ಈ ಪ್ರಪಂಚದಲ್ಲಿ ಜನಿಸುವ ಪ್ರತಿಯೊಂದು ಜೀವಿಗೂ ಒಂದು ಆಸೆ ಇದ್ದೇ ಇರುತ್ತದೆ. ಹಾಗೆ ಆಸೆ ಪೂರೈಸಿಕೊಳ್ಳುವ ಸಲುವಾಗಿ ಅವರು ಪರಿಶ್ರಮ ಹಾಕ್ತಾನೇ ಇರ್ತಾರೆ. ಕೆಲವರಿಗೆ ಕೆಲವೊಂದು ಬಾರಿ ಅವರ ಅಸೆಗಳು ಪೂರೈಸಿಕೊಂಡಾಗ ಆಗುವ ಅನುಭವ ಇದೆಯಲ್ಲಾ ಅದು ನಿಜಕ್ಕೂ ಅವರ್ಣಿನೀಯವೇ ಸರಿ. ಅದನ್ನು ಕೇಳಿ ಅಥವಾ ನೋಡಿ ತಿಳಿಯುವುದಕ್ಕಿಂತಲೂ ಅನುಭವಿಸಿದರೆನೇ ಆನಂದ.
ಕಳೆದ ವಾರ ದೇಶಾದ್ಯಂತ ಬಿಡುಗಡೆಯಾ ಚಾರ್ಲಿ-777 ಸಿನಿಮಾದಲ್ಲಿ ನಾಯಕ ಧರ್ಮನಿಗೆ ಅಚಾನಕ್ಕಾಗಿ ಪರಿಚಯವಾದ ಬೀದಿ ನಾಯಿ, ಆರಂಭದಲ್ಲಿ ಅವನಿಗೆ ಕಿರಿಕಿರಿ ಎನಿಸಿದರೂ ದಿನ ಕಳೆದಂತೆಲ್ಲಾ ಅದು ಆತನನ್ನು ಪ್ರೀತಿಸುತ್ತಿರುವ ಪರಿಯನ್ನು ಕಂಡು ಆ ಚಾರ್ಲಿ ಅವನ ಜೀವನದ ಅವಿಭಾಜ್ಯ ಅಂಗವಾಗಿ ಕಡೆಗೊಮ್ಮೆ ಅದಕ್ಕೆ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಸಮಸ್ಯೆಯನ್ನು ಅರಿತು ಹಿಮಾಚ್ಚಾದಿತ ಪ್ರದೇಶದಲ್ಲಿ ಚಾರ್ಲಿ ಆಡಬೇಕು ಎನ್ನುವುದನ್ನು ಅರಿತ ನಾಯಕ ಧರ್ಮ ನಾನಾ ರೀತಿಯ ಕಷ್ಟಗಳನ್ನು ಅನುಭವಿಸಿಯೂ ಅಂತಿಮವಾಗಿ ಚಾರ್ಲಿಯನ್ನು ಹಿಮಾಲಯದ ಹಿಮಾಚ್ಚಾದಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅ ನಾಯಿಯ ಅಂತಿಮ ಆಸೆಯನ್ನು ಪೂರೈಸಿದ ಪರಿಯಂತೂ ನಿಜಕ್ಕೂ ಹೃದಯ ತುಂಬಿ ಬರುತ್ತದೆ.
ತನ್ನ ಪ್ರೀತಿಯ ನಾಯಿಯ ಆಸೆಯನ್ನು ಪೂರೈಸುವುದಕ್ಕಾಗಿ ಧರ್ಮ ಮಾಡಿದ ತ್ಯಾಗಗಳನ್ನು ಸಿನಿಮಾ ಮಂದಿರದಲ್ಲೇ ನೋಡಿ ಅನುಭವಿಸುವಾಗ ನಮಗೆ ಅರಿವಿಲ್ಲದಂತೆಯೇ ಕಣ್ಣು ಒದ್ದೇ ಆಗುವುದು ನಿಜಕ್ಕೂ ಅಪ್ಯಾಯಮಾನವೇ ಸರಿ.
ಇಂತಹದ್ದೇ ಒಂದು ಪ್ರಸಂಗ ದೂರದ ಜರ್ಮನಿ ದೇಶದಲ್ಲಿ 2021ರಲ್ಲಿ ನಡೆದಿದ್ದು ಆ ದೃಶ್ಯಾವಳಿಗಳು ಮನಸ್ಸಿಗೆ ಇನ್ನೂ ನಾಟುವಂತಿದೆ. ಜರ್ಮನಿಯ ರೌಡರ್‌ಫೆನ್‌ನಲ್ಲಿರುವ ಸ್ಥಳೀಯ ಬೈಕರ್‌ಗಳ ಗುಂಪಿಗೆ ಸೇರಿದ ಬೈಕರ್ ಒಬ್ಬರ ಮಗನಾದ ಕಿಲಿಯನ್ ಸಾಸ್ ಗೆ ಬಾಲ್ಯದಿಂದಲೂ ಉಳಿದೆಲ್ಲಾ ಆಟಿಕೆಗಳಿಗಿಂತ ಮೋಟರ್ ಸೈಕಲ್ ಎಂದರೆ ಬಹಳ ಇಷ್ಟ. ಎಲ್ಲೇ ಆಗಲೀ ಹೊಸಾ ಹೊಸಾ ಮೋಟರ್ ಬೈಕ್ ಕಂಡೊಡನೆಯೇ ಅದನ್ನು ಮುಟ್ಟಿ ನೋಡಿ ಅದರ ಮೇಲೆ ಹತ್ತಿ ಕುಳಿತುಕೊಂಡು ಸಂಭ್ರಮ ಪಡುತ್ತಿದ್ದ. ಆ ಚಿಕ್ಕ ವಯಸ್ಸಿನ ಹುಡುಗನಿಗೆ ಬೈಕ್ ಮೇಲಿರುವ ಈ ಉತ್ಕಟ ಆಸೆಯನ್ನು ಕಂಡು ಅದೆಷ್ಟೋ ಬೈಕ್ ಸವಾರರು ಆ ಪುಟ್ಟ ಬಾಲಕನನ್ನು ತಮ್ಮ ಬೈಕಿನಲ್ಲಿ ಸವಾರಿ ಮಾಡಿಸಿದ್ದೂ ಉಂಟು.
ನಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಅದೊಮ್ಮೆ ಅಚಾನಕ್ಕಾಗಿ ಆ ಬಾಲಕ ಅನಾರೋಗ್ಯಕ್ಕೆ ಪೀಡಿತನಾದಾಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಆತನನ್ನು ಪರೀಕ್ಷಿಸಿದ ವೈದ್ಯರು ಆ ಪುಟ್ಟ ಕಂದ ಲಿಂಫೋಮಾ ದಂತಹ ಕ್ಯಾನ್ಸರ್ ಅಂತಿಮ ಘಟ್ಟದ ಮಹಾಮಾರಿಯಿಂದ ನರಳುತಿದ್ದು ಆತ ಪುಟ್ಟ ಬಾಲಕ ಕೀಲಿಯನ್ ಹೆಚ್ಚು ದಿನ ಬದುಕಲಾರ ಎಂದು ತಿಳಿಸಿದಾಗ ಅವನ ತಂದೆ ತಾಯಿಯರಿಗೆ ಬರಸಿಡಿಲು ಬಡಿದಂತಿತ್ತು.
6 ವರ್ಷದ ಕಿಲಿಯನ್ ಸಹಾ ತನ್ನ ತಂದೆಯಂತೆ ಉತ್ಸಾಹಿ ಮೋಟೋಕ್ರಾಸ್ ರೈಡರ್ ಆಗಿದ್ದಲ್ಲದೇ ಸದಾ ಕಾಲವೂ ಬೈಕ್ ಧ್ಯಾನ ಮಾಡುತ್ತಿದ್ದರಿಂದ ತನ್ನ ಕಂದನಿಗೆ ಹುರಿದುಂಬಿಸಲು ಯಾರಾದರೂ ಮೋಟಾರುಬೈಕರ್ ಗಳು ತಮ್ಮ ಮನೆಯ ಅಕ್ಕ ಪಕ್ಕದಲ್ಲಿ ಕೆಲ ಕಾಲ ಓಡಿಸಲು ಸಾಧ್ಯವೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು.
ಈ ಪ್ರಕಟಣೆಯನ್ನು ಗಮನಿಸಿದ ರಾಲ್ಫ್ ಪೀಟ್ಷ್, ಬೈಕರ್ ಕ್ಲಬ್ ಸದಸ್ಯ, ಆ ಚಿಕ್ಕ ಹುಡುಗನ ಅಂತಿಮ ಆಸೆಯನ್ನು ಪೂರೈಸುವ ಸಲುವಾಗಿ, ಕ್ರಾಚ್ ಫರ್ ಕಿಲಿಯನ್ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಕಿಲಿಯನ್ ಫಾರ್ ಕಿಲಿಯನ್ ಎಂಬ ಈ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೇವಲ ನಾಲ್ಕು ದಿನಗಳ ನಂತರ, ಜುಲೈ 24 ರಂದು, ಮಾರಣಾಂತಿಕ ಅಸ್ವಸ್ಥ ಬಾಲಕನನ್ನು ಬೆಂಬಲಿಸಲು ಬೈಕ್ ಸವಾರರು ಸಂಪೂರ್ಣ ಬಲವನ್ನು ತೋರಿಸಿದರು.
ತನ್ನ ಮಗನ ಅಂತಿಮ ಆಸೆಯನ್ನು ಪೂರೈಸಲು ಸುಮಾರು 20 ರಿಂದ 30 ಬೈಕ್ ಸವಾರರು ಬರಬಹುದು ಎಂದೇ ಎಣಿಸಿದ್ದ ಅವರ ಪೋಷಕರಿಗೆ ಅಚ್ಚರಿ ಎನಿಸುವಂತೆ ಸುಮಾರು 15,000 ಬೈಕರ್‌ಗಳು ರೌಡರ್‌ಫೆನ್‌ನ ಕಿಲಿಯನ್‌ನ ಮನೆಯ ಸುತ್ತ ಪ್ರದಕ್ಷಿಣೆ ಹಾಕುತ್ತಾ, ಆ 6 ವರ್ಷದ ಬಾಲಕನಿಗೆ ಧೈರ್ಯವನ್ನು ತುಂಬುವ ಸಲುವಾಗಿ ಜೋರಾಗಿ ಹಾರ್ನ್‌ಗಳನ್ನು ಮಾಡುತ್ತಾ ಬೈಕ್ ಮೆರವಣಿಗೆ ನಡೆಸಿದರು. ಬೆಳಗ್ಗೆ 9.30ಕ್ಕೆ ಆರಂಭವಾದ ಬೈಕ್ ಮೆರವಣಿಗೆ ಸಂಜೆ 5 ಗಂಟೆಯ ವರೆಗೂ ಮುಂದುವರೆಯಿತು.
ಅಷ್ಟೊಂದು ದ್ವಿಚಕ್ರ ವಾಹನ ಸವಾರರು ಏಕಕಾಲದಲ್ಲಿ ತನ್ನ ಮನೆಯ ಮುಂದೆ ಆಗಮಿಸಿ ಬೈಕ್ ಮೆರವಣಿಗೆ ಮಾಡುತ್ತಿರುವುದನ್ನು ವೀಲ್ ಚೇರ್ ಮೇಲೆಯೇ ಕುಳಿತು ನೋಡುತ್ತಲೇ ಕುಣಿದು ಕುಪ್ಪಳಿಸುತ್ತಿದ್ದ ಕಿಲಿಯನ್ ನಗು, ಸಂತೋಷ ಮತ್ತು ಕಿರುಚಾಟಗಳ ಆ ದೃಶ್ಯ ನಿಜಕ್ಕೂ ಮನ ಕಲಕುವಂತಿತ್ತು. ಆ ಬೈಕ್ ಸವಾರರು ಆ ಬಾಲಕನ ಬಳಿ ಬಂದಾಗ ತಮ್ಮ ಬೈಕ್ ವೇಗವನ್ನು ಕಡೆಮೆ ಮಾಡಿ ಒಂದು ಕ್ಷಣ ಅವನ ಮುಂದೆ ನಿಲ್ಲಿಸಿ Get well soon, ಶೀಘ್ರವಾಗಿ ಗುಣಮುಖನಾಗು ಎಂದು ಮನಸಾರೆ ಹಾರೈಸುತ್ತಿದ್ದದ್ದು ನೋಡುವಾಗ ನಿಜಕ್ಕೂ ಮೈಯೆಲ್ಲಾ ರೋಮಾಂಚನಗೊಂಡಿದ್ದಂತೂ ಸುಳ್ಳಲ್ಲ.
ಕಾಲ ಕೆಟ್ಟು ಹೋಯ್ತು, ಹಿಂದಿನಂತೆ ಈಗಿನ ಜನರು ಇಲ್ಲಾ ಎಂದು ಬಹುತೇಕರು ಹೇಳುವಾಗ, ಕೆಟ್ಟಿರುವುದು ಕಾಲವಲ್ಲ. ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ನಮ್ಮ ಮಾನವೀಯ ಗುಣಗಳು. ಅಂತಹದ್ದರ ಮಧ್ಯೆ ಪವಾಡ ರೀತಿಯಲ್ಲಿ ಇಂತಹ ಸದ್ಭಾವನಾ ಯಾತ್ರೆಗಳು ನಡೆಯುವ ಮೂಲಕ ಇಂತಹ ಪವಾಡಗಳು ನಡೆಯುವ ಮೂಲಕ ಕಾಲ ಇನ್ನೂ ಚೆನ್ನಾಗಿಯೇ ಇದೆ ಎಂದು ತೋರಿಸಿರುವುದು ಅದ್ಭುತ ಮತ್ತು ಅನುರೂಪವೇ ಸರಿ ಅಲ್ಬೇ?
ಏನಂತೀರೀ?
ನಿಮ್ಮವನೇ ಉಮಾಸುತ