ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ

WhatsApp Image 2022-02-06 at 11.00.00 AMತಮ್ಮ 12ನೇ ವಯಸ್ಸಿನಿಂದ 90ನೇ ವಯಸ್ಸಿನ ವರೆಗೂ ಸುಮಾರು ಎಂಟು ದಶಕಗಳ ಕಾಲ ಸುದೀರ್ಘ ವೃತ್ತಿಜೀವನದಲ್ಲಿ 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದ ಭಾರತದ ಗಾನ ಕೋಗಿಲೆ, ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದ ಶ್ರೀಮತಿ ಲತಾ ಮಂಗೇಶ್ಕರ್ ಅವರ ತಮ್ಮ 92ನೇ ವಯಸ್ಸಿನಲ್ಲಿ ಸುದೀರ್ಘವಾದ ಆರೋಗ್ಯದಿಂದ ನಿಧನರಾದದ್ದು ನಿಜಕ್ಕೂ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟವೇ ಸರಿ.

ನೆನ್ನೆ ಬೆಳಿಗ್ಗೆ ಅವರ ನಿಧನದ ಸುದ್ದಿ ಕೇಳಿದ ತಕ್ಷಣವೇ, ಆತ್ಮಕ್ಕೆ ಸದ್ಗತಿಯನ್ನು‌ ಕೊಡಲಿ ಎಂದು ಶ್ರದ್ಧಾಂಜಲಿಯನ್ನ ಅರ್ಪಿಸುವಾಗ ಶ್ರೀಮತಿ. ಲತಾ ಮಂಗೇಶ್ಕರ್ ಎಂದು ಸಂಬೋಧಿಸಿದ್ದನ್ನು ನೋಡಿದ ಆತ್ಮೀಯರೊಬ್ಬರು ಅವರು ಅವಿವಾಹಿತರಾಗಿಯೇ ಇದ್ದಾಗ ಅದು ಹೇಗೆ ಶ್ರೀಮತಿ ಎಂದು ಬರೆದಿದ್ದೀರಿ? ಎಂಬ ಪ್ರಶ್ನೆಯನ್ನು ಕೇಳಿದಾಗ, ಹೌದು ನಿಜ. ಆಕೆ 92 ವರ್ಷದ ಅವಿವಾಹಿತೆ ಎನ್ನುವ ಕಾರಣ ಕುಮಾರಿ ಲತಾ ಮಂಗೇಶ್ಕರ್ ಎಂದರೆ ಹಾಸ್ಯಾಸ್ಪದ ಆಗುವ ಕಾರಣ‌ ಶ್ರೀಮತಿ ಎಂದು ಗೌರವದಿಂದ ‌ಸಂಭೋಧಿಸಿದ್ದೇನೆ ಎಂಬ ಸಮಜಾಯಿಶಿ ನೀಡಿದನಾದರೂ ಇಷ್ಟು ವರ್ಷಗಳಾದರೂ ಅವರೇಕೆ ಮದುವೆ ಆಗಿರಲಿಲ್ಲ? ಎಂಬ ಹುಳ ತಲೆಗೆ ಬಿಟ್ಟುಕೊಂಡು ಸ್ವಲ್ಪ ಅಂತರ್ಜಾಲದಲ್ಲಿ ತಡಕಾಡಿದಾಗ ಅವರ ಬಗ್ಗೆ ಎಷ್ಟೋ ಜನರಿಗೆ ತಿಳಿಯದಿದ್ದ ವಿಷಯಗಳನ್ನು ತಿಳಿಸಲೆಂದೇ ಈ ಲೇಖನವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.

dinanathನಮಗೆಲ್ಲಾ ತಿಳಿದಿರುವಂತೆ ಲತಾ ಮಂಗೇಶ್ಕರ್ ಅವರು ಮಹಾರಾಷ್ಟ್ರದ ಮುಂಬೈಯಲ್ಲಿ ಇದ್ದ ಕಾರಣ ಬಹುತೇಕರು ಆಕೆಯನ್ನು ಮರಾಠಿಗರು ಎಂದೇ ಭಾವಿಸಿರುತ್ತಾರೆ. ನಿಜ ಹೇಳಬೇಕೆಂದರೆ ಆಕೆ ಹುಟ್ಟಿದ್ದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಆದರೂ ಆಕೆಯ ತಂದೆ ಗೋವಾದ ಮೂಲದ ಗೌಡಸಾರಸ್ವತ ಬ್ರಾಹ್ಮಣರು ಮತ್ತು ಅವರ ತಾಯಿ ಗೋಮಾಂತಕ್ ಮರಾಠಾ ಬ್ರಾಹ್ಮಣರು. ಗೋವಾದ ರಾಜಧಾನಿ, ಪಣಜಿ (ಪಂಜಿಮ್)ಯಿಂದ ಸುಮಾರು 21 ಕಿಮೀ ದೂರ ದಲ್ಲಿರುವ ಮಂಗೇಶಿಯ ಮಂಗೇಶಿ ದೇವಾಲಯವು ಅವರ ಕುಲದೇವರು. ಇಂತಹ ಮಂಗೇಶಿ ಊರಿನಲ್ಲಿ ಹುಟ್ಟಿ ಬೆಳೆದ ಲತಾ ಅವರ ತಂದೆ ದೀನಾನಾಥ್ ಅವರ ಮನೆತನದ ಹೆಸರು ಹರ್ಡಿಕರ್ ಎಂದಿದ್ದು ಸಂಗೀತ ಮತ್ತು ನಾಟಕದ ಶಿಕ್ಷಕರಾಗಿದ್ದ ದೀನಾನಾಥ್ ಹರ್ಡೀಕರ್ ಅವರು ತಮ್ಮದೇ ಆದ ನಾಟಕ ಕಂಪನಿಯನ್ನು ಸ್ಥಾಪಿಸುವ ಸಲುವಾಗಿ ಕೊಲ್ಹಾಪುರಕ್ಕೆ ಹೋದಾಗ, ತಮ್ಮೂರಿನ ಭಗವಾನ್ ಶಿವ ಅರ್ಥಾತ್ ಮಂಗೇಶ್ ದೇವರ ಮೇಲಿನ ಗೌರವದಿಂದಾಗಿ ಅವರು ತಮ್ಮ ಉಪನಾಮವನ್ನು ಮಂಗೇಶ್ಕರ್ ಎಂದು ಬದಲಾಯಿಸಿಕೊಂಡರು. ಈ ಮೂಲಕ ತಮ್ಮ ಮನೆದೇವರು ಮತ್ತು ಹುಟ್ಟೂರು ಎರಡನ್ನು ಒಂದೇ ಉಪನಾಮದೊಂದಿಗೆ ಸೇರಿಸಿಕೊಂಡ ಪರಿಣಾಮ ಲತಾ ಅವರ ಹೆಸರಿನೊಂದಿಗೆ ಮಂಗೇಶ್ಕರ್ ಉಪನಾಮ ಸೇರಿಕೊಂಡಿತು. ಹಾಗಾಗಿಯೇ ತಮ್ಮ ಜೀವಮಾನವಿಡೀ ಮಂಗೇಶಿ ದೇವಾಲಯದೊಂದಿಗೆ ಅವಿನಾಭಾವ ಸಂಬಂಧ ಇಟ್ಟು ಕೊಂಡಿದ್ದಲ್ಲದೇ ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾರೆ. ಲತಾ ಮಂಗೇಶ್ಕರ್ ಅವರಿಂದಾಗಿ ತಮ್ಮ ಗ್ರಾಮ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಅಲ್ಲಿನ ಸ್ಥಳೀಯರು ಹೆಮ್ಮೆ ಪಡುತ್ತಾರೆ. ಲತಾ ಮಂಗೇಶ್ಕರ್ ಅವರು ಸಾಯುವ ಒಂದು ವಾರದ ಮೊದಲು, ಮಂಗೇಶಿ ದೇವಸ್ಥಾನದಲ್ಲಿ ಅವರ ಆರೋಗ್ಯಕ್ಕಾಗಿ ಪೂಜೆ ನಡೆಸಲಾಗಿತ್ತು.

ಲತಾ ಅವರ ಮೂಲ ಹೆಸರು ಹೇಮಾ ಮಂಗೇಶ್ಕರ್ ಎಂದಿತ್ತು. ನಂತರ ಆಕೆಯ ತಂದೆಯ ಭಾವ ಬಂಧನ ಎಂಬ ನಾಟಕದಲ್ಲಿ ಬರುವ ಸ್ತ್ರೀ ಪಾತ್ರವಾದ ಲತಿಕಾ ಎಂಬ ಪಾತ್ರದಿಂದ ಪ್ರೇರಿತರಾಗಿ ತಮ್ಮ ಮಗಳಿಗೆ ಲತಾ ಎಂದು ಮರುನಾಮಕರಣ ಮಾಡಿದರು

ಸಣ್ಣ ವಯಸ್ಸಿನಲ್ಲಿ ಎಲ್ಲರಂತೆ ಲತಾ ಅವರನ್ನು ಅವರ ಮನೆಯ ಸಮೀಪದ ಶಾಲೆಗೆ ಸೇರಿಸಿ, ಶಾಲೆಗೆ ಹೋದ ಮೊದಲನೇ ದಿನವೇ ಆವರ ಶಿಕ್ಷಕರು ಅದಾವುದೋ ಕಾರಣಕ್ಕೆ ಗದರಿದ್ದನ್ನೇ ನೆಪಮಾಡಿಕೊಂಡು ಮುಂದೆಂದೂ ಲತಾ ಶಾಲೆಗೆ ಹೋಗಲಿಲ್ಲ ಎನ್ನುವುದು ಅದೆಷ್ಟು ಜನರಿಗೆ ತಿಳಿದಿದೆ?

ಲತಾರವರು ಹಿನ್ನಲೆ ಗಾಯಕಿಯಗುವ ಮುನ್ನ ಕೆಲವೊಂದು ಚಿತ್ರಗಳಲ್ಲಿ ನಟನೆಯನ್ನೂ ಸಹಾ ಮಾಡಿದ್ದರು. ಆರಂಭದಲ್ಲಿ ಆಕೆಯದ್ದು ಕೀರಲು ಧ್ವನಿ ಎನ್ನುವ ಕಾರಣ ನೀಡಿ ಹಿನ್ನಲೆ ಗಾಯಕಿ ಆಗಲು ನಾಲಾಯಕ್ ಎಂದು ಜರಿದ್ದವರೇ ನಂತರ ಆಯೇಗಾ ಆನೇ ವಾಲಾ ಆಯೇಗ ಹಾಡು ಸೂಪರ್ ಡ್ಯೂಪರ್ ಹಿಟ್ ಆಗುತ್ತಿದ್ದಂತೆಯೇ ತಮ್ಮ ಚಿತ್ರಗಳಿಗೆ ಹಾಡಬೇಕೆಂದು ದಂಬಾಲು ಬಿದ್ದದ್ದಂತೆ.

ತಾವು ಹಾಡುವ ಪ್ರತಿಯೊಂದು ಹಾಡುಗಳನ್ನು ಸ್ವತಃ ತಮ್ಮ ಕೈಬರಹಗಳಲ್ಲಿಯೇ ಬರೆದುಕೊಂಡು ಹಾಡುತ್ತಿದ್ದ ಲತಾರವರು ಹಾಡುಗಳನ್ನು ತಮ್ಮ ಪುಸ್ತಕಗಳಲ್ಲಿ ಬರೆಯುವ ಮುನ್ನಾ ಶ್ರೀ ಎಂದು ಬರೆಯುತ್ತಿದ್ದದ್ದು ಗಮನಾರ್ಹವಾಗಿತ್ತು. ಅದೇ ರೀತಿ ರೆಕಾರ್ಡಿಂಗ್ ಸ್ಟುಡಿಯೋ ಎನ್ನುವುದು ದೇವಾಲಯವಿದ್ದಂತೆ ಎಂದು ಭಾವಿಸಿದ್ದ ಕಾರಣ ರೆಕಾರ್ಡಿಂಗ್ ಸ್ಟುಡಿಯೋ ಪ್ರವೇಶಿಸುವ ಮುನ್ನಾ ತಮ್ಮ ಪಾದರಕ್ಷೆಗಳನ್ನು ಹೊರಗಿಟ್ಟೇ ಬರಿ ಗಾಲಿನಲ್ಲಿಯೇ ಹಾಡುಗಳನ್ನು ಹಾಡುತ್ತಿದ್ದದ್ದು ಅಭಿನಂದನಾರ್ಹ.

ಸಾಮಾನ್ಯವಾಗಿ ಮೆಣಸಿನಕಾಯಿ ಖಾರ ಎಂದು ಬಹುತೇಕರು ಜರಿದರೆ, ತಮ್ಮ ಕಂಠ ಇಂಪಾಗಲು ಕೊಲ್ಹಾಪುರಿ ಮೆಣಸಿನಕಾಯಿಯೇ ಕಾರಣ ಎಂದು ಬಲವಾಗಿ ನಂಬಿದ್ದ ಲತಾ ತಮ್ಮ ಆಹಾರದಲ್ಲಿ ಹೆಚ್ಚಾಗಿ ಕೊಲ್ಹಾಪುರಿ ಮೆಣಸಿನಕಾಯಿ ಸೇವಿಸುತ್ತಿದ್ದದ್ದೂ ಅಚ್ಚರಿಯ ಸಂಗತಿಯಾಗಿದೆ.

photographyಸಂಗೀತ ಬಿಟ್ಟರೆ ಲತಾ ಅವರಿಗಿದ್ದ ಮತ್ತೊಂದು ಹವ್ಯಾಸವೆಂದರೆ ಛಾಯಾ ಗ್ರಹಣ. ಹಾಗಾಗಿ ಲತಾ ಅವರು ಎಲ್ಲೇ ಹೋದರೋ ಅವರ ಜೊತೆ ಕ್ಯಾಮೆರಾ ಅವಿಭಾಜ್ಯ ಅಂಗವಾಗಿರುತ್ತಿತ್ತು. ಹಾಡುಗಳ ರೆಕಾರ್ಡಿಂಗ್ ಎಂದು ಸ್ಟುಡಿಯೋಗೆ ಹೋಗುವಾಗಲೂ ಕ್ಯಾಮೆರಾ ತೆಗೆದುಕೊಂಡು ಹೋಗಿ ಅಲ್ಲಿನ ಸಹಗಾಯಕರು ಮತ್ತು ಸಂಗೀತಗಾರ ಪೋಟೋಗಳನ್ನು ತೆಗೆಯುವುದು ಅವರ ಹವ್ಯಾಸವಾಗಿತ್ತು. ಇದೇ ಕಾರಣದಿಂದಾಗಿಯೇ 1946ರಲ್ಲಿಯೇ 1200 ರೂಪಾಯಿಗಳಿಗೆ ರೋಲಿಫ್ಲೆಕ್ಸ್ ಕ್ಯಾಮೆರಾ ಖರೀದಿಸಿ ಹತ್ತು ಹಲವಾರು ಪೋಟೋಗಳನ್ನು ತೆಗೆದು ಅದಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಅಂದಿನ ಮಸೂರದ ಕ್ಯಾಮೆರಾದ ಮೂಲಕ ಸೆರೆ ಹಿಡಿಯುವ ಮಜಾ ಇಂದಿನ ಡಿಜಿಟಲ್ ಇಲ್ಲವೇ ಮೊಬೈಲ್ ಕ್ಯಾಮೆರಾಗಳಲ್ಲಿ ಇರುವುದಿಲ್ಲ ಎಂದು ಹಲವಾರು ಬಾರಿ ಹೇಳುತ್ತಿದ್ದರು.

ಬಾಲ್ಯದಲ್ಲೇ ಅವರ ತಂದೆಯವರು ನಿಧನರಾದ ಕಾರಣ ಸಂಸಾರದ ನೊಗವನ್ನು ಹೊರಲು ಸಂಗೀತವನ್ನು ಆಶ್ರಯಿಸದ ಕಾರಣ ಅವರು ಅವಿವಾಹಿತರಾಗಿಯೇ ಉಳಿದರು ಎನ್ನುವುದು ಎಲ್ಲರ ಅಭಿಪ್ರಾಯವಾದರೂ ಅವರ ಸಣ್ಣವಯಸ್ಸಿನಲ್ಲಿ ಅವರ ಪ್ರಣಯಕ್ಕೆ ಭಂಗವಾದ ಕಾರಣ ಜೀವನ ಪರ್ಯಂತ ಭಗ್ನ ಪ್ರೇಮಿಯಾಗಿಯೇ ಉಳಿದರು ಎನ್ನುವುದು ಕುತೂಹಲಕಾರಿಯಾದ ಸತ್ಯವಾಗಿದೆ

rajsinghಸಂಗೀತ ಬಿಟ್ಟರೆ ಕ್ರಿಕೆಟ್ ಅವರ ಅಚ್ಚು ಮೆಚ್ಚಿನ ವಿಷಯವಾಗಿತ್ತು. ಅದಕ್ಕೆ ಕಾರಣ, ಲತಾ ಅವರ ಸಹೋದರಾಗಿದ್ದ ಶ್ರೀ ಹೃದಯನಾಥ್ ಮಂಗೇಶ್ಕರ್ ಅವರು ಒಳ್ಳೆಯ ಕ್ರಿಕೆಟ್ ಆಟಗಾರರಾಗಿದ್ದರು. ಸ್ವತಃ ಕ್ಲಬ್ ಮಟ್ಟದ ಕ್ರಿಕೆಟ್ಟಿಗರಾಗಿದ್ದು ಮುಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿದ್ದಲ್ಲದೇ ಇನ್ನೂ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ ರಾಜ್ ಸಿಂಗ್ ಡುಂಗರ್ಪುರ್ ಅವರ ಉತ್ತಮ ಸ್ನೇಹಿತರಾಗಿದ್ದರು. ಹಾಗಾಗಿ ರಾಜ್ ಸಿಂಗ್ ಡುಂಗರ್ಪುರ್ ಅವರು ಅನೇಕ ಬಾರಿ ಲತಾ ಅವರ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಆರಂಭದಲ್ಲಿ ಆದ ಸ್ನೇಹ ನಂತರ ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದರು.

lathaರಾಜ್ ಸಿಂಗ್ ಡುಂಗರ್ಪುರ್ ರಾಜಸ್ಥಾನದ ರಾಜಮನೆತನಕ್ಕೆ ಸೇರಿದರೆ, ಲತಾ ರವರು ಸಾಮಾನ್ಯ ಮನೆತನದವರು. ಹಾಗಾಗಿ ರಾಜ್ ಡುಂಗರ್‌ಪುರ್ ಅವರ ತಂದೆ ಮಹಾರಾವಲ್ ಲಕ್ಷ್ಮಣ್ ಸಿಂಗ್‌ಜಿಯವರು ಲತಾರವರು ರಾಜಮನೆತನದವರಲ್ಲದ ಕಾರಣ ಅವರಿಬ್ಬರ ಮದುವೆಗೆ ಒಪ್ಪದೇ ಹೋದಾಗ, ತಂದೆಯ ನಿರ್ಧಾರಕ್ಕೆ ಕಟಿ ಬದ್ಧರಾಗಿ ತನ್ನ ಜೀವನದಲ್ಲಿ ಯಾರನ್ನೂ ಮದುವೆಯಾಗುವುದಿಲ್ಲ ಎಂದು  ರಾಜ್ ಡುಂಗರ್‌ಪುರ್ ನಿರ್ಧರಿಸಿದರೆ, ಅವರ ನಿರ್ಧಾರಕ್ಕೆ ಪ್ರತಿಯಾಗಿ ಲತಾರವರೂ ಸಹಾ ತಾನೂ ಕೂಡಾ ಅವಿವಾಹಿತರಾಗಿಯೇ ಉಳಿಯುವ ನಿರ್ಧಾರವನ್ನು ಕೈಗೊಂಡರು. ಅವರಿಬ್ಬರೂ ಮದುವೆಯಾಗದಿದ್ದರೂ ಸಹಾ ಜೀವಮಾನವಿಡೀ ಪರಸ್ಪರ ಬದ್ಧತೆ, ಗೌರವ, ಪ್ರೀತಿ ಮತ್ತು ಅದರದಿಂದಲೇ ಉತ್ತಮ ಗೆಳೆಯರಾಗಿದ್ದರು. ಲತಾ ಅವರನ್ನು ರಾಜ್ ಸಿಂಗ್ ಪ್ರೀತಿಯಿಂದ ಮಿಥೂ ಎಂದು ಕರೆಯುತ್ತಿದ್ದರಿಂದ ಅದೇ ಹೆಸರು ಮುಂದೆ ಲತಾ ಅವರ ಅಡ್ಡ ಹೆಸರಾಗಿತ್ತು.

1983ರಲ್ಲಿ ಕಪಿಲ್ ದೇವ್ ಅವರ ನೇತೃತ್ವದ ತಂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಚ್ಚರಿಯಾಗಿ ಫೈನಲ್ಸ್ ತಪುಪಿದ್ದಾಗ, ಇದೇ ರಾಜ್ ಸಿಂಗ್ ಡುಂಗಾಪುರ್ ತಂಡದ ಮ್ಯಾನೇಜರ್ ಅಗಿದ್ದರು. ಲತಾ ಅವರೊಂದಿಗಿನ ಗೆಳೆತನದಿಂದಾಗಿಯೇ ಫೈನಲ್ಸ್ ಪಂದ್ಯಕ್ಕೂ ಮುನ್ನಾ ಇಡೀ ಭಾರತ ತಂಡಕ್ಕೆ ಲತಾ ತಮ್ಮ ಸ್ವಂತ ಖರ್ಚಿನಲ್ಲಿ ಭರ್ಜರಿಯಾದ ಔತಣಕೂಟವನ್ನು ಏರ್ಪಡಿಸಿ ವಿಜಯಶಾಲಿಳಾಗಿ ಎಂದು ಹಾರೈಸಿದ್ದಲ್ಲದೇ, ಲಾರ್ಡ್ಸ್ ನ ಫೈನಲ್ ಪಂದ್ಯವನ್ನು ಖುದ್ದಾಗಿ ವೀಕ್ಷಿಸಿ ಭಾರತ ತಂಡ ವಿಶ್ವಕಪ್ ಗೆದ್ದಾಗ ಸಂಭ್ರಮಿಸಿದ್ದರು.

worldcupಮುಂದೆ ವಿಜಯೀಶಾಲಿ ತಂಡಕ್ಕೆ ನಗದು ಬಹುಮಾನವನ್ನು ನೀಡಲು ಬಿಸಿಸಿಐನ ಬಳಿ ಹಣವಿಲ್ಲದಿದ್ದಾಗ ಲತಾಮಂಗೇಶ್ಕರ್ ಅವರು ಆಟಗಾರರ ಸಹಾಯಾರ್ಥ ಸಂಗೀತ ರಸಂಜೆಯನ್ನು ಏರ್ಪಡಿಸಿ ಅಂದಿನ ಕಾಲಕ್ಕೆ ಸುಮಾರು 25-30 ಲಕ್ಷ ಹಣವನ್ನು ಸಂಗ್ರಹಿಸಿಕೊಟ್ಟಿದ್ದರು. ಇದರ ಕೃತಜ್ಞತೆಗಾಗಿ ಅಂದಿನಿಂದ ಭಾರತದಲ್ಲಿ ನಡೆಯುವ ಪ್ರತೀ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಲತಾ ಮಂಗೇಶ್ಕರ್ ಅವರಿಗೆ ಎರಡು ಟಿಕೆಟ್ಗಳನ್ನು ಮೀಸಾಗಿಡುವ ಅಲಿಖಿತ ನಿಯಮ ಜಾರಿಗೆಯಲ್ಲಿತ್ತು.

sachinಸಚಿನ್ ತೆಂಡುಲ್ಕರ್ ಅವರನ್ನು ತಮ್ಮ ಮಗನೆಂದೇ ಸಂಭೋಧಿಸುತ್ತಿದ್ದ ಲತಾರವರು ದ್ರಾವಿಡ್, ಗಂಗೂಲಿ, ವಿವಿಎಸ್ ಲಕ್ಷಣ್ ಅವರ ಬಗ್ಗೆಯೂ ಒಲವಿತ್ತು. ಸಚಿನ್ 99 ಅಂತರಾಷ್ಟೀಯ ಶತಕಗಳನ್ನು ಗಳಿಸಿ 100 ನೇ ಶತಕಕ್ಕಾಗಿ ಎರಡು ಮೂರು ವರ್ಷಗಳ ಕಾಲ 90ರ ಗಡಿಗೆ ಬಂದು ಪರದಾಡುತ್ತಿದ್ದಾಗ ಇದೇ ಲತಾರವರು ಸಚಿನ್ ತೆಂಡೂಲ್ಕರ್ ಅವರಿಗೆ ಧೈರ್ಯ ತುಂಬಿದ್ದರು.

savarkarಲತಾ ಮಂಗೇಶ್ಕರ್ ಅವರ ಕುಟುಂಬಕ್ಕೂ ಅಪ್ರತಿಮ ಸ್ವಾತಂತ್ಯ್ರ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ (ವೀರ್ ಸಾವರ್ಕರ್) ಅವರಿಗೂ ಅವಿನಾಭಾವ ಗೆಳೆತನವಿತ್ತು ಹಾಗಾಗಿಯೇ ಲತಾ ಮಂಗೇಶ್ಕರ್ ಅವರು ಸಾವರ್ಕರ್ ಅವರನ್ನು ಪ್ರೀತಿಯಿಂದ ತಾತ್ಯಾ ಎಂದು ಕರೆಯುತ್ತಿದ್ದರಲ್ಲದೇ, ದೀನದಲಿತರ ನಡುವಿನ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಸಾವರ್ಕರ್ ಅವರು ಆಯೋಜಿಸುತ್ತಿದ್ದ ಅಂತರ-ಜಾತಿ ಸಹಪಂಕ್ತಿ ಭೋಜನಗಳಿಗೆ ತಮ್ಮ ತಂದೆಯವರೊಡನೆ ಲತಾ ಅವರೂ ಸಹಾ ಅನೇಕ ಬಾರಿ ಭಾಗಿಗಳಗಿದ್ದರು.

ಇದೇ ಪ್ರೀತಿಯ ಕಾರಣದಿಂದಾಗಿ ಮುಂದೆ ಲತಾ ಮಂಗೇಶ್ಕರ್ ಅವರು ಸಾವರ್ಕರ್ ಅವರು ಬರೆದ ಜಯೋಸ್ತುತೇ ಜಯೋಸ್ತುತೇ, ಶ್ರೀ ಮಹಾನ್ಮಾಂಗ್ಲೀ, ನೀ ಮಜಾಸಿ ನೇ, ಪರರ್ಟ್ ಮಾತೃಭೂಮಿಲಾ, ಸಾಗರ ಪ್ರಾಣ ತಲಮಲಾಲ ಇನ್ನು ಮುಂತಾದ ಹಲವಾರು ಹಾಡುಗಳಿಗೆ ಧನಿಯಾಗಿ ಹಾಡುಗಳನ್ನು ವಿಶ್ವವಿಖ್ಯಾತಿ ಗೊಳಿಸಿದರು.

ಹೀಗೆ ಬರೆಯುತ್ತಾ ಹೋದಲ್ಲಿ ಲತಾ ಅವರ ಕುರಿತಾಗಿ ಅದೆಷ್ಟೋ ಅವಿತಿಟ್ಟ ವಿಷಯಗಳನ್ನು ಬರೆಯ ಬಹುದಾದರೂ, ಲತಾರವರು ಭೌತಿಕವಾಗಿ ನಮ್ಮನ್ನಗಲಿದ್ದರೂ ಅವರ ಹಾಡುಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಹಚ್ಚ ಹಸಿರಾಗಿಯೇ ಇರುತ್ತಾರೆ ಎನ್ನುವ ಆಶಯ ನಮ್ಮದಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

3 thoughts on “ಅವಿತಿಟ್ಟ ಲತಾ ಮಂಗೇಶ್ಕರ್ ಅವರ ಜೀವನ ಗಾಥೆ

  1. Nice write-up. Congratulations. And thanks. I am really proud of you, for the reason that I too belong to Channarayapatra taluk (Hirisave) and knew your grandfather Sri Baalaganchi Nanjundiah in my boyhood days. My ancestors used to be Archakas of Keshava Devaru temple. We used to be neighbours of Jois Narasimha Murthy, and family. We were close to the family.

    Liked by 1 person

  2. ಶನಿವಾರ ಹೀಗೊಂದು ಘಟನೆ ನಡೆಯಿತು.

    ಸಂಸ್ಕಾರ ಭಾರತಿಯಿಂದ ಶ್ರೀಮತಿ ಲತಾ ದೀದಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದರು, ಪ್ರಾಂತ ಸಂಗೀತ ಕಲಾವಿದರ ವ್ಯವಸ್ಥೆಯಲ್ಲಿ. ಯೋಜನೆಯಿಂದ ಮೊದಲ್ಗೊಂಡು ಪ್ರಸ್ತುತಿಯವರೆಗೂ ಎಲ್ಲವನ್ನೂ ಅವರೇ ಮಾಡಿದ್ದು ಶ್ಲಾಘನೀಯ. ಪ್ರಗತಿಯನ್ನು ಆಗಾಗ ಕರೆಮಾಡಿ ವಿಚಾರಿಸುತ್ತಿದ್ದೆ (ಪ್ರಾಂತ ಕಾರ್ಯದರ್ಶಿಯ ಸ್ಥಾನಕ್ಕೆ ಚ್ಯುತಿ ಬಾರದಂತೆ) ಗಾನನಮನ ಹಾಗೂ ನುಡಿನಮನಗಳು ಯೋಜನೆಯಾಗಿದ್ದವು. ಅದಕ್ಕೆ ವ್ಯಕ್ತಿಗಳನ್ನೂ ಜೋಡಿಸಿದ್ದರು.

    ಕಾರ್ಯಕ್ರಮದ ದಿನ ನುಡಿನಮನ ಮಾಡಬೇಕಿದ್ದ ಒಬ್ಬ ಕಾರ್ಯಕರ್ತ ಅನಿವಾರ್ಯ ಕಾರಣದಿಂದ ಬರಲಾಗಲಿಲ್ಲ. ದಿಢೀರನೆ ಆ ಕಾರ್ಯ ನನ್ನ ಹೆಗಲೇರಿತು.

    ನಿಭಾಯಿಸಿದೆ. “ಅಷ್ಟು ಕಡಿಮೆ ಅವಧಿಯಲ್ಲಿ ಮಹತ್ವದ ಸಂಗತಿಗಳನ್ನು ಹೇಗೆ ಹೆಕ್ಕಿದಿರಿ?” ಎಂದು ಎಲ್ಲರೂ ಕೇಳುವವರೇ..

    ಆದರೆ ಏನಂತೀರಿ ಲೇಖನವನ್ನು ಕಿಸೆಯಲ್ಲಿಟ್ಟುಕೊಂಡವನಿಗೆ ಇದು ಕಷ್ಟದ ಕೆಲಸವೇ?
    ಏನಂತೀರಿ?

    *ಆಪತ್ಕಾಲಕ್ಕೆ ನೆರವಾದ ನಿಮಗೆ ವಂದನೆಗಳು*🙏🏻

    Liked by 1 person

    1. ಲೇಖನಗಳನ್ನು ಬರೆಯುವುದೇ ಎಲ್ಲರಿಗೂ ಮಾಹಿತಿ ತಿಳಿಸುವ ಸಲುವಾಗಿಯೇ ಅಲ್ವೇ?

      ಯಲಹಂಕದ ಬಸವರಾಜ್ ಅವರೂ ಸಹಾ ರಾಮಾನುಜಾಚಾರ್ಯರು ಬಗ್ಗೆ ವಿಷಯಕ್ಕಾಗಿ Google ಹುಡುಕಿದಾಗ ನಮ್ಮ ಏನಂತೀರೀ? ಬ್ಲಾಗ್ ಕಾಣಿಸಿ ಅದರಿಂದ ಮಾಹಿತಿಯನ್ನು ಪಡೆದ ನಂತರ ಕರೆ ಮಾಡಿ ಅಭಿಮಾನ ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದ್ದರು🙏🙏

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s