ಎದುರು ಮನೆಯಲ್ಲಿ ಮಕ್ಕಳು ಹುಟ್ಟಿದ್ರೇ ನಮ್ಮನೆಲೀ ತೊಟ್ಟಿಲು ಆಡ್ಸೋದೇ?

ಕಳೆದ ಒಂದು ವಾರದಲ್ಲಿ ಭಾರತೀಯ ಮೂಲದ ಇಬ್ಬರು ಹೆಸರುಗಳು ಎಲ್ಲೆಡೆಯಲ್ಲೂ ಪ್ರಸಿದ್ದಿ ಪಡೆದಿತ್ತು. ಮೊದಲನೆಯದ್ದು ಭಾರತೀಯ ಮೂಲದ ಅಮೆರಿಕನ್ ಪರಾಗ್ ಅಗರವಾಲ್, ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾದರೆ, ಎರಡನೆಯದ್ದು ಮುಂಬೈನಲ್ಲಿ ಹುಟ್ಟಿ ಬಾಲ್ಯದಲ್ಲಿಯೇ ಕುಟುಂಬದೊಂದಿಗೆ ನ್ಯೂಜಿಲೆಂಡಿಗೆ ಹೋಗಿ ಅಲ್ಲಿಯ ಕ್ರಿಕೆಟ್ ತಂಡದ ಭಾಗವಾಗಿ ಭಾರತದ ವಿರುದ್ದ ಮುಂಬೈ ಕ್ರಿಕೆಟ್ ಟೆಸ್ಟಿನ ಮೊದಲನೇ ಇನ್ನಿಂಗ್ಸಿನಲ್ಲಿ ಎಲ್ಲಾ 10 ವಿಕೆಟ್ ಪಡೆದು ವಿಶ್ವ ದಾಖಲೆಯನ್ನು ಸರಿಗಟ್ಟಿದ ಅಜಾಜ್ ಪಟೇಲ್ ಬಗ್ಗೆ.

ಪ್ರತೀ ಬಾರಿಯೂ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಜಾಗತಿಕ ಮಟ್ಟದಲ್ಲಿ ಅಥವಾ ಬಹುರಾಷ್ಟ್ರೀಯ ಕಂಪನಿಯ ಸಿಇಒ ಆದಾಗ ನಾವು ಬಹಳಷ್ಟು ಸಂಭ್ರಮಿಸುತ್ತೇವೆ. ನಮ್ಮ ಬೆನ್ನು ನಾವೇ ತಟ್ಟಿಕೊಳ್ಳಲು ಆರಂಭಿಸುತ್ತೇವೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ನೆರೆ ರಾಷ್ಟ್ರ ಪಾಕಿಸ್ಥಾನ ತನ್ನ ದೇಶದ ಪ್ರಜೆಗಳನ್ನು ಭಯೋತ್ಪಾಕರನ್ನಾಗಿ ಮಾಡುತ್ತಿದ್ದರೆ, ನಾವು ಭಾರತೀಯರು ಅಮೇರಿಕನ್ ಕಾರ್ಪೊರೇಟ್ಗಳನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆಯುತ್ತಿದ್ದೇವೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೊಚ್ಚಿಕೊಳ್ಳುತ್ತೇವೆ.

CEO

ಆದರೆ ವಾಸ್ತವದ ಸಂಗತಿಯೇನೆಂದರೆ, ಅಮೇರಿಕಾದ ಉಪಾಧ್ಯಕ್ಷೆ, ಪೆಪ್ಸಿ, ಗೂಗಲ್‌, ಮೈಕ್ರೋಸಾಫ್ಟ್‌, ಟ್ವಿಟರ್ ನ ಸಿಇಒಗಳು ಭಾರತೀಯ ಯುವಜನರ ಬೌದ್ಧಿಕ ಶಕ್ತಿಯನ್ನು ತಮ್ಮ ಕಂಪನಿಯ ಬೆಳವಣಿಗೆ ಹೇಗೆ ಬೆಳೆಸಿಕೊಳ್ಳಬಹುದೆಂಬ ಆಸಕ್ತಿ ಹೊಂದಿರುತ್ತಾರೆಯೇ ಹೊರತು ಅವರಿಂದ ಭಾರತದ ಅಭಿವೃದ್ಧಿಗೆ ಕಿಂಚಿತ್ತೂ ಅನುಕೂಲವಿರುವುದಿಲ್ಲ. ಏಕೆಂದರೆ ಅವರೆಲ್ಲರೂ ಭಾರತೀಯ ಮೂಲದವರೇ ಹೊರತು ಅವರು ಭಾರತೀಯರಲ್ಲ. ಅವರು ಭಾರತೀಯ ಪೌರತ್ವವನ್ನು ಎಂದೋ ಹಿಂದಿರುಗಿಸಿ ಅಮೇರಿಕನ್ನರಾಗಿ ಹೋಗಿರುತ್ತಾರೆ ಎನ್ನುವದಷ್ಟೇ ಸತ್ಯ.

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು, ಅಪ್ಪಟ ಭಾರತೀಯರೇ ಆದ, ಅಂಬಾನಿ, ಅದಾನಿ, ಟಾಟಾ, ಬಿರ್ಲಾ, ಮಹೇಂದ್ರಾ, ಇನ್ಫೋಸಿಸ್ ಮುಂತಾದ ಕಂಪನಿಗಳು ಭಾರತದಲ್ಲಿ ಹೊಸಾ ಯೋಜನೆಗಳು ಕೈಗೆತ್ತಿಕೊಂಡಲ್ಲಿ ಅಥವಾ ಸರ್ಕಾರದ ಸಂಸ್ಥೆಗಳು ಖಾಸಗೀಕರಣಗೊಂಡಾಗ ಅವುಗಳನ್ನು ಕೈಗೆತ್ತಿಕೊಂಡಲ್ಲಿ ಇದ್ದಕ್ಕಿದ್ದಂತೆಯೇ ಮೈಮೇಲೆ ಬೆಂಕಿ ಬಿದ್ದಂತೆ ಆಡುವುದನ್ನು ಕಂಡಾಗ, ಸ್ವಾತ್ರಂತ್ಯ್ರ ಬಂದು 70 ವರ್ಷಗಳು ಕಳೆದರೂ ಇನ್ನೂ ಬಿಳಿ ತೊಗಲಿನವರ ಗುಲಾಮಿತನದಿಂದ ಹೊರಬಂದಿಲ್ಲದಿರುವುದಕ್ಕೆ ವಿಪರ್ಯಾಸ ಎನಿಸುತ್ತದೆ.

ಸ್ವಲ್ಪ ತಾಳ್ಮೆ ವಹಿಸಿ ನೋಡಿದಲ್ಲಿ ಈ ಭಾರತೀಯರ ಎಲ್ಲಾ ಕಂಪನಿಗಳು ಭಾರತದಲ್ಲಿಯೇ ಭಾರತೀಯರಿಗಾಗಿಯೇ ಆರಂಭವಾಗಿದ್ದು ಭಾರತೀಯ ಉತ್ಪನ್ನಗಳನ್ನು ಸೃಷ್ಟಿಸಿವೆ. ಇದೇ ಕಂಪನಿಗಳು ಸಾಮಾನ್ಯ ಜನರಿಗೆ ದೊಡ್ಡ ಷೇರುದಾರರ ಸಂಪತ್ತನ್ನು ಸೃಷ್ಟಿಸಿದ್ದಲ್ಲದೇ, ನಮ್ಮ ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಜೊತೆಗೆ ನವೀಕರಿಸಬಹುದಾದ ಇಂಧನ ಕ್ಷೇತ್ರ, ತೈಲ ಮತ್ತು ಅನಿಲ, ಆಹಾರ ಪೂರೈಕೆ ಸರಪಳಿ, ಬಟ್ಟೆ, ದೂರಸಂಪರ್ಕ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ತಂದಿದ್ದನ್ನು ನೆನಪಿಸಿಕೊಳ್ಳುವುದೇ ಇಲ್ಲ. ರಿಲಯನ್ಸ್ ಕಂಪನಿ ರೂ 500/-ಕ್ಕೆ ಸಿ.ಡಿ.ಎಮ್.ಎ ಪೋನ್ ಆರಂಭಿಸಿದಾಗಲೇ ಸಾಮಾನ್ಯ ಭಾರತೀಯನ ಕೈಯಲ್ಲೂ ಮೊಬೈಲ್ ರಿಂಗಣಿಸಗೊಟಗಿತ್ತು. ಅದೇ ಜಿಯೋ ಬಂದಾಗಲಷ್ಟೇ ಕೇವಲ ತಿಂಗಳಿಗೆ 300/- ವೆಚ್ಚದಲ್ಲಿ ಅನಿರ್ಧಿಷ್ಟ ಕರೆಗಳ ಜೊತೆಗೆ ಇಂಟರ್ನೆಟ್ ಸೇವೆಯನ್ನು ಪಡೆಯಲಾರಂಭಿಸಿದರು ಎನ್ನುವುದನ್ನು ಕೆಲವರು ಜಾಣತನದಿಂದ ಮರೆಮಾಚುತ್ತಾರೆ.

indian2

ವಾಸ್ತವವೆಂದರೆ, ನಾವು ಭಾರತೀಯರು ಕೇವಲ ಭಾವನಾತ್ಮಕವಾಗಿ ವ್ಯವಹರಿಸುತ್ತೇವೆಯೇ ಹೊರತು ವಾಸ್ತವದ ಅಂಕಿ ಅಂಶಗಳತ್ತ ಗಮನವನ್ನು ಹರಿಸುವುದೇ ಇಲ್ಲ. 20 ನಾದೆಲ್ಲಾ, 200 ಪಿಚೈ & 1000 ಪರಾಗ್‌ಗಳಿಗಿಂತ 10 ಪಟ್ಟು ಹೆಚ್ಚಿನ ಉದ್ಯೋಗಾವಕಾಶವನ್ನು ಅಂಬಾನಿ, ಅದಾನಿ, ಟಾಟ, ಬಿರ್ಲಾಗಳು ಭಾರತದಲ್ಲಿ ಸಂಪತ್ತು ಮತ್ತು ಉದ್ಯೋಗಗಳನ್ನು ಸೃಷ್ಟಿಸಿದ್ದರೂ ಭಾರತದಲ್ಲಿ ಅವರನ್ನು ದ್ವೇಷಿಸುವರೇ ಹೆಚ್ಚಾಗಿರುವುದು ಅಚ್ಚರಿಯಾಗಿದೆ.

ಈ ಕೆಳಗಿನ ಅಂಕಿ ಅಂಶಗಳತ್ತ ಒಮ್ಮೆ ಕಣ್ಣಾಡಿಸಿ.

  • Tata Group 7,50,000 ಉದ್ಯೋಗಿಗಳನ್ನು ಹೊಂದಿದೆ.
  • L&T 3,38,000 ಜನರನ್ನು ನೇಮಿಸಿಕೊಂಡಿದೆ.
  • Infosys 2,60,000 ಉದ್ಯೋಗಿಗಳನ್ನು ಹೊಂದಿದೆ.
  • Mahindra 2,60,000 ಉದ್ಯೋಗಿಗಳನ್ನು ಹೊಂದಿದೆ.
  • Reliance Industries 2,36,000 ಜನರನ್ನು ಹೊಂದಿದೆ.
  • WIPRO 2,10,000 ಉದ್ಯೋಗಿಗಳನ್ನು ಹೊಂದಿದೆ.
  • HCL 1,67,000 ಉದ್ಯೋಗಿಗಳನ್ನು ಹೊಂದಿದೆ.
  • HDFC ಬ್ಯಾಂಕ್ 1,20,000 ಉದ್ಯೋಗಿಗಳನ್ನು ಹೊಂದಿದೆ.
  • ICICI ಬ್ಯಾಂಕ್ 97,000 ಉದ್ಯೋಗಿಗಳನ್ನು ಹೊಂದಿದೆ.
  • TVS group 60,000 ಉದ್ಯೋಗಿಗಳನ್ನು ಹೊಂದಿದೆ.

ಈ ಹತ್ತು ಕಾರ್ಪೊರೇಟ್‌ಗಳಿಂದಲೇ ಸುಮಾರು 25 ಲಕ್ಷಕ್ಕೂ ಅಧಿಕ ಭಾರತೀಯರಿಗೆ ಉದ್ಯೋಗ ದೊರೆತಿದೆ. ಈ ಎಲ್ಲಾ ಕಂಪನಿಯ ತಮ್ಮ ಕೆಲಸಗಾರರಿಗೆ ಅತ್ಯಂತ ಗೌರವಾನ್ವಿತ ಸಂಬಳವನ್ನು ನೀಡುತ್ತವೆಯಲ್ಲದೇ, ಈ ಎಲ್ಲಾ ಕೆಲಸಗಾರರ ತೆರಿಗೆಗಳು ಮೂಲದಲ್ಲಿ ತೆರಿಗೆ ಕಡಿತವಾಗಿ (TDS) ಭಾರತದ ಆದಾಯವನ್ನು ಹೆಚ್ಚಿಸುತ್ತಿದ್ದರೆ, ಇನ್ನು ಪರೋಕ್ಷವಾಗಿ ಇವರೆಲ್ಲರೂ ಮಾಡುವ ವಿವಿದ ಖರ್ಚಿನಿಂದ ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ದೊರೆತಿರುವುದೂ ಸುಳ್ಳೇನಲ್ಲ. ಈ ಕಾರ್ಪೊರೇಟ್ ಕಂಪನಿಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡಿರುವ ಕೆಲಸದ( ಸುಮಾರು 50-52 ಲಕ್ಷ) ಅರ್ಧದಷ್ಟು ಉದ್ಯೋಗಿಗಳಿಗೆ ಆಶ್ರಯ ನೀಡಿದ್ದರೆ ಆರ್ಥಿಕವಾಗಿ ಸರ್ಕಾರೀ ನೌಕರರಿಗಿಂತಲೂ ಅದೆಷ್ಟೋ ಪಾಲು ಹೆಚ್ಚಿನ ಆರ್ಥಿಕವಾದ ಸಧೃಢತೆಯನ್ನು ನೀಡಿವೆ ಎನ್ನುವುದೂ ಸತ್ಯ.

ಒಟ್ಟಿನಲ್ಲಿ ಸರ್ಕಾರವು ಒಂದು ಕೋಟಿ ಜನರಿಗೆ (1%) ಉದ್ಯೋಗಗಳನ್ನು ಒದಗಿಸಿದರೆ, ಖಾಸಗಿ ಮತ್ತು ಸಂಘಟಿತ ವಲಯವು 6-8% ಅನ್ನು ಒದಗಿಸುತ್ತದೆ ಮತ್ತು ಉಳಿದ 92% ಜನರು ಅಸಂಘಟಿತ ವಲಯದಲ್ಲಿ ಉದ್ಯೋಗಿಗಳಾಗಿದ್ದಾರೆ.

indian

ಹಾಗಾಗಿ, ನಮ್ಮ ದೇಶಕ್ಕೆ ಒಂದು ಚೂರು ಉಪಯೋಗವಿಲ್ಲದ, ಭಾರತದ ಪೌರತ್ವವನ್ನು ಎಂದೋ ತ್ಯಜಿಸಿದವರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಸ್ಥಾನ ಪಡೆದಾಗ ಎದುರು ಮನೆಯಲ್ಲಿ ಮಗು ಹುಟ್ಟಿದಾಗ ನಮ್ಮ ಮನೆಯಲ್ಲಿ ತೊಟ್ಟಿಲು ಆಡಿಸುವಂತೆ ಸಂಭ್ರಮಿಸುವ ಬದಲು. ನಮ್ಮ ಪ್ರಧಾನಿಗಳ ಆಶಯದಂತೆ ಆತ್ಮನಿರ್ಭರ್ (ಸ್ವಾಭೀಮಾನಿ) ಗಳಾಗಿ ಪರೋಕ್ಷವಾಗಿ ಬಹುರಾಷ್ಟ್ರೀಯ ಕಂಪನಿಗಳನ್ನು ಅನಗತ್ಯವಾಗಿ ತಲೆಯ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುವುದಕ್ಕಿಂತಲೂ ಭಾರತೀಯರು, ಭಾರತದಲ್ಲೇ ಅರಂಭಿಸಿರುವ ಕಂಪನಿಗಳ ಉತ್ಪನ್ನಗಳನ್ನು ಕೊಳ್ಳುವುದರ ಮೂಲಕ, ಭಾರತದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸೋಣ. ಭಾರತದಲ್ಲಿ, ಭಾರತಕ್ಕಾಗಿ, ಭಾರತೀಯರಾಗಿ ಕೆಲಸ ಮಾಡುತ್ತಿರುವವರ ಬಗ್ಗೆ ಹೆಮ್ಮೆ ಪಡೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಆಂಗ್ಲ ಸಂದೇಶವೊಂದರಿಂದ ಪ್ರೇರಿತವಾದ ಲೇಖನ

One thought on “ಎದುರು ಮನೆಯಲ್ಲಿ ಮಕ್ಕಳು ಹುಟ್ಟಿದ್ರೇ ನಮ್ಮನೆಲೀ ತೊಟ್ಟಿಲು ಆಡ್ಸೋದೇ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s