿರುತ್ತದೆ.
- ಬಾಣಂತೀ ಅಲಂಕಾರ : ಮುಖದಲ್ಲಿ ಮುಗುಳ್ನಗೆಯೊಂದಿಗೆ ತಾಯಿ ಶಾರದೆಯು ತನ್ನ ಮಡಿಲಲ್ಲಿ ಮುದ್ದಾದ ಮಗುವನ್ನು ಮುದ್ದಾಡುತ್ತಾ ತನ್ನ ಭಕ್ತರಿಗೆ ನಾನು ಇಡೀ ಸೃಷ್ಟಿಯ ತಾಯಿ ಮತ್ತು ನೀವೆಲ್ಲರೂ ನನ್ನ ಮಕ್ಕಳು ಎನ್ನುವ ರೀತಿಯಲ್ಲಿ ಆರಂಭವಾಗುವ ಅಲಂಕಾರ ಮುಂದೇ, ಪ್ರತಿದಿನ ವಿಧ ವಿಧವಾದವಾಗಿ ಮಾಡುವ ಅಲಂಕಾರವವೈಭವವನ್ನು ನೋಡಲು ಎರಡು ಕಣ್ಣುಗಳು ಕೂಡ ಸಾಲದು ಎಂದು ಹೇಳಿದರೆ ಉತ್ಪ್ರೇಕ್ಷೆಎನಿಸದು.
- ಹಂಸವಾಹನ ಅಲಂಕಾರ : ಬ್ರಾಹ್ಮಿ : ಬ್ರಹ್ಮ ದೇವರ ರಾಣಿಯಾದ ತಾಯಿ ಶಾರದೆಯು ಹಂಸವಾಹನದ ಮೇಲೆ ಕುಳಿತು ತನ್ನ ಕೈಯಲ್ಲಿ ಕಮಂಡಲ, ಅಕ್ಷ ಮಳೆ, ಪುಸ್ತಕ, ಪಾಶಾ ಮತ್ತು ಚಿನ್ಮುದ್ರೆಯಿಂದ ಭಕ್ತರನ್ನು ಆಶೀರ್ವದಿಸುತ್ತಾಳೆ.
- ವೃಷಭ ವಾಹನ ಅಲಂಕಾರ :ಮಹೇಶ್ವರಿ: ಆದಿ ಶಕ್ತಿ, ಮಹೇಶ್ವರನ ಸಂಗೀತ ಕಚೇರಿ. ವೃಷಭ ವಾಹನದ ಮೇಲೆ ಕುಳಿತು, ತ್ರಿಶೂಲವನ್ನು ಹಿಡಿದಿರುವ ಅಲಂಕಾರ ಮಾಡಲಾಗುತ್ತದೆ.
- ಮಯೂರ ವಾಹನ ಅಲಂಕಾರ : ತಾಯಿ ಶಾರದೆಯನ್ನು ನವಿಲಿನ ಮೇಲೆ ಆಯುಧ ಹಿಡಿದು ಕುಳಿತು, ಕುಮಾರಸ್ವಾಮಿಯ (ಸುಬ್ರಹ್ಮಣ್ಯ) ಶಕ್ತಿಯ ರೂಪದಲ್ಲಿ, ತನ್ನ ಕೃಪೆಯಿಂದ ಜಗತ್ತನ್ನು ರಕ್ಷಿಸುತ್ತಾಳೆ,
- ಗರುಡವಾಹನ ಅಲಂಕಾರ : ವೈಷ್ಣವಿ: ಶ್ರೀ ಮಹಾವಿಷ್ಣುವಿನ ಶಕ್ತಿಯಾಗಿ ದೇವಿ, ಗರುಡನ ಮೇಲೆ ಕುಳಿತು, ಶಂಖ, ಚಕ್ರ ಮತ್ತು ಗಧಾಧಾರಿಯಾಗಿ ತನ್ನ ಭಕ್ತ್ರರನ್ನು ಆಶೀರ್ವದಿಸುತ್ತಾಳೆ.
- ಇಂದ್ರಾಣಿ ಅಲಂಕಾರ : ದೇವಿ ವಜ್ರಾಯುಧವನ್ನು ಹಿಡಿದು ಐರಾವತದಲ್ಲಿ ಕುಳಿತು, ವೃತ್ರಾಸುರನಂತಹ ರಾಕ್ಷಸರನ್ನು ನಾಶಮಾಡಿ ಭಕ್ತರನ್ನು ಕಾಪಾಡುತ್ತಾಳೆ.
- ವೀಣಾ ಶಾರದ ಅಲಂಕಾರ: ತಾಯಿ ಶಾರದೆಯು ವೀಣೆಪಾಣಿಯಾಗಿ ಮತ್ತೊಮ್ದು ಕೈಗಳಲ್ಲಿ ಪುಸ್ತ್ಕವನ್ನು ಹಿದಿದು ಮಂದಮತಿಗಳಾದ ತನ್ನ ಭಕ್ತರಿಗೆ ಜ್ಞಾನದ ದೀಕ್ಷೆಯನ್ನು ನೀಡುತ್ತಾಳೆ.
- ಮೋಹಿನಿ ಅಲಂಕಾರ : ಸಮುದ್ರ ಮಂಥನದಲ್ಲಿ ಮೋಹಿನಿ ರೂಪದಲ್ಲಿ ಬಂದು ಕೂರ ರಾಕ್ಷಸರನ್ನು ತನ್ನ ಸೌಂದರ್ಯದಿಂದ ಭ್ರಮಾಲೋಕಕ್ಕೆ ತಳ್ಳಿ ಅದೇ ಸಮಯದಲ್ಲಿ ಸಿಕ್ಕಿದ ಅಮೃತದ ಕಳಸದಿಂದ ದೇವತೆಗಳಿಗೆ ಹಂಚುವ ಜಗನ್ಮಾತೆಯ ಈ ಅಲಂಕಾರವನ್ನು ನಿಜಕ್ಕೂ ನಯನ ಮನೋಹರವಾಗಿರುತ್ತದೆ.
- ರಾಜರಾಜೇಶ್ವರಿ ಅಲಂಕಾರ : ತಾಯಿ ರಾಜರಾಜೇಶ್ವರಿ, ಪಾಶಾಂಕುಶಧಾರಿಯಾಗಿ ನಾನಾ ವಿಧದ ಆಭರಣಗಳಿಂದ ಅಲಂಕರಿಸಲ್ಪಟ್ಟು ತನ್ನ ಕರುಣೆಯ ಕಣ್ಣುಗಳಿಂದ ಮತ್ತು ದೈವಿಕ ಅನುಗ್ರಹದಿಂದ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ.
- ಸಿಂಹವಾಹನ ಅಲಂಕಾರ : ಚಾಮುಂಡಿ: ದುಷ್ಟ ಮತ್ತು ಕ್ರೂರ ರಾಕ್ಷಸರಾದ ಚಂಡ, ಮುಂಡರನ್ನು ನಾಶಮಾಡಿ ಭಕ್ತರನ್ನು ಅನುಗ್ರಹಿಸಲು ಜಗನ್ಮಾತೆಯ ಚಾಮುಂಡಿ ರೂಪ ನಿಜಕ್ಕೂ ಅನನ್ಯವೇ ಸರಿ.
- ಗಜಲಕ್ಷ್ಮಿ ಅಲಂಕಾರ : ಅಕ್ಕ ಪಕ್ಕದಲ್ಲಿ ಆನೆಗಳ ಮಧ್ಯದಲ್ಲಿ ಕಮಲದ ಮೇಲೆ ಕುಳಿತ ಹಸನ್ಮುಖಿಯಾದ ಶ್ರೀ ಗಜಲಕ್ಷ್ಮಿ ತನ್ನ ಭಕ್ತರಿಗೆ ಸುಖಃ, ಸಂಪತ್ತು ಸಂತೋಷ ಮತ್ತು ನೆಮ್ಮದಿಗಳನ್ನು ಕರುಣಿಸುತ್ತಾಳೆ.
ಈ ರೀತಿಯ ಅಲಂಕಾರ ಮತ್ತು ದರ್ಬಾರ್ ಗಳ ಹೊರತಾಗಿಯೂ ನವರಾತ್ರಿಯ ಸಮಯದಲ್ಲಿ ಶೃಂಗೇರಿ ಮಠದಲ್ಲಿ ಅನೇಕ ಪಾರಾಯಣಗಳನ್ನು ಮಾಡಲಾಗುತ್ತದೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಪಾರಾಯಣಗಳು, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ಶ್ರೀಮದ್ ಭಾಗವತಂ, ಮಾಧವೀಯ ಶಂಕರ ದಿಗ್ವಿಜಯ, ಸೂತ ಸಂಹಿತೆ, ಲಲಿತೋಪಾಖ್ಯಾನ, ಪ್ರಸ್ಥಾನತ್ರಯ ಭಾಷ್ಯ ಪಾರಾಯಣಗಳು, ಮಹಾವಿದ್ಯ, ಲಕ್ಷ್ಮೀನಾರಾಯಣ ಹೃದಯ, ದುರ್ಗಾ ಪಾರಾಯಣಗಳು ಮತ್ತು ಇತರವುಗಳು. ಸೂರ್ಯ ನಮಸ್ಕಾರ, ಶ್ರೀಸೂಕ್ತ ಜಪ, ಭುವನೇಶ್ವರಿ ಜಪ, ದುರ್ಗಾ ಜಪ ಮತ್ತು ಇತರ ಜಪಗಳನ್ನು ಮಾಡಲಾಗುವುದು. ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತ ರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾವರಣ ಪೂಜೆ, ಇದನ್ನು ಶಾಸ್ತ್ರಗಳ ಪ್ರಕಾರ ಜಗನ್ಮಾತೆಯ ವಾಸಸ್ಥಾನ ಎಂದು ಕರೆಯಲಾಗುತ್ತದೆ, ಸುವಾಸಿನಿ ಪೂಜೆ ಮತ್ತು 12 ಗಂಟೆಗೆ ಕುಮಾರಿ ಪೂಜೆಯನ್ನು ಪ್ರತಿದಿನ ನಡೆಸಲಾಗುತ್ತದೆ. ಪೂಜೆಯ ನಂತರ ಅತ್ಯಂತ ಶುಚಿ ಮತ್ತು ರುಚಿಯಾದ ಪ್ರಸಾದವನ್ನು ಭಕ್ತರಿಗೆ ವಿನಿಯೋಗ ಮಾಡಲಾಗುತ್ತದೆ. ಇಂತಹ ವಿಶೇಷ ಸಂಧರ್ಭಗಳಲ್ಲಿ ಸಾವಿರಾರು ಭಕ್ತರುಗಳು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.
ನವರಾತ್ರಿಯ ಪ್ರತಿದಿನ ಸಂಜೆ 6.30 ಕ್ಕೆ ಶಾರದಾಂಬೆಗೆ ರಥೋತ್ಸವ ನಡೆಯತ್ತದೆ. ಆ ಸಮಯದಲ್ಲಿ ಪರಮ ಪೂಜ್ಯ ಆಚಾರ್ಯರ ಸಾನ್ನಿಧ್ಯದಲ್ಲಿ ಮಂಗಳಾರತಿ ನಡೆದ ನಂತರ ವಿವಿಧ ಅಲಂಕಾರ ಭೂಷಿತವಾದ ಉತ್ಸವ ಮೂರ್ತಿಯನ್ನು ರಥದ ಮೇಲೆ ಆಸೀನರಾಗಿಸಿ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಇದೇ ಸಮಯದಲ್ಲಿ ನಾಡಿನ ಹೆಸರಾಂತ ಕಲಾವಿದರುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಶಾಸ್ತ್ರೀಯ ಸಂಗಿತದ ಗಾಯನ, ವೀಣಾವಧಾನ, ಕೊಳಲು, ಪಿಟೀಲು, ಸ್ಯಾಕ್ಸೋಫೋನ್, ಕ್ಲಾರಿಯೋನೆಟ್, ನಾನಾ ಪ್ರಕಾರದ ನೃತ್ಯಗಳ ಮೂಲಕ ದೇಶ ವಿದೇಶಗಳ ಸುಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀಕ್ಷೇತ್ರಕ್ಕೆ ಆಗಮಿಸಿರುವ ಆಸ್ತಿಕ ಮಹಾಶಯರ ಹೃನ್ಮನಗಳಿಗೆ ರಸದೌತಣ ನೀಡುತ್ತದೆ.
ಶೃಂಗೇರಿಯ ದಸರಾ ವೈಭವದ ಬಗ್ಗೆ ಇಷ್ಟೆಲ್ಲಾ ಮಾಹಿತಿಯನ್ನು ತಿಳಿದ ನಂತರ ಇನ್ನೇಕೆ ತಡಾ, ಸಮಯ ಮಾಡಿಕೊಂಡು ನವರಾತ್ರಿಯ ಸಂದರ್ಭದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ತಾಯಿ ಶಾರದಾಂಬೆಯ ಸನ್ನಿಧಿಯಾದ ಶ್ರೀ ಕ್ಷೇತ್ರ ಶೃಂಗೇರಿಗೆ ಭೇಟಿ ನೀಡಿ ದೇವಿಯ ಕರುಣೆಗೆ ಪಾತ್ರರಾಗ್ತೀರೀ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ
Dear Shreekant Ji.
Really good information.
Thank you for sharing this.
LikeLiked by 1 person
Thank you so much
LikeLike
Ramachandra. G. H.
ಶೃಂಗೇರಿ ದಸರಾ ಬಗ್ಗೆ. ಶ್ರೀ. ಶ್ರೀಕಂಠ ಬಾಳಗಂಚಿ ಅವರ ಲೇಖನ ಕಣ್ತುಂಬಿತು , ತುಂಬಾ ಚನ್ನಾಗಿ ವಿವರಿಸಿರುವುದಕ್ಕೆ ತಮಗೆ ಧನ್ಯವಾದಗಳು
LikeLiked by 1 person