ದೇವರಾಯನ ದುರ್ಗ

ಬೆಂಗಳೂರಿನ ಹತ್ತಿರವೇ ಸುಂದರವಾದ ರಮಣೀಯವಾದ ಪ್ರಕೃತಿ ತಾಣವಿರಬೇಕು. ಅದು ಪುಣ್ಯಕ್ಷೇತ್ರವೂ ಆಗಿರಬೇಕು. ಹಿರಿಯರು ಕಿರಿಯರೂ ಎಲ್ಲರೂ ಮೆಚ್ಚುವಂತಿರಬೇಕು ಎನ್ನುವ ಸುಂದರವಾದ ತಾಣಕ್ಕೆ ಅರಸುತ್ತಿದ್ದೀರೆ ಎಂದರೆ ಬೆಂಗಳೂರಿನಿಂದ ಕೇವಲ 72 km ದೂರದಲ್ಲಿರುವ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ಆರಾಮವಾಗಿ ತಲುಪಬಹುದಾದಂತಹ ಪುರಾಣ ಪ್ರಸಿದ್ಧ ಪಕೃತಿತಾಣವೇ ದೇವರಾಯನ ದುರ್ಗ ಎಂದರೆ ಅತಿಶಯೋಕ್ತಿ ಎನಿಸದು.

ದೇವರಾಯನದುರ್ಗವು ತುಮಕೂರು ಜಿಲ್ಲೆಗೆ ಸೇರಿರುವ ಬೆಟ್ಟ ಗುಡ್ಡ, ಅರಣ್ಯಗಳಿಂದ ಆವೃತವಾಗಿರುವ ಹತ್ತು ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಒಂದು ಸುಂದರವಾದ ಗಿರಿಧಾಮವಾಗಿರುವುದಲ್ಲದೇ, ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೂ ಹೇಳಿ ಮಾಡಿಸಿದಂತೆ. ಬೆಟ್ಟದ ಅಡಿಯಲ್ಲಿ ಯೋಗನರಸಿಂಹ ಮತ್ತು 1204 ಮೀಟರ್ ಎತ್ತರದ ಸುಮಾರು ೨೭೫ ಮೆಟ್ಟಿಲುಗಳನ್ನು ಹೊಂದಿರುವ ಬೆಟ್ಟದ ತುದಿಯಲ್ಲಿರುವ ಭೋಗನರಸಿಂಹ ಸ್ವಾಮಿಯ ದೇವಾಲಯಗಳು ಮತ್ತು ಅದರ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಅಲ್ಲಿಂದ 6 ಕಿಮಿ ದೂರದಲ್ಲಿರುವ ನಾಮದ ಚಿಲುಮೆಯ ತಣ್ಣನೆಯ ಆಹ್ಲಾದಕರ ಅನುಭವ ನಿಜಕ್ಕೂ ವರ್ಣಿಸುವುದಕ್ಕಿಂತಲೂ ಅನುಭವಿಸಿದರೆ ಆಪ್ಯಾಯಮಾನ ಎನಿಸುತ್ತದೆ.

ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ 57 ಕಿಮೀ ದೂರ ಪ್ರಯಣಿಸಿ ದಾಬಸ್ ಪೇಟೆ ತಲುಪಿ ಅಲ್ಲಿಂದ ಬಲಕ್ಕೆ ಮಧುಗಿರಿ ರಸ್ತೆಯಲ್ಲಿ ಸುಮಾರು 10-12 ಕಿಮೀ ದೂರದಲ್ಲಿರುವ ಉರ್ಡಿಗೆರೆ ತಲುಪಿ ಅಲ್ಲಿಂದ ಎಡಕ್ಕೆ ಸುಮಾರು 4 ಕಿಮೀ ಘಾಟ್ ರಸ್ತೆಯಲ್ಲಿ ಸಂಚರಿಸಿದರೆ ಪುರಾಣಪ್ರಸಿದ್ಧ ದೇವರಾಯನ ದುರ್ಗದ ವೃತ್ತವನ್ನು ತಲುಪಬಹುದಾಗಿದೆ ವೃತ್ತದಿಂದ ಎಡಕ್ಕೆ ಅರ್ಧ ಕಿಮೀ ದೂರ ಸಂಚರಿಸಿದಲ್ಲಿ ಯೋಗಾನರಸಿಂಹನ ದೇವಲಯವಿದ್ದರೆ, ವೃತ್ತದಿಂದ ಸುಮಾರು 2-3 ಕಿಮೀ ತಿರುವ ಮುರುವು ರಸ್ತೆಯಲ್ಲಿ ಪ್ರಯಾಣಿಸಿದಲ್ಲಿ ರಮಣೀಯವಾದ ಭೋಗಾನರಸಿಂಹ ಬೆಟ್ಟದ ತಪ್ಪಲನ್ನು ತಲುಪಬಹುದಾಗಿದೆ.

ಸುತ್ತ ಮುತ್ತಲೂ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ದೇವರಾಯನ ದುರ್ಗ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ಈ ಪ್ರದೇಶವನ್ನು ನೋಡಿದಾಗ ಒಂದೊಂದು ರೀತಿಯಾಗಿ ಕಾಣುವುದು ಈ ಶ್ರೀ ಕ್ಷೇತ್ರದ ವಿಶೇಷವಾಗಿದೆ. ಪೂರ್ವದಿಂದ ನೋಡಿದಾಗ ಇದು ಆನೆಯಂತೆ ಕಾಣುವುದರಿಂದ ಈ ಕ್ಷೇತ್ರಕ್ಕೆ ಕರಿಗಿರಿ ಎಂಬ ಹೆಸರು ಇರುವ ಕಾರಣ, ಇಲ್ಲಿನ ನರಸಿಂಹ ದೇವರನ್ನು ಕರಿಗಿರಿರಾಯ ಎಂದೂ ಕರೆಯಲಾಗುತ್ತದೆ. ಇನ್ನು ದಕ್ಷಿಣದಿಂದ ನೋಡಿದರೆ ಸಿಂಹದಂತೆ, ಪಶ್ಚಿಮದಿಂದ ಹಾವಿನಂತೆ ಮತ್ತು ಉತ್ತರದಿಂದ ಗರುಡನಂತೆ ಕಾಣುತ್ತದೆ. ಮೈಸೂರಿಗ ಚಿಕ್ಕ ದೇವರಾಯ ಒಡೆಯರ್ ಅವರು ಯುದ್ಧದಲ್ಲಿ ಈ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡ ಕಾರಣ ಈ ಪ್ರದೇಶಕ್ಕೆ ದೇವರಾಯನ ದುರ್ಗ ಎಂಬ ಹೆಸರು ಬಂದಿದೆ ಎನ್ನುವ ಪ್ರತೀತಿಯೂ ಇದೆ.

ಇಂತಹ ಶ್ರೀ ಕ್ಷೇತ್ರದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.

ಇಲ್ಲಿನ ಸ್ಥಳ ಪುರಾಣದ ಪ್ರಕಾರ ದೂರ್ವಾಸರು ಈ ಪುಣ್ಯಕ್ಷೇತ್ರದಲ್ಲಿ ಸಾವಿರಾರು ವರ್ಷ ತಪಸ್ಸು ಮಾಡಿದ್ದಾರೆ. ಅವರಿಗೆ ಶ್ರೀಲಕ್ಷೀ ನರಸಿಂಹ ಸ್ವಾಮಿಯವರು ಪ್ರತ್ಯಕ್ಷವಾದ ಸ್ಥಳದಲ್ಲಿಯೇ ಈಗ ಶ್ರೀ ಭೋಗಾಲಕ್ಷ್ಮೀ ನರಸಿಂಹ ಸ್ವಾಮಿಯವರ ದೇವಸ್ಥಾನವಿದೆ. ಇದೇ ಕ್ಷೇತ್ರದಲ್ಲಿಯೇ ಕಂಟಕ ಪ್ರಾಯನಾಗಿದ್ದ ಪುಂಡರೀಕನೆಂಬ ರಾಕ್ಷಸನನ್ನು ಮಹಾವಿಷ್ಣುವು ಸಂಹರಿಸಿದಾಗ, ಎಲ್ಲ ದೇವತೆಗಳೂ ಆಕಾಶದಲ್ಲಿ ನಿಂತು ಜಯಕಾರ ಹಾಕಿದ್ದಲ್ಲದೇ, ಶ್ರೀಮನ್ನಾರಾಯಣನ ಮೇಲೆ ಪುಷ್ಪವೃಷ್ಟಿಯನ್ನು ಮಾಡಿದಾಗ ಈ ಪುಣ್ಯಕ್ಷೇತ್ರವೆಲ್ಲವೂ ಹೂವುಗಳಿಂದ ತುಂಬಿ ತುಳುಕಿದನ್ನು ಕಂಡ ಮಹರ್ಷಿಗಳು ಈ ದುರ್ಗವನ್ನು ಕುಸುಮಾದ್ರಿ ಎಂದು ಕರೆದರು.

ದೇವರಾಯನ ದುರ್ಗದ ಸುತ್ತಲೂ ನರಸಿಂಹ ತೀರ್ಥ, ಬ್ರಹ್ಮತೀರ್ಥ, ಶ್ರೀಪಾದ ತೀರ್ಥ (ಒಳಗೆ 108 ತೀರ್ಥಗಳಿವೆ ಮತ್ತು ಗುಹೆಯ ಗೋಡೆಯಲ್ಲಿ ಸ್ವಯಂಭೂ ಹಯಗ್ರೀವವಿದೆ ಎಂದು ಹೇಳಲಾಗುತ್ತದೆ), ಅಗಸ್ತ್ಯ ತೀರ್ಥ, ಕಾಶಿತೀರ್ಥ, ವೃಷಭ ತೀರ್ಥ, ಚಕ್ರ ತೀರ್ಥ, ಧನುಸ್ ತೀರ್ಥ (ರಾಮ ಮತ್ತು ಲಕ್ಷ್ಮಣರಿಂದ ರಚಿಸಲ್ಪಟ್ಟಿದೆ) ತೀರ್ಥ. ಶ್ರೀಪಾದ ತೀರ್ಥ ಎಂಬ 9 ಪ್ರಮುಖ ತೀರ್ಥಗಳಿದ್ದು ಈ ನೀರಿನಲ್ಲಿ ಸ್ನಾನ ಮಾಡಿದಲ್ಲಿ ಎಲ್ಲಾತರಹದ ಚರ್ಮ ರೋಗಗಳು ಗುಣವಾಗುತ್ತದೆ ಎಂಬ ನಂಬಿಕೆ ಇದೆ.

ಅದೊಮ್ಮೆ ದೂರ್ವಾಸರು ಗಂಗಾಸ್ನಾನ ಮಾಡಬೇಕೆಂದು ಅಪೇಕ್ಷಿಸಿದಾಗ ಶ್ರೀ ಗಂಗಾಮಾತೆಯು ದೂರ್ವಾಸರಿಗೆ ಪ್ರತ್ಯಕ್ಷಳಾಗಿ ನಾನು ಶ್ರೀನರಸಿಂಹ ತೀರ್ಥದಲ್ಲಿಯೇ ಇದ್ದೇನೆ. ಹಾಗಾಗಿ ನೀನು ಅಲ್ಲಿಯೇ ಗಂಗಾಸ್ನಾನ ಮಾಡಬಹುದು ಎಂದು ಹೇಳುತ್ತಾಳೆ. ಶ್ರೀ ಗಂಗಾದೇವಿಯು ದೂರ್ವಾಸರಿಗೆ ಪ್ರತ್ಯಕ್ಷವಾದ ಸ್ಥಳವೇ ಕಾಶೀತೀರ್ಥ ಎಂದು ಪ್ರಸಿದ್ಧಿಯಾಗಿದೆ.

ದೇವರಾಯನ ದುರ್ಗದಲ್ಲಿ ಪೂರ್ವಾಭಿಮುಖವಾಗಿರುವ ಶ್ರೀ ಭೋಗಾ ಲಕ್ಷ್ಮೀನರಸಿಂಹ ಸ್ವಾಮಿಯವರ ದೇವಸ್ಥಾನದ ಗರ್ಭಾಂಕಣ, ನವರಂಗ, ಮುಖ ಮಂಟಪ, ಪ್ರಾಕಾರ ಮತ್ತು ರಾಜ ಗೋಪುರ ಎಂಬ ಐದು ಅಂಗಗಳಿಂದಲೂ ಪರಿಪೂರ್ಣವಾಗಿ ನಿರ್ಮಿತವಾಗಿದೆ. ಸ್ವಾಮೀ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಪರಮ ತೇಜೋಮಯ ವಿಗ್ರಹವಾಗಿದೆ. ಲಕ್ಷ್ಮೀ ದೇವಿಯು ಸ್ವಾಮಿಯ ಜೊತೆಗಿರದೇ, ಸ್ವಾಮಿಯ ಗುಡಿಯ ಪಕ್ಕದಲ್ಲಿಯೇ ಶ್ರೀ ಲಕ್ಷ್ಮೀದೇವಿ ಅಮ್ಮನವರ ಗುಡಿಯ ಗರ್ಭಾಂಕಣದಲ್ಲಿ ಪ್ರಸನ್ನ ಲಕ್ಷ್ಮೀಯಾಗಿ ಕುಳಿತಿದ್ದಾಳೆ. ದೇವಸ್ಥಾನದ ಹಿಂಭಾಗದಲ್ಲಿಯೇ ದೊಡ್ಡದಾದ ಪುಷ್ಕರಣಿ ಇದ್ದರೆ ದೇವಸ್ಥಾನದ ಮುಂಭಾಗದಲ್ಲಿ ವಿಶಾಲವಾದ ರಥಬೀದಿ ಇದೆ.

ಧನು ಮಾಸದ ಸಮಯದಲ್ಲಿ, ಈಗಲೂ ಸಪ್ತ ಋಷಿಗಳು ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಶ್ರೀ ನರಸಿಂಹನ ಆರಾಧನೆಯನ್ನು ಮಾಡುತ್ತಾರೆ ಎಂಬ ನಂಬಿಕೆ ಇದ್ದರೆ,. ಫಾಲ್ಗುಣ ಮಾಸ ಪವಿತ್ರ ಪೌರ್ಣಿಮೆ ಪುಬ್ಬ ನಕ್ಷತ್ರದ ದಿನದಂದು ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಬ್ರಹ್ಮರಥೋತ್ಸವವನ್ನು ನಡೆಸಲಾಗುತ್ತದೆ. ಈ ರಥೋತ್ಸವದ ಮತ್ತೊಂದು ವಿಶೇಷತೆಯೆಂದರೆ, ಮಧ್ಯಾಹ್ನ ರಥವನ್ನು ಎಳೆಯುವ ಸಮಯಕ್ಕೆ ಸರಿಯಾಗಿ ಆಕಾಶದಲ್ಲಿ ಗರುಡನು ಕಾಣಿಸಿಕೊಂಡು ಸ್ವಾಮಿಗೆ 3 ಸುತ್ತು ಪ್ರದಕ್ಷಿಣೆ ಹಾಕಿದ ನಂತರವೇ ರಥವನ್ನು ಎಳೆಯಲಾಗುತ್ತದೆ. ಈ ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಈ ರಥೋತ್ಸವದ ಸಂಧರ್ಭದಲ್ಲಿ ಮಕ್ಕಳಾಗದ ದಂಪತಿಗಳು ಭಕ್ತಿಯಿಂದ ಸ್ವಾಮಿಯನ್ನು ಪೂಜಿಸಿ ಅಂದು ಕೊಡುವ ಗರುಡ ಬುತ್ತಿ ಎಂಬ ವಿಶೇಷ ಪ್ರಸಾದವನ್ನು ಸ್ವೀಕರಿಸಿದಲ್ಲಿ ಮಕ್ಕಳಾಗುತ್ತದೆ ಎಂಬ ನಂಬಿಕೆಯೂ ಇದೆ.

ಇಲ್ಲಿಗೆ ಬರುವ ಭಕ್ತಾದಿಗಳಿಗಾಗಿಯೇ ಪ್ರತಿ ದಿನ ಮಧ್ಯಾಹ್ನ ದಾಸೋಹದ ವ್ಯವಸ್ಥೆ ಇದ್ದು ಅತ್ಯಂತ ಶುಚಿ ರುಚಿಯಾದ ಪ್ರಸಾದವು ಭಕ್ತಾದಿಗಳ ಹೃನ್ಮನಗಳನ್ನು ತಣಿಸುತ್ತವೆ.

ಭೋಗಾನರಸಿಂಹನ ದರ್ಶನವನ್ನು ಪಡೆದು ಅಲ್ಲಿಂದ ಸುಮಾರು ಸುಮಾರು 2-3 ಕಿಮೀ ತಿರುವು ಮುರುವು ರಸ್ತೆಯಲ್ಲಿ ಪ್ರಯಾಣಿಸಿದಲ್ಲಿ ರಮಣೀಯವಾದ ಭೋಗಾನರಸಿಂಹ ಬೆಟ್ಟದ ತಪ್ಪಲನ್ನು ತಲುಪಬಹುದಾಗಿದೆ. ಸಮುದ್ರ ಮಟ್ಟದಿಂದ 4200 ಅಡಿ ಎತ್ತರದಲ್ಲಿರುವ ಈ ಬೆಟ್ಟಕ್ಕೆ ಸುಮಾರು 275 ಮೆಟ್ಟಿಲುಗಳಿದ್ದು ಆರಾಮವಾಗಿ ಹತ್ತಬಹುದಾಗಿದ್ದರೂ ಸುತ್ತಲೂ ಕೋತಿಗಳ ಕಾಟ ಇರುವ ಕಾರಣ ತೆಗೆದುಕೊಂಡು ಹೋಗುವ ಚೀಲಗಳನ್ನು ಸುರಕ್ಷಿತವಾಗಿ ಇಟ್ಟು ಕೊಳ್ಳಬೇಕಾಗುತ್ತದೆ. ಮೆಟ್ಟಿಲುಗಳನ್ನು ಹತ್ತುವ ಮಾರ್ಗದಲ್ಲಿಯೇ ಸಣ್ಣದಾದ ಆಂಜನೇಯನ ಗುಡಿ ಮತ್ತು ಅಲ್ಲಿಂದ ಸ್ವಲ್ಪ ಮುಂದೆಯೇ ಸ್ವಲ್ಪ ದೊಡ್ಡದಾದ ಗರುಡನ ಮಂದಿರವನ್ನು ದಾಟಿ ಕೊಂಡು ಬೆಟ್ಟದ ತುದಿಯನ್ನು ತಲುಪಿ ಸುತ್ತ ಮುತ್ತಲಿನ ರಮಣಿಯ ದೃಶ್ಯ ಮತ್ತು ಅಲ್ಲಿನ ತಂಗಾಳಿಯಿಂದಾಗಿ ಬೆಟ್ಟ ಹತ್ತಿದ ಆಯಾಸವೆಲ್ಲವೂ ಪರಿಹಾರವಾಗುತ್ತದೆ. ಬೆಟ್ಟದ ಮೇಲೆ ಸಣ್ಣದಾದ ಕಲ್ಯಾಣಿ ಇದ್ದು ಕೆಲ ಭಕ್ತಾದಿಗಳು ಅದರಲ್ಲಿ ಸ್ನಾನವನ್ನು ಮಾಡಿದರೆ ಬಹುತೇಕ ಭಕ್ತಾದಿಗಳು ಕೈಕಾಲುಗಳನ್ನು ತೊಳೆದುಕೊಂಡು ಅಲ್ಲಿನ ನೀರನ್ನು ಪ್ರೋಕ್ಶಣೆ ಮಾಡಿಕೊಂಡು ದೇವಾಲಯವನ್ನು ಪ್ರವೇಶಿಸುತ್ತಾರೆ.

boga1ಈ ಗಿರಿ ಶೃಂಗದಲ್ಲಿ ಬ್ರಹ್ಮ ದೇವ ರಿಂದ ಸ್ಥಾಪಿತವಾಗಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದೇವಸ್ಥಾನವಿದ್ದು ಇದನ್ನು ಶ್ರೀ ಯೋಗಾಲಕ್ಷ್ಮೀನರಸಿಂಹ ಸ್ವಾಮಿ ಎಂದು ಕರೆಯುತ್ತಾರೆ. ಪೌರಾಣಿಕದ ಪ್ರಕಾರ ದ್ವಾಪರ ಯುಗದಲ್ಲಿ ಬ್ರಹ್ಮ ದೇವರು ಇದೇ ಕ್ಷೇತ್ರದಲ್ಲಿ ಸುಮಾರು 2000 ವರ್ಷಗಳಿಗೂ ಹೆಚ್ಚು ಕಾಲ ನೆಲಸಿ ಭಗವಾನ್ ವಿಷ್ಣುವಿನನ್ನು ಪ್ರಾರ್ಥಿಸಿದಾಗ ಸ್ವಾಮಿಯು ಲಕ್ಷ್ಮೀ ಸಮೇತ ನರಸಿಂಹನ ರೂಪದಲ್ಲಿ ದರ್ಶನ ನೀಡಿದನು ಎನ್ನಲಾಗುತ್ತದೆ. ಇಲ್ಲಿನ ಮತ್ತೊಂದು ವಿಶೇಷವೇನೆಂದರೆ ಇಲ್ಲಿರುವ ವಿಗ್ರಹ ಇಂದಿಗೂ ನೆಲವನ್ನು ಮುಟ್ಟುವುದಿಲ್ಲವಂತೆ. ನೆಲ ಮತ್ತು ವಿಗ್ರಹದ ನಡುವೆ ತೆಳ್ಳನೆಯ ಪಂಚೆ ಅಥವಾ ಬಾಳೆ ಎಲೆಯನ್ನು ಸರಿಸಬಹುದು ಎನ್ನಲಾಗುತ್ತದೆ. ಇನ್ನು ಸ್ವಾಮಿಯ ಬಾಯಿಯಲ್ಲಿ 2 ರೀತಿಯ ಶಾಲಿಗ್ರಾಮವಿದ್ದು ಒಂದನ್ನು ವಿಷ್ಣು ಶಾಲಿಗ್ರಾಮ ಮತ್ತು ನರಸಿಂಹ ಶಾಲಿಗ್ರಾಮ ಎಂದು ಕರೆಯಲಾಗುತ್ತದೆ.

ಈ ದೇವಸ್ಥಾನವು ಗರ್ಭಾಂಕಣ, ನವರಂಗ, ಮುಖ ಮಂಟಪ, ಪ್ರಾಕಾರ ಮತ್ತು ರಾಜಗೋಪುರ ಎಂಬ ಐದು ಅಂಗಗಳಿಂದಲೂ ಪರಿಪೂರ್ಣವಾಗಿದೆ. ಶ್ರೀ ಸ್ವಾಮಿಯವರ ಸನ್ನಿಧಾನವು ಉತ್ತರಾಭಿಮುಖವಾಗಿದೆ. ಅಮ್ಮನವರ ಸನ್ನಿಧಾನವು ಪೂರ್ವಾಭಿಮುಖವಾಗಿದೆ. ಕಲ್ಯಾಣಿಯ ಪಕ್ಕದಲ್ಲಿಯೇ ಸಂಜೀವಿ ರಾಯ ಸ್ವಾಮಿಯ ದೇವಸ್ಥಾನವಿದ್ದು ಇದನ್ನು ಕ್ಷೇತ್ರದಲ್ಲಿ ಅತ್ಯಂತ ಹಳೆಯ ದೇವಾಲಯವೆಂದು ಪರಿಗಣಿಸಲಾಗಿದೆ.

ದೇವರಾಯನದುರ್ಗದಿಂದ ಕೇವಲ 6 ಕಿಮೀ ದೂರದಲ್ಲಿ ನಾಮದ ಚಿಲುಮೆ ಎಂಬ ನಿಸರ್ಗಧಾಮದ ರೀತಿಯಲ್ಲಿರುವ ಆತ್ಯಂತ ತಂಪಾದ ಪ್ರದೇಶವಿದ್ದು ಸೀತೆಯನ್ನು ಅರಸುತ್ತಾ ಇಲ್ಲಿಗೆ ಬಂದಿದ್ದ ಶ್ರೀರಾಮನು ತನ್ನ ಹಣೆಯಲ್ಲಿ ತಿಲಕವನ್ನು ಇಟ್ಟುಕೊಳ್ಳುವ ಸಲುವಾಗಿ ನೀರಿಲ್ಲದಿದ್ದಾಗ ತನ್ನ ಬಾಣದಿಂದ ಬಂಡೆಗೆ ಹೊಡೆದಾಗ ಆ ಬಂಡೆಯಿಂದ ಅಂದು ಚಿಮ್ಮಿದ ನೀರು ಇಂದಿಗೂ ಸಹಾ ನಿರಂತರವಾಗಿ ಹರಿಯುದನ್ನು ಕಾಣಬಹುದಾದಿಗೆ. ಇಲ್ಲಿಂದ ಹರಿಯುವ ಈ ನೀರು ಜಯಮಂಗಲಿ ನದಿಯ ಉಗಮಸ್ಥಾನವಾಗಿದ್ದು ಇದು ದೇವರಾಯನದುರ್ಗ ಪರ್ವತಗಳ ಮೇಲಿರುವ ಜಯ ಮತ್ತು ಮಂಗಳ ತೀರ್ಥಗಳ ಮಿಶ್ರಣವಾಗಿದೆ ಎಂದೂ ಹೇಳಲಾಗುತ್ತದೆ.

ಹೀಗೆ ಬೆಂಗಳೂರಿಗೆ ಅತ್ಯಂತ ಸಮೀಪದಲ್ಲಿಯೇ ಬೆಟ್ಟ ಗುಡ್ಡಗಳು ಮತ್ತು ರಮಣೀಯ ಪ್ರಕೃತಿತಾಣಗಳಿಂದ ಬೇಸಿಗೆಯಲ್ಲೂ ತಂಪಾದ ಪರಿಸರಕ್ಕೆ ಜನಪ್ರಿಯವಾಗಿರುವ ಈ ದೇವರಾಯನ ದುರ್ಗಕ್ಕೆ ಅಂದು ಯೋಗಾನರಸಿಂಹ ಮತ್ತು ಭೋಗಾನರಸಿಂಹರ ದರ್ಶನ ಪಡೆದು ಕೃತಾರ್ಥರಾಗಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರಿ ತಾನೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ದೇವರಾಯನ ದುರ್ಗ

  1. ನಮ್ಮ ಕುಲದೈವ ಶ್ರೀ ಕಿರಿಗಿರಿ ಕ್ಷೇತ್ರಸ್ಥ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಬೆಟ್ಟದ ಮೇಲಿರುವ ಯೋಗಾ ‌‌ನರಸಿಂಹ ಸ್ವಯಂಭೂ, ಕೃತಯುಗದಲ್ಲಿ ಪರಾಶರ ಋಷಿಗಳು ಮಹಾವಿಷ್ಣುವೇ ತಮ್ಮ ಮಗನಾಗಿ ಪಡೆಯಬೇಕು ಎಂದು ಅಪೇಕ್ಷಿಸಿ ಬ್ರಹ್ಮದೇವರ ಕುರಿತು ತಪಸ್ಸು ಮಾಡುತ್ತಾರೆ ಇವರ ತಪಸ್ಸಿಗೆ ಒಲಿದ ಬ್ರಹ್ಮದೇವರು ಪರಾಶರರ ಇಚ್ಛೆಯನ್ನು ತಿಳಿದು ಮುಂದೆ ಭಗವಂತನ ವಿಶೇಷ ಅವತಾರಕ್ಕೆ ಕಾರ್ಯಕಾರಣ ಸಂಬಂಧದಿಂದ ಪರಾಶರರ ಜೊತೆ ವಿಶೇಷ ಯಜ್ಞ ಮತ್ತು ತಪಸ್ಸು ಮಾಡುತ್ತಾರೆ. ಈ ತಪಸ್ಸು ಮಾಡಿದ ಸ್ಥಳ ಯೋಗಾ ‌ನರಸಿಂಹ ದೇವಾಲಯದ ಮುಂಭಾಗದಲ್ಲಿ ಇರುವ ಬೆಟ್ಟದ ಮೇಲಿದೆ ಇದನ್ನು ಬ್ರಹ್ಮ ಕೃತವಾಟ ಎಂದು ಕರೆಯುತ್ತಾರೆ. ಇವರಿಬ್ಬರ ತಪಸ್ಸಿಗೆ ಮೆಚ್ಚಿ ನರಸಿಂಹ ಸ್ವಾಮಿ ಯಜ್ಞ ಕುಂಡದಲ್ಲಿ ಸ್ವಯಂ ಪ್ರಕಟವಾಗುತ್ತಾರೆ. ಮುಂದೆ ದ್ವಾಪರಯುಗದಲ್ಲಿ ವೇದವ್ಯಾಸರಾಗಿ ಅವತರಿಸಿ ಪರಾಶರರ ಇಚ್ಛೆಯನ್ನು ಪೂರೈಸುವ ವರ ನೀಡುತ್ತಾರೆ. ದೇವಾಲಯದ ಮುಂಭಾಗದಲ್ಲಿ ಇರುವ ಹಸಿರು ಬಣ್ಣದ ತೀರ್ಥವನ್ನು ಪರಾಶರ ತೀರ್ಥ ಎಂದು ಕರೆಯುತ್ತಾರೆ. ದೇವಾಲಯದ ಹಿಂಭಾಗದಲ್ಲಿ ಪ್ರದಕ್ಷಿಣೆ ಬಂದರೆ ಅಲ್ಲಿಂದ ಭೂತರಾಜರ ಗುಡ್ಡ ಅಥವಾ ಶಿವಗಂಗೆ ಬೆಟ್ಟ ಸೋಮಸೂತ್ರಾಕೃತಿಯಲ್ಲಿ ಗೋಚರಿಸುತ್ತದೆ. ದೇವಾಲಯದ ತಳದಲ್ಲಿರುವ ಗುಹೆಯಲ್ಲಿ ಶ್ರೀ ವಾದಿರಾಜತೀರ್ಥರು ೧೨ ವರ್ಷಗಳ ಕಾಲ ತಪಸ್ಸು ಮಾಡುತ್ತಾರೆ ಇವರ ತಪಸ್ಸಿಗೆ ಮೆಚ್ಚಿ ಲಕ್ಷ್ಮೀ ಹಯಗ್ರೀವ ದೇವರು ಗುಹೆಯೊಳಗಿರುವ ಬಂಡೆಯ ಮೇಲೆ ಹೊಮ್ಮುತ್ತಾರೆ. ಈ ದೇವಾಲಯವು ನಾಲ್ಕೂ ಯುಗಗಳಲ್ಲಿ ಭಕ್ತರಿಗೆ ಶ್ರದ್ಧಾ ಕೇಂದ್ರವಾಗಿದೆ ಮತ್ತು ಪ್ರಕೃತಿಯ ಸೊಬಗನ್ನು ಉಣಬಡಿಸುವ ಈ ಕ್ಷೇತ್ರದಲ್ಲಿ ಹಲವು ವೈವಿಧ್ಯಮಯ ಜೀವರಾಶಿಗಳ ಆಶ್ರಯ ತಾಣ ಹಾಗೂ ಹಲವು ವಿಶೇಷ ಔಷಧೀಯ ಗುಣಗಳುಳ್ಳ ಸಸ್ಯ ಕ್ಷೇತ್ರವಾಗಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s