ನಂಜನಗೂಡು ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಕೇವಲ 23 ಕಿ.ಮಿ. ದೂರದಲ್ಲಿರುವ ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳವಾಗಿದೆ ಈ ಶ್ರೀಕ್ಷೇತ್ರದಲ್ಲಿರುವ ಶ್ರಿ ಶ್ರೀಕಂಠೇಶ್ವರ ಅಥವಾ ನಂಜುಡೇಶ್ವರ ಎಂದು ಕರೆಯಲ್ಪಡುವ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ಇದು ದಕ್ಷಿಣ ಕಾಶಿ ಎಂದೇ ಭಕ್ತಾದಿಗಳಿಂದ ಪ್ರಸಿದ್ಧಿಪಡೆದಿದೆ. ನಂಜನಗೂಡಿನಲ್ಲಿ ನೂರಾರು ದೇವಸ್ಥಾನಗಳು ಇದ್ದರೂ ನಂಜನಗೂಡು ಪ್ರಸಿದ್ಧವಾಗಿರುವುದು ಇಲ್ಲಿಯ ಶ್ರೀಕಂಠೇಶ್ವರನ ದೇವಾಲಯದಿಂದಲೇ.
ಈ ದೇವಾಲಯದಲ್ಲಿ ವರ್ಷವಿಡೀ ವಿವಿಧ ಪೂಜೆ ಪುನಸ್ಕಾರಳು ಅತ್ಯಂತ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬರುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸಿ ಶ್ರೀಕಂಠೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ. ಪ್ರತೀ ಸೋಮವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರತಿ ಹುಣ್ಣಿಮೆಯಂದು ರಾತ್ರಿ ರಥೋತ್ಸವನಡೆಯುವುದು ಇಲ್ಲಿನ ವಿಶೇಷವಾಗಿದೆ. ವರ್ಷಕ್ಕೆ ಎರಡು ಜಾತ್ರೆಗಳು ಅತ್ಯಂತ ವೈಭವೇಪೋತವಾಗಿ ಇಲ್ಲಿ ನಡೆಯುತ್ತವೆ. ಅಕ್ಟೋಬರ್-ನವಂಬರ್ ಕಾರ್ತೀಕ ಮಾಸದಲ್ಲಿ ತ್ರಿರಥದ ಚಿಕ್ಕ ಜಾತ್ರೆ ನಡೆದರೆ, ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಪಂಚ ರಥ ಅರ್ಥಾತ್ ದೊಡ್ಡ ಜಾತ್ರೆ ನಡೆದು ಲಕ್ಷಾಂತರ ಜನರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.
ದಕ್ಷಿಣಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡಡಿನಲ್ಲಿ ನಂಜುಂಡೇಶ್ವರ ಸೇರಿದಂತೆ ಪರಿವಾರದ ಪಂಚಮಹಾರಥೋತ್ಸವ ದಿನಾಂಕ 16 ಮಾರ್ಚ್ 2020 ರಂದು ಬೆಳಗಿನ ಜಾವ 3.30ರಿಂದ 4.30ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಡೆದಿದೆ.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಪಂಚರಥೋತ್ಸವ ಅರ್ಥಾತ್ ದೊಡ್ಡ ಜಾತ್ರೆಯ ಸಂಭ್ರಮ ಕ್ಷಣಗಳನ್ನು ಕುಳಿತಲ್ಲಿಂದಲೇ ನೋಡಿ ಶ್ರೀ ನಂಜುಂಡೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.
ಕೊರೊನಾ ಹಾವಳಿಯಿಂದ ಕಳೆದರೆಡು ವರ್ಷಗಳಿಂದ ದೇವಾಲಯದ ಒಳಾವರಣಕ್ಕೆ ಸೀಮಿತವಾಗಿ ನಡೆದು ಭಕ್ತರ ಪಾಲಿಗೆ ಮರೀಚಿಕೆ ಯಾಗಿದ್ದ ದೊಡ್ಡ ಜಾತ್ರೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಯಿತು. ಲಕ್ಷಾಂತರ ಭಕ್ತರು ಆಗಮಿಸಿದ್ದ ಈ ಜಾತ್ರೆಗೆ ಭಕ್ತಾದಿಗೆಳಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯ ಒದಗಿಸಲು ದೇವಾಲಯದ ಆಡಳಿತ ಮಂಡಳಿ ಸುಮಾರು 77 ಲಕ್ಷ ರೂ. ವೆಚ್ಚಮಾಡಿ ಸಕಲ ರೀತಿಯಲ್ಲಿಯೂ ಸಿದ್ಧತೆ ಮಾಡಿದ್ದು ಶ್ಲಾಘನೀಯವಾಗಿದೆ.
ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತರು, ನೀಲಕಂಠ ದೀಕ್ಷಿತರು, ವಿಶ್ವನಾಥ ದೀಕ್ಷಿತರು ಸ್ಥಳ ಪುರೋಹಿತ ಸಪ್ತರ್ಷಿ ಜೋಯಿಸರು ಸೇರಿದಂತೆ ದೇವಾಲಯದ ಅರ್ಚಕರು ನೆನ್ನೆ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಜಾತ್ರೋತ್ಸವದ ಪೂಜಾ ಕೈಂಕರ್ಯಗಳಾದ ಈಶ್ವರನ ಶಿರದಿಂದ ಪಾದವರಿಗೆ ವಿವಿಧ ಹೋಮಗಳ ಹವನಗಳ ಮೂಲಕ ಅರ್ಚನೆ ಮಾಡಿ ನಂತರ ಪಾರ್ವತಿ, ಗಣಪತಿ ಹಾಗೂ ಸುಬ್ರಹ್ಮಣ್ಯ ಮತ್ತು ಚಂಡೇಕೇಶ್ವರಿಗೂ ಹೋಮ ಹವನಗಳ ಮೂಲ ಪೂಜೆ ಸಲ್ಲಿಸುತ್ತಾರೆ.
ಗೌತಮ ಮಹರ್ಷಿಗಳು ಸ್ಥಾಪಿಸಿದ ರಥ ನಂತರ ಮಕರ ಲಗ್ನದಲ್ಲಿ ಕೃತಯುಗದ ಗೌತಮ ಮಹರ್ಷಿಗಳು ಸ್ಥಾಪಿಸಿದ್ದಾರೆ ಎಂದು ಪ್ರತಿತಿಯುಳ್ಳ ಗೌತಮ ನಾಮಧೇಯದ ಚತುರ್ಮುಖ ಬ್ರಹ್ಮನೇ ಚಾಲನಾ ಸ್ಥಾನದಲ್ಲಿರುವ ರಥಕ್ಕೆ ಮತ್ತೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಅರ್ಪಿಸಿ ಶ್ರೀಕಂಠೇಶ್ವರನನ್ನು ಪ್ರತಿಷ್ಠಾಪಿ ಸುವುದರೊಂದಿಗೆ ಅಧಿಕೃತವಾಗಿ ದೊಡ್ಡ ಜಾತ್ರೆಯ ರಥೋತ್ಸವದ ಚಾಲನೆಗೆ ನಾಂದಿ ಹಾಡಲಾಗುತ್ತದೆ. ಶ್ರೀಕಂಠೇಶ್ವರನ ರಥಾರೋಹಣವಾಗುತ್ತಿದ್ದಂತೆ ಆತನ ಪರಿವಾರದ ತಾಯಿ ಪಾರ್ವತಿ, ಗಣಪತಿ, ಸುಬ್ರಮಣ್ಯ ಹಾಗೂ ಚಂಡಿಕೇಶ್ವರನ ರಥಾರೋಹಣ ವಿಧಿವತ್ತಾಗಿ ಸಂಪ್ರದಾಯಕ ಬದ್ಧವಾಗಿ ನಡೆಯಲಿದೆ. ರಥಬೀದಿಯಲ್ಲಿ ವಿವಿಧ ಬಗೆಯ ಪುಷ್ಪಗಳು ಹಾಗೂ ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕೃತಗೊಂಡ ಈ ಐದೂ ರಥಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದರೆ, ಈ ಐದು ರಥಗಳನ್ನು ಸಾವಿರಾರು ಭಕ್ತರು ಶ್ರದ್ಥಾ ಭಕ್ತಿಯಿಂದ ಜೈ ಶ್ರೀಕಂಠ, ಜೈ ನಂಜುಂಡ ಎಂಬ ಘೋಷಣೆಗಳನ್ನು ಕೂಗುತ್ತಾ ಎಳೆದು ಸಂಭ್ರಮಿಸುತ್ತಾರೆ. ಈ ಬಾರಿಯ ರಥೋತ್ಸವಕ್ಕೆ ಮೈಸೂರಿನ ಮಹಾರಾಣಿಯಾದ ಶ್ರೀಮತಿ ಪ್ರಮೋದಾ ದೇವಿಯವರು ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಅತ್ಯಂತ ಪುರಾತನವಾದ ಸುಮಾರು 80 ಅಡಿ ಎತ್ತರದ 110 ಟನ್ ತೂಕದ ಈ ಗೌತಮ ರಥದಲ್ಲಿ ಪವಡಿಸುವ ನಂಜುಂಡೇಶ್ವರ ರಥ ಪ್ರಯಾಣ ದೇವಾಲಯದ ಮುಂಭಾಗದಿಂದ ಆರಂಭವಾಗಿ ಬಲಭಾಗದ ರಾಷ್ಟ್ರಪತಿ ರಸ್ತೆಯ ರಾಕ್ಷಸ ಮಂಟಪದ ಮೂಲಕ ಮಹಾತ್ಮಾಗಾಂಧಿ ರಸ್ತೆಯಲ್ಲಿ ಸಾಗಿ ದೇವಾಲಯದ ಎಡ ಭಾಗಕ್ಕೆ ಬರುವುದರೊಂದಿಗೆ ಶ್ರೀಕಂಠೇಶ್ವರ ದೊಡ್ಡ ತೇರು ನೆಲೆ ಸೇರಿದಂತಾಗುತ್ತದೆ. ಆರಂಭದಲ್ಲಿ ಗಣಪತಿ ನಂತರ ಕ್ರಮವಾಗಿ ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ಸೇರಿದಂತೆ ಪಂಚರಥಗಳ ಮಿಣಿ ಹಿಡಿದು ಉಘೇ ನಂಜುಂಡೇಶ್ವರ ಎಂದು ಬಹು ಪರಾಕಿನೊಡನೆ ರಥಬೀದಿಯಲ್ಲಿ ರಥವನ್ನು ಎಳೆದೊಯ್ಯತ್ತಿದ್ದರೆ 80 ಅಡಿ ಎತ್ತರದ ಭವರೋಗ ವೈದ್ಯ ಹಕಿಂ ನಂಜುಂಡೇಶ್ವರ ಪವಡಿಸಿದ ಗೌತಮ ರಥ ಬೀದಿಯುದ್ದಕ್ಕೂ ಬಳುಕುತ್ತಾ ಬಾಗುತ್ತ ಸಾಗುವ ವೈಭವವನ್ನು ವರ್ಣಿಸುವುದಕ್ಕಿಂತಲೂ ಖುದ್ದು ನೋಡುವುದೇ ಮಹದಾನಂದ ಎಂದರು ಅತಿಶಯವಲ್ಲ.
ರಥದ ಬೀದಿಯಲ್ಲಿ ರಥವನ್ನು ಸಂಭ್ರಮದಿಂದ ಸ್ವಾಗತಿಸುವ ಸಲುವಾಗಿ ಇಡೀ ರಥಬೀದಿಯನ್ನು ಶುಧ್ದೀಕರಿಸಿ ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿದ್ದಲ್ಲದೇ, ನೆರೆದಿದ್ದ ಸಾವಿರಾರು ಭಕ್ತರು ದೇವರಿಗೆ ಜೈಕಾರ ಕೂಗುತ್ತಾ ಹೂವು, ಬಾಳೇಹಣ್ಣು ಮತ್ತು ಧವನಗಳನ್ನು ಎಸೆದು ಭಕ್ತಿಯಿಂದ ನಮಿಸುತ್ತಿದ್ದ ದೃಶ್ಯ ಮನಸೆಳೆಯುವಂತಿತ್ತು. ಜಾತ್ರೆಯ ಅಂಗವಾಗಿ ಬರುವ ಭಕ್ತಾದಿಗಳಿಗೆ ನಂಜನಗೂಡಿನ ವಿವಿಧ ಸಂಘ ಸಂಸ್ಥೆಗಳು ಮಜ್ಜಿಗೆ, ಪಾನಕ ಬೇಲದ, ಹಣ್ಣಿನ ಪಾನಕ, ಸಿಹಿ ತಿನಿಸುಗಳು, ಚಿತ್ರಾನ್ನ, ಮೊಸರನ್ನ, ಬಿಸಿಬೇಳೆ ಬಾತ್, ಪುಳಯೋಗರೆಗಳ ಹಾಗೂ ತಿಂಡಿ ತಿನಿಸುಗಳನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸುತ್ತಾರೆ.
ಕಳೆದ ಎರಡು ವರ್ಷಗಳಿಂದ ಸಾಂಕೇತಿಕವಾಗಿ ನಡೆಯದಿದ್ದ ಜಾತ್ರೆಯನ್ನು ನೋಡಲಾಗದೇ ಪರಿತಪಿಸಿದ್ದ ಭಕ್ತಾದಿಗಳು ಈ ಬಾರಿಯ ಅದ್ದೂರಿಯ ಜಾತ್ರೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ನಂಜನಗೂಡಿಗೆ ಬಂದಿದ್ದು ಈ ಬಾರಿ ದೊಡ್ಡ ಜಾತ್ರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಸೇರುವ ನಿರೀಕ್ಷೆಯಲ್ಲಿದೆ.
- ಶ್ರೀ ಮನ್ಮಹಾಗೌತಮ ರಥಾರೋಹಣ ಪೂರ್ವಕ ಹಂಸಾರೋಹಣ ನಂತರ ನಟೇಶೋತ್ಸವದ
- ಎರಡನೆಯ ದಿನ ಮೃಗಯಾತ್ರಾಪೂರ್ವಕ ಅಶ್ವಾರೋಹಣ ನಂತರ ಮಹಾಭೂತಾರೋಹಣೋತ್ಸವ ದೇವೀ ಪ್ರಣಯ ಕಲಹ ಸಂಧಾನೋತ್ಸವ.
- ಮೂರನೇಯ ದಿನ ಚೂರ್ಣೋತ್ಸವ ಪೂರ್ವಕ ಅವಭತ ತೀರ್ಥಸ್ನಾನ ನಂತರ ರಾತ್ರಿ 7ಕ್ಕೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನಂತರ ನರಾಂದೋಳಿ ಕಾರೋಹಣೋತ್ಸವ, ಧ್ವಜಾರೋಹಣ.
- ನಾಲ್ಕನೇ ದಿನ ಪುಷ್ಪಯಾಗಪೂರ್ವಕ ಪಂಚೋಪಚಾರಪೂರ್ವಕ ಕೈಲಾಸಯಾನಾರೋಹಣೋತ್ಸವ ನಡೆದರೆ,
- ಐದನೇ ದಿನ ಮಹಾಸಂಪ್ರೋಕ್ಷಣ ಪೂರ್ವಕ ನಂದಿವಾಹನೋತ್ಸವದ ಮೂಲಕ ನಂಜನಗೂಡಿನ ದೊಡ್ಡಜಾತ್ರೆ ಸಂಪನ್ನವಾಗುತ್ತದೆ.
ಈ ಬಾರಿ ನಮ್ಮ ಚಾನೆಲ್ಲಿನ ಮೂಲಕ ಶ್ರೀಕಂಠೇಶ್ವರ ಸ್ವಾಮಿಯ ಚಿಕ್ಕ ಜಾತ್ರೆ ಮತ್ತು ದೊಡ್ಡ ಜಾತ್ರೆಯನ್ನು ನೋಡಿ ಶ್ರೀ ಶ್ರೀಕಂಠೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದೀರಿ. ಮುಂದಿನ ಬಾರಿ ಸ್ವಲ್ಪ ಸಮಯ ಮಾಡಿಕೊಂಡು ಜಾತ್ರೆಯ ಸಮಯದದಲ್ಲಿ ಖುದ್ದಾಗಿ ನಂಜನಗೂಡಿಗೆ ಹೋಗಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಜಾತ್ರೆಯ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತಿರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ
Excellent presentation with extensive and elaborate detailing of the car festival at Nanjanagud.
This is worth publishing in leading news papers.
Although I knew a few details in the article, it is yet very refreshing.
Thanks. Jai Nanjundeshwara.
H. V. Venkatesh (Hullahally)
LikeLiked by 1 person
ಧನ್ಯೋಸ್ಮಿ
LikeLike