ನಂಜನಗೂಡಿನ ಕಪಿಲಾ ಆರತಿ

ಉತ್ತರ ಭಾರತದ ಋಷಿಕೇಶ್, ಹರಿದ್ವಾರ ಮತ್ತು ವಾರಾಣಸಿಯಲ್ಲಿ ಗಂಗಾ ನದಿಗೆ ಪ್ರತಿ ದಿನ ಸಂಜೆ ಗಂಗಾ ಆರತಿ ಮಾಡಲಾಗುತ್ತದೆ. ಈ ಆರತಿಯನ್ನು ನೋಡಲೆಂದೇ ದೇಶ ವಿದೇಶಗಳಿಂದ ಸಹಸ್ರಾರು ಭಕ್ತಾದಿಗಳು ಪ್ರತಿ ದಿನವೂ ಅಲ್ಲಿ ಸೇರಿ ಬಹಳ ವೈವಿಧ್ಯಮಯವಾಗಿ ಅದ್ದೂರಿಯಿಂದ ಮಾಡುವ ಗಂಗಾ ಆರತಿಯನ್ನು ನೋಡಿ ಹೃನ್ಮನಗಳನ್ನು ತಣಿಸಿಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ದಕ್ಷಿಣ ಭಾರತದ ಜೀವನದಿಯಾದ ಕಾವೇರಿ ಮಾತೆಗೂ ಮೊದಲ ಬಾರಿಗೆ ಶ್ರೀರಂಗಪಟ್ಟಣದ ಸ್ನಾನ ಘಟ್ಟದಲ್ಲಿ ಆರತಿಯನ್ನು ಯುವಾಬ್ರಿಗೇಡ್ ಸಾರಥ್ಯದಲ್ಲಿ ಅಕ್ಟೋಬರ್ 17 ಭಾನುವಾರ ಸಂಜೆ 7 ಗಂಟೆಗೆ ಲಕ್ಷದೀಪಗಳನ್ನು ಬೆಳಗುವುದರ ಜೊತೆಗೆ ಐದು ಪುರೋಹಿತರು ಕಾವೇರಿ ಮಾತೆಯ ಪ್ರತಿಮೆಗೆ ಆರತಿಯನ್ನು ಬೆಳಗುವ ಕಾರ್ಯಕ್ರಮವನ್ನು ಸಹಸ್ರಾರು ಜನರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ನಡೆಸಲಾಗಿತ್ತು.

ಈಗ ಅದೇ ರೀತಿಯಲ್ಲಿ ಡಿಸೆಂಬರ್ 5, 2021 ರಂದು ನಂಜನಗೂಡಿನಲ್ಲಿನ ಕಪಿಲಾ ನದಿಯ ಸ್ನಾನ ಘಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲಾದ ಅದ್ದೂರಿಯ ಕಪಿಲಾ ಆರತಿ ಮತ್ತು ಲಕ್ಷ ದೀಪೋತ್ಸವನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ.

ದಕ್ಷಿಣ ಭಾರತದ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನಲ್ಲಿ ನಮ್ಮ ನದಿ, ನಮ್ಮ ಶ್ರದ್ಧೆ ಘೋಷಣೆಯೊಂದಿಗೆ ಕಳೆದ ಮೂರು ವರ್ಷಗಳಿಂದ ಶ್ರದ್ಧೆ ಭಕ್ತಿಯಿಂದ ಈ ಕಪಿಲಾ ಆರತಿ ನಡೆಯಲ್ಪಟ್ಟಿದ್ದು ಈ ಬಾರಿಯೂ ನಂಜನಗೂಡಿನ ಯುವ ಬ್ರಿಗೇಡ್ ಧರ್ಮ ಜಾಗೃತಿ ಬಳಗವು ಈ ದೀಪೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಸುಮಾರು 800 ಮೀಟರ್ ಉದ್ದವಿರುವ ಕಪಿಲಾ ಸ್ನಾನಘಟ್ಟದ ಮೆಟ್ಟಿಲುಗಳಲ್ಲಿ ಜೋಡಿಸಿಟ್ಟಿದ್ದ ಲಕ್ಷಲಕ್ಷ ಸಾಲು ಸಾಲು ದೀಪಗಳಲ್ಲಿ ಜ್ಯೋತಿ ಬೆಳೆಗಿಸುವ ಮೂಲಕ ಕಪಿಲಾ ಮಾತೆಗೆ ಭಕ್ತ ಸಮೂಹ ನಮಿಸಿತು. ಕಾಶಿಯ ಪ್ರಸಿದ್ಧ ಗಂಗಾ ಆರತಿಯ ಮಾದರಿಯಲ್ಲಿ ಯುವಾ ಬ್ರಿಗೇಡ್ ಸ್ವಯಂಸೇವಕರು ನಿನ್ನೆ ಸಂಜೆ ದೇವಸ್ಥಾನದ ಪೇಟೆಯ ಕಪಿಲಾ ನದಿಯ ದಡದಲ್ಲಿ ಕಪಿಲ ಆರತಿಯನ್ನು ಏರ್ಪಡಿಸಿದ್ದರು. ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

kapila_aarathiಈ ಬಾರಿಯ ಕಪಿಲಾ ಆರತಿ ಸಾಮರಸ್ಯದ ಸಂದೇಶವನ್ನು ಸಾರುವಂಥಹದ್ದಾಗಿದ್ದು ಭಿನ್ನ ಭಿನ್ನ‌‌‌ ಪೀಠಗಳ ಐವರು ಪೀಠಾಧೀಶರುಗಳಾದ ಹೊಸದುರ್ಗದ ಶ್ರೀ ಜಗದ್ಗುರುಗಳಾದ ಕುಂಚಿಟಿಗ ಮಹಾಸಂಸ್ಥಾನ ಮಠದ, ಕಾಯಕಯೋಗಿ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿಗಳು, ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಜಗದ್ಗುರುಗಳಾದ ಇಮ್ಮಡಿ ಸಿದ್ಧರಾಮೇಶ್ವರ ಮಹಾ ಸ್ವಾಮೀಜಿಗಳು, ಮಧುರೆ ಭಗಿರಥ ಪೀಠದ ಜಗದ್ಗುರುಗಳಾದ ಶ್ರೀ ಪುರುಷೋತ್ತಮಾನಂದ ಪುರಿ ಮಹಾ ಸ್ವಾಮೀಜಿಗಳು, ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿಗಳು, ಹಾವೇರಿಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರುಗಳಾದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿಗಳು

WhatsApp Image 2021-12-06 at 1.36.10 AMಸ್ನಾನಘಟ್ಟದ ಬಳಿ ಪ್ರತಿಷ್ಠಾಪಿಸಿದ ಓಂಕಾರ ಮೂರ್ತಿ ಬಳಿ ಲಿಂಗಕ್ಕೆ ಪೂಜೆ ಸಲ್ಲಿರುವುದರೊಂದಿಗೆ, ನದಿಗೆ ಸಾಂಪ್ರದಾಯಿಕವಾಗಿ ದೀಪವನ್ನು ಬೆಳಗಿಸಿ ಈ ವೈಭವಪೂರ್ಣವಾದ ಕಪಿಲಾರತಿಗೆ ಮತ್ತುಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.

ಇದಾದ ನಂತರ, ಐವರು ಪುರೋಹಿತರು ಕೈಗಳಲ್ಲಿ ಸಾಂಪ್ರದಾಯಿಕವಾಗಿ ಬೆಳಗುವ ದೀಪಾರತಿಯನ್ನು ಹಿಡಿದು, ನದಿಯನ್ನು ಸ್ತುತಿಸಿ ಸ್ತೋತ್ರಗಳನ್ನು ಪಠಿಸುತ್ತಾ ನದಿಗೆ ಆರತಿ ಬೆಳಗಿದ್ದು ನೆರೆದಿದ್ದ ಸಾವಿರಾರು ಭಕ್ತಾದಿಗಳ ಹೃನ್ಮನಗಳನ್ನು ತಣಿಸಿದ್ದಲ್ಲದೇ ಭಕ್ತಿಯ ಪರಾಕಾಷ್ಟೆಗೆ ಕೊಂಡೋಯ್ದಿತ್ತು.

WhatsApp Image 2021-12-06 at 1.35.22 AMಯುವಾಬ್ರಿಗೇಡ್ ಆಯೋಜಿಸಿದ್ದ ಈ ಲಕ್ಷ ದೀಪೋತ್ಸವ ಕಪಿಲಾ ನದಿ ದಡದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಿಸಿತ್ತು ಎಂದರು ಅತಿಶಯವೇನಲ್ಲ. ಸ್ನಾನಘಟ್ಟದ ​​ಮೇಲೆ ಸುಮಾರು 800 ಮೀಟರ್‌ಗಳಷ್ಟು ವಿಸ್ತಾರವಾದ ಇಡೀ ವಿಸ್ತಾರವನ್ನು ಸಾವಿರಾರು ದೀವಟಿಗೆಗಳಿಂದ ಅಲಂಕರಿಸಲಾಗಿತ್ತು.

ಪಾರಂಪರಿಕ ಹದಿನಾರು ಕಾಲು ಮಂಟಪ, ನೂತನ ಸೇತುವೆ, ನದಿಯ ದಂಡೆ ಹಾಗೂ ಸ್ನಾನಘಟ್ಟದ ಆವರಣದ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರಧಾನ ಆಗಮಿಕರ ಜೊತೆ ಉಳಿದ ಅರ್ಚಕರೂ ಈ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದದ್ದು ವಿಶೇಷವಾಗಿತ್ತು.

WhatsApp Image 2021-12-06 at 1.36.40 AMಕಪಿಲಾರತಿ ಆಂಭವಾಗುವ ಮುನ್ನ ಸುಮಾರು 150 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಏಕಕಾಲದಲ್ಲಿ ನದಿಯ ದಡದ ಮೆಟ್ಟಿಲುಗಳ ಮೇಲೆ ಸರಣಿಯಲ್ಲಿ ಜೋಡಿಸಲಾದ ದೀಪಗಳನ್ನು ಬೆಳಗಿಸಿದರು ಮತ್ತು ಸಾವಿರಾರು ಭಕ್ತರು ನದಿಯಲ್ಲಿ ದೀಪಗಳನ್ನು ತೇಲಿಸಿದರು, ನಂತರ ದೇವಾಲಯದ ಆವರಣದ ಬಳಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು.

ನಂತರ 108 ಮಹಿಳೆಯರು ಪೂರ್ಣಕುಂಭ ಹೊತ್ತ ಸಾಂಪ್ರದಾಯಿಕ ಉಡುಗೆಯಲ್ಲಿ ನಾದಸ್ವರ ಹಾಗೂ ಮಂತ್ರ ಪಠಣದ ನಡುವೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರು. ಶಿವಲಿಂಗ ಮೂರ್ತಿಗೆ ಅಷ್ಟತೀರ್ಥ ಅಭಿಷೇಕ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು.

ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಎಸ್.ಚಂದ್ರಶೇಖರ್ ಮತ್ತಿತರರು ಉಪಸ್ಥಿತಿ ಎಲ್ಲರ ಗಮನವನ್ನು ಸೆಳೆಯಿತು.

WhatsApp Image 2021-12-06 at 1.36.26 AMಐವರು ಸಾಧುಗಳು ಕಪಿಲೆಗೆ ಭಿನ್ನ ಭಿನ್ನ ಕ್ಷೇತ್ರಗಳಿಂದ ತಂದಿದ್ದ ತೀರ್ಥ ಸಮರ್ಪಣೆಯೊಂದಿಗೆ ಆರಂಭವಾದ ಕಾರ್ಯಕ್ರಮ, ದಡದುದ್ದಕ್ಕೂ ಬೆಳಗಿದ ದೀಪಗಳು ಮತ್ತು ಕಪಿಲೆಗೆ ಆರತಿ ಬೆಳಗಿದ ವೈಭವಗಳಿಂದ ಕೂಡಿ ನೆರೆದಿದ್ದವರ ಮನ ಸೆಳೆಯಿತು. ಭಕ್ತಾದಿಗಳೆಲ್ಲರೂ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳಿದ ನಂತರವೂ ಸುಮಾರು 75 ಸಾವಿರಕ್ಕೂ ಅಧಿಕ ದೀಪಗಳು ಪ್ರಜ್ವಲಿಸುತ್ತಿದ್ದದ್ದು ಈ ಕಾರ್ಯಕ್ರಮಕ್ಕಾಗಿ ಹಗಲಿರಳೂ ಶ್ರಮಿಸಿದ್ದ ಕಾರ್ಯಕರ್ತರ ಶ್ರಮಕ್ಕೆ ಪ್ರತಿಫಲದಂತೆ ಇದ್ದದ್ದಲ್ಲದೇ ಮುಂದಿನ ವರ್ಷದ ಕಾರ್ಯಕ್ರಮಕ್ಕೆ ಮತ್ತಷ್ಟು ಹುಮ್ಮಸ್ಸನ್ನು ಕೊಡುವಂತಿತ್ತು

WhatsApp Image 2021-12-06 at 1.35.09 AMನಮ್ಮ ಸನಾತನ ಧರ್ಮದ ಅರಿವಿಲ್ಲದೇ ಪಾಶ್ಚಾತ್ಯ ಅಂಧಾನುಕರಣದಲ್ಲೇ ಮುಳುಗಿಹೋಗಿರುವ ನಮ್ಮ ಇಂದಿನ ಯುವಜನತೆಗೆ ಯುವಾ ಬ್ರಿಗೇಡ್ ಆರಂಭಿಸಿರುವ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳ ಅರಿವಾಗಿ ಖಂಡಿತವಾಗಿಯೂ ನಮ್ಮ ಸನಾತನ ಧರ್ಮದ ಉಳಿಸಿ ಬೆಳಸಲು ಕಟಿ ಬದ್ಧರಾಗುವುದರಲ್ಲಿ ಸಂದೇಹವೇ ಇಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s