ಪ್ರತೀ ವರ್ಷ ನವೆಂಬರ್ ತಿಂಗಳಿನ 30 ದಿನಗಳ ಕಾಲ ಕನ್ನಡ ನಾಡು, ನುಡಿ, ಲಲಿತ ಕಲೆ, ಸಾಹಿತ್ಯ ಸಂಗೀತಗಳಲ್ಲಿ ಸಾಧನೆ ಮಾಡಿದ ಕನ್ನಡಿಗರನ್ನು ಪರಿಚಯಿಸುವ ಕನ್ನಡ ಕಲಿಗಳು ಎಂಬ ಮಾಲಿಕೆಯನ್ನು ನಮ್ಮ ಏನಂತೀರೀ? ಬ್ಲಾಗಿನಲ್ಲಿ ಕಳೆದ ಎರಡು ವರ್ಷಗಳಿಂದಲೂ ರೂಢಿಮಾಡಿಕೊಂಡು ಬಂದಿದ್ದು ಮೂರನೇ ವರ್ಷಕ್ಕೂ ಅಂತಹ ಮಹನೀಯ ಕನ್ನಡಿಗರ ಪಟ್ಟಿಯಲ್ಲಿ ಖಂಡಿತವಾಗಿಯೂ ಇವರ ಹೆಸರು ಇರಲೇ ಇಲ್ಲ. ಆದರೆ ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೇ ಎನ್ನುವಂತೆ ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ನಮ್ಮನ್ನು ಅಗಲಿರುವ ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ರಾಜಕುಮಾರ್ ಅವರು ನಮ್ಮ ಇಂದಿನ ಕನ್ನಡದ ಕಲಿಗಳಾಗಿದ್ದಾರೆ.
1975ರ ವೇಳೆಗೆ ಕನ್ನಡದ ವರನಟ ರಾಜಕುಮಾರರು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಅಂದಿನ ಮದ್ರಾಸ್ ಇಂದಿನ ಚೆನ್ನೈನಲ್ಲಿಯೇ ಬಹುತೇಕ ದಕ್ಷಿಣಭಾರತದ ಚಿತ್ರರಂಗದ ಚಟುವಟಿಕೆಗಳೆಲ್ಲವೂ ನಡೆಯುತ್ತಿದ್ದ ಕಾರಣ, ಅಲ್ಲಿಯೇ ಕೂಡು ಕುಟುಂಬದೊಂದಿಗೆ ಇದ್ದ ರಾಜಕುಮಾರ ಧರ್ಮಪತ್ನಿ ತುಂಬು ಗರ್ಭಿಣಿಯಾಗಿದ್ದ ಶ್ರೀಮತಿ ಪಾರ್ವತಮ್ಮನವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ರಾಜಕುಮಾರರು ಆ ಸಮಯದಲ್ಲಿ ಆ ಸ್ಥಳದಲ್ಲಿ ಇಲ್ಲದಿದ್ದ ಕಾರಣ, ನಿರ್ದೇಶಕ ಭಗವಾನ್ ಮತ್ತವರ ಪತ್ನಿ ಪಾರ್ವತಮ್ಮನವರನ್ನು ಆಸ್ಪತ್ರೆಗೆ ಸೇರಿಸಿದಾಗ, 17 ಮಾರ್ಚ್, 1975ರಲ್ಲಿ ಮುದ್ದಾದ ಗಂಡು ಮಗುವೊಂದಕ್ಕೆ ಜನ್ಮನೀಡುತ್ತಾರೆ. 1965ರಲ್ಲಿ ಬಿಡುಗಡೆಯಾಗಿ ರಾಜಕುಮಾರರಿಗೆ ಅತ್ಯಂತ ಕೀರ್ತಿಯನ್ನು ತಂದಿದ್ದ ಸತ್ಯಹರಿಶ್ಚಂದ್ರ ಸಿನಿಮಾದ ನೆನಪಿಗಾಗಿ ಆ ಪುಟ್ಟಕಂದನಿಗೆ ಲೋಹಿತ್ ಎಂದು ನಾಮಕರಣ ಮಾಡುತ್ತಾರೆ.
ಕಣ್ಣು ಮೂಗು ಹೋಲಿಕೆಯಲ್ಲಿ ಅಪ್ಪನ ತದ್ರೂಪಾದರೆ, ಬಣ್ಣದಲ್ಲಿ ಥೇಟ್ ಅಮ್ಮನ ಪ್ರತಿರೂಪವಾದ ಲೋಹಿತನಿಗೆ ಕೇವಲ 6 ತಿಂಗಳಾಗಿರುವಾಗಲೇ ನಿರ್ದೇಶಕ ವಿ. ಸೋಮಶೇಖರ್ ಪ್ರೇಮದ ಕಾಣಿಕೆ ಚಿತ್ರದಲ್ಲಿ ಅವರು ಮೊತ್ತ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರೆ, 1977ರಲ್ಲಿ ಕೇವಲ ಒಂದು ವರ್ಷದವನಾಗಿದ್ದಾಗ ವಿಜಯ್ ಅವರ ಸನಾದಿ ಅಪ್ಪಣ್ಣ ಚಿತ್ರದಲ್ಲಿ ರಾಜಕುಮಾರ್ ಅವರ ಮಗನಾಗಿ ಮೀನಿಗೆ ಈಜಲು ಹೇಳಿಕೊಡಬೇಕೆ ಎನ್ನುವಂತೆ ಅಧ್ಭುತವಾಗಿ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಮುಖಾಂತರ ಸಂಪೂರ್ಣವಾಗಿ ಬಾಲನಟನಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ.
ನಂತರ ವಸಂತ ಗೀತ (1980), ಭಾಗ್ಯಂತ (1981), ಚಲಿಸುವ ಮೋಡಗಳು (1982), ಚಿತ್ರದಲ್ಲಿ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎಂಬ ಹಾಡನ್ನೂ ಹಾಡುವ ಮುಖಾಂತರ ಹಿನ್ನಲೆ ಗಾಯಕನಾಗಿಯೂ ಗುರುತಿಸಿಕೊಳ್ಳುತ್ತಾರೆ. ಇನ್ನು 1983ರಲ್ಲಿ ತೆರೆಗೆ ಬಂದ ಎರಡು ನಕ್ಷತ್ರಗಳು ಚಿತ್ರದಲ್ಲಿ ಗಾಯನದ ಜೊತೆ ದ್ವಿಪಾತ್ರಾಭಿನಯದಲ್ಲಿ ಸೈ ಎನಿಸಿಕೊಳ್ಳುತ್ತಾರೆ. 1983ರಲ್ಲಿ ಹಿರಣ್ಯಕಷಪುವಾಗಿ ರಾಜಕುಮಾರ್ ಮತ್ತು ಹರಿಭಕ್ತ ಪ್ರಹ್ಲಾದನಾಗಿ ಪುನೀತ್ ಅಭಿನಯವನ್ನು ಖಂಡಿತವಾಗಿಯೂ ಮರೆಯಲಾಗದು. 1985 ರಲ್ಲಿ ಬೆಟ್ಟದ ಹೂವು ಚಿತ್ರದಲ್ಲಿ ರಾಮಾಯಣ ದರ್ಶನಂ ಪುಸ್ತವನ್ನು ಕೊಳ್ಳುವ ಸಲುವಾಗಿ ಶೆರ್ಲಿ ಮೇಡಂಗಾಗಿ ಕಾಡಿನಿಂದ ಆರ್ಕಿಡ್ ಹೂವುಗಳನ್ನು ಆರಿಸಿ ತರುವ ರಾಮು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಕಾರಣ ಆ ಪಾತ್ರದ ಬಾಲ ನಟನೆಗಾಗಿ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗುತ್ತಾರೆ. ಇಲ್ಲಿಂದ ನಂತರ ಶಿವರಾಜ ಕುಮಾರ್ ಅವರನ್ನು ನಾಯಕರಾಗಿ ತೆರೆಯ ಮೇಲೆ ತರುವುದರಲ್ಲಿ ನಿರತರಾದ ರಾಜ್ ಕುಟುಂಬ ಲೋಹಿತ್ ಅವರ ಬಾಲನಟನೆಗೆ ಬ್ರೇಕ್ ಹಾಕುತ್ತಾರೆ.
ಈ ಮಧ್ಯೆ ಹರಿಶ್ಚಂದ್ರನ ಮಗ ಲೋಹಿತ್ ಅಲ್ಪಾಯುಷಿ ಆದ ಕಾರಣ ಲೋಹಿತ್ ಎಂಬ ಹೆಸರನ್ನು ಜ್ಯೋತಿಷ್ಯರೊಬ್ಬರ ಸಲಹೆಯಂತೆ ಪುನೀತ್ ಎಂಬ ಹೆಸರಾಗಿ ಬದಲಾಯಿಲಾಗುತ್ತದೆ. ಮುಂದೆ ಅಪ್ಪಾ ಅಮ್ಮನ ಮುದ್ದಿನ ಕೂಸಾಗಿ ಅಮ್ಮನ ಸೆರಗನ್ನೇ ಹಿಡಿದುಕೊಂಡು ಎಲ್ಲಾ ಕಡೆ ಆಲೆಯುತ್ತಿದ ಕಾರಣ, ಶಾಲೆಗೆ ಹೋಗಿ ಶಾಸ್ತ್ರೀಯವಾಗಿ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಇದೇ ಸಮಯಕ್ಕೆ ಕನ್ನಡ ಚಲನಚಿತ್ರರಂಗ ಮದ್ರಾಸಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ, ರಾಜ್ ಕುಟುಂಬ ಸಹಾ ಬೆಂಗಳೂರಿನ ಸದಾಶಿವ ನಗರದ ಮನೆಗೆ ಬಂದಾಗ ಖಾಸಗೀ ಬೋಧನೆ (private tuition) ಮೂಲಕ ಆಗುತ್ತದೆ. ಇದೇ ಸಮಯದಲ್ಲಿಯೇ ನೃತ್ಯ ಮತ್ತು ಚಮತ್ಕಾರಿಕ (acrobatics) ಕಲೆಯನ್ನು ಕರಗತ ಮಾಡಿಕೊಳ್ಳುತ್ತಲೇ ತಂದೆಯವರ ಪರುಷುರಾಮ ಚಿತ್ರದಲ್ಲಿ ಕೈಲಾಸಂ ಅವರ ಪ್ರಖ್ಯಾತ ಹಾಡು ನಮ್ಮ ತಿಪ್ಪಾರಳ್ಳಿ ಬಲು ದೂರಾ ನಡೆಯಕ್ ಬಲು ದೂರಾ ಹಾಡನ್ನು ಹಾಡಿದ್ದಲ್ಲದೇ ಅದಕ್ಕೆ ಅತ್ಯುತ್ತಮವಾಗಿ ನೃತ್ಯವನ್ನು ಮಾಡುವ ಮುಖಾಂತರ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಾರೆ.
ಇವೆಲ್ಲಾ ಆಗುವಷ್ಟರಲ್ಲಿ ಬಾಲ್ಯವಸ್ಥೆಯಿಂದ ತರುಣವಸ್ಥೆಗೆ ಬಂದಿದ್ದ ಪುನೀತ್ ಅವರಿಗೆ ತಂದೆಯವರ ನಾಮಬಲ, ಅಮ್ಮನ ಪ್ರೀತಿ, ಜೊತೆಗೆ ತನ್ನದೇ ಆದ ಛಾಪು ಎಲ್ಲವೂ ಇದ್ದ ಕೆಲವು ಸಹವಾಸ ದೋಷದಿಂದ ತಂದೆಗೆ ತಕ್ಕ ಮಗನಾಗ ಬೇಕಾದವರು ದಾರಿತಪ್ಪಿದ ಮಗನಾಗುವ ಜಾಡನ್ನು ಹಿಡಿಯುತ್ತಾರೆ. 1998ರಲ್ಲಿ 22 ವರ್ಷದ ಯುವಕ ಪುನೀತ್ ಆವರಿಗಿದ್ದ ಪ್ರಭಾವವನ್ನು ದುರ್ಬಳಕೆ ಮಾಡಿಕೊಳ್ಳುವ ದುರಾಲೋಚನೆಯಿಂದ ಅವರ ಬಾಲ್ಯ ಸ್ನೇಹಿತರೇ ವ್ಯವಹಾರದ ಗಂಧಗಾಳಿಯೇ ಗೊತ್ತಿರದ ಪುನೀತ್ ಅವರನ್ನು ಪುಸಲಾಯಿಸಿ ಗ್ರಾನೈಟ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಸೂಚಿಸುವುದಲ್ಲದೇ, ಇದರಲ್ಲಿ ಒಳ್ಳೆಯ ಲಾಭ ಇದೆ. ಗ್ರ್ಯಾನೈಟ್ಗಳನ್ನು ಕ್ವಾರಿಗಳಿಂದ ಖರೀದಿ ಮಾಡಿ ಬೆಂಗಳೂರಿಗೆ ತಂದು ಮಾರಿದಲ್ಲಿ ಸುಲಭವಾಗಿ ಲಕ್ಷಾಂತರ ಹಣಗಳಿಸಬಹುದು. ಗಣಿಗಾರಿಕೆ ಇಲಾಖೆಯವರು ತಪಾಸಣೆಗೆ ಬಂದಲ್ಲಿ, ಪುನೀತ್ ರಾಜಕುಮಾರ್ ಅವರದ್ದು ಎಂದು ಹೇಳಿದರೆ ಸಾಕು ಯಾವುದೇ ತಪಾಸಣೆ ಇಲ್ಲದೇ ಬಿಟ್ಟು ಬಿಡುತ್ತಾರೆ. ನೀವು ಸುಮ್ಮನೆ ಬಂಡವಾಳ ಹಾಕಿ ಸ್ಲೀಪಿಂಗ್ ಪಾರ್ಟ್ನರ್ ಆಗಿದ್ದರೆ ಸಾಕು ಉಳಿದಿದ್ದೆಲ್ಲವನ್ನೂ ನಾವು ನೋಡ್ಕೋತೀವಿ ಎಂದು ಭರವಸೆಯನ್ನು ಹುಟ್ಟಿಸಿ ಪುನೀತ್ ಅವರನ್ನು ತಪ್ಪು ದಾರಿಗೆ ಎಳೆಯುವುದಲ್ಲದೇ, ಕೆಲವೇ ದಿನಗಳಲ್ಲಿ ಪುನೀತ್ ಅವರ ಅರಿವಿಗೆ ಬಾರದಂತೆ ಕಳ್ಳ ವ್ಯವಹಾರಗಳನ್ನು ಮಾಡುವ ಮೂಲಕ ರಾಜ್ ಕುಟುಂಬಕ್ಕೆ ಕೆಟ್ಟ ಹೆಸರನ್ನು ತರುವ ಕೆಲಸ ಮಾಡುತ್ತಾರೆ. ಇದೇ ಸಮಯದಲ್ಲಿ ರಾಜ್ ಕುಟುಂಬದ ಆಪ್ತರಾಗಿದ್ದ ಮತ್ತು ಬೆಂಗಳೂರಿನ ಪೋಲಿಸ್ ಕಮೀಶಿನರ್ ಆಗಿದ್ದ ಕೆಂಪಯ್ಯ ನವರು ಪುನೀತ್ ಅವರನ್ನು ಕರೆದು ಬುದ್ಧಿವಾದ ಹೇಳಿದ್ದು ಅವರ ಬದುಕಿನಲ್ಲಿ ಬಾರೀ ತಿರುವನ್ನು ಪಡೆದುಕೊಳ್ಳುತ್ತದೆ.
ಅದಾಗಲೇ ಬಾಲ ನಟನಾಗಿ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿಗಳನ್ನು ಪಡೆದಿದ್ದರೂ, ಚಲನಚಿತ್ರಗಳಲ್ಲಿ ಮುಂದೆ ನಟಿಸಲೇ ಬಾರದೆಂಬ ನಿರ್ಧಾರ ತಳೆದಿದ್ದ ಪುನೀತ್ ಮತ್ತೆ ತಮ್ಮ ನಿರ್ಧಾರವನ್ನು ಬದಲಿಸಿ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಲ್ಲದೇ ಧೃತಿ ಮತ್ತು ವಂದಿತ ಎಂಬ ಇಬ್ಬರು ಮುದ್ದಾದ ಮಕ್ಕಳ ತಂದೆಯಾಗುತ್ತಾರೆ.
ನಿಜ ಹೇಳಬೇಕೆಂದರೆ, ಇಲ್ಲಿಂದ ಅವರು ತಮ್ಮ ಜೀವನದಲ್ಲಿ ತಂದು ಕೊಂಡ ಬದಲಾವಣೆ ಅಲ್ಲಿಂದ ಅವರ ಜೀವನದಲ್ಲಿ ತಂದು ಕೊಂಡ ಬದಲಾವಣೆ ನಿಜಕ್ಕೂ ಅದ್ಭುತ, ಅನನ್ಯ ಮತ್ತು ಅನುಕರಣೀಯವೇ ಸರಿ. 2002ರಲ್ಲಿ ತಮ್ಮದೇ ವಜ್ರೇಶ್ವರಿ ಬ್ಯಾನರ್ ಅಡಿಯಲ್ಲಿ ನಾಯಕನಾಗಿ ಅಪ್ಪು ಎಂಬ ಚಿತ್ರದ ಮೂಲಕ ಭರ್ಜರಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ನೋಡ ನೋಡುತ್ತಿದ್ದಂತೆಯೇ ಮುಟ್ಟಿದ್ದೆಲ್ಲಾ ಚಿನ್ನವಾಗಿ, ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ರಾಜಕುಮಾರ, ಯುವರತ್ನ, ಸೇರಿದಂತೆ ಚಿತ್ರಗಳೆಲ್ಲವೂ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿಯಾಗಿ ಪವರ್ ಸ್ಟಾರ್ ಎಂಬ ಬಿರುದಾಂಕಿತರಾಗುತ್ತಾರೆ.
ಈ ಮಧ್ಯೆ ಏಪ್ರಿಲ್ 12, 2006 ರಂದು ವರನಟ ರಾಜಕುಮಾರರನ್ನು ಕಳೆದುಕೊಂಡ ನಂತರ ಹ್ಯಾಟ್ರಿಕ್ ಹೀರೋ ಎಂಬ ಹೆಸರನ್ನು ಪಡೆದಾಗಿದ್ದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರುಗಳು ಇದ್ದರೂ ಬಣ್ಣದ ಹೊರತಾಗಿ ನೋಡಲು ಬಹುತೇಕ ರಾಜಕುಮಾರರಂತೆಯೇ ಇದ್ದ ಪುನೀತ್ ತಂದೆಯವರು ಸದ್ದಿಲ್ಲದೇ ಮಾಡುತ್ತಿದ್ದ ಎಲ್ಲಾ ಸಾಮಾಜಿಕ ಚಟುವಟುಕೆಗಳಿಗೂ ರಾಯಭಾರಿಗಳಾಗಿ ಮುಂದುವರಿಸಿಕೊಂಡು ಹೋಗುವುದಲ್ಲದೇ, ತಂದೆಯಂತೆಯೇ ಅವರ ಎಲ್ಲಾ ಚಿತ್ರಗಳಲ್ಲಿಯೂ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಸಮಾಜಕ್ಕೆ ತಿಳಿವಳಿಯನ್ನು ನೀಡುವಂತಹ ಚಿತ್ರಗಳಲ್ಲಿಯೇ ತೊಡಗಿಸಿಕೊಳ್ಳುತ್ತಾರೆ.
ಇಷ್ಟರ ಮಧ್ಯೆ ಹಿಂದಿಯಲ್ಲಿ ಅತ್ಯಂತ ಜನಪ್ರಿಯ ಟಿವಿ ಶೋ ಆಗಿದ್ದ ಕೌನ್ ಬನೇಗಾ ಕರೋರ್ ಪತಿ ಕಾರ್ಯಕ್ರಮವನ್ನು ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮವನ್ನು ನಡೆಸಬೇಕೆಂದು ಆಲೋಚಿಸುತ್ತಿರುವಾಗ ಆ ಕಾರ್ಯಕ್ರಮದ ನಿರೂಪಕರಾಗಿ ಪುನೀತ್ ರಾಜಕುಮಾರ್ ಅವರನ್ನು ಆರಿಸಿದಾಗ ಅಮಿತಾಭ್ ಬಚ್ಚನ್ ಅವರ ಸ್ಥಾನವನ್ನು ಪುನೀತ್ ತುಂಬ ಬಲ್ಲರೇ? ಎಂಬ ಅನುಮಾನಕ್ಕೆಲ್ಲಾ ಸಡ್ಡುಹೊಡೆಯುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವವರೊಂದಿಗೆ ಲವಲವಿಕೆಯಿಂದ ಮಾತನಾಡಿಸುತ್ತಾ ಆವರಿಗೆಲ್ಲಾ ಪ್ರೋತ್ಸಾಹಿಸುತ್ತಾ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿಸಿದ ಕೀರ್ತಿವಂತರಾಗುತ್ತಾರೆ ಪುನೀತ್.
ಮೇ 31, 2017ರಲ್ಲಿ ದೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ತಮ್ಮ ಪ್ರೀತಿಯ ಅಮ್ಮ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ನಿಧನರಾದಾಗ ಕೆಲ ಕಾಲ ಜರ್ಜರಿತರಾಗಿ ಹೋದ ಪುನೀತ್ ಅವರು ನಂತರ ಸುಧಾರಿಸಿಕೊಂಡು ಚಿತ್ರರಂಗದೊಂದಿಗೆ ಮುಂದುವರೆಸಿಕೊಂಡು ಹೋಗುವುದಲ್ಲದೇ, ಜೊತೆ ಜೊತೆಯಲ್ಲಿಯೇ ತಮ್ಮ ತಾಯಿ ಹೆಸರಿನಲ್ಲಿ PRK production house ಪ್ರಾರಂಭಿಸಿ ಅದರ ಮೂಲಕ ವಿವಿಧ ಖಾಸಗೀ ಛಾನಲ್ ಗಳಿಗೆ ಧಾರವಾಹಿಗಳು ಮತ್ತು ಕನ್ನಡದಲ್ಲಿ ಕೆಲವು ನವ ನವೀನ ರೀತಿಯ ಚಿತ್ರಗಳನ್ನು ನಿರ್ಮಿಸಿ ಹೊಸಾ ಕಲಾವಿದರು ಮತ್ತು ನಿರ್ದೇಶಕರುಗಳಿಗೆ ಅವಕಾಶವನ್ನು ನೀಡುವ ಮೂಲಕ ತಮ್ಮ ತಾಯಿಯವರು ಹಾಕಿಕೊಟ್ಟ ಸಂಪ್ರದಾಯವನ್ನೂ ಸಹಾ ಮುಂದುವರೆಸಿಕೊಂಡು ಹೊಗುತ್ತಾರೆ. ಇವೆಲ್ಲವುಗಳ ಜೊತೆ ಜೊತೆಯಲ್ಲಿಯೇ ಅನೇಕ ಕನ್ನಡ ಚಿತ್ರಗಳಲ್ಲಿ ಹಳೆಯ ಇಲ್ಲವೇ ಹೊಸಾ ನಟರು ಎಂಬ ಬೇಧಭಾವವಿಲ್ಲದೇ ಹಿನ್ನಲೆಗಾಯನವನ್ನು ಮಾಡುವ ಮೂಲಕ ಯಶಸ್ವೀ ಗಾಯಕ ಎಂದೂ ಖ್ಯಾತಿಯನ್ನು ಪಡೆಯುತ್ತಾರೆ.
ರಾಜಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಮತ್ತು ಅಭಿಮಾನಿಗಳನ್ನು ದೇವರೆಂದು ಕರೆದು ಸರಳ ಸಜ್ಜನಿಕೆಯಿಂದ ನಡೆದುಕೊಳ್ಳುವ ಮೂಲಕ ಯೋಗ ಧ್ಯಾನ ಮುಂತಾದ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಕನ್ನಡಿಗರ ರಾಯಭಾರಿಗಳಾದರೆ ಅದನ್ನೇ ಆನುವಂಶಿಕವಾಗಿ ಪಡೆದುಕೊಂಡ ಪುನೀತ್ ಸಹಾ ಹಿರಿಯ ಕಿರಿಯ ಎನ್ನದೇ ಎಲ್ಲರಿಗೂ ಗೌರವವನ್ನು ಕೊಡುವ ಅವರ ವರ್ತನೆ, ಸಂಸ್ಕಾರ ಸಂಸ್ಕೃತಿ ಮತ್ತು ಸಾಮಾಜಿಕ ಕಾಳಜಿಯಿಂದಾಗಿ, ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಎಂಬುದನ್ನು ಸಾಭೀತು ಮಾಡುವ ಮುಖಾಂತರ ಕೇವಲ ಕನ್ನಡಿಗರಲ್ಲದೇ ಇಡೀ ದೇಶದ ಯುವಕರಿಗೆ ಉತ್ತಮ ಸಂಸ್ಕೃತಿ ಮತ್ತು ಮನೋಭಾವಗಳನ್ನು ಹೊಂದಿದಲ್ಲಿ ಭೌತಿಕ ಆಸ್ತಿಯನ್ನು ಪಡೆಯಬಹುದು ಎಂಬುದಕ್ಕೆ ಜ್ವಲಂತ ಉದಾಹಣೆಯಾಗಿ ಹೋದರು.
ಯಾವುದೇ ಕೆಟ್ಟ ಚೆಟಗಳಿಲ್ಲದೇ, ಉತ್ತಮ ಜೀವನ ಶೈಲಿಯೊಂದಿಗೆ ಸದಾಕಾಲವೂ ವ್ಯಾಯಾಮ ಮಾಡುತ್ತಾ ಅತ್ಯಂತ ಆರೋಗ್ಯಪೂರ್ಣವಾಗಿಯೇ ಇದ್ದ ಪುನೀತ್ ರಾಜಕುಮಾರ್ ಅವರು ಇದ್ದಕ್ಕಿಂದ್ದಂತೆಯೇ, ಅಕ್ಟೋಬರ್ 29, 2021 ರಂದು ಇಹಲೋಕವನ್ನು ತ್ಯಜಿಸುವ ಮೂಲಕ ಇಡೀ ಕರ್ನಾಟಕಕ್ಕೇ ಸೂತಕವನ್ನು ಹರಡಿ ಹೋಗಿದ್ದಾರೆೆ ಎಂದರು ತಪ್ಪಾಗದು. ಒಬ್ಬ ವ್ಯಕ್ತಿಯ ಉಪಸ್ಥಿತಿಗಿಂತಲೂ ಆತನ ಅನುಪಸ್ಥಿತಿ ಹೆಚ್ಚಿಗೆ ಕಾಡುತ್ತದೆ ಎನ್ನುವುದೇ ಆತನ ಸಾಧನೆಗೆ ಹಿಡಿದ ಕೈಗನ್ನಡಿ ಎನ್ನುವಂತ ಪುನೀತ್ ಅವರ ಅಂತಿಮ ದರ್ಶನಕ್ಕೆ ಲಕ್ಷೋಪ ಲಕ್ಷ ಸಂಖ್ಯೆಯ ಅಭಿಮಾನಿಗಳು ಕೇವಲ ಬೆಂಗಳೂರು ಮತ್ತು ಸುತ್ತಮುತ್ತಲಲ್ಲದೇ ನೆರೆಹೊರೆಯ ತಮಿಳುನಾಡು, ಕೇರಳ, ಆಂಧ್ರದ ರಂಗಗಳಲ್ಲದೇ ದೇಶ ವಿದೇಶ ಅದರಲ್ಲೂ ಪಾಕಿಸ್ಥಾನದಿಂದಲೂ ಕನ್ನಡವೇ ಅರಿಯದ ಅವರ ಅಭಿಮಾನಿಯೊಬ್ಬನೂ ತನ್ನ ಹಾಡಿನ ಮುಖಾಂತರ ಶ್ರದ್ಧಾಂಜಲಿಗಳನ್ನು ಸಲ್ಲಿಸಿದ್ದು ಗಮನಾರ್ಹವಾಗಿತ್ತು.
ರಾಜಕುಮಾರ್ ಕುಟುಂಬ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಆರೋಪಕ್ಕೆ ಪುನೀತ್ ಅವರ ಸಾವಿನ ನಂತರ ತಿಳಿದ ಬಂದ ಸತ್ಯದ ಸಂಗತಿ ಖಂಡಿತವಾಗಿಯೂ ಶಾಶ್ವತವಾದ ಉತ್ತರವನ್ನು ನೀಡುತ್ತದೆ. ಪುನೀತ್ ತಮ್ಮ ಆದಾಯದಲ್ಲಿ ಕೆಲವು ಪಾಲುಗಳನ್ನು ಸದ್ದಿಲ್ಲದೇ ಸಾಮಾಜಿಕ ಚಟುವಟಿಕೆಗಳಿಗಾಗಿಯೇ ಮೀಸಲಿಟ್ಟು ಒಂದು ಅಂದಾಜಿನ ಪ್ರಕಾರ ಸುಮಾರು 1800 ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ, 26 ಅನಾಥಾಶ್ರಮ, 16 ವೃದ್ದಾಶ್ರಮ, 46 ಉಚಿತಶಾಲೆ, 19 ಗೋಶಾಲೆಗಳಲ್ಲದೇ, ಮೈಸೂರಿನಲ್ಲಿ ಶಕ್ತಿಧಾಮ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಉಚಿತ ವಸತಿ, ಇವೆಲ್ಲವನ್ನು ನಡೆಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಇದಲ್ಲದೇ, ಕಲರ್ಸ್ ಕನ್ನಡದ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರೇ ತಮ್ಮ ಮುಖಪುಟದಲ್ಲಿ ಬರೆದುಕೊಂಡಿರುವಂತೆ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಯೂ ಹೆಚ್ಚು ಒತ್ತಡದಲ್ಲಿ ಇರುತ್ತಿದ್ದುದದ್ದನ್ನು ಸ್ವತಃ ಗಮನಿಸಿದ್ದ ಅಪ್ಪು, ಎಲ್ಲರೂ ಹೆಚ್ಚು ಹೆಚ್ಚು ದುಡ್ಡನ್ನು ಗೆಲ್ಲವ ಮೂಲಕ ಖುಷಿಯಾಗಿರಬೇಕು ಎಂದು ಪ್ರಾಮಾಣಿಕವಾಗಿ ಆಸೆಪಡುತ್ತಿದ್ದ ಒಳ್ಳೆಯ ಹೃದಯವಂತ ಎಂದು ಹೇಳಿರುವುದಲ್ಲದೇ, ಸ್ಪರ್ಧಿಗಳು ತಪ್ಪು ಉತ್ತರ ಕೊಟ್ಟಾಗ ಅವರಿಗಿಂತಲು ಪುನೀತ್ ಹೆಚ್ಚು ನಿರಾಶೆಗೆ ಒಳಗಾಗುತ್ತಿದ್ದದ್ದಲ್ಲದೇ, ಸ್ಪರ್ಧಿಗಳು ಸರಿ ಉತ್ತರ ಕೊಟ್ಟಾಗ ಅತ್ಯಂತ ಉತ್ಸಾಹವನ್ನು ವ್ಯಕ್ತಪಡಿಸುತ್ತಿದ್ದಂತಹ ಭಾವುಕ ಜೀವಿ ಎಂದು ಹೇಳಿದ್ದಾರೆ. ಹೆಚ್ಚು ಹೆಚ್ಚು ಜನರು ಕೋಟಿ ಗೆಲ್ಲಬೇಕು ಎಂದು ಸಾವಿರ ಸಲ ಹೇಳುತ್ತಿದ್ದದ್ದಲ್ಲದೇ ತಪ್ಪು ಉತ್ತರ ಕೊಟ್ಟು ಯಾರಾದರೂ ಕಡಿಮೆ ಹಣದೊಂದಿಗೆ ಸ್ಪರ್ಧೆಯಿಂದ ಹೊರಬಿದ್ದಲ್ಲಿ ಹಣದ ಅತ್ಯಾವಶ್ಯಕವಿರುವವರೆಗೆ, ಶೂಟಿಂಗ್ ಮುಗಿದ ನಂತರ ತಮ್ಮ ಸ್ವಂತ ಹಣವನ್ನು ಎಷ್ಟೋ ಸ್ಪರ್ಥಿಗಳಿಗೆ ಕೊಡುತ್ತಿದ್ದದ್ದಲ್ಲದೇ, ಈ ವಿಷಯಎಲ್ಲೂ ಸುದ್ದಿಯಾಗದ ಹಾಗೆ ನೋಡಿಕೊಳ್ಳುತ್ತಿದ್ದ ಪ್ರಾಮಾಣಿಕ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಅದೇ ರೀತಿ ಲಾಕ್ದೌನ್ ಸಮಯದಲ್ಲಿ ತಿಂಗಳಾನುಗಟ್ಟಲೆ ಜಿಮ್ಗಳು ಮುಚ್ಚಲ್ಪಟಾಗ ಸದ್ದಿಲ್ಲದೇ ಜಿಮ್ ಟ್ರೈನರ್ಗಳಿಗೆ ಪ್ರತೀ ತಿಂಗಳು ತಮ್ಮ ಕೈಲಾದ ಸಹಾಯ ಮಾಡಿದ್ದಲ್ಲದೇ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಪಾರವಾದ ಹಣವನ್ನೂ ಕೊಟ್ಟಿದ್ದರು. ತಮ್ಮ ತಂದೆಯವರಂತೆಯೇ ನಂದಿನಿ ಉತ್ಪನ್ನಗಳ ಜಾಹೀರಾತುಗಳಲ್ಲಿ ಮತ್ತು ಕನ್ನಡ ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಾಹೀರಾತುಗಳಲ್ಲಿ ಉಚಿತವಾಗಿ ಅಭಿನಯಿಸುವ ಮೂಲಕ ಅಪಾರವಾದ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಂತಹ ವ್ಯಕ್ತಿಯಾಗಿದ್ದರು ಪುನೀತ್ ರಾಜಕುಮಾರ್.
ತಂದೆಯವರಿಂದ ಪಡೆದಿದ್ದಂತಹ ಹೆಸರು, ಜನರ ಬೆಂಬಲದ ಜೊತೆಗೆ ಕೈ ತುಂಬಾ ಹಣ ಇದ್ದಾಗ ಹಾಳಾಗಿ ಹೋಗಿರುವ ಅದೆಷ್ಫೋ ಚಿತ್ರನಟರುಗಳು ಇರುವಾಗ, ಬದುಕಿದ್ದ ಕೇವಲ 46 ವರ್ಷಗಳಲ್ಲಿಯೇ, ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ನಡುವಿನ ಜೀವನವನ್ನು ಅರ್ಥಪೂರ್ಣವಾಗಿ ಕಳೆಯಲೇ ಎಂಬಂತೆ ಸತ್ತ ಮೇಲೆಯೂ ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡುವ ಮುಖಾಂತರ ಪರೋಪಕಾರಾಯ ಇದಂ ಶರೀರಂ ಎನ್ನುವುದನ್ನು ಪ್ರತ್ಯಕ್ಶವಾಗಿ ತೋರಿಸಿಕೊಟ್ಟಿದ್ದಲ್ಲದೇ, ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿದು ಹೋದ ಪುನೀತ್ ರಾಜಕುಮಾರ್ ಆಚಂದ್ರಾರ್ಕವಾಗಿ ಕನ್ನಡದ ರಾಜರತ್ನ ಮತ್ತು ಕನ್ನಡದ ಕಲಿಯೇ ಸರಿ.
ಏನಂತಿರೀ?
ನಿಮ್ಮವನೇ ಉಮಾಸುತ