ಭಾರತೀಯ ಚಿತ್ರರಂಗದಲಿ ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಇತಿಹಾಸವಿದ್ದು ಪ್ರತೀವರ್ಷವೂ ಸರ್ಕಾರ ಕೊಡುವ ಸ್ವರ್ಣ ಕಮಲ ಪ್ರಶಸ್ತಿಗಳಲ್ಲಿ ಮೊದಲ ಮೂರು ಸ್ಥಾನದಲ್ಲಿ ಕರ್ನಾಟಕದ ಹೆಸರೂ ಇದ್ದೇ ಇದೆ. ಈ ರೀತಿಯ ಸಾಥನೆಯನ್ನು ಮಾಡಲು ವರನಟ ಡಾ.ರಾಜಕುಮಾರ್, ವಿಷ್ಣುವರ್ಥನ್, ಅನಂತ್ ನಾಗ್, ರಮೇಶ್ ಅಂತಹ ದಿಗ್ಗಜ ನಟರುಗಳಲ್ಲದೇ ಜಿವಿ ಐಯ್ಯರ್, ಬಿ. ಆರ್ ಪಂತಲು, ಲಕ್ಷ್ಮೀನಾರಾಯಣ, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ ಶೇಷಾದ್ರಿ ಅವರಂತಹ ನಿರ್ದೇಶಕರ ಪಾಲೂ ಇದೆ ಎನ್ನುವುದೂ ಸತ್ಯ. ನಟನೆಯಲ್ಲಿ ಕುರಿಗಳು, ಕೋತಿಗಳು, ಕತ್ತೆಗಳ ಚಿತ್ರಗಳಿಗಷ್ಟೇ ಸೀಮಿತವಾದರು ನಿರ್ದೇಶನದಲ್ಲಿ ಡಾ.ರಾಜ್, ವಿಷ್ಣು, ಅಂಬರೀಶ್ ಮುಂತಾದ ಮೇರು ನಟರುಗಳ ಚಿತ್ರಗಳನ್ನು ನಿರ್ದೇಶಿಸಿ, ರಮೇಶ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮುಂತಾದ ನಟರುಗಳ ಜೊತೆ ನಟಿಸಿ, ಹತ್ತಾರು ಚಿತ್ರಗಳು, ಧಾರಾವಾಹಿಗಳ ನಿರ್ಮಾಣ, ನಿರ್ದೇಶನ, ವಿತರಣೆ ಮಾಡುವ ಮೂಲಕ ಕನ್ನಡದ ದಕ್ಷ ನಿರ್ದೇಶಕ ಎನಿಸಿಕೊಂಡಿರುವ ಎಸ್ ನಾರಾಯಣ್ ನೆನ್ನೆ ಸಂಜೆ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೇಸ್ ಪಕ್ಷ ಸೇರಿಕೊಂಡ ಸಂದರ್ಭದಲ್ಲಿ ಆದ ಅಪಸವ್ಯಗಳು ನಿಜಕ್ಕೂ ಸ್ವಾಭಿಮಾನಿ ಕನ್ನಡ ಚಿತ್ರಪ್ರೇಮಿಗಳಿಗೆ ದುಃಖವನ್ನು ತರಿಸಿತು ಎಂದರೂ ಅತಿಶಯವಲ್ಲ.
ನಮ್ಮಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚರ್ಯದೇವೋಭವ ನಂತರ ಅತಿಥಿ ದೇವೋಭವ ಎನ್ನುವ ಮೂಲಕ ಅತಿಥಿಗಳಿಗೆ ಅತ್ಯಂತ ಪ್ರಮುಖ ಸ್ಥಾನವನ್ನು ಕೊಟ್ಟಿದ್ದೇವೆ. ಈ ಮೊದಲು ಮಾಜೀ ಮುಖ್ಯಮಂತ್ರಿ ಜನತಾದಳದ ಕುಮಾರಸ್ವಾಮಿಯವರ ನಿರ್ಮಾಣದಲ್ಲಿ ಕೆಲವು ಹೆಸರಾಂತ ಚಿತ್ರಗಕನ್ನು ನಿರ್ದೇಶಿಸಿ ಅವರ ಅತ್ಯಾಪ್ತ ಬಳಗದಲ್ಲಿ ಇದ್ದದ್ದಲ್ಲದೇ, ಕಳೆದ ಚುನಾವಣಾ ಸಮಯದಲ್ಲಿ ಜನತಾದಳದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿಯೂ ಇದ್ದ ಎಸ್. ನಾರಾಯಣ್ ಅದ್ಯಾವುದೋ ಕಾರಣಕ್ಕೆ ಜನತಾದಳದಿಂದ ದೂರವಾಗಿ ಕಾಂಗ್ರೇಸ್ ಪಕ್ಷ ಸೇರುವುದಾಗಿ ಕೆಲವು ವಾರಗಳ ಮುಂಚೆಯೇ ತಿಳಿಸಿದ್ದಲ್ಲದೇ, ಪಕ್ಷಕ್ಕೆ ಅಧಿಕೃತವಾಗಿ ಸೇರಲು ಒಂದು ವಿಶೇಷ ದಿನಕ್ಕಾಗಿ ಕಾಯುತ್ತಿತ್ತು ಅದ್ದೂರಿಯಾಗಿ ಎಲ್ಲಾ ಬಂಧು ಮಿತ್ರರ ಸಮ್ಮುಖದಲ್ಲಿ ಸೇರಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದರು.
ದಿ. 16.03.22 ಬುಧವಾರ ಅಂತಹ ವಿಶೇಷ ದಿನವಾಗಿದ್ದು ಎಂದಿನಂತೆ ಎಸ್. ನಾರಾಯಣ್ ಅಚ್ಚುಕಟ್ಟಾಗಿ ಬಟ್ಟೆಯನ್ನು ಹಾಕಿಕೊಂಡು ಪಕ್ಷದ ಕಛೇರಿಯ ಸಭೆಯಲ್ಲಿ ಅದಾಗಲೇ ಆಸೀನರಾಗಿದ್ದ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಕಂಡು ಯಥಾ ಪ್ರಕಾರ ಮತ್ತ ಅಷ್ಟೂ ದಂತಪಂಕ್ತಿಗಳನ್ನು ತೋರಿಸುತ್ತಾ ದೇಶಾವರಿ ನಗೆ ಬೀರಿ ಅವರ ಪಕ್ಕದಲೇ ಇದ್ದ ಖುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಂತಹ ಯಾರೇ ಆಗಲೀ ಅಂದಿನ ಕಾರ್ಯಕ್ರಮಕ್ಕೆ ಅವರೇ ಮುಖ್ಯ ಅಕರ್ಷಣೆಯಾಗಿರುವ ಕಾರಣ, ಆ ರೀತಿಯಾಗಿ ಮಾಡುವುದು ಸಹಜ. ಆದರೆ ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಕನಿಷ್ಟ ಸೌಜನ್ಯವೂ ಇರದ, ಅದಾಗಲೇ ಸಾರ್ವಜನಿಕರ ಸಮ್ಮುಖದಲ್ಲೇ ಕಾರ್ಯಕರ್ತರಿಗೆ ಕಪಾಳ ಮೋಕ್ಷಮಾಡಿರುವ ಉದಾಹಣೆ ಇರುವ ಕರ್ನಾಟಕ ಕಂಡ ಅತ್ಯಂತ ಹುಂಬ ರಾಜಕಾರಣಿ ಡಿಕೆಶಿ. ಯಥಾಪ್ರಕಾರ ಇಲ್ಲಿ ಬೇಡ ಪಕ್ಕದ ಸೀಟಿಗೆ ಹೋಗಿ ಎಂದು ಆಜ್ಣಾಪಿಸಿದರು. ಹೋಗಲಿ ಬಿಡು ಎಂದು ಎರಡನೇ ಆಸನದತ್ತ ಕೂರಲೂ ಹೋದರೆ ಮತ್ತೊಬ್ಬರು ಬಂದು ಮೂರನೇ ಆಸನದಲ್ಲಿ ಕೂರಲು ಸೂಚಿಸಿದಾಗ ಅವಮಾನಿತರಾದ ಎಸ್. ನಾರಾಯಣ್ ಅವರ ಮುಖ ಕಪ್ಪಿಟ್ಟಿಲ್ಲದೇ ಅವರ ಮುಖದ ಮೇಲಿದ್ದ ಮಂದಹಾಸ ಛಂಗನೇ ಮಾಯುವಾಗಿ ಇದ್ದಕ್ಕಿದ್ದಂತೆಯೇ ಬೆವರಲು ಆರಂಭಿಸಿ, ಮೂರನೇ ಆಸನವನ್ನು ಮತ್ಯಾರೋ ಕಸಿಯದೇ ಇದ್ದರೆ ಸಾಕು ಎಂದು ಧಡಕ್ಕನೆ ಕುಳಿತುಕೊಂಡು ಬೆವರನ್ನು ಒರೆಸಿಕೊಳ್ಳುತ್ತಿದ್ದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋ ಹರಿದಾಡ್ತಾ ಇರೋದನ್ನು ನೋಡಿದಾಗ ವಯಕ್ತಿಕವಾಗಿ ನನಗನಿಸಿದ್ದು ಛೇ, ಛೇ, ಛೇ, ಹೀಗಾಗ್ಬಾರ್ದಿತ್ತು.
ಅವರೇ ಹೇಳಿಕೊಂಡಂತೆ ತಮ್ಮ 30 ವರ್ಷಗಳ ಚಿತ್ರರಂಗದ ಸೇವೆಯಲ್ಲಿ ಕರ್ನಾಟಕದ ಅಷ್ಟೂ ದಿಗ್ಗಜರ ಚಿತ್ರಗಳನ್ನು ನಿರ್ದೇಶಿಸಿದ ಏಕೈಕ ನಿರ್ದೇಶಕ. ಶಿಸ್ತು ಮತ್ತು ಸಂಯಮಗಳಿಗೆ ಹೆಸರಾದ ನಿರ್ದೇಶಕರಾಗಿರುವ ಎಸ್. ನಾರಾಯಣ್ ಅವರಿಗೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮೊದಲ ದಿನವಾದರೂ ಸ್ವಲ್ಪ ಮಟ್ಟಿಗೆ ಗೌರವ ಕೊಡ ಬೇಕಿತ್ತು. ಅವರ್ ಬಿಟ್ಟು, ಇವರ್ ಬಿಟ್ಟು, ಇವರ್ಯಾರು? ಎನ್ನುವಂತೆ ಮೊದಲನೇ ದಿನವೇ ಖುರ್ಚಿಯಿಂದ ಖುರ್ಚಿಗೆ ಬದಲಿಸುತ್ತಾ ಅಂತಿಮವಾಗಿ ಮೂರನೇ ಖುರ್ಚಿಯಲ್ಲಿ ಕೂರಿಸಿದ್ದು ನಿಜಕ್ಕೂ ಅಕ್ಷಮ್ಯವೇ ಸರಿ.
ಭಾರತದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ನಾಗರೀಕರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು ಅವರು ತಮಗಿಷ್ಟ ಬಂದ ಪಕ್ಷವನ್ನು ಬೆಂಬಲಿಸಬಹುದು ಅದಕ್ಕೆ ಸೇರಿಕೊಳ್ಳಬಹುದು ಅದರ ಬಗ್ಗೆ ಯಾರಿಗೂ ಯಾವುದೇ ರೀತಿಯ ತಕರಾರಿಲ್ಲ. ಆದರೆ ವೈಯಕ್ತಿಕವಾಗಿ ಹೇಳಬೇಕೆಂದರೆ ಎಲ್ಲಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆಯೋ ಅಂತಹ ಕಡೆ ಆ ವ್ಯಕ್ತಿ ತನ್ನ ಸ್ವಾಭಿಮಾನನ ಬಿಟ್ಟು ಕೊಡದೇ ಒಂದು ಕ್ಷಣವೂ ಇರಬಾರದಿತ್ತು. ಎಸ್. ನಾರಾಯಣ್ ಅವರಂತಹ ಹೆಸರಾಂತರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವಾಗ ಹಬ್ಬದ ವಾತಾವರಣವಿರಬೇಕು. ಮನೆಯ ಯಜಮಾನರಾದ ಪಕ್ಷಾಧ್ಯಕ್ಷರ ಮುಖದಲ್ಲಿ ಸಂತಸದ ಭಾವ ಇರಬೇಕಿತ್ತು. ವೀಡಿಯೋ ನೋಡಿದ ಎಲ್ಲರಿಗೂ ಅನಿಸಿದ್ದು ಅಧ್ಯಕ್ಷರ ಮುಖದಲ್ಲಿದಲ್ಲಿ ಖುಷಿ ಬಿಡಿ ಕನಿಷ್ಠ ಪಕ್ಷ ತೋರಿಕೆಯ ನಗುವೂ ಇಲ್ಲದೇ ಕಾಟಾಚಾರಕ್ಕೊ ಇಲ್ಲವೇ ಬಲವಂತದ ಮಾಘಸ್ನಾನದಂತೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು.
ಇದು ಇಷ್ಟಕ್ಕೇ ಮುಗಿಯದೇ ಅವರನ್ನು ಅಧಿಕೃತವಾಗಿ ಟ್ಯಾಬ್ ನಲ್ಲಿ ಡಿಜಿಟಲ್ ಮುಖಾಂತರ ನೊಂದಾವಣಿ ಮಾಡಿಕೊಳ್ಳುವುದಾಗಿ ಪ್ರಕಟಿಸಿದಾಗ ಮತ್ತೊಮ್ಮೆ ದೇಶಾವರಿ ನಗೆ ಬೀರಿ ತಮ್ಮ ಖುರ್ಚಿಯಿಂದ ಮೇಲೆದ್ದು ಸಿದ್ಧವಾಗಿ ನಿಂತು ಕೊಳ್ಳುತ್ತಿದ್ದಂತಯೇ ಮತ್ತೇ ತಮ್ಮ ಛಾಳಿಯನ್ನು ತೋರಿದ ಡಿಕೆಶಿ ಅಂದೇ ಪಕ್ಷಕ್ಕೆ ಸೇರ್ಪಡೆಗೊಂಡ ಮತ್ತೊಬ್ಬರನ್ನು ಕರೆದು ಅವರ ಚಿತ್ರವನ್ನು ಮೊದಲು ತೆಗೆದು ನೊಂದಾವಣಿ ಮಾಡಿಕೊಂಡು ನಂತರ ಎಸ್. ನಾರಾಯಣ್ ಅವರ ಚಿತ್ರವನ್ನು ತೆಗೆದು, ನೋಡಮ್ಮಾ ಇವರೇನಾ ನಿಮ್ಮ ಯಜಮಾನರು ಎಂದು ತಿಪ್ಪೇ ಸಾರಿಸುವಂತೆ ನಗೆ ಚೆಲ್ಲಿದರೂ ಅದರ ಹಿಂದಿದ್ದ ಕುಹಕ ಎದ್ದು ಕಾಣುತ್ತಿತ್ತು. ಇವೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕನ ಮಾದಿದರೆ, ನಾರಾಯಣ್ ಅವರ ಅಗತ್ಯ ಕಾಂಗ್ರೇಸ್ ಪಕ್ಷಕ್ಕೆ ಬೇಡ ಬದಲಾಗಿ ನಾರಾಯಣ್ ಅವರಿಗೆ ಕಾಂಗ್ರೇಸ್ ಪಕ್ಷದ ಅವಶ್ಯಕತೆ ಇದೆ ಎಂಬ ಭಾವ ಮುಡುವಂತಿತ್ತು. ಪಕ್ಷಕ್ಕೆ ಸೇರಿದ ಸಮಯದಲ್ಲಾದರೂ ಸಣ್ಣ ಗೌರವ ಕೊಡದೇ ಹೋದ ಕಡೆ ಇದ್ದು ನಾರಾಯಣ್ ಏನು ಸಾಧಿಸುತ್ತಾರೆ ಎಂಬುದೇ ಈಗ ಪ್ರಶ್ನಾರ್ಹವಾಗಿದೆ. ಚಿತ್ರರಂಗದಲ್ಲಿ ಈ ರೀತಿಯಾದ ಅವಮಾನಗಳಾಗಿದ್ದಲ್ಲಿ ಥಟ್ಟನೆ ಸಿಡಿದೆದ್ದು, ಅತ್ಮಗೌರವಕ್ಕಾಗಿ ಸ್ವಾಭಿಮಾನಿಯಾಗಿ ಆ ವೇದಿಕೆಯಿಂದಲೇ ಎದ್ದು ಹೊರನಡೆಯುತ್ತಿದ್ದ ನಾರಾಯಣ್ ಯಕ್ಕಚ್ಚಿತ್ ತಮ್ಮ ರಾಜಕೀಯ ತೆವಲಿಗಾಗಿ ಕುಂಬಾರನಿಗೆ ವರುಷ, ದೊಣ್ಣೆಗೆ ಒಂದು ನಿಮಿಷ ಎನ್ನುವಂತೆ ಇಷ್ಟು ದಿನ ಗಳಿಸಿದ ಗೌರವ, ಅವರ ಸ್ವಾಭಿಮಾನವನ್ನೆಲ್ಲಾ ಸಾರ್ವಜನಿಕವಾಗಿ ಮಣ್ಣು ಪಾಲು ಮಾಡಿಕೊಳ್ಳಬೇಕಾಯಿತೇ ಎಂದು ಮಮ್ಮಲ ಮರುಗುವಂತಾಯಿತು.
ಸುಳ್ಳುಗಳನ್ನು ಹೇಳುತ್ತದೇ ಸದ್ಯದ ದೇಶದ ದುಸ್ಥಿತಿಗೆ ಕಾರಣರಾಗಿರುವ ಕಾಂಗ್ರೇಸ್ ರಾಜ್ಯಾಧ್ಯಕ್ಷ ಭಾಷಣದ ಸಮಯದಲ್ಲಿ ತ್ಯಾಗ ಮತ್ತು ಬಲಿದಾನಕ್ಕೆ ಕಾಂಗ್ರೇಸ್ ಪಕ್ಷ ಹೆಸರುವಾಸಿ. ಕಲಾಂ ಅವರು ಸೋನಿಯಾ ಅವರನ್ನು ಪ್ರಧಾನ ಮಂತ್ರಿಯಾಗಲು ಆಹ್ವಾನಿಸಿದರೂ ಆಕೆ ಆ ಪದವಿಯನ್ನು ತ್ಯಾಗ ಮಾಡಿದರು ಎಂಬ ಹಸೀ ಸುಳ್ಳನ್ನು ಮತ್ತೊಮ್ಮೆ ಹೇಳಿದರು. ನಿಜವಾಗಿಯೂ ಒಬ್ಬ ವಿದೇಶಿ ಸಂಜಾತೆ ಈ ದೇಶದ ಪೌರತ್ವವನ್ನು ಸ್ವೀಕರಿಸಿದ್ದರೂ ಭಾರತೀಯ ಸಂವಿಧಾನದ ಪ್ರಕಾರ ಈ ದೇಶದ ಪ್ರಧಾನಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಹೇಳಲು ಕಲಾಂ ಅವರು ಸೋನಿಯಾರವರನ್ನು ಕರೆಸಿದ ವಿಷಯವನ್ನು ಮರೆಮಾಚಿ ಈ ರೀತಿಯ ಅಧಿಕಾರದ ತ್ಯಾಗ ಬಲಿದಾನದ ನಾಟಕವೇಕೇ?
ಇನ್ನು ವಯಸ್ಸು 50+ ಆದರೂ ರಾಜಕೀಯ ಪ್ರಬುದ್ಧತೆ ಇಲ್ಲದ ಸ್ವಂತ ಬುದ್ಧಿ ಇಲ್ಲದ ರಾಹುಲ್ ಪ್ರಧಾನಿ ಪಟ್ಟ ಬಿಡಿ ಒಂದು ಗ್ರಾಮ ಪಂಚಾಯತಿ ಅಧ್ಯಕ್ಷ ಸಹ ಆಗಲು ನಾಲಯಕ್ ಎಂಬ ಸತ್ಯ ಇಡೀ ಪ್ರಪಂಚಕ್ಕೆ ತಿಳಿದಿದೆ. 10 ವರ್ಷಗಳ ಕಾಲದ UPA ಆಡಳಿತ ಸಂಧರ್ಭದಲ್ಲಿ ಯಾವುದಾದರೂ ಒಂದು ಪ್ರಭಲ ಖಾತೆಯ ಮಂತ್ರಿಯಾಗಿ ತನ್ನ ಕಾರ್ಯವೈಖರಿಯನ್ನು ತೋರಿಸುವ ಎಲ್ಲಾ ಅವಕಾಶಗಳು ಇದ್ದರೂ ತಾನು ಹುಟ್ಟಿರುವುದೇ ಪ್ರಧಾನಿಯಾಗಲು ಮತ್ತು ಪ್ರಧಾನಮಂತ್ರಿಯ ಪಟ್ಟ ತಮ್ಮ ಕುಟುಂಬದ ಜಹಗೀರು ಎಂದು ಇಂದಿಗೂ ರಾಗಾ ಭಾವಿಸಿದ್ದಲ್ಲಿ, ಆತ ಜೀವಮಾನವಿಡೀ ಹೀಗೆಯೇ ರಾಜಕೀಯ ವಿದೂಷಕನಂತೆಯೇ ಇರಬೇಕಾಗುತ್ತದೆ ಅಲ್ಲವೇ?
ಒಬ್ಬ ಭೂಗಳ್ಖನ ಪತ್ನಿಯಾಗಿ ಕೇವಲ ಮೂಗು ಅಜ್ಜಿಯ ತರಹ ಇದೆ ಎಂದು 400 ಅಲ್ಲಾ 4000 ರ್ಯಾಲಿಗಳನ್ನೂ ಮಾಡಿದರೂ ಪ್ರಿಯಾಂಕಾಳನ್ನು ಜನರು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎನ್ನುವುದು ಇತ್ತೀಚಿನ ಉತ್ತರ ಪ್ರದೇಶದ ಜನಾಭಿಪ್ರಾಯ ತಿಳಿಸಿಯಾಗಿದೆ. ಇಂದಿನ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿಯೂ ನಕಲಿ ಗಾಂಧಿಗಳು ವಂಶಪಾರಂಪರ್ಯ ರಾಜಕೀಯ ಮಾಡುತ್ತಿರುವುದನ್ನು ನೋಡಿಯೂ ಇರಳು ಕಂಡ ಭಾವಿಯಲ್ಲಿ ಬೀಳಲು ಎಸ್. ನಾರಾಯಣ್ ಅವರಂತಹ ಬುದ್ಧಿವಂತರು ಮುಂದಾಗಿರುವ ಹಿಂದಿರುವ ಕಾಣದ ರಹಸ್ಯ ಬಯಲಾಗಬೇಕಿದೆ.
ಕಾಂಗ್ರೇಸ್ ಪಕ್ಷಕ್ಕೆ ಅಧಿಕೃತವಾಗಿ ಕಾಟಾಚಾರಕ್ಕೆ ಸೇರಿಸಿಕೊಂಡ ನಂತರ ನಾರಾಯಣ್ ಮಾತಾಡ್ತೀರೇನ್ರೀ? ಎಂಬ ಉದ್ಧಟತನದಿಂದಲೇ ಮೈಕ್ ಅನ್ನು ನಾರಾಯಣ್ ಬಳಿ ಡಿಕಿಶಿ ಸರಿಸಿದಾಗ, ಹತ್ತಾರು ಚಿತ್ರಗಳ ಸಂಭಾಷಣೆಯನ್ನು ಬರೆದಿರುವಂತಹ ನಾರಾಯಣ್ ಅವರಿಗೆ ವೇದಿಕೆಯ ಮೇಲೆ ಹೇಗೆ ಮಾತನಾಡಬೇಕು ಎಂದು ಡಿಕೆಶಿ ಪದೇ ಪದೇ ಹೇಳಿಕೊಡುತ್ತಿದ್ದದ್ದು ಬಾಲಿಶವಾಗಿತ್ತು. ಇವೆಲ್ಲದರ ನಡುವೆಯೂ ಮಾತನ್ನು ಶುರು ಮಾಡಿದ ನಾರಾಯಣ್ ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ಈ ದೇಶದ ಜನರು ನೆಮ್ಮದಿಯಾಗಿದ್ದಾರೆ ಎಂದರೆ ಕಾಂಗ್ರೇಸ್ ಪಕ್ಷಕ್ಕೆ ಋಣಿಯಾಗಿರಬೇಕು ಎಂದು ಆಣಿ ಮುತ್ತನ್ನು ಉದುರಿಸುತ್ತಿದ್ದಂತೆಯೇ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಎಸ್. ನಾರಾಯಣ್ ಎಂದರೆ ಇವರೇನಾ? ಇಂದೇಕೇ ಅವರು ಬೌದ್ಧಿಕವಾಗಿ ದೀವಾಳಿಯಾಗಿದ್ದಾರೆ? ಸಮರ್ಥವಾದ ಸಾಮಾಜಿಕ ಜಾಲತಾಣ ಮತ್ತು ಕಾಶ್ಮೀರೀ ಫೈಲ್ಸ್ ಚಿತ್ರಗಳ ಮುಖಾಂತರ ಇಷ್ಟು ವರ್ಷಗಳ ಕಾಲ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟರು ಮುಚ್ಚಿಟ್ಟ ನಿಜವಾದ ಇತಿಹಾಸ ತಿಳಿಯುತ್ತಿರುವ ಸಂಧರ್ಭದಲ್ಲೂ ಈ ರೀತಿಯಾಗಿ ಕಿವಿಯ ಮೇಲೆ ಹೂವನ್ನು ಇಡಲು ಹೋಗುವುದು ಎಷ್ಟು ಸರಿ? ಎಂದೆನಿಸಿ ಈ ರೀತಿಯ ಭಟ್ಟಂಗಿತನವಿದ್ದಲ್ಲಿ ಇವರ ಮುಂದಿನ ರಾಜಕೀಯ ಭವಿಷ್ಯ ಹೇಗಿರಬಹುದು ಎಂಬ ಸ್ಪಷ್ಟ ಕಲ್ಪನೆ ಮೂಡಿದ್ದಂತೂ ಸುಳ್ಳಲ್ಲ.
ಅಂತಿಮವಾಗಿ ಸೇವಂತಿ ಸೇವಂತಿ ಚಿತ್ರ ನಿರ್ದೇಶಿಸಿದ್ದ ಎಸ್. ನಾರಾಯಣ್ ಅವರ ಸೇವಂತಿಯ ಸುವಾಸನೆ ಬಂಡೆಯ ಮುಂದೆ ಮೊದಲ ದಿನವೇ ನಲುಗಿ ಸುರುಟಿ ಹೋಗಿದ್ದು ಸುಳ್ಳಲ್ಲ ಅಲ್ವೇ? ಜನ ಸೇವೆ, ದೇಶ ಮಾಡೋಕೆ ರಾಜಕೀಯ ಪಕ್ಷದ ಬೆಂಬಲ ಬೇಕೇ ಬೇಕಾ?🤔🤔
ಏನಂತೀರಿ?
ನಿಮ್ಮವನೇ ಉಮಾಸುತ
Good article
LikeLiked by 1 person