ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು

vish6

ಅದೊಂದು ಮಳೆಗಾಲದಲ್ಲಿ ಶರಾವತಿ ಜಲಾನಯನ ಪ್ರದೇಶದಲ್ಲಿ ಚೆನ್ನಾಗಿ ಮಳೆಬಿದ್ದು ಶರಾವತಿ ನದಿಯು ತುಂಬಿ ಜೋಗ್ ಜಲಪಾತದಲ್ಲಿ ಭೋರ್ಗರೆಯುತ್ತಾ ರಾಜಾ ರಾಣಿ ರೋರರ್ ರಾಕೆಟ್ ಅತ್ಯಂತ ರಮಣೀಯವಾಗಿ ಧುಮ್ಮಿಕ್ಕುತ್ತಿದ್ದು ಮೈಸೂರಿನ ಅರಸರ ಕಿವಿಗೆ ಬಿದ್ದು ಅದನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ತಮ್ಮ ದಿವಾನರೊಂದಿಗೆ ಜೋಗ್ ಜಲಪಾತಕ್ಕೆ ಬಂದು ಆಹಾ ಅಧ್ಭುತ!! ಎಷ್ಟು ರಮಣೀಯವಾಗಿದೆ ಎಂದು ತಮ್ಮ ದಿವಾನರತ್ತ ಪ್ರತಿಕ್ರಿಯೆಗಾಗಿ ತಿರುಗಿದಾಗ ಅವರ ದಿವಾರ ಬಾಯಿಯಿಂದ ಬಂದ ಮಾತು Oh my God!! What a waste!! ಎಂಬುದನ್ನು ಕೇಳಿ ಆಶ್ಚರ್ಯಚಕಿತರಾಗಿದ್ದರಂತೆ. ಅ ರೀತಿಯಾಗಿ ಸದಾಕಾಲವೂ ಜನರ ಬಗ್ಗೆ ಯೋಚನೆ ಮಾಡುತ್ತಾ ತಮ್ಮ ಜೀವಮಾನವಿಡೀ ಜನಸೇವೆಗೇ ಮುಡುಪಾಗಿಟ್ಟ ಶತಾಯುಷಿಗಳಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಬಗ್ಗೆ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಅಂದಿನ ಕೋಲಾರ ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ವಿಶ್ವವಿಖ್ಯಾತ ಗಿರಿಧಾಮವಾದ ನಂದಿಬೆಟ್ಟದ ತಟದಲ್ಲಿರುವ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿದ್ದ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀನಿವಾಸಶಾಸ್ತ್ರಿಗಳು ಮತ್ತು ವೆಂಕಟಲಕ್ಷಮ್ಮ ದಂಪತಿಗಳ ಸುಪುತ್ರನಾಗಿ 1861 ಸೆಪ್ಟೆಂಬರ್ 15ರಂದು ಶ್ರೀ ವಿಶ್ವೇಶ್ವರಯ್ಯನವರ ಜನನವಾಗುತ್ತದೆ. ತಮ್ಮೂರಿನ ಹತ್ತಿರದಲ್ಲೇ ಇದ್ದ ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯುತ್ತಿದ್ದಾಗಲೇ ಅವರ ತಂದೆಯವರು ಅಕಾಲಿಕವಾಗಿ ಮರಣ ಹೊಂದುತ್ತಾರೆ. ಮನೆಯಲ್ಲಿದ್ದ ದಟ್ಟ ದಾರಿದ್ರ್ಯದ ಬದುಕಿನ ನಡುವೆಯೂ ವಿಧವೆಯಾದ ಅವರ ತಾಯಿ ಅವರಿವರ ಮನೆಯಲ್ಲಿ ಮುಸುರೆ ತಿಕ್ಕುತ್ತಾ ತಮ್ಮ ಮಗನನ್ನು ಸಾಕಲು ಪ್ರಯತ್ನಿಸುತ್ತಿರುತ್ತಾರೆ.

ಅದೊಮ್ಮೆ ವಿಶ್ವೇಶ್ವರಯ್ಯನವರು ಅವರ ಗುರುಗಳ ಮನೆಗೆ ಹೋಗಿದ್ದಾಗ, ಅವರಿಗೆ ಬಾಯಾರಿಕೆಯಾಗಿ ಗುರುಗಳ ಮನೆಯಲ್ಲಿ ಕುಡಿಯಲು ನೀರು ಕೇಳಿದಾಗ ಅದೇ ಸಮಯದಲ್ಲಿ ಬರಗಾಲದಿಂದಾಗಿ ಊರಿನ ಭಾವಿಗಳೆಲ್ಲಾ ಬತ್ತಿ ಹೋಗಿ ಬಲು ದೂರದಿಂದ ಕುಡಿಯಲು ನೀರನ್ನು ತಂದಿದ್ದ ಗುರುಗಳ ಮಡದಿಯು ಬಾಲಕ ವಿಶ್ವೇಶ್ವರಯ್ಯನವರಿಗೆ ಕುಡಿಯಲು ನೀರನ್ನು ಕೊಟ್ಟು. ಆ ಬಾಲಕ ನೀರು ಕುಡಿಯುತ್ತಿದ್ದಾಗ, ನೋಡಪ್ಪಾ ನೀನು ದೊಡ್ಡವನಾದ ಮೇಲೆ ಚೆನ್ನಾಗಿ ಓದಿ ದೊಡ್ಡ ಹುದ್ದೆಯನ್ನು ಗಳಿಸಿ ನಮ್ಮ ಊರಿನ ನೀರಿನ ಸಮಸ್ಯೆಯನ್ನು ಪರಿಹಾರ ಮಾಡುತ್ತೀಯಾ? ಎಂದು ಕೇಳಿರುತ್ತಾರೆ. ಅವರು ಕೇಳಿದ ಪ್ರಶ್ನೆಯನ್ನು ಸರಿಯಾಗಿ ಅರಿಯದಿದ್ದರೂ ಸಣ್ಣ ವಯಸ್ಸಿನ ವಿಶ್ವೇಶ್ವರಯ್ಯನವರು ಸರಿ ನಿಮ್ಮ ಬಾಯಿಹರಕೆಯಂತೆ ಹಾಗೇ ಆಗಲಿ ಎಂದು ಮಾತು ಕೊಟ್ಟು ಬಂದಿರುತ್ತಾರೆ.

ಬುದ್ಧಿವಂತ ವಿಶ್ವೇಶ್ವರಯ್ಯನವರ ವಿದ್ಯಾಭ್ಯಾಸಕ್ಕೆ ಊರಿನಲ್ಲಿ ಕಷ್ಟವಾದಾಗ, ಬೆಂಗಳೂರಿನಲ್ಲಿದ್ದ ಅವರ ಸೋದರ ಮಾವ ಎಚ್ ರಾಮಯ್ಯನವರ ಮನೆಗೆ 1875ರಲ್ಲಿ ಬಂದ ವಿಶ್ವೇಶ್ವರಯ್ಯನವರು ವೆಸ್ಲಿ ಮಿಶನ್ ಹೈಸ್ಕೂಲ್ ಸೇರಿಕೊಳ್ಳುವುದಲ್ಲದೇ ಆರ್ಥಿಕವಾಗಿ ಅಷ್ಟೇನೂ ಸಬಲರಾಗಿಲ್ಲದಿದ್ದ ಅವರ ಮಾವನವರಿಗೆ ಹೊರೆಯಾಗದಿರಲೆಂದು ವಾರಾನ್ನದ ಮೂಲಕ ತಮ್ಮ ದೈನಂದಿನ ಹಸಿವನ್ನು ನೀಗಿಸಿಕೊಳ್ಳುತ್ತಾರೆ.

ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಹಣ ಕಟ್ಟಲು ಹೇಳಿದಾಗ ಅಷ್ಟೊಂದು ಹಣವನ್ನು ಮಾವನ ಬಳಿ ಕೇಳಲು ಸಂಕೋಚ ಪಟ್ಟ ವಿಶ್ವೇಶ್ವರಯ್ಯನವರು ಬೆಂಗಳೂರಿನ ತಮ್ಮ ಶಾಲೆಯಿಂದ 60 Kms ದೂರವಿರುವ ಮುದ್ದೇನ ಹಳ್ಳಿಗೆ ಕಾಲಿಗೆ ಚಪ್ಪಲಿಯೂ ಇಲ್ಲದೇ, ಬರೀ ಗಾಲಿನಲ್ಲಿ ನಡೆದುಕೊಂಡೇ ಮದ್ಯರಾತ್ರಿಯ ಸಮಯಕ್ಕೆ ತಮ್ಮ ಚಿಕ್ಕದಾದ ಮುರುಕಲು ಮನೆಗೆ ಬಂದಾಗಾ, ಆಶ್ಚರ್ಯಚಕಿತಳಾದ ತಾಯಿ ಇದೇನಪ್ಪಾ? ಇಷ್ಟು ಹೊತ್ತಿನಲ್ಲಿ ಬಂದಿದ್ದೀಯೇ? ಎಂದು ವಿಚಾರಿಸಿದಾಗ, ಅಮ್ಮ ನಾಳೆ ಬೆಳಿಗ್ಗೆ 11 ಗಂಟೆಯೊಳಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ 12 ರುಪಾಯಿ ಫೀಸ್ ಕಟ್ಟಬೇಕು, ಇಲ್ಲದಿದ್ದರೆ ಒಂದು ವರ್ಷದ ಓದು ವ್ಯರ್ಥವಾಗುತ್ತದೆ ಎನ್ನುತ್ತಾರೆ. ಕೈಯಲ್ಲಿ ಬಿಡಿಗಾಸು ಇಲ್ಲದ ತಾಯಿ ಹತಾಶಳಾಗಿದ್ದ ತಾಯಿ ಅಷ್ಟು ತಡರಾತ್ರಿಯಲ್ಲಿಯೇ ತಮ್ಮ ನೆರೆಯ ಮನೆಯ ಸದ್ಗುಣಿಗಳು ಮತ್ತು ಉದಾರಿಗಳು ಆಗಿದ್ದ ಶೆಟ್ಟರ ಬಳಿ ವಿಚಾರವನ್ನು ತಿಳಿಸಿ 15 ರೂ ಹಣವನ್ನು ಸಾಲದ ರೂಪದಲ್ಲಿ ಪಡೆದು ಮಗನ ಕೈಗೆ ಕೊಡುತ್ತಾರೆ. ಕೆಲ ಕಾಲ ಮನೆಯಲ್ಲಿಯೇ ವಿಶ್ರಾಂತಿ ಪಡೆದು, ಸ್ನಾನ ಮುಗಿಸಿ,ತಾಯಿ ಕೊಟ್ಟ ಉಪಹಾರ ಸೇವಿಸಿ ಮತ್ತೆ ಬೆಳ್ಳಂಬೆಳಿಗ್ಗೆಯೇ ಬೆಂಗಳೂರಿಗೆ ಕಾಲ್ನಡಿಗೆಯಲ್ಲೇ ಹಣದೊಂದಿಗೆ ಹೊರಟ ವಿಶ್ವೇಶ್ವರಯ್ಯನವರು ಶಾಲೆಗೆ ತಲುಪುವ ಹೊತ್ತಿಗೆ ಗಂಟೆ 11 ಮೀರಿದ್ದು, ಪರೀಕ್ಷೆಯ ಅರ್ಜಿ ಮತ್ತು ಹಣ ಕೊಡಲು ಸಮಯ ಮೀರಿಹೋಗಿರುತ್ತದೆ. ತನ್ನ ಕಷ್ಟವನ್ನು ಹೇಳಿಕೊಂಡರೂ ಶಾಲೆಯ ಗುಮಾಸ್ತರು ಹಣ ತೆಗೆದುಕೊಳ್ಳಲು ನಿರಾಕರಿದಾಗ, ದಿಕ್ಕು ತೋಚಚೇ ಅಳುತ್ತಾ ಕುಳಿತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ಮೇಲ್ವಿಚಾರಕರು ಅಳುತ್ತಿದ್ದ ಬಾಲಕನ ಅಳಲನ್ನು ಆಲಿಸಿ, ಹುಡುಗನ ಪರೀಕ್ಷೆಯ ಅರ್ಜಿ ಹಾಗೂ ಹಣವನ್ನು ತೆಗೆದುಕೊಳ್ಳುವಂತೆ ಆಜ್ಞೆ ಮಾಡಿ, ನೋಡಪ್ಪಾ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ಪಾಸ್ ಆಗಬೇಕು ಎಂದಾಗ ಬಾಲಕ ವಿಶ್ವೇಶ್ವರಯ್ಯನವರಿಗೆ ಆದ ಸಂತೋಷ ಹೇಳತೀರದು. ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾದಾಗ ಅಚ್ಚರಿ ಎಂಬಂತೆ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೇ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಮುಂದೆ ಎಷ್ಟೇ ಬಡತನವಿದ್ದರೂ ಜೀವನೋತ್ಸಾಹವನ್ನು ಕುಗ್ಗಿಸದೇ, ಬದುಕನ್ನು ಎದುರಿಸುವ ದಿಟ್ಟತನ ಮತ್ತು ಭವಿಷ್ಯದ ದೃಢ ಸಂಕಲ್ಪಗಳಿದ್ದ ಕಾರಣ, ವಿಶ್ವೇಶ್ವರಯ್ಯನವರು ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. ಮುಂದುವರೆಸುತ್ತಾರೆ. ವಿದ್ಯಾಭ್ಯಾಸ ಮತ್ತು ದೈನಂದಿನ ಖರ್ಚಿನ ಹಣಕ್ಕಾಗಿ ಅವರಿವರಿಗೆ ಮನೆ ಪಾಠವನ್ನು ಹೇಳಿಕೊಡುವ ಮೂಲಕ ಅಷ್ಟಿಷ್ಟನ್ನು ಸಂಪಾದಿಸುತ್ತಾ, 1880ರಲ್ಲಿ ಡಿಸ್ಟಿಂಕ್ಷನ್ ನಲ್ಲಿ ಬಿ.ಎ. ಪಾಸು ಮಾಡಿದ್ದಕ್ಕಾಗಿ ವಿಶ್ವೇಶ್ವರಯ್ಯನವರರಿಗೆ ವಿದ್ಯಾರ್ಥಿವೇತನದೊಂದಿಗೆ ಪುಣೆಯಲ್ಲಿ ಇಂಜಿನಿಯರಿಂಗ್ ಕಾಲೇಜಿಗೆ 1881ರಲ್ಲಿ ಸೇರಿದ ವಿಶ್ವೇಶ್ವರಯ್ಯನವರು ಮೂರು ವರ್ಷದ ಕೋರ್ಸನ್ನು ಕೇವಲ ಎರಡೂವರೆ ವರ್ಷಕ್ಕೆ ಮುಗಿಸುವ ಮೂಲಕ ತಾವೊಬ್ಬ ಅದ್ಭುತವಾದ ಮೇಧಾವಿ ಎಂಬುದನ್ನು ತೋರಿಸಿಕೊಟ್ಟಿದ್ದಲ್ಲದೇ, ಜೇಮ್ಸ್ ಬರ್ಕ್ಲಿ ಬಹುಮಾನದೊಂದಿಗೆ ಬಾಂಬೆ ಪಿ.ಡಬ್ಲ್ಯೂ.ಡಿ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ನೌಕರಿಯನ್ನೂ ಗಿಟ್ಟಿಸಿಕೊಂಡಿದ್ದಲ್ಲದೇ, ಮುಂದೆ ಅಲ್ಲಿಂದ ಪುಣೆಗೆ ವರ್ಗವಣೆ ಮಾಡಿಸಿಕೊಂಡು ತಮ್ಮ ನೌಕರಿಯನ್ನು ಮುಂದುವರೆಸಿರುತ್ತಾರೆ.

1908ರಲ್ಲಿ ಬಾಂಬೆಯ ಕೆಲಸಕ್ಕೆ ರಾಜೀನಾಮೆ ನೀಡಿ ವಿದೇಶ ಪ್ರವಾಸದಲ್ಲಿದ್ದಾಗ, ಮೂಸಿ ನದಿ ಪದೇ ಪದೇ ಉಕ್ಕಿ ಹರಿದು ಪ್ರವಾಹಗಳಿಂದಾಗಿ ಹೈದರಾಬಾದಿನ ಜನರ ಪರಿಸ್ಥಿತಿ ದುಸ್ತರವಾಗುವುದನ್ನು ತಪ್ಪಿಸಲು ಸಹಾಯ ಮಾಡಬೇಕೆಂದು ಅಂದಿನ ಹೈದರಾಬಾದಿನ ನಿಜಾಮರ ಕೋರಿಕೆಯನ್ನು ಮನ್ನಿಸಿ ವಿದೇಶ ಪ್ರವಾಸವನ್ನು ಅಧಕ್ಕೆ ಮೊಟಕುಗೊಳಿಸಿ ಹೈದರಾಬಾದಿಗೆ ಹಿಂದಿರುಗಿ ಬಂದ ರಾಯರು, 1909ರಲ್ಲಿ ಅಲ್ಲಿನ ವಿಶೇಷ ಸಲಹಾ ಇಂಜಿನಿಯರ್ ಆಗಿ ಸೈಫನ್ ಸಿದ್ಧಾಂತದಲ್ಲಿ ಕ್ರೆಸ್ಟ್ ಗೇಟ್ ಅಳವಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡುತ್ತಾರೆ. ಅದೇ ಸಂದರ್ಭದಲ್ಲಿ ಮೈಸೂರಿನ ದಿವಾನರಾಗಿದ್ದ ಮಾಧವರಾವ್ ಅವರು ವಿಶ್ವೇಶ್ವರಯ್ಯನವರನ್ನು ಮೈಸೂರು ರಾಜ್ಯದ ಚೀಫ್ ಇಂಜಿನಿಯರ್ ಆಗುವಂತೆ ಕೇಳಿಕೊಳ್ಳುತ್ತಾರೆ. ಕನ್ನಡಿಗರೇ ಆದ ರಾಯರ ಪ್ರತಿಭೆ ಮತ್ತು ಪ್ರಸಿದ್ಧಿಗಳು ಮಹಾರಾಜ ಕಿವಿಗೂ ಮುಟ್ಟಿತ್ತು. ಯಾವುದೇ ವಿಶೇಷವಿಲ್ಲದ ಸಾಮಾನ್ಯ ಕೆಲಸಗಳಲ್ಲಿ ತೊಡಗುವ ಇಚ್ಛೆ ನಮಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ರಾಯರು, ಮೈಸೂರು ಸಂಸ್ಥಾನಕ್ಕೆ ತಾಂತ್ರಿಕ ವಿದ್ಯಾಭ್ಯಾಸ ಮತ್ತು ಕಾರ್ಖಾನೆಗಳ ಅಬಿವೃದ್ಧಿಗೆ ಭಾರೀ ಯೋಜನೆಗಳನ್ನು ಹಾಕುವುದರಲ್ಲಿ ಆಸಕ್ತಿ ಇದ್ದರೆ ಮಾತ್ರ ತಾವು ಬರುವುದಾಗಿ ಹೇಳಿದಾಗ ಅದಕ್ಕೊಪ್ಪಿದ ಮಹಾರಾಜರು ಅವರನ್ನು ಮೈಸೂರಿನ ಸಂಸ್ಥಾನಕ್ಕೆ ಕರೆಸಿಕೊಂಡು ಅನೇಕ ಉದ್ಯಮಗಳಿಗೆ ಕಾರಣೀಭೂತರಾಗುವುದಲ್ಲದೇ ಮುಂದೇ ಅವರನ್ನು ಮೈಸೂರಿನ ದಿವಾನರನ್ನಾಗಿ ಮಾಡುತ್ತಾರೆ.

vish1

ಹಾಗೆ ವಿಶ್ವೇಶ್ವರಯ್ಯನವರಿಗೆ ಮೈಸೂರಿನ ಅರಸರ ಕೆಲಸಗಾರರೊಬ್ಬರು ಲಕೋಟೆಯನ್ನು ತಂದು ಕೊಟ್ಟಾಗ ಕುತೂಹಲದಿಂದ ರಾಯರ ತಾಯಿಯರು ಏನಪ್ಪಾ ಅದು ಎಂದು ಕೇಳುತ್ತಾರೆ. ಅದಕ್ಕೆ ಅಷ್ಟೇ ನಿರ್ಲಿಪ್ತತನದಿಂದ ಮಹಾರಾಜರು ದಿವಾನಗಿರಿಗೆ ನನ್ನನ್ನು ನೇಮಕ ಮಾಡಿದ ಆಜ್ಞಾಪತ್ರವಿದು ಎಂದು ಹೇಳಿದಾಗ ಸಂತೋಷಗೊಂಡ ತಾಯಿ, ಅಬ್ಬಾ ಬೇಗ ಒಪ್ಪಿಕೊ ಎಂದು ಹೇಳುತ್ತಾರೆ. ಆಗ ವಯಕ್ತಿಕವಾಗಿ ನಮ್ಮ ಬಂಧು ಮಿತ್ರರಿಗೆ ಈ ಪದವಿಯಿಂದ ಯಾವುದೇ ಪ್ರತಿಫಲಾಪೇಕ್ಷೆಯನ್ನು ನೀವು ಅಪೇಕ್ಷಿಸುವುದಿಲ್ಲಾ ಎಂದು ಭಾಷೆ ನೀಡಿದಲ್ಲಿ ಮಾತ್ರವೇ ನಾನು ಈ ಪದವಿಯನ್ನು ಒಪ್ಪಿಕೊಳ್ಳುತ್ತೇನೆ ಎಂದು ತಾಯಿಯಿಂದ ಭಾಷೆಯನ್ನು ತೆಗೆದುಕೊಂಡು ದಿವಾನರಾಗಲು ಒಪ್ಪಿಕೊಳ್ಳುತ್ತಾರೆ.

ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿಯಿಂದಾಗಿ ಹತ್ತು ಹಲವಾರು ಸಮಾಜಮುಖಿ ಯೋಜನೆಗಳು ಆರಂಭವಾಗುತ್ತದೆ. ಇವರ ಕಾಲದಲ್ಲೇ ಕನ್ನಂಬಾಡಿ ಕಟ್ಟೆ, ಎಚ್‌ಎಎಲ್‌, ಜೋಗದ & ಶಿವನಸಮುದ್ರ ಜಲವಿದ್ಯುತ್ ಯೋಜನೆ, ಭಟ್ಕಳ ಬಂದರು, ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸರಕಾರಿ ಸಾಬೂನು ಕಾರ್ಖಾನೆ, ಮೈಸೂರು ಸಕ್ಕರೆ ಕಾರ್ಖಾನೆ, ಶ್ರೀಗಂಧ ಎಣ್ಣೆ ತಯಾರಿಕೆ, ಮೈಸೂರು ಸ್ಯಾಂಡಲ್ ಸೋಪ್, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿವಿ, ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಬ್ಬನ್ ಪಾರ್ಕ್‌ನ ಸೆಂಚುರಿ ಕ್ಲಬ್ ಹೀಗೆ ಹತ್ತು ಹಲವಾರು ಯೋಜನೆಗಳು ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಕೇವಲ 6 ವರ್ಷಗಳ ಕಾಲದಲ್ಲೇ ಮೈಸೂರು ಸಂಸ್ಥಾನವು ಸರ್ವತೋಮುಖ ಪ್ರಗತಿ ಸಾಧಿಸಿ ಹೆಚ್ಚಿನ ಶ್ರೇಯಸ್ಸನ್ನು ಪಡೆಯಲು ಕಾರಣೀಭೂತರಾಗಿ ನಿಜವಾದ ಅರ್ಥದಲ್ಲಿ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಮೈಸೂರಿನ ನಿರ್ಮಾತರೆನಿಸಿಕೊಂಡರು.

krsdam

ಬರಡು ನಾಡಾಗಿದ್ದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ತಮ್ಮ ಸ್ವಂತ ನಗನಾಣ್ಯಗಳನ್ನು ಮಾರಿ ಕೃಷ್ಣರಾಜ ಸಾಗರವನ್ನು ಕಟ್ಟಿ ಲಕ್ಷಾಂತರ ಎಕರೆ ಭೂಮಿಗೆ ಮತ್ತು ಬೆಂಗಳೂರಿನ ಜನರಿಗೆ ಕುಡಿಯಲು ನೀರನ್ನುಣಿಸಿದ ನಾಲ್ಮಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ಭಾವ ಚಿತ್ರಗಳನ್ನು ಇಂದಿಗೂ ಮಂಡ್ಯಾ ಜಿಲ್ಲೆಯ ಪ್ರತೀ ಗ್ರಾಮ ಗ್ರಾಮಗಳಲ್ಲಿಯೂ, ಪ್ರತೀ ಮನೆಮನೆಗಳಲ್ಲಿ ತಮ್ಮ ತಮ್ಮ ಕುಲದೇವತೆಗಳೊಂದಿಗೆ ಇಟ್ಟು ಪೂಜಿಸುವುದನ್ನು ಕಾಣಬಹುದಾಗಿದೆ ಎಂದರೆ ಜನಾನುರಾಗಿ ವಿಶ್ವೇಶ್ವರಯ್ಯನವರು ಹೇಗೆ ಜನಮಾನಸದಲ್ಲಿ ಸ್ಥಾಪಿತರಾಗಿದ್ದಾರೆ ಎಂಬುದರ ಅರಿವಾಗುತ್ತದೆ.

ವಿಶ್ವೇಶ್ವರಯ್ಯನವರ ಸೇವೆ ಕೇವಲ ಮೈಸೂರಿಗಷ್ಟೇ ಸೀಮಿತವಾಗಿಲ್ಲದೇ, ದೇಶ ವಿದೇಶಗಳಲ್ಲಿಯೂ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳಲಾಯಿತು. ಅವುಗಳಲ್ಲಿ ಪ್ರಮುಖವಾಗಿ ಪ್ಯಾರಾಸಿಟಾಯ್ಡ್ಸ್ ಲ್ಯಾಬೋ ರೇಟರಿ, ಹಿಂದೂ ಮಾಡರ್ನ್ ಹೋಟೆಲ್, ಪೂನಾ ಡೆಕ್ಕನ್ ಕ್ಲಬ್, ಪುಣೆಯ ಖಡಕ್‌ ವಾಸ್ಲಾ ಜಲಾಶಯ, ಗ್ವಾಲಿಯರ್‌ನ ಟೈಗರ್ ಡ್ಯಾಂ, ಮೂಸಿ ನದಿ ಪ್ರವಾಹದಿಂದ ಹೈದರಾಬಾದ್ ನಗರದ ಪ್ರವಾಹ ಸಂರಕ್ಷಣಾ ವ್ಯವಸ್ಥೆ, ಸೂರತ್ ನಲ್ಲಿ ಎಸ್ಎಕ್ಯುಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ, ಸಿಂಧ್ ಪ್ರಾಂತದ ಸುಕ್ಕೂರ್ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಭಂದಪಟ್ಟ ವಿನ್ಯಾಸ ಹಾಗು ಕಾರ್ಯನಿರ್ವಹಣೆ, ಶಿಮ್ಲಾ ವ್ಯವಸಾಯ ಆಯೋಗದಲ್ಲಿ ಬಾಂಬೆ ಸರ್ಕಾರವನ್ನು ಪ್ರತಿನಿಧಿಸಿದ್ದು, ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಲ್ಲದೇ, ಚೀನ, ಜಪಾನ್, ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿ ನೀಡಿ ಅವರ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿ ಭಾರತದ ಗೌರವವನ್ನು ವಿದೇಶಗಳಲ್ಲಿ ಎತ್ತಿಹಿಡಿದಿದ್ದಾರೆ. ಇವರ ಸಾಧನೆಗಳನ್ನು ಗಮನಿಸಿ ಅಂದಿನ ಬ್ರಿಟಿಷ್ ಸರ್ಕಾರ ಅವರಿಗೆ ಸರ್ ಎಂಬ ಪದವಿಯನ್ನು ನೀಡಿ ಗೌರವಿಸಿತ್ತು.

ವಿಶ್ವೇಶ್ವರಯ್ಯನವರ ಸರಳತೆ, ಪ್ರಾಮಾಣಿಕತೆ, ಬುದ್ದಿವಂತಿಕೆ ಕುರಿತಂತೆ ಹಲವಾರು ಪ್ರಸಂಗಳು ಚಾಲ್ತಿಯಲ್ಲಿದ್ದು ಅವುರ್ಗಳಲ್ಲಿ ಕೆಲವೊಂದನ್ನು ತಿಳಿಯಲೇ ಬೇಕು. ವಿದ್ಯುಚ್ಚಕ್ತಿಯಿಲ್ಲದ ಆ ಕಾಲದಲ್ಲಿ ಕಡು ಬಡತನದಲ್ಲಿ ಬೆಳೆದ ವಿಶ್ವೇಶ್ವರಯ್ಯನವರು ಬಾಲ್ಯದಲ್ಲಿ ಬೀದಿ ದೀಪದ ಕೆಳಗೆ ಕುಳಿತು ಓದಿ ವಿದ್ಯಾವಂತರಾದಂತೆ. ಅದೇ ರೀತಿ ರಾತ್ರಿ ಹೊತ್ತು ಸರ್ಕಾರದ ಕೆಲಸ ಮಾಡುವ ಸಮಯದಲ್ಲಿ ಸರಕಾರ ಕೊಟ್ಟ ಮೇಣದಬತ್ತಿಯನ್ನು ಬಳಸಿ ನಂತರ ತಮ್ಮ ಸ್ವಅಧ್ಯಯನ್ನಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡ ಮೇಣದಬತ್ತಿಯನ್ನು ಬಳಸುತ್ತಿದ್ದರಂತೆ. ತಮ್ಮ ದಿವಾನಗಿರಿಯ ಕಡೆಯ ದಿವಸ ಕಛೇರಿಗೆ ಸರ್ಕಾರೀ ವಾಹನದಲ್ಲಿ ಹೋಗಿ ಹಿಂದಿರುಗುವಾಗ ಸರ್ಕಾರೀ ವಾಹನವನ್ನು ಬಳಸದೇ ವಯಕ್ತಿಕ ವಾಹನದಲ್ಲಿ ಬಂದಂತಹ ಪ್ರಾಮಾಣಿಕರು ವಿಶ್ವೇಶ್ವರಯ್ಯನವರು.

ಅದೇ ರೀತಿ ಅವರೊಮ್ಮೆ ಅವರೇ ಪಯಣಿಸುತ್ತಿದ್ದ ರೈಲಿನ ಅಪಘಾತವನ್ನು ತಪ್ಪಿಸಿದ ಪ್ರಸಂಗ ಇನ್ನೂ ರೋಚಕವಾಗಿದೆ. ಅವರೊಮ್ಮೆ ರೈಲಿನಲ್ಲಿ ರಾತ್ರಿಯ ಸಮಯದಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆಯೆ ಧಡಕ್ಕೆಂದು ಎದ್ದು ರೈಲಿನ ಸರಪಳಿಯನ್ನು ಎಳೆದು ರೈಲನ್ನು ನಿಲ್ಲಿಸಿದರಂತೆ, ಇಷ್ಟು ನಟ್ಟ ರಾತ್ರಿಯಲ್ಲಿ ಏನಾಯ್ತಪ್ಪಾ ಎಂದು ಗಾರ್ಡ್ ಆದಿಯಾಗಿ ಬಹುತೇಕ ಪ್ರಯಾಣಿಕರು ಹುಡುಕುತ್ತಾ ರಾಯರನ್ನು ನೋಡಿ ಅವರು ಯಾರೆಂದು ಅರಿಯದೇ, ಎಲ್ಲೋ ನಿದ್ದೆಯ ಮಂಪರಿನಲ್ಲಿ ಚೈನ್ ಎಳೆದಿರಬೇಕೆಂದು ಅವರನ್ನುಗದರಿಸಿದಾಗ, ರಾಯರು ದಯವಿಟ್ಟು ಅಪಾರ್ಥ ಮಾಡಿ ಕೊಳ್ಳಬೇಡಿ. ಇಲ್ಲಿಂದ ಕೆಲವು ಮೀಟರ್ ಗಳ ದೂರದಲ್ಲಿ ರೈಲ್ವೇ ಹಳಿ ಬಿರುಕು ಬಿಟ್ಟಿದೆ. ಈ ರೈಲು ಮುಂದುವರೆದಿದ್ದಲ್ಲಿ, ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕಾಗಿ ಚೈನ್ ಎಳೆಯಬೇಕಾಯಿತು ಎಂದು ಸಂಯಮದಿಂದ ಹೇಳಿದರಂತೆ.

ರೈಲ್ವೆ ಸಿಬ್ಬಂದಿ ಟಾರ್ಚ್ ಸಹಾಯದಿಂದ ಸ್ವಲ್ಪ ದೂರ ಹಾಗೇ ರೈಲ್ವೇ ಹಳಿಯನ್ನು ಪರಿಶೀಲಿಸಿದಾಗ, ರೈಲು ನಿಂದಿದ್ದ ಕೆಲವೇ ಮೀಟರಗಳ ದೂರದಲ್ಲಿ ಹಳಿಯಲ್ಲಿ ದೊಡ್ಡದೊಂದು ಬಿರುಕನ್ನು ಕಂಡು ಆಶ್ಚರ್ಯಚಕಿತರಾದಂತೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಬೋಗಿಯ ಕಂಪನದ ಶಬ್ಧ ಬದಲಾಗಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದ ರಾಯರು ಮುಂದೊದಗಬಹುದಾಗಿದ್ದ ಅವಘಡವನ್ನು ತಪ್ಪಿಸಿದ್ದರು.

ಹೀಗೆ ಭಾರತದ ಆರ್ಥಿಕ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರು ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ. 1920ರಲ್ಲಿ Reconstructing India, 1934ರಲ್ಲಿ Planned Economy for India ಪುಸ್ತಕಗಳನ್ನು ಪ್ರಕಟಿಸಿದ್ದರು. ವಿಶ್ವೇಶ್ವರಯ್ಯನವರ ಈ ಎಲ್ಲಾ ಸಾಧನೆಗಳನ್ನು ಗಮನಿಸಿ ಸ್ವಾತಂತ್ರ್ಯಾನಂತರ 1955ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪುರಸ್ಕಾರವನ್ನು ಕೊಟ್ಟು ಗೌರವಿಸಿದ್ದಲ್ಲದೇ, ಅವರ 100ನೇ ಹುಟ್ಟು ಹಬ್ಬದಲ್ಲಿ ಅಂದಿನ ಪ್ರಧಾನಿಗಳಾಗಿದ್ದ ನೆಹರೂ ಅವರು ಆಗಮಿಸಿ ಶುಭ ಕೋರಿದ್ದು ಗಮನಾರ್ಹವಾಗಿತ್ತು.

102 ವರ್ಷ 6 ತಿಂಗಳು ಮತ್ತು 8 ದಿನಗಳ ಕಾಲ ತುಂಬು ಜೀವನ ನಡೆಸಿದ ರಾಯರು ಏಪ್ರಿಲ್ 12, 1962 ರಲ್ಲಿ ನಿಧನರಾಗುತ್ತಾರೆ. ಅವರು ನಿಧನರಾದಾಗ ಅವರ ಮೆದಳನ್ನು ಅಧ್ಯಯನಕ್ಕಾಗಿ ಕೊಡಿ ಎಂದು ವಿದೇಶಿಗರು ಕೇಳಿದ್ದರು ಎಂಬುದನ್ನು ಬಲ್ಲವರಿಂದ ಕೇಳಿದ್ದೇನೆ. ಅವರು ಸಾಯುವ ಕೆಲವೇ ದಿನಗಳ ಹಿಂದ ಅವರ ಸಹೋದರನ ಮಗ ದೊಡ್ಡಪ್ಪಾ ಮದ್ರಾಸಿಗೆ ಹೋಗುತ್ತಿದ್ದೇನೆ ನಿಮಗೇನಾದರೂ ಅಲ್ಲಿಂದ ತರಬೇಕೆ? ಎಂದಾಗ, ಅರೇ, ಹೌದು oxford ನವರು ಹೊಸಾ dictionary ಬಿಡುಗಡೆ ಮಾಡಿದ್ದಾರಂತೆ ಮತ್ತು ಅದರಲ್ಲಿ ಮತ್ತಷ್ಟು ಹೊಸಾ ಆಂಗ್ಲ ಪದಗಳನ್ನು ಸೇರಿಸಿದ್ದಾರಂತೆ. ಆ ಹೊಸಾ ಪದಗಳನ್ನೊಮ್ಮೆ ಮನನ ಮಾಡಿಕೊಳ್ಳಬೇಕು ಎಂದಿದ್ದರಂತೆ. ಶತಾಯುಷಿಗಳಾಗಿದ್ದಾಗಲೂ ಅವರ ಕಲಿಕೆಯ ತುಡಿತ ಎಷ್ಟಿತ್ತು ಎಂಬುದನ್ನು ಈ ಪ್ರಸಂಗದ ಮುಖಾಂತರ ತಿಳಿದುಕೊಳ್ಳ ಬಹುದಾಗಿದೆ.

vish2

ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಸವೆಸಿದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ. ಸಮಾಜಕ್ಕಾಗಿಯೇ ತಮ್ಮ ಇಡೀ ಬದುಕನ್ನೇ ಮೀಸಲಾಗಿರಿಸಿ ಜೀವಿತಕಾಲದಲ್ಲಿಯೇ ದಂತಕತೆಯಾಗಿ ಜಗತ್ಪ್ರಸಿದ್ಧರಾದ ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s