ಮಾಗಡಿ ಶ್ರೀ ರಂಗನಾಥಸ್ವಾಮಿ

WhatsApp Image 2022-01-13 at 11.07.37 PMಧನುರ್ಮಾಸದ ಸಮಯದಲ್ಲಿ ಭಗವಾನ್ ವಿಷ್ಣುವಿನನ್ನು ಒಮ್ಮೆ ದರ್ಶನ ಮಾಡಿದಲ್ಲಿ  ಸಾವಿರ ವರ್ಷಗಳ ದರ್ಶನದ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಾವಿಂದು ಬೆಂಗಳೂರಿನಿಂದ ಸುಮಾರು 50-55 ಕಿಮೀ ದೂರದಲ್ಲಿರುವ ಕೆಂಪೇಗೌಡರ ಊರಾದ ಮಾಗಡಿಯಲ್ಲಿರುವ ಚೋಳರ ಕಾಲದ ಪ್ರಸಿದ್ಧ ದೇವಾಲಯವಾದ ತಿರುಮಲೈ ಶ್ರೀ ರಂಗನಾಥಸ್ವಾಮಿಯ ದರ್ಶನವನ್ನು ಈ ಧರ್ನುರ್ಮಾಸದಲ್ಲಿ ಕುಳಿತಲ್ಲಿಂದಲೇ ಮಾಡೋಣ ಬನ್ನಿ.

mandyaಮಾಂಡವ್ಯ ಋಷಿಗಳಿಂದ ಸ್ಥಾಪಿತವಾದ ಈ ಕ್ಷೇತ್ರ ಮಾಂಡವ್ಯ ಕ್ಷೇತ್ರ ಎಂದು ಹೆಸರಾಗಿದೆ. ಆರಂಭದಲ್ಲಿ ಮಾಂಡವ್ಯಕುಟಿ ಎಂದಿಂದ್ದು ನಂತರ ಜನರ ಆಡು ಮಾತಿನಲ್ಲಿ ಅಪಭ್ರಂಷವಾಗಿ ಮಾಕುಟಿ, ಮಾಗುಡಿ ನಂತರ ಅಂತಿಮವಾಗಿ ಮಾಗಡಿ ಎಂದಾಗಿದೆ ಎನ್ನುತ್ತಾರೆ ಸ್ಥಳೀಯರು. ಈ ಪ್ರದೇಶವು ಅಷ್ಟಶೈಲಗಳಿಂದಲೂ,  ಅಷ್ಟ ತೀರ್ಥಗಳಿಂದಲೂ, ಪವಿತ್ರ ಕಣ್ವಾ ನದಿಯಿಂದಲೂ ಕೂಡಿದ ದಿವ್ಯ ಕ್ಷೇತ್ರವಾಗಿದೆ. ಮಾಂಡವ್ಯ, ಕಣ್ವ, ಶುಕ ಮುಂತಾದ ಅನೇಕ ಮಹಿಮಾವಂತ ಮುನಿಗಳ ತಪೋಭೂಮಿ, ಪುಣ್ಯಭೂಮಿಯಾಗಿದ್ದು, ಸುಂದರ ಗಿರಿಕಾನನಗಳಿಂದ ಕೂಡಿದ ರಮ್ಯತಾಣವಾಗಿದೆ. ಮಾಂಡವ್ಯ ಎಂಬ ಋಷಿಗಳು ತಿರುಪತಿಗೆ ಹೋಗಿ ಶ್ರೀ ಶ್ರೀನಿವಾಸನನ್ನು ಕುರಿತು ತಪಸ್ಸು ಮಾಡಿದಾಗ, ಅವರ  ತಪಸ್ಸಿಗೆ ಮೆಚ್ಚಿದ ಶ್ರೀ ವೆಂಕಟಾಚಲಪತಿಯು ಸ್ವರ್ಣಾಚಲಕ್ಕೆ ಹೋಗಿ ತನ್ನನ್ನು ಆರಾಧಿಸಿದಲ್ಲಿ ಅನುಗ್ರಹಿಸುತ್ತೇನೆಂದು ಹೇಳಿದಾಗ, ಆದರಂತೆ,  ಮಾಂಡವ್ಯ ಋಷಿಗಳು ಸ್ವರ್ಣಾಚಲಕ್ಕೆ ಬಂದು ಒಂದು ಕುಟೀರವನ್ನು ನಿರ್ಮಿಸಿಕೊಂಡು ಅಲ್ಲಿಯೇ ಇರುವಾಗ ಅದೊಮ್ಮೆ ಸ್ವಪ್ನದಲ್ಲಿ ಶ್ರೀನಿವಾಸರು ಕಾಣಿಸಿಕೊಂಡು ಉದ್ಭವ ಸಾಲಿಗ್ರಾಮ ರೂಪದಲ್ಲಿರುವ ನನ್ನನ್ನು ನಿತ್ಯವೂ ಆರಾಧಿಸಿದರೆ ನಿನ್ನೆಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗಿ ಮೋಕ್ಷ ಲಭಿಸುತ್ತದೆ ಎಂದು ಹೇಳಿದ ಕಾರಣಕ್ಕೆ, ಮಾಂಡವ್ಯ ಋಷಿಗಳು ಅಲ್ಲಿ ಉದ್ಭವ ಸಾಲಿಗ್ರಾಮವನ್ನು ನಂತರ ಅಲ್ಲಿ ಶ್ರೀ ವೇಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ವಸಿಷ್ಠ ಮಹರ್ಷಿಗಳ ಜೊತೆ ಶ್ರೀ ವೇಂಕಟೇಶ್ವರ ಸ್ವಾಮಿಯನ್ನು ಆರಾಧಿಸಿ ಮುಕ್ತಿಯನ್ನು  ಈ ತಿರುಮಲೆಯಲ್ಲಿ ಪಡೆದರೆಂದು  ಬ್ರಹ್ಮಾಂಡ ಪುರಾಣದಲ್ಲಿ ವಿವರಿಸಲಾಗಿದೆ. ತಿರುಪತಿಗೆ ಹೋಗಲಾಗದವರು ಈ ತಿರುಮಲೆಯ ಶ್ರೀ ಪಶ್ಚಿಮ ವೆಂಕಟಾಚಲಪತಿ  ದರ್ಶನ ಮಾಡಿದಲ್ಲಿ, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದೇ  ನಂಬಲಾಗಿದೆ.

ಆನಂತರ 11-12 ನೇ ಶತಮಾನದಲ್ಲಿ ಚೋಳ ರಾಜನೊಬ್ಬ ಈ ಮಾಗಡಿ ಪಟ್ಟಣವನ್ನು ನಿರ್ಮಿಸಿ, ಅವನ ಕಾಲದಲ್ಲೇ  ದ್ರಾವಿಡ ಶೈಲಿಯಲ್ಲಿ ಈ ಶ್ರೀ ರಂಗನಾಥ ಸ್ವಾಮಿಯ ಈ ದೇವಾಲಯವನ್ನು ಕಟ್ಟಲಾಯಿತು. ನಂತರ ಈ ದೇವಸ್ಥಾನವನ್ನು ಹೊಯ್ಸಳರು, ವಿಜಯನಗರದ ಅರಸರು,  ಕೆಂಪೇಗೌಡರ ವಂಶಸ್ಥರು, ಮೈಸೂರ ಅರಸರು ಅದರಲ್ಲೂ ಮುಖ್ಯವಾಗಿ ಸಂಪಾಜರಾಯ, ಇಮ್ಮಡಿ ಕೆಂಪೇಗೌಡ ಮತ್ತು ದೊಡ್ಡವೀರಪ್ಪ ಗೌಡರ ಕಾಲದಲ್ಲಿ ದೇವಾಲಯದ ವಿಸ್ತೀರ್ಣಗೊಂಡಿದ್ದಲ್ಲದೇ, ಜೀರ್ಣೊದ್ಧಾರ ಮತ್ತು ಅಭಿವೃದ್ಧಿ ಹೊಂದುತ್ತದೆ.  ಈ ಸ್ವಾಮಿಯ ನಿತ್ಯಪೂಜೆ, ಅಮೃತ ಪಡಿಗೆ, ಆಭರಣ ಅಲಂಕಾರ, ದೀಪಾರಾಧನೆ ಇತ್ಯಾದಿಗಳಿಗಾಗಿ ರಾಜರುಗಳು, ಅಧಿಕಾರಿಗಳು ಮತ್ತು ಭಕ್ತಾದಿಗಳು ದಾನ-ದತ್ತಿಗಳನ್ನು ನೀಡಿರುವ ವಿಚಾರವನ್ನು ಅಲ್ಲಿ ಕಾಣಸಿಗುವ  ಅನೇಕ ಶಾಸನಗಳು ಮತ್ತು ದಾನಪತ್ರಗಳಲ್ಲಿ ಕಾಣಬಹುದಾಗಿದೆ. ಈ ದೇವಾಲಯದ ಬಳಿ ದೊರೆತಿರುವ 1524 ಮತ್ತು 1578ರ ಶಾಸನಗಳು ಮತ್ತು ಇತರ ದಾನ ಪತ್ರಗಳಲ್ಲಿ ಈ ಸ್ವಾಮಿಯನ್ನು ತಿರುವಂಗಳನಾಥ ಎಂದು ಕರೆಯಲಾಗುತ್ತಿದ್ದು, ಮೈಸೂರು ಅರಸರ ಕಾಲದಿಂದೀಚೆಗೆ ಇದು ಶ್ರೀ ರಂಗನಾಥ ಸ್ವಾಮಿ  ಎಂದು  ಪ್ರಸಿದ್ಧವಾಯಿತು. ಕೇವಲ ರಾಜ ಮಹಾರಾಜರುಗಳಲ್ಲದೇ,  ದೇವರ ಭಕ್ತನಾದ ನಾಗಿರೆಡ್ಡಿ ಎಂಬಾತನು  ದೇವಾಲಯದ ಮುಖ ಮಂಟಪವನ್ನು ನಿರ್ಮಿಸಿದಲ್ಲಿ, ದೇವಾಲಯದ ಹಿಂದಿನ ಸಾರ್ಸನಿಕ್ ಶೈಲಿಯ ಗೋಪುರವನ್ನು ಸ್ವಾಮಿಯ ಮತ್ತೊಬ್ಬ ಭಕ್ತನಾದ ಮುಸ್ಲಿಂ ಧರ್ಮದ ಖಿಲ್ಲೇದಾರನು ಕಟ್ಟಿಸಿದರೆಂದು ಬಲ್ಲವರಿಂದ ತಿಳಿದು ಬರುತ್ತದೆ. ದೇವಾಲಯದ ಪಶ್ಚಿಮ ಮತ್ತು ಪೂರ್ವದ ದ್ವಾರಗಳಲ್ಲಿ ಎತ್ತರವಾದ ಎರಡು ರಾಜ ಗೋಪುರಗಳಿಂದಾಗಿ ಈ ತಿರುಮಲೆಯ ಅಸ್ತಿತ್ವವನ್ನು ಬಲು ದೂರದಿಂದಲೂ ಕಾಣಬಹುದಾಗಿದೆ.

anga2ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿಯೂ ದೇವರನ್ನು ಪೂರ್ವಾಭಿಮುಖವಾಗಿಯೋ ಇಲ್ಲವೇ ಉತ್ತರಾಭಿಮುಖವಾಗಿಯೋ ಪ್ರತಿಷ್ಟಾಪನೆ ಮಾಡುವುದು ಸಹಜವಾಗಿದ್ದು ಈ ದೇವಾಲಯದಲ್ಲಿರುವ ಉಳಿದ ಎಲ್ಲಾ  ದೇವರುಗಳೂ  ಪೂರ್ವಾಭಿಮುಖವಾಗಿದ್ದರೆ, ಈ ದೇವಸ್ಥಾನದ ಪ್ರಮುಖ ದೇವರಾದ ಸುಮಾರು 4.5 ಅಡಿ ಎತ್ತರದ ವಿಜಯನಗರ ಶೈಲಿಯಲ್ಲಿರುವ ಶ್ರೀರಂಗನಾಥ ಸ್ವಾಮಿಯ ವಿಗ್ರಹ ಮಾತ್ರ ಪಶ್ಚಿಮಾಭಿಮುಖವಾಗಿರುವುದು ಇಲ್ಲಿನ ವಿಶೇಷವಾಗಿದೆ. ಈ ದೇವರ ಮುಂದೆ ಮಾಂಡವ್ಯರು ಆರಾಧಿಸುತ್ತಿದ್ದರೆನ್ನಲಾದ ಸ್ವಾಮಿ ಸ್ವಯಂಭೂ ರೂಪದ ಸಾಲಿಗ್ರಾಮವನ್ನು ಕಾಣಬಹುದಾಗಿದ್ದು ಅದನ್ನೇ ಮೂಲ ದೇವರೆಂದೇ ಅಲ್ಲಿಯ ಅರ್ಚಕರು ತಿಳಿಸುತ್ತಾರೆ. ಅ ಸಾಲಿಗ್ರಾಮಕ್ಕೆ ಎಷ್ಟೇ ಕೊಡ ನೀರಿನ ಅಭಿಷೇಕ ಮಾಡಿದರೂ ಆ ನೀರು  ಎಲ್ಲಿಗೆ ಹೋಗುತ್ತದೆ ಎಂದು ಇದುವರೆವಿಗೂ ರಹಸ್ಯವಾಗಿಯೇ ಇದೆ  ಎಂದು ತಿಳಿಸುತ್ತಾರೆ.  ನವರಂಗದಲ್ಲಿರುವ ಶ್ರೀದೇವಿ ಸಮೇತ ಶ್ರೀ ಸ್ವಾಮಿಯ ಉತ್ಸವ ಮೂರ್ತಿ ಅತ್ಯಂತ ಸುಂದರವಾಗಿದ್ದು ಸ್ವಾಮಿಯ ಎಡಗಡೆಗೆ ಅರ್ಥಾತ್ ಹಿಂದೆ ಲಕ್ಷ್ಮಿ ಇದ್ದರೆ, ಮುಂದೆ ಬಲದಲ್ಲಿ ಶ್ರೀ ಸೀತಮ್ಮನವರು ಇದ್ದಾರೆ. ಸ್ವಾಮಿಯ ಎದುರಿಗೆ ಹನುಮ-ಗರುಡರ ದೊಡ್ಡ ಕೆತ್ತನೆಗಳೂ, ಅದರ ಸುತ್ತ ಶ್ರೀ ರಾಮ, ರಾಮಾನುಜಾಚಾರ್ಯರು, ಇತರ ಆಳ್ವಾರುಗಳು ಮತ್ತು ವೈಷ್ಣವ ಭಕ್ತರ ಪ್ರತಿಮೆಗಳು ಪ್ರತ್ಯೇಕ ಗರ್ಭಗೃಹಗಳಲ್ಲಿ ನಯನಮನೋಹರವಾಗಿವೆ.

ranga4ಶ್ರೀ ರಂಗನಾಥಸ್ವಾಮಿಯ ಗರ್ಭಗುಡಿಯ ಹಿಂದೆಯೇ ಗೋಡೆಯ ಮೇಲೆ ಮಲಗಿರುವ ಭಂಗಿಯಲ್ಲಿರುವ ಭವ್ಯವಾದ ಶ್ರೀ ರಂಗನಾಥ ಸ್ವಾಮಿ ಇದ್ದು ಈ ದೇವರನ್ನು ಮಾಗಡಿರಂಗ, ಮಕ್ಕಳರಂಗ, ಮೂಲರಂಗ ಎಂದು ಕರೆಯುತ್ತಾರಲ್ಲದೇ,  ಈ ರಂಗನಾಥ  ಸ್ವಾಮಿಯು ದಿನೇ ದಿನೇ ಬೆಳೆಯುತ್ತಿದೆ ಎಂಬ ನಂಬಿಕೆ ಇರುವ ಕಾರಣ ಇದನ್ನು ಬೆಳೆಯುವರಂಗ  ಎಂದೂ ಕರೆಯುತ್ತಾರೆ ಎಂದು  ಅಲ್ಲಿನ ಅರ್ಚಕರು ತಿಳಿಸುತ್ತಾರೆ.  ಈ ಬೆಳೆಯುವ ರಂಗನ ಪೂಜೆ ಮಾಡುವ ಅರ್ಚಕರು ಮುಖ ನೋಡಿದ ತಕ್ಷಣವೇ ಅವರ ಆಗು ಹೋಗುಗಳನ್ನು ಕರಾರುವಾಕ್ಕಾಗಿ ಹೇಳುವುದು ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಅದರ ಜೊತೆ  ಅಲ್ಲಿನ ಫಲಕಗಳ ಮೇಲೆ ಬರೆಯುವ ಹಿತವಚನಗಳು ಭಕ್ತರಿಗೆ ಅಪ್ಯಾಯಮಾನವೆನಿಸುತ್ತದೆ. ಶ್ರೀರಂಗನಾಥ ಸ್ವಾಮಿ ದೇವಾಲಯದ ಬಲಭಾಗಕ್ಕೆ ಅನತಿ ದೂರದಲ್ಲಿರುವ ಸ್ತಂಭಗಿರಿ ಎಂದು ಹೆಸರಾದ ಶ್ರೀ ನರಸಿಂಹಸ್ವಾಮಿ ಬೆಟ್ಟ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಕ್ತ ಪ್ರಹ್ಲಾದನು ಸ್ಥಾಪಿಸಿದನೆಂದು ಹೇಳಲಾಗುವ ಕಂಬದ ಮುಂದಿರುವ ಯೋಗಾನರಸಿಂಹನನ್ನು ಕಂಬದ ನರಸಿಂಹಸ್ವಾಮಿ ಎಂದು ಕರೆಯುತ್ತಾರೆ.

ranga1ದೇಶದ ಹಲವೆಡೆ ವರ್ಷಕ್ಕೊಮ್ಮೆ ಅಥವಾ ವಿಶೇಷ ದಿನಗಳಲ್ಲಿ ಸ್ವಾಮಿಯ ಮೇಲೆ ಸೂರ್ಯನ ಕಿರಣಗಳು ಬೀಳುತ್ತದೆ. ಆದರೆ ತಿರುಮಲೈ ಶ್ರೀರಂಗನಾಥಸ್ವಾಮಿ ದೇವಾಲಯದ ಹೊರಗಿರುವ ಮರಗಳು, ಧ್ವಜಪಟ ಕಂಬ, ಹೆಬ್ಬಾಗಿಲುಗಳನ್ನು ಬೇಧಿಸಿ ಪ್ರತಿ ದಿನವೂ ಸೂರ್ಯಾಸ್ತ ಸಮಯದಲ್ಲಿ   ಸೂರ್ಯನ ಕಿರಣಗಳು ರಂಗನಾಥಸ್ವಾಮಿಯ ಪಾದದಿಂದ ಶಿರದವರೆಗೆ ಚುಂಬಿಸುವುದು ಇಲ್ಲಿನ ವಿಶೇಷವಾಗಿದೆ. ಉತ್ತರಾಯಣ ಕಾಲದಲ್ಲಿ ಸೂರ್ಯ ಮುಳುಗುವ ಹೊತ್ತಿನಲ್ಲಿ ಸೂರ್ಯನ ರಶ್ಮಿ ಮೊದಲು ಸ್ವಾಮಿಯ ಶಿರದ ಮೇಲಿನ ಕಿರೀಟವನ್ನು ಪ್ರಜ್ವಲಿಸಿ ನಂತರ ಮೂರ್ತಿಯ ಮುಂದಿರುವ ಸಾಲಿಗ್ರಾಮಕ್ಕೆ ಸೂರ್ಯಕಿರಣಗಳು ಚುಂಬಿಸಿ, ಆನಂತರ ನೇರವಾಗಿ ತಿರುಮಲೆ ರಂಗನಾಥಸ್ವಾಮಿ ಮೂರ್ತಿಯ ಮೇಲೆ ಬಿದ್ದು ರಂಗನ ಮೂರ್ತಿ ಚಿನ್ನದಂತೆ ಪ್ರಜ್ವಲಿಸುವುದನ್ನು ವರ್ಣಿಸುವುದಕ್ಕಿಂತಲು ನೋಡುವುದಕ್ಕೆ ಮಹದಾನಂದವಾಗುತ್ತದೆ.

ಪ್ರತಿ ದಿನವೂ ಬೆಳಿಗ್ಗೆ 6 ಗಂಟೆಗೆ  ಅರ್ಚಕರು ದೇವಾಲಯವನ್ನು ತೆರೆದು, ತಿರುಪ್ಪವೈ ನಲ್ಲಿರುವ  ಒಂದೊಂದು ಪಾಶುರಗಳ ಪಾರಾಯಣ ಆಂಡಾಳ್ ತಾಯಿಯ ಸಮ್ಮುಖದಲ್ಲಿ ಶ್ರೀರಂಗನಾಥಸ್ವಾಮಿಯ ಪಾದಕಮಲಗಳಿಗೆ ಅರ್ಪಣೆಯಾಗುತ್ತದೆ. ನಂತರ  8:30 ರಿಂದ 1:30ರ ವರೆಗೆ ಭಕ್ತಾದಿಗಳ ದರ್ಶನಕ್ಕೆ ಅವಕಾಶವಿರುತ್ತದೆಯಲ್ಲದೇ, ಪುನಃ ಸಂಜೆ 4:30 ರಿಂದ ರಾತ್ರಿ 7:30ರ ವರೆಗೆ ತೆರೆದಿರುತ್ತದೆ,

ಮಾಗಡಿಯ ಸ್ವರ್ಣಾದ್ರಿಗಿರಿ ತಿರುಮಲೆಯಲ್ಲಿ ಪ್ರತಿ ಹಬ್ಬ ಹರಿದಿನಗಳಲ್ಲಿ  ಶ್ರೀರಂಗನಿಗೆ ವಿಶೇಶ ಪೂಜೆ ಪುನಸ್ಕಾರಗಳು ನಡೆದರೆ, ಧನುರ್ಮಾಸದ ಪೊಜಾಸೇವೆಗಳು ಬೆಳಿಗ್ಗೆ 4.30ರಿಂದಲೇ ಪ್ರಾರಂಭವಾಗಿ ಕಾಮಧೇನು ಗೋಪೊಜೆಯ ನಂತರ ಶ್ರೀರಂಗನಿಗೆ ಆಂತರಿಕವಾಗಿ ದೈನಂದಿನ ತಿರುವರಾಧನೆ ಸಮರ್ಪಣೆಯಾಗುತ್ತದೆ. ಇದಾದ ಬಳಿಕೆ ಸ್ವಾಮಿಗೆ ಅರ್ಚನೆ, ನಿವೇಧನೆ, ತಿರುಪ್ಪಾವೈ ಪಾರಯಣ ನೆರವೇರಿಸಲಗುತ್ತದೆ.

ಇನ್ನು ಪ್ರತಿ ವರ್ಷದ ಚೈತ್ರ ಮಾಸದ ಹುಣ್ಣಿಮೆಯ ಮುಂಚೆ ಬರುವ ಉತ್ತರಾ ನಕ್ಷತ್ರದಂದು ಶ್ರೀ  ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವವನ್ನು ಬಹಳ  ಅದ್ದೂರಿಯಿಂದ ನಡೆಸಲಾಗುತ್ತದೆ ಈ ಸುಂದರ ಕ್ಷಣಗಳನ್ನು  ಕಣ್ತುಂಬಿಸಿಕೊಂಡು ಭಗವಂಗನ  ಅನುಗ್ರಹಕ್ಕೆ ಪಾತ್ರರಾಗಲೂ ದೇಶವಿದೇಶಗಳಿಂದ ಸಹಸ್ರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಇದೇ ಸಮಯದಲ್ಲಿ ಇಲ್ಲಿ ನಡೆಯುವ ದನಗಳ ಜಾತ್ರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ.

ದೇವಾಲಯದ ಮುಂಭಾಗದಲ್ಲಿ ಪುರಾತನ ಕಾಲದ ಪುಷ್ಕರಣಿ ಇದ್ದು ಅಲ್ಲಿನ ನೀರನ್ನು ಸ್ವಾಮಿಯ ಅಭಿಷೇಕಕ್ಕೆ ಬಳಸಲಾಗುತ್ತಾದೆ. ಅದರ ಪಕ್ಕದಲ್ಲೇ  ಇರುವ ಅನ್ನಪೂರ್ಣ ಮಂದಿರದಲ್ಲಿ ಪ್ರತಿ ನಿತ್ಯವೂ.ದಾಸೋಹವಿದ್ದು  ದೇವಾಲಯಕ್ಕೆ ಭೇಟಿ ನೀಡುವ ಸಹಸ್ರಾರು ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ.

ಇಷ್ಟೆಲ್ಲಾ ತಿಳಿದ ಮೇಲೆ ಇನ್ನೇಕ ತಡಾ ಈ ವಾರಾಂತ್ಯದಲ್ಲಿ ಸಮಯ ಮಾಡಿ ಕೊಂಡು ಮಾಗಡಿಯ ತಿರುಮಲೈ ಶ್ರೀ ರಂಗನಾಥ ಸ್ವಾಮಿಯ ದರ್ಶನವನ್ನು ಪಡೆದು ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗ್ತೀರೀ ತಾನೇ?

ಏನಂತೀರಿ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s