ಕೆಲ ತಿಂಗಳುಗಳ ಹಿಂದೆ ತಮಿಳುನಾಡಿನ ಚೆನೈನಲ್ಲಿ ಕನ್ನಡಿಗರಾದ ಅರ್ಜುನ್ ಸರ್ಜಾವರ ಕುಟುಂಬ ಧ್ಯಾನಮುದ್ರೆಯಲ್ಲಿರುವ ಆಂಜನೇಯಸ್ವಾಮಿಯ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿದ ವಿಡೀಯೋವನ್ನು ನಮ್ಮ ಛಾನೆಲ್ಲಿನಲ್ಲಿಯೇ ನೋಡಿ ಸಂಭ್ರಮ ಪಟ್ಟಿದ್ದೆವು. ಅದೇ ತಮಿಳುನಾಡಿನ ಶ್ರೀರಂಗಂ ಬಳಿಯ ಮೇಲೂರಿನ ಬಳಿ 37 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ ಲೋಕಾರ್ಪಣೆ ಆಗಿರುವುದನ್ನು ಕಣ್ತುಂಬ ನೋಡಿ ಸಂಜೀವನ ಆಂಜನೇಯ ಸ್ವಾಮಿ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.
ವಿಶ್ವರೂಪ ಆಂಜನೇಯರ್ ಎಂದು ಹೆಸರಿನ ಖಾಸಗಿ ಟ್ರಸ್ಟ್ ಶ್ರೀರಂಗಂನ ಕೊಲ್ಲಿದಾಮ್ ತೀರದಲ್ಲಿ ಮೇಲೂರು ಎಂಬ ಗ್ರಾಮದ ಬಳಿ ಸುಮಾರು ಒಂದು ಎಕರೆ ಭೂಮಿಯಲ್ಲಿ ಈ ಖಾಸಗಿ ದೇವಸ್ಥಾನವನ್ನು ಸ್ಥಾಪಿಸಿದೆ. ತಿರುಪ್ಪೂರ್ ಜಿಲ್ಲೆಯ ತಿರುಮುರುಗನಪೂಂಡಿಯಲ್ಲಿ ಶಿಲ್ಪಿಗಳ ತಂಡ ಸುಮಾರು ಒಂದೂವರೆ ವರ್ಷಗಳ ಕಾಲ ನಿರ್ಮಿಸಿದ ಸುಮಾರು 120 ಟನ್ ತೂಕದ ಈ ಆಂಜನೇಯ ಸ್ವಾಮಿಯ ವಿಗ್ರಹವನ್ನು ಇದಕ್ಕೆಂದೇ 46 ಚಕ್ರಗಳನ್ನು ಹೊಂದಿರುವ ಬೃಹತ್ತಾದ ಟ್ರೇಲರ್ ಒಂದನ್ನು ವಿಶೇಷವಾಗಿ ಸಿದ್ಧಪಡಿಸಿ, ಸೆಪ್ಟೆಂಬರ್ 11 ರಂದು ತಿರುಮುರುಗನಪೂಂಡಿಯಿಂದ ಹೊರಟು ರಸ್ತೆಯ ಮುಖಾಂತರ ಎರಡು ದಿನಗಳ ಪ್ರಯಾಣದ ನಂತರ ಮೇಲೂರಿನ ಸಂಜೀವನ ಆಂಜನೇಯಸ್ವಾಮಿಯ ಆವರಣಕ್ಕೆ ತರಲಾಗಿತ್ತು.
ತಮಿಳುನಾಡು ರಾಜ್ಯದಲ್ಲೇ ಅತ್ಯಂತ ಎತ್ತರವಾಗಿರುವ ಈ ವಿಗ್ರಹವನ್ನು ಪ್ರತಿಷ್ಠಾಪಿಸಲೆಂದೇ, ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ವಿಶೇಷ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ ನಂತರ ಪ್ರತಿಮೆ ಸ್ಥಾಪನೆಗೆ ನಾಲ್ಕು ಅಡಿ ಎತ್ತರದ ಅಡಿಪಾಯದ ಪೀಠವನ್ನು ನಿರ್ಮಿಸಿ ದಿ.25.10.2021 ರಂದು ಸಕಲ ವಿಧಿ ವಿಧಾನಗಳೊಂದಿಗೆ ಭಕ್ತರ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂಬ ಘೋಷಣೆಗಳ ಮಧ್ಯೆಯೇ ಕ್ರೇನ್ ಮುಖಾಂತರ ಪೀಠದ ಮೇಲೆ ಯಶಸ್ವಿಯಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಂದಿನ 48 ದಿನಗಳ ಕಾಲ ಇಲ್ಲಿ ಮಂಡಲ ಪೂಜೆಯು ನಡೆಯುವ ಮೂಲಕ ದೇವರ ಪ್ರಾಣಪ್ರತಿಷ್ಠಾಪನಾ ಕಾರ್ಯ ಮುಂದುವರೆಯಲಿದೆ.
ಇದೇ ದೇವಸ್ಥಾನದ ಆವರಣದಲ್ಲಿ ಶ್ರೀರಾಮ, ಅಮ್ಮನವರು, ಚಕ್ರತಾಳ್ವಾರ್ ಮತ್ತು ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ನಾಲ್ಕು ದೇವಾಲಯಗಳೂ ಇದೇ ಆವರಣದಲ್ಲಿ ನಿರ್ಮಾಣಗೊಳ್ಳತ್ತಲಿದೆ. ಅದರ ಅಂಗವಾಗಿ ಕೆಲದಿನಗಳ ಹಿಂದೆ ಅಮ್ಮನವರ ಮೂರ್ತಿಯನ್ನೂ ಮತ್ತು ಶ್ರೀ ಲಕ್ಶ್ಮೀ ನರಸಿಂಹಸ್ವಾಮಿಯ ದೇವರ ವಿಗ್ರಹವನ್ನು ದೇವಾಲಯಗಳ ಸಂಕೀರ್ಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಇಲ್ಲಿ ಬೃಹತ್ತಾದ ದೇವಾಲಯಗಳ ಸಂಕೀರ್ಣ ಸಂಪೂರ್ಣವಾದ ನಂತರ ತಿರುಚ್ಚಿ ಮತ್ತು ಶ್ರೀರಂಗಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಆಸ್ತಿಕ ಬಂಧುಗಳೆಲ್ಲರೂ ಈ ದೇವಸ್ಥಾನಕ್ಕೂ ಖಂಡಿತವಾಗಿಯೂ ಈ ವಿಶ್ವರೂಪ ಆಂಜನೇಯಸ್ವಾಮಿಯ ದರ್ಶನಕ್ಕಾಗಿ ಭೇಟಿ ನೀಡಿ ಇಲ್ಲಿರುವ ಎಲ್ಲಾ ದೇವರುಗಳ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ಆಂಜನೇಯ ಸ್ವಾಮಿಯ ಪರಮ ಭಕ್ತರು ಮತ್ತು ಟ್ರಸ್ಟ್‌ನ ಉಸ್ತುವಾರಿಗಳು ಹಾಗೂ ಈ ದೇವಾಲಯದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀರಂಗಂನಲ್ಲಿ ವಾಸವಾಗಿರುವ ಶ್ರೀ ಆರ್. ವಾಸುದೇವನ್ ಅವರು ತಿಳಿಸಿದ್ದಾರೆ, ಇದೇ ದೇವಾಲಯದ ಆವರಣದಲ್ಲಿ ಗೋಶಾಲೆಯನ್ನೂ ಆರಂಭಿಸಲು ನಿರ್ಥರಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ.
ಈ ದೇವಸ್ಥಾನ ಮತ್ತು ಇಲ್ಲಿರುವ ಎಲ್ಲಾ ಪ್ರತಿಮೆಗಳನ್ನು ತಯಾರಿಸಲು ವಿಶೇಷ ಶಿಲ್ಪಿಗಳ ಒಂದು ಗುಂಪು ಕಳೆದ ಆರು ವರ್ಷಗಳಿಂದ ಕೆಲಸ ಮಾಡಿದೆಯಲ್ಲದೇ ಪ್ರತೀ . ಪ್ರತಿಮೆಯನ್ನೂ ಎಂಜಿನಿಯರ್‌ಗಳು ಮತ್ತು ಪುರೋಹಿತರ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿಯೂ ಮತ್ತು ಸಾಂಪ್ರದಾಯಿಕವಾಗಿಯೂ ಇರುವಂತೆ ನಿರ್ಮಾಣ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ.
ಪ್ರಸ್ತುತ ಇಲ್ಲಿ ಶ್ರೀ ಸಂಜೀವನ ಆಂಜನೇಯರ ಚಿಕ್ಕ ಮೂರ್ತಿಗೆ ನಿತ್ಯ ಪೂಜೆಗಳು ನಡೆಯುತ್ತಿದ್ದು ದೇಶವಿದೇಶಗಳ್ಲಿ ಇರುವ ಆಸ್ತಿಕ ಬಂಧುಗಳು ಮತ್ತು ದಾನಿಗಳ ಕೊಡುಗೆಯಿಂದ ಇಷ್ಟು ದೊಡ್ಡ ದೇವಾಲಯಗಳ ಸಂಕೀರ್ಣದ ಜೊತೆಗೆ ಇಷ್ಟು ಬೃಹತ್ತಾದ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ಸಾಧ್ಯವಾಯಿತು. ಭಕ್ತರ ಸಹಕಾರ ಇದೇ ರೀತಿಯಾಗಿಯೇ ಮುಂದುವರೆದಲ್ಲಿ ಅತ್ಯಂತ ಶೀಘ್ರವಾಗಿ ದೇವಾಲಯದ ಸಂಕೀರ್ಣ ಸಂಪೂರ್ಣಗೊಳ್ಳಲಿದ್ದೇವೆ ಎಂದು ದೇವಸ್ಥಾನದ ಟ್ರಸ್ಟಿಗಳು ತಿಳಿಸಿರುತ್ತಾರೆ.
ಇನ್ನೇಕೆ ತಡಾ ಒಂದೆರಡು ದಿನಗಳ ಕಾಲ ಸಮಯ ಮಾಡಿಕೊಂಡು ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗಗಳಲ್ಲಿ ಒಂದಾದ ಶ್ರೀರಂಗಂನ ಅಂತ್ಯರಂಗನಾಥ ಸ್ವಾಮಿಯ ದರ್ಶನ ಮಾಡಿಕೊಂಡು ಹಾಗೇಯೇ ಸಂಜೀವನ ಆಂಜನೇಯ ಸ್ವಾಮಿಯ ದೇವಾಲಯಗಳ ಸಂಕೀರ್ಣಕ್ಕೆ ಭೇಟಿ ನೀಡಿ ಅಲ್ಲಿರುವ ಎಲ್ಲಾ ದೇವರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಸದ್ಯಕ್ಕೆ ಇಲ್ಲಿಂದಲೇ ಸ್ವಾಮಿಯ ದರ್ಶನ ಪಡೆಯೋಣ ಬನ್ನಿ.