ಸಾಮಾನ್ಯವಾಗಿ ಸಣ್ಣ ವಯಸ್ಸಿನ ಮಕ್ಕಳಿಗೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಹಿರಿಯರು, ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆಯ ಮಾತನ್ನು ಹೇಳುತ್ತಿರುತ್ತಾರೆ. ಅದರ ಸ್ವಲ್ಪ ಮುಂದುವರೆದ ಭಾಗವಾಗಿ ಪುಸ್ತಕ ಎಂದರೆ ಕೇವಲ ಕಥೆ ಕಾದಂಬರಿಗಳಲ್ಲದೇ ತಮ್ಮ ಕಠಿಣ ಪರಿಶ್ರಮದೈದ್ದ ವೃತ್ತಿಪರರಾಗಿ ಯಶಸ್ಸಿಗಳಾದವರ ಕಥೆಗಳನ್ನು ಓದುವುದರಿಂದ ಅವರಂತೆ ಯಶಸ್ಸನ್ನು ನಾವು ಸಹಾ ಕಾಣಬಹುದು ಎಂಬ ಕೆಚ್ಚನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ಭಾರತದಲ್ಲಿ ಯಶಸ್ವೀ ಉದ್ದಿಮೆ ಸ್ಥಾನಮಾನದಲ್ಲಿ ನಿಲ್ಲಬಲ್ಲಂತಹ ಕೆಲವೇ ಕೆಲವು ಉದ್ಯಮಿಗಳಲ್ಲಿ ಶ್ರೀ ರಾಹುಲ್ ಬಜಾಜ್ ಅವರೂ ಸಹಾ ಒಬ್ಬರಾಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. 5 ದಶಕಗಳ ಕಾಲ ತಮ್ಮ ತಮ್ಮ ಬಜಾಜ್ ಸಮೂಹವನ್ನು ಯಶಸ್ಸಿನತ್ತ ಮುನ್ನಡೆಸಿದ ರಾಹುಲ್ ಬಚಾಜ್ ಅವರು ತಮ್ಮ 83ನೇ ವಯಸ್ಸಿನಲ್ಲಿ ಫೆಬ್ರವರಿ 12ರಂದು ಪುಣೆಯಲ್ಲಿ ನಿಧನರಾಗಿರುವುದು ಭಾರತದ ಉದ್ಯಮಲೋಕ ಅದರಲ್ಲೂ ಆಟೋಮೊಬೈಲ್ ಉದ್ಯಮಕ್ಕೆ ನಷ್ಟವೇ ಸರಿ.
ರಾಜಸ್ಥಾನದ ಮಾರ್ವಾಡಿಯ ವ್ಯಾಪಾರ ಕುಟುಂಬದ ಹಿನ್ನಲೆಯುಳ್ಳ ಉದ್ಯಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಜಮ್ನಾಲಾಲ್ ಬಜಾಜ್ ಅವರ ಮಗ ಕಮಲ್ನಯನ್ ಬಜಾಜ್ ಮತ್ತು ಸಾವಿತ್ರಿ ಅವರಿಗೆ 1938ನೇ ಇಸವಿಯ ಜೂನ್ 10ನೇ ತಾರೀಕಿನಂದು ಬಂಗಾಲ ಪ್ರಾಂತ್ಯದಲ್ಲಿ ರಾಹುಲ್ ಬಜಾಜ್ ಅವರ ಜನನವಾಗುತ್ತದೆ. ಬಾಲ್ಯದಿಂದಲೂ ಓದಿನಲ್ಲಿ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿದ್ದ ರಾಹುಲ್ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದ ಆನರ್ಸ್ ಪಡೆದ ನಂತರ ಬಾಂಬೆ ವಿಶ್ವವಿದ್ಯಾಲಯದ ಕಾನೂನು ಪದವಿ ಪಡೆದು, ಅಮೆರಿಕದ ಬೋಸ್ಟನ್ನಿನ ಪ್ರತಿಷ್ಠಿತ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ನಲ್ಲಿ ಮಾಸ್ಟರ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ಮುಗಿಸಿದರು. 1926 ರಲ್ಲಿಯೇ ಜಮ್ನಾಲಾಲ್ ಅವರು ಆರಂಭಿಸಿದ್ದ ಬಜಾಜ್ ಗ್ರೂಪ್ ಸಂಸ್ಥೆಯನ್ನು ರಾಹುಲ್ ಅವರ ತಂದೆ ಕಮಲನಯನ್ ಬಜಾಜ್ ಅವರು 1942 ರಲ್ಲಿ ಉತ್ತರಾಧಿಕಾರಿ ಆಗಿ ವಹಿಸಿಕೊಂಡ ಕೆಲವೇ ವರ್ಷಗಳಲ್ಲಿ ಸಿಮೆಂಟ್, ವಿದ್ಯುತ್ ಉಪಕರಣಗಳು ಮತ್ತು ಆಟೋಮೊಬೈಲ್ ಸೇರಿದಂತೆ ಹೊಸ ವ್ಯವಹಾರಗಳಿಗೆ ವಿಸ್ತರಿಸಿದ್ದರು.1965 ರಲ್ಲಿ ರಾಹುಲ್ ಬಜಾಜ್ ತಮ್ಮ ಬಜಾಜ್ ಗುಂಪಿಗೆ ಸೇರಿಕೊಂಡು 1968 ರಲ್ಲಿ ಬಜಾಜ್ ಆಟೋದ CEO ಆಗಿ ನೇಮಕಗೊಂಡರು.
70ರ ದಶಕದಲ್ಲಿ ಭಾರತದಲ್ಲಿ ಸೈಕಲ್ ಹೊರತಾಗಿ ಜನರಿಗೆ ಸುಲಭವಾಗಿ ಓಡಾಡಲು ದ್ವಿಚಕ್ರವಾಹನಗಳು ಇಲ್ಲದಿದ್ದದ್ದನ್ನು ಮಗಗಂಡ ಬಜಾಜ್ ಜನೋಪಕಾರಿಯಾದಂತಹ ಮತ್ತು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ಎಟುಕುವಂತ 2 ಸ್ಘ್ರೋಕ್ ಸ್ಕೂಟರ್ ಗಳ ತಯಾರಿಕೆಯನ್ನು ಆರಂಭಿಸಿದರು. ಇತಿಹಾಸದಲ್ಲಿ ರಾಜಾ ಮಹಾರಾಣಾ ಪ್ರತಾಪ್ ಅವರಿಗೆ ಚೇತಕ್ ಕುದುರೆ ಪ್ರತಿಷ್ಟೆಯ ಸಂಕೇತವಾದರೆ, 70-80 ರ ದಶಕದಲ್ಲಿ ಬಜಾಚ್ ಚೇತಕ್ ಸ್ಕೂಟರ್ ಹೊಂದಿರುವುದೇ ಭಾರತೀಯರ ಪ್ರತಿಷ್ಟೆಯ ಸಂಕೇತ ಎನ್ನುವವಷ್ಟರ ಮಟ್ಟಿಗೆ ಮನೆಮಾತಾಗಿದ್ದಲ್ಲದೇ, ಚೇತಕ್ ಖರೀದಿಸಲು 2-3 ವರ್ಷಗಳ ಕಾಯುವಂತಹ ಪರಿಸ್ಥಿತಿ ಇತ್ತು ಎಂದರೆ ಆ ವಾಹನದ ಗುಣಮಟ್ಟ ಮತ್ತು ಜನಪ್ರಿಯತೆಯನ್ನು ಅಳೆಯಬಹುದಾಗಿದೆ.
90 ರ ದಶಕದ ಆರಂಭದಲ್ಲಿ ಭಾರತದ ಉದಾರೀಕರಣದ ಪ್ರಭಾವದಿಂದಾಗಿ Honda, Suzuki, Yamaha, Piaggio, Garelli, Peugot ನಂತಹ ವಿಶ್ವದ ಅಗ್ರ ಸ್ಕೂಟರ್ ತಯಾರಕರು ಭಾರತದಲ್ಲಿ ಸಹಯೋಗ ಅಥವಾ ಜಂಟಿ ಉದ್ಯಮಗಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದದ್ದನ್ನು ತೀವ್ರವಾಗಿ ವಿರೋಧಿಸಿದ ಹಲವರಲ್ಲಿ ಬಜಾಜ್ ಅವರು ಅಗ್ರಗಣ್ಯರಾಗಿದ್ದರು. ಇದಾದ ನಂತರ ಭಾರತೀಯ ಕಾರ್ಪೊರೇಟ್ ಜಾಹೀರಾತು ಉದ್ಯಮದಲ್ಲಿಯೇ ಅತ್ಯಂತ ಪ್ರಸಿದ್ಧ ಟ್ಯಾಗ್‌ಲೈನ್ ಎಂದೇ ಹೆಸರಾದ You Just Can’t beat a Bajaj (ನೀವು ಬಜಾಜ್ ಅನ್ನು ಸೋಲಿಸಲು ಸಾಧ್ಯವೇ ಇಲ್ಲ) ಎನ್ನುತ್ತಲೇ ಹಮಾರಾ ಬಜಾಜ್ ಎಂದು ತಮ್ಮ ಬಜಾಜ್ ಸಂಸ್ಥೆಯನ್ನು ವಿಶ್ವದೆಲ್ಲೆಡೆ ಹರಡುವಂತೆ ಮಾಡಿದ್ದಲ್ಲದೇ, ಒಂದೇ ವರ್ಷದಲ್ಲಿ 25 ಲಕ್ಷ ವಾಹನಗಳನ್ನು ರಫ್ತು ಮಾಡುವ ಮೂಲಕ ರಫ್ತಿನಲ್ಲಿ ಹೊಸ ದಾಖಲೆ ಸೃಷ್ಟಿ ವಿದೇಶೀ ಕಂಪನಿಗಳಿಗೆ ಸಡ್ಡು ಹೊಡೆದ ಧೀಮಂತ ವ್ಯಕ್ತಿಯಾದರು.
ಹೀರೋ ಹೋಂಡಾ ಮೋಟಾರ್-ಸೈಕಲ್ ಮಾರುಕಟ್ಟೆಯಲ್ಲಿ ಪ್ರಾಭಲ್ಯವನ್ನು ಪಡೆದು ಭಾರತದ ಯುವಕರು ಸ್ಕೂಟರ್‌ಗಿಂತ ಮೋಟರ್ ಸೈಕಲ್ ಗಳಿಗೆ ಆದ್ಯತೆ ನೀಡಲು ಪ್ರಾರಂಭಿಸಿದಾಗ ಬಜಾಜ್ ಅವರ ಸ್ಕೂಟರ್ ವ್ಯವಹಾರ ಕುಸಿದದ್ದನ್ನು ಗಮನಿಸಿ, ಕೂಡಲೇ ತಯಾರಿಕೆಯಲ್ಲಿ ಬದಲಾವಣೆ ಮಾಡಿಕೊಂಡು Definitely male (ಖಂಡಿತವಾಗಿಯೂ ಪುರುಷರಿಗಾಗಿಯೇ) ಎಂಬ ಟ್ಯಾಗ್ ಲೈನ್ ನೊಂದಿಗೆ ಪಲ್ಸರ್ ಮೋಟರ್ ಸೈಕಲ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಯಶಸ್ವಿಯಾಗಿದ್ದಲ್ಲದೇ, ತಮ್ಮ ಬಜಾಜ್ M-50, M-80 ಗಳಂತಹ ಒರಟಾದ ಆದರೇ ಅಷ್ಟೇ ಬಲಿಷ್ಟವಾದ ವಾಹನಗಳನ್ನು ಹಳ್ಳಿಗಾಡಿನ ಜನರಿಗೆಂದೇ ತಯಾರಿಸಿ ನಗರ ಮತ್ತು ಹಳ್ಳಿಗಳ ಮಾರುಕಟ್ಟೆಯನ್ನು ಮರುವಶಪಡಿಸಿಕೊಳ್ಳುವ ಕಾರ್ಯತಂತ್ರ ರೂಪಿಸಿ ಆಟೋ ಮಾರುಕಟ್ಟೆಯ ಮೋಟಾರ್ ಸೈಕಲ್ ವಿಭಾಗದಲ್ಲಿ ಸಾಕಷ್ಟು ಪಾಲನ್ನು ಈಗಲೂ ಮುಂದುವರಿಸಿಕೊಂಡು ಹೋಗಿದೆ.
ರಾಹುಲ್ ಬಜಾಜ್ ಅವರ ಮತ್ತೊಂದು ಅಮೋಘ ಸಾಧನೆ ಎಂದರೆ, ಕೇವಲ ಎಲೆಕ್ಟ್ರಿಕಲ್ಸ್ ಮತ್ತು ಆಟೋ ಮೋಬೈಲ್ಸ್ ಅಲ್ಲದೇ, ವಿವಿಧ ವಲಯಗಳಿಗೆ ಬಜಾಜ್ ಸಮೂಹವನ್ನು ವಿಸ್ತರಿಸಿಕೊಂಡಿದ್ದಲ್ಲದೇ, ತಮ್ಮದೇ ವಾಹನಗಳನ್ನು ಕೊಂಡುಕೊಳ್ಳಲು ಸಹಾಯವಾಗುವಂತೆ, ಬಜಾಜ್ ಫೈನಾನ್ಸ್ ಸ್ಥಾಪಿಸುವ ಮೂಲಕ ಸಲಭವಾಗಿ ಸಾಲ ದೊರೆಯುವಂತೆ ಮಾಡಿದ್ದಲ್ಲದೇ ಅದಕ್ಕೂ ಒಂದು ಹೆಜ್ಜೆ ಮುಂದುವರೆಸಿ, ಇನ್ಷೂರೆನ್ಸ್ ಸೇವೆಗಳನ್ನೂ ಅರಂಭಿಸಿದರು. ಬಜಾಜ್ ಆಟೋಗಳಷ್ಟೇ ಬಜಾಜ್ ಗೃಹೋಪಯೋಗಿ ವಸ್ತುಗಳಿಗೂ ಭಾರತೀಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದ ನಂತರ, ಉಕ್ಕು ಮತ್ತು ಮಿಶ್ರ ಲೋಹಗಳ ತಯಾರಿಕೆ ಕ್ರೇನ್ ಮತ್ತು ಫೋರ್ಜಿಂಗ್ ವಲಯದಲ್ಲೂ ಬಜಾಜ್ ಸಮೂಹ ವಿಸ್ತರಣೆಗೊಂಡಿದೆ.
ಕೇವಲ ತಮ್ಮ ಸ್ವಂತೋದ್ಯಮವಲ್ಲದೇ, 1979-80 ಹಾಗೂ 1999- 2000ನೇ ಇಸವಿಯಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ (CII) ಅಧ್ಯಕ್ಷರಾಗಿ ತಮ್ಮ ನಾಯಕತ್ವ ಗುಣವನ್ನು ರಾಹುಲ್ ಬಜಾಜ್ ಪ್ರದರ್ಶಿಸಿದ್ದಾರೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಧ್ಯಕ್ಷರಾಗಿ, ಡೆವಲಪ್ಮೆಂಟ್ ಕೌನ್ಸಿಲ್ ಫಾರ್ ಆಟೋಮೊಬೈಲ್ಸ್ ಅಂಡ್ ಅಲೈಡ್ ಇಂಡಸ್ಟ್ರೀಸ್ ಮುಖ್ಯಸ್ಥರಾಗಿದ್ದಲ್ಲದೇ, ಮರಾಠ ವಾಣಿಜ್ಯ, ಕೈಗಾರಿಕೆ ಹಾಗೂ ಕೃಷಿ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1986ರಿಂದ 1989ರ ವರೆಗೆ ಇಂಡಿಯನ್ ಏರ್ಲೈನ್ಸ್ ಅಧ್ಯಕ್ಷರಾಗಿಯೂ ಸೇವೆಯನ್ನು ನಿಭಾಯಿಸಿದ್ದಾರೆ. 2003ರಿಂದ 2006ರ ವರೆಗೆ 3 ವರ್ಷಗಳ ಕಾಲ ಬಾಂಬೆ ಐಐಟಿಯಲ್ಲಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಬಾಂಬೆಗೂ ವಿಸ್ತರಣೆ ಆಯಿತು.
2001 ರಲ್ಲಿಯೇ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಲ್ಲದೇ, 2006-2010 ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ಉದ್ಯಮಕ್ಕೆ ಅವರ ನೀಡಿರುವ ಕೊಡುಗೆಗಾಗಿ ಅಂದಿನ ರಾಷ್ಟ್ರಪತಿ, ಪ್ರಣಬ್ ಮುಖರ್ಜಿ ಅವರ ಅಮೃತ ಹಸ್ತದಲ್ಲಿ 2017 ರಲ್ಲಿ ಜೀವಮಾನದ ಸಾಧನೆಗಾಗಿ CII ಅಧ್ಯಕ್ಷರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಫ್ರೆಂಚ್ ಸರ್ಕಾರದಿಂದಲೂ ಆರ್ಡರ್ ಆಫ್ ಲೀಜನ್ ಗೌರವ ದಕ್ಕಿದೆ. ಇದರ ಹೊರತಾಗಿ ಏಳು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಗಳ ಜೊತೆ ಇನ್ನೂ ಹತ್ತು ಹಲವಾರು ಗೌರವ- ಸಮ್ಮಾನಗಳು ಅವರಿಗೆ ಲಭಿಸಿದ್ದವು.
ಇಷ್ಟೆಲ್ಲಾ ವೈವಿಧ್ಯಮಯವಾದ ಉದ್ಯಮವನ್ನು ನಡೆಸುತ್ತಿದ್ದ ಬಜಾಜ್ ಸಮೂಹ ಕಂಪೆನಿಯ ನಿವ್ವಳ ಆಸ್ತಿ ಮೌಲ್ಯ 890 ಕೋಟಿ ಅಮೆರಿಕನ್ ಡಾಲರ್ ಅಂದರೆ 67,060.17 ಕೋಟಿ ಆಗುತ್ತದೆ. 2016 ರ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ, ಅವರು US$2.4 ಶತಕೋಟಿ ನಿವ್ವಳ ಮೌಲ್ಯದೊಂದಿಗೆ 722 ನೇ ಸ್ಥಾನದಲ್ಲಿದ್ದರು. ಪತ್ನಿ ರೂಪಾ ಬಜಾಜ್ ಮತ್ತು ಮಕ್ಕಳಾದ ರಾಜೀವ್ ಬಜಾಜ್, ಸಂಜೀವ್ ಬಜಾಜ್ ಹಾಗೂ ಸುನೈನಾ ಅಗರ್ವಾಲ್ ಅವರ ಸುಂದರ ಸಂಸಾರವಾಗಿದೆ.
2008 ರಲ್ಲಿಯೇ ಅವರು ಬಜಾಜ್ ಆಟೋವನ್ನು ಬಜಾಜ್ ಆಟೋ, ಹಣಕಾಸು ಕಂಪನಿ ಬಜಾಜ್ ಫಿನ್‌ಸರ್ವ್ ಮತ್ತು ಹೋಲ್ಡಿಂಗ್ ಕಂಪನಿ ಎಂಬ ಮೂರು ಘಟಕಗಳಾಗಿ ವಿಭಜಿಸಿ ಅದನ್ನು ಮಕ್ಕಳಾದ ರಾಜೀವ್ ಬಜಾಜ್ ಮತ್ತು ಸಂಜೀವ್ ಬಜಾಜ್ ಅವರ ಸುಪರ್ದಿಗೆ ಒಪ್ಪಿಸಿದ್ದರು.
ಇಳಿ ವಯಸ್ಸಲ್ಲೂ ಕಂಪನಿಯ ಆಗುಹೋಗುಗಳನ್ನು ತಾವೇ ಮುನ್ನಡೆಸುತ್ತಿದ್ದವರು ಕಳೆದ ವರ್ಷ 2021ರ ಏಪ್ರಿಲ್‌ನಲ್ಲಿ ವಿರಾಮ ತೆಗೆದುಕೊಂಡು ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ಅವರ ಸೋದರ ಸಂಬಂಧಿ ನಿರಾಜ್ ಬಜಾಜ್‌ಗೆ ಸ್ಥಾನವನ್ನು ಬಿಟ್ಟುಕೊಟ್ಟಿದ್ದರೂ, ಐದು ವರ್ಷಗಳ ಅವಧಿಗೆ ಸಂಸ್ಥೆಯ ಗೌರವಾಧ್ಯಕ್ಷರನ್ನಾಗಿ ಮುಂದುವರೆದಿದ್ದರು.
ಹಮಾರಾ ಬಜಾಜ್ ಎನ್ನುತ್ತಲೇ ದೇಶದ ಮನೆ ಮನೆಗೆ ದ್ವಿಚಕ್ರ ವಾಹನ ಪರಿಚಯಿಸಿದ್ದದ್ದಲ್ಲದೇ ಹತ್ತು ಹಲವಾರು ವಲಯಗಳಲ್ಲಿ ಕಂಪನಿಯನ್ನು ವಿಸ್ತರಿಸಿ ಬಜಾಜ್ ಗ್ರೂಪ್ ಕಟ್ಟಿ ಲಕ್ಷಾಂತರ ಭಾರತೀಯರಿಗೆ ಉದ್ಯೋಗವನ್ನು ಕೊಟ್ಟಿದ್ದ ರಾಹುಲ್ ಬಜಾಜ್ ಅವರು 12.02.22 ಶನಿವಾರ ಮಧ್ಯಾಹ್ನದಂದು ವಯೋಸಹಜವಾಗಿ ತಮ್ಮ 83 ವರ್ಷ ವಯಸ್ಸನಲ್ಲಿ ಇಹಲೋಕ ತ್ಯಜಿಸಿದ್ದರೂ ತಮ್ಮ ಬಜಾಜ್ ಸಮೂಹ ಮತ್ತು ತಮ್ಮ ಹತ್ತು ಹಲವಾರು ಸಾಧನೆಗಳ ಮೂಲಕ ಆಚಂದ್ರಾರ್ಕವಾಗಿ ಹಮಾರಾ ರಾಹುಲ್ ಬಜಾಜ್ ಆಗಿ ನಮ್ಮೊಂದಿಗೆ ಇದ್ದೇ ಇರ್ತಾರೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಇದು ತುಂಬಾ ಅದ್ಬುತವಾದ ವಿಷಯ. ಈಗಿನ ಯುವ ಜನತೆ ಇದನ್ನು ಓದಿ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಲು ಸಹಾಯವಾಗಿದೆ.
LikeLiked by 1 person