ಅಹಲ್ಯಬಾಯಿ ಹೋಳ್ಕರ್

ah1ಭಾರತದ ವೀರ ವನಿತೆಯರು ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸೀರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ, ಚನ್ನಭೈರಾದೇವಿ ಮುಂತಾದ ಮಹಾರಾಣಿಯರು. ಇದೇ ಪ್ರಾಥಃಸ್ಮರಣೀಯರ ಸಾಲಿಗೆ ಸೇರಬಹುದಾದ ಮತ್ತೊಬ್ಬ ಗೌರವಾನ್ವಿತರೇ, ಅಹಲ್ಯಬಾಯಿ ಎಂದರೂ ತಪ್ಪಾಗದು. ಹೋಳ್ಕರ್ ವಂಶದ ಮುಲ್ಲಾರ್ ರಾವ್ ಹೋಳ್ಕರನ ಮಗ ಖಂಡೇರಾಯನ ಪತ್ನಿಯಾಗಿ ತನ್ನ ಪತಿಯ ಮರಣಾನಂತರ ರಾಜ್ಯಭಾರಗಳನ್ನು (1754-1795)ತನ್ನ ತೆಕ್ಕೆಗೆ ತೆಗೆದುಕೊಂಡು 34 ವರ್ಷಗಳ ಕಾಲ ರಾಜ್ಯವನ್ನು ಆದರ್ಶ ರೀತಿಯಲ್ಲಿ ಆಳಿದ್ದಲ್ಲದೇ, ಮೊಘಲ ಧಾಳಿಯಿಂದ ಭಾರತದಾದ್ಯಂತ ನಾಶವಾಗಿದ್ದ ನೂರಾರು ದೇವಾಲಯಗಳು ಮತ್ತು ಧರ್ಮಶಾಲೆಗಳನ್ನು ಪುನರ್ನಿಮಿಸಿದ ಮಹಾನ್ ಹಿಂದೂ ಪ್ರವರ್ತಕಿ. ಅಕೆಯ ಜನ್ಮದಿನಂದು ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಯಶೋಗಾಥೆಗಳನ್ನು ಮೆಲುಕು ಹಾಕುವ ಮೂಲಕ ಆಕೆಗೆ ನಮ್ಮ ಪ್ರಣಾಮಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವೇ ಆಗಿದೆ.

ಮಹಾರಾಷ್ಟ್ರದ ಅಹ್ಮದ್ ನಗರದ ಜಮ್ ಖೇಡ್ ನ ಚೋಂಡಿ ಎಂಬ ಪುಟ್ಟ ಹಳ್ಳಿಯ ಪಟೇಲ್ ಅರ್ಥಾತ್ ಮುಖ್ಯಸ್ಥರಾಗಿದ್ದ ಮಂಕೋಜಿ ರಾವ್ ಶಿಂಧೆ ಮತ್ತು ಸುಶೀಲಾ ಶಿಂಧೆಯವರ ಮಗಳಾಗಿ 1725 ರ ಮೇ 31 ರಂದಲ್ಲಿ ಅಹಲ್ಯಾಬಾಯಿಯುವರ ಜನನವಾಗುತ್ತದೆ. ಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗೆ ಬಿಡಿ ಗಂಡು ಮಕ್ಕಳಿಗೇ ಶಿಕ್ಷಣ ದೂರೆಯುವುದು ಕಷ್ಟಕರವಾಗಿದ್ದ ಸಮಯದಲ್ಲೇ, ಮನೆಯೇ ಮೊದಲ ಪಾಠಶಾಲೆ. ತಂದೆ ತಾಯಿಯರೇ ಮೊದಲ ಗುರುಗಳು ಎನ್ನುವಂತೆ ಆಕೆಯ ತಂದೆಯೇ ತಮ್ಮ ಮಗಳಿಗೆ ಗುರುವಾಗಿ ಓದು ಬರಹದ ಜೊತೆ ಭಾಷಾಜ್ಞಾನ, ವ್ಯಾವಹಾರಿಕ ಶಿಕ್ಷಣ ಹಾಗೂ ತನ್ನ ಆತ್ಮ ರಕ್ಷಣೆಗಾಗಿ ಯುದ್ಧ ಕಲೆಗಳನ್ನು ಕಲಿತು ರಾಷ್ಟ್ರಾಭಿಮಾನಿಯಾಗುವುದರ ಜೊತೆಯಲ್ಲಿಯೇ ತಾಯಿಯಿಂದ ದೈವ ಭಕ್ತಿ ಮೂಡಿ ಬಂದು ಸನಾತನ ಧರ್ಮದ ಪರಿಪಾಲಕಿಯಾಗಿಯೂ ಕರುಣಾಮಯಿ, ಮಾತೃಹೃದಯಿಯಾಗುವುದರ ಜೊತೆಗೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ದಿಟ್ಟೆ ಮತ್ತು ಸಾಹಸಿಯಾಗಿ ರೂಪುಗೊಳ್ಳುತ್ತಾಳೆ.

ah2ಆಕೆಯ ಸಣ್ಣ ವಯಸ್ಸಿನಲ್ಲಿಯೇ ಪ್ರತಿನಿತ್ಯವೂ ತಮ್ಮೂರಿನ ದೇವಾಲಯದಲ್ಲಿ ಬಡವರಿಗೆ ಮತ್ತು ಹಸಿವಾದವರಿಗೆ ಅನ್ನ ದಾಸೋಹ ಮಾಡುತ್ತಿದ್ದ ಅವರ ತಂದೆಯೊಂದಿಗೆ ಆಕೆಯೂ ಊರಿನ ದೇವಾಲಯಕ್ಕೆ ಹೋಗಿ ತಂದೆಯ ಆ ಪುಣ್ಯ ಕಾರ್ಯದಲ್ಲಿ ಭಾಗಿಯಾಗುತ್ತಿರುತ್ತಾಳೆ. ಅದೊಮ್ಮೆ ಒಂದನೇ ಪೇಶ್ವೆ ಬಾಜೀರಾವ್ ನ ಆಡಳಿತದಲ್ಲಿ ವೀರ ಸೇನಾನಿಯಾಗಿದ್ದ ಮಾಲ್ವಾ ಪ್ರದೇಶದವರಿಗೆ ಅಕ್ಷರಶಃ ದೇವರೇ ಎನಿಸಿಕೊಂಡಿದ್ದ ಮಲ್ಹಾರ್ ರಾವ್ ಹೋಳ್ಕರ್, ಅಹಲ್ಯಾಬಾಯಿಯವರ ಜಮ್ ಖೇಡ್ ಮಾರ್ಗವಾಗಿ ಪುಣೆಗೆ ಹೋಗುವಾಗ ಇದೇ ಅನ್ನ ಸಂತರ್ಪಣೆ ಕಾರ್ಯದಲ್ಲಿ ಭಾಗಿಯಾಗುವ ಸಂಧರ್ಭದಲ್ಲಿ ಅತ್ಯಂತ ಚುರುಕಾಗಿ ಓಡಾಡುತ್ತಿದ್ದ ಆ ಎಂಟು ವರ್ಷದ ಪುಟ್ಟ ಬಾಲಕಿಯತ್ತ ಆಕರ್ಷಿತರಾಗಿ ಆಶ್ಚರ್ಯದಿಂದ ಅಲ್ಲಿದ್ದವರ ಬಳಿ ಆಕೆಯ ಬಗ್ಗೆ ವಿಚಾರಿಸಿ ಅಕೆಯ ಸದ್ಗುಣಗಳಿಂದ ಪ್ರಭಾವಿತನಾಗಿ ಆಕೆ ತನ್ನ ಮಗ ಖಂಡೇರಾವ್ ಹೋಳ್ಕರಿಗೆ ಸೂಕ್ತವಾದ ಕನ್ಯೆ ಎಂದು ತಿಳಿದು ಆಕೆಯ ತಂದಯ ಬಳಿ ಕನ್ಯಾದಾನ ಮಾಡಿಕೊಡಲು ನಿವೇದಿಸಿಕೊಂಡಾಗ ಅದಕ್ಕೆ ಸಂತೋಷದಿಂದ ಒಪ್ಪಿದ ಮಂಕೋಜಿ ರಾವ್ ಶಿಂಧೆ 1733 ರಲ್ಲಿ ತನ್ನ ಎಂಟು ವರ್ಷದ ಮುದ್ದು ಮಗಳಾದ ಅಹಲ್ಯಾಬಾಯಿಯನ್ನು ಮಲ್ಹಾರ್ ರಾವ್ ಹೋಳ್ಕರ್ ಪುತ್ರನಾದ ಖಂಡೇರಾವ್ ಹೋಳ್ಕರ್ ನೊಂದಿಗೆ ವಿವಾಹ ಮಾಡಿಕೊಟ್ಟ ಪರಿಣಾಮ ಅಹಲ್ಯಾ ಬಾಯಿ ಹೋಳ್ಕರ್ ಸಂಸ್ಥಾನದ ಮುದ್ದಿನ ಸೊಸೆಯಾಗಿ ಮಾಲ್ವಾಗೆ ಬಂದು ತನ್ನ ಸಂಸಾರ ಆರಂಭಿಸುತ್ತಾಳೆ. ಸತಿಪತಿಗಳ ಅನ್ಯೋನ್ಯ ದಾಂಪತ್ಯದ ಕುರುಹಾಗಿ ಅಹಲ್ಯಾಬಾಯಿ ಮತ್ತು ಖಂಡೇರಾವ್ ದಂಪತಿಗಳಿಗೆ 1745 ರಲ್ಲಿ ಮಾಲೇರಾವ್ ಹೋಳ್ಕರ್ ಎಂಬ ಮಗ ಮತ್ತು 1748 ರಲ್ಲಿ ಮುಕ್ತಾಬಾಯಿ ಹೋಳ್ಕರ್ ಎಂಬ ಮಕ್ಕಳಾಗಿ, ಮಗ ಮಾಲೇರಾವ್ ಹೋಳ್ಕರ್ ಜನ್ಮತಃ ಮಾನಸಿಕ ಅಸ್ವಸ್ಥತೆ ಮತ್ತು ದೈಹಿಕ ದುರ್ಬಲತೆಯನ್ನು ಹೊಂದಿರುತ್ತಾನೆ.

1754 ರಲ್ಲಿ, ಇಮಾದ್-ಉಲ್-ಮುಲ್ಕ್ ಮತ್ತು ಮೊಘಲ್ ಚಕ್ರವರ್ತಿ ಅಹ್ಮದ್ ಷಾ ಬಹದ್ದೂರ್ ಅವರ ಸೇನಾಪತಿ ಮೀರ್ ಭಕ್ಷಿ ಅವರ ಬೆಂಬಲದ ಕೋರಿಕೆಯ ಮೇರೆಗೆ ಖಂಡೇ ರಾವ್ ಮತ್ತು ಮಲ್ಹಾರ್ ರಾವ್ ಹೋಲ್ಕರ್ ಭರತ್‌ಪುರದ ಜಾಟ್ ರಾಜಾ ಸೂರಜ್ ಮಾಲ್‌ನ ಕುಮ್ಹೇರ್ ಕೋಟೆಯನ್ನು ಮುತ್ತಿಗೆ ಹಾಕುತ್ತಾರೆ. ಮೊಘಲ್ ಚಕ್ರವರ್ತಿಯ ಬಂಡಾಯಗಾರ ವಜೀರ್ ಸಫ್ದರ್ ಜಂಗ್ ಪರವಾಗಿದ್ದ ಸೂರಜ್ ಮಾಲ್ ನ ಜೊತೆ ನಡೆಯುತ್ತಿದ್ದ ಯುದ್ಧದ ಸಮಯದಲ್ಲಿ ತೆರೆದ ಪಲ್ಲಕ್ಕಿಯಲ್ಲಿ ತನ್ನ ಸೈನ್ಯವನ್ನು ಪರಿಶೀಲಿಸುತ್ತಿದ್ದಾಗ ಜಾಟ್ ಸೈನ್ಯದವರು ಫಿರಂಗಿಯಿಂದ ಹಾರಿಸಿದ ಗುಂಡು ಖಂಡೇ ರಾವ್ ಗೆ ಬಡಿದು ಆತ ಸ್ಥಳದಲ್ಲೇ ಮೃತನಾಗುತ್ತಾನೆ. ತನ್ನ ಮಗನ ಮರಣದ ನಂತರ ತನ್ನ ಸೊಸೆ ಅಹಲ್ಯಾ ಬಾಯಿ ಮಗನ ಚಿತೆಯೊಂದಿಗೆ ಸತಿ ಸಹಗಮನವಾಗುವುದನ್ನು ನಿಲ್ಲಿಸಿದ ಮಾವ ಮಲ್ಹಾರ್ ಹೋಳ್ಕರ್ ನಂತರ ತನ್ನ ಸೊಸೆಗೆ ಯುದ್ದದಲ್ಲಿ ಶಸ್ತ್ರಾಸ್ತ್ರಗಳ ಕುರಿತಾಗಿ ತರಬೇತಿ ಮತ್ತು ರಾಜ್ಯಸೂತ್ರಗಳನ್ನು ಕಲಿಸಿದ ನಂತರ ಅಥಿಕೃತವಾಗಿ ಅಕೆಯನ್ನೇ ಇಂದೋರ್ ನ ಮಹಾರಾಣಿಯಾಗಿ ಪಟ್ಟಾಭಿಷೇಕ ಮಾಡುವ ಮೂಲಕ ಮಾಲ್ವ ಪ್ರಾಂತ್ಯದ ಸಮಸ್ತ ಅಧಿಕಾರವನ್ನು ಆಕೆಗೆ ಹಸ್ತಾಂತರಿಸಿ ತಮ್ಮ ಜವಾಬ್ದಾರಿಯಿಂದ ವಿಮುಕ್ತಿ ಹೊಂದುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಮಲ್ಹಾರ್ ರಾವ್ ಹೋಳ್ಕರ್ ವಯೋಸಹಜವಾಗಿ ಸಾವನ್ನಪ್ಪಿದ ನಂತರ ಅಕೆಯ ಜವಾಬ್ಧಾರಿ ಮತ್ತಷ್ಟು ಹೆಚ್ಚುತ್ತದೆ.

a1ತನಗೆ ಸಿಕ್ಕ ಅಧಿಕಾರವನ್ನು ಅತ್ಯಂತ ದಕ್ಷತೆಯಿಂದ ಒಳಾಡಳಿತ ಸರ್ಕಾರವನ್ನು ಸ್ಥಾಪಿಸಿ ಶಾಂತಿಯನ್ನು ನೆಲೆಗೊಳಿಸಿದಳು. ಪ್ರಜೆಗಳ ರಕ್ಷಣೆಯೇ ಆಕೆಯ ಮುಖ್ಯ ಧ್ಯೇಯವಾಗಿತ್ತು. ಆಕೆಯ ಕಾಲದಲ್ಲೇ ಮಾಳವ ಪ್ರಾಂತ್ಯದಲ್ಲಿ ಅತ್ಯಂತ ಸುಖೀ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾಯಿತು. ಅಧಿಕಾರದ ದುರಭಿಮಾನದ ಲವಲೇಶವೂ ಇಲ್ಲದೇ, ಉದಾರಚರಿತಳೂ, ಧರ್ಮಿಷ್ಠಳೂ ಆಗಿ ಎಲ್ಲಾ ಮತ ಗ್ರಂಥಗಳ ಅಧ್ಯಯನ ಮಾಡಿ ಅತ್ಯಂತ ದಕ್ಷತೆಯಿಂದ ರಾಜ್ಯವನ್ನು ಆಳಿದಳು ಎಂದು ಬ್ರಿಟಿಷ್ ಇತಿಹಾಸಕಾರ ಸರ್ ಜಾನ್ ಮ್ಯಾಲ್ಕೋಮ್ ಆಕೆಯ ಬಗ್ಗೆ ಹೇಳಿರುವುದು ಗಮನಾರ್ಹವಾಗಿದೆ.

ah3ಅಹಲ್ಯಬಾಯಿ ಇಂದೋರ್ ನ ಆಂತರಿಕ ಭದ್ರತಾ ಉಸ್ತುವಾರಿಯನ್ನು ಮಲ್ಹಾರ್ ರಾವ್ ಹೋಳ್ಕರ್ ಅವರ ದತ್ತು ಪುತ್ರನಾಗಿದ್ದ ತನ್ನ ಮೈದುನ ತುಕೋಜಿ ರಾವ್ ಹೋಳ್ಕರನಿಗೆ ವಹಿಸಿ ಖಡ್ಗ ಹಿಡಿದು ಕುದುರೆಯೇರಿ ಪೂರ್ತಿ ಭಾರತ ಪರ್ಯಟನೆ ಮಾಡಿ ದೇಶದ್ರೋಹಿಗಳ ದಾಳಿಗೆ ಸಿಲುಕಿ ಧ್ವಂಸಗೊಂಡ ಸಾವಿರಾರು ಹಿಂದೂ ದೇವಾಲಯಗಳನ್ನು ರಕ್ಷಿಸಿ ಪುನರುತ್ಥಾನ ಕಲ್ಪಿಸುವ ಮೂಲಕ ಸನಾತನ ಧರ್ಮ ಪರಿಪಾಲನೆಯ ಮಹತ್ಕಾರ್ಯದಲ್ಲಿ ತೊಡಗುತ್ತಾಳೆ. ಇದೇ ಮಹಾರಾಣಿ ಅಹಲ್ಯಾಬಾಯಿಯ ಕಾಲದಲ್ಲೇ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳು, ಹರಿದ್ವಾರ, ಹೃಷಿಕೇಶ, ಬದರೀನಾಥ, ಕಾಂಚಿ, ಅಯೋಧ್ಯ, ಅವಂತಿ,ದ್ವಾರಕಾ, ಮಥುರಾ,ಗಯಾ, ರಾಮೇಶ್ವರ ಹಾಗೂ ಪುರಿ ಜಗನ್ನಾಥ್ ಸಹಿತವಾಗಿ ಸುಮಾರು 3500ಕ್ಕೂ ಅಧಿಕವಾದ ಶಿವ ಮತ್ತು ರಾಮ ದೇವರ ಚಿಕ್ಕಪುಟ್ಟ ಗುಡಿ ಗೋಪುರಗಳು ಪುನರುಜ್ಜೀವನ ಗೊಳ್ಳುತ್ತದೆ.

ah_kaashiಮೊಘಲರ ಆಳ್ವಿಕೆಯಲ್ಲಿ ಬಹುಶಃ ಕಾಶಿ ವಿಶ್ವನಾಥ ದೇವಾಲಯದಷ್ಟು ದಾಳಿಗೊಳಗಾಗಿ ಹಾನಿಗೊಳಗಾದಷ್ಟು ಬೇರಾವ ದೇವಾಲಯವೂ ಆಗಿಲ್ಲ ಎನ್ನುವುದು ದುಃಖಕರವಾದ ವಿಷಯವಾಗಿದೆ. ಮೊಹಮ್ಮದ್ ಗೋರಿಯ ಆದೇಶದಂತೆ ಕುತುಬುದ್ದೀನ್ ಐಬಕ್ ದೇವಾಲಯವನ್ನು ಕೆಡವಿದಾಗ ಅದನ್ನು ರಾಜಾ ಮಾನ್‌ಸಿಂಗ್‌ ಪುನರ್ನಿರ್ಮಾಣ ಮಾಡಿದ್ದರೆ, ಅಕ್ಬರನ ಮರಿಮಗ ಔರಂಗಜೇಬ್ ತನ್ನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ಉರುಳಿಸಿ ಅಲ್ಲಿ ನಿರ್ಮಿಸಿದ ಗ್ಯಾನವಾಪಿ ಮಸೀದಿಯ ಕುರಿತಂತೆ ಪ್ರಸ್ತುತ ವಿಚಾರಣೆಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಹಾಗೆ ಔರಂಗಜೇಬನಿಂದ ನಾಶವಾದ 111 ವರ್ಷಗಳ ನಂತರ ಅವಳು 1780 ರಲ್ಲಿ ರಾಣಿ ಅಹಲ್ಯಾ ಬಾಯಿ ಹೋಲ್ಕರಳಿಗೆ ಶಿವನು ಕನಸಿನಲ್ಲಿ ಬಂದು ಆದೇಶ ನೀಡಿದ ನಂತರ ರಾಣಿಯು ಕಾಶಿಯ ಗಥವೈಭವವನ್ನು ಮರಳಿಸಬೇಕೆಂದು ನಿರ್ಧರಿಸಿ ಅದರ ಪುನರ್ನಿರ್ಮಾಣಕ್ಕೆ ಲಕ್ಷಾಂತರ ದೇಣಿಗೆ ನೀಡಿದ್ದಲ್ಲದೇ ನಂತರ ಇಂಧೋರ್‌ನ ಮಹಾರಾಜ ರಂಜಿತ್ ಸಿಂಗ್ ಕೂಡಾ ಈ ದೇವಾಲಯದ 4 ಚಿನ್ನದ ಕಂಬಗಳಿಗಾಗಿ ಸುಮಾರು 10 ಟನ್‌ನಷ್ಟು ಬಂಗಾರವನ್ನು ನೀಡಿ ದೇವಾಲಯವನ್ನು ಪುನರ್ನಿಮಾಣ ಮಾಡಿದ್ದದ್ದು ಈಗ ಇತಿಹಾಸ.

ಕೇವಲ ಹಿಂದೂ ದೇವಾಲಯಗಳನ್ನು ಮೋಘಲರಿಂದ ರಕ್ಷಿಸಿ ಪುನರುತ್ಥಾನ ಮಾಡಿದ್ದಲ್ಲದೇ, ತನ್ನ ಆಡಳಿತಾವಧಿಯಲ್ಲಿ ಇಂದೋರ್ ಮತ್ತು ಅದರ ಆಸುಪಾಸಿನ ಅನೇಕ ಹಳ್ಳಿಗಳಲ್ಲಿ ಕೆರೆ ಭಾವಿಗಳನ್ನು ನಿರ್ಮಾಣ ಮಾಡುವ ಮೂಲಕ ಆ ಪ್ರದೇಶಗಳೆಲ್ಲವು ಸದಾಕಾಲವೂ ಕೃಷ್ಟಿ ಚಟುವಟಿಕೆಗಳಿಂದ ಸಮೃದ್ಧವಾಗಿರುವಂತೆ ನೋಡಿಕೊಂಡಿದ್ದಳು. ಸದಾ ಪ್ರಜೆಗಳ ಅಹವಾಲು ಆಲಿಸಿ ಅವರ ಅಗತ್ಯಗಳನ್ನು ಅರಿತು ಪೂರೈಸಿ, ಕಾಲಕಾಲಕ್ಕೆ ಅವರ ವ್ಯಾಪಾರ ವಹಿವಾಟುಗಳಿಗೆ ಎಲ್ಲ ರೀತಿಯಿಂದ ಸಹಕರಿಸುವುದೇ ಅಹಲ್ಯಾಬಾಯಿಯ ಮುಖ್ಯ ಧ್ಯೇಯವಾಗಿತ್ತು.

Rule is a Rule even for a Fool ಎನ್ನುವ ಆಂಗ್ಲ ನಾನ್ನುಡಿಯಂತೆ ತನ್ನ ರಾಜ್ಯದಲ್ಲಿರುವ ಕಾನೂನುಗಳು ತನ್ನ ಕುಟುಂಬಕ್ಕೂ ಅನ್ವಯವಾಗುತ್ತದೆ ಎಂದು ಭಾವಿಸಿದ ಕಾರಣ ಆಕೆ ತನ್ನ ಪ್ರಜೆಗಳ ಪಾಲಿಗೆ ನಿಜವಾಗಿಯೂ ಮಹಾತಾಯಿ ಆಗಿದ್ದಳು ಎನ್ನುವುದಕ್ಕೆ ಈ ಪ್ರಸಂಗವೇ ಸಾಕ್ಷಿ. ಅದೊಮ್ಮೆ ಅಕೆಯ ಮಾನಸಿಕ ಅಸ್ವಸ್ಥ ಮಗ ಮಾಲೇರಾವ್ ಅಡ್ಡಾದಿಡ್ಡಿಯಾಗಿ ರಥ ನಡೆಸುತ್ತಾ, ಜೋಲಿ ತಪ್ಪಿ ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಹಸುವಿನ ಕರುವಿನ ಮೇಲೆ ಹಾಯಿಸಿದ ಕಾರಣ ಆ ಕರು ಸತ್ತುಹೋಗುತ್ತದೆ. ಈ ವಿಷಯವನ್ನು ಅರಿತ ಅಹಲ್ಯಾಬಾಯಿ, ಆ ಕರುವಿಗಾದ ನೋವು ತನ್ನ ಮಗನಿಗೂ ಆಗ ಬೇಕು ಎಂದು ನಿರ್ಧರಿಸಿ, ಆ ಕರು ಸತ್ತ ರಸ್ತೆಯಲ್ಲಿಯೇ ತನ್ನ ಮಗನನ್ನು ಮಲಗಿಸಿ ಆತನ ಮೇಲೆ ತನ್ನ ರಥವನ್ನು ಹಾಯಿಸಿ ಸಾಯಿಸಲು ಪ್ರಯತ್ನಿಸಿದ್ದನ್ನು ಗಮನಿಸಿದ ಇತರರು ಆಕೆಯನ್ನು ತಡೆಯುತ್ತಾಳೆ. ಈ ಘಟನೆಯು ಅಹಲ್ಯಾಬಾಯಿಯ ಧರ್ಮನಿಷ್ಠ ಆಡಳಿತಕ್ಕೆ ಸಾಕ್ಷಿಯಾಗಿದೆ. ಚಿಕ್ಕಂದಿನಿಂದಲೂ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ 1767 ರಲ್ಲಿ ಚಿಕ್ಕವಯಸ್ಸಿನಲ್ಲಿಯೇ ಆತ ಮೃತನಾಗುತ್ತಾನೆ. ಇಂದಿಗೂ ಇಂದೋರಿನಲ್ಲಿ ಈ ಘಟನೆ ನಡೆದ ಪ್ರದೇಶವನ್ನು ಅಡ್ಡ ಬಝಾರ್ ಎಂದೇ ಕರೆಯಲಾಗುತ್ತದೆ. ಮುಂದೆ ತನ್ನ ಸಂಸ್ಥಾನದಲ್ಲಿ ಡಕಾಯಿತರು ಏಕಾಏಕಿಯಾಗಿ ಹಳ್ಳಿಗಳಿಗೆ ನುಗ್ಗಿ ಹಳ್ಳಿಗರನ್ನು ದೋಚುತ್ತಿದ್ದಾಗ ಅಂತಹ ಡಕಾಯಿತರನ್ನು ಧೈರ್ಯದಿಂದ ಎದುರಿಸಿ ಅವರನ್ನು ಸೋಲಿಸುವಲ್ಲಿ ಸಫಲನಾದ ಯಶವಂತ ರಾವ್‌ ಎಂಬ ಅನಾಥ ಸಾಮಾನ್ಯ ಬಡವನ ಸಾಹಸ ಮತ್ತು ಧೈರ್ಯತನಕ್ಕೆ ಮೆಚ್ಚಿ ಆತನೊಂದಿಗೆ ತನ್ನ ಮಗಳನ್ನು ಮದುವೆ ಮಾಡಿಸಿ ತನ್ನ ಅಳಿಯನನ್ನಾಗಿ ಮಾಡಿಕೊಂಡು, ತನ್ನ ರಾಜಧಾನಿ ಮಾಹೇಶ್ವರದ ಆಡಳಿತದಲ್ಲಿ ಕೆಲವು ಜವಾಬ್ದಾರಿ ವಹಿಸಿ ಯಶವಂತ್ ನನ್ನು ತನ್ನ ಕುಟುಂಬದ ಒಬ್ಬ ಸದಸ್ಯನನ್ನಾಗಿ ಕಾಣುತ್ತಾಳೆ.

ಪತಿ ಮತ್ತು ಪುತ್ರ ವಿಯೋಗದಿಂದ ದುಃಖಿತಳಾಗಿದ್ದ ಅಹಲ್ಯಾಬಾಯಿಯನ್ನು ನೋಡಿದ ಕುಟಿಲ ಬುದ್ಧಿಯ ಗಂಗಾಧರ ಎಂಬಾತನು, ಒಬ್ಬ ಹೆಣ್ಣಾಗಿ ರಾಜ್ಯವಾಳುವುದು ಕಷ್ಟಕರವಾದ್ದರಿಂದ ಗಂಡು ಮಗುವೊಂದನ್ನು ದತ್ತು ತೆಗೆದುಕೊಂಡು ಬೆಳೆಸು. ಅವನು ವಯಸ್ಸಿಗೆ ಬರುವವರೆಗೆ ನಾನೇ ಆಳ್ವಿಕೆ ನಡೆಸುತ್ತೇನೆ ಎಂದಾಗ, ಅವನಿಗೆ ಬೈಯ್ದು ಕಳುಹಿಸಿದ್ದರಿಂದ ಕುಪೀತನಾಗಿ ಪೇಶ್ವೆ ಮಾಧವರಾವ್ ಅವರ ತಮ್ಮ ರಘುನಾಥ ರಾವ್ ಅವರಿಗೆ ಗಂಡು ದಿಕ್ಕಿಲ್ಲದ ಇಂದೋರ್ ವಶ ಪಡಿಸಿಕೊಳ್ಳಲು ಇದೇ ಸುಲಭವಕಾಶ ಎಂದು ಪತ್ರ ಬರೆಯುತ್ತಾನೆ. ಆ ಪತ್ರವನ್ನು ಕಂಡು ರಘುನಾಥನು ತನ್ನ ಸೇನೆಯೊಂದಿಗೆ ಇಂದೋರ್ ಮೇಲೆ ಧಾಳಿ ಮಾಡಲು ಸಿದ್ಧವಾಗುವ ವಿಷಯ ಗುಪ್ತಚರರ ಮೂಲಕ ಅಹಲ್ಯಾಬಾಯಿಗೆ ತಿಳಿದು ಇದು ಗಂಗಾಧರನ ಕುಟಿಲ ತಂತ್ರ ಎಂಬುದನ್ನೂ ಅರಿತು, ಕೂಡಲೇ ತನ್ನ ಸುತ್ತಮುತ್ತಲ ಗಾಯಕವಾಡ್, ದಾಬಾಡೇ, ಭೋಂಸ್ಲೆ ಸಾಮಂತ ರಾಜರ ಸಹಾಯದೊಂದಿಗೆ ದೊಡ್ಡದಾದ ಸೈನ್ಯವನ್ನು ಕಟ್ಟಿ ಯುದ್ದಕ್ಕೆ ಸಿದ್ದಳಾದರೂ, ಯುದ್ದವನ್ನು ಮಾಡದೇ ಶತ್ರುವನ್ನು ಹಿಮ್ಮೆಟ್ಟಿರುವ ಯುಕ್ತಿಯನ್ನು ಪ್ರಯೋಗಿಸುತ್ತಾಳೆ.

ಅದರ ಪ್ರಕಾರ ರಘುನಾಥನಿಗೆ ಪತ್ರವೊಂದನ್ನು ಬರೆದು, ನಿಮ್ಮ ವಿರುದ್ಧ ಹೋರಾಡಲು ತನ್ನ ಬಳಿ ಈ ಪ್ರಮಾಣದ ಸೈನ್ಯವು ಸಿದ್ಧವಾಗಿದ್ದು ಮೀಸೆ ಹೊತ್ತ ಗಂಡಸರಾದ ನೀವು, ನನ್ನಂತಹ ಹೆಣ್ಣೊಬ್ಬಳಿಂದ ಸೋತು ಹೋದಲ್ಲಿ ತಲೆತಲಾಂತರದವರೆಗೂ ಆ ಅಪಕೀರ್ತಿ ನಿಮಗೆ ಕಾಡುವ ಕಾರಣ, ನಮ್ಮೊಂದಿಗೆ ಯುದ್ದಮಾಡುವ ಮುನ್ನಾ ಸರಿಯಾಗಿ ಯೋಚಿಸುವುದು ಉತ್ತಮ ಎಂದಿರುತ್ತದೆ. ಆಕೆಯ ಪತ್ರದಿಂದ ಮುಜುಗೊರಕ್ಕೊಳಗಾದ ರಘುನಾಥನು ಜೆಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ, ಪತಿ ಮತ್ತು ಪುತ್ರನ ವಿಯೋಗದಿಂದ ದುಃಖತವಾಗಿದ್ದ ನಿಮಗೆ ಸಾಂತ್ವನ ಹೇಳುವ ಸಲುವಾಗಿ ನಾವು ಬಂದೆವೇ ಹೊರತು ನಿಮ್ಮೊಂದಿಗೆ ಹೋರಾಟ ಮಾಡಲು ಅಲ್ಲಾ ಎಂದು ಪತ್ರ ಬರೆದು, ಯುದ್ಧದಿಂದ ಹಿಂದಿರುಗುತ್ತಾನೆ. ಹೀಗೆ ಯುದ್ದವನ್ನೇ ಮಾಡದೇ ಶತ್ರುಗಳನ್ನು ಮಣಿಸುವ ಕಲೆ ರಾಣಿ ಅಹಲ್ಯಾಳಿಗೆ ಕರಗತವಾಗಿರುತ್ತದೆ.

a3ಅಹಲ್ಯಾ ಬಾಯಿ ಕೇವಲ ಆಡಳಿತ ಮತ್ತು ಹಿಂದೂ ದೇವಾಲಯಗಳ ಹೊರತಾಗಿಯೂ ಆಕೆಯ ರಾಜಧಾನಿ ಮಹೇಶ್ವರದಲ್ಲಿ ಸಾಹಿತ್ಯ, ಸಂಗೀತ, ಕಲಾತ್ಮಕ ಮತ್ತು ಕೈಗಾರಿಕಾ ಉದ್ಯಮದದ ಪ್ರಮುಖ ಕೇಂದ್ರವಾಗಿತ್ತು. ಸುಪ್ರಸಿದ್ಧ ಮರಾಠಿ ಕವಿ ಮೊರೊಪಂತ್ ಮತ್ತು ಮಹಾರಾಷ್ಟ್ರದ ಶಾಹಿರ್ ಅನಂತಫಂಡಿ, ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಖುಶಾಲಿ ರಾಮ್ ಮುಂತಾದವರು ಅಹಲ್ಯಾಬಾಯಿ ಅವರ ಆಶ್ರಯದಲ್ಲೇ ಬೆಳಕಿಗೆ ಬಂದವರಾಗಿದ್ದರು. ಇವರುಗಳಲ್ಲದೇ ನೂರಾರು ಕುಶಲಕರ್ಮಿಗಳು, ಶಿಲ್ಪಿಗಳು ಮತ್ತು ಕಲಾವಿದರು ಆಕೆಯ ಆಶ್ರಯದಲ್ಲಿದ್ದದಲ್ಲದೇ ಇವರುಗಳೇ ಮುಂದೆ. ಮಹೇಶ್ವರದಲ್ಲಿ ಜವಳಿ ಉದ್ಯಮವನ್ನು ಸಹ ಸ್ಥಾಪಿಸಿದ್ದರು.

ah_statueಬಹಳ ಕಾಲದಿಂದಲೂ ಮಕ್ಕಳಿಲ್ಲದ ವಿಧವೆಯರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಇದ್ದ ಸಾಂಪ್ರದಾಯಿಕ ಕಾನೂನನ್ನು ಅಹಲ್ಯಾಬಾಯಿ ರದ್ದುಗೊಳಿಸುವ ಮೂಲಕ ಜನರಿಗೆ ಅತ್ಯಂತ ಪ್ರೀತಿ ಪಾತ್ರಳಾಗಿದ್ದಳು. ಹೀಗೆ ಸತತವಾಗಿ ಮೂರು ದಶಕಗಳ ಕಾಲ ಬಡವರ ಬಂಧುವಾಗಿ, ಪ್ರಜೆಗಳ ಮಹಾತಾಯಿಯಾಗಿ, ಧರ್ಮನಿಷ್ಠೆಯಿಂದ ಸನಾತನ ಧರ್ಮದ ಪರಿಪಾಲನೆ ಮಾಡುತ್ತ ದೇವಾಲಯಗಳ ರಕ್ಷಣೆ ಮತ್ತು ಪುನರುತ್ಥಾನ ಮಾಡುತ್ತಿದ್ದ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ 13 ಆಗಸ್ಟ್ 1795 ರಂದು ತಮ್ಮ 70 ನೇ ವಯಸ್ಸಿನಲ್ಲಿ ದೈವಾಧೀನರಾಗುತ್ತಾರೆ.

ah_Stamp1996 ರಲ್ಲಿ ಭಾರತ ಸರ್ಕಾರವು ಅಹಲ್ಯಾಬಾಯಿ ಹೋಳ್ಕರ್ ಳ 200ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಆಕೆಯ ಅಂಚೆಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಗೌರವವನ್ನು ಕೊಟ್ಟರೆ, ಇಂದಿಗೂ, ಕಾಶೀ, ಗೋಕರ್ಣ, ಬನವಾಸಿ, ಬದರೀನಾಥ ಮತ್ತು ಮಹಾರಾಷ್ಟ್ರದ ನೂರಾರು ದೇವಾಲಯಗಳಲ್ಲಿ ಅಹಲ್ಯಾಬಾಯಿಯ ಹೆಸರಿನಲ್ಲಿ ಪ್ರತಿನಿತ್ಯವೂ ಅರ್ಚನೆ ನಡೆಸುವ ಮೂಲಕ ಅಕೆಯ ಸಹಾಯವನ್ನು ನೆನೆಯಲಾಗುತ್ತದೆ.

ah_samadiಇಂದೋರಿನಲ್ಲಿರುವ ಆಕೆಯ ಸಮಾದಿಯಲ್ಲೂ ಸಹಾ ಪ್ರತಿನಿತ್ಯವೂ ಪೂಜೆ ನಡೆಸುವ ಮೂಲಕ ಆಕೆಯನ್ನು ಕೆಲವೇ ಕೆಲವು ಜನರು ಮಾತ್ರವೇ ನೆನಪಿಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರ ಸಂಗತಿಯಗಾಗಿದೆ. ನುಡಿ-ಗಡಿ-ಗುಡಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದ ಅಹಲ್ಯಭಾಯಿ ಹೋಳ್ಕರ್ ಅಂತಹ ವೀರಮಹಿಳೆಯ ವೀರಗಾಥೆಯನ್ನು ನಮ್ಮ ಇಂದಿನ ಪೀಳಿಗೆಯವರಿಗೂ ತಲುಪಿಸುವ ಮಹತ್ಕಾರ್ಯ ನಮ್ಮ ನಿಮ್ಮದೇ ಆಗಿದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಅಹಲ್ಯಬಾಯಿ ಹೋಳ್ಕರ್

  1. Oh!!!very informative article…when I visited Kashi last week, I witnessed the statue of a lady with draped saree holding shivling in her palm..thought the Akka Mahadevi statue with different looks..never knew it was Ahalya Bai Holkar…Thankyou for the information…perfect for a high school textual lesson in Kannada…Hearty congratulations!!!

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s