ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕುಲವಧು ಚಿತ್ರದಲ್ಲಿ, ಪ್ರಬುದ್ಧ ನಟಿ ಲೀಲಾವತಿಯವರ ಅಭಿನಯಿಸಿರುವ ದ. ರಾ. ಬೇಂದ್ರೆಯವರ ಈ ಕವನವನ್ನು ಕೇಳಿಯೇ ದೊಡ್ಡವರಾಗಿದ್ದೇವೆ.
ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ |
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ||
ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ. ||
ಈ ಕವನದಲ್ಲಿ ಕವಿಗಳು ಪ್ರತೀ ಫಾಲ್ಗುಣ ಮಾಸದಲ್ಲಿ ಪ್ರಕೃತಿಯಲ್ಲಿ ಗಿಡಮರಗಳ ಎಲೆಗಳೆಲ್ಲಾ ಉದುರಿ ಹೋಗಿ, ಮತ್ತೆ ಚೈತ್ರ ಮಾಸದಲ್ಲಿ ಚಿಗುರುವ ಮೂಲಕ ನಿರಂತರವಾಗಿ ಹೊಸಾ ಜನ್ಮವನ್ನು ಪಡೆಯುತ್ತಲೇ ಇರುತ್ತದೆ. ಆದರೆ ಮನುಷ್ಯರಿಗೆ ಮಾತ್ರ ಒಂದೇ ಜನ್ಮ, ಒಂದೇ ಬಾಲ್ಯ, ಒಂದೇ ಹರೆಯ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ. ಹಾಗಾಗಿ ನಮ್ಮ ಜೀವನದಲ್ಲಿ ಗತಿಸಿ ಹೋದ ಪ್ರತೀ ಕ್ಷಣಗಳೂ ಅಮೂಲ್ಯವೇ ಆಗಿರುವ ಕಾರಣ ಪ್ರತಿಯೊಂದು ಸುಂದರ ಕ್ಷಣಗಳನ್ನೂ ಆಹ್ವಾದಿಸಬೇಕು ಎನ್ನುವುದೇ ಕವಿಗಳ ಆಶಯವಾಗಿದೆ.
ಅದರಲ್ಲೂ ನಮ್ಮ ಬಾಲ್ಯದ ದಿನಗಳಂತೂ ನಮ್ಮ ಜೀವನದಲ್ಲಿ ಅತ್ಯಮೂಲ್ಯವೇ ಹೌದು. ಒಮ್ಮೆ ಬಾಲ್ಯ ಕಳೆದು ಪ್ರೌಢಾವಸ್ಥೆಗೆ ಬರುತ್ತಿದ್ದಂತೆಯೇ ಆ ಬಾಲ್ಯದ ಮುಗ್ಧ ಮನಸ್ಸು, ಭಾವನೆಗಳು ಎಲ್ಲವೂ ಬದಲಾಗಿ ಎಲ್ಲವೂ ವ್ಯಾವಹಾರಿಕವಾಗಿ ಬಿಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಹಾಗಾಗಿ ಬಾಲ್ಯದಲ್ಲಿ ಆದಷ್ಟೂ ಮನೆಯಲ್ಲಿಯೇ ಇದ್ದು ಅಪ್ಪಾ, ಅಮ್ಮಾ, ಅಣ್ಣಾ, ತಂಗಿ, ಅಜ್ಜ, ಅಜ್ಜಿ ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ ಮಾವ, ನೆರೆ ಹೊರೆಯವರೊಂದಿಗೆ ಆಟವಾಡುತ್ತಾ, ನೋಡಿದ್ದನ್ನು ಕೇಳಿದ್ದನ್ನು ಅನುಕರಿಸುತ್ತಾ, ಮುದ್ದು ಮುದ್ದಾಗಿ ಮಾತನಾಡುತ್ತಾ, ಲೋಕ ಜ್ಞಾನವನ್ನು ಗ್ರಹಿಸುತ್ತಾ ಹೋಗುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.
ಚಿಕ್ಕಮಕ್ಕಳ ಗ್ರಹಿಕೆ ಬಹಳ ಚೆನ್ನಾಗಿ ಇರುತ್ತದೆ ಮತ್ತು ಚಿಕ್ಕವಯಸ್ಸಿನಲ್ಲಿ ಕಲಿತದ್ದು ಎಷ್ಟು ವರ್ಷಗಳ ಕಾಲವೂ ಮರೆಯುವುದಿಲ್ಲ. ಅದೇ ರೀತಿ ಸಣ್ಣ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಹೆಚ್ಚು ವಿಷಯಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಲಿಯುತ್ತಾರೆ ಎನ್ನುವುದಕ್ಕಾಗಿಯೇ ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಸಣ್ಣ ಸಣ್ಣ ಮಕ್ಕಳಿಗೆ ಶ್ಲೋಕಗಳು, ದೇವರ ನಾಮಗಳು, ಭಗವದ್ಗೀತೆ, ವಿವಿಧ ದೇವರುಗಳ ಸುಪ್ರಭಾತಗಳ ಜೊತೆಗೆ ರಾಮಾಯಣ ಮಹಾಭಾರತ, ಶ್ರೀ ಕೃಷ್ಣ, ಬಾಲ ಹನುಮಾನ್, ಗಣೇಶನ ಕತೆಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದು ರೂಢಿಯಲ್ಲಿದೆ. . ಆಷ್ಟು ಸಣ್ಣ ವಯಸ್ಸಿನಲ್ಲಿ ತೊದಲು ನುಡಿಗಳಲ್ಲಿ ಅ ಪುಟ್ಟ ಪುಟ್ಟ ಮಕ್ಕಳು ಹಾಡು, ಸಂಗೀತ, ಶ್ಲೋಕಗಳನ್ನು ಹೇಳುವುದನ್ನು ಅದಕ್ಕೆ ಸರಿಯಾಗಿ ನೃತ್ಯ ಇಲ್ಲವೇ ಅಭಿನಯಿಸುವುದನ್ನು ವರ್ಣಿಸುವುದಕ್ಕಿಂತಲೂ ನೋಡುವುದಕ್ಕೇ ಮಹದಾನಂದ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಮಕ್ಕಳು ಏಳೆಂಟು ವರ್ಷಗಳ ಕಾಲ ಅಮ್ಮನ ಎದೆ ಹಾಲನ್ನೇ ಕುಡಿಯುತ್ತಾ ಅಮ್ಮನ ಸೆರಗನ್ನು ಹಿಡಿದುಕೊಂಡು ಅಮ್ಮನ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಲೇ ಬಹಳಷ್ಟು ವಿಷಯಗಳನ್ನು ಕಲಿಯುತ್ತಿದ್ದರಿಂದಲೇ, ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು ಎಂಬ ಗಾದೆ ಮಾತು ರೂಢಿಗೆ ಬಂದಿತು.
ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಇಂದಿನ ದುಬಾರಿ ಜೀವನವನ್ನು ಸರಿದೂಗಿಸಲು ತಂದೆ ಮತ್ತು ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣ, ಮಕ್ಕಳಿಗೆ 2 ವರ್ಷ ತುಂಬುತ್ತಿದ್ದಂತೆಯೇ ಹತ್ತಿರದ ಪ್ಲೇಹೋಮ್ ಇಲ್ಲವೇ ಶಿಶುವಿಹಾರ (ನರ್ಸರಿ)ಕ್ಕೆ ಸೇರಿಸಿ ಮಕ್ಕಳ ಕಲಿಕೆಯ ಜವಾಬ್ಧಾರಿಯೆಲ್ಲಾ ಆ ಶಾಲೆಯ ಶಿಕ್ಷಕ/ಶಿಕ್ಷಕಿಯರದ್ದೇ ಆಗಿದೆ ಎಂದು ಭಾವಿಸಿರುವವರೇ ಹೆಚ್ಚಾಗಿದ್ದಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ತಾಯಿಯ ಆಶ್ರಯದಿಂದ ವಂಚಿತವಾದ ಆ ಮಕ್ಕಳು ಸರಿಯಾದ ರೀತಿಯಲ್ಲಿ ಬಾಲ್ಯವನ್ನು ಸವಿಯಲಾಗದೇ 2-3 ವಯಸ್ಸಿನಲ್ಲೇ ಕನ್ನಡ, ಇಂಗ್ಲೀಷ್ ಹಿಂದಿ ಹೀಗೆ ಹತ್ತು ಹಲವಾರು ಭಾಷೆಗಳನ್ನು ಓದಲು ಬರೆಯಲು ಕಲಿಯುವುದರ ಜೊತೆಗೆ ಗಣಿತ, ವಿಜ್ಞಾನ ಮತ್ತು ಸಮಾಜ ಶಾಸ್ತ್ರಗಳ ಪರಿಚಯವನ್ನು ಮಾಡಿಕೊಳ್ಳುವ ಮೂಲಕ ಅನಗತ್ಯವಾಗಿ ತಮ್ಮ ಬಾಲ್ಯದ ಸವಿಯನ್ನೇ ಅನುಭವಿಸದೇ ಹೋಗುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇನ್ನು ಮೊಬೈಲ್ ಮತ್ತು ಕಂಪ್ಯೂಟರ್ ಗೇಮ್ ಗಳಿಂದಾಗಿ ಮಕ್ಕಳು ಸ್ವಚ್ಚಂದವಾಗಿ ಆಟದ ಮೈದಾನಗಳಲ್ಲಿ ಆಡುವುದೇ ಇಲ್ಲದ ಕಾರಣ ಸಣ್ಣ ಸಣ್ಣ ವಯಸ್ಸಿಗೇ ನಾನಾ ಮಕ್ಕಳು ಸ್ಥೂಲಕಾಯರಾಗಿ ಕಣ್ಣಿನ ವಿವಿಧ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
ಅಷ್ಟು ಸಣ್ಣ ವಯಸ್ಸಿನಲ್ಲೇ ತಮ್ಮ ವಯಸ್ಸಿಗೂ ಮೀರಿದ ಶಾಲಾ ಪಠ್ಯಪುಸ್ತಕಗಳ ಹೊರೆಯನ್ನು ಹೊತ್ತು ಕೊಂಡು ಹೋಗುವ ಮಕ್ಕಳ ಯಾತನೆಯನ್ನೇ ಮನಗಂಡ ಸುಪ್ರಿಂ ಕೋರ್ಟ್ ಇತ್ತೀಚೆಗೆ ಮಕ್ಕಳ ಶಾಲಾ ಪ್ರವೇಶ ಕುರಿತಂತೆ ಅತ್ಯಂತ ಮಹತ್ವದ ಅಭಿಪ್ರಾಯವೊಂದನ್ನು ದಾಖಲಿಸಿದೆ. ಸದ್ಯಕ್ಕೆ ಕೇಂದ್ರೀಯ ವಿದ್ಯಾಲಯಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 6 ವರ್ಷ ವಯಸ್ಸಿನ ಮಾನದಂಡ ರೂಪಿಸಿರುವುದನ್ನೇ ಪ್ರಶ್ನಿಸಿ ಪೋಷಕರೊಬ್ಬರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಪಾಲಕರು ತಮ್ಮ ಮಕ್ಕಳಿಗೆ 2 ವರ್ಷ ತುಂಬಿದ ಕೂಡಲೇ ಶಾಲೆಗೆ ಕಳಿಸಬೇಕೆಂದು ಬಯಸುವುದು ನಿಜಕ್ಕೂ ಅವೈಜ್ಞಾನಿಕ. ಈ ರೀತಿ ಮಾಡುವುದರಿಂದ ಅದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿಗಳಾದ ಶ್ರೀ ಸಂಜಯ್ ಕಿಶನ್ ಕೌಲ್ ಮತ್ತು ಶ್ರೀ ಎಂ.ಎಂ. ಸುಂದರೇಶ್ ಅವರಿದ್ದ ಪೀಠ ಪ್ರತಿಕ್ರಿಯಿಸಿರುವುದು ಅತ್ಯಂತ ಸಮಂಜಸವಾಗಿದೆ.
ಈ ಹಿಂದಿನಿಂದಲೂ ರೂಢಿಯ ಪ್ರಕಾರ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ 5 ವರ್ಷವಾಗಿದ್ದರೂ, ಮಕ್ಕಳನ್ನು ಶಾಲೆಗೆ ಕಳುಹಿಸಲು ಸರಿಯಾದ ವಯಸ್ಸು ಯಾವುದು ಎಂಬ ಬಗ್ಗೆ ಜಿಜ್ಞಾಸೆ ಇದ್ದ ಕಾರಣ, ವಿಚಾರಣೆಯ ವೇಳೆಯಲ್ಲಿ ನ್ಯಾಯಾಧೀಶರು ಸುಧೀರ್ಘವಾದ ಅಧ್ಯಯನ ನಡೆಸಿ ಮಕ್ಕಳನ್ನು 6 ವರ್ಷಕ್ಕಿಂಗಲೂ ಕಡಿಮೆ ವಯಸ್ಸಿನಲ್ಲಿ ಶಾಲೆಗೆ ಕಳುಹಿಸುವುದರಿಂದ ಮಕ್ಕಳ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರಬಹುದು ಎಂಬ ಸಲಹೆಯನ್ನು ನೀಡಿದೆ.
ಅತ್ಯಂತ ವೇಗದಲ್ಲಿ ಹೋಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಅನೇಕ ಪೋಷಕರಿಗೆ ತಮ್ಮ ಮಕ್ಕಳು ಅತ್ಯಂತ ಬೇಗ ದೊಡ್ಡವರಾಗ ಬೇಕು ಅದರ ಜೊತೆಗೆ ತಾವು ಏನೇನು ಕಲಿತಿಲ್ಲವೋ ಅವೆಲ್ಲವನ್ನೂ ತಮ್ಮ ಮಕ್ಕಳು ಕಲಿತು ಕೊಳ್ಳಲೇ ಬೇಕು ಎಂಬ ಧಾವಂತದಿಂದಾಗಿ ಅನೇಕ ಪಾಲಕರು ತಮ್ಮ ಮಕ್ಕಳನ್ನು ಕೇವಲ 2 ವರ್ಷ ತುಂಬಿದಾಗಲೇ ನಾನಾ ಬಗೆಯ ಶಾಲೆಗೆ ಕಳುಹಿಸಿ ಆ ಮಕ್ಕಳ ಮೇಲೆ ಬಲವಂತದ ಮಾಘಸ್ನಾನ ಮಾಡಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾದ ವಿಷಯವಾಗಿದೆ.
ಇತ್ತೀಚೆಗೆ ಹತ್ತು ಹಲವಾರು ಟಿವಿ ಛಾನೆಲ್ಲುಗಳಲ್ಲಿ ಮಕ್ಕಳ ನೃತ್ಯ, ಸಂಗೀತ ಮತ್ತು ನಾಟಕಗಳ ರಿಯಾಲಿಟಿ ಶೋಗಳು ಬಂದ ನಂತರವಂತೂ ಬಹುತೇಕ ಪಾಲಕರು ತಮ್ಮ ಮಕ್ಕಳು ಆ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದು ಬಯಸುತ್ತಾರೆ. ಹಾಗಾಗಿ ಸಣ್ಣ ಸಣ್ಣ ವಯಸ್ಸಿನ ಮಕ್ಕಳ ಬಾಯಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡಿಸುತ್ತಾ ವಿಕೃತ ಸಂತೋಷ ಪಡುತ್ತಾರೆ. ಆದರೆ ಪೋಷಕರ ಈ ರೀತಿಯ ಪ್ರಯತ್ನ ನಿಜಕ್ಕೂ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಗಮನನಿಸದೇ ಇರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.
ಇಂದಿನ ಬಹುತೇಕ ಪಾಲಕರು ಅಯ್ಯೋ ಕಾಲ ಕೆಟ್ಟು ಹೋಯ್ತು ರೀ.. ಈಗಿನ ಮಕ್ಕಳು ನಮ್ಮ ರೀತಿ ಇಲ್ಲಾ ಎಂಬ ಮಾತನ್ನು ಪದೇ ಪದೇ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಆದರೆ ಸೂಕ್ಷ್ಮವಾಗಿ ಯೋಚಿಸಿದಲ್ಲಿ ಇಲ್ಲಿ ಕಾಲವೂ ಕೆಟ್ಟಿಲ್ಲ ಮಕ್ಕಳದ್ದು ತಪ್ಪಿಲ್ಲ. ತಪ್ಪೆಲ್ಲವೂ ನಮ್ಮದೇ ಆಗಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಹೀಗಾಗಿ ತಂದೆ-ತಾಯಿಯರೇ ಮೊದಲ ಗುರು. ಸಣ್ಣ ಮಕ್ಕಳು ತಮ್ಮ ತಂದೆ ತಾಯಿಯರನ್ಣೇ ನೋಡಿ ಅನುಸರಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಮನೆಯಲ್ಲಿ ಏನೇನು ಹೇಳಿಕೊಡಬೇಕು? ಯಾವ ರೀತಿಯ ಸಂಸ್ಕಾರ ನೀಡಬೇಕು? ಅವರನ್ನು ಹೇಗೆ ಬೆಳೆಸಬೇಕು? ಎಂಬುದನ್ನು ಮೊದಲು ಹೆತ್ತವರು ಯೋಚಿಸಿ, ಮಕ್ಕಳ ತಪ್ಪುಗಳನ್ನು ಸಣ್ಣ ವಯಸ್ಸಿನಲ್ಲೇ ಸೂಕ್ಷ್ಮವಾಗಿ ತಿದ್ದಿ ಉತ್ತಮ ನಡತೆ ಕಲಿಸಿಕೊಟ್ಟರೆ ಮುಂದೆ ಅವರು ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿದೆ. ನಮ್ಮ ಪೋಷಕರು ಆ ರೀತಿ ಕಲಿಸಿದ್ದರಿಂದಲೇ ನಾವು ರೀತಿಯಾಗಿದ್ದೇವೆ. ಆದರೆ ನಾವೇ ನಮ್ಮ ಮಕ್ಕಳಿಗೆ ಆ ರೀತಿಯಲ್ಲಿ ಕಲಿಸದ ಕಾರಣ ನಮ್ಮ ಮಕ್ಕಳಿಗೆ ನಮ್ಮ ಆಚಾರ, ವಿಚಾರ, ಸಂಪ್ರದಾಯಗಳ ಪರಿಚಯವೇ ಇಲ್ಲವಾಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.
ವಿದ್ಯಾ ದದಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ।
ಪಾತ್ರತ್ವಾದ್ಧನ ಮಾಪ್ನೋತಿ, ಧನಾದ್ಧರ್ಮಂ ತತಃ ಸುಖಂ।। ಎಂಬ ಶ್ಲೋಕವನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಾವು ಕಲಿಯುವ ವಿದ್ಯೆಯಿಂದ ನಮಗೆ ವಿನಯ ದೊರೆಯುತ್ತದೆ, ಆ ರೀತಿಯಾದ ವಿನಯದಿಂದ ಯೋಗ್ಯತೆ ದೊರೆತು, ಆ ಯೋಗ್ಯತೆಯಿಂದ ವೃತ್ತಿಪರನಾಗಿ ಹಣ ಸಂಪಾದನೆ ಮಾಡಿ, ಆ ರೀತಿ ಗಳಿಸಿದ ಹಣದಿಂದ ಧರ್ಮಕಾರ್ಯಗಳನ್ನು ಮಾಡುವುದೇ ನಿಜವಾದ ಸುಖ ಎಂಬುದಾಗಿದೆ. ನಿಜವಾದ ಸುಖಕ್ಕೆ ವಿದ್ಯೆಯೇ ಮೂಲ ಕಾರಣ ಎಂದು ಈ ಶ್ಲೋಕ ಹೇಳುತ್ತದಾದರೂ, ಪ್ರಸಕ್ತ ಸಂದರ್ಭದಲ್ಲಿ ವಿದ್ಯೆಗಿಂತಲೂ ವಿವೇಕವಿದ್ದಲ್ಲಿ ಎಲ್ಲವನ್ನೂ ಸಾಧ್ಯಗೊಳಿಸಬಹುದಾಗಿದೆ ಎನ್ನುವುದೇ ಅತ್ಯಂತ ಸೂಕ್ತವಾಗಿದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯೆಯನ್ನು ಬಲವಂತವಾಗಿ ಅವರ ಮೇಲೆ ಹೇರುವ ಬದಲು ಮನೆಯಲ್ಲಿಯೇ ಮಕ್ಕಳನ್ನು ವಿವೇಕವಂತರಾಗಿ ಮಾಡುವ ಮೂಲಕ ಮನೆಗೂ ಮತ್ತು ನಾಡಿಗೂ ಉತ್ತಮ ನಾಗರೀಕರನ್ನಾಗಿ ಮಾಡಬಹುದಾಗಿದೆ. ಏಕೆಂದರೆ, ಇಂದಿನ ಮಕ್ಕಳೇ, ದೇಶದ ನಾಳಿನ ಪ್ರಭುದ್ಧ ಪ್ರಜೆಗಳು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ