ವಟ ಸಾವಿತ್ರಿ ವ್ರತ

ನಮ್ಮ ಸನಾತನ ಧರ್ಮದ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಲ್ಲಿ ಮುತ್ತೈದೆಯರಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ಹಾಗಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ ದೀರ್ಘಸುಮಂಗಲೀ ಭವ ಎಂದೇ ಹಿರಿಯರು ಆಶೀರ್ವದಿಸುತ್ತಾರೆ. ಹೀಗೆ ತಮ್ಮ ದೀರ್ಘಸುಮಂಗಲಿತನಕ್ಕಾಗಿ ತಮ್ಮ ಪತಿಯಂದಿರ ದೀರ್ಘಾಯುಶ್ಯ ಮತ್ತು ಆಯುರಾರೋಗ್ಯಕ್ಕಾಗಿ ಪೂಜೆ ಮಾಡುವ ವಟಸಾವಿತ್ರಿ ವ್ರತವನ್ನು ಬಹುತೇಕ ಹೆಣ್ಣುಮಕ್ಕಳು ಮಾಡುತ್ತಾರೆ. ಅಂತಹ ವಟ ಸಾವಿತ್ರಿ ವ್ರತದ ಹಿನ್ನಲೆ, ಮಹತ್ವ ಮತ್ತು ಆಚರಣೆಯ ಸವಿವರ ಇದೋ ನಿಮಗಾಗಿ.

ಪತಿವ್ರತೆ ಎಂಬ ಪದವನ್ನು ಕೇಳಿದ ತಕ್ಷಣವೇ ನಮ್ಮ ತಲೆಯಲ್ಲಿ ಹೊಳೆಯುವುದೇ ಸತ್ಯವಾನ್ ಸಾವಿತ್ರಿ ಎಂದರೆ ಅತಿಶಯವಲ್ಲ. ವಟ ಸಾವಿತ್ರಿ ವ್ರತ ಎಂಬ ಹೆಸರಿನಲ್ಲೇ ಇರುವಂತೆ ಈ ಹಬ್ಬ ಆಲದ ಮರ ಮತ್ತು ಮೃತನಾದ ತನ್ನ ಪತಿ ಸತ್ಯವಾನನ ಪ್ರಾಣವನ್ನು ಯಮರಾಜನಿಂದ ತನ್ನ ಪತಿ ಸತ್ಯವಾನ್ ಜೀವವನ್ನು ಮರಳಿ ತಂದ ದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತಿದ್ದು ಇದರ ಹಿಂದಿನ ಪೌರಾಣಿಕ ಹಿನ್ನಲೆ ಅತ್ಯಂತ ರೋಚಕವಾಗಿದೆ.

ಪುರಾಣ ಕಾಲದಲ್ಲಿ ಮದ್ರಾ ರಾಜನಾದ ಅಶ್ವಪತಿಗೆ ಬಹಳ ಕಾಲ ಸಂತಾನವಿಲ್ಲದಿದ್ದ ಕಾರಣ, ತಮ್ಮ ಗುರುಗಳ ಆಣತಿಯ ಮೇರೆಗೆ ಸಾವಿತ್ರಿ ದೇವಿ ಕುರಿತು ಯಜ್ಞ – ಯಾಗಾದಿಗಳು ಮತ್ತು ಪೂಜೆಯನ್ನು ಮಾಡುತ್ತಾನೆ. ಆತನ ಕಠಿಣ ಪೂಜೆಯಿಂದ ಸಂತೃಪ್ತಳಾದ ಸಾವಿತ್ರಿ ಆತನಿಗೆ ಬಹಳ ಮುದ್ದಾದ ಹೆಣ್ಣು ಮಗಳನ್ನು ಕರುಣಿಸುತ್ತಾಳೆ. ಸಾವಿತ್ರಿ ದೇವಿಯ ವರಪ್ರಸಾದದಿಂದ ಜನಿಸಿದ ಮಗುವಿಗೆ ಸಾವಿತ್ರಿ ಎಂದೇ ನಾಮಕರಣ ಮಾಡುತ್ತಾನೆ.

vata7ಬೆಳೆದು ದೊಡ್ಡವಳಾದ ಸಾವಿತ್ರಿಯು ಅತ್ಯಂತ ಸುರದ್ರೂಪ್ರಿಯಾಗಿದ್ದು, ಮದುವೆಯ ವಯಸ್ಸಿಗೆ ಆಕೆಯ ತಂದೆ ತನ್ನ ಮಗಳಿಗೆ ಸೂಕ್ತವಾದ ವರನನ್ನು ಹುಡುಕಿಕೊಂಡು ಬರಲು ತನ್ನ ಮಂತ್ರಿಗೆ ಆದೇಶಿಸುತ್ತಾನೆ. ಇದೇ ಸಮಯದಲ್ಲಿ ಸಾಲ್ವ ದೇಶದ ರಾಜನ ಮಗನಾದ ಸತ್ಯವಾನ ಮತ್ತು ಸಾವಿತ್ರಿ ಪರಸ್ಪರ ಪ್ರೀತಿಸಿರುವ ವಿಷಯ ತಿಳಿದ ಆಕೆಯ ತಂದೆ ಅವರಿಬ್ಬರ ಜಾತಕವನ್ನು ತಮ್ಮ ಆಸ್ಥಾನಕ್ಕೆ ಬಂದಿದ್ದ ನಾರದ ಮಹರ್ಷಿಗಳ ಬಳಿ ತೋರಿಸಿದಾಗ, ಸತ್ಯವಾನನು ಅಲ್ಪಾಯುಷಿಯಾಗಿದ್ದು, ಸಾವಿತ್ರಿ ಆತನನ್ನು ಮದುವೆಯಾದ ಕೇವಲ 12 ವರ್ಷಗಳಲ್ಲಿಯೇ ವಿಧವೆಯಾಗುತ್ತಾಳೆ ಎಂಬ ಸತ್ಯವನ್ನು ಹೇಳುತ್ತಾರೆ. ಈ ವಿಷಯವನ್ನು ತನ್ನ ಮಗಳಿಗೆ ತಿಳಿದ ಆಕೆಯ ತಂದೆ, ಬೇರೊಂದು ವರನನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದರೂ, ಸಾವಿತ್ರಿ ಮಾತ್ರಾ ತನ್ನ ತಂದೆಯ ಮಾತನ್ನು ನಿರಾಕರಿಸಿ ಸತ್ಯವಾನನ್ನೇ ವಿವಾಹವಾಗಿ ತನ್ನ ಪತಿ ಮತ್ತು ಅತ್ತೆಯೊಂದಿಗೆ ಕಾಡಿನಲ್ಲೇ ವಾಸಿಸಲು ಪ್ರಾರಂಭಿಸುತ್ತಾಳೆ.

vata6ಅವರಿಬ್ಬರ ಅನ್ಯೋನ್ಯವಾದ ಸುಖಃ ದಾಂಪತ್ಯದಲ್ಲಿ 12 ವರ್ಷಗಳು ಕಳೆದದ್ದೇ ಗೊತ್ತಾಗದೆ, ವಿಧಿ ಲಿಖಿತದಂತೆ ಅದೊಂದು ದಿನ ಸತ್ಯವಾನ ದೇಹಾಂತ್ಯವಾಗುತ್ತದೆ. ನಾರದರಿಂದ ಸತ್ಯವಾನನ ಅಲ್ಪಾಯುಷ್ಯದ ಬಗ್ಗೆ ತಿಳಿದಾಗಿನಿಂದ ಸಾವಿತ್ರಿಯು ಉಪವಾಸ ವ್ರತವನ್ನು ಆಚರಿಸುತ್ತಲೇ ಬಂದಿರುತ್ತಾಳೆ. ತನ್ನ ಪತಿ ಸತ್ಯವಾನ ಮರಣಾನಂತರ ಆತನ ಪ್ರಾಣವನ್ನು ತೆಗೆದುಕೊಂಡು ಹೋಗಲು ಬಂದ ಯಮರಾಜನನ್ನೇ ಹಿಂಬಾಲಿಸಿ ಕೊಂಡೇ ಹೋಗುತ್ತಾಳೆ. ಹೀಗೆ ತನ್ನನ್ನು ಹಿಂಬಾಲಿಸಬಾರದೆಂದು ಪರಿಪರಿಯಾಗಿ ಯಮನು ಹೇಳಿದರು, ಯಮನ ಮಾತನ್ನೂ ಕೇಳಿದೇ ಅತನನ್ನೇ ಹಿಂಬಾಲಿಸುತ್ತಿದ್ದನ್ನು ಕಂಡು, ಆಕೆಯ ಪತಿ ಧರ್ಮವನ್ನು ಮೆಚ್ಚಿದ ಯಮನು ನಿನಗೆ ಯಾವ ವರಬೇಕೋ ಕೇಳಿಕೋ ಎಂದಾಗ, ಸಾವಿತ್ರಿಯು ತನ್ನ ವಯಸ್ಸಾದ ಕಣ್ಣು ಕಾಣದ ಅತ್ತೆಯವರು ತಮ್ಮ ಮಗ, ಸೊಸೆ ಮತ್ತು ಮೂಮ್ಮಕ್ಕಳನ್ನು ಆನಂದದಿಂದ ನೂರ್ಕಾಲ ನೋಡುವಂತಾಗಲೀ ಎಂದು ಅತ್ಯಂತ ಜಾಣ್ಮೆಯಿಂದ ಒಂದೇ ವರದಲ್ಲಿ ತನ್ನ ಅತ್ತೆಯವರಿಗೆ ಕಣ್ಣು ಕಾಣಿಸುವ ಹಾಗೆ ಮತ್ತು ತನ್ನ ಗಂಡನಿಗೆ ದೀರ್ಘಾಯುಷ್ಯವನ್ನೂ ಕೊಡುವಂತೆ ಕೇಳಿಕೊಂಡಿರುತ್ತಾಳೆ.

ಸತ್ಯ ಮತ್ತು ಧರ್ಮಕ್ಕೆ ಅಧಿದೇವನಾದ ಯಮನು ಕೊಟ್ಟ ಮಾತಿಗೆ ತಪ್ಪಲಾಗದೇ, ಸಾವಿತ್ರಿಯು ಕೇಳಿದ ಜಾಣ್ಮೆಯ ವರಕ್ಕೆ ಇಲ್ಲಾ ಎನ್ನಲಾಗದೇ, ಯಮರಾಜನು ಸಾವಿತ್ರಿಯ ಪತಿ ಸತ್ಯವಾನ್‌ನ ಪ್ರಾಣವನ್ನು ಕಡಲೆಕಾಳಿನ ರೂಪದಲ್ಲಿ ಪುನಃ ಆಕೆಗೆ ನೀಡುತ್ತಾನೆ. ಹಾಗಾಗಿ ವಟ ಸಾವಿತ್ರಿ ಪೂಜೆಯನ್ನು ಮಾಡುವಾಗ ನೆನೆಸಿದ ಕಡಲೆಕಾಳನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ.

ಸಾವಿತ್ರಿಯು ತನ್ನ ಪತಿ ಸತ್ಯವಾನನ ಆಯುಷ್ಯವನ್ನು ವೃದ್ಧಿ ಮಾಡಿದ ದಿನ ವೈಶಾಖ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ಆಗಿದ್ದ ಕಾರಣ, ಈ ದಿನ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಕೋರಿ ಉಪವಾಸದಿಂದ ಭಕ್ತಿ ಭಾವಗಳಿಂದ ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ಆಲದ ಮರವನ್ನೂ ಪೂಜಿಸುತ್ತಾರೆ. ಇನ್ನೂ ಕೆಲವೆಡೆ ಜೇಷ್ಠ ಮಾಸದ ಹುಣ್ಣಿಮೆಯಂದೂ ಆಚರಿಸುವ ಸಂಪ್ರದಾಯವಿದೆ. ಹೀಗೆ ಆಚರಣೆಯ ದಿನಗಳು ಬೇರೆ ಇದ್ದರೂ ವ್ರತಾಚರಣೆಯ ರೀತಿ ಬಹುತೇಕ ಒಂದೇ ಆಗಿದೆ. ಹೀಗೆ ಮಾಡುವುದರಿಂದ ತಮ್ಮ ಪತಿರಾಯರಿಗೆ ದೀರ್ಘಾಯುಷ್ಯದ ಫಲ, ಸಂತೋಷ ಮತ್ತು ಸಮೃದ್ಧಿ ಮತ್ತು ಅಖಂಡ ಸೌಭಾಗ್ಯ ಲಭಿಸುತ್ತದೆ ಎಂಬುದು ಅವರ ನಂಬಿಕೆಯಾಗಿದೆ.

ವಟ ಸಾವಿತ್ರಿ ವ್ರತದ ಪೂಜಾ ವಿಧಾನ ಈ ರೀತಿಯಾಗಿದೆ.

v2

  • ವ್ರತದ ದಿನ ಬೆಳಿಗ್ಗೆ ಮುತ್ತೈದೆಯರು ಮನೆಯನ್ನು ಸ್ವಚ್ಛಗೊಳಿ, ತಲೆ ಸ್ನಾನ ಮಾಡಿ, ಗೋಮೂತ್ರದಿಂದಾಗಲೀ ಇಲ್ಲವೇ ಮಡಿ ನೀರಿನಿಂದ ಮೆನೆಯೆಲ್ಲಾ ಸಿಂಪಡಿಸಿ ಮನೆಯನ್ನು ಪೂಜೆಗಾಗಿ ಶುದ್ಧೀಕರಿಸುತ್ತಾರೆ.
  • ಹೊಸ ಬಟ್ಟೆಯನ್ನು ತೊಟ್ಟು, ಹಣೆಗೆ ಕುಂಕುಮ, ಕೆನ್ನೆಗೆ ಅರಶಿಣ, ಮುಡಿಗೆ ಹೂ ಮುಡಿದು ಮುತ್ತೈದೆಯ ಲಕ್ಷಣದಲ್ಲಿ ಹೊಸಾ ಬಿದಿರಿನ ಬುಟ್ಟಿಯಲ್ಲಿ ಏಳು ರೀತಿಯ ನೆನಸಿದ ಕಾಳುಗಳು ಅದರಲ್ಲೂ ವಿಶೇಷವಾಗಿ ಕಡಲೇಕಾಳನ್ನು ತುಂಬಿ ಅದರ ಮಧ್ಯೆ ಬ್ರಹ್ಮನ ವಿಗ್ರಹವನ್ನು ಸ್ಥಾಪಿಸಿ ಬ್ರಹ್ಮನ ಎಡಭಾಗದಲ್ಲಿ ಸಾವಿತ್ರಿಯ ವಿಗ್ರಹವನ್ನು ಇಟ್ಟು ಕೊಂಡು ಹತ್ತಿರದ ಆಲದ ಮರದ ಕೆಳಗೆ ತೆಗೆದುಕೊಂಡು ಹೋಗಿ ಇಡುತ್ತಾರೆ.
  • ಮನೆಯಿಂದ ತೆದುಕೊಂಡು ಹೋಗಿದ್ದ ನೀರಿನಿಂದ ಆಲದ ಮರದ ಸುತ್ತಮುತ್ತಲೂ ಶುದ್ಧೀಕರಿಸಿ, ಅರಿಶಿನ ಕುಂಕುಮ, ವಿವಿಧ ಬಗೆಯ ಹೂವು ಮತ್ತು ಪತ್ರೆಗಳಿಂದ ಮತ್ತು ನೆನೆಸಿದ ಹತ್ತಿಯ ಗೆಜ್ಜೆ ವಸ್ತ್ರಗಳಿಂದ ಬ್ರಹ್ಮ ಮತ್ತು ಸಾವಿತ್ರಿಯನ್ನು ಆರಾಧಿಸಿ. ಮಂಗಲ ಸಾವಿತ್ರಿ ದೇವಿಗೆ ಅರ್ಪಿಸಿ ನೆನೆಸಿದ ಕಾಳುಗಳನ್ನು ನೈವೇದ್ಯ ಮಾಡಿ ಧೂಪ ದೀಪಗಳಿಂದ ದೇವರಿಗೆ ಮತ್ತು ವಟ ವೃಕ್ಷಕ್ಕೆ ಮಂಗಳಾರತಿಯನ್ನು ಬೆಳಗುತ್ತಾರೆ.
  • ಪೂಜೆಮುಗಿದ ನಂತರ ಆಲದ ಮರದ ಕಾಂಡದ ಸುತ್ತಲೂ ಮೂರು ಪ್ರದಕ್ಷಿಣೆ ಹಾಗಿ, ಕೆಂಪು ಅಥವಾ ಕೇಸರೀ ದಾರದಿಂದ 5, 11, 21, 51 ಅಥವಾ 108 ಬಾರಿ ಕಟ್ಟುವುದರ ಜೊತೆಗೆ ತಾಮ್ರದ ನಾಣ್ಯ ಇಲ್ಲವೇ ಯಾವುದಾದರೂ ನಾಣ್ಯವನ್ನು ಇಡುತ್ತಾರೆ.
  • ನಂತರ ವಟ ಸಾವಿತ್ರಿಯ ವ್ರತ ಕಥೆಯನ್ನು ಶ್ರವಣ ಮಾಡಿ ಅಲ್ಲಿ ನೆರೆದಿದ್ದ ಮುತ್ತೈದೆಯರಿಗೆ ಅರಿಶಿನ ಕುಂಕುಮ ಮತ್ತು ಯಥಾಶಕ್ತಿ ಕಾಣಿಕೆಯನ್ನು ನೀಡುತ್ತಾರೆ.
  • ಆಲದ ಮರದ ಪೂಜೆಯ ಮಾಡಿ ಮನೆಗೆ ಹಿಂದಿರುಗಿದ ನಂತರ ಅತ್ತೆಯವರ ಪಾದ ಮುಟ್ಟಿ ಆಶೀರ್ವಾದ ಪಡೆಯುವುದು ಸಂಪ್ರದಾಯ.
  • ಪೂಜೆಯೆಲ್ಲವೂ ಸಾಂಗೋಪಾಂಗವಾಗಿ ನಡೆದ ನಂತ್ರ ಬಿದಿರಿನ ಬುಟ್ಟಿಯಲ್ಲಿ ವಸ್ತ್ರ, ಹಣ್ಣು ಮತ್ತು ನೆನಿಸಿಟ್ಟಿದ್ದ ಕಾಳುಗಳನ್ನು ಊರ ಪುರೋಹಿತರಿಗೋ ಇಲ್ಲವೇ ಬ್ರಾಹ್ಮಣರಿಗೆ ದಾನ ಮಾಡುವ ಮೂಲಕ ಪೂಜೆಯು ಸಂಪನ್ನವಾಗುತ್ತದೆ.
  • ಪೂಜೆಯ ನಂತರ ಇಡೀ ದಿನ ಉಪವಾಸ ಮಾಡುತ್ತಾ ತಮ್ಮ ಪತಿರಾಯರ ದೀರ್ಘಾಯುಷ್ಯಕ್ಕೆ ಮುತ್ತೈದೆಯರು ಪ್ರಾರ್ಥಿಸುತ್ತಾರೆ.vata_vrukshaಅನಾದಿ ಕಾಲದಿಂದ ವಟ ಸಾವಿತ್ರಿ ವ್ರತವನ್ನು ಆಚರಿಸಿಕೊಂಡು ಬರಲಾಗುತ್ತಿದ್ದರೂ ಕೆಲ ದಶಕಗಳಿಂದ ಆಲದ ಮರವನ್ನು ಪೂಜಿಸುವ ವಾಡಿಕೆ ರೂಢಿಗೆ ಬಂದಿದೆ. ಈ ರೀತಿ ಆಲದ ಮರ ಪೂಜಿಸಲೂ ಕುತೂಹಲವಾದ ಕಾರಣವಿದೆ. ಸಾವಿತ್ರಿಯು ತನ್ನ ಗಂಡ ಮರಣ ಹೊಂದಿದ ಸಮಯದಲ್ಲಿ ಆತನ ಮೃತ ದೇಹವನ್ನು ಆಲದ ಮರದ ಕೆಳಗೆ ತನ್ನ ಮಡಿಲಲ್ಲೇ ಇಟ್ಟುಕೊಂಡು ಹಾನಿಯಾಗದಂತೆ ಕಾಪಾಡಿದ ಕಾರಣ ಆಲದ ಮರವನ್ನು ಪೂಜಿಸುವ ಪರಿಪಾಠ ಬೆಳೆದಿದೆ ಎನ್ನುಲಾದಾರೂ, ಶಾಸ್ತ್ರದ ಪ್ರಕಾರ, ಆಲದ ಮರದಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ವಾಸವಾಗಿರುವುದರಿಂದ ಇದನ್ನು ಪೂಜಿಸಿದರೆ ಗಂಡನ ಆಯಸ್ಸು ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.

ಮನೆಯ ಹತ್ತಿರ ವಟ ವಟವೃಕ್ಷ ಇಲ್ಲದಿದ್ದ ಪಕ್ಷದಲ್ಲಿ ಕೆಲವರು ವಟವೃಕ್ಷದ ಟೊಂಗೆಯನ್ನು ಮನೆಯೊಳಗೆ ತಂದು ಪೂಜಿಸುತ್ತಾದರೂ ಇದರಿಂದ ಅಳುದುಳಿದ ವಟವೃಕ್ಷಗಳನ್ನು ನಾಶ ಮಾಡುವ ಕಾರಣ, ವ್ರತವನ್ನು ಅರ್ಥಪೂರ್ಣವಾಗಿಸುವುದಿಲ್ಲ. ಅದರ ಬದಲು ಸಾಂಕೇತಿಕವಾಗಿ ಮನೆಯಲ್ಲೇ ಶುದ್ಧೀಕರಿಸಿದ ಜಾಗದಲ್ಲಿ ಸಾರಿಸಿ ರಂಗೋಲಿಯಲ್ಲಿ ಚೌಕವನ್ನು ಬರೆದು ಪೂರ್ವ ಪಶ್ಚಿಮವಾಗಿ ಅದರ ಮೇಲೆ ಮಣೆ ಇಟ್ಟು ಅದರ ಮೇಲೆ ಗಂಧದಿಂದ ಅಲದ ಮರದ ಚಿತ್ರವನ್ನು ಬಿಡಿಸಿ ಅದರ ಮುಂದೆ ಬುಟ್ಟಿ, ಬ್ರಹ್ಮ ಮತ್ತು ಸಾವಿತ್ರಿಯ ವಿಗ್ರಹಗಳನ್ನು ಇಟ್ಟು ಭಕ್ತಿಯಿಂದ ಪೂಜಿಸಿದಲ್ಲಿ ವ್ರತವು ಸಾರ್ಥಕವಾಗುತ್ತದೆ.

ಯಾವುದೇ ಪೂಜೆಗಳನ್ನು ಆಡಂಬರವಿಲ್ಲದೇ, ಶ್ರದ್ಧಾ ಭಕ್ತಿಗಳಿಂದ ಶುದ್ಧ ಮನಸ್ಸಿನಿಂದ ಮಾಡಿದಲ್ಲಿ ಪೂಜೆಯು ಸಂಪನ್ನವಾಗಿ ಭಗವಂತನಿಗೆ ತಲುಪುತ್ತದೆ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s