ಅಪ್ಪಾ ಹಾಕಿದ ಆಲದ ಮರ

ಅದು 80ರ ದಶಕ SSLC ಆದ ನಂತರ Computer Science Diploma ಮಾಡಿದರೆ ಜೀವನದಲ್ಲಿ ಬೇಗ ನೆಲೆಗೊಳ್ಳಬಹುದು ಎನ್ನುವುದು ನನ್ನಾಸೆಯಾಗಿತ್ತು. ಆದರೆ ಅಮ್ಮನೇಕೋ ಮಗ ಇನ್ನೂ ಚಿಕ್ಕ ಹುಡುಗ. ಹೊರೆಗಿನ ಪ್ರಪಂಚದ ಜ್ಞಾನ ತಿಳಿಯೋದಿಲ್ಲ. ಹೇಗೂ ಇಲ್ಲೇ BEL college ಇದೆಯಲ್ಲಾ ಇಲ್ಲೇ ಪಿಯೂಸಿ ಮಾಡ್ಲಿ ಬಿಡಿ. ಆ ಮೇಲೆ ನೋಡಿದರಾಯ್ತು ಎಂಬ ತೀರ್ಮಾನ ತೆಗೆದುಕೊಂಡು ಬಿಇಎಲ್ ಕಾಲೇಜಿನಲ್ಲಿ ವಿಜ್ಞಾನದ ವಿಷಯಕ್ಕೆ ಅರ್ಜಿ ಹಾಕಿಸಿದರು. ಮೊದಲನೇ ಲಿಸ್ಟಿನಲ್ಲಿಯೇ ನನ್ನ ಹೆಸರಿದ್ದದ್ದು ನೋಡಿ ಸ್ವರ್ಗಕ್ಕೆ ಮೂರೇ ಗೇಣು. ಕೆಲವೇ ನೂರು ರೂಗಳಲ್ಲಿ ಅಡ್ಮಿಷನ್ ಆಗಿ ಮೊದಲನೇ ದಿನ ತರಗತಿಯಲ್ಲಿ ಕುಳಿತಾಗಲೇ ಅದು ಸ್ವರ್ಗವಲ್ಲ ನರಕ ಎಂಬುದರ ಅರಿವಾಗಿದ್ದು. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಅಂಕಗಣಿತ ಬೀಜ ಗಣಿತ ಎಂದು ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ, Physics, chemistry, Botonny, zoology, arithmetic, algebra ಎನ್ನುವ ಎಲ್ಲಾ ಆಂಗ್ಲ ಪದಗಳೆಲ್ಲಾ ಕುಳ್ಳನೆಯ ಆಟಗಾರ ಜಿ. ಆರ್ ವಿಶ್ವನಾಥ ಅವರಿಗೆ ವಿಂಡೀಸ್ ದೈತ್ಯರಾದ ಅಂಡಿರಾಬರ್ಟ್, ಜೋಯಲ್ ಗಾರ್ನರ್, ಮಾಲ್ಕಮ್ ಮಾರ್ಷಲ್ ಅವರು ಎಸೆಯುತ್ತಿದ್ದ ಬೌನ್ಸರ್ ಗಳ ರೀತಿಯಾಗಿತ್ತು. ವಿಶಿಯೇನೋ ಛಲ ಮತ್ತು ಪರಿಶ್ರಮದಿಂದ ಅವರನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಪಡೆದುಕೊಂಡರು. ಆದರೆ ನನ್ನ ವಯಸ್ಸು ತರುಣಾವಸ್ಥೆಗೆ ಬಂದಿದ್ದರೂ ಬೌದ್ಧಿಕವಾಗಿ ಆ ಮಟ್ಟಕ್ಕೆ ಬೆಳೆಯದಿದ್ದ ಕಾರಣ, ಎಲ್ಲವೂ ಕಷ್ಟ ಎಂದೇ ಭಾವಿಸಿದ್ದ ಕಾರಣ, ಪರಿಶ್ರಮವೇ ಪಡದ ಕಾರಣ ಪಿಯೂಸಿ ಪರೀಕ್ಷೆಯಲ್ಲಿ ಮೊತ್ತ ಮೊದಲ ಬಾರಿಗೆ ಫೇಲ್ ಆಗಿದ್ದೆ.

ಶ್ರೀಕಂಠ ಪಿಯೂಸಿಯಲ್ಲಿ ಫೇಲ್ ಅಂತೇ ಎನ್ನುವ ವಿಷಯವೇ ಆಕಾಲದಲ್ಲಿ ಒಂದು ರೀತಿಯ ಬ್ರೇಕಿಂಗ್ ನ್ಯೂಸ್ ಆಗಿತ್ತು. SSLC. ಯವರೆಗೂ ತರಗತಿಯಲ್ಲಿ ಅಗ್ರಗಣ್ಯನಾಗಿ ಯಾವುದೇ ಚರ್ಚಾಸ್ಪರ್ಥೆ, ಪ್ರಭಂಧ, ಏಕಪಾತ್ರಾಭಿನಯ, ನಾಟಕ ಸ್ಪರ್ಥೆಯಲ್ಲಿ ಭಾಗವಹಿಸಿದರೆ, ಪ್ರಶಸ್ತಿ ನನಗೇ ಕಟ್ಟಿಟ್ಟ ಬುತ್ತಿ ಎಂಬಂತಿದ್ದ ನನ್ನ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಫೇಲ್ ಆದದ್ದನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗಿರಲಿಲ್ಲ. ಆ ರೀತಿಯ ಆಘಾತವನ್ನು ತಡೆಯಲಾರದೇ, ಮಲ್ಲೇಶ್ವರದ ಆಟದ ಮೈದಾನದಲ್ಲಿ ಕುಳಿತು ಒಬ್ಬನೇ ಅತ್ತು ನೋವನ್ನು ಹೊರಹಾಕಿದ್ದೆ. ಜೀವನದಲ್ಲಿ ಏನೋ ಮಹತ್ತರವಾದದ್ದನ್ನು ಸಾಧಿಸುತ್ತಾನೆ ಎಂದು ಭಾವಿಸಿದ್ದ ಅಪ್ಪಾ ಅಮ್ಮಂದಿರಿಗೂ ಬಹಳ ನೋವುಂಟಾಗಿದ್ದರೂ ಅದನ್ನು ವ್ಯಕ್ತಪಡಿಸಲಾರದೇ ಚಡಪಡಿಸುತ್ತಿದ್ದದ್ದು ನನಗೆ ಅರಿವಾಗಿತ್ತು. ಆಗಲೇ ಮತ್ತೊಮ್ಮೆ ನನಗೆ Computer Science Diploma ಮಾಡಿದರೆ ಜೀವನದಲ್ಲಿ ಬೇಗ ನೆಲೆಗೊಳ್ಳಬಹುದು ಎಂಬ ಆಸೆ ಚಿಗುರೊಡೆದು ಅಪ್ಪನ್ನನ್ನು ಕಾಡಿ ಬೇಡಿ ಬೆಂಗಳೂರಿನ ಆರ್ .ಟಿ. ನಗರದ ಆದರ್ಶ ಪಾಲಿಟೆಕ್ನಿಕ್ ಸೇರಿಕೊಂಡಿದ್ದೆ.

ಅಲ್ಲಿಯವರೆಗೂ ನನ್ನ ಶಿಕ್ಷಣವೆಲ್ಲಾ ಸರ್ಕಾರೀ ಶಾಲೆ, ಬಿಇಎಲ್ ಪ್ರಾಥಮಿಕ, ಪೌಢಶಾಲೆ ಮತ್ತು ಕಾಲೇಜಿನಲ್ಲಿ ಬಹುತೇಕ ಉಚಿತ ಎನ್ನುವಷ್ಟರ ಖರ್ಚಿನಲ್ಲಿ ಆಗಿತ್ತು. ಮೊತ್ತ ಮೊದಲ ಬಾರಿಗೆ 5000/- ರೂ ಡೋನೇಶನ್ ಮತ್ತು ವರ್ಷಕ್ಕೆ 1500/- ಫೀಸ್ ಕಟ್ಟಬೇಕು ಎನ್ನುವುದು ಬಹಳ ದುಬಾರಿ ಎನಿಸಿತ್ತು. ಅಗಷ್ಟೇ ಎರಡು ಕಂಟ್ರಾಕ್ಟರ್ ಗಳಿಂದ ಮೋಸ ಹೋಗಿ ಹಾಗೂ ಹೀಗೂ ಕಟ್ಟಿದ್ದ ಮನೆಯ ಸಾಲವೇ ಬೆಟ್ಟದಷ್ಟಿದ್ದ ಕಾರಣ ಈ ಫೀಸ್ ತುಂಬಾ ದೊಡ್ಡದಾಗಿಯೇ ಇತ್ತು. ನೀರಿನಲ್ಲಿ ಬಿದ್ದಾಗಿದೆ. ಈಗ ಸುರಕ್ಷಿತವಾಗಿ ದಡ ಸೇರುವುದೇ ಬಾಕಿ ಎಂದು ಮತ್ತಾರದೋ ಬಳಿ ಸಾಲ ಮಾಡಿ ಮೊದಲ ವರ್ಷದ ಫೀ ಮತ್ತು ಡೋನೇಷನ್ನಿನ ಮೊದಲ ಕಂತು ಎರಡೂ ಸೇರಿಸಿ 3000/- ರೂಗಳನ್ನು ಕಟ್ಟಿದ ನಂತರ ಅಪ್ಪಾ ಹೇಳಿದ ಮಾತು ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

ಪರೀಕ್ಷೆಯಲ್ಲಿ ಫೇಲ್ ಆದರೆ ಅದು ಜೀವನದಲ್ಲಿ ಫೇಲ್ ಆದಂತೇನಲ್ಲ. ಜೀವನದಲ್ಲಿ ಸಾಧಿಸುವುದು ಬಹಳಷ್ಟಿದೆ. ಇದೊಂದು ಸಣ್ಣ ಅಡೆತಡೆಯಷ್ಟೇ. ಹಾಗಾಗಿ ನಮ್ಮ ಮಗ ಜೀವನದಲ್ಲಿ ಮುಂದೆದೂ ಸೋಲಬಾರದು ಎಂಬ ಮಹದಾಸೆಯಿಂದ ನಮ್ಮ ಶಕ್ತಿ ಮೀರಿ ನಿನ್ನ ಆಸೆಯಂತೆಯೇ ನೀನು ಕೇಳಿದ ಕಾಲೇಜಿಗೆ ಸೇರಿಸಿ ಒಬ್ಬ ತಂದೆ ತಾಯಿಯರಾಗಿ ಮಗನಿಗೆ ಮಾಡ ಬೇಕಾದ ಕರ್ತವ್ಯವನ್ನು ನಾವು ನಿಭಾಯಿಸಿದ್ದೇವೆ. ನಾನು ವಾರಾನ್ನ ಮಾಡಿ, ಮನೆ ಮನೆಗೆ ಪೇಪರ್ ಹಂಚಿಕೊಂಡು ಓದಿ ಬಿಇಎಲ್ ಕಾರ್ಖಾನೆ ಸೇರಿಕೊಂಡು ನಿಮ್ಮ ಜೀವನವನ್ನು ರೂಪಿಸಲು ಪರಿಶ್ರಮ ಪಡುತ್ತಿದ್ದೇನೆ. ಉಳಿದ್ದದ್ದು ನಿನಗೆ ಬಿಟ್ಟಿದ್ದು ಎಂದು ಅಂದು ನನ್ನ ಹೃದಯಕ್ಕೆ ನಾಟುವಂತೆ ಕಾಲೇಜಿನ ಪ್ರಾಂಶುಪಾಲರ ಮುಂದೆ ಹೇಳಿದ್ದು ಈಗ ಹೇಳಿದಂತಿದೆ ಮನಸ್ಸಿನಲ್ಲಿ ಅಚ್ಚೊತ್ತಿದೆ.

ಮನೆಯ ಅಂದಿನ ಆರ್ಥಿಕ ಪರಿಸ್ಥಿತಿ ಮತ್ತು ಅಪ್ಪಾ ಹೇಳಿದ ಮಾತು ಖಂಡಿತವಾಗಿಯೂ ಮನಸ್ಸಿಗೆ ನಾಟಿತ್ತು. ನಾನು ಮಾಡಿದ ತಪ್ಪಿನ ಅರಿವಾಗಿತ್ತು. ಅಪ್ಪನಿಗೆ ಅರ್ಥಿಕವಾಗಿ ಮುಂದೆದೂ ಹೊರೆಯಾಗಬಾರದು ಎಂದು ಅಂದೇ ನಿರ್ಧರಿಸಿದೆ. ಈಗಾಗಲೇ 100/- ಕಳೆದು ಕೊಂಡಿದ್ದಕ್ಕಾಗಿ ಒಂದು ವರ್ಷಗಳ ಕಾಲ ಮನೆ ಮನೆಗೂ ಹಾಲು ಸರಬರಾಜು ಮಾಡಿ ಗೌರವಯುತವಾಗಿ ಹಣ ಸಂಪಾದಿಸಿದ ಅನುಭವವೂ ಇತ್ತು. Diploma ತರಗತಿಯಲ್ಲಿ ಪ್ರತಿಯೊಬ್ಬರಿಗೂ Lab records ಬರೆಯಲು 5-6 ಉದ್ದನೆಯ ಪುಸ್ತಕಗಳು ಅಗತ್ಯವಿದ್ದು ಪತೀ ಪುಸ್ತಕಕ್ಕೂ ಆಗಿನ ಕಾಲದಲ್ಲಿ6 ರೂಪಾಯಿ ವೆಚ್ಚವಾಗುತ್ತಿತ್ತು. ಅಷ್ಟರಲ್ಲಾಗಲೇ ನನಗೆ ಅವೆನ್ಯೂ ರೋಡ್ ಸ್ಟೇಷನರಿ ಅಂಗಡಿಗಳ ಪರಿಚಯವಿದ್ದ ಕಾರಣ, ಅಲ್ಲಿಗೆ ಹೋಗಿ ವಿಚಾರಿಸಿದಾಗ ಒಂದು ಡಜನ್ ತೆಗೆದುಕೊಂಡರೆ 5 ರೂಪಾಯಿಗೆ ಕೊಡುತ್ತೇನೆ ಎಂದರು. ಕೂಡಲೇ ನನ್ನ ಸಹಪಾಠಿಗಳಿಗೆ ನೀವು ಮುಂಗಡವಾಗಿ ಹಣ ಕೊಟ್ಟಲ್ಲಿ ನಾನು ಐದೂವರೆ ರೂಪಾಯಿಗಳಿಗೆ ಒಂದರಂತೆ ಪುಸ್ತಕಗಳನ್ನು ಕೊಡುತ್ತೆನೆ ಎಂದು ನನ್ನ ರೆಕಾರ್ಡ್ ಪುಸ್ತಕವನ್ನು ತೋರಿಸಿದೆ. ಅವರೆಲ್ಲರಿಗೂ ಅದು ಮೆಚ್ಚುಗೆಯಾಗಿ ಬಹುತೇಕರು ಪ್ರತೀ ಪುಸ್ತಕಕ್ಕೂ 50 ಪೈಸೆ ಉಳಿಸುವ ಸಲುವಾಗಿ ನನಗೆ ಮುಂಗಡವಾಗಿ ಹಣ ನೀಡಿದರು. ಸಂಜೆ ಕಾಲೇಜು ಮುಗಿಸಿಕೊಂಡು ಅವಿನ್ಯೂ ರಸ್ತೆಗೆ ಹೋಗಿ ಅಗತ್ಯವಿದ್ದಷ್ಶು ಪುಸ್ತಕಗಳನ್ನು ಖರೀದಿಸಿ ಮಾರನೇ ದಿನ ತರಗತಿಯಲ್ಲಿ ಅದನ್ನು ಕೊಡುತ್ತಿದ್ದೆ. ಹೀಗೆ ಪದೇ ಪದೇ ಹೆಚ್ಚು ಹೆಚ್ಚು ಪುಸ್ತಕಗಳನ್ನು ಖರೀದಿಸುತ್ತಿದ್ದ ಕಾರಣ ಮತ್ತಷ್ತು ಕಡಿಮೆ ಮಾಡಿಕೊಳ್ಳಲು ಅಂಗಡಿಯವನನ್ನು ಒತ್ತಾಯಿಸಿದೆ. ಪುಣ್ಯಕ್ಕೆ ಅವರೂ ಒಪ್ಪಿಕೊಂಡು ಪ್ರತೀ ಪುಸ್ತಕಕ್ಕೂ 50 ಪೈಸೆ ಕಡಿಮೆ ಮಾಡಿದ ಕಾರಣ ನನಗೆ ಸಿಗುತ್ತಿದ್ದ ಲಾಭ 1 ರೂಪಾಯಿಗೆ ಏರಿದ ಕಾರಣ ನನ್ನ ಕೈಯ್ಯಲ್ಲಿ ಸ್ವಲ್ಪ ಹಣವೂ ಸೇರಿತು.

bbಅಲ್ಪ ಸ್ವಲ್ಪ ಹಣ ಕೈ ಸೇರುತ್ತಿದ್ದಂತೆಯೇ ಅದನ್ನೇ ಮೂಲ ಬಂಡವಾಳವನ್ನಾಗಿ ಮಾಡಿಕೊಂಡು ಬುಕ್ ಬೈಂಡಿಂಗ್ ಮಾಡಲು ಆರಂಭಿಸಿದೆ. ಯಥಾ ಪ್ರಕಾರ ನನ್ನ ಕುಚುಕು ಗೆಳೆಯ ಹರಿಯೇ ನನ್ನ ಮೊದಲ ಗ್ರಾಹಕ. ಪ್ರತೀ ಪುಸ್ತಕಕ್ಕೂ 2 ರೂಪಾಯಿಯಂತೆ ಬುಕ್ ಬೈಂಡಿಗ್ ಮಾಡಲು ಆರಂಭಿಸಿದೆ. ಶನಿವಾರ ಸಂಜೆ ಹುಡುಗರು ಪುಸ್ತವನ್ನು ಕೊಟ್ಟಲ್ಲಿ ಶನಿವಾರ ರಾತಿ ಮತ್ತು ಭಾನುವಾರ ಅದಕ್ಕೆ ಚಂದನೆಯ ಬೈಂಡಿಗ್ ಮಾಡಿ ಅದರ ಮೇಲೆ ಭಾರೆ ಹೇರಿ ಒಣಗಿಸಿ ಸೋಮವಾರ ಬೆಳಿಗ್ಗೆ ಅವರಿಗೆ ಹಿಂದಿರುಗಿಸುತ್ತಿದೆ. ನೋಡ ನೋಡುತ್ತಿದ್ದಂತೆಯೇ ನೂರಾರು ಪುಸ್ತಕಗಳು ಬೈಂಡಿಗ್ ಮಾಡುವ ಮೂಲಕ ಸಾಕಷ್ಟು ಹಣವೂಗಳಿಸಿದೆ. ನನ್ನ ಈ ಬೈಂಡಿಗ್ ಪ್ರಯಾಣಕ್ಕೆ ಹರಿಯ ತಾತನವರ ಸಹಾಯ ಮರೆಯಲಾಗದು. ತಮ್ಮ ಸ್ನೇಹಿತರ ದೇವರ ಪುಸ್ತಕಗಳನ್ನೆಲ್ಲಾ ಚಾಮರಾಜ ಪೇಟೆಯಿಂದ ನನಗೆ ಕೊಟ್ಟು ಪ್ರೀತಿ ಪೂರ್ವಕವಾಗಿ ನಾನು ಕೇಳಿದ್ದಕ್ಕಿಂತಲೂ ಅಧಿಕ ಹಣವನ್ನು ಕೊಟ್ಟರು. ನನ್ನ ಚಿಕ್ಕಮ್ಮಂದಿರೂ ಅದೇ ರೀತಿ ಸಹಕಾರವನ್ನು ನೀಡಿದರು. ಅವರೂ ಸಹಾ ತಮ್ಮ ಅಕ್ಕ ಪಕ್ಕದ ಮನೆಯ ಹುಡುಗರ ಪುಸ್ತಕಗಳನ್ನು ಬೈಂಡಿಗ್ ಕೊಡಿಸಲಾರಂಭಿಸಿದಾಗ ವಾರಾಂತ್ಯದಲ್ಲಿ ವಿಲ್ಸನ್ ಗಾರ್ಡನ್, ವಿಜಯನಗರ, ಇಂದಿರಾನಗರದಲ್ಲಿ ಇದ್ದ ನಮ್ಮ ಚಿಕ್ಕಮ್ಮಂದಿರ ಮನೆಗಳಿಗೆ ಹೋಗಿ ಅಲ್ಲಿಯೇ ಪುಸ್ತಕವನ್ನು ಬೈಂಡ್ ಮಾಡಿ ಅಲ್ಲಿಂದ ಚಿಕ್ಕಪ್ಪಂದಿರದ್ದೇ ಶರ್ಟನ್ನು ಹಾಕಿಕೊಂಡು ಕಾಲೇಜಿಗೆ ಹೋದ ದಿನಗಳೆಷ್ಟೋ?

abಬೈಂಡಿಗ್ ಸೀಸನ್ ಮುಗಿದ ನಂತರ ಕೆಲಸವಿಲ್ಲದೇ ಖಾಲಿ ಕುಳಿತಾಗ ನೆನಪಾದದ್ದೇ ನಮ್ಮ ಅಡುಗೆ ನರಸಿಂಹ. ವಯಸ್ಸಿನಲ್ಲಿ ನನಗಿಂತ ಒಂದೆರಡು ವರ್ಷ ಹಿರಿಯನಿದ್ದ ಕಾರಣ ಅವನೊಂದಿಗೆ ಸಲುಗೆ ಜಾಸ್ತಿ. ನಿಜ ಹೇಳಬೇಕೆಂದರೆ ನರಸಿಂಹ ಮತ್ತು ಅವರ ಅಣ್ಣ ನಾಗರಾಜ್ ನನ್ನನ್ನು ಸ್ವಂತ ಮಾವಂದಿರಂತೆಯೇ ನೋಡಿಕೊಂಡರು ಎಂದರೂ ತಪ್ಪಾಗದು. ನನಗೆ ಕಾಲೇಜ್ ರಜೆ ಇದ್ದಾಗಲೆಲ್ಲಾ ಅವರೊಂದಿಗೆ ಅಡುಗೆ ಕೆಲಸಕ್ಕೆ ಹೋಗುತ್ತಿದ್ದೆ. ಆರಂಭದಲ್ಲಿ ನೀರು, ಉಪ್ಪು, ಸಿಹಿ ತಿಂಡಿಗಳಷ್ಟೆ ಬಡಿಸುತ್ತಿದ್ದ ನಾನು ಕ್ರಮೇಣ ತರಕಾರಿಗಳನ್ನು ಚಕಚಕನೆ ಹೆಚ್ಚುವುದು ತಕ್ಕ ಮಟ್ಟಿಗೆ ಅಡುಗೆ ಮಾಡುವುದನ್ನೂ ಅವರಿಂದಲೇ ಕಲಿತುಕೊಂಡೆ. ಆರಂಭದಲ್ಲಿ ದಿನವೊಂದಕ್ಕೆ 25/- ಕೊಡುತ್ತಿದ್ದವರು ನಂತರ ದಿನಗಳಲ್ಲಿ 50-80 ರೂಗಳನ್ನು ಕೊಡುತ್ತಿದ್ದರು. ಹೀಗೆ ಗಳಿಸುತ್ತಿದ್ದ ಹಣವನ್ನು ಒಂದು ಚೂರೂ ಪೋಲು ಮಾಡದೇ ಉಳಿತಾಯ ಮಾಡಿ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಅಪ್ಪನಿಂದ ಹಣವನ್ನೇ ಪಡೆದುಕೊಳ್ಳದೇ ನನ್ನ ಓದಿಗಾಗಿ ಬಳಸಿಕೊಳ್ಳತೊಡಗಿದೆ.

labಅದಾಗಲೇ ಪಿಯೂಸಿ ಓದಿದ್ದ ಕಾರಣ ಡಿಪ್ಲಮೋದಲ್ಲಿ ಗಣಿತ ಮತ್ತು ವಿಜ್ಞಾನ ನನಗೆ ಈಗ ಕಷ್ಟ ಎನಿಸಲಿಲ್ಲ. ಕಂಪ್ಯೂಟರ್ ನನಗೆ ಆಸಕ್ತಿಯಾದ ವಿಷಯವಾಗಿದ್ದರಿಂದಲೋ ಏನೋ? ಅದೂ ಸಹಾ ಸುಲಭ ಎನಿಸಿದ ಕಾರಣ ಬಹಳ ಬೇಗನೇ ಅವುಗಳೆಲ್ಲವನ್ನು ಕರಗತ ಮಾಡಿಕೊಂಡು ಕಡೆಗೆ ನನ್ನ ಉಳಿತಾಯದ ಹಣದಲ್ಲಿಯೇ ನಮ್ಮ Computer Lab assistant ನಾಗರಾಜ ಅಲಿಯಾಸ್ ಬೇಸಿಕ್ ನಾಗನಿಗೆ ಮಸಾಲೆ ದೋಸೆ, ಮಸಾಲೆ ಪೂರಿ ಕೊಡಿಸಿ ಅವನನ್ನು ಪುಸಲಾಯಿಸಿ ತರಗತಿ ಮುಗಿದ ನಂತರವೂ ಹೆಚ್ಚಿನ ಅವಧಿಗೆ ಕಂಪ್ಯೂಟರ್ ಲ್ಯಾಬ್ ಬಳಸಿಕೊಳ್ಳುತ್ತಿದ್ದೆ. ನಮ್ಮ ಆಸಕ್ತಿಯನ್ನು ಗಮನಿಸಿದ ನಮ್ಮ Computer HOD ಸತ್ಯ ಸಾರ್ ಕೂಡಾ ಅಧಿಕೃತವಾಗಿಯೇ ಹೆಚ್ಚಿನ ವೇಳೆ ಕಂಪ್ಯೂಟರ್ ಬಳಸಿಕೊಳ್ಳಲು ನಮಗೆ ಅನುಮತಿ ನೀಡಿ ನಮ್ಮನ್ನು ಪ್ರೋತ್ಸಾಹಿದ್ದದ್ದನ್ನು ಖಂಡಿತವಾಗಿಯೂ ಮರೆಯಲಾಗದು ಮತ್ತು ಮರೆಯಲೂ ಬಾರದು.

spನಂತರದ ದಿನಗಳಲ್ಲಿ screen printing ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿ ಅದನ್ನೂ ಸಹಾ ಹತ್ತಾರು ಜನರನ್ನು ಕಾಡೀ ಬೇಡಿ ಕಲಿತು ಕರಗತ ಮಾಡಿಕೊಂಡು ವಿಸಿಟಿಂಗ್ ಕಾರ್ಡ್, ಮದುವೆ, ಮುಂಜಿ, ನಾಮಕರಣಗಳ ಅಹ್ವಾನ ಪತ್ರಿಕೆಗಳಲ್ಲದೇ ನಮ್ಮ college certificate ಸಹಾ ಪ್ರಿಂಟ್ ಮಾಡಿದ್ದಲ್ಲದೇ ನಾನು ಪ್ರಿಂಟ್ ಮಾಡಿದ ಸರ್ಟಿಫಿಕೇಟನ್ನೇ ಕಡೆಗೆ ನಾನೇ ನಮ್ಮ ಪ್ರಿನ್ಸಿಪಾಲರಿಂದ ಪಡೆದುಕೊಂಡ ಹೆಮ್ಮೆ ನನಗಿದೆ. ಮುಂದೆ ಅದೇ ಕಾಲೇಜಿನಲ್ಲಿಯೇ ಕೆಲಸಕ್ಕೆ ಸೇರಿಕೊಂಡು ಒಂದೆರಡು ವರ್ಷಗಳ ಕಾಲ ಅಲ್ಲೇ ಕೆಲಸ ಮಾಡಿ ಕಾಲೇಜಿಗೆ ಕಟ್ಟಿದ ಎಲ್ಲಾ ಹಣಕ್ಕೂ ಬಡ್ಡೀ ಸಮೇತವಾಗಿ ಹಿಂದಿರುಗಿ ಪಡೆದುಕೊಂಡಿದ್ದಲ್ಲದೇ ಈಗ ಭಗವಂತನ ಅನುಗ್ರಹದಿಂದ ಆರು ಅಂಕಿಯ ಸಂಬಳ ಪಡೆಯುವಂತಾಗಿದ್ದರೂ ಅಂದು ಗಳಿಸುತ್ತಿದ್ದ 50ಪೈಸೆ ಒಂದು ರೂಪಾಯಿ ಲಾಭವೇ ಹೆಚ್ಚಿನ ಮುದವನ್ನು ನೀಡುತ್ತದೆ.

WhatsApp_Image_2021-12-28_at_6.52.25_PM-removebg-previewಇಷ್ಟೆಲ್ಲಾ ಪೀಠಿಕೆ ಈಗ ಏಕಪ್ಪಾ ಎಂದರೆ ನಮ್ಮ ಮುದ್ದಿನ ಮಗಳು ಸೃಷ್ಟಿ ಈಗ ಉತ್ತಮವಾಗಿ ನಾಲ್ಕನೇ ವರ್ಷದ ಆರ್ಕಿಟೆಕ್ಛರ್ಸ್ ಓದುತ್ತಿದ್ದು ಹವ್ಯಾಸವಾಗಿ mandala arts & calligraphy ಕಲೆಯನ್ನು ಕರತಮಾಡಿಕೊಂಡು ಅಲ್ಲೊಂದು ಇಲ್ಲೊಂದು ಕಾರ್ಡಗಳನ್ನು ಮಾಡಿ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದವಳು ಮೊನ್ನೆ ಇದ್ದಕ್ಕಿಂದ್ದಂತೆಯೇ, ಈ ಚಂದನೆಯ 2022ರ ದಿನದರ್ಶಿಯನ್ನು ತಯಾರಿಸಿ ಅಪ್ಪಾ ಇದನ್ನು ಪ್ರಿಂಟ್ ಹಾಕಿಸಿ ಮಾರಾಟ ಮಾಡಬಹುದೇ ಎಂದು ಕೇಳಿದಾಗ, ಅರೇ? ಯಾಕಾಗೋಲ್ಲಾ ಖಂಡಿತವಾಗಿಯೂ ಇದನ್ನು ಪ್ರಿಂಟ್ ಹಾಕಿಸ ಬಹುದು ಎಂದು ಪರಿಚಯವಿರುವ ಪ್ರಿಂಟರ್ ಬಳಿ ಕೇಳಿ ವಿಚಾರಿಸಿ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿ ಇದೀಗ ತಾನೇ ಟೇಬಲ್ ಮೇಲೆ ಅಲಂಕಾರಿಕವಾಗಿ ಇಡಬಹುದಾದ ನನ್ನ ಚಂದನೆಯ ದಿನದರ್ಶಿಯ ಮೊದಲ ಪ್ರತಿ ನೋಡಿದ ಕ್ಷಣ ನನಗೆ ಅರಿವಿಲ್ಲದಂತೆಯೇ ಆನಂದ ಭಾಷ್ಪ ಉಕ್ಕಿ ಹರಿದು ಬಂದಿತು.

ಖಂಡಿತವಾಗಿಯೂ ಇಂದು ನಮಗೆ ಅದರಿಂದ ಲಾಭ ಗಳಿಸುವ ಅಗತ್ಯವಿಲ್ಲವಾದರೂ ನನ್ನ ಮಗಳ ಕಲೆಗೆ ಪ್ರೋತ್ಸಾಹ ನೀಡಬೇಕಾಗಿರುವುದು ಒಬ್ಬ ಜವಾಬ್ಧಾರಿಯುತ ತಂದೆಯ ಕರ್ತವ್ಯವಾಗಿದೆ. ಪರೀಕ್ಷೆಯಲ್ಲಿ ಫೇಲ್ ಆಗಿದ್ದರೇನಂತೆ ಜೀವನದಲ್ಲಿ ಮುಂದೆ ಬಾ ಎಂದು ನಮ್ಮ ತಂದೆಯವರು ಅಂದು ಮಾಡಿದ ತ್ಯಾಗದ ಮುಂದೆ ಇಂದು ನನ್ನದು ಸಣ್ಣದಾದರೂ ಅಂದು ಅಪ್ಪಾ ಹಾಕಿಕೊಟ್ಟ ಸತ್ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಇದರಿಂದ ಬರಬಹುದಾದಂತಹ ಸಣ್ಣ ಪ್ರಮಾಣದ ಲಾಭವನ್ನು ಸಂಪೂರ್ಣವಾಗಿ ಮಗಳಿಗೇ ಮೀಸಲಿಟ್ಟಿದ್ದೇನೆ.

WhatsApp Image 2021-12-30 at 9.57.12 PMಅಂದು ನನ್ನಿಂದ Lab records ಖರೀದಿಸಿದಂತೆ, ನನ್ನಿಂದ Book Binding ಮಾಡಿಸಿಕೊಂಡಂತೆ, ನನ್ನಿಂದ Screen Printing ಮಾಡಿಸಿ ಕೊಂಡಂತೆ, ನನಗೆ ಅಡುಗೆ ಕೆಲಸ ಕೊಟ್ಟಂತೆ, ಇಂದೂ ಸಹಾ ಅಂದು ನನಗೆ ನೀಡಿದ ಸಹಕಾರವನ್ನು ನನ್ನ ಮಗಳಿಗೂ ಮುಂದುವರೆಸುತ್ತಾರೆ ಎನ್ನುವ ಆಶಾವಾದ ನಮ್ಮದಾಗಿದೆ. ಕೇವಲ 200/- ರೂಪಾಯಿಗಳ ಈ ಸುಂದರವಾದ ದಿನದರ್ಶಿ ಖಂಡಿತವಾಗಿಯೂ ನಿಮ್ಮ ಮನೆಯ ಟೇಬಲ್ ಚಂದವಾಗಿ ಕಾಣಿಸಿಕೊಳ್ಳುತ್ತದಲ್ಲದೇ ಈ ಮೂಲಕ ಒಬ್ಬ ಉದಯೋನ್ಮುಖ ಕಲಾವಿದೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಸುಳ್ಳು ಹೇಳದೇ, ಕಳ್ಳತನ ಮಾಡದೇ, ಭಿಕ್ಷೇ ಬೇಡದೇ, ಕಷ್ಟ ಪಟ್ಟು ಶ್ರಮವಹಿಸಿ ತಮ್ಮ ಪರಿಶ್ರಮ ಮತ್ತು ಕಲಾವಂತಿಕೆಯಿಂದ ಪ್ರತಿಫಲ ಪಡೆಯಲು ಮುಂದಾಗಿರುವ ನಮ್ಮ ಮಗಳ ಈ ನಿರ್ಧಾರ ಖಂಡಿತವಾಗಿಯೂ ಅಪ್ಪಾ ಅಮ್ಮನ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿರುವ ಸಾವಿರಾರು ಯುವಕ ಯುವತಿಯರಿಗೆ ಪ್ರೇರಣೆಯಾಗಬಹುದು.

ನಮ್ಮ ಮಗಳ ಈ ಧೀಶಕ್ತಿಗೆ ನಿಮ್ಮೆಲ್ಲರ ಹೃದಯಪೂರ್ವಕ ಸಹಕಾರ ಇರುತ್ತದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s