ಅರ್ಥಪೂರ್ಣ ಮಹಿಳಾ ದಿನಾಚರಣೆ

WhatsApp Image 2022-02-28 at 1.04.11 PMಮಾರ್ಚ್ 8 ರಂದು ವಿಶ್ವಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಚರಿಸಿಕೊಂಡು ಬರಲಾಗುತ್ತದೆ. ಇದೇ ಅಂಗವಾಗಿ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ಇರುವ ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಸಹಾ ಕಳೆದ ಕೆಲವು ವರ್ಷಗಳಿಂದಲೂ ನಮ್ಮ ನಿಮ್ಮೆಲ್ಲರ ನಡುವೆಯೇ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಾಧಕಿಯರ ಸಾಧನೆಯನ್ನು ಗುರುತಿಸಿ ಅವರ ಸಾಧನೆಗಳು ಮತ್ತಷ್ಟು ಮಗದಷ್ಟು ಹೆಚ್ಚಾಗಲಿ ಎಂದು ಅವರಿಗೆ ಗೌರವ ಸಲ್ಲಿಸಿಕೊಂಡು ಬರುತ್ತಿದೆ. ಈ ಬಾರಿ ಯಲಹಂಕ ವಿಭಾಗದ ಆರೋಗ್ಯಭಾರತಿ ಸಹಯೋಗದೊಂದಿಗೆ ದಿನಾಂಕ 13-3-2022 ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ವಿದ್ಯಾಪೀಠ ಶಾಲೆಯಲ್ಲಿ ನಡೆಸಲಾಗುತ್ತಿರುವ ಅವರ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿತರಾಗುತ್ತಿರುವ ಸಾಧಕಿಯರ ಸಾಧನೆಗಳ ಬಗ್ಗೆ ಸ್ವಲ್ಪ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು. ಎಂಬ ಜನಪ್ರಿಯ ಗೀತೆ ಅಂಬರೀಶ್ ಅವರ ನಾಗರ ಹೊಳೆ ಚಿತ್ರದಲ್ಲಿ ಕೇಳಿದ್ದೇವೆ. ಈ ಭೂಮಿಯಲ್ಲಿ ನಾವು ಇರುವ ಮೂರು ದಿನ ಸುಖಃದಿಂದ ನೆಮ್ಮದಿಯಾಗಿ ಆರೋಗ್ಯದಿಂದ ಇದ್ದರೇ ಸಾಕು ಎನ್ನುವುದು ಎಲ್ಲರ ಭಾವನೆ. ಹಾಗಾಗಿಯೇ ಪ್ರತಿ ದಿನವೂ ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾಂ ಎಂದು ಭಗವಂತನ ಬಳಿ ಕೇಳಿಕೊಳ್ಳುತ್ತೇವೆ.

ಹಾಗಾಗಿ ವೈದ್ಯೋ ನಾರಾಯಣೋ ಹರಿಃ ಎನ್ನುವಂತೆ ನಮ್ಮೆಲ್ಲರ ಆರೋಗ್ಯಕ್ಕಾಗಿಯೇ ಹಗಲಿರಳೂ ನಿಸ್ವಾರ್ಥವಾಗಿ ದುಡಿತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದ್ಧಿಗಳ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಅಂತಹದ್ದೇ ಸಾಧನೆಗೈದ ಡಾ.ಶೋಭಾ ನಾಗೇಶ್ ಪರಿಚಯ ಹೀಗಿದೆ.

ಶ್ರೀಮತಿ ಡಾ. ಶೋಭಾ ನಾಗೇಶ್ ರವರು ತಮ್ಮ ವೈದ್ಯಕೀಯ ಪದವಿಯನ್ನು ಪಡೆದ ನಂತರ ಕರ್ನಾಟಕದ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಪ್ರಸೂತಿ ತಜ್ಞೆ ಕೆಲಸಕ್ಕೆ ಸೇರಿಕೊಂಡ ನಂತರ ಸಾರ್ವಜನಿಕ ಆರೋಗ್ಯದಲ್ಲಿ ಡಿಪ್ಲೊಮಾ ವನ್ನು ಸಹಾ ಪಡೆದುಕೊಳ್ಳುವ ಮೂಲಕ ಪ್ರಸೂತಿ ತಜ್ಞೆ ಯಾಗುವ ಜೊತೆ ಜೊತೆಗೆ ಸಾರ್ವಜನಿಕ ಆರೋಗ್ಯ ಅಧಿಕಾರಿಯಾಗಿಯೂ ಸುಮಾರು 28 ವರ್ಷಗಳ ಕಾಲ ಸುಧೀರ್ಘವಾದ ಸೇವೆಯನ್ನು ಸಲ್ಲಿಸಿದ್ದಾರೆ. ಮಲ್ಲಸಂದ್ರದ ಸರ್ಕಾರೀ ಹೆರಿಗೆ ಆಸ್ಪತ್ರೆಯಲ್ಲಿ 12 ವರ್ಷಗಳ ಸೇವೆ ಸಲ್ಲಿಸಿದ ನಂತರ ಕಳೆದ 6 ವರ್ಷಗಳಿಂದ ನಮ್ಮ ತಿಂಡ್ಲುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಾ ನಮ್ಮೆಲ್ಲರ ಆರೋಗ್ಯಕ್ಕಾಗಿ ಹಗಲಿರುಳೂ ಅವಿರತವಾಗಿ ದುಡಿಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ.

ನಗುಮುಖದ ಸದಾಕಾಲವೂ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗಿರುವ ಡಾ. ಶೋಭಾರವರನ್ನು ಭೇಟಿ ಮಾಡುವುದೇ ತುಸು ಕಷ್ಟ ಎಂದರೂ ತಪ್ಪಾಗದು. ತಿಂಡ್ಲುವಿನ ಪ್ರಾಥಮಿಕ ಆರೋಗ್ಯಕೇಂದ್ರ ಅರ್ಥಾತ್ PHC ನಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕಾರ್ಯ ವೈಖರಿ, ಕ್ರಿಯಾಶೀಲ ಸೇವಾ ಮನೊಭಾವನೆಯಂದಾಗಿ ಎಲ್ಲರ ಗಮನವನ್ನೂ ಸೆಳೆದಿದೆ ಎಂದರೆ ತಪ್ಪಾಗಲಾರದು.

ಕಳೆದ ಎರಡು ವರ್ಷಗಳಿಂದಲೂ ಇಡೀ ವಿಶ್ವಕ್ಕೇ ವಕ್ಕರಿಸಿಕೊಂಡಿರುವ ಕೊವಿಡ್ ಸಾಂಕ್ರಾಮಿಕ ಮಹಾಮಾರಿಯ ಸಮಯದಲ್ಲಿ ಹೊತ್ತು ಗೊತ್ತಿಲ್ಲದೇ ನಿರಂತರವಾಗಿ ಜನರಿಗೆ ನೆರವಾಗುವ ಮೂಲಕ ಜನರ ಪ್ರೀತಿಗೆ ಪಾತ್ರರಾದ ಈ ಹಿರಿಯ ವೈದ್ಯರಿಗೆ ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಗೌರವ ಸಲ್ಲಿಸಿರುವುದನ್ನು ಗಮನಿಸಿ, ಅವರ ಸಾರ್ವಜನಿಕ ಸೇವೆಗೆ ಮತ್ತಷ್ಟು ಹುರುಪು ನೀಡಲಿ ಎಂದೇ ವಿಶ್ವಗುರು ಚಾರಿಟಬಲ್ ಟ್ರಸ್ಟ್ ಕೂಡಾ ಇಂದು ಗೌರವ ಪೂರ್ವಕ ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

WhatsApp Image 2022-03-11 at 11.42.38 AMಹೆಣ್ಣು ಮಕ್ಕಳು ಎಂದರೆ ಗಂಡ ಮನೆ ಮಕ್ಕಳು ಸಂಸಾರ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿರಬೇಕು ಎಂಬ ನಂಬಿಕೆಿ ಇರುವಂತಹ ಈ ಸಮಾಜದಲ್ಲಿ ಪರಸ್ಪರ ಸಂಬಂಧವೇ ಇರದ ಹೆಣ್ಣು ಮಕ್ಕಳಿಬ್ಬರು ತಮ್ಮ ವಿದ್ಯಾಭ್ಯಾಸ ಮುಗಿಸಿ ಖಾಸಗೀ ಕಂಪನಿಯಲ್ಲಿ ಕೆಲ ಕಾಲ ಕೆಲಸ ಮಾಡಿಕೊಂಡು ಸಂಸಾರದ ನೊಗವನ್ನು ಹೊರುತ್ತಿರುವಾಗ ಅಚಾನಕ್ಕಾಗಿ ಅವರಿಬ್ಬರ ಪರಿಚಯವಾಗಿ ನಂತರ ಉತ್ತಮ ಸ್ನೇಹಿತೆಯರಾಗಿ ನಂತರದ ದಿನಗಳಲ್ಲಿ ಒಂದೇ ತಾಯಿಯ ಮಡಿಲಲ್ಲಿ ಹುಟ್ಟದೇ ಹೋದರೂ ಅದಕ್ಕಿಂತಲೂ ಒಂದು ಕೈ ಮಿಗಿಲಾದ ಸಹೋದರಿಯರಂತರಾಗಿ ನಮ್ಮಆಚರಣೆ ಮತ್ತು ಸಮಾಜದ ಒಳಿತಿಗಾಗಿ ಏನಾದರೂ ಮಾಡಲೇ ಬೇಕೆಂದು ಯೋಚಿಸುತ್ತಿರುವಾಗಲೇ ಅವರಿಬ್ಬರಿಗೂ ಹೊಳೆದದ್ದೇ ಅಜ್ಜಿಯ ಅರಮನೆ ಎಂಬ ವಿಶಿಷ್ಠವಾದ ಆಲೋಚನೆ.

ಅಜ್ಜಿಯ ಅರಮನೆಯ ಸಂಸ್ಥಾಪಕಿಯರಲ್ಲಿ ಒಬ್ಬರಾದ ಶ್ರೀಮತಿ ಸುಮಾ ವಿ. ಎಸ್. ಅವರ ಕಿರು ಪರಿಚಯ ಹೀಗಿದೆ.

WhatsApp_Image_2022-03-11_at_10.53.35_AM-removebg-previewಶ್ರೀಮತಿ ಸುಮಾ ವಿ. ಎಸ್. ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ ಅದರಲ್ಲೂ ಹೆಸರಿಗೆ ಅನ್ವರ್ಥದಂತೆಯೇ ಇರುವ ನಮ್ಮ ಗೋಕುಲದ ಸುಂದರ ನಗರದಲ್ಲಿಯೇ. ಹಾಗಾಗಿ ಅವರು ಸ್ಥಳೀಯರು ಎಂಬುದೇ ಹೆಮ್ಮೆಯ ವಿಷಯವಾಗಿದೆ. ಸುಮಾ ಅವರ ತಂದೆಯವರು ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಆವವ ವಿದ್ಯಾಭ್ಯಾಸವೆಲ್ಲವೂ ಬಿಇಎಲ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಾದ ನಂತರ Diploma in beauty culture ಮುಗಿಸಿ ಕೆಲವರ್ಷಗಳ ಕಾಲ ವಿವಿದೆಡೆಯಲ್ಲಿ ಕೆಲಸ ಮಾಡಿ ರೇವತಿಯವರ ಪರಿಚಯವಾದ ನಂತರ ಅಜ್ಜಿಯ ಅರಮನೆ ಸಂಸ್ಥೆಯನ್ನು ಆರಂಭಿಸಿ ಈಗ ಅದರಲ್ಲಿಯೇ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇನ್ನು ಅಜ್ಜಿಯ ಅರಮನೆಯ ಸಹ ಸ್ಥಾಪಕಿಯಾದ ಶ್ರೀಮತಿ ರೇವತಿ ವೆಂಕಟೇಶ್ ಅವರ ಕಿರು ಪರಿಚಯ ಹೀಗಿದೆ.

WhatsApp_Image_2022-03-11_at_11.45.20_AM-removebg-previewಶ್ರೀಮತಿ ರೇವತಿ ವೆಂಕಟೇಶ್. ಹೆಸರಿಗೆ ತಕ್ಕಂತೆಯೇ ರೂಪವತಿಯೂ ಹೌದು. ಮೂರ್ತಿ ಚಿಕ್ಕದಾದರೂ ಕೀರ್ತಿಯಂತೂ ದೊಡ್ಡದೇ ಇದೆ. ಕರ್ನಾಟಕದ ಶಿಲ್ಪ ಕಲೆಗಳ ತವರೂರಾದ ಹಾಸನದಲ್ಲಿ ಸಂಪ್ರದಾಯಸ್ಥರ ಕುಟುಂಬದಲ್ಲಿ ಜನಿಸಿದ ರೇವತಿಯವರು ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ತಮ್ಮ ಶಿಕ್ಷಣವನ್ನೆಲ್ಲಾ ಹಾಸನದಲ್ಲೇ ಮುಗಿಸಿದ ನಂತರ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಶ್ರೀ ವೆಂಕಟೇಶ್ ಅವರನ್ನು ವಿವಾಹವಾದ ನಂತರ ಬೆಂಗಳೂರಿಗೆ ಬರುತ್ತಾರೆ. ಗಂಡ ಮನೆ ಮತ್ತು ಮುದ್ದಾದ ಮಗನ ಜೊತೆ ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ವೇರ್ ಕಂಪನಿಯೊಂದರೆಲ್ಲಿ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಅರ್ಥಾತ್ HR departmentನಲ್ಲಿ ಕೆಲಸ ಮಾಡುತ್ತಿದ್ದರೂ ಅದೇಕೋ ಆ ಕೆಲಸದಲ್ಲಿ ಅಷ್ಟಾಗಿ ಮನಸ್ಸಿಗೆ ಮುದ ನೀಡದ ಕಾರಣ ಅ ಕೆಲಸಕ್ಕೆ ತಿಲಾಂಜಲಿ ಇತ್ತು ಈಗ ಸಂಪೂರ್ಣವಾಗಿ ಅಜ್ಜಿಯ ಅರಮನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

sum2ನಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯರು ಎಂದರೆ ವೈಶಿಷ್ಟ್ಯವಾದ ಆಚಾರ ವಿಚಾರಗಳನ್ನು ರೂಢಿಸಿ ಕೊಂಡಿರುವುದಲ್ಲದೇ ಅವರ ಪ್ರತಿಯೊಂದು ಕೆಲಸಗಳ ಹಿಂದೆಯೂ ವೈಜ್ಞಾನಿಕವಾದ ಗಟ್ಟಿತನವಿರುತ್ತದೆ. ಹಾಗಾಗಿ ಇವರಿಬ್ಬರೂ ಅದೇ ತಳಹದಿಯಲ್ಲಿಯೇ. ನಮ್ಮ ಹಳೆಯ ಸಂಪ್ರದಾಯಗಳನ್ನು ಮತ್ತು ಅಡುಗೆಯ ಶ್ರೀಮಂತ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಯೋಚಿಸಿದರು. ಅದಕ್ಕೆ ಪೂರಕವೆಂಬಂತೆ ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಯಂತೆ, ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಹೆಸರಿನಲ್ಲಿ ಸರಿಯಾದ ಕ್ರಮದಲ್ಲಿ ಅಡುಗೆಯನ್ನು ಮಾಡದೇ ಇರುವ ಕಾರಣ ಅನೇಕ ರೋಗರುಜಿನಗಳಿಗೆ ತುತ್ತಾಗುವುದನ್ನು ಮನಗಂಡ ಇವರಿಬ್ಬರು ನಮ್ಮ ಸಾಂಪ್ರದಾಯಿಕ ಅಡುಗೆ ಪಾತ್ರೆಗಳ ಕುರಿತಾಗಿ ಸ್ವಲ್ಪ ಗಮನ ಹರಿಸಿ ತಮ್ಮ ಮನೆಗಳ ಅಟ್ಟದ ಮೇಲೆ ಹತ್ತಿ ನೋಡಿದಾಗ ಅವರ ಕಣ್ಣಿಗೆ ಕಾಣಿಸಿದ್ದೇ ವಿವಿಧ ಬಗೆಯ ಕಲ್ಲಿನ ಮರಗಿಗಳು.

suma3ಮೃದುವಾದ ಬಳಪದ ಕಲ್ಲಿನಿಂದ ಮಾಡಲ್ಪಟ್ಟಿರುವ ಕಲ್ಲಿನ ಮರಗಿಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮಾಡಿದಾಗ ಅದು ಅಡುಗೆಯ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವುದಲ್ಲದೇ, ನಮ್ಮ ಆರೋಗ್ಯವನ್ನು ಹೇಗೆ ಕಾಪಾಡುತ್ತದೆ. ಇದರಲ್ಲಿ ತಯಾರಿದ ಆಹಾರ ಮತ್ತು ಇದರಲ್ಲಿ ಸಂಗ್ರಹಿಸಿದ ಪದಾರ್ಥಗಳು ಸುದೀರ್ಘವಾದ ಕಾಲ ಹಾಳಾಗುವುದಿಲ್ಲ ಎಂಬುದನ್ನು ಮನಗಂಡು ಅದನ್ನೇ ನಮ್ಮ ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡಲು ಯೋಚಿಸಿದಾಗಲೇ ಅಜ್ಜಿಯ ಅರಮನೆಯ ಹುಟ್ಟಿಕೊಂಡಿತು.

ನಮ್ಮ ಪೂರ್ವಜರು ನಮಗೆ ಅಡುಗೆ ಮಾಡಲು ಉತ್ತಮ ಮಾರ್ಗವನ್ನು ಕಲಿಸಿದ್ದರು. ಆದರೆ ಇತ್ತೀಚೆಗೆ ಹೊಸ ಆವಿಷ್ಕಾರದ ಹೆಸರಿನಲ್ಲಿ ಆಕರ್ಷಕ ಮತ್ತು ಸುಲಭ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸಿದ ನಂತರ ನಮ್ಮ ಸಂಪ್ರದಾಯಕ ಅಡುಗೆ ಪಾತ್ರೆಗಳು ನಮ್ಮ ದೈನಂದಿನ ಜೀವನದಿಂದ ಕಣ್ಮರೆಯಾಗಿ ಅಟ್ಟ ಸೇರಿಕೊಂಡು ಧೂಳು ಕುಡಿಯುತ್ತಿದ್ದವು. ಈಗ ಮತ್ತೆ ಅದೇ ಕಲ್ಲು ಮರಗಿಗಳನ್ನು ಹೊಸಾ ರೀತಿಯಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನವಾಗಿ ಕರ್ನಾಟಕ, ಅಕ್ಕ ಪಕ್ಕದ ಆಂಧ್ರ ಮತ್ತು ತಮಿಳುನಾಡಿನಲ್ಲಿ ಈ ಬಳಪದ ಕಲ್ಲುಗಳಿಂದ ಪಾತ್ರೆಗಳನ್ನು ತಯಾರಿಸುತ್ತಿದ್ದ ಕೆಲವೇ ಕೆಲವು ಗುಡಿಕೈಗಾರಿಕೆಗಳನ್ನು ಸಂಪರ್ಕಿಸಿದಾಗ ಬಹುತೇಕ ಕುಶಲಕರ್ಮಿಗಳು ತಮ್ಮ ಪೂರ್ವಜರುಗಳಿಂದ ಕಲಿತಿದ್ದ ಸಾಂಪ್ರದಾಯಕ ರೀತಿಯ ಉತ್ಪನ್ನಗಳನ್ನೇ ತಯಾರಿಸುತ್ತಿದ್ದ ಕಾರಣ ಜನರು ಅದನ್ನು ಬಳಸುತ್ತಿರಲಿಲ್ಲ ಎಂಬುದನು ಮನಗಂಡ ಇವರಿಬ್ಬರೂ ಆ ಕುಶಲಕರ್ಮಿಗಳ ಜೊತೆಯಲ್ಲಿಯೇ ಕೆಲ ಸಮಯ ಕಳೆದು ಅವರೆಲ್ಲರ ವಿಶ್ವಾಸವನ್ನು ಗಳಿಸಿ ಹೊಸಾ ಹೊಸಾ ರೀತಿಯ ವಿನ್ಯಾಸಗಳನ್ನು ಇವರಿಬ್ಬರೇ ರೂಪಿಸಿ ಅದನ್ನು ಆದೇ ಕುಸಲ ಕರ್ಮಿಗಳ ಕೈಯ್ಯಲ್ಲಿಂದಲೇ ಉತ್ಪಾದನೆ ಮಾಡಿಸಿದ್ದಲ್ಲದೇ ನಿಧಾನವಾಗಿ ಅವುಗಳನ್ನು ಮಾರುಕಟ್ಟೆಯಲ್ಲಿ ಸಮಂಜಸವಾದ ಮತ್ತು ಸ್ಪರ್ಧಾತ್ಮಕವಾದ ಬೆಲೆಯಲ್ಲಿ ಮಾರಾಟ ಮಾಡಲು ಆರಂಭಿಸಿದರು.

ಆರಂಭದಲ್ಲಿ ಯಾವುದೇ ರೀತಿಯಾದ ಬದಲಾವಣೆಯನ್ನು ಬಯಸದ ಆ ಕುಶಲ ಕರ್ಮಿಗಳ ಮನಸ್ಥಿತಿಯನ್ನು ಬದಲಾಯಿಸುವುದು ನಿಜವಾಗಿಯೂ ದೊಡ್ಡ ಸವಾಲಾಗಿತ್ತು. ಇವರಿಬ್ಬರೂ ಅವರಿಗೆ ಮಾರುಕಟ್ಟೆಯ ವಿಸ್ತಾರವನ್ನು ಅರ್ಥ ಮಾಡಿಸಿದ್ದಲ್ಲದೇ, ಹೊಸಾ ವಿನ್ಯಾಸಗಳ ಮೂಲಕ ಆಕರ್ಶಕವಾದ ಉತ್ಪನ್ನಗಳನ್ನು ತಯಾರಿಸುವ ಮೂಲಕ ಹೇಗೆ ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಲ್ಲದೇ, ಅವರಿಗೆ ಮುಂಗಡವಾಗಿಯೇ ಹಣವನ್ನು ನೀಡುವ ಮೂಲಕ ಅವರಿಗೆ ಆರ್ಥಿಕ ಸಬಲೀಕರಣ ನೀಡಿದ ಫಲವಾಗಿ ಇಂದು ನೂರಾರು ಗುಡಿಕೈಗಾರಿಕೆಯವರು ಇವರೊಂದಿಗೆ ಕೆಲಸ ಮಾಡುತ್ತಿರುತ್ತಾರೆ.

ಹೀಗೆ ಕುಶಲ ಕರ್ಮಿಗಳಿಂದ ತಯಾರಿಸಿದ ಕಲ್ಲಿನ ಮರಗಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟಮಾಡುವ ಕೆಲಸ ಅಷ್ಟೊಂದು ಸುಲಭದ್ದೇನಾಗಿರಲಿಲ್ಲ. ಸುಮ ಮತ್ತು ರೇವತಿ ಇಬ್ಬರೂ ಮಹಿಳಾ ಉದ್ಯಮಿಗಳೇ ಆಗಿದ್ದರಿಂದ ಕಾರ್ಮಿಕರೊಂದಿಗೆ ಕೆಲಸ ಮಾಡುವಾಗ ಮತ್ತು ಅದನ್ನು ಮಾರುಕಟ್ಟೆಗೆ ತರುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಹೆಚ್ಚಿನವರು ಇದು ಮಹಿಳೆಯರ ಕೆಲಸವಲ್ಲ ಹಾಗಾಗಿ ಇದನು ಕೈಬಿಡುವುದೇ ಉತ್ತಮ ಎಂಬ ಸಲಹೆ ನೀಡಿದ್ದನ್ನೇ ಸವಾಲಾಗಿ ಸ್ವೀಕರಿಸಿ ಆ ಎಲ್ಲಾ ವಿಘ್ನಗಳನ್ನು ಎದುರಿಸಿ ಇಂದು ಯಶಸ್ವಿಯಾಗಿ ಮುಂದುವರೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಇವರ ಈ ಸಾಧನೆಯನ್ನು ಅನೇಕ ಗ್ರಾಹಕರು ನಮ್ಮ ಪೂರ್ವಜರು ಬಳಸಿದ ಈ ಎಲ್ಲಾ ಸಾಂಪ್ರದಾಯಿಕ ಉತ್ಪನ್ನಗಳನ್ನು ಮರು ಬಳಕೆ ಮಾಡುವ ಈ ಅದ್ಭುತವಾದ ಕೆಲಸವನ್ನು ಮಾಡುತ್ತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರೆ ಇನ್ನೂ ಕೆಲವರು ಅಯ್ಯೋ ಈ ಮಣ ಭಾರದ ಸಾಮಗ್ರಿಗಳನ್ನು ಯಾರು ಖರೀದಿಸುತ್ತಾರೆ? ಎಂದು ಉತ್ಸಾಹವನ್ನು ಕುಗ್ಗಿಸುವ ಜನರೂ ಇದ್ದಾರೆ. ಪುರಂದರ ದಾಸರೇ ಹೇಳಿರುವಂತೆ ನಿಂದ ಕರು ಇರಬೇಕು ಸಮಾಜದ ಒಳಿತಿಗಾಗಿ ಕೇರಿಯಲ್ಲಿ ನಿಂದಕರು ಇರಬೇಕು ಎಂಬುದನ್ನೇ ಮನನ ಮಾಡಿಕೊಂಡು ಅವೆಲ್ಲಾ ಋಣಾತ್ಮಕ ಸಂಗತಿಗಳನ್ನೂ ಬದಿಗೊತ್ತಿ ಧನಾತ್ಮಕ ಚಿಂತನೆಯಿಂದ ಕಲ್ಲಿನ ಮರಗಿಯ ಜೊತೆ ವಿವಿಧ ರೀತಿಯ ಮರದ ಉತ್ಮನ್ನಗಳು ಹಳೇ ಕಾಲದ ಕಂಚು ಮತ್ತು ಪಂಚಲೋಹದ ಉತ್ಪನ್ನಗಳನ್ನೂ ಯಶ್ವಸಿಯಾಗಿ ಆಧುನೀಕರಿಸಿದ್ದಲ್ಲದೇ ಅವರ ಕೆಲವು ಉತ್ಪನ್ನಗಳ ಪ್ರದರ್ಶನವನ್ನೂ ಸಹಾ ಅದೇ ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದೆ. ನಮ್ಮೆ ಹೆಮ್ಮೆಯ ಪ್ರಧಾನಿಗಳ ನೆಚ್ಚಿನ ಕರೆಯಾದ ಆತ್ಮನಿರ್ಭರ್ ಅಂದರೆ ಸ್ವಾಭೀಮಾನಿ ಸ್ವ-ಉದ್ಯೋಗದಂತೆ ಸಹೃದಯಿಗಳಾದ ನಾವುಗಳು ಅವರ ಉತ್ಪನ್ನಗಳನ್ನು ಕೊಂಡು ಕೊಳ್ಳುವ ಮೂಲಕ ಅವರ ಈ ಸಾಧನೆಗೆ ಬೆಂಬಲಿಸುವುದಲ್ಲದೇ, ತನ್ಮೂಲಕ ನಶಿಸಿ ಹೋಗುತ್ತಿರುವ ಗುಡಿ ಕೈಗಾರಿಗೆ ಮತ್ತು ಆರೋಗ್ಯ ಎರಡನ್ನೂ ಕಾಪಾಡಿದಂತಾಗುತ್ತದಲ್ಲದೇ, ಅಂತಹ ಹೆಮ್ಮೆಯ ಸಾಧಕಿಯರೊಂದಿಗೆ ಕೆಲ ಕಾಲ ಕಳೆದು ಅವರ ಅನುಭವಗಳನ್ನು ಕೇಳುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಇಷ್ಟೆಲ್ಲ ತಿಳಿದ ಮೇಲೆ ಇನ್ನೇಕೆ ತಡಾ, ಇದೇ ಭಾನುವಾರದಂದು ಸ್ವಲ್ಪ ಸಮಯ ಮಾಡಿಕೊಂದು ನಾವೆಲ್ಲರೂ ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಮತ್ತು ಅರೋಗ್ಯಭಾರತಿ ಯಲಹಂಕ ವಿಭಾಗ ನಡೆಸುತ್ತಿರುವ ಅರ್ಥಪೂರ್ಣ ಮಹಿಳಾದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೆಣ್ಣುಮಕ್ಕಳ ಸಾಧನೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಅರ್ಥಪೂರ್ಣ ಮಹಿಳಾ ದಿನಾಚರಣೆ

  1. Thanks for the wonderful article. It will gives us more strength to achieve. Thanks for all your support and request your continued support in future too. Once again Thanks. 🙏

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s