ಧರ್ಮಸ್ಥಳದ ಲಕ್ಷದೀಪೋತ್ಸವ

KARಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಕೇವಲ ನದಿಗಳಿಗಷ್ಟೇ ಅಲ್ಲದೇ, ದೇವಾಲಯಗಳಿಗೂ ಪ್ರಸಿದ್ಧವಾಗಿದೆ. ಅಲ್ಲಿ ಹರಿಯುವ ಪ್ರತೀ ನದಿ ಹಳ್ಳ ಕೊಳ್ಳಗಳ ತಟದಲ್ಲಿ ಪ್ರತಿ ಹತ್ತಿಪ್ಪತ್ತು ಕಿಮೀ ದೂರದಲ್ಲಿ ಒಂದೊಂದು ಒಂದೊಂದು ದೇವಸ್ಥಾನಗಳಿದ್ದು, ಅವುಗಳಲ್ಲಿ ಜೀವನದಿ ನೇತ್ರಾವತಿಯ ತಟದಲ್ಲಿರುವ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸಕಲ ಹಿಂದೂಗಳ ಧಾರ್ಮಿಕ ಕ್ಷೇತ್ರವೇ ಪುರಾಣ ಪ್ರಸಿದ್ಧ ಧರ್ಮಸ್ಥಳವಾಗಿದೆ. ಹೆಸರಿಗೆ ಅನ್ವರ್ಥದಂತೆ ಅದು ಶಾಂತಿ ಮತ್ತು ಧರ್ಮದ ಬೀಡಾಗಿದ್ದು ಧರ್ಮಸ್ಥಳದ ಮಂಜುನಾಥನ ಸ್ವಾಮಿಗೆ ಇಡೀ ದೇಶಾದ್ಯಂತ ಭಕ್ತಾದಿಗಳು ಇದ್ದು ಬಹಳ ನಂಬಿಕೆಗೆ ಹೆಸರುವಾಸಿಯಾಗಿದೆ. ಸ್ವತಃ ಜೈನರಾಗಿಯೂ 21 ತಲೆಮಾರುಗಳಿಂದ ಹೆಗ್ಗಡೆ ಕುಟುಂಬವು ಧರ್ಮಸ್ಥಳದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಧಿವತ್ತಾಗಿ ನಡೆಸಿಕೊಂಡು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಶ್ರೀಕ್ಷೇತ್ರ ಎಂಬ ಹೆಸರು ಬರುವಂತೆ ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.

dharma2ವರ್ಷದ 365 ದಿನಗಳೂ ಒಂದಲ್ಲಾ ಒಂದು ಧಾರ್ಮಿಕ ವಿವಿಧ ವಿಧಾನಗಳಿಂದಾಗಿ ಶ್ರೀಕ್ಷೇತ್ರಕ್ಕೆ ಭಕ್ತಾದಿಗಳು ವರ್ಷಪೂರ್ತಿಯೂ ಮಂಜುನಾಥನ ಸಂದರ್ಶನಕ್ಕೆಂದು ಇಲ್ಲಿಗೆ ಬರುವುದಲ್ಲದೇ, ಈ ಧಾರ್ಮಿಕ ಕ್ಷೇತ್ರದ ಐತಿಹಾಸಿಕ ಮಹತ್ವ ಮತ್ತು ಇಲ್ಲಿನ ನಡಾವಳಿಗಳಿಂದಾಗಿ ಬಹಳ ಪ್ರಾಮುಖ್ಯವನ್ನು ಪಡೆದಿದೆ.

annappaಸುಮಾರು 700 – 800 ವರ್ಷಗಳ ಇತಿಹಾಸವಿದೆ. ಈ ಪ್ರಾಂತ್ಯದ ನೆಲ್ಯಾಡಿಬೀಡು ಎನ್ನುವ ಮನೆಯಲ್ಲಿ ಮಹಾನ್ ದೈವಭಕ್ತರಾದ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎನ್ನುವ ಜೈನ ಸಂಪ್ರದಾಯದ ದಂಪತಿಗಳು ತಮ್ಮ ಮನೆಗೆ ಬಂದ ನಾಲ್ಕು ಅತಿಥಿಗಳನ್ನು ನೇಮನಿಷ್ಠೆಯಿಂದ ಸತ್ಕರಿಸಿದರು. ಅಂದಿನ ರಾತ್ರಿ ಮನೆಗೆ ಬಂದಿದ್ದ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಹೆಗ್ಡೆಯವರ ಕನಸಿನಲ್ಲಿ ಅದೇ ಮನೆಯಲ್ಲಿ ನೆಲೆಸಲು ಇಚ್ಛಿಸಿಸುವುದಾಗಿ ತಿಳಿಸಿದ್ದಲ್ಲದೇ, ಅಲ್ಲೊಂದು ಶಿವಲಿಂಗವನ್ನು ಸ್ಥಾಪಿಸುವಂತೆ ಆದೇಶಿಸಿ, ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿ ಕೊಟ್ಟರು.

dh23ಅಣ್ಣಪ್ಪಸ್ವಾಮಿಯು ಮಂಗಳೂರಿನ ಕದ್ರಿ ಎನ್ನುವ ಪ್ರದೇಶದಿಂದ ಶಿವಲಿಂಗವನ್ನು ತರುವಷ್ಟರಲ್ಲಿ ಆ ಧರ್ಮದೇವತೆಗಳು ದೇವಾಲಯವನ್ನು ನಿರ್ಮಿಸಿ ಆ ದೇವಾಲಯದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು ಎನ್ನುವುದು ಈ ಕ್ಷೇತ್ರದ ಇತಿಹಾಸವಾಗಿದೆ. ಈ ಕ್ಷೇತ್ರದ ರಕ್ಷಣೆಗೆ ಧರ್ಮದೇವತೆಗಳ ಪ್ರತಿನಿಧಿ ಪಂಜುರ್ಲಿ ಅರ್ಥಾತ್ ಅಣ್ಣಪ್ಪನ ಶಕ್ತಿ ಅಪರಿಮಿತವಾಗಿದ್ದು, ಧರ್ಮದೇವತೆಗಳು ನಿರ್ಮಿಸಿದ ಈ ಕ್ಷೇತ್ರ ಧರ್ಮಸ್ಥಳವೆಂದು ಹೆಸರಾಯಿತು.

ಶ್ರೀ ಕ್ಷೇತ್ರದಲ್ಲಿ ದೈನಂದಿನ ಪೂಜೆ, ಅನ್ನ ಸಂತರ್ಪಣೆ, ಧಾರ್ಮಿಕ ವಿಧಿವಿಧಾನಗಳಲ್ಲಿ ಸ್ವಲ್ಪ ಲೋಪದೋಷ ಬಂದರೂ ಧರ್ಮಾಧಿಕಾರಿಗಳಿಗೆ ಅಣ್ಣಪ್ಪ ಕನಸಿನಲ್ಲಿ ಬಂದು ಎಚ್ಚರಿಸುತ್ತಾನೆ ಎನ್ನುವ ಮಾತು ಈಗಲೂ ಚಾಲ್ತಿಯಲ್ಲಿದೆ. ಉಡುಪಿಯ ಶ್ರೀ ವಾದಿರಾಜ ತೀರ್ಥರು ಇಲ್ಲಿಗೆ ಬಂದು ಶಿವನಿಗೆ ಪೂಜೆ ಸಲ್ಲಿಸುತ್ತಿದ್ದದ್ದರು ಎನ್ನುವ ಇತಿಹಾಸವಿದೆ. ಹೆಗ್ಗಡೆಯವರ ಕುಟುಂಬದ ಸುಮಾರು 20 ತಲೆಮಾರಿನವರು ಕ್ಷೇತ್ರಕ್ಕಾಗಿ ತಮ್ಮನ್ನು ಮುಡಿಪಾಗಿ ಇಟ್ಟು ಕೊಂಡಿದ್ದಾರೆ. 1918ರಲ್ಲಿ ಮಂಜಯ್ಯ ಹೆಗ್ಗಡೆಯವರು ಕ್ಷೇತ್ರದ ಧರ್ಮಾಧಿಕಾರಿಯಾಗಿ 37 ವರ್ಷ ಸೇವೆ ಸಲ್ಲಿಸಿದರು. ಆ ನಂತರ ರತ್ನವರ್ಮ ಹೆಗ್ಗಡೆಯವರು 13 ವರ್ಷ ಸೇವೆ ಸಲ್ಲಿಸಿದರೆ, ತನ್ನ ಇಪ್ಪತ್ತನೇ ವಯಸ್ಸಿನಿಂದ ಅಂದರೆ 1968ರಿಂದ ಡಾ. ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡು ಥಾರ್ಮಿಕ ವಿಧಿವಿಧಾನಗಳ ಮೂಲಕ ವಿದ್ಯುಕ್ತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

lakಚೈತ್ರಾ ಮಾಸದಲ್ಲಿ ಅಣ್ಣಪ್ಪ ದೈವಗಳ ನೇಮೋತ್ಸವ, ಮಹಾರಥೊತ್ಸವ, ಮಾಘ ಮಾಸದಲ್ಲಿ ಮಹಾಶಿವರಾತ್ರಿ ಮುಂತಾದ ಉತ್ಸವಗಳು ನಡೆದರೆ, ಪ್ರತೀ ವರ್ಷದ ಕಾರ್ತೀಕ ಮಾಸದ ಕಡೆಯ ಐದು ದಿನಗಳು ಬಹಳ ವಿಜೃಂಭಣೆಯಿಂದ ಇಲ್ಲಿ ನಡೆಯುವ ಲಕ್ಷದೀಪೋತ್ಸವ ಬಹಳ ವಿಶೇಷವಾಗಿದೆ

d5ಕಾರ್ತಿಕ ಮಾಸದ ಆರಂಭದಲ್ಲಿ ಎಲ್ಲೆಡೆಯೂ ದೀಪಾವಳಿ ಕಳೆದು ಮಾರ್ಗಶಿರ ಮಾಸದ ಮಾಗಿಯ ಛಳಿ ಅರಂಭವಾಗುವುದಕ್ಕೆ ಮುನ್ನಾ ಕಾರ್ತಿಕ ಮಾಸದ ಕೊನೆಯ ಐದು ದಿನಗಳಲ್ಲಿ ಧರ್ಮಸ್ಥಳದಲ್ಲಿ ಬಹಳ ವಿಜೃಂಭಣೆಯಿಂದ ನಡೆಯುವ ಉತ್ಸವವೇ ಲಕ್ಷದೀಪೋತ್ಸವ. ಈ ಉತ್ಸವವನ್ನು ವಿಶೇಷವಾಗಿ ಶ್ರೀ ಮಂಜುನಾಥ ಸ್ವಾಮಿಯ ವಿಹಾರ ಎಂದೇ ಕರೆಯಲಾಗುತ್ತದೆ. ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಒಯ್ಯುವ ಮೊದಲು ಕ್ಷೇತ್ರಪಾಲ ಪೂಜೆಯನ್ನು ಮಾಡಿದ ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದ ಗರ್ಭಗುಡಿಯ ಸುತ್ತಲೂ ಎರಡು ಬಾರಿ ಮತ್ತು ದೇವಾಲಯದ ಸುತ್ತಲೂ ನಾಲ್ಕು ಬಾರಿ ಮೆರವಣಿಗೆಯಲ್ಲಿ ಕೊಂಡೊಯ್ಯುವುದಲ್ಲದೇ, ನಾದಸ್ವರ ಮತ್ತು ಚಂಡೆಗಳೊಂದಿಗೆ ದೇವಾಲಯದ ಆವರಣದಲ್ಲಿ ಒಂಬತ್ತು ಬಾರಿ ಮೆರವಣಿಗೆ ಮಾಡಲಾಗುತ್ತದೆ. ಇದಾದ ನಂತರ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ, ದೇವಸ್ಥಾನದ ಹೊರಗೆ ಬಂದು ರಾಜಬೀದಿಯಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾ, ಹೊಸಕಟ್ಟೆ, ಲಲಿತೋದ್ಯಾನ, ಕೆರೆಕಟ್ಟೆ, ಕಂಚಿಮಾರುಕಟ್ಟೆ, ಗೌರಿಮಾರುಕಟ್ಟೆಗಳಲ್ಲಿ ವಿಹಾರ ನಡೆಯುತ್ತದೆ. ಸ್ವಾಮಿಯು ಗೌರಿಮಾರು ಕಟ್ಟೆಗೆ ಕೊಂಡೊಯ್ದಾಗ ಅಲ್ಲಿ ಅಷ್ಟಾವಧಾನ ಪೂಜೆಯನ್ನು ನಡೆಸಿದ ನಂತರ ಸಕಲ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಸಮಾನ ಉತ್ಸಾಹದಿಂದ ಮತ್ತೆ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ತಂದು ಗುಡಿ ತುಂಬಿಸಲಾಗುತ್ತದೆ

d4ಈ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ರಾಜಬೀದಿಯಲ್ಲಿ ನಡೆಯುವ ಸ್ವಾಮಿಯ ವಿವಿಧ ಉತ್ಸವಗಳ ಮೆರವಣಿಗೆ, ರಥೋತ್ಸವ ಎಲ್ಲವನ್ನೂ ಆನಂದದಿಂದ ನೋಡಿ ಆನಂದಿತರಾಗುತ್ತಾರೆ. ಲಕ್ಷದೀಪೋತ್ಸವದ ಸಮಯದಲ್ಲಿ ಇಡೀ ಶ್ರೀ ಕ್ಷೇತ್ರವೆಲ್ಲಾ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದನ್ನು ನೋಡಲು ಎರದು ಕಣ್ಣುಗಳು ಸಾಲದಾಗಿವೆ.

d1ಈ ದೀಪೋತ್ಸವದ ಸಮಯದಲ್ಲಿ ಶ್ರೀ ಕ್ಷೇತ್ರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನಗಳು ನೆಡೆಯುತ್ತವೆ. ಕಳೆದ ವರ್ಷ ಕೊರೊನಾ ಮಹಾಮಾರಿಯಿಂದಾಗಿ ಸಾಂಕೇತಿಕವಾಗಿ ನಡೆದಿದ್ದ ದೀಪೋತ್ಸವ ಈ ಬಾರಿ ಕರೋನಾ ತುಸು ನಿರಾಳವಾಗಿದ್ದರೂ ಅನಗತ್ಯವಾಗಿ ಹೆಚ್ಚು ಜನರನ್ನು ಸೇರಿಸಬಾರದೆಂಬ ಸರ್ಕಾರದ ನಿಯಮವಿರುವುದರಿಂದ ಈ ದೀಪೋತ್ಸವವನ್ನು ವಾಹಿನಿಗಳ ಮೂಲಕ ನೇರಪ್ರಸಾರ ಮಾಡುವ ವ್ಯವಸ್ಥೆ ಇರುವ ಕಾರಣ ಭಕ್ತಾದಿಗಳು ಆನ್ಲೈನ್ ಮೂಲಕವೇ ಭಗವಂತನನ್ನು ನೋಡಿ ಪುನೀತರಾಗಬೇಕೆಂದೇ ಧರ್ಮಾಧಿಕಾರಿಗಳ ಆಶಯವಾಗಿದೆ.

ಇಷ್ಟು ಹೊತ್ತು ಧರ್ಮಸ್ಥಳದ ಲಕ್ಷ ದೀಪೋತ್ಸವದ ಝಲಕ್ ನೋಡಿ ಮಂಜುನಾಥ ಸ್ವಾಮಿಯನ್ನು ಕಣ್ತುಂಬಿಸಿಕೊಂಡಿದ್ದೀರಿ ಎನ್ನುವ ಆಶಾಭಾವನೆ ನಮ್ಮದಾಗಿದೆ. ಮುಂದೆ ಈ ಸಾಂಕ್ರಾಮಿಕ ಮಹಾಮಾರಿ ಎಲ್ಲವೂ ಕಡಿಮೆಯಾದಾಗ, ಸಮಯ ಮಾಡಿಕೊಂಡು ಧರ್ಮಸ್ಥಳದ ಮಂಜುನಾಥಸ್ವಾಮಿಯ ದರ್ಶನವನ್ನು ಪಡೆಯೋಣ ಎಂದು ಸಂಕಲ್ಪ ಮಾಡಿಕೊಳ್ಳೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment