ರಾಮಾಯಣ ಎಂಬುದು ನಮ್ಮ ಸನಾತನ ಧರ್ಮದ ಪ್ರಮುಖ ಸಂಸ್ಕೃತ ಮಹಾಕಾವ್ಯಗಳಲ್ಲಿ ಒಂದಾಗಿದ್ದು ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಮುಖ ಪಠ್ಯವಾಗಿದೆ ಎಂದರೂ ತಪ್ಪಾಗದು. ಆಶ್ವಯುಜ ಮಾಸದ ಹುಣ್ಣಿಮೆಯಂದು ಜನಿಸಿದ ಇಂತಹ ಮಹಾ ಗ್ರಂಥವನ್ನು ರಚಿಸಿದ ಮಹಾಕವಿ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಗಳು ಎಂದರೆ ಯಾರು? ಅವರ ಹಿನ್ನಲೆ ಏನು? ಅವರ ಸಾಧನೆಗಳೇನು? ಎಂಬುದರ ಮೆಲಕನ್ನು ಹಾಕೋಣ.
ಮಹರ್ಷಿ ವಾಲ್ಮಿಕಿಗಳ ಮೂಲ ಹೆಸರು ರತ್ನಾಕರ ಎಂಬುದಾಗಿದ್ದು ಅವರು ಭಗವಾನ್ ಬ್ರಹ್ಮನ ಮಾನಸ ಪುತ್ರರಾಗಿದ್ದ ಪ್ರಚೇತ ಎಂಬುವರ ಮಗನಾಗಿದ್ದರು. ಆದರೆ ಬಾಲ್ಯದಲ್ಲಿ ಬಾಲಕ ರತ್ನಾಕರನನ್ನು ಭೀಲಾನೀ ದ್ವಾರದಲ್ಲಿ ಅಪಹರಿಸಲ್ಪಟ್ಟಕಾರಣದಿಂದಾಗಿ ಅವರು ಭೀಲ್ ಸಮಾಜದಲ್ಲಿ ಒಬ್ಬರಾಗಿ ಬೆಳೆದರು. ಭೀಲ್ ಕುಟುಂಬದವರು ಬೇಡ ಪ್ರವೃತ್ತಿಯ ಜೊತೆಗೆ ಕಾಡಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಲೂಟಿ ಮಾಡಿ ಜೀವಿಸುತ್ತಿದ್ದರು. ಸಹಜವಾಗಿ ಅದೇ ಪರಿಸರಲ್ಲಿ ಬೆಳೆದ ರತ್ನಾಕರನೂ ಸಹಾ ಅದೇ ಜನರಿಂದ ಪ್ರಭಾವೀತರಾಗಿ ಬೇಟೆಗಾರರಾಗುವುದರ ಜೊತೆ ಜೊತೆಗೆ ಸುಲಿಗೆ, ದರೋಡೆ ಮತ್ತು ಲೂಟಿಯಲ್ಲಿಯೂ ತೊಡಗಿಕೊಂಡಿದ್ದರು.
ಅದೊಮ್ಮೆ ಅದೇ ಕಾಡಿನಲ್ಲಿ ಪ್ರಯಾಣಿಸುತ್ತಿದ್ದ ನಾರದ ಮಹರ್ಷಿಗಳನ್ನು ರತ್ನಾಕರನು ಲೂಟಿ ಮಾಡಲು ಯತ್ನಿಸಿದಾಗ, ನಾರದ ಮುನಿಗಳು ಆತನ ತಪ್ಪುಗಳನ್ನು ಎತ್ತಿ ತೋರಿಸಿದ್ದಲ್ಲದೇ, ಆತನಿಗೆ ಈ ರೀತಿಯ ಅಧರ್ಮದ ಹಾದಿಯನ್ನು ಬಿಟ್ಟು ಧರ್ಮದ ರೀತಿಯಲ್ಲಿ ಬಾಳಲು ತಿಳಿಸುತ್ತಾರೆ. ನಾರದರ ಮಾತುಗಳು ರತ್ನಾಕರನ ಹೃದಯದ ಮೇಲೆ ಸಕಾರಾತ್ಮಕವಾದ ಪರಿಣಾಮ ಬೀರಿತು. ತಾನು ಧರ್ಮದ ಮಾರ್ಗದಲ್ಲಿ ಹೇಗೆ ನಡೆಯಬೇಕೆಂಬುದನ್ನು ತಿಳಿಸಿಕೊಡಿ ಎಂದು ನಾರದರಲ್ಲಿಯೇ ಕೇಳಿಕೊಂಡಾಗ ಅವರು ಒಂದು ಕ್ಷಣ ಯೋಚಿಸಿ, ಸುತ್ತ ಮುತ್ತಲೂ ಮರಗಳೇ ಇದ್ದ ಕಾಡನ್ನು ನೋಡಿ ಅದೇ ಮರ, ಮರ, ಮರ ಎಂದು ಜಪಿಸಲು ತಿಳಿಸುತ್ತಾರೆ. ನಾರದ ಮಹರ್ಷಿಯ ಸಲಹೆಯಂತೆ ಆ ಕ್ಷಣದಿಂದಲೇ, ಹಸಿವು ನಿದ್ದೆ ಎಲ್ಲವನ್ನೂ ಬಿಟ್ಟು ಅಲ್ಲೇ ಮರ ಮರ ಮರ ಎಂದು ಜಪಿಸುತ್ತಲೇ ಹೋಗುವುದು ಆವರಿಗೇ ಅರಿವಿಲ್ಲದಂತೆ ಅದು ರಾಮ ನಾಮ ಜಪವಾಗಿ ಅದರಲ್ಲಿಯೇ ಲೀನರಾಗುವ ಮೂಲಕ ತಪಸ್ವಿಯಾಗಿ ಹೋಗುತ್ತಾರೆ. ಹಾಗೆ ವರ್ಷಾನುಗಟ್ಟಲೇ ಒಂದೇ ಕಡೆ ಕುಳಿತು ತಪ್ಪಸ್ಸು ಮಾಡುತ್ತಿರುವಾಗ ಅವರ ಸುತ್ತಲೂ ಹುತ್ತ ಬೆಳೆದುಕೊಳ್ಳುವುದು ಅವರ ಅರಿವಿಗೆ ಬರುವುದಿಲ್ಲ. ಅವರ ತಪಸ್ಸಿಗೆ ಸಂತೋಷಗೊಂಡ ಬ್ರಹ್ಮ ದೇವರು ಪ್ರತ್ಯಕ್ಷರಾಗಿ ಅವರಿಗೆ ಜ್ಞಾನದ ಭಂಡಾರವನ್ನು ಧಾರೆ ಎರೆಯುವುದಲ್ಲದೇ, ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ ಎಂಬ ಅರ್ಥ ಬರುವ ಕಾರಣ, ಹೀಗೆ ಹುತ್ತದಿಂದ ಹೊರಗೆ ರತ್ನಾಕರ ಅವರು ಬಂದ ಕಾರಣ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂದಿತು.
ಹೀಗೆ ಬೇಡನಿಂದ ತಮ್ಮ ಸಾಧನೆ ಮತ್ತು ತಪಶ್ಯಕ್ತಿಯ ಮೂಲಕ ಮಹರ್ಷಿಯಾದ ವಾಲ್ಮೀಕಿಗಳು ಅಲ್ಲೇ ಆಶ್ರಮವನ್ನು ಕಟ್ಟಿಕೊಂಡು ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಅದೊಮ್ಮೆ ವಾಲ್ಮೀಕಿಗಳು ತಮಸಾ ನದಿಯಲ್ಲಿ ಸ್ನಾನ ಮಾಡಲೆಂದು ಹೋಗುತ್ತಿದ್ದಾಗ ಮರವೊಂದರ ಮೇಲಿದ್ದ ಕ್ರೌಂಚ ಪಕ್ಷಿಗಳಲ್ಲಿ ಇದ್ದಕ್ಕಿದ್ದಂತೆ ಗಂಡು ಕ್ರೌಂಚ ಬಾಣಾಘಾತಕ್ಕೆ ತುತ್ತಾಗಿ ರಕ್ತಸಿಕ್ತವಾಗಿ ಮರವೊಂದರಿಂದ ಬಿದ್ದು ಸಾವನ್ನಪ್ಪುತ್ತದೆ. ತನ್ನ ಸಂಗಾತಿಯನ್ನು ಕಳೆದುಕೊಂಡ ಹೆಣ್ಣು ಕ್ರೌಂಚವು ಅತ್ಯಂತ ದೀನವಾಗಿ ರೋದನೆ ಮಾಡಲಾರಂಭಿಸುವುದರಿಂದ ವಿಚಲಿತರಾದ ವಾಲ್ಮೀಕಿ ಮಹರ್ಷಿಗಳು ಕ್ರೌಂಚವನ್ನು ಕೊಂದ ಬೇಡನ ವಿರುದ್ಧವಾಗಿ ಅವರಿಗೇ ಅರಿವಿಲ್ಲದಂತೆ ಅವರ ಬಾಯಿಯಿಂದ ಈ ಶ್ಲೋಕವನ್ನು ಉದ್ಘರಿಸುತ್ತಾರೆ.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ |
ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ || ಎಂಬ ಅರ್ಥ ಬರುವ ಶ್ಲೋಕವಾಗಿರುತ್ತದೆ. ಅದೇ ಸಮಯಕ್ಕೆ ತನ್ನ ಬೇಟೆಯನ್ನು ಹುಡುಕಿಕೊಂಡು ಬಂದ ಬೇಡನನ್ನು ನೋಡಿ, ಆತ ತನ್ನ ಆಹಾರಕ್ಕಾಗಿ ಇದನ್ನು ಬೇಟೆಯಾಡಿದ್ದಾನೆ. ಅದಕ್ಕೆ ಅವನಿಗೆ ಈ ಪರಿಯಾಗಿ ಶಪಿಸಿದಕ್ಕಾಗಿ ವಾಲ್ಮೀಕಿಗಳು ಪಶ್ಚಾತ್ತಾಪ ಪಡುತ್ತಿರುವಾಗ ವಾಲ್ಮೀಕಿ ಮಹರ್ಷಿಗಳ ಆಧ್ಯಾತ್ಮಿಕ ಗುರುಗಳಾದ ನಾರದರು, ಮುಂದೆ ಮಹಾ ವಿಷ್ಣುವು ಶ್ರೀರಾಮನ ಅವತಾರಿಯಾಗಿ ಇದೇ ಭೂಲೋಕದಲ್ಲಿ ಜನಿಸುವ ಕಥೆಯನ್ನು ವಿವರಿಸಿ ಇದೇ ಶ್ಲೋಕವನ್ನೇ ಆಧರಿಸಿ ಕೊಂಡು ಅದೇ ಕಥೆಯನ್ನು ರಾಮನ ಕಥೆಯನ್ನು ಬರೆಯಲು ಪ್ರೇರೇಪಿಸುತ್ತಾರೆ. ನಾರದರ ಪೇರಣೆಯಂತೆ ವಾಲ್ಮೀಕಿ ಮಹರ್ಷಿಗಳು ಇದೇ ಶ್ಲೋಕವನ್ನೇ ನಾಂದಿ ಶ್ಲೋಕವನ್ನಾಗಿಸಿಕೊಂಡು ಶ್ರೀಮದ್ರಾಮಾಯಣವನ್ನು ಸುಲಲಿತವಾದ, ದೇವಭಾಷೆಯಾದ ಸಂಸ್ಕೃತದಲ್ಲಿ ಕಾವ್ಯಮಯವಾಗಿ ರಚಿಸಿ, 24,000 ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆಯುವ ಮೂಲಕ ಈದೊಂದು ಅತ್ಯದ್ಭುತವಾದ ಶ್ರೀ ರಾಮಾಯಣವೆಂಬ ಮಹಾಕಾವ್ಯವನ್ನು ಜಗತ್ತಿಗೆ ನೀಡುತ್ತಾರೆ. ರಾಮಾಯಣದ ಕರ್ತೃಗಳಾದ ಶ್ರೀ ವಾಲ್ಮೀಕಿ ಮಹರ್ಷಿಗಳು ಕೇವಲ ಪಂಡಿತರಲ್ಲದೇ, ಶಿಕ್ಷಣ ಪ್ರೇಮಿ, ಆದರ್ಶ ಗುರುವಾಗಿಯೂ ಗುರುತಿಸಿಕೊಳ್ಳುತ್ತಾರೆ.
ಈ ಮಹಾನ್ ಕಾವ್ಯವನ್ನು ರಚಿಸಿದ ನಂತರ ವಾಲ್ಮೀಕಿಗಳು ತಮ್ಮ ಆಶ್ರಮದಲ್ಲೇ ಸಾಧನೆಯನ್ನು ಮುಂದುವರೆಸಿಕೊಂಡು ಹೋದರೆ, ವಾಲ್ಮೀಕಿಗಳಿಂದ ರಾಮಾಯಣವನ್ನು ಕಲಿತ ಧೌಮ್ಯ ಋಷಿಗಳು ಎಲ್ಲಾ ಕಡೆಯಲ್ಲೂ ಸಂಚಾರ ಮಾಡುತ್ತಾ ರಾಮಾಯಣವನ್ನು ಪ್ರಚಾರ ಮಾಡುತ್ತಾ ಮರ್ಯಾದಾ ಪುರುಶೋತ್ತಮ ಪ್ರಭು ಶ್ರೀರಾಮನ ಗುಣಗಾನವನ್ನು ರಾಮನ ಅವತಾರವಾಗುವ ಮುಂಚೆಯೇ ರಾಮಾಯಣ ಹಲವು ಋಷಿಗಳಿಗೆ ಮತ್ತು ಅವರ ಶಿಷ್ಯರಿಗೆ ತಿಳಿಸಿರುತ್ತಾರಲ್ಲದೇ, ಈ ಮೂಲಕವೇ ಪ್ರಭು ಶ್ರೀರಾಮನ ಜನನನಕ್ಕಿಂತಲೂ ಮುನ್ನವೇ, ಶ್ರೀ ರಾಮನಿಗೆ ಭಕ್ತವೃಂದ ಆರಂಭಗೊಳ್ಳುವುದಕ್ಕೆ ಕಾರಣೀಭೂತರಾಗುತ್ತಾರೆ. ವಾಲ್ಮೀಕಿಗಳಿಂದ ರಾಮಾಯಣ ರಚನೆಯಾಗಿ ಈ ರೀತಿಯಾಗಿ ಪ್ರಚಾರ ಗೊಂಡ ಸುಮಾರು 150 ವರ್ಷಗಳ ನಂತರ ಶ್ರೀರಾಮನ ಜನನವಾಗಿ ಪ್ರಭು ರಾಮಚಂದ್ರನ ನಿಜವಾದ ಕಥೆ ಆರಂಭವಾಗುತ್ತದೆ.
ಮುಂದೆ ಸೀತೆ ಮತ್ತು ಲಕ್ಷ್ಮಣರಾದಿಯಾಗಿ ಶ್ರೀ ರಾಮಚಂದ್ರ ವನವಾಸ ಅನುಭವಿಸುತ್ತಿದ್ದಾಗ ಕೆಲ ಕಾಲ ಇದೇ ವಾಲ್ಮೀಕಿಗಳ ಆಶ್ರಮ ಅವರಿಗೆ ಆಶ್ರಯ ತಾಣವಾಗಿರುತ್ತದೆ. ಮುಂದೆ ಸೀತಾಪಹರಣವಾಗಿ, ಹನುಮಂತನ ಸಹಾಯದಿಂದ ಪ್ರಭು ಶೀರಾಮ ಲಂಕೆಯಲ್ಲಿ ರಾವಣಾಸುರನನ್ನು ಸಂಹರಿಸಿ ಸೀತಾಮಾತೆಯನ್ನು ಅಯೋಧ್ಯೆಗೆ ಕರೆತಂದು ಸುಖಃ ಸಂಸಾರ ನಡೆಸುತ್ತಿದ್ದ ಕುರುಹಾಗಿ ಆಕೆ ಗರ್ಭಿಣಿಯಾಗಿದ್ದಾಗಲೂ, ಆಕೆ ಬಸರಿಯ ಆಸೆ ಏನೆಂದು ಕೇಳಿದಾಗ ವಾಲ್ಮೀಕಿ ಆಶ್ರಮದಲ್ಲಿ ಕೆಲ ಕಾಲ ಕಳೆಯ ಬೇಕೆಂದು ತಿಳಿಸಿರುತ್ತಾಳೆ. ಮುಂದೇ ರಾಮನ ಅರಮನೆಯ ಅಗಸನೊಬ್ಬನ ಮಾತಿನಿಂದ ಬೇಸರಗೊಂಡು ತುಂಬು ಗರ್ಭಿಣಿ ಸೀತಾಮಾತೆಯನ್ನು ಲಕ್ಶ್ಮಣನ ಸಹಾಯದಿಂದ ಕಾಡಿಗೆ ಕಳುಹಿಸಿದಾಗಲೂ ಇದೇ ವಾಲ್ಮೀಕಿ ಮಹರ್ಷಿಗಳು ಸೀತಾ ಮಾತೆಗೆ ಆಶ್ರಯವನ್ನು ನೀಡುವುದಲ್ಲದೇ, ಮುಂದೆ ಸೀತಾಮಾತೆಯು ಲವ ಮತ್ತು ಕುಶ ಎನ್ನುವ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದಾಗ ಅ ಮಕ್ಕಳಿಬ್ಬರಿಗೂ, ವಾಲ್ಮೀಕಿ ಮಹರ್ಷಿಗಳೇ ಗುರುವಿನ ಸ್ಥಾನದಲ್ಲಿ ನಿಂತು ವಿದ್ಯಾಭ್ಯಾಸವನ್ನು ಮಾಡಿಸುವುದಲ್ಲದೇ ಅವರಿಬ್ಬರಿಗೂ ಸಂಪೂರ್ಣ ರಾಮಾಯಣವನ್ನು ರಾಗವಾಗಿ ಹಾಡುವಂತೆ ಕಂಠಪಾಠವನ್ನು ಮಾಡಿಸಿರುತ್ತಾರೆ.
ಲವ ಕುಶ ಮತ್ತು ಅನೇಕ ಋಷಿಗಳಾದಿಯಾಗಿ ವಾಲ್ಮೀಕಿಗಳು ರಚಿಸಿದ ಮಹಾ ಕಾವ್ಯ ಜನ ಜನಿತವಾಗಿ ವಾಲ್ಮೀಕಿಗಳಿಗೆ ಕೀರ್ತಿ ಬರಲಾರಂಭಿಸಿದಾಗ, ಅವರಿಗೆ ತಮ್ಮ ಕೃತಿಯ ಬಗ್ಗೆಯೇ ಅಹಂ ಆವರಿಸಲಾರಂಭಿಸಿ ಅದು ಅವರ ಮುಂದಿನ ಸಾಧನೆಗೆ ಅಡ್ಡಿಯಾಗತೊಡಗಿ ಅದು ಮೋಕ್ಷದ ಹಾದಿಯಲ್ಲಿ ಈ ಅಹಂ ಒಂದು ದೊಡ್ಡ ಅಡಚಣೆ ಅಗಬಹುದು ಎಂದು ಭಾವಿಸಿದ ಶ್ರೀರಾಮಚಂದ್ರ ಅವರಿಗೆ ಪಾಠವೊಂದನ್ನು ಕಲಿಸಲು ಆಂಜನೇಯನಿಗೆ ಸೂಚನೆಯೊಂದನ್ನು ನೀಡುತ್ತಾರೆ. ಅದೇ ಪ್ರಕಾರವಾಗಿ ಅದೊಂದು ದಿನದ ಮುಂಜಾನೆ ಮಹರ್ಷಿಗಳು ವಿಹಾರೆಕ್ಕೆಂದು ಹೊಗಿದ್ದಾಗ ಅವರ ದೃಷ್ಟಿ ಅಲ್ಲಿದ್ದ ಬಂಡೆಗಳತ್ತ ಹರಿದು ಅದರ ಮೇಲಿದ್ದ ರಾಮಾಯಣದ ಶ್ಲೋಕಗಳನ್ನು ನೋಡಿ ಆಶ್ಚರ್ಯದಿಂದ ಓದುತ್ತಾ ಹೋದಂತೆಲ್ಲಾ ಅವರಿಗೇ ಅಚ್ಚರಿ ಮೂಡುವಂತಾಗುತ್ತದೆ. ಅರೇ ಇಷ್ಟು ಸರಳವಾಗಿ, ಸೊಗಸಾಗಿ ಮತ್ತು ಸುಂದರವಾಗಿ ಈ ರಾಮಾಯಣವನ್ನು ಅದೂ ಇಂತಹ ಪ್ರದೇಶದಲ್ಲಿ ಯಾರು ಬರೆದಿದ್ದಾರೆ? ಇಷ್ಟು ಸರಾಗವಾದ ರಾಮಾಯಣವನ್ನು ಜನರು ಓದಿದಲ್ಲಿ ನನ್ನ ರಾಮಾಯಣವನ್ನು ಖಂಡಿತವಾಗಿಯೂ ಓದಲಾರರು ಎಂಬ ಬೇಸರ ಅವರಲ್ಲಿ ಮೂಡುತ್ತದೆ. ಅದೇ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ರಾಮನ ಭಂಟ ಹನುಮಂತ, ಇದು ಹನುಮದ್ ರಾಮಾಯಣವಾಗಿದ್ದು ಇದನ್ನು ಬರೆದಿದ್ದು ನಾನೇ ಎಂದು ವಾಲ್ಮೀಕಿಗಳಿಗೆ ತಿಳಿಸಿ, ಆ ಕಲ್ಲು ಬಂಡೆಗಳ ಮೇಲೆ ತನ್ನ ಉಗುರುಗಳಿಂದ ರಾಮಾಯಣವನ್ನು ಬರೆದದ್ದಾಗಿ ತಿಳಿಸಿದಾಗ, ಮಹರ್ಷಿಗಳ ಮನಸ್ಸು ಮತ್ತಷ್ಟು ಕುಗ್ಗಿದ್ದನ್ನು ಕಂಡು ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ಹನುಮಂತ ಈಗ ಅವರ ಅಹಂಭಾವ ಕರಗಿದೆ ಎಂದು ಅರಿತ ಕೂಡಲೇ, ಆ ಬಂಡೆಗಳ ಮೇಲೆ ಬರೆದ ರಾಮಾಯಣವನ್ನು ಅಳಿಸಿಹಾಕಿದ್ದಲ್ಲದೇ, ಅಂದು ಇಂದು ಮುಂದೆಂಯೂ ಪ್ರಪಂಚದಲ್ಲಿ ವಾಲ್ಮೀಕಿ ರಾಮಾಯಣವೇ ಮೂಲ ರಾಮಾಯಣವೆಂದು ಪರಿಗಣಿಸಲಾಗುವುದು ಎಂದು ವಾಲ್ಮೀಕಿ ಮಹರ್ಷಿಗಳಿಗೆ ಭರವಸೆ ನೀಡಿದಾಗಲೇ ವಾಲ್ಮೀಕಿಗಳಿಗೆ ಸಮಾಧಾನವಾಗುತ್ತದೆ.
ಆದಿಕವಿ ಮಹರ್ಷಿ ವಾಲ್ಮೀಕಿಯು ನಾರದರ ಆಶೀರ್ವಾದದಿಂದ ರಾಮಾಯಣವನ್ನು ರಚಿಸುವ ಮೂಲಕ ಎಲ್ಲರಿಗೂ ಸರಿಯಾದ ಮಾರ್ಗದಲ್ಲಿ ನಡೆಯುವುದನ್ನು ತೋರಿಸಿದರು. ಪವಿತ್ರ ಪವಿತ್ರ ಗ್ರಂಥದಲ್ಲಿ ಪ್ರೀತಿ, ತ್ಯಾಗ, ದೃಢತೆ, ಕೌಟುಂಬಿಕ ಮೌಲ್ಯಗಳು, ಗೆಳೆತನದ ಭಾವನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ದುಃಖ ಮತ್ತು ವಿಪತ್ತುಗಳು ಮನುಷ್ಯನ ಜೀವನದ ಎರಡು ಅವಿಭಾಜ್ಯ ಅಂಗವಾಗಿದ್ದು ಅದು ಯಾವ ಕಾಲದಲ್ಲಿ ಯಾರಿಗೆ ಬೇಕಾದರೂ ಪ್ರಭುಗಳು ಮತ್ತು ಪ್ರಜೆಗಳು ಎಂಬ ತಾರತಮ್ಯವಿಲ್ಲದೇ ವಕ್ಕರಿಸಿಕೊಳ್ಳಬಹುದು.. ಅದೇ ಸಮಚಿತ್ತದಿಂ ಕುಳಿತು ಯೋಚಿಸಿದಲ್ಲಿ ಅದಕ್ಕೆ ಸೂಕ್ತವಾದ ಪರಿಹಾರವೂ ಸಿಗುತ್ತದೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದ ಕೃತಿಯಾಗಿರುವ ಕಾರಣದಿಂದಲೇ ರಾಮಾಯಣ ಗ್ರಂಥ ಕೇವಲ ಭಾರತದಲ್ಲಷ್ಟೇ ಅಲ್ಲದೇ, ಪ್ರಪಂಚಾದ್ಯಂತ ನೂರಾರು ಭಾಷೆಗಳಲ್ಲಿ ಸಾವಿರಾರು ಕವಿಗಳು ಅವರವರ ಭಾವಕ್ಕೆ ತಕ್ಕಂತೆ ಬರೆದಿದ್ದಾರೆಂದರೆ ಮೂಲ ರಾಮಾಯಣದ ಹಿರಿಮೆ, ಗರಿಮೆ ಮತ್ತು ಮಹತ್ವದ ಅರ್ಥವಾಗುತ್ತದೆ.
ವಾಲ್ಮೀಕಿಗಳ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಅಂದಿನ ಕಾಲದಲ್ಲಿಯೇ ಜಾತಿಗಿಂತಲೂ ವರ್ಣಾಶ್ರಮವೇ ಮಹತ್ವ ಎನಿಸಿತ್ತು ಎಂಬುದರ ಸ್ಪಷ್ಟ ಉದಾಹರಣೆಯಾಗಿದೆ. ಯಾರೂ ಸಹಾ ಹುಟ್ಟಿನಿಂದ ಬರುವ ಜಾತಿಯಿಂದ ಗುರುತಿಸದೇ ಅವರವರು ಮಾಡುವ ಕೆಲಸದಿಂದಲೇ ಗುರುತಿಸಲ್ಪಡುತ್ತಾರೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿದ್ದಾರೆ. ಜನ್ಮತಃ ಬ್ರಾಹ್ಮಣರಾಗಿದ್ದ ರತ್ನಾಕರ ನಂತರ ವಿಧಿಯಾಟದಿಂದಾಗಿ ಬೇಡರ ಸಮಾಜದಲ್ಲಿ ಬೆಳೆದ ಕಾರಣ, ಅಕ್ಷರಶಃ ಬೇಟೆಗಾರರಾಗಿರುತ್ತಾರೆ. ನಂತರ ತಮ್ಮ ತಪಶ್ಯಕ್ತಿಯಿಂದಾಗಿ ಬ್ರಹ್ಮ ಜ್ಞಾನವನ್ನು ಪಡೆದು ಮಹರ್ಷಿಗಳಾಗಿ ಮಹಾನ್ ಗ್ರಂಥಕರ್ತರಾಗುತ್ತಾರೆ, ಹೀಗೆ ಯಾರು ಬೇಕಾದರು ತಮ್ಮ ಅರ್ಹತೆಯಿಂದಾಗಿ ಎಷ್ಟು ಎತ್ತರಕ್ಕೇರ ಬಹುದು ಎಂಬುದನ್ನು ತೋರಿಸಿರುವುದು ಇಂದು ಜಾತೀಯತೆಯ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವವರಿಗೆ ನೀತಿ ಪಾಠವಾಗಬಹುದು.
ಇಂತಹ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ರಾಮಾಯಣದಂತಹ ಮಹಾನ್ ಕಾವ್ಯವನ್ನು ರಚಿಸಿದ ಮಹಾನ್ ಕವಿ ವಾಲ್ಮೀಕಿ ಮಹರ್ಷಿಗಳನ್ನು ಬುಧಕೌಶಿಕ ಮುನಿಯವರು ತಮ್ಮ ಶ್ರೀರಾಮರಕ್ಷಾ ಸ್ತೋತ್ರದಲ್ಲಿ ಈ ರೀತಿಯಾಗಿ ವರ್ಣಿಸಿಸುವ ಮುಖಾಂತರ ವಂದಿಸುತ್ತಾರೆ.
ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||
ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ ||
ಕಾವ್ಯವೆಂಬ ಮರದ ಮೇಲೆ ಕುಳಿತು, ರಾಮ ರಾಮಾ ಎಂದು (ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ) ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದನೆಗಳು ಎಂದು ಗೌರವವನ್ನು ಸೂಚಿಸಿದ್ದಾರೆ. ಹೀಗಾಗಿ ಅಂತಹ ಮಹಾನ್ ವ್ಯಕ್ತಿಯನ್ನು ಅವರ ಜಯಂತಿಯಂದು ನೆನಪಿಸಿ ಕೊಳ್ಳುವ ಮೂಲಕ ಅವರ ಆದರ್ಶಗಳನ್ನು ಅರ್ಥಮಾಡಿಕೊಂಡು ಪಾಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ