ನಮಗೆಲ್ಲಾ ತಿಳಿದಿರುವಂತೆ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಮಾಗಿಯ ಚಳಿಯ ಇನ್ನೂ ಹೋಗದೇ ಇದ್ದಾಗ, ಶಿಶಿರ ಋತುವಿನ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿ ಹಬ್ಬ ಕಳೆದ ಕೂಡಲೇ ಚಳಿ ಎಲ್ಲವೂ ಮಂಗಮಾಯ ಎಂದು ಮಾತನಾಡುವುದನ್ನುಕೇಳಿದ್ದೇವೆ. ಶಿವರಾತ್ರಿ ಹಬ್ಬದ ದಿನವಿಡೀ ಉಪವಾಸ ಮಾಡಿ ರಾತ್ರಿ ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಭಗವಾನ್ ಶಂಕರನನ್ನು ಪ್ರಾರ್ಥಿಸಿ ಮಾರನೇಯ ದಿನ ದಿನ ವಿವಿಧ ರೀತಿಯ ಭಕ್ಷ ಭೋಜನಗಗಳನ್ನು ತಯಾರಿಸಿ ಭಗವಂತನಿಗೆ ನೈವೇದ್ಯ ಮಾದಿ ಹಂಚಿ ತಿನ್ನುವ ರೂಢಿಯಿದೆ. ಶಿವರಾತ್ರಿಯಂದ ತನ್ನನ್ನು ಭಕ್ತಿಯಿಂದ ಪೂಜಿಸಿದ ಭಕ್ತರ ಸಕಲ ಇಷ್ಟಾರ್ಥಗಳನ್ನೂ ಆ ದಯಾಮಯಿ ಶಿವನು ಪೂರೈಸುತ್ತಾನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಕೇವಲ ಶಿವರಾತ್ರಿಯಲ್ಲದೇ, ಪ್ರತೀ ತಿಂಗಳು, ಕೃಷ್ಣ ಪಕ್ಷದ 14 ನೇ ದಿನ ಅರ್ಥಾತ್ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಾಸಿಕ ಶಿವರಾತ್ರಿಯನ್ನು ಆಚರಿಸುವ ಸಂಪ್ರದಾಯವಿದೆ. ಶಿವ ಮತ್ತು ಶಕ್ತಿಯ ಒಮ್ಮುಖವನ್ನು ಸೂಚಿಸುವ ಈ ಉತ್ಸವಕ್ಕೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಶಿವನು ಪುರುಷ ಶಕ್ತಿಯನ್ನು ಪ್ರತಿನಿಧಿಸಿದರೆ ಶಕ್ತಿ ಅಥವಾ ಪಾರ್ವತಿಯು ಪ್ರಕೃತಿ ಶಕ್ತಿಯನ್ನು ಸಂಕೇತಿಸುತ್ತಾರೆ. ಹಾಗಾಗಿ ಶಿವನ ಭಕ್ತರು ಈ ದಿನದಂದು ಉಪವಾಸವಿದ್ದು ಶಿವನನ್ನು ಭಕ್ತಿಯಿಂದ ಪೂಜಿಸಿದಲ್ಲಿ ಅಸಾಧ್ಯ ಮತ್ತು ಕಷ್ಟಕರವಾದ ಕೆಲಸವನ್ನು ಸಾಧಿಸಲು ಶಿವಪಾರ್ವತಿಯರ ಆಶೀರ್ವಾದವಿರುತ್ತದೆ ಎಂಬ ನಂಬಿಕೆ ಇಉವ ಕಾರಣ ಪ್ರತೀ ತಿಂಗಳೂ ಮಾಸ ಶಿವರಾತ್ರಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಮಾಸಿಕ ಶಿವರಾತ್ರಿಯನ್ನು ಆಚರಿಸಿವವರು ಇಡೀ ದಿನ ಉಪವಾಸವಿದ್ದು ಶಿವ ದೇವಾಲಯಗಳಿಗೆ ಭೇಟಿ ನೀಡುವುದಲ್ಲದೇ ಸಂಜೆ ಶಿವ ಪೂಜೆಯನ್ನು ಮಾಡುತ್ತಾರೆ. ಈ ಪೂಜೆಯ ಸಮಯದಲ್ಲಿ ಶಿವನ ವಿಗ್ರಹ ಅಥವಾ ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ಪೂಜೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಗಂಗಾಜಲ, ಹಾಲು, ತುಪ್ಪ, ಜೇನುತುಪ್ಪ, ಅರಿಶಿನ ಪುಡಿ, ಸಿಂಧೂರ, ಪನ್ನೀರುಗಳಿಂದ ಅಭಿಷೇಕಮಾಡಿದ ನಂತರ ಶಿವನ ವಿಗ್ರಹ ಅಥವಾ ಶಿವಲಿಂಗಕ್ಕೆ ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ವಿವಿಧ ಹಣ್ಣುಗಳನ್ನು ನೈವೇದ್ಯ ಮಾಡಲಾಗುತ್ತದೆ.
ಪೂಜೆಯ ಸಮಯದಲ್ಲಿ ರುದ್ರ ಮತ್ತು ಚಮಕಗಳನ್ನು ಪಠಣ ಮಾಡಿದರೆ ಇನ್ನೂ ಕೆಲವೆಡೆ ಸರಳವಾಗಿ, ಮಹಾಮೃತ್ಯುಂಜಯ ಮಂತ್ರವಾದ
ಓಂ ಹೌಂ ಜೂಂ ಸಃ ಓಂ ಭೂರ್ಭುವಃ ಸ್ವಃ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ
ಊರ್ವರುಕಮಿವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಮೃತಾತ್
ಓಂ ಸ್ವಃ ಭುವಃ ಭೂಃ ಓಂ ಸಃ ಜೂಂ ಹೌ ಓಂ
ಮತ್ತು
ರುದ್ರ ಗಾಯತ್ರಿ ಮಂತ್ರವಾದ
ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರಃ ಪ್ರಚೋದಯಾತ್ ಮಂತ್ರಗಳನ್ನು ಪಠಿಸಿ, ನಂತರ ಪರ ಶಿವನಿಗೆ ಆರತಿಯನ್ನು ಮಾಡಿದ ನಂತರ ಪ್ರಸಾದವನ್ನು ವಿತರಿಸಲಾಗುತ್ತದೆ.
ಅವಿವಾಹಿತರು ಈ ಮಾಸ ಶಿವರಾತ್ರಿಯಂದು ಶಿವನನ್ನು ಪೂಜೆ ಮಾಡುವ ಮೂಲಕ, ವಿವಾಹದ ವಿಳಂಬವನ್ನು ದೂರವಾಗಿ ಅವರ ವಿವಾಹದಲ್ಲಿ ಬರುವ ಅಡೆತಡೆಗಳನ್ನು ದೂರವಾಗಿ ಅವರ ವೈವಾಹಿಕ ಜೀವನವು ತುಂಬಾ ಸಂತೋಷವಾಗಿರುತ್ತದೆ ಎಂಬ ನಂಬಿಕೆ ಇದೆ.
ಈ ರೀತಿಯಾಗಿ ಶ್ರದ್ಧಾ ಭಕ್ತಿಯಿಂದ ಪೂಜಿಸುವ ಮೂಲಕ, ಭಕ್ತರು ಆಂತರಿಕ ಶಾಂತಿಗಾಗಿ ಮತ್ತು ಶಾಶ್ವತ ಕೃಪಾಶೀರ್ವಾದವನ್ನು ಪಡೆಯಬಹುದು ಎಂದು ನಂಬಲಾಗಿದೆ. ಈ ರೀತಿಯಾಗಿ ಉಪವಾಸ ಮಾಡುವ ಮೂಲಕ ಆತ್ಮಕ್ಕೆ ಮೋಕ್ಷ ಪಡೆಯಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಶಿವನ ಆಶೀರ್ವಾದವನ್ನು ಪಡೆಯಲು ಮಾಸಿಕ ಶಿವರಾತ್ರಿಯನ್ನು ಆಚರಿಸುವುದು ಅತ್ಯಂತ ಸುಲಭವಾದ ಮಾರ್ಗವಾಗಿರುವ ಕಾರಣ ಶಿವನ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸೋಣ ಅಲ್ಲವೇ?
ಏನಂತೀರಿ?
ನಿಮ್ಮವನೇ ಉಮಾಸುತ