ವಿದ್ಯೆ, ವಿವೇಕಕಿಂತಲೂ, ಧರ್ಮವೇ ಹೆಚ್ಚು ಎಂದು ದೇಶ ಮತ್ತು ಧರ್ಮದ ನಡುವಿನ ಅಂತರ ತಿಳಿಯದ 6 ಹೆಣ್ಣು ಮಕ್ಕಳಿಂದಾಗಿ ಇಡೀ ರಾಜ್ಯಕ್ಕೇ ಕೆಟ್ಟ ಹೆಸರು ತರುತ್ತಿರುವ ಈ ಸಂಧರ್ಭದಲ್ಲಿ 9 ದಶಕಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿಯೂ ತನ್ನ ವಿವೇಕ ಕಳೆದುಕೊಳ್ಳದೇ ವಿದ್ಯೆ ಕಲಿತು ಇಡೀ ಸಮಾಜವನ್ನೇ ಬದಲಾಯಿಸಿದಂತಹ ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಹೃದಯಸ್ಪರ್ಶಿ ಕಥೆಯೊಂದರ ಭಾವಾನುವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಅದು 1943, ಹುಬ್ಬಳ್ಳಿಯ ಮೂಲದ 22 ವರ್ಷದ ಯುವ ವೈದ್ಯರಾಗಿದ್ದ ಡಾ. ಆರ್. ಎಚ್. ಕುಲಕರ್ಣಿಯವರು ಮಹಾರಾಷ್ಟ್ರ-ಕರ್ನಾಟಕ ಗಡಿ ಸಮೀಪದ ಚಂದ್‌ಗಢ ಗ್ರಾಮದ ಸರ್ಕಾರೀ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ದಟ್ಟ ಅರಣ್ಯಗಳ ನಡುವಿದ್ದ ಆ ಊರು ತೀರಾ ಕುಗ್ರಾಮವೆಂದರೂ ತಪ್ಪಾಗದು. ಅದೊಂದು ಮಳೆಗಾಲದ ಸಮಯದಲ್ಲಿ ಹೊರಗೆ ಭಾರೀ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದ ಕಾರಣ, ಬೆಚ್ಚಗೆ ಕಂಬಳಿಯೊಂದನ್ನು ಹೊದ್ದಿಕೊಂಡು ಡಾ ಕುಲಕರ್ಣಿ ಪುಸ್ತಕವೊಂದನ್ನು ಓದುತ್ತಿದ್ದರು. ಇದ್ದಕ್ಕಿದ್ದಂತೆ, ಅವರ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುವ ಶಬ್ದ ಕೇಳಿ, ಅರೇ ಇಷ್ಟು ಹೊತ್ತಿನಲ್ಲಿ ಯಾರಿರಬಹುದು ಎಂದು ಯೋಚಿಸಿ, ಒಂದು ಕ್ಷಣ ಭಯವಾದರೂ, ಅದಕ್ಕೆ ಅಂಜದೇ, ಅವರು ಬಾಗಿಲು ತೆರೆದು ನೋಡಿದರೆ, ಕೈಯ್ಯಲ್ಲಿ ದೊಣ್ಣೆ ಹಿಡಿದು ಮುಖ ಮುಚ್ಚಿಕೊಂಡಿದ್ದ ನಾಲ್ಕು ಜನ ದಾಂಡಿಗರು ಮರಾಠಿಭಾಷೆಯಲ್ಲಿ ವೈದ್ಯರೇ, ನಿಮ್ಮ ವೈದ್ಯಕೀಯ ಚೀಲದೊಂದಿಗೆ ಈ ಕೂಡಲೇ ಹೊರಡಿ ಎಂದು ಆಜ್ಞಾಪಿಸುತ್ತಾರೆ.
ತಲೆ ಗಟ್ಟಿಗಿದೆ ಎಂದು ಬಂಡೆಗೆ ಚೆಚ್ಚಿಕೊಂಡರೆ ನಮ್ಮ ತಲೆಗೇ ಪೆಟ್ಟಾಗುತ್ತದೆಯೇ ಹೊರತು ಬಂಡೆ ಕಲ್ಲಿಗೆ ಏನೂ ಆಗುವುದಿಲ್ಲ ಎಂಬುದಾಗಿ ಯೋಚಿಸಿದ ಆ ವೈದ್ಯರು. ಸದ್ದಿಲ್ಲದೆ ತಮ್ಮ ಚೀಲವನ್ನು ತೆಗೆದುಕೊಂಡು ಅವರು ತಂದಿದ್ದ ವಾಹನದಲ್ಲಿ ಕುಳಿತುಕೊಳ್ಳುತ್ತಾರೆ, ಹಾಗೆ ಹೋಗುವ ದಾರಿಯಲ್ಲಿ ಭಯದಿಂದಲೇ, ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ? ಎಂದು ಕೇಳಿದ್ದಕ್ಕೆ ಉತ್ತರ ಸಿಗದಿದ್ದಾಗ ಮೌನವಾಗುತ್ತಾರೆ. ಸುಮಾರು ಒಂದೂವರೆ ಗಂಟೆಗಳ ಸುದೀರ್ಘ ಪಯಣದ ನಂತರ ಆ ವಾಹನ ಒಂದು ಕಡೆ ನಿಂತಾಗ ಆ ಕಡು ಕತ್ತಲೆಯಲ್ಲಿ ಲಾಟೀನಿನ ಬೆಳಕಿನಲ್ಲಿ ವೈದ್ಯರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗುತ್ತಾರೆ. ಆಲ್ಲೊಂದು ಮಂಚದ ಮೇಲೆ ತುಂಬು ಗರ್ಭಿಣಿಯೊಬ್ಬಳು ಮಲಗಿದ್ದು ಅವರಳ ಆರೈಕೆಗೆಂದು ಆಕೆಯ ಪಕ್ಕದಲ್ಲಿ ಹಣ್ಣು ಹಣ್ಣು ಮುದುಕಿಯೊಬ್ಬರು ಕುಳಿತಿರುತ್ತಾರೆ. ವೈದ್ಯರು ಅಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡುಕೊಳ್ಳುವಷ್ಟರಲ್ಲಿಯೇ ಆ ಅಜ್ಜಿ ವೈದ್ಯರೇ ಹೆರಿಗೆಯ ಬೇನೆಯಿಂದ ಬಹಳ ನರಳುತ್ತಿದ್ದಾಳೆ. ದಯವಿಟ್ಟು ಸುಸೂತ್ರವಾಗಿ ಹೆರಿಗೆ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಬೇಡಿಕೊಳ್ಳುತ್ತಾಳೆ.
ಆಗಷ್ಟೇ ವೈದ್ಯಕೀಯ ಪದವಿಯನ್ನು ಮುಗಿಸಿ ಕೆಲಸಕ್ಕೆ ಸೇರಿದ್ದ ಕಾರಣ ಅವರು ಎಂದೂ ಹೆರಿಗೆಯನ್ನು ಮಾಡಿಸಿದ ಅನುಭವ ಇಲ್ಲದಿದ್ದರೂ, ನೋವಿನಿಂದ ನರಳುತ್ತಿದ್ದ ಆ ಹುಡುಗಿಯನ್ನು ನೋಡಿ ವೈದ್ಯರ ಮನಸ್ಸು ಕರಗಿ ಆ ಹುಡುಗಿಗೆ ಸಹಾಯ ಮಾಡಲು ನಿರ್ಧರಿಸಿ ಆಕೆಯ ನೋವನ್ನು ಮರೆಸುವ ಸಲುವಾಗಿ ತಂಗೀ, ನೀನು ಯಾರು? ಇಲ್ಲಿಗೆ ಹೇಗೆ ಬಂದೇ ಎಂದು ಕೇಳುತ್ತಾರೆ.
ಡಾಕ್ಟರ್, ಇಲ್ಲಿಯ ದೊಡ್ಡ ಜಮೀನ್ದಾರರ ಮಗಳು. ನನಗೆ ಈ ನೋವನ್ನು ತಡೆಯಲಾಗುತ್ತಿಲ್ಲ ಮತ್ತು ನನಗೆ ಬದುಕಲು ಇಷ್ಟವಿಲ್ಲ ಎಂದು ನೊವಿನಿಂದಲೇ ಹೇಳುತ್ತಲೇ ತನ್ನ ವೃತ್ತಾಂತವನ್ನು ವೈದ್ಯರ ಬಳಿ ಬಿಚ್ಚಿಡುತ್ತಾಳೆ. ತನ್ನ ಹುಟ್ಟೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಆವರ ಊರಿನಲ್ಲಿ ಪ್ರೌಢಶಿಕ್ಷಣದ ಶಾಲೆ ಇಲ್ಲದ ಕಾರಣ ದೂರದ ಊರಿಗೆ ಓದಲು ಫೋಷಕರು ಕಳುಹಿಸಿದರೆ, ಸಹಪಾಠಿಯೊಬ್ಬನ ಕುಟಿಲತೆಯಿಂದ ಆಕೆ ಗರ್ಭಿಣಿಯಾಗಿ ಆ ವಿಷಯ ತಿಳಿದ ತಕ್ಷಣವೇ ಆ ಹುಡುಗ ಊರು ಬಿಟ್ಟು ಓಡಿ ಹೋದಾಗ ವಿಧಿ ಇಲ್ಲದೇ ಆ ವಿಷಯವನ್ನು ತಂದೆ ತಾಯಿಗಳಿಗೆ ತಿಳಿಸಿದಾಗ, ಅವರು ಸಮಾಜಕ್ಕೆ ಹೆದರಿ ಆ ಹುಡುಗಿಯನ್ನು ಅಂತಹ ಹಳ್ಳಿಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ತಿಳಿಸುತ್ತಾಳೆ.
ವೈದ್ಯಕೀಯಶಾಸ್ತ್ರವನ್ನು ಓದುವಾಗ ಹೆರಿಗೆ ಮಾಡಿಸುವುದನ್ನು ಹೇಳಿಕೊಟ್ಟಿದ್ದನ್ನೇ ನೆನಪಿಸಿಕೊಂಡು ಡಾ.ಕುಲಕರ್ಣಿ ಯವರು ಭಗವಂತನ ಮೇಲೆ ಭಾರ ಹೇರಿ ಹಾಗೂ ಹೀಗೂ ಪ್ರಯತ್ನಿಸಿ ಹೆರಿಗೆ ಮಾಡಿಸಿದರೂ, ಹುಟ್ಟಿದ ತಕ್ಷಣ ಅಳಬೇಕಾದ ಆ ಮಗು ಅಳದೇ ಹೋದಾಗ ಒಂದು ರೀತಿಯ ಭಯ ಉಂಟಾಗುತ್ತದೆ. ತನಗೆ ಹುಟ್ಟಿದ ಹೆಣ್ಣು ಮಗು ಅಳದೇ ಹೋದದ್ದನ್ನು ಮನಗಂಡ ಆ ಹುಡುಗಿ, ಅವಳು ಹೇಣ್ಣೇ! ಸಾಯಲಿ ಬಿಡಿ. ಇಲ್ಲದಿದ್ದರೇ ನನ್ನಂತೆಯೇ ದುರದೃಷ್ಟಕರ ಜೀವನ ನಡೆಸಬೇಕಾಗುತ್ತದೆ ಎಂದು ಬಿಕ್ಕಳಿಸುತ್ತಾಳೆ.
ಆದರೆ ಛಲ ಬಿಡದ ಡಾ. ಕುಲಕರ್ಣಿಯವರು ಮಗುವನ್ನು ತಲೆ ಕೆಳಗೆ ಹಿಡಿದು ಮೇಲೆ ಕೇಳಗೆ ಆಡಿಸಿ ಬೆನ್ನಿನ ಮೇಲೆ ಸಣ್ಣಗೆ ಗುದ್ದಿ ಹಾಗೂ ಹೀಗೂ ಮಾಡಿ ಮಗು ಅಳಲಾರಂಭಿಸಿದಾಗ ಎಲ್ಲರೂ ನಿಟ್ಟುಸಿರು ಬಿಡುತ್ತಾರೆ. ಅಷ್ಟೆಲ್ಲಾ ಸತತ ಪ್ರಯತ್ನದಿಂದ ಹೆರಿಗೆಯನ್ನು ಮಾಡಿಸಿ ಕೊಠಡಿಯಿಂದ ಹೊರಬಂದು ಮನೆಗೆ ಹೊರಡಲು ಅನುವಾದ ವೈದ್ಯರ ಕೈಯ್ಯಿಗೆ 100 ರೂಪಾಯಿಗಳನ್ನು ಕೊಡುತ್ತಾರೆ. ನಿಜ ಹೇಳಬೇಕೆಂದರೆ ಅಂದಿನ ಕಾಲಕ್ಕೆ 100 ರೂಪಾಯಿ ಬಹಳ ದೊಡ್ಡ ಮೊತ್ತವಾಘಿತ್ತು ಏಕೆಂದರೆ, ಆ ವೈದ್ಯರಿಗೆ ತಿಂಗಳ ಸಂಬಳವೇ ₹75 ರೂಪಾಯಿಗಳಿತ್ತು. ಕೈಯ್ಯಲ್ಲಿ ಹಣವನ್ನು ಪಡೆದ ನಂತರ ಒಂದು ಕ್ಷಣ ಯೋಚಿಸಿ ಅದೇನನ್ನೋ ಮರೆತೆ ಎಂದು ಮತ್ತೆ ಆ ಹೆರಿಗೆಮಾಡಿಸಿದ ಕೋಣೆಗೆ ಹೋಗಿ ತಮಗೆ ಕೊಟ್ಟಿದ್ದ ಆ 100 ರೂಪಾಯಿಯನ್ನು ಹುಟ್ಟಿದ ಮಗುವಿನ ಕೈಗೆ ನೀಡಿ ಜೀವನದಲ್ಲಿ ಕೆಲವೊಮ್ಮೆ ಇಂತಹ ಅಹಿತಕರ ಘಟನೆಗಳು ನಮ್ಮ ಕೈ ಮೀರಿ ನಡೆದು ಹೋಗುತ್ತದೆ. ಅದಕ್ಕಾಗಿ ದಯವಿಟ್ಟು ಕೆಟ್ಟ ನಿರ್ಧಾರ ತೆಗೆದುಕೊಳ್ಳದಿರು. ಒಬ್ಬ ಅಣ್ಣನಾಗಿ ಹೇಳಬೇಕೆಂದರೆ, ಸಾಧ್ಯವಾದರೆ ಪುಣೆಯ ನರ್ಸಿಂಗ್ ಕಾಲೇಜಿಗೆ ಹೋಗು ಅಲ್ಲಿ ನನ್ನ ಸ್ನೇಹಿತನಾದ ಡಾ. ಆಪ್ಟೆ ಯವರನ್ನು ಕಂಡು ಡಾ.ಆರ್.ಎಚ್.ಕುಲಕರ್ಣಿ ಕಳುಹಿಸಿದ್ದಾರೆಂದು ಹೇಳು. ಅವರು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತಾರೆ ಎಂದು ತಾಯಿ ಮತ್ತು ಮಗುವಿನ ತಲೆಯ ಮೇಲೆ ಆಶೀರ್ವಾದ ಪೂರ್ವಾಕವಾಗಿ ಹರಸಿ ತಮ್ಮ ಮನೆಗೆ ಮರಳುತ್ತಾರೆ.
ಈ ಘಟನೆ ನಡೆದು ಸುಮಾರು ವರ್ಷಗಳ ನಂತರ ಡಾ.ಆರ್.ಎಚ್.ಕುಲಕರ್ಣಿ ಅವರು ಅಂದಿನ ಕಾಲದಲ್ಲೇ ಸ್ತ್ರೀ ಪ್ರಸೂತಿ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದಲ್ಲದೇ, ಔರಂಗಾಬಾದಿನಲಿ ನಡೆಯುತ್ತಿದ್ದ ವೈದ್ಯಕೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೋಗಿರುತ್ತಾರೆ. ಆ ವೇದಿಕೆಯಲ್ಲಿ ಡಾ. ಚಂದ್ರ ಎಂಬ ತರುಣಿ ಅತ್ಯಂತ ಮನೋಜ್ಞವಾಗಿ ತನ್ನ ವಿಷಯವನ್ನು ಮಂಡಿಸಿದ್ದು ಕುಲಕರ್ಣಿಯವರಿಗೆ ಮೆಚ್ಚುಗೆಯಾಗಿ ಇನ್ನೇನು ಆಕೆ ವೇದಿಕಯಿಂದ ಕೆಳಗೆ ಇಳಿಯ ಬೇಕು ಎನ್ನುವಷ್ಟರಲ್ಲಿ ಯಾರೋ ಡಾ.ಕುಲಕರ್ಣಿಯವರನ್ನು ಹೆಸರಿಟ್ಟು ಜೋರಾಗಿ ಕರೆದದ್ದನ್ನು ಕೇಳಿಸಿಕೊಂಡ ಡಾ. ಚಂದ್ರಾ ಮತ್ತೆ ಕುಲಕರ್ಣಿಯವರ ಬಳಿಗೆ ಹೋಗಿ ಕ್ಷಮಿಸಿ ಸರ್, ನೀವು ಎಂದಾದರೂ ಚಂದಗಢಕ್ಕೆ ಹೋಗಿದ್ದೀರಾ? ಎಂದು ಕೇಳುತ್ತಾಳೆ.
ಸ್ವಲ್ಪ ಹೊತ್ತು ನೆನಪಿಸಿಕೊಂಡು ಹೌದು ಬಹಳ ವರ್ಷಗಳ ಹಿಂದೆ ಹೋಗಿದ್ದೆ ಎಂದು ಹೇಳುತ್ತಾರೆ.
ಅದನ್ನು ಕೇಳಿದ ತಕ್ಷಣವೇ ಮುಖವನ್ನು ಅರಳಿಸಿಕೊಂಡ ಡಾ. ಚಂದ್ರಾ ಸರ್, ನೀವಿಂದು ನಮ್ಮ ಮನೆಗೆ ಖಂಡಿತವಾಗಿಯೂ ಬರಲೇ ಬೇಕು ಎಂದು ವಿನಂತಿಸಿಕೊಳ್ಳುತ್ತಾಳೆ.
ಪುಟ್ಟೀ ನಾನು ನಿನ್ನನ್ನು ಮೊದಲ ಬಾರಿ ನೋಡುತ್ತಿದ್ದೇನೆ. ನೀನು ಮಾಡಿದ ಭಾಷಣ, ನಿನ್ನ ಜ್ಞಾನ ಮತ್ತು ಸಂಶೋಧನೆಯನ್ನು ನಾನು ಪ್ರಶಂಸಿಸುತ್ತೇನೆ. ಆದರೆ ಇವತ್ತು ನಾನು ನಿನ್ನೊಂದಿಗೆ ಬರಲು ಸಾಧ್ಯವಿಲ್ಲ. ಮುಂದೊಮ್ಮೆ ನೋಡೋಣ ಎನ್ನುತ್ತಾರೆ.
ಸರ್ ದಯವಿಟ್ಟು ಹಾಗೆನ್ನದಿರಿ. ನೀವು ನಮ್ಮ ಮನೆಗೆ ಬಂದರೆ ಅದು ಕುಚೇಲ ಮನೆಗೆ ಶ್ರೀಕೃಷ್ಣ ಬಂದಂತಾಗುತ್ತದೆ ಎಂದು ಪರಿ ಪರಿಯಾಗಿ ಕೇಳಿಕೊಂಡಾಗ ಆಕೆಯ ಒತ್ತಾಯಕ್ಕೆ ಮಣಿದ ಡಾ. ಕುಲಕರ್ಣಿಯವರು ಡಾ.ಚಂದ್ರಾ ಅವರ ಮನೆಗೆ ಹೋಗುತ್ತಲೇ, ಅಮ್ಮಾ ನಮ್ಮ ಮನೆಗೆ ಯಾರು ಬಂದಿದ್ದಾರೆ ನೋಡು! ಎಂದು ಗೇಟಿನ ಬಳಿಯಿಂದಲೇ ಸಂಭ್ರಮದಿಂದ ಕೂಗಿ ಕೊಂಡಾಗ, ಡಾ.ಚಂದ್ರಾಳ ತಾಯಿ ಹೊರಗೆ ಬಂದು ಎದುರಿಗಿದ್ದ ಡಾ.ಕುಲಕರ್ಣಿಯನ್ನು ನೋಡಿದ ಕೂಡಲೇ, ತನ್ನ ಕಣ್ಣನ್ನೇ ನಂಬಲಾಗದೇ, ಗದ್ಗತಿಳಾಗಿ ಕಣ್ಣೀರು ತುಂಬಿಕೊಂಡು ಅವಳಿಗೇ ಅರಿವಿಲ್ಲದಂತೆ ಡಾ, ಕುಲಕರ್ಣಿಯವರ ಪಾದಕ್ಕೆ ಎರಗುತ್ತಾಳೆ.
ಪರಿಚಯವೇ ಇಲ್ಲದ ಮನೆಗೆ ಬಂದು ಈ ರೀತಿಯ ಸ್ವಾಗತವನ್ನು ನೋಡಿ ಅಚ್ಚರಿಗೊಂಡ ಕುಲಕರ್ಣಿಯವರು ಏನಾಗ್ತಿದೆ ಇಲ್ಲಿ ಎಂದು ಕೇಳಬೇಕು ಎನ್ನುವಷ್ಟರಲ್ಲಿಯೇ, ತನ್ನ ಸೆರಗಿನಿಂದ ಕಣ್ಣನ್ನು ಒರೆಸಿಕೊಂಡ ಆಕೆ, ಅಣ್ಣಾ, ಸುಮಾರು 22-25 ವರ್ಷಗಳ ಹಿಂದೆ, ಚಂದ್ರಗಢದ ಹಳ್ಳಿಯಲ್ಲಿ ಮಧ್ಯರಾತ್ರಿಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿದ್ದವಳೊಬ್ಬಳಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ಹುಡುಗಿಯೇ ನಾನು. ನೀವು ಹೇಳಿದಂತೆಯೇ, ನಾನು ಪೂನಾಕ್ಕೆ ಹೋಗಿ ನಿಮ್ಮ ಸ್ನೇಹಿತರ ಸಲಹೆಯಂತೆ ನರ್ಸಿಂಗ್ ಕೋರ್ಸ್ ಮಾಡಿ ಸ್ಟಾಫ್ ನರ್ಸ್ ಆಗಿ ಸ್ವಾಭಿಮಾನಿಯಾಗಿ ನನ್ನ ಕಾಲ್ಗಳ ಮೇಲೆ ನಾನೇ ನಿಲ್ಲುವಂತಾದೆ.
ನಂತರ ನನ್ನ ಮಗಳನ್ನು ಚೆನ್ನಾಗಿ ಓದಿಸಿದ್ದಲ್ಲದೇ, ನಿಮ್ಮನ್ನೇ ಆದರ್ಶವಾಗಿಟ್ಟು ಕೊಂಡು ಅಕೆಗೆ ಪರಿಗಣಿಸಿ ಸ್ತ್ರೀರೋಗ ತಜ್ಞರನ್ನಾಗಿ ಮಾಡಿದೆ. ಆ ರಾತ್ರಿ ನಿಮ್ಮ ಕೈಯಲ್ಲಿ ಹುಟ್ಟಿದವಳೇ ನನ್ನ ಮಗಳು ಚಂದ್ರಾ ಎಂದಾಗ ಡಾ. ಕುಲಕರ್ಣಿಯವರಿಗೂ ಅಚ್ಚರಿಯ ಜೊತೆ ಸಂತೋಷವಾಗಿದ್ದಲ್ಲದೇ, ಅದು ಸರಿ ಚಂದ್ರಾ ನನ್ನ ಪರಿಚಯವೇ ಇಲ್ಲದಿದ್ದ ನೀನು ನನ್ನನ್ನು ಹೇಗೆ ಗುರುತಿಸಿದೆ ಎಂದು ಆಶ್ಚರ್ಯದಿಂದ ಕೇಳುತ್ತಾರೆ.
ಸರ್. ನಾನು ಹುಟ್ಟಿದಾಗಲಿಂದಲೂ ಪ್ರತೀ ದಿನವೂ ಅಮ್ಮಾ ನಿಮ್ಮ ಹೆಸರನ್ನು ಹೇಳುತ್ತಲೇ ಇರುತ್ತಾಳೆ. ದೇವರ ಪೂಜೆ ತಪ್ಪ ಬಹುದು ಆದರೆ ನಿಮ್ಮ ನಾಮದ ಜಪವನ್ನು ಅಮ್ಮ ನಿಲ್ಲಿಸುವುದಿಲ್ಲ. ವೇದಿಕೆಯ ಮೇಲೆ ನಿಮ್ಮ ಹೆಸರನ್ನು ಸಂಪೂಣವಾಗಿ ಕರೆದಾಗ ಅದು ನೀವೇ ಎಂದು ಗೊತ್ತಾಯಿತು ಎನ್ನುತ್ತಾಳೆ ಚಂದ್ರ.
ಆಗ ಮಾತನ್ನು ಮುಂದುವರೆಸಿದ ಚಂದ್ರಳ ತಾಯಿ, ಸಾರ್, ನಿಮ್ಮ ಹೆಸರು ರಾಮಚಂದ್ರ. ಹಾಗಾಗಿ ನಿಮ್ಮ ಹೆಸರಿನ್ನೇ ಸಣ್ಣದಾಗಿಸಿ ನಾನು ನನ್ನ ಮಗಳಿಗೆ ಚಂದ್ರ ಎಂದು ನಾಮಕರಣ ಮಾಡಿದ್ದೇನೆ. ಅವಳೂ ಸಹಾ ಇಲ್ಲಿನ ಸುತ್ತ ಮುತ್ತಲಿನ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ನಿಮ್ಮ ಆದರ್ಶ ಗುಣಗಳನ್ನೇ ಪಾಲಿಸಿಕೊಂಡು ಬರುತ್ತಿದ್ದಾಳೆ ಎಂದಾಗ ಡಾ. ಕುಲಕರ್ಣಿಯವರಿಗೂ ಅರಿವಿಲ್ಲದಂತೆ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.
ಅಂದ ಹಾಗೆ ಆ ಡಾ. ಆರ್. ಹೆಚ್. ಕುಲಕರ್ಣಿ ಅವರು ಬೇರೆ ಯಾರೂ ಆಗಿರದೇ, ಪ್ರಸಕ್ತ ಹೆಸರಾಂತ ಲೇಖಕಿ, ಸಮಾಜ ಸೇವಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾಗಿರುವ ಸುಧಾ ಮೂರ್ತಿ ಅವರ ತಂದೆಯವರು.
ನೂಲಿನಂತೆ ಸೀರೆ ತಾಯಿಯಂತೆ ಮಗಳು ಎನ್ನುವಂತೆ ಸಮಾಜ ಸೇವೆ ಎನ್ನುವುದು ಸುಧಾ ಮೂರ್ತಿಯವರಿಗೆ ತಂದೆಯಿಂದ ಬಂದಿದೆ ಎಂದರೂ ತಪ್ಪಾಗದು ಅಲ್ವೇ? ಈ ಪ್ರಸಂಗದಿಂದ ಹೆಣ್ಣೊಂದು ಕಲಿತರೆ ಸಮಾಜವೇ ಉದ್ದಾರವಾದಂತೆ ಎನ್ನುವ ಮಾತು ಎಷ್ಟು ಸರಿ ಎಂಬುದರ ಅರಿವಾಗುವುದಲ್ಲದೇ, ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳಸಿದರೆ ಸಮಾಜ ಹೇಗೆ ಉದ್ದಾರವಾಗುತ್ತದೆ ಎಂಬುದಕ್ಕೆ ಈ ಪ್ರಸಂಗವೇ ಜ್ವಲಂತ ಸಾಕ್ಷಿಯಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
ತುಂಬಾ ಸೊಗಸಾಗಿದೆ ಮತ್ತು ಮಾದರಿಯಾಗಿದೆ .
LikeLiked by 1 person