ಬ್ರಿಟೀಷರ ಸೇನೆಯಲ್ಲಿ ಸಾಮಾನ್ಯ ಸೈನಿಕನಾಗಿದ್ದ ಮಂಗಲ್ ಪಾಂಡೆ 1857ರಲ್ಲಿ ಬ್ರಿಟೀಷ್ ಸೈನ್ಯದ ವಿರುದ್ಧವೇ ತಿರುಗಿ ಬಿದ್ದು ನಡೆಸಿದ ಹೋರಾಟವನ್ನು ಬ್ರಿಟೀಷರು ಸಿಪಾಯಿದಂಗೆ ಎಂದು ದಾಖಲಿಸಿದರೆ, ಭಾರತದ ನಿಜವಾದ ಇತಿಹಾಸಕಾರರು ಅದನ್ನು ಪ್ರಥಮ ಸ್ವಾತ್ರಂತ್ರ್ಯ ಸಂಗ್ರಾಮ ಎಂದೇ ಹೆಮ್ಮೆಯಿಂದ ಕರೆಯುತ್ತಾರೆ. ಮಂಗಲ್ ಪಾಂಡೆ ಹತ್ತಿಸಿದ ಸ್ವಾತ್ರಂತ್ರ್ಯದ ಕಿಚ್ಚನ್ನು ಬಿಹಾರ್ ಪ್ರಾಂತ್ಯದಲ್ಲಿ ಪ್ರಜ್ವಲಿಸುವಂತೆ ಮಾಡಿದ ಕೀರ್ತಿ ಪ್ರಸ್ತುತ ಭಾರತದ ಬಿಹಾರದ ಭೋಜ್‌ಪುರ ಜಿಲ್ಲೆಯ ಭಾಗವಾಗಿರುವ ಜಗದೀಸ್‌ಪುರದ ಪರ್ಮಾರ್ ರಜಪೂತರ ಉಜ್ಜೈನಿಯಾ ಕುಲದ ಕುಟುಂಬಕ್ಕೆ ಸೇರಿದ್ದ ವೀರ್ ಕುನ್ವರ್ ಸಿಂಗ್ ಅವರಿಗೆ ಸಲ್ಲುತ್ತದೆ. ತಮ್ಮ 80 ನೇ ವಯಸ್ಸಿನಲ್ಲಿ ಸಾಮಾನ್ಯ ಸೈನಿಕರ ಪಡೆಯನ್ನು ಮುನ್ನಡೆಸುತ್ತಾ, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವನ್ನು ಹಣ್ಣುಗಾಯಿ ನೀರು ಗಾಯಿ ಮಾಡಿದ್ದ ವೀರ ಕುನ್ವರ್ ಸಿಂಗ್ ಅವರ ಬಲಿದಾನ ದಿನವಾದ ಏಪ್ರಿಲ್ 26 ರಂದು ಅವರ ಸಂಸ್ಮರಣೆಯನ್ನು ಮಾಡುವುದು ಪ್ರತಿಯೊಬ್ಬ ಭಾರತೀಯರ ಅದ್ಯ ಕರ್ತವ್ಯವೇ ಆಗಿದೆ.
ಏಪ್ರಿಲ್ 1777 ರಲ್ಲಿ ಪ್ರಸ್ತುತ ಬಿಹಾರದ ಭೋಜ್‌ಪುರ ಜಿಲ್ಲೆಗೆ ಸೇರಿರುವ ಜಗದೀಸ್‌ಪುರದಲ್ಲಿ ಮಹಾರಾಜ ಶಬ್ಜದಾ ಸಿಂಗ್ ಮತ್ತು ರಾಣಿ ಪಂಚ್ರತನ್ ದೇವಿಯವರಿಗೆ ಕುನ್ವರ್ ಸಿಂಗ್ ಜನಿಸುತ್ತಾರೆ. ಅವರ ತಂದೆಯವರೂ ಸಹಾ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದವರೇ ಆಗಿದ್ದರು. ಕುನ್ವರ್ ಅವರ ಎಲ್ಲಾ ಸಾಹಸಕ್ಕೆ ಅವರ ಸಹೋದರ ಬಾಬು ಅಮರ್ ಸಿಂಗ್ ಮತ್ತು ಅವರ ಸೈನ್ಯಧಿಕಾರಿಯಾಗಿದ್ದ ಕೃಷ್ಣ ಸಿಂಗ್ ಬೆಂಗಾವಲಾಗಿರುತ್ತಾರೆ. ಈ ತ್ರಿಮೂರ್ತಿಗಳು ಸುಮಾರು ಒಂದು ವರ್ಷಗಳ ಕಾಲ ಬ್ರಿಟಿಷ್ ಪಡೆಗಳಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಛತ್ರಪತಿ ಶಿವಾಜಿ ಮಹಾರಾಜರಂತೆ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಪರಿಣಿತಿ ಹೊಂದಿದ್ದ ಇರುವರು ಸಾಯುವವರೆಗೂ ಅಜೇಯರಾಗಿದ್ದು ಅವರ ತಂತ್ರ ಮತ್ತು ಪ್ರತಿತಂತ್ರಗಳು ಬ್ರಿಟಿಷರನ್ನು ಸದಾಕಾಲವೂ ಗೊಂದಲಕ್ಕೀಡು ಮಾಡಿದ್ದವು ಎಂದರೂ ಅತಿಶಯೋಕ್ತಿಯೇನಲ್ಲ.
ಶತ್ರುಗಳನ್ನು ಬಗ್ಗು ಬಡಿಯುವ ಮುನ್ನ ಅವರ ಶಕ್ತಿಯನ್ನು ಅರಿಯಲು ಅವರೊಂದಿಗೇ ಸ್ನೇಹ ಬೆಳಸಿ ಅದರ ಪ್ರತಿಫಲವಾಗಿ ಬ್ರಿಟಿಷ್ ಅವರಿಂದಲೇ ಮದ್ದುಗುಂಡು ಕಾರ್ಖಾನೆಯನ್ನೂ ಆರಂಭಿಸಿ ಅಲ್ಲಿ ತಯಾರಾಗುತ್ತಿದ್ದ ಮದ್ದು ಗುಂಡುಗಳನ್ನು ಬ್ರಿಟಿಷರಿಗೆ ಅನುಮಾನವೇ ಬಾರದಂತೆ ಅವರ ವಿರುದ್ದವೇ ಬಳಸಲು ಸ್ವತಂತ್ರ ಹೋರಾಟಗಾರರಿಗೆ ನೀಡುತ್ತಿರುತ್ತಾರೆ. 1857 ಜುಲೈ 25 ರಂದು ಬ್ರಿಟೀಷರ ವಿರುದ್ದ ತಮ್ಮದೇ ಸೈನ್ಯದೊಂದಿಗೆ ಹೋರಾಟಿ ಬ್ರಿಟಿಷರನ್ನು ಸೋಲಿಸಿ ಅವರ ಖಜಾನೆಯನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಕುನ್ವರ್ ಸಿಂಗ್ ವಿರುದ್ಧ ಹೋರಾಡಲು ಮೊದಲು ಕ್ಯಾಪ್ಟನ್ ಡನ್ ಬಾರ್ ಅವರ ನೇತೃತ್ವದಲ್ಲಿ ಸೈನ್ಯ ಬರುತ್ತಿರುವುದನ್ನು ತಿಳಿದ ಕುನ್ವರ್ ಅವರ ತಂಡ ಗಾಂಗೀ ಎಂಬಲ್ಲಿ ಡನಬಾರ್ ನ ಸಮೇತ ಇಡೀ ಬ್ರಿಟಿಷ್ ಸೇನೆಯನ್ನು ಕೊಂದು ಹಾಕಿದ್ದರಿಂದ ಹತಾಶರಾಗಿ ಮೇಜರ್ ಐಲ್ ಎಂಬುವನೊಂದಿಗೆ ಕಳುಹಿಸಿದ ದೊಡ್ಡ ಸೈನ್ಯದೊಂದಿಗೆ ಕುನ್ವರ್ ಸಿಂಹ ರ ಅತ್ಯಂತ ಚಿಕ್ಕ ಪಡೆ ಹೋರಾಡಲು ಅಸಮರ್ಥರಾಗಿ ಹಿಂದಿರುಗುತ್ತಾರೆ.
ಕೆಲ ಕಾಲದ ನಂತರ ಅಲ್ಲಿನ ಅಲ್ಲಿನ ಸ್ಥಳೀಯ ಜಮೀನ್ದಾರರ ಬೆಂಬಲದ ಜೊತೆಗೆ ವಾರಣಾಸಿ ಮತ್ತು ಗಾಜಿಪುರದ ಸೈನ್ಯದ ನೆರವು ಪಡೆದು ತಮ್ಮ ನೆಚ್ಚಿನ ಹೋರಾಟಗಾರರಲ್ಲಿ ಸ್ಪೂರ್ತಿಯನ್ನು ತುಂಬಿ ಕೆಲವೇ ಕೆಲವು ದಿನಗಳಲ್ಲಿ ಬ್ರಿಟಿಷ್ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸುತ್ತಾರೆ. ಈ ಸೋಲಿನಿಂದ ಅವಮಾನಿತನಾದ ಗವರ್ನರ್ ಜನರಲ್ ಲಾರ್ಡ್ ಕ್ಯಾನಿಂಗ್, ಲಾರ್ಡ್ ಕೆಡ್ ನಾಯಕತ್ವದಲ್ಲಿ ಕಳುಹಿಸಿದ ಮತ್ತೊಂದು ದೊಡ್ಡ ಸೈನ್ಯವನ್ನೂ ಸಹಾ ತನ್ನ ಚಾಣಕ್ಷ ಯುದ್ದತಂತ್ರಗಳಿಂದ ಕುನ್ವರ್ ಸಿಂಗ್ ಸೋಲಿಸಿದಾಗ ಬ್ರಿಟಿಷ್ ಅಥಿಕಾರಿಗಳು ಅಕ್ಷರಶಃ ಹೈರಾಣಾಗುತ್ತಾರೆ. ಮರಳಿ ಯತ್ನವ ಮಾಡು ಎಂಬಂತೆ ಲುಗಾರ್ಡ್ ನಾಯಕತ್ವದಲ್ಲಿ ಅತಿ ದೋಡ್ಡ ಬ್ರಿಟಿಷ್ ಸೈನ್ಯ ಆಕ್ರಮಣಕ್ಕೆ ಸಿದ್ದವಾಗುತ್ತಿದ್ದದ್ದನ್ನು ತಿಳಿದ ಕುನ್ವರ್ ಸಿಂಹ ಈ ಮೊದಲೇ ಹೇಳಿದಂತೆ ಛತ್ರಪತಿ ಶಿವಾಜಿ ಮಹಾರಾಜರು ಪರಿಚಯಿಸಿದ ಗೆರಿಲ್ಲಾ ಯುದ್ಧ ತಂತ್ರಗಾರಿಕೆಯಂತೆ, ಚಾಣಕ್ಷ ತನದಿಂದ ಅವರ ಸೈನ್ಯದ ಗಮನವನ್ನು ಬೇಕೆ ಕಡೆಗೆ ಚದುರಿಸಿ, ಆಪ್ರದೇಶದಲ್ಲಿ ಯುದ್ಧವನ್ನು ಎದುರಿಸಲು ಕುನ್ವರ್ ಸಿಂಗ್ ಸೈನ್ಯವೇ ಇರದಿದ್ದದ್ದನ್ನು ಕಂಡು ಹೆದರಿ ಓಡಿ ಹೋಗಿರಬಹುದೆಂದು ಭಾವಿಸಿ ಯುದ್ದವನ್ನು ಗೆದ್ದವರಂತೆ ಸಂಭ್ರಮಿಸುತ್ತಿದ್ದಾಗ ಏಕಾ ಏಕಿ ಅವರ ಮೇಲೆ ಗೆರಿಲ್ಲಾ ರೀತಿಯಿಂದ ಧಾಳಿ ಅಂತಹ ದೊಡ್ಡ ಸೈನ್ಯವನ್ನು ಸುಲಭವಾಗಿ ಸೋಲಿಸಿ ಬಿಡುತ್ತಾರೆ. ಕುನ್ವರ್ ಸಿಂಹ ನನ್ನು ಮತ್ತು ಅವನ ಸಹೋದರ ಅಮರ್ ಸಿಂಗನನ್ನು ಜೀವಂತವಾಗಲೀ ಅಥವಾ ಮರಣೋತ್ತರವಾಗಲೀ ಹಿಡಿದು ಕೊಟ್ಟವರಿಗೆ ತಲಾ 25,000ರೂ ಮತ್ತು 5,000ರೂಗಳ ಬಹುಮಾನವನ್ನು ಕೊಡುತ್ತೇವೆ ಎಂದು ಅಂದಿನ ಬ್ರಿಟಿಷ್ ಸರ್ಕಾರವೇ ಘೋಷಿಸಿತ್ತು ಎಂದರೆ ಕನ್ವರ್ ಸಿಂಗ್ ಅವರ ತಂಡ ಬ್ರಿಟೀಷರಿಗೆ ಯಾವ ಪರಿಯಲ್ಲಿ ಕಾಟ ಕೊಟ್ಟಿತ್ತು ಎಂಬುದನ್ನು ಊಹಿಸಿಕೊಳ್ಳಬಹುದಾಗಿದೆ.
ಅದೊಮ್ಮೆ ಕುನ್ವರ್ ಸಿಂಗ್ ಜಗದೀಶಪುರ ತಲಪಲು ಗಂಗಾ ನದಿಯನ್ನು ದಾಟುತ್ತಿದ್ದಾಗ ಬ್ರಿಟಿಷರ ಸೈನಿಕನೊಬ್ಬ ಹಾರಿಸಿದ ಗುಂಡು ಅವರ ಮಣಿಕಟ್ಟಿಗೆ ಬಡಿಯಿತು. ಅದಾಗಲೇ 80 ವರ್ಷ ವಯೋಮಾನದವರಾಗಿದ್ದ ಕುನ್ವರ್ ತನ್ನ ಕೈ ಎತ್ತಲೂ ಅಸಾಧ್ಯವಾದಾಗ, ಅದರಿಂದ ತನ್ನ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗದಂತೆ ತಡೆಯುವ ಸಲುವಾಗಿ ತಂತಾನೇ ತನ್ನ ತನ್ನ ಕೈಯನ್ನು ಕತ್ತರಿಸಿಕೊಂಡಿದ್ದಂತಹ ಪರಮ ವೀರರಾಗಿದ್ದರು. ಮಾರ್ಚ್ 1858 ರಲ್ಲಿ, ಈಗಿನ ಉತ್ತರ ಪ್ರದೇಶಕ್ಕೆ ಸೇರಿದ ಅಜಂಗಢವನ್ನು ಒಂದೇ ಕೈಯ್ಯಲ್ಲಿ ಹೋರಾಟ ಮಾಡಿ ವಶಪಡಿಸಿಕೊಂಡದ್ದಲ್ಲದೇ, 22 ಮತ್ತು 23 ಏಪ್ರಿಲ್ ರಂದು ಜಗದೀಸ್‌ಪುರದ ಬಳಿ ಕ್ಯಾಪ್ಟನ್ ಲೆ ಗ್ರ್ಯಾಂಡ್ ನೇತೃತ್ವದ ಬ್ರಿಟಿಷ ಸೈನ್ಯದ ವಿರುದ್ದ ನಡೆದ ಯುದ್ದದಲ್ಲಿ ಕ್ಯಾಪ್ಟನ್ ಲೆ ಗ್ರ್ಯಾಂಡ್ ಸೇರಿದಂತೆ ಸುಮಾರು 130 ಜನರನ್ನು ಕೊಂದು ಯುದ್ದವನ್ನು ಗೆದ್ದರೂ ಸಹಾ ಆ ಹೋರಾಟದಲ್ಲಿ 80 ವರ್ಷದ ಕುನ್ವರ್ ಸಿಂಗ್ ತೀವ್ರವಾಗಿ ಗಾಯಗೊಂಡರೂ ಜಗದೀಶ್ ಪುರ ಕೋಟೆಯ ಮೇಲೆ ಹಾರುತ್ತಿದ್ದ ಯೂನಿಯನ್ ಜ್ಯಾಕ್ ಧ್ವಜವನ್ನು ಕೆಳಕ್ಕೆ ಇಳಿಸಿ ತಮ್ಮ ಧ್ವಜವನ್ನು ಹಾರಿಸಿ, 1858ರ ಏಪ್ರಿಲ್ 23 ರಂದು ತಮ್ಮ ಅರಮನೆಗೆ ಮರಳಿ ವಿಜಯೋತ್ಸವವನ್ನು ಆಚರಿಸಿದರು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಈ ಉತ್ಸಾಹ ಕೇವಲ ಮೂರು ದಿನಗಳ ಕಾಲವಿದ್ದು 26 ಏಪ್ರಿಲ್ 1858 ರಂದು ಕುನ್ವರ್ ಸಿಂಗ್ ಅವರ ದೇಹಾಂತ್ಯವಾಗುತ್ತದೆ. ಸಹೋದರನ ಸಾವಿನಿಂದ ವಿಚಲಿತರಾಗದೆ ಅವರ ಉತ್ತರಾಧಿಕಾರಿಯಾಗಿ ಸೈನ್ಯದ ನೇತೃತ್ವವನ್ನು ವಹಿಸಿಕೊಂಡ ಅವರ ಸೋದರ ಅಮರಸಿಂಗ್ ಬ್ರಿಟಿಷ್ ವಿರುದ್ದ ಹೋರಾಟ ಮುಂದುವರಿಸುತ್ತಲೇ ಹೋಗುತ್ತಾರೆ.
ಎಷ್ಟೆಲ್ಲಾ ವಿರೋಧಾಭಾಸಗಳ ನಡುವೆಯೂ ತನ್ನ ಸಣ್ಣದಾದ ಸ್ಥಳೀಯ ಸೈನ್ಯದೊಂದಿಗೆ ಧೈರ್ಯದಿಂದ ಬ್ರಿಟೀಷರ ವಿರುದ್ದ ಹೋರಾಡಿ ಅವರಿಗೆ ಚಳ್ಳೇ ಹಣ್ಣು ತಿನಿಸಿದ್ದ ಕಾರಣ ಅವರನ್ನು ವೀರ್ ಕುನ್ವರ್ ಸಿಂಗ್ ಎಂದು ಕರೆಯಲಾಗುತ್ತದೆ. ಸ್ವಾತ್ರಂತ್ರ್ಯಾನಂತರ ಅವರ ಗೌರವಾರ್ಥವಾಗಿ ಭಾರತ ಸರ್ಕಾರವು 1966 ರಲ್ಲಿ ಕನ್ವರ್ ಸಿಂಗ್ ಅವರ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರೆ, ಬಿಹಾರ ರಾಜ್ಯ ಸರ್ಕಾರವು ವೀರ ಕುನ್ವರ್ ಸಿಂಗ್ ವಿಶ್ವವಿದ್ಯಾಲಯವನ್ನು , ಅರ್ರಾದಲ್ಲಿ 1992 ರಲ್ಲಿ ಸ್ಥಾಪಿಸಿತು.
2017 ರಲ್ಲಿ, ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸಲು ಇದ್ದ ಅರ್ರಾ-ಛಾಪ್ರಾ ಸೇತುವೆಗೆ ವೀರ್ ಕುನ್ವರ್ ಸಿಂಗ್ ಸೇತುವೆ ಎಂದು ಕರೆದದ್ದಲ್ಲದೇ, 2018 ರಲ್ಲಿ, ಕುನ್ವರ್ ಸಿಂಗ್ ಅವರ ಮರಣದ 160 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ನೆನಪಿಗಾಗಿ ಬಿಹಾರ ಸರ್ಕಾರವು ಅವರ ಪ್ರತಿಮೆಯನ್ನು ಹಾರ್ಡಿಂಜ್ ಪಾರ್ಕ್‌ಗೆ ಸ್ಥಳಾಂತರಿಸಿ, ಆ ಉದ್ಯಾನವನವನ್ನು ಅಧಿಕೃತವಾಗಿ ವೀರ್ ಕುನ್ವರ್ ಸಿಂಗ್ ಆಜಾದಿ ಪಾರ್ಕ್ ಎಂದು ಮರುನಾಮಕರಣ ಮಾಡುವ ಮೂಲಕ ಇಂದಿನ ಯುವ ಜನತೆಗೂ ವೀರ್ ಕನ್ವರ್ ಸಿಂಗ್ ಅವರನ್ನು ಪರಿಚಯಿಸುವ ಕಾರ್ಯವನ್ನು ಮಾಡಿದ್ದು ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವೇ ಸರಿ.
ಕೆಲವರು ಮಾಡಿದ ಅಹಿಂಸಾ ತತ್ವದ ಹೋರಾಟ ಮತ್ತು ಉಪವಾಸಗಳಿಗೆ ಹೆದರಿ ಬ್ರಿಟೀಷರು ಭಾರತವನ್ನು ಬಿಟ್ಟು ಹೋದರು ಎಂದೇ ಇತಿಹಾಸದಲ್ಲಿ ಓದುತ್ತಿರುವ ನಮ್ಮ ಇಂದಿನ ಮಕ್ಕಳಿಗೆ ವೀರ ಕನ್ವರ್ ಸಿಂಗ್ ನಂತಹ ಲಕ್ಷಾಂತರ ಕಾಂತ್ರಿಕಾರಿಗಳ ತ್ಯಾಗ ಮತ್ತು ಬಲಿದಾನಗಳಿಂದಾಗಿ ಈ ದೇಶಕ್ಕೆ ಸ್ವಾತ್ರಂತ್ಯ ದೊರಕಿದೆ ಎಂಬ ಸತ್ಯ ಸಂಗತಿಯನ್ನು ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮದೇ ಆಗಿದೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ