ವೈಕುಂಠ ಏಕಾದಶಿ  

ಏಕಾದಶಿ ಎಂದರೆ 11ನೇಯ ದಿನವಾಗಿದ್ದು, ನಮ್ಮ ಹಿಂದೂ ಪಂಚಾಂಗದಲ್ಲಿ ಪ್ರತಿ 15 ದಿನಕ್ಕೊಮ್ಮೆ (ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ) ಹನ್ನೊಂದನೆಯ ದಿನಕ್ಕೆ ಏಕಾದಶಿ ಬರುತ್ತದೆ. ಈ ದಿನದಂದು ಬಹುತೇಕ ಆಸ್ತಿಕರು ಕಟ್ಟು ನಿಟ್ಟು ಉಪವಾಸವನ್ನು ಮಾಡುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಹೀಗೆ ಚೈತ್ರ ಮಾಸದ ಕಾಮದಾ ಏಕಾದಶಿ, ಆಷಾಢ ಮಾಸದ ಏಕಾದಶಿ, ಪುಷ್ಯ ಮಾಸದ ವೈಕುಂಠ ಏಕಾದಶಿ, ಫಾಲ್ಗುಣದ ಪಾಪ ವಿಮೋಚನೀ ಏಕಾದಶಿಯವರೆಗೂ ಹೀಗೆ ವರ್ಷವಿಡೀ ಬರುವ ಏಕಾದಶಿಗಳಿಗೆ ಅದರದ್ದೇ ಆದ ಮಹತ್ವವಿದೆ.

ಇನ್ನು ವೈಜ್ಞಾನಿಕವಾಗಿಯೂ ಏಕಾದಶಿಯ ಉಪವಾಸ ಅತ್ಯಂತ ಮಹತ್ವದ್ದಾಗಿದೆ. ಲಂಘನಂ ಪರಮೌಷಧಂ ಎಂದರೆ ಉಪವಾಸವಾಸ ಮಾಡುವುದೂ ಒಂದು ರೀತಿಯ ಔಷಧ ಎಂದು ಆಯುರ್ವೇದದಲ್ಲಿ ತಿಳಿಸಲಾಗಿರುವ ಕಾರಣ ಏಕಾದಶಿ ಧಾರ್ಮಿಕವಾಗಿ ಅತ್ಯಂತ ಮಹತ್ವವಾಗಿದೆ. ಉಪವಾಸದ ಮುಖಾಂತರ ಪಚನ ಕ್ರಿಯೆ ಶುದ್ಧಿಗೊಂಡಲ್ಲಿ, ಇಡೀ ದಿನ ದೇವರ ಧ್ಯಾನದಲ್ಲಿ ಆಸಕ್ತರಾಗಿರುವ ಕಾರಣ, ಅದು ಆತ್ಮವನ್ನು ಶುದ್ಧೀಕರಿಸಿಮೋಕ್ಷವನ್ನು ಸಾಧಿಸಲು ಸಹಾಯಕವಾಗುತ್ತದೆ. ಇಡೀ ದಿನ ನಿಟ್ಟುಪವಾಸ ಮಾಡುಲು ಆಶಕ್ತರಾದವರು ಮತ್ತು ವಯೋವೃದ್ಧರು, ಸಾತ್ವಿಕವಾದ ಲಘು ಫಲಹಾರವಾದ ವಿವಿಧ ಬಗೆಯ ಹಣ್ಣುಗಳು, ಹಾಲು ಮತ್ತು ಮುಸುರೆಯಲ್ಲದ ಪದಾರ್ಥಗಳನ್ನು ಸ್ವೀಕರಿಸುವ ಪದ್ದತಿಯೂ ರೂಢಿಯಲ್ಲಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳನ್ನೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಿದ್ದು ಅಂದು ಉಪವಾಸದಿಂದಿದ್ದು, ಮಾನಸಿಕವಾಗಿ ದೃಢಚಿತ್ತದಿಂದ ಹರಿ ನಾಮ ಜಪ ಮಾಡಿದಲ್ಲಿ ಪುಣ್ಯ ಲಭಿಸುತ್ತದೆ ಎಂದೇ ಬಹುತೇಕ ಆಸ್ತಿಕರ ನಂಬಿಕೆಯಾಗಿದೆ. ಹೀಗೆ ನಿರಾಹಾರಿಗಳಾಗಿ ಭಗವಂತನ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ.

vk2ಏಕಾದಶಿ ವ್ರತದ ಅಂಗವಾಗಿ, ಏಕಾದಶಿಯ ಹಿಂದಿನ ದಿನ ದಶಮಿಯಂದು ಕೇವಲ ಮಧ್ಯಾಹ್ನ ಒಂದು ಹೊತ್ತು ಮಾತ್ರವೇ ಊಟ ಮಾಡಿ, ಸಕಲ ಭೋಗಗಳನ್ನು ತ್ಯಜಿಸಿ, ಏಕಾದಶಿಯಂದು ಇಡೀ ದಿನ ಉಪವಾಸವಿದ್ದು, ಮಾರನೆಯ ದಿನ ದ್ವಾದಶಿಯಂದು ನಿತ್ಯಕರ್ಮ ಮುಗಿಸಿ ಭೋಜನ ಮಾಡುವುದು ರೂಢಿಯಲ್ಲಿದೆ. ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ ಭಗವಂತನ ಸಮೀಪದಲ್ಲಿರುವುದು ಎಂಬ ಅರ್ಥ ಬರುತ್ತದೆ. ಹೀಗೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆ ಮಾಡುತ್ತಿರುವುದು ಎಂದರ್ಥವಾಗಿದೆ. ಹೀಗೆ ಮಾಡುವುದರಿಂದ ಏಕ ಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ.

WhatsApp Image 2022-01-13 at 8.45.12 AMಉಳಿದೆಲ್ಲಾ ಏಕಾದಶಿಗಿಂತಲೂ ಪುಷ್ಯಮಾಸದ ಶುಕ್ಲಪಕ್ಷದಂದು ಬರುವ ವೈಕುಂಠ ಏಕಾದಶಿಯು ಅತ್ಯಂತ ವಿಶೇಷವಾಗಿದೆ. ಈ ದಿನದಂದು ವೈಕುಂಠದ (ಸ್ವರ್ಗ ಲೋಕ ಅಥವಾ ವಿಷ್ಣುವಾಸ ಸ್ಥಾನ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ದೇಶಾದ್ಯಂತ ಇರುವ ವಿಷ್ಣು ಅಥವಾ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಅಂದು ಬಹುತೇಕ ದೇವಾಲಯಗಳಲ್ಲಿ ದೇವಸ್ಥಾನದ ಉತ್ಸವ ಮೂರ್ತಿಗಳನ್ನು ಎತ್ತರದ ಉಯ್ಯಾಲೆಯಲ್ಲಿ ತೂಗಿ ಹಾಕಿ ಅದರ ಕೆಳಗೆ ಸ್ವರ್ಗದ ಬಾಗಿಲಿನಂತ ಅಲಂಕರಿಸಿ ಅದರ ಕೆಳಗೆ ಭಕ್ತಾದಿಗಳು ಹಾದು ಹೋಗುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಶರೀರಮಾಧ್ಯಂ ಖಲು ಧರ್ಮಸಾಧನಂ ಎಂದರೆ, ಒಳ್ಳೆಯ ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೆ, ಅದಕ್ಕೆ ದೇಹ ಮತ್ತು ಮನಸ್ಸು ಸದೃಢವಾಗಿರುವುದು ಅತ್ಯಗತ್ಯವಾಗಿದೆ. ಹಾಗಾಗಿ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಸುಧಾರಿಸುವ ಕಾರಣ, ಜೀವನದಲ್ಲಿ ಎದುರಾಗುವ ಎಲ್ಲಾ ಸಂಕಷ್ಟಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಪರಮಪದವನ್ನು ಸೇರಬಹುದು ಎಂಬುದೇ ವೈಕುಂಠ ಏಕಾದಶಿಯ ವ್ರತಾಚರಣೆ ಹಿಂದಿರುವ ಅಂಶವಾಗಿದೆ.

ವೈಕುಂಠ ಏಕಾದಶಿಯ ಆಚರಣೆಯ ಹಿಂದೆಯೂ ರೋಚಕವಾದ ಪೌರಾಣಿಕ ಕಥೆಯಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣನ ಸಾಕು ತಂದೆ ನಂದಗೋಪನು ತಪ್ಪದೇ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ಆಚರಿಸುತ್ತಿದ್ದ. ಅದೊಮ್ಮೆ ಏಕಾದಶಿಯ ವ್ರತವನ್ನು ಆಚರಿಸಿದ ಮಾರನೇಯ ದಿನ ದ್ವಾದಶಿಯಂದು ಬೆಳ್ಳಂಬೆಳಿಗ್ಗೆ ಯಮುನಾನದಿಯಲ್ಲಿ ಸ್ನಾನಕ್ಕಿಳಿ. ಆ ಸಮಯ ರಾಕ್ಷಸರ ಸಂಚಾರದ ಸಮಯವಾದ್ದರಿಂದ, ವರುಣದೇವನ ಸೇವಕನು ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ಯುತ್ತಾನೆ. ಸ್ನಾನಕ್ಕೆಂದು ಹೋದ ನಂದನು ಎಷ್ಟು ಹೊತ್ತಾದರೂ ಬಾರದಿದ್ದದ್ದನ್ನು ಗಮನಿಸಿದ, ಗೋಕುಲವಾಸಿಗಳು ಬಲರಾಮ ಮತ್ತು ಕೃಷ್ಣರಿಗೆ ಈ ಸುದ್ದಿ ತಿಳಿಸುತ್ತಾರೆ. ಕೂಡಲೇ, ತಂದೆಯನ್ನು ಕರೆತರಲು ಶ್ರೀಕೃಷ್ಣನು ವರುಣಲೋಕಕ್ಕೆ ತೆರಳಿ ಅಲ್ಲಿ ವರುಣದೇವನನ್ನು ಭೇಟಿಯಾದಾಗ, ತಮ್ಮ ಸೇವಕರಿಂದಾದ ತಪ್ಪನ್ನು ಮನ್ನಿಸಬೇಕೆಂದು ಕೋರಿದ ವರುಣನು ನಂದಗೋಪನನ್ನು ಸಕಲ ಮರ್ಯಾದೆಯೊಂದಿಗೆ ಶ್ರೀ ಕೃಷ್ಣನೊಂದಿಗೆ ಕಳುಹಿಸಿಕೊಡುತ್ತಾನೆ.

ವರುಣಲೋಕದಿಂದ ಹಿಂದುರಿಗಿದ ನಂದಗೋಪನು ತನ್ನ ಪರಿವಾರದೊಂದಿಗೆ ವರುಣನ ಲೋಕದ ವೈಭವದ ಜೊತೆಗೆ ವರುಣ ದೇವನನು ತನ್ನ ಮಗನಿಗೆ ತೋರಿದ ಆದರಾತಿಥ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದಾಗ, ಆ ಗೋಪಾಲಕರಿಗೆಲ್ಲಾ ಶ್ರೀಕೃಷ್ಣನೇ ಸಾಕ್ಷಾತ್ ಭವಂತನಾಗಿದ್ದು ಅಲ್ಪಮತಿಗಳಾದ ನಮಗೆ ಅದರ ಅರಿವಿಲ್ಲದೇ ಹೋಯಿತಲ್ಲಾ ಎಂದು ಪರಿತಪಿಸಿ, ಶ್ರೀಕೃಷ್ಣನ ಬಳಿ ಕ್ಷಮೆಯಾಚಿಸುತ್ತಾರೆ. ಆಗ ಶ್ರೀಕೃಷ್ಣನು ಅವರೆಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ಸೂಚಿರುತ್ತಾನೆ. ಶ್ರೀಕೃಷ್ಣನ ಆದೇಶದಂತೆ ಬ್ರಹ್ಮಕುಂಡಲ್ಲಿ ಮುಳುಗಿದವರಿಗೆಲ್ಲರಿಗೂ ವೈಕುಂಠದ ದರ್ಶನವಾಗಿ ಅವರ ಜೀವನ ಪರಮ ಪಾವನವಾಯಿತು. ಈ ಕಾರಣಕ್ಕಾಗಿಯೇ ಆ ದಿನವನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ ಎಂಬ ನಂಬಿಕೆ ಇದೆ.

ಮತ್ತೊಂದು ಪುರಾಣದ ಪ್ರಕಾರ, ದೇವತೆಗಳ ರಾಜನಾದ ದೇವೇಂದ್ರನು ತನ್ನ ಐರಾವತದ ಮೇಲೇರಿ ಎಲ್ಲಿಗೋ ಹೋಗುತ್ತಿದ್ದಾಗ ಅವರಿಗೆ ದೂರ್ವಾಸ ಮಹರ್ಷಿಗಳು ಎದಿರಾಗುತ್ತಾರೆ. ಆಗ ಮಹರ್ಷಿಗಳು ರಾಜಾ ಪ್ರತ್ಯಕ್ಷ ದೇವತ. ಅತನಿಗೆ ಗೌರವ ಸಲ್ಲಿಸುವುದು ಕರ್ತವ್ಯ ಎಂಬು ಭಾವಿಸಿ, ಸುವಾಸನೆಯುಳ್ಳ ಹೂವಿನ ಮಾಲೆಯನ್ನು ಇಂದ್ರನಿಗೆ ಗೌರವಪೂರ್ವಕವಾಗಿ ಕೊಡುತ್ತಾರೆ. ಅದರೆ ಅದಾವುದೋ ಯೋಚನೆಯಲ್ಲಿದ್ದ ಇಂದ್ರನು ಒಂದು ರೀತಿಯ ತಿರಸ್ಕಾರ ಇಲ್ಲವೇ ದುರಹಂಕಾರದಿಂದ ಆ ಹೂವಿನ ಮಾಲೆಯನ್ನು ತನ್ನ ಆನೆಯ ಕುತ್ತಿಗೆಗೆ ಹಾಕುತ್ತಾನೆ. ಕತ್ತೆಗೆ ಏನು ಗೊತ್ತು ಕಸ್ತೂರಿ ವಾಸನೆ ಎನ್ನುವಂತೆ ಅಂತಹ ಸುವಾಸನೆಯುಕ್ತ ಹೂವಿನ ಹಾರ ಆನೆಗೆ ಒಗ್ಗದೆ ಅದು ತನ್ನ ಕೊರಳಿನಿಂದ ಕಿತ್ತು ತೆಗೆದು ತನ್ನ ಕಾಲಿನಿಂದ ಹೊಸಕಿ ಹಾಕುತ್ತದೆ. ತಾನು ಆಶೀರ್ವಾದದ ರೂಪದಲ್ಲಿ ಕೊಟ್ಟ ಹೂವಿನ ಮಾಲೆಗೆ ಇಂದ್ರನು ಅಪಮಾನ ಮಾಡಿದ್ದನ್ನು ಸಹಿಸಿದ ಪರಮ ಕೋಪಿಷ್ಠ ದೂರ್ವಾಸರು, ಇಂದ್ರನ ಸಮೇತ ದೇವಾನು ದೇವತೆಗಳ ಸಕಲ ಶಕ್ತಿ ಮತ್ತು ಐಶ್ವರ್ಯಗಳು ನಶಿಸಿ ಹೋಗಲಿ ಎಂದು ಶಾಪವನ್ನು ನೀಡುತ್ತಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ, ಇಂದ್ರನಿಗೆ ತನ್ನ ತಪ್ಪಿನ ಅರಿವಾಗಿ ಕೂಡಲೇ, ಅಂಬಾರಿಯಿಂದ ಕೆಳಗಿಳಿದು ದುರ್ವಾಸರ ಬಳಿ ಮಾಡಿದ ಅಚಾತುರ್ಯಕ್ಕೆ ಕ್ಷಮೆ ಕೇಳಿದರೂ ಶಾಂತರಾಗದ ದೂರ್ವಾಸರು ಸುಮ್ಮನೆ ಹೊರಟು ಹೋಗುತ್ತಾರೆ.

bali

ಇದಾದ ಕೆಲವೇ ದಿನಗಳಲ್ಲೇ ರಾಕ್ಷಸ ರಾಜ ಬಲಿ ಚಕ್ರವರ್ತಿಯು ಶಕ್ತಿಹೀನರಾದ ದೇವತೆಗಳ ಮೇಲೆ ಧಾಳಿ ನಡೆಸಿ ಮೂರು ಲೋಕಗಳನ್ನೂ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಆಗ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಕಲ ದೇವಾನು ದೇವತೆಗಳು ವಿಷ್ಣುವಿನ ಬಳಿ ಹೋಗಿ ತಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡು ಎಂದು ಕೋರಿದಾಗ, ಭಗವಾನ್ ವಿಷ್ಣು ವಾಮನನ ರೂಪದಲ್ಲಿ ಭೂಲೋಕಕ್ಕೆ ಬಂದು ಬಲಿ ಚಕ್ರವರ್ತಿಯ ಬಳಿ ಮೂರು ಹೆಜ್ಜೆಯ ದಾನ ಕೇಳಿ, ವಿಶ್ವರೂಪ ತಾಳಿ, ಮೊದಲ ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೆಟ್ಟು, ಎರಡನೇ ಹೆಜ್ಜೆಯನ್ನು ಆಕಾಶವನ್ನೇಲ್ಲಾ ಆಕ್ರಮಿಸಿ, ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ ಬಂದಿರುವುದು ಸಾಮಾನ್ಯ ವಟುವಾಗಿರದೇ, ಸಾಕ್ಷಾತ್ ವಿಷ್ಣು ಎಂಬುದನ್ನು ಅರಿತ ಬಲಿ ಚಕ್ರವರ್ತಿ ಮೂರನೇ ಹೆಜ್ಜೆಯನ್ನು ತನ್ನ ತಲೆಯ ಮೇಲಿಡಿ ಎಂದು ಹೇಳಿದಾಗ, ವಾಮನರೂಪಿ ವಿಷ್ಣು, ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ತುಳಿದು ಕಳಿಸುತ್ತಾನೆ.

samudra

ಬಲಿ ಚಕ್ರವರ್ತಿಯ ಧಮನದ ನಂತರ ಕಳೆದು ಹೋದ ಲೋಕವೆಲ್ಲಾ ಹಿಂದಿರುಗಿದರೂ, ದೂರ್ವಾಸರ ಶಾಪದಿಂದಾಗಿ, ದೇವತೆಗಳ ಶಕ್ತಿ ಮಾತ್ರ ಇನ್ನೂ ಕ್ಷೀಣಿಸಿಯೇ ಇದ್ದಾ ಕಾರಣ, ಮತ್ತೆ ವಿಷ್ಣುವಿನ ಆಜ್ಞೆಯಂತೆ ಸಮುದ್ರ ಮಂಥನ ಮಾಡಿ ಅದರಿಂದ ಹೊರಬರುವ ಅಮೃತವನ್ನು ಗಳಿಸುವ ಸಲುವಾಗಿ ರಾಕ್ಷಸರೊಂದಿಗೆ ಸೇರಿ ಮಂದರಗಿರಿ ಪರ್ವತವನ್ನು ಕಡಗೋಲನ್ನಾಗಿಸಿ, ಆದಿಶೇಷನನ್ನು ಹಗ್ಗವನ್ನಾಗಿಸಿಕೊಂಡು ದೇವರು ಮತ್ತು ದಾನವರು ಸೇರಿಕೊಂಡು ಕ್ಷೀರ ಸಮುದ್ರವನ್ನು ಕಡೆಯಲು ಆರಂಭಿಸುತ್ತಾರೆ. ಅದೇ ಸಮಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ದೇವತೆಗಳಿಗೆ ಶಕ್ತಿ ಹಿಂದಿರುಗಿ ಬರಲಿ ಎಂದು ಭೂಲೋಕದ ಋಷಿಮುನಿಗಳು ಇಡೀ ದಿನ ಉಪವಾಸವಿದ್ದು ಶ್ರೀ ಸೂಕ್ತ, ಪುರುಷುಕ್ತವನ್ನು ಪಠಿಸುತ್ತಾ ಯಜ್ಞಯಾಗಾದಿಗಳನ್ನು ಮಾಡಿ ದೇವತೆಗಳಿಗೆ ಹವಿಸ್ಸನ್ನು ಕೊಟ್ಟು, ಭಗವಂತನನ್ನು ಸ್ಮರಣೆ ಮಾಡುತ್ತಾರೆ. ಹೀಗೆ ಪೂಜೆ ಮಾಡಿದ ದಿನವೇ ಪರಶಿವ ಹಾಲಾಹಲವನ್ನು ಕುಡಿದು ವಿಷಕಂಠನಾದರೇ ಸಮುದ್ರಮಂಥನದಲ್ಲಿ ಅಂತಿಮವಾಗಿ ಅಮೃತವು ದೊರಕಿದ ದಿನವು ಏಕಾದಶಿಯಾಗಿದ್ದು, ಅಂದಿನಿಂದಲೇ ಪವಿತ್ರವಾದ ಏಕಾದಶಿ ವ್ರತದ ಆಚರಣೆಗೆ ಬಂದಿತು ಎಂಬ ನಂಬಿಕೆ ಇದೆ. ಈ ರೀತಿಯಾಗಿ ಏಕಾದಶಿಯಂದು ಉಪವಾಸ ಮಾಡಿ ಭಗವಂತನ ಧ್ಯಾನ ಮಾಡಿದರೆ ಆಯುರಾರೋಗ್ಯ ಐಶ್ವರ್ಯಾದಿಗಳು ಅಭಿವೃದ್ಧಿಯಾಗುತ್ತದೆ ಎಂದು ಶ್ರೀಕೃಷ್ಣನು ಏಕಾದಶಿ ವ್ರತದ ಮಹತ್ವವನ್ನು ಧರ್ಮರಾಯನಿಗೆ ತಿಳಿಸುತ್ತಾನೆ ಎಂಬ ಪ್ರತೀತಿಯೂ ಇದೆ.

kur

ಮಹಾಭಾರತ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದ ದಿನವೂ ಏಕಾದಶಿಯಾಗಿತ್ತು ಎಂಬ ನಂಬಿಕೆ ಇದೆ.
ಮಹಾ ವಿಷ್ಣುವು ಬಹಳ ದಿನಗಳವರೆಗೆ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೂ ಏಕಾದಶಿಯಾಗಿದ್ದು, ಹಾಗಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು ಎಂಬ ಪದ್ದತಿ ಇದೆ ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಹೋಮ ಹವನಗಳು, ಜಪ-ತಪಗಳು ನಡೆಯುವುದಲ್ಲದೇ, ಈ ದಿನ ಉಪವಾಸ ಹಾಗೂ ಜಾಗರಣೆ ಮಾಡಿದರೆ ಒಳ್ಳೆಯದಾಗುತ್ತದೆ. ವಿಷ್ಣು ಪುರಾಣದ ಪ್ರಕಾರ ರಾಕ್ಷಸರ ವಿರೋಧದ ನಡುವೆಯೂ ವಿಷ್ಣುವು ವೈಕುಂಠ ಏಕಾದಶಿ ದಿನ ತನ್ನ ವೈಕುಂಠದ ಬಾಗಿಲನ್ನು ತೆರೆದಿರುತ್ತಾನಂತೆ. ಹಾಗಾಗಿ ಈ ಕಥೆಯನ್ನು ಓದುವುದರಿಂದ ಇಲ್ಲವೇ ಕೇಳುವುದರಿಂದ ಭಗವಾನ್ ವಿಷ್ಣುವು ಪ್ರಸನ್ನನಾಗಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವುದಲ್ಲದೇ ಮೋಕ್ಷವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ.

ಧನುರ್ಮಾಸದ ಶುಕ್ಲ ಏಕಾದಶಿ ದಿನವನ್ನು ಮುಕ್ಕೋಟಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ಮುಕ್ಕೋಟಿ ಏಕಾದಶಿಯ ದಿನ ಉಪವಾಸಮಾಡಿದಲ್ಲಿ, ವರ್ಷದ ಉಳಿದ 23 ಏಕಾದಶಿಗಳಲ್ಲಿ ಉಪವಾಸ ಮಾಡಿದ ಫಲ ಸಿಗುವುದಲ್ಲದೇ, ರಾಜಸಿಕ ಹಾಗೂ ತಾಮಾಸಿಕ ಗುಣಗಳನ್ನು ಜಯಿಸುವ ಮೂಲಕ ಮುಕ್ತಿಗೆ ಮಾರ್ಗ ದೊರೆಯುತ್ತದೆ ಎಂಬ ನಂಬಿಕೆ ಇದೆ.

vk3

ಇಷ್ಟೆಲ್ಲಾ ವಿಷಯಗಳು ತಿಳಿದ ನಂತರ ಇನ್ನೇಕೆ ತಡಾ, ಇಂದು ವೈಕುಂಠ ಏಕಾದಶಿಯಂದು ಮುಂಜಾನೆಯೇ ಸ್ನಾನ ಸಂಧ್ಯವಂಧನೆಗಳನ್ನು ಮುಗಿಸಿ, ಶುಚಿರ್ಭೂತವಾಗಿ, ಭಕ್ತಿಯಿಂದ ಶ್ರೀಮನ್ನಾರಾಯಣನ ದರ್ಶನ ಪಡೆದು ದೇವಾಲಯದ, ವೈಕುಂಠ ದ್ವಾರದ ಮೂಲಕ ಹೊರಗೆ ಬರುವ ಮೂಲಕ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳ ಪರಿಹಾರವನ್ನು ಪಡೆದು ಕೊಳ್ಳೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s