ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

raj3

ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಂಭ್ರಮದಿಂದ ನಾಡಹಬ್ಬದ ದಸರವನ್ನು ಆಚರಿಸಿದ ನಂತರ ಎಲ್ಲರ ಚಿತ್ತ ಮುಂದಿನ ತಿಂಗಳ ನವೆಂಬರ್-1 ನೇ ತಾರೀಖಿನತ್ತ ಎಂದರೂ ಅತಿಶಯೋಕ್ತಿಯೇನಲ್ಲ. ಸ್ವಾತ್ರಂತ್ರ್ಯಾ ನಂತರ 1956 ರ ನವೆಂಬರ್-1 ರಂದು, ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಮಾಡಲಾಯಿತು. ಆನಂತರ 1973 ನವೆಂಬರ್-1 ರಂದು ಮೈಸೂರು ರಾಜ್ಯವನ್ನು ಕನ್ನಡಿಗರು ಇರುವ ಕರುನಾಡು ಅರ್ಥಾತ್ ಕರ್ನಾಟಕ ಎಂದು ಹೆಸರಿಸಿದ ಸಂಭ್ರಮವೇ ನಾವೆಲ್ಲರೂ ಆಚರಿಸುವ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ. ದುರಾದೃಷ್ಟವಶಾತ್ 6 ಕೋಟಿ ಇರುವ ಕನ್ನಡಿಗರು ಈ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಾರೋ ಇಲ್ಲವೋ ಆದರೇ ಖನ್ನಡ ಓರಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟಗಳ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು ಕೇಳಲು ಆನಂದ. ನವೆಂಬರ್ 1 ರಂದು ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ (ಉಳಿದ 364 ದಿನ ಪರಭಾಷೆಗಳ ಚಿತ್ರಕ್ಕೇ ಮೀಸಲು) ಕಡ್ಡಾಯವಾಗಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವುದು ನೋಡಲು ಮಹದಾನಂದ. ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳಿನಿಂದ ಮುಂದಿನ ವರ್ಷ ಅಕ್ಟೋಬರ್ 31 ರ ವರೆಗೆ ಕನ್ನಡದ ಬಗ್ಗೆ ಕುಂಭಕರ್ಣ ನಿದ್ದೆಯ ಧೋರಣೆ. ಇಂಗ್ಲೀಷ್, ಕಂಗ್ಲೀಷ್, ಇಲ್ಲವೇ ಅನ್ಯ ಭಾಷೆಗಳದ್ದೇ ಪ್ರಾಭಲ್ಯ.

raj4

ಇದಕ್ಕಿಂತಲೂ ದುರಾದೃಷ್ಟವೆಂದರೆ, ಅ ಕಾರ ಹ ಕಾರದ ಉಚ್ಚಾರ ಬಿಡಿ ಸರಿಯಾಗಿ ಶುದ್ಧವಾಗಿ ನಾಲ್ಕು ವಾಕ್ಯಗಳನ್ನೂ ವ್ಯಾಕರಣಬದ್ಧವಾಗಿ ಮಾತನಾಡಲು ಮತ್ತು ಬರೆಯಲು ಬಾರದವರೆಲ್ಲ ಕನ್ನಡಪರ ಸಂಘಟನೆಗಳ ಹೆಸರಿನಲ್ಲಿ ಕನ್ನಡದ ರಕ್ಷಣೆಯ ಗುತ್ತಿಗೆ ಪಡೆದವರಂತೆ, ಕನ್ನಡ ಮತ್ತು ಕನ್ನಡಿಗರು ಇವರಿಂದಲೇ ಉದ್ದಾರವಾಗುತ್ತಿರುವಂತೆ ನಡೆಸುವ ಆರ್ಭಟವನ್ನು ನೋಡಲಾಗದು. ಕನ್ನಡಕ್ಕಾಗಿಯೇ ತಮ್ಮ ತನು ಮನ ಧನವನ್ನೆಲ್ಲಾ ಅರ್ಪಿಸಿದ, ಕನ್ನಡದ ಕುಲಪುರೋಹಿತರೆಂದೇ ಪ್ರಖ್ಯಾತರಾಗಿರುವ ಕನ್ನಡ ಏಕೀಕರಣಕ್ಕೇ ತಮ್ಮ ಇಡೀ ಮೀಸಲಾಗಿರಿಸಿದ್ದ ಆಲೂರು ವೆಂಕಟರಾಯರು, ಪ್ರಥಮ ರಾಷ್ಟ್ರಕವಿ ಪಂಜೆ ಮಂಗೇಶರಾಯರು, ಕಯ್ಯಾರ ಕೀಯಣ್ಣ ರೈ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ, ಅನಕೃ, ಮ ರಾಮಮೂರ್ತಿಗಳು ಇವೆರಲ್ಲರ ನಿಸ್ವಾರ್ಥ ಹೋರಾಟ ಬಿಡಿ ಅಂತಹ ಮಹನೀಯರುಗಳು ಯಾರೂ ಎಂದು ಗೊತ್ತಿಲ್ಲದ ಬಹುತೇಕರು ಕೊರಳಲ್ಲಿ ನಾಯಿ ಚೈನ್ ತರಹ ಚಿನ್ನದ ಸರ, ಕೈಗೆ ಬೇಡಿಯಂತಹ ಬ್ರೇಸ್ ಲೆಟ್ ಹಾಕಿಕೊಂಡು ಹೆಗಲ ಮೇಲೊಂದು ಕೆಂಪು ಮತ್ತು ಹಳದಿ ಶಲ್ಯವನ್ನು ಹಾಕಿಕೊಂಡ ಪ್ಲೆಕ್ಸ್ ತಮ್ಮ ಬಡಾವಣೆಯಲ್ಲಿ ಹಾಕಿಸಿ ಬಿಟ್ಟಲ್ಲಿ ಅವರೇ ನಿಜವಾದ ಕನ್ನಡಪರ ಹೋರಾಟಗಾರು ಅವರಿಂದಲೇ ಕನ್ನಡ ಇಂದು ಉಳಿದಿದೆ ಮತ್ತು ಬೆಳೆಯುತ್ತಲಿದೆ ಎಂದೇ ನಂಬಬೇಕಾದ ದೈನೇಸಿ ಪರಿಸ್ಥಿತಿಗೆ ಕನ್ನಡಿಗರು ತಲುಪಿರುವುದು ನಿಜಕ್ಕೂ ದುರ್ದೈವವೇ ಸರಿ.

ನಿಜ ಹೇಳಬೇಕೆಂದರೆ ಈ ಬಹುತೇಕ ಹೋರಾಟಗಾರರು ರಾಜ್ಯದ ನಾನಾ ಭಾಗಗಳಿಂದ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಮೈ ಬಗ್ಗಿಸಿ ಕೆಲಸ ಮಾಡಲಾಗದೇ ಕನ್ನಡ ಹೋರಾಟದ ಹೆಸರಿನಲ್ಲಿ ಹಣ ಮಾಡಿಕೊಂಡು ಐಶಾರಾಮ್ಯದ ಜೀವನ ನಡೆಸುತ್ತಿರುವುದು ಸುಳ್ಳಲ್ಲ.

  • ಮಾತೆತ್ತಿದರೆ ಹೋರಾಟ, ಬಂದ್ ಆ ಲೆಖ್ಖ ಕೊಡಿ ಈ ಲೆಖ್ಖ ಕೊಡಿ ಎಂಬು ಬೊಬ್ಬಿರಿಯುವ ಈ ನಾಯಕರುಗಳು ಎಂದಾದರೂ ತಮ್ಮ ಆಸ್ತಿಯ ವಿವರಗಳನ್ನು ಸಾರ್ವಜನಿಕರ ಮುಂದೆ ಇಟ್ಟಿರುವುದನ್ನು ನೋಡಿದ್ದೇವೆಯೇ?
  • ಕನ್ನಡ ಹೆಸರಿನಲ್ಲಿ ಸಂಘವೊಂದನ್ನು ನೊಂದಾಯಿಸಿ ಅದಕ್ಕೊಂದು ಲೆಟರ್ ಹೆಡ್ ಮಾಡಿಸಿ ಕಾಲ ಕಾಲಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡಾಭಿವೃದ್ಧಿ ಪ್ರಾಧಿಕಾರದಲ್ಲಿ ಜನರ ತೆರಿಗೆ ಸರ್ಕಾರಿ ಹಣವನ್ನು ಕಬಳಿಸಿಸುವ ಲೆಖ್ಖವನ್ನು ಏನಾದರೂ ಕೊಟ್ಟಿದ್ದಾರಾ?
  • ಕನ್ನಡಪರ ಹೋರಾಟಕ್ಕೂ ರಾಜಕೀಯ ಪಕ್ಷಗಳು ಕರೆಗೊಡುವ ಬಂದ್ ಎತ್ತಲಿಂದೆತ್ತ ಸಂಬಂಧ? ಯಾರೋ ರಾಜಕೀಯ ನಾಯಕರು ಎಲ್ಲೋ ಕರೆ ನೀಡಿದ್ದಕ್ಕೆ ಕುರಿ, ಕೋಳಿ, ಹಂದಿ, ಎಮ್ಮೆ, ಮೇಕೆಯನ್ನು ರೈಲ್ವೇ ನಿಲ್ದಾಣದ ಮುಂದೆಯೋ ಇಲ್ಲವೇ ವಿಧಾನಸೌಧದ ಮುಂದೆ ಹಿಡಿದುಕೊಂಡು ವರ್ಷಕ್ಕೆ ಹೆಚ್ಚೂ ಕಡಿಮೆ ನಾಲ್ಕೈದು ಬಂದ್ ಮಾಡಿಸುವುದರಿಂದ ಕನ್ನಡ ಮತ್ತು ಕನ್ನಡಿಗರಿಗೆ ಏನು ಪ್ರಯೋಜನ?
  • ಸುಮ್ಮನೆ ಸದ್ಯಕ್ಕೆ ಅಧಿಕೃತವಾಗಿ ನೊಂದಾಯಿತ ಕನ್ನಡಪರ ಸಂಘಟನೆಗಳ ಪಟ್ಟಿಯನ್ನು ಸಂಪೂರ್ಣವಾಗಿ ಓದಬೇಕಾದರೆ ಕನಿಷ್ಟ ಪಕ್ಷ ಎರಡು ಮೂರು ದಿನಗಳು ಬೇಕಾದೀತು. ಗಲ್ಲಿ ಗಲ್ಲಿಗೆ ಈ ಪರಿಯಾಗಿ ಕನ್ನಡ ಸಂಘಟನೆಗಳು ಇದ್ದರೂ ಕರ್ನಾಟಕದಲ್ಲೇ ಕನ್ನಡಿಗರು ಅಲ್ಪಸಂಖ್ಯಾತರಾಗಿರಬೇಕಾದ ಪರಿಸ್ಥಿತಿಗೆ ಈ ಕನ್ನಡ ಪರ ಸಂಘಟನೆಗಳ ನಿಲುವೇನು?
  • ಕನ್ನಡ ಕನ್ನಡ ಎಂದು ಬೊಬ್ಬಿರಿಯುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನೇಡತರ ಶಾಸಕರ ಸಂಖ್ಯೆಯೇ ಹೆಚ್ಚಾಗಿರುವುದು ಈ ಕನ್ನಡಪರ ಸಂಘಟನೆಗಳ ಕಣ್ಣಿಗೆ ಕಾಣುವುದಿಲ್ಲವೇ?
  • ನಮ್ಮ ರಾಜ್ಯದ ಗಡಿ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಯ ಹಲವಾರು ಕಡೆ, ಬೆಳಗಾಂ, ಬಳ್ಳಾರಿ, ರಾಯಚೂರು, ಅಷ್ಟೇಕೆ ನಮ್ಮ ಬೆಂಗಳೂರಿನಲ್ಲೂ ಕನ್ನಡ ಶಾಲೆಗಳು ಅಲ್ಲೋಂದು ಇಲ್ಲೋಂದು ಆಳಿದುಳಿದ ಪಳುವಳಿಕೆಯಂತೆ ಉಳಿದುಕೊಂಡಿರುವಾಗ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದ ಎಷ್ಟು ಶಾಲೆಗಳು ಇವೆ? ನಮ್ಮ ಮುಂದಿನ ಪೀಳಿಗೆಯ ಎಷ್ಟು ಮಕ್ಕಳು ಕನ್ನಡವನ್ನು ಕಲಿಯುತ್ತಿದ್ದಾರೆ? ಎಂಬುದರ ಲೆಖ್ಖವೇನಾದರು ಈ ಸಂಘಟನೆಗಳಿಗೆ ಅರಿವಿದೆಯೇ?
  • ಖನ್ನಡಾ, ಖನ್ನಡಾ ಎಂದು ಬಸ್ಸು, ರೈಲು ಮೆಟ್ರೋಗಳ ನಿಲ್ಡಾಣಗಳಲ್ಲಿ ಹೋರಾಡುವ ನಡೆಸಿ ಬಲವಂತದ ಮಾಘಸ್ನಾನ ಮಾಡಿಸುವ ಬದಲು ಈ ಸಂಘಟನೆಗಳಿಂದ ಅನ್ಯಭಾಷಿಕರಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸೊಗಡನ್ನು ಕಲಿಸುವಂತಹ ಯಾವುದಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಉದಾಹರಣೆಗಳನ್ನು ನೀಡಬಲ್ಲರೇ?

ಕನ್ನಡ ಪರ ಹೋರಾಟ ಏನು ಎಂಬುದನ್ನು ಇಂದಿನ ಹೋರಾಟಗಾರರು ಖಂಡಿತವಾಗಿಯೂ ಆಲೂರು ವೆಂಕಟರಾಯರು, ಗಳಗನಾಥರು, ಅನಕೃ, ಮ. ರಾಮಮೂರ್ತಿಗಳಂತಹ ಮಹನೀಯರಿಂದ ಕಲಿತುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕವಾಗಿದೆ.

raj6

ನಮ್ಮ ಕನ್ನಡ ಭಾಷೆಯ ಅಳಿವು ಉಳಿವು ಮತ್ತು ರಕ್ಷಣೆಯನ್ನು ಸ್ವಾಭಿಮಾನಿ ಕನ್ನಡಿಗರು ಯಾವುದೇ ಇಂತಹ ಸ್ವಘೋಷಿತ ಕನ್ನಡ ರಕ್ಷಣಾ ಸಂಘಟನೆಗಳಿಗೆ ಗುತ್ತಿಗೆ ನೀಡಿಲ್ಲ.‌ಅದು ಇನ್ನೂ ನಮ್ಮ ಕೈಯ್ಯಲ್ಲಿಯೇ ಇದೆ ಎನ್ನುವುದನ್ನು ಕನ್ನಡಿಗರಾದ ನಾವುಗಳು‌ ಮೊದಲು ಅರಿಯಬೇಕಾಗಿದೆ. ಕನ್ನಡದ ಅಸ್ತಿತ್ವ ಅಸ್ಮಿತೆಗಳನ್ನು ಉಳಿಸುವ ಸಲುವಾಗಿ ನಮ್ಮ ಮನ ಮನೆಗಳಲ್ಲಿ ಇಂತಹ ಪ್ರಯತ್ನ ಮಾಡಬಹುದೇ?

  • ಮನೆಯೇ ಮೊದಲ ಪಾಠಶಾಲೆ ಹಾಗಾಗಿ ನಮ್ಮ ಮನೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸ ಬಹುದೇ?
  • ನಮ್ಮ ಮಕ್ಕಳಿಗೆ ಅಚ್ಚ ಕನ್ನಡದ ಹೆಸರಿಡಬಹುದೇ?
  • ನಮ್ಮ ಮಕ್ಕಳಿಗೆ ಮಮ್ಮಿ ಡ್ಯಾಡಿ, ಆಂಟಿ, ಅಂಕಲ್ ಅಂಥಾ ಹೇಳಿ ಕೊಡುವ ಬದಲು ಅಚ್ಚ ಕನ್ನಡದಲ್ಲಿ ಅಮ್ಮಾ, ಅಪ್ಪಾ, ಚಿಕ್ಕಪ್ಪಾ, ಚಿಕ್ಕಮ್ಮಾ, ಅತ್ತೆ-ಮಾವ, ಅಜ್ಜಿ-ಅಜ್ಜ ತಾತ-ಅಜ್ಜಿ ಎಂಬಂತಹ ಸಂಬಂಧ ಬೆಸೆಯುವ ಪದಗಳನ್ನೇ ಉಪಯೋಗಿಸಬಹುದೇ?
  • ಶಾಲೆಯಲ್ಲಿ ಯಾವುದೇ ಭಾಷೆಯ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ನಮ್ಮ ಮಕ್ಕಳಿಗೆ ಮನೆಯಲ್ಲಿ ನಾವೇ ಸ್ಪುಟವಾಗಿ ಕನ್ನಡ ಓದಲು ಬರೆಯಲು ಕಲಿಸಲು ಪ್ರಯತ್ನಿಸ ಬಹುದೇ?
  • ಪ್ರತಿದಿನ ಇತರೇ ವೃತಪತ್ರಿಕೆಗಳೊಂದಿಗೆ ಕನ್ನಡ ಪತ್ರಿಕೆ ಮತ್ತು ವಾರಪತ್ರಿಕೆಗಳನ್ನು ತರಿಸಿ ನಮ್ಮ ಮಕ್ಕಳಿಗೆ ಓದಲು ಅನುವು ಮಾಡಿ ಕೊಡಬಹುದೇ?
  • ಕನ್ನಡ ಹಲವಾರು ಖ್ಯಾತ ಲೇಖಕರ ಪುಸ್ತಕಗಳನ್ನೇ ಖರೀದಿಸಿ ಎಲ್ಲಾ ಸಭೇ ಸಮಾರಂಭಗಳಲ್ಲಿ ಉಡುಗೊರೆಯಾಗಿ ಕೊಡುವ ಸತ್ಸಂಪ್ರದಾಯ ಬೆಳಸಿ ಕೊಳ್ಳಬಹುದೇ?
  • ಆದಷ್ಟೂ ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಛಾನಲ್ಗಳನ್ನೇ ನೋಡುವ ಅಭ್ಯಾಸ ಬೆಳೆಸಿ ಕೊಳ್ಳಬಹುದೇ?
  • ಹೋಟೆಲ್ಗಳಲ್ಲಿ ರೈಸ್, ಸಾಂಬರ್, ಪಿಕ್ಕಲ್ ಬದಲಾಗಿ ಅನ್ನ, ಹುಳಿ, ಉಪ್ಪಿನ ಕಾಯಿ, ಅಂಗಡಿಗಳಲ್ಲಿ ರೈಸ್, ದಾಲ್, ಆಯಿಲ್ ಬದಲಾಗಿ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಅಂಗಡಿಗಳಲ್ಲಿ, ಬೀನ್ಸ್, ಕ್ಯಾಪ್ಸಿಕಾಂ, ಚಿಲ್ಲಿ ಬದಲಾಗಿ ಹುರಳಿಕಾಯಿ, ದೊಣ್ಣೆಮೆಣಸಿಕಾಯಿ, ಮೆಣಸಿನಕಾಯಿ ಹಣ್ಣಿನ ಅಂಗಡಿಗಳಲ್ಲಿ ಆಪೆಲ್, ಆರೆಂಜ್, ಬನಾನ ಬದಲಾಗಿ, ಸೇಬು, ಕಿತ್ತಳೆ, ಬಾಳೇಹಣ್ಣುಗಳನ್ನು ಕೊಡಿ ಎಂದು ಕೇಳ ಬಹುದೇ?
  • ನೆರೆಹೊರೆಯವರ ಜೊತೆ ಮತ್ತು ಕಛೇರಿಗಳಲ್ಲಿ ಕನ್ನಡ ಗೊತ್ತಿರುವವರ ಬಳಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಮಾತನಾಡ ಬಹುದೇ?
  • ಗಣೇಶೋತ್ಸವ, ಅಣ್ಣಮ್ಮ, ಊರ ಹಬ್ಬ, ನಾಡ ಹಬ್ಬಗಳ ರಾಜ್ಯೋತ್ಸವದ ಸಮಯದಲ್ಲಿ ಕನ್ನಡ ಕಲಾವಿದರಿಗೇ ಆದ್ಯತೆ ಕೊಟ್ಟು, ನಾಟಕ, ನೃತ್ಯ, ಸಂಗೀತ ವಾದ್ಯಗೋಷ್ಠಿಗಳು ಕನ್ನಡ ಭಾಷೆಯದ್ದೇ ಆಗಿರುವಂತೆ ನೋಡಿ ಕೊಳ್ಳಬಹುದೇ?
  • ನಮ್ಮ ಮನೆಯ ಮುಂದಿನ ಫಲಕ, ನಮ್ಮ ಅಂಗಡಿ, ಮುಗ್ಗಟ್ಟಿನ ಫಲಕಗಳು ಮತ್ತು ನಮ್ಮ ರಸ್ತೆಯ ನಾಮಫಲಕಗಳನ್ನು ಕನ್ನಡದಲ್ಲಿಯೇ ಬರೆಸುವಂತಾಗ ಬಹುದೇ?

raj5

ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ನಾವೇ ಸಾರಿ ಸಾರಿ ಎಲ್ಲರಿಗೂ ಒತ್ತಿ ಒತ್ತಿ ಹೇಳಬೇಕಾದಂತಹ ಕೆಟ್ಟ ಪರಿಸ್ಥಿತಿ ಬಂದೊದಗಿಬಿಟ್ಟಿರುವುದು ನಿಜಕ್ಕೂ ಶೋಚನೀಯವಾಗಿದೆ. ಇದಕ್ಕೆ ಬೇರೇ ಭಾಷೆಯವರ ದಬ್ಬಾಳಿಕೆ ಎನ್ನುವುದಕ್ಕಿಂತಲೂ ನಮ್ಮಲ್ಲಿಲ್ಲದ ಭಾಷಾಭಿಮಾನವೇ ಕಾರಣ ಎಂದರು ತಪ್ಪಾಗದು. ನಮ್ಮೆಲ್ಲರ ಕನ್ನಡ ಭಾಷಾಭಿಮಾನ ಕೇವಲ ಕನ್ನಡರಾಜ್ಯೋತ್ಸವದ ಸಂಧರ್ಭವಾದ ನವೆಂಬರ್ 1-30 ಅಥವಾ ಇನ್ನೂ ಒಂದೆರಡು ಹೆಚ್ಚಿನ ವಾರಗಳಿಗೆ ಮಾತ್ರವೇ ಸೀಮಿತಗೊಂಡು ಮಿಕ್ಕೆಲ್ಲಾ ದಿನಗಳು ಕುಂಬಕರ್ಣನಂತೆ ನಿದ್ರೆ ಹೋಗುವುದರಿಂದಲೇ ಕನ್ನಡದ ಹೆಸರಿನಲ್ಲಿ ತಮ್ಮ ಹೊಟ್ಟೆ ಹೊರೆದುಕೊಳ್ಳುವವರಿಗೆ ಸುಗ್ರಾಸ ಭೋಜನವನ್ನು ಒದಗಿಸುತ್ತಿದೇವೆ.

raj1

ನಿಜಕ್ಕೂ ಬೇಸರ ತರಿಸುವ ಸಂಗತಿಯೇನೆಂದರೆ, ಒಂದೆರಡು ಸಂಘಟನೆಗಳ ಹೊರತಾಗಿ ಬಹುತೇಕ ಕನ್ನಡಪರ ಸಂಘಗಳ ಹುಟ್ಟು ಆಯಾಯಾ ನಾಯಕರ ಹೊಟ್ಟೇ ಪಾಡಿಗಾಗಿಯೇ ಆಗಿರುತ್ತದೆ. ಈ ನಾಯಕರು ತಮ್ಮ ಅಸ್ಥಿತ್ವಕ್ಕಾಗಿ ಮತ್ತು ಅಗ್ಗದ ದಿಢೀರ್ ಪ್ರಚಾರಕ್ಕಾಗಿ ಕನ್ನಡದ ಹೆಸರಿನಲ್ಲಿ ಆಗ್ಗಿಂದ್ದಾಗ್ಗೆ ಮುಷ್ಕರಗಳನ್ನು ಮಾಡಿಸುತ್ತಾ, ಅನ್ಯಭಾಷಿಕರನ್ನು ಹೆದರಿಸಿ ಬೆದರಿಸುತ್ತಾ ರೋಲ್ ಕಾಲ್ ಮಾಡಿಕೊಳ್ಳುವುದೋ ಇಲ್ಲವೇ ಯಾವುದಾದರೂ ಸಂಧಾನ (settlement) ಮಾಡಿಸುವ ಮೂಲಕ ಹಣ ಮಾಡುವುದಕಷ್ಟೇ ಸೀಮಿತವಾಗಿದೆಯೇ ಹೊರತು ಇಂತಹ ಸಂಘಟನೆಗಳಿಂದ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಒಂದು ನಯಾಪೈಸೆಯೂ ಲಾಭವಿಲ್ಲ ಎನ್ನುವುದು ಜಗಜ್ಜಾಹೀರಾತಾಗಿದೆ.

raj2

ಒಬ್ಬ ಸ್ವಾಭಿಮಾನಿ ಕನ್ನಡಿಗನಾಗಿ ಕನ್ನಡದ ಬಗ್ಗೆಯ ಕಳಕಳಿಯಿಂದಾಗಿ ನಿಮ್ಮೆಲ್ಲರ ಬಳಿ ಬಿಚ್ಚುಮನಸ್ಸಿನಿಂದ ತೋಡಿಕೊಂಡಿದ್ದೇನೆಯೇ ಹೊರತು ವಯಕ್ತಿಕವಾಗಿ ನನಗೆ ಯಾವುದೇ ಕನ್ನಡಪರ ಸಂಘಟನೆಗಳ ಸಂಪರ್ಕವೂ ಇಲ್ಲ ಮತ್ತು ಅವರ ವಿರುದ್ಧ ದ್ವೇಷವೂ ಇಲ್ಲ. ಕನ್ನಡ ಉಳಿಸುವಿಕೆಗೆ ನಾವುಗಳು ಸುಲಭವಾಗಿ ಹೇಗೆಲ್ಲಾ ತೊಡಗಿಕೊಳ್ಳಬಹುದೆಂದು ನನಗೆ ತೋಚಿದಂತೆ ವಿವರಿಸಿದ್ದೇನೆ. ನಾನು ತಿಳಿಸಿದ್ದಕ್ಕಿಂತಲೂ ಇನ್ನೂ ಅನೇಕ ರೀತಿಯಿಂದ, ನಿಮ್ಮ ನಿಮ್ಮಗಳ ಅಭಿಲಾಶೆಗಳಿಗೆ ಮತ್ತು ಆಸ್ಥೆಗೆ ತಕ್ಕಂತೆ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಾಮರ್ಥ ನಿಮ್ಮೆಲ್ಲರ ಬಳಿ ಇದ್ದೇ ಇದೆ. ಆದರೆ ಅದಕ್ಕೆ ಮನಸ್ಸು ಮಾಡಬೇಕಷ್ಟೇ.

ಒಗ್ಗಟ್ಟಿನಲ್ಲಿ ಬಲವಿದೆ, ಮನಸ್ಸಿದ್ದಲ್ಲಿ ಮಾರ್ಗವಿದೆ. ನವೆಂಬರ್ ಕನ್ನಡಿಗರಾಗುವುದಕ್ಕಿಂತಲೂ ವರ್ಷ ಪೂರ್ತಿ ಕನ್ನಡಿರಾಗುವ ಮೂಲಕವೇ ಕನ್ನಡವನ್ನು ಉಳಿಸಿ ಬೆಳಸಲು ಸಾಧ್ಯವಿದೆ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಇಲ್ಲಿ‌ ಕನ್ನಡವೇ ನಿತ್ಯ. ಕನ್ನಡವೇ ಸತ್ಯ.

ಸಿರಿಗನ್ನಡಂ ಗೆಲ್ಗೆ. ಸವಿಗನ್ನಡಂ ಬಾಳ್ಗೆ

ಏನಂತೀರೀ?

ನಿಮ್ಮವನೇ ಉಮಾಸುತ

2 thoughts on “ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

  1. ಕನ್ನಡ ರಕ್ಷಣೆ ಯನ್ನು ಯಾರು, ಯಾರಿಗೂ ಗುತ್ತಿಗೆ ಕೊಟ್ಟಿಲ್ಲ ಎನ್ನುವುದು ನನ್ನ ಭಾವನೆ…. 2500 ವರ್ಷಗಳ ಮೀರಿ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸುತ್ತೇವೆ ಮತ್ತು ನಮ್ಮಿದಂಲೇ ಅನ್ನುವುದು ಕೂಡ ಹಾಸ್ಯಾಸ್ಪದವೇ…… ಭಾಷೆ ಬಳಕೆ ಆಗದಿದ್ದರೆ ಕ್ರಮೇಣ ನಶಿಸಿ ಹೋಗುವ ಸಾಧ್ಯತೆ ಇರುತ್ತದೆ… ಕಳೆದ 10 ವರ್ಷದ ಅವಧಿಯಲ್ಲಿ ಪರಭಾಷಿಕರ/ ವಲಸಿಗರ ಹಾವಳಿ ಹೆಚ್ಚಾಯಿತು ಮತ್ತು ಆವರು ಕನ್ನಡವನ್ನು ಕಲಿಯಬೇಕು ಎನ್ನುವ ಅನಿವಾರ್ಯತೆ ಬರಲಿಲ್ಲ ಅದಕ್ಕೆ ಕನ್ನಡಿಗರು ಕೂಡ ಪರೋಕ್ಷವಾಗಿ ಕಾರಣಿಭೂತರು…… ಬಹುತೇಕ ಕನ್ನಡ ಪರ ಸಂಘಟನೆಗಳು ಕನ್ನಡ ಭಾಷೆ ಉದ್ದಾರ ಮಾಡುತ್ತಾರೆ ಎಂಬುವ ಭ್ರಮೆಯಲ್ಲಿ ಸ್ವಾಭಿಮಾನಿ ಕನ್ನಡಿಗರು ಇಲ್ಲಾ…. ನಿಮ್ಮ ಲೇಖನ ಬಾಳ ಸೊಗಸಾಗಿ, ಕನ್ನಡವನ್ನು ಯಾವ ರೀತಿ ಬಳಸಿ, ಬೆಳಸಿಕೊಂಡು ಹೋಗಬೇಕು ಹೇಳಿದ್ದು ನಿಜಕ್ಕೂ ಅಭಿನಂದನೀಯ…. ಖಂಡಿತವಾಗಿಯೂ ಸ್ವಾಭಿಮಾನಿ ಕನ್ನಡಿಗರು ಪಾಲನೆ ಮಾಡುತ್ತಾರೆ ಅನ್ನುವ ನಂಬಿಕೆ ಇದೆ… ನಮಸ್ಕಾರ…
    ಬಿ. ಆರ್.ವೆಂಕಟೇಶ್.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s