ನಮಗೆಲ್ಲರಿಗೂ ತಿಳಿದಿರುವಂತೆ 7ನೇ ಶತಮಾನದ ಸಮಯದಲ್ಲಿ ಬೌದ್ಧ ಮತ್ತು ಜೈನಮತಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಹಿಂದೂ ಧರ್ಮದ ಬಹುತೇಕರು ನಾನಾ ಕಾರಣಗಳಿಂದಾಗಿ ಮತಾಂತರವಾಗಿ ಹಿಂದೂಧರ್ಮದ ಅವಸಾನದತ್ತ ಸಾಗುತ್ತಿದ್ದಾಗ, ಆಚಾರ್ಯ ತ್ರಯರಾದ ಶಂಕರಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ನಮ್ಮ ದೇಶದಲ್ಲಿ ಹಿಂದೂ ಧರ್ಮದ ಪುನರುತ್ಥಾನ ಮಾಡಿದ ಸಂತರು ಎಂದರೂ ತಪ್ಪಾಗದು. ಶ್ರೀ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಎಂದು ಎಲ್ಲರಲ್ಲೂ ಭಗವಂತನು ಇದ್ದಾನೆ ಎಂಬ ಅದ್ವೈತ ತತ್ವವನ್ನು ಪ್ರತಿಪಾದಿಸಿದರೆ, ಶ್ರೀ ರಾಮಾನುಜಾಚಾರ್ಯರು ಹರಿಯೇ ಸರ್ವೋತ್ತಮ ಎಂಬ ವಿಶಿಷ್ಠಾದ್ವೈತವನ್ನು ಪ್ರತಿಪಾದಿಸಿದರು. ಕ್ರಿ.ಶ.1238 ರಲ್ಲಿ ಕರ್ನಾಟದಕದಲ್ಲಿಯೇ ಅವತರಿಸಿದ ಶ್ರೀ ಮಧ್ವಾಚಾರ್ಯರು ಹರಿ ಸರ್ವೋತ್ತಮ ವಾಯು ಜೀವೋತ್ತಮ ಎಂಬ ದ್ವೈತ ತತ್ವವನ್ನು ಪ್ರತಿಪಾದಿಸುವ ಮೂಲಕ ನಮ್ಮ ಸನಾತನ ಧರ್ಮವನ್ನು ಎತ್ತಿ ಹಿಡಿದ ಪ್ರಾಥಃಸ್ಮರಣೀಯರು.
ದಾಸರಲ್ಲೇ ಶ್ರೇಷ್ಠದಾಸರು ಎನಿಸಿದ ಪುರಂದರ ದಾಸರೇ ಹೇಳಿರುವಂತೆ
ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||
ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ || ಎನುವಂತೆ,
ಪ್ರಥಮೋ ಹನುಮನ್ನಾಮ, ದ್ವಿತೀಯೋ ಭೀಮ ಏವಚ, ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕ ಅಂದರೆ, ತ್ರೇತಾಯುಗದಲ್ಲಿ ಹನುಮಂತನಾಗಿ, ದ್ವಾಪರ ಯುಗದಲ್ಲಿ ಭೀಮಸೇನರಾಗಿ ಮತ್ತು ಈ ಕಲಿಯುಗದಲ್ಲಿ ಶ್ರೀ ಮಧ್ವಾಚಾರ್ಯರಾಗಿ ಅವತರಿಸಿದ್ದಾರೆ ಎಂದು ನಂಬಲಾಗಿರುವ ಶ್ರೀ ಮಧ್ವಾಚಾರ್ಯರ ಬಗ್ಗೆ ತಿಳಿಯೋಣ ಬನ್ನಿ.
13ನೇ ಶತಮಾನದಲ್ಲಿ ಉಡುಪಿಯ ಬಳಿಯ ಪಾಜಕ ಎಂಬಲ್ಲಿ ಮಧ್ಯಗೇಹ ಭಟ್ಟರು (ನಾರಾಯಣಾಚಾರ್ಯರು) ಮತ್ತು ವೇದಾವತಿ ದಂಪತಿಗಳ ಕುಟುಂಬವಿತ್ತು. ಊರಿನ ಮಧ್ಯಭಾಗದಲ್ಲಿ ಅವರ ಮನೆ ಇದ್ದದ್ದರಿಂದ ಅವರನ್ನು ಊರಿನವರೆಲ್ಲರೂ ನಡುಂತಿಲ್ಲಾಯರೆಂದೇ ಗುರುತಿಸುತ್ತಿದ್ದರು. ಈ ದಂಪತಿಗಳು ಅದೊಮ್ಮೆ ಉಡುಪಿಯ ಪೇಟೆಗೆ ಹೋಗಿದ್ದಾಗ ಭಿಕ್ಷುಕನೊಬ್ಬನು ಶ್ರೀ ಅನಂತೇಶ್ವರ ದೇವಸ್ಥಾನದ ಸ್ಥಂಬವನ್ನೇರಿ ಈ ಊರಿನಲ್ಲಿ ವಾಯುದೇವರು ಅವತರಿಸುವರು ಎಂದು ಹೇಳಿದರಂತೆ, ಅದಾದ ಕೆಲವು ತಿಂಗಳುಗಳ ನಂತರ ಕ್ರಿ.ಶ.1238 ರ ವಿಜಯದಶಮಿಯಂದು ಆ ದಂಪತಿಗಳಿಗೆ ಜನಿಸಿದ ಗಂಡು ಮಗುವಿಗೆ ವಾಸುದೇವ ಎಂದು ನಾಮಕರಣ ಮಾಡಿದರು. ಬಾಲಕ ವಾಸುದೇವ ಚಿಕ್ಕವಯಸ್ಸಿನಲ್ಲಿಯೇ ಅಸಾಧಾರಣ ಚುರುಕಿನ ಹುಡುಗನಾಗಿದ್ದನು.
ಭಾಲಕ ವಾಸುದೇವನಿಗೆ 11 ವರ್ಷವಾಗಿದ್ದಾಗ, ಉಡುಪಿಯ ಅಚ್ಯುತ ಪ್ರೇಕ್ಷರಿಂದ ಸನ್ಯಾಸ ದೀಕ್ಷೆ ಪಡೆಯುವ ಸಮಯದಲ್ಲಿ ಅವರಿಗೆ ಪೂರ್ಣಪ್ರಜ್ಞ ಎಂದು ಮರುನಾಮಕರಣ ಮಾಡಲಾಯಿತು. ಪ್ರಾಣದೇವರ ಅಪರಾವತಾರ ಎಂದೇ ನಂಬಲಾಗಿದ್ದ ಪೂರ್ಣಪ್ರಜ್ಞರು ಸಂನ್ಯಾಸ ದೀಕ್ಷೆ ತೆಗೆದುಕೊಂಡ ತಿಂಗಳೊಳಗೇ ಅಲ್ಲಿನ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದ್ದರಿಂದ ಸಂತಸಗೊಂಡ ಅಚ್ಯುತಪ್ರೇಕ್ಷರು ಪೂರ್ಣಪ್ರಜ್ಞರಿಗೆ ವೇದಾಂತ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದನ್ನು ಕೊಟ್ಟರು. ಆನಂತರ ವೇದದ ಬಲಿಷ್ಟ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿಯೇ ಗ್ರಂಥ ರಚಿಸಿದ ಕಾರಣ ಅವರು ಮಧ್ವಾಚಾರ್ಯರೆಂದು ಪ್ರಸಿದ್ಧಿಪಡೆದರು.
ಮಧ್ವಾಚಾರ್ಯರು ಹರಿಯೇ ಸರ್ವೋತ್ತಮ. ಉಳಿದ ದೇವತೆಗಳೆಲ್ಲ ಅವನ ಅಧೀನರಾಗಿದ್ದು ಅವರವರ ಜ್ಞಾನಕ್ಕನುಗುಣವಾಗಿ ವಿವಿಧ ಕಕ್ಷೆಯಲ್ಲಿ ಬರುವ ಕಾರಣ ಅದಕ್ಕನುಗುಣವಾಗಿ ಅವರ ಉಪಾಸನೆ ಮಾಡಬೇಕು ಎನ್ನುವುದು ಅವರ ವಾದವಾಗಿತ್ತು. ದೇವರು ಬಿಂಬ ಮತ್ತು ಜೀವ ಅವನ ಪ್ರತಿಬಿಂಬ ಹಾಗಾಗಿ ಅವರು ಹರಿ ಸರ್ವತೋತ್ತಮ ವಾಯು ಜಿವೋತ್ತಮ ಎಂಬ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಲ್ಲದೇ, ಭಕ್ತಿ ಹಾಗು ದೇವರ ಬಗ್ಗೆ ಜ್ಞಾನದಿಂದ ಎಲ್ಲರೂ ಮೋಕ್ಷ ಹೊಂದಬಹುದೆಂದು ಪ್ರತಿಪಾದಿಸಿದರು.
ತಮ್ಮ ತತ್ವ ಪ್ರತಿಪಾದನೆಗಾಗಿ ಉಳಿದ ಆಚಾರ್ಯರಂತೆ ಮಧ್ವಾಚಾರ್ಯರೂ, ದೇಶಾದ್ಯಂತ ಸಂಚಾರ ಮಾಡುವಾಗ ಅನೇಕ ಸಂಪ್ರದಾಯವಾದಿಗಳಿಂದ ಅವರ ನಂಬಿಕೆಗೆ ಪ್ರಭಲ ವಿರೋಧ ಬಂದರೂ ಅದಕ್ಕೆಲ್ಲಾ ಜಗ್ಗದೆ, ಕುಗ್ಗದೇ ಸಮರ್ಥವಾಗಿ ತಮ್ಮ ವಾದವನ್ನು ಮಂಡಿಸಿ, ಅನಂತಶಯನ, ಶ್ರೀರಂಗಂ ಮೊದಲಾದವು ಸೇರಿದಂತೆ ದಕ್ಷಿಣಭಾರತ ಎಲ್ಲಾ ಪ್ರಮುಖ ಕ್ಷೇತ್ರಗಳಿಗೆ ಭೇಟಿನೀಡಿ ಪುನಃ ಸ್ವಕ್ಷೇತ್ರ ಉಡುಪಿಗೆ ಹಿಂದಿರುಗಿ ಸಂಸ್ಕೃತದಲ್ಲಿ ಗೀತೆಗೆ ಭಾಷ್ಯವನ್ನು ಬರೆದದ್ದಲ್ಲದೇ, ತಮ್ಮ ತತ್ವ ಸಿದ್ಧಾಂತದ ಆಧಾರದಮೇಲೆ ಸುಮಾರು 37 ಗ್ರಂಥಗಳನ್ನು ಬರೆದರು. ಈ ಗ್ರಂಥಗಳಿಗೆ ಸರ್ವ ಮೂಲಗ್ರಂಥ ಗಳೆಂದು ಕರೆಯಲಾಗುತ್ತದೆ.
ಇದಾದ ಕೆಲವು ಸಮಯದ ನಂತರ ತಮ್ಮ ತತ್ವ ಸಿದ್ಧಾಂತದ ಪ್ರಚಾರಕ್ಕಾಗಿ ಉತ್ತರ ಭಾರತದ ಯಾತ್ರೆ ಕೈಗೊಂದು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ವೇದ ವ್ಯಾಸರ ಆಶ್ರಮದಲ್ಲಿ ವ್ಯಾಸಮಹರ್ಷಿಗಳನ್ನು ಕಂಡು ಅವರಿಗೆ ತಮ್ಮ ಗೀತೆಯ ಭಾಷ್ಯವನ್ನು ತೋರಿಸಿ ಅವರ ಮೆಚ್ಚುಗೆಯನ್ನು ಪಡೆದದ್ದು ಮಧ್ವಾಚಾರ್ಯರ ಹೆಗ್ಗಳಿಕೆಯಾಗಿದೆ.
ಮಧ್ವಾಚಾರ್ಯರು ಹೀಗೆ ಬದರಿಗೆ ಬರುವ ಮುನ್ನ ನಡೆದ ಘಟನೆಯು ಬಲು ರೋಚಕವಾಗಿದೆ. ತಮ್ಮ ಶಿಷ್ಯಗಣದೊಂದಿಗೆ ಬದರಿಯತ್ತ ಪ್ರಯಾಣಿಸುತ್ತಿದ್ದಾಗ ಗಂಗಾ ನದಿಯ ತಟಕ್ಕೆ ಬಂದು ನದಿಯ ಅತ್ತ ತುದಿಯಲ್ಲಿದ್ದ ರಾಜ್ಯಕ್ಕೆ ಹೋಗಲು ಇಚ್ಚಿಸುತ್ತಾರೆ. ಹೇಳೀ ಕೇಳಿ ಆ ರಾಜ್ಯ ಮುಸಲ್ಮಾನ ದೊರೆಯ ಆಡಳಿತದಲ್ಲಿದ್ದು ಸದಾ ಕಾಲವೂ ಶತ್ರುಗಳ ಬಾಧೆಯಿಂದಾಗಿ ಆತ ತನ್ನ ರಾಜ್ಯದ ಸುತ್ತಲೂ ಭದ್ರವಾಗಿ ಶಸ್ತ್ರಸಜ್ಜಿತ ಸೈನಿಕರನ್ನು ಇಟ್ಟು ನದಿಯನ್ನು ದಾಟಲು ದೋಣಿಯ ವ್ಯವಸ್ಥೆಯನ್ನೂ ಮಾಡಿರುವುದಿಲ್ಲ. ಆದರೆ ಇದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ಮಧ್ವಾಚಾರ್ಯರು ತಮ್ಮ ಶಿಷ್ಯಂದಿರತ್ತ ತಿರುಗಿ ಕಂಚಿನ ಕಂಠದಿಂದ ನಡೆಯಿರಿ ನದಿಯನ್ನು ದಾಟೋಣ ಎಂದು ಹೇಳಿ ಗೋವಿಂದಾ… ಗೋವಿಂದಾ.. ಎಂದು ಭಗವಂತನ ನಾಮಸ್ಮರಣೆ ಮಾಡುತ್ತಾ ನದಿಯನ್ನು ದಾಟಲು ಆರಂಭಿಸುತ್ತಾರೆ. ಆರಂಭದಲ್ಲಿ ಅಳುಕಿದ ಅವರ ಶಿಷ್ಯರು ನಂತರ ಗುರುಗಳ ಮೇಲೆ ಭಾರ ಹಾಕಿ ಅವರೂ ಸಹಾ ಗುರುಗಳ ಜೊತೆಯಲ್ಲಿ ಸುಲಭವಾಗಿ ನದಿಯನ್ನು ದಾಟಿಬಿಡುತ್ತಾರೆ.
ನೀರಿನಲ್ಲಿ ನಡೆದು ಬರುತ್ತಿದ್ದ ಸಂನ್ಯಾಸಿಗಳನ್ನು ಕಂಡು ಮುಸಲ್ಮಾನ ಸೈನಿಕರು ಇತ್ತ ಬರಬೇಡಿ, ಬಂದು ಸಾಯಬೇಡಿ ಎಂಬ ಎಚ್ಚರಿಕೆಯನ್ನೂ ಲೆಖ್ಖಿಸದೇ ನದಿಯನ್ನು ದಾಟಿ ಬಂದವರನ್ನು ನೋಡಿ ಆಶ್ಚರ್ಯ ಚಕಿತರಾಗಿ ಅವರನ್ನು ಬಂಧಿಸಿ ತಮ್ಮ ರಾಜನ ಬಳಿಗೆ ಕರೆದುಕೊಂಡು ಹೋಗಿ ವಿಷಯವನ್ನೆಲ್ಲಾ ತಿಳಿಸುತ್ತಾರೆ. ಸೈನಿಕರ ಮಾನಿಂದ ಅಚ್ಚರಿಗೊಂಡ ರಾಜನೂ ಸಹಾ, ನಮ್ಮ ಶಸ್ತ್ರಸಜ್ಜಿತ ಸೈನಿಕರು ಬಾರದಿರಿ ಎಂದು ಎಚ್ಚರಿಸಿದರೂ ನೀವಿಲ್ಲಿಗೆ ಇಷ್ಟು ಧೈರ್ಯದಿಂದ ಹೇಗೆ ಬಂದಿರಿ? ಎಂದು ಕೇಳಿದಾಗ
ನಗುತ್ತಲೇ ಮಧ್ವಾಚಾರ್ಯರು ಅಯ್ಯಾ ದೊರೆಯೇ, ನಿನ್ನ ಮತ್ತು ನನ್ನ ನನ್ನ ತಂದೆ ಒಂದೇ ಆಗಿರುವಾಗ ನಾವಿಬರೂ ಸಹೋದರರಾಗಿರುವಾಗ ಹೆದರಿಕೆಯನ್ನೇಕೆ ಪಡಬೇಕು? ಎಂದಾಗ, ಆಚಾರ್ಯರ ಮಾತು ಕೇಳಿ ದೊರೆ ದಂಗುಬಡಿದು ಹೋಗುತ್ತಾನೆ. ಅವನ ಮುಖಚರ್ಯೆಯನ್ನು ಗಮನಿಸಿದ ಆಚಾರ್ಯರು, ಅಯ್ಯಾ, ನನ್ನನ್ನು ಮತ್ತು ನಿನ್ನನ್ನು ಕಾಪಾಡುವ ಭಗವಂತ ಮೇಲಿದ್ದಾನೆ. ನಾನು ನಾರಾಯಣ ಎಂದರೆ ನೀನು ಅಲ್ಲಾ ಎನ್ನುತ್ತೀಯಾ ಅಷ್ಟೇ. ದೇವನೋಬ್ಬ ನಾಮ ಹಲವು ಹಾಗಾಗಿ ಭಗವಂತನನ್ನು ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ. ಹಾಗಾಗಿ ಧರ್ಮಕ್ಕೊಂದು ದೇವರಿಲ್ಲ. ನಾವೆಲ್ಲರೂ ಆ ದೇವರ ಅನುಯಾಯಿಗಳು ಅವನ ಅನುಗ್ರಹದಿಂದಲೇ ನಾವು ದೋಣಿಯ ಸಹಾಯವಿಲ್ಲದೇ ನದಿಯನ್ನು ದಾಟಿದ್ದಲ್ಲದೇ, ನಮ್ಮನ್ನು ಕೊಲ್ಲಲು ಬಂದಿದ್ದ ನಿನ್ನ ಸೈನಿಕರ ಮನವೊಲಿಸಲು ಸಹಾಯವಾಯಿತು ಎಂದು ವಿವರಿಸಿದಾಗ, ಗುರುಗಳ ಗತ್ತು, ಗಾಂಭೀರ್ಯ, ಎದೆಗಾರಿಕೆ, ಆತ್ಮಶಕ್ತಿ ಮತ್ತು ದಿವ್ಯ ತೇಜಸ್ಸಿಗೆ ಮರುಳಾದ ಆ ಮುಸಲ್ಮಾನ ರಾಜ, ಆಚಾರ್ಯರನ್ನು ಸತ್ಕರಿಸಿದ ಅತಿ ದೊಡ್ಡದಾದ ಜಹಗೀರನ್ನು ಬಿಟ್ಟು ಕೊಟ್ಟ, ನಿಮಗೆ ಸಕಲ ಸೌಕರ್ಯಗಳನ್ನೂ ಮಾಡಿಕೊಡುತ್ತೇನೆ. ನೀವು ಇಲ್ಲೇ ಆಶ್ರಮ ಕಟ್ಟಿಕೊಂಡು ಸುಖಃವಾಗಿರಿ ಎಂದು ಪರಿ ಪರಿಯಾಗಿ ಭಿನ್ನವಿಸಿಕೊಂಡರೂ. ಬಹಳ ಸೌಜನ್ಯದಿಂದಲೇ ರಾಜನ ಜಹಗೀರನ್ನು ತಿರಸ್ಕರಿಸಿ ತಮ್ಮ ಶಿಷ್ಯ ಪರಿವಾರದೊಡನೆ ಉತ್ತರಾಭಿಮುಖವಾಗಿ ಬದರಿಯತ್ತ ಬಂದಿರುತ್ತಾರೆ.
ಬದರಿಯಿಂದ ಉಡುಪಿಗೆ ಹಿಂತಿರುಗಿದ ನಂತರ ಬ್ರಹ್ಮ ಸೂತ್ರದ ಭಾಷ್ಯವನ್ನು ಬರೆದದ್ದಲದೇ, ದಶ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು. ಋಗ್ವೇದದ 40 ಸೂಕ್ತಗಳಿಗೆ ಟೀಕೆಯನ್ನು ಬರೆದರು. ಭಾಗವತ (ಮಹಾಭಾರತ ) ತಾತ್ಪರ್ಯ ನಿರ್ಣಯವನ್ನು ಬರೆಯುವುದರ ಜೊತೆಗೆ ಇನ್ನೂ ಅನೇಕ ಗ್ರಂಥಗಳನ್ನು ರಚಿಸಿದ್ದಲ್ಲದೇ ತಮ್ಮ ತತ್ವಜ್ಞಾನವನ್ನು ದೇಶ ವಿದೇಶಗಳಲ್ಲಿ ಹರಡುವ ಸಲುವಾಗಿ ಸಾವಿರಾರು ಶಿಷ್ಯಂದಿರನ್ನು ತಯಾರು ಮಾಡುತ್ತಾರೆ.
ಇದೇ ಸಮಯದಲ್ಲೇ ಪಶ್ಚಿಮ ಸಮುದ್ರ ತೀರದಲ್ಲಿ ದೊರೆತ ಶ್ರೀ ಕೃಷ್ಣನ ಮೂರ್ತಿಯನ್ನು ಉಡುಪಿಯಲ್ಲಿ ಪ್ರತಿಷ್ಟಾಪಿಸಿ ಶ್ರೀ ಕೃಷ್ಣನಿಗೆ ನಿರ್ವಿಘ್ನವಾಗಿ ಪೂಜಾ ಕೈಂಕರ್ಯಗಳು ನಡೆದುಕೊಂಡು ಹೋಗುವ ಸಲುವಾಗಿ ದೇವಾಲಯದ ಸುತ್ತಲೂ ಈ ಕೆಳಕಂಡಂತಹ ಅಷ್ಟಮಠಗಳನ್ನು ಸ್ಥಾಪಿಸಿ ಪ್ರತಿ ಪರ್ಯಾಯಕ್ಕೊಂದೊಂದು ಮಠಗಳು ಪೂಜೆಯನ್ನು ನಡೆಸಿಕೊಂಡು ಹೊಗುವ ಪದ್ಧತಿಯನ್ನು ಜಾರಿಗೆ ತರುತ್ತಾರೆ.
- ಹೃಷೀಕೇಶ ತೀರ್ಥ (ಫಲಿಮಾರು ಮಠ)
- ನರಸಿಂಹ(ನರಹರಿ)ತೀರ್ಥ (ಆದಮಾರು ಮಠ)
- ಜನಾರ್ಧನ ತೀರ್ಥ (ಕೃಷ್ಣಾಪುರ ಮಠ)
- ಉಪೇಂದ್ರ ತೀರ್ಥ (ಪುತ್ತಿಗೆ ಮಠ)
- ವಾಮನ ತೀರ್ಥ (ಶಿರೂರು ಮಠ)
- ವಿಷ್ಣು ತೀರ್ಥ (ಸೋದೆ ಮಠ, ಸುಬ್ರಹ್ಮಣ್ಯ ಮಠ)
- ಶ್ರೀರಾಮ ತೀರ್ಥ (ಕಾಣಿಯೂರು ಮಠ)
- ಅಧೋಕ್ಷಜ(ಅಕ್ಷೋಭ್ಯ) ತೀರ್ಥ (ಪೇಜಾವರಮಠ)
ಇದಾದ ನಂತರ ಉಡುಪಿಯ ಸುತ್ತ ಮುತ್ತಲೂ ಪ್ರವಾಸ ಕೈಗೊಂಡು ಅಲ್ಲಿನ ಬ್ರಾಹ್ಮಣರೊಡನೆ ಸಮಲೋಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮ ನಿಯಮ ರಚಿಸಿದ್ದನ್ನು ಖಂಡಾರ್ಥ ನಿರ್ಣಯವೆಂದು ಕರೆಯಲಾಗುತ್ತದೆ. ಇದೇ ಸಮಯದಲ್ಲಿಯೇ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರವನ್ನೂ ಮಾಡಿಸುತ್ತಾರೆ
ಇಷ್ಟೆಲ್ಲಾ ಕೆಲಸಗಳನ್ನು ಉಡುಪಿಯಲ್ಲಿ ಮಾಡಿದ ನಂತರ ಫುನಃ ಎರಡನೇ ಬಾರಿ ಬದರಿಗೆ ಪ್ರಯಾಣ ಬೆಳಸಿ ಅಲ್ಲಿ ಮತ್ತೊಮ್ಮೆ ವ್ಯಾಸರನ್ನೂ ನಾರಾಯಣನನ್ನೂ ದರ್ಶನ ಮಾಡಿ ಹಿಂತಿರುಗುವ ಮಾರ್ಗದಲ್ಲಿ ಕಾಶಿಗೆ ಬಂದು ಅಲ್ಲಿಯ ಅಮರೇಂದ್ರ ಪುರಿ ಎಂಬುವರನ್ನು ವಾದದಲ್ಲಿ ಸೋಲಿಸುತ್ತಾರೆ. ಅಲ್ಲಿಂದ ಕುರುಕ್ಷೇತ್ರದ ಬಳಿ ಬಂದು, ಒಂದು ಸ್ಥಳದಲ್ಲಿ ಇದ್ದಕ್ಕಿದ್ದಂತೆಯೇ ನಿಂತು ತಮ್ಮ ಶಿಷ್ಯರಿಗೆ ಆ ಸ್ಥಳದಲ್ಲಿ ಅಗೆಯಲು ಸೂಚಿಸುತ್ತಾರೆ. ಗುರುಗಳ ಆಜ್ಞೆಯಂತೆ ಅಗೆದಾಗ ದ್ವಾಪರಯುಗದಲ್ಲಿ ಭೀಮನು ಬಳೆಸಿದ ಎನ್ನಲಾದ ಗದೆಯೊಂದು ಸಿಗುತ್ತದೆ. ಅದಕ್ಕೆ ಪೂಜೆ ಮಾಡಿ ಅದನ್ನು ಪುನಃ ಹಾಗೆಯೇ ಮಣ್ಣಿನಲ್ಲಿ ಮುಚ್ಚಿಸಿ ನಂತರ ಪಶ್ಚಿಮದ ಪಡೆ ಪ್ರಯಾಣ ಬೆಳಸಿ ಗೋವಾಕ್ಕೆ ಬಂದಾಗ ಅಲ್ಲಿಯ ಭಕ್ತಾದಿಗಳ ಕೋರಿಕೆಯ ಮೇರೆಗೆ ತಮ್ಮ ಸುಮಧುರವಾದ ಕಂಠದಿಂದ ಭಗವಂತನ ನಾಮಸ್ಮರಣೆ ಮಾಡುತ್ತಾ ತಮ್ಮ ವಿದ್ವತ್ಪೂರ್ಣ ಸಂಗೀತದಿಂದ ಭಗವಂತನನ್ನೂ ಮತ್ತು ಭಕ್ತರನ್ನೂ ಮೆಚ್ಚಿಸಿ ಉಡುಪಿಗೆ ಹಿಂತಿರುಗುತ್ತಾರೆ.
ಇದಾದ ನಂತರ ಉಡುಪಿಯಲ್ಲಿಯೇ ತಮ್ಮ ಕೃತಿರಚನೆಗಳಲ್ಲಿಯೇ ಕಳೆದ ಮಧ್ವಾಚಾರ್ಯರು ನಾಲ್ಕು ಭಾಗಗಳಲ್ಲಿರುವ ತಮ್ಮ ಟೀಕೆಗಳನ್ನು ಏಕ ಕಾಲದಲ್ಲಿಯೇ ನಾಲ್ಕು ಶಿಷ್ಯರಿಗೆ ಬಿಡುವಿಲ್ಲದೆ ಹೇಳಿ ಬರೆಸಿದರೆಂದು ಬಲ್ಲವರು ಹೇಳುತ್ತಾರೆ. ಅದೇ ಸಮಯದಲ್ಲಿ ನ್ಯಾಯವಿವಾರ್ಣವ ವೆಂಬ ಗ್ರಂಥವನ್ನೂ ರಚಿಸಿದರು ಎನ್ನಲಾಗುತ್ತದೆ. ತಮ್ಮ 70ನೇ ವಯಸ್ಸಿನಲ್ಲಿ ಮಧ್ವಾಚಾರ್ಯತು ತಮ್ಮ ಸೋದರನಿಗೆ ಸನ್ಯಾಸ ದೀಕ್ಷೆ ಕೊಟ್ಟು ಅವರನ್ನು ಸೋದೆ ಮಠ ಮತ್ತು ಸುಬ್ರಹ್ಮಣ್ಯ ಮಠಕ್ಕೆ ಅಧಿಪತಿಗಳನ್ನಾಗಿ ಮಾಡಿದನಂತರ ತಮ್ಮ 79ನೇ ವಯಸ್ಸಿನಲ್ಲಿ ಕ್ರಿ.ಶ.1317 ರಲ್ಲಿ ಒಬ್ಬರೇ ಬದರಿಕಾಶ್ರಮಕ್ಕೆ ಪ್ರಯಾಣ ಬೆಳಸಿದರು. ಹಾಗೆ ಅವರು ಬದರಿಗೆ ಪ್ರಯಾಣ ಬೆಳೆಸಿದ ದಿನ ಮಾಘ ಮಾಸದ ಶುದ್ಧ ನವಮಿಯಾಗಿದ್ದು ಆ ದಿನವನ್ನು ಮಧ್ವ ನವಮಿ ಎಂದು ಇಂದಿಗೂ ಆಚರಿಸುವುದಲ್ಲದೇ ಅವರ ಆರಾಧನೆಯ ಪುಣ್ಯ ದಿನ ಎಂದು ಭಕ್ತಿಯಿಂದ ಪೂಜಿಸುತ್ತಾರೆ. ಇಂದಿಗೂ ಬದರಿಯಲ್ಲಿ ಮಧ್ವಾಚಾರ್ಯರು ವೇದವ್ಯಾಸರ ಸೇವೆ ಮಾಡಿಕೊಂಡಿದ್ದಾರೆ ಎಂದೇ ಮಧ್ವಾಚಾರ್ಯರ ಅನುಯಾಯಿಗಳ ನಂಬಿಕೆಯಾಗಿದೆ.
ಮುಸಲ್ಮಾನ ದೊರೆಗೆ ನಮ್ಮಿಬ್ಬರ ದೇವರು ಒಬ್ಬನೇ ಎಂದು ಮಧ್ವಾಚಾರ್ಯರು ಹೇಳಿದ್ದನ್ನು ಮರೆತ ಅವರ ಅನುಯಾಯಿಗಳೇ ಅದ್ವೈತ ಸಿದ್ಧಾಂತಿ ಆದಿಗುರು ಶಂಕರಾಚಾರ್ಯರ ವಿರುದ್ಧ ಇಲ್ಲ ಸಲ್ಲದ ರೀತಿಯಲ್ಲಿ ಅಪಮಾನ ಮಾಡುವುದನ್ನು ನೋಡಿದಾಗ ನಮ್ಮ ನಮ್ಮಲ್ಲಿಯೇ ಒಗ್ಗಟ್ಟಿಲ್ಲದೇ, ಈ ರೀತಿ ಪರಸ್ಪರ ಕಿಚ್ಚಾಡುವುದರಿಂದಲೇ ಅನ್ಯಧರ್ಮೀಯರ ದಾಸ್ಯಕ್ಕೆ ಒಳಗಾದರೂ ಬುದ್ಧಿ ಬರಲಿಲ್ಲವಲ್ಲಾ.. ಹೇಳುವುದಕ್ಕೆ ಶಾಸ್ತ್ರ ತಿನ್ನೋದು ಮಾತ್ರಾ ಬದನೇ ಕಾಯಿ ಎನ್ನುವ ಗಾದೆಯಂತಾಗಿದೆಯಲ್ಲಾ ಎಂದು ದುಃಖಿಸುವಂತಾಗಿದೆ.
ಏನಂತೀರಿ?
ನಿಮ್ಮವನೇ ಉಮಾಸುತ
Narration is very beautiful, educative and informative. Many things are taught for those who have the quest for knowledge. Keep it up, Sir.
LikeLiked by 1 person