ಎಂಟು ವರ್ಷಗಳ ಹಿಂದೆ 2014ರಲ್ಲಿ ನಮ್ಮ ಹೆಮ್ಮೆಯ ಪ್ರಧಾನಿಗಳು ವಿಶ್ವಸಂಸ್ಥೆಯಲ್ಲಿ ಯೋಗದ ಈ ಯೋಗದ ಉಪಯುಕ್ತತೆಯನ್ನು ತಿಳಿಸಿ, ಅದರ ಸದುಪಯೋಗವನ್ನು ಇಡೀ ವಿಶ್ವವೇ ಸದ್ಬಳಿಕೆ ಮಾಡಿಕೊಳ್ಳುವ ಹಾಗೆ ಕಾರ್ಯಕ್ರಮವನ್ನು ರೂಪಿಸುವ ಬಗ್ಗೆ ಪ್ರಸ್ತಾಪನೆ ಮಾಡಿದಕ್ಕೆ ಸುಮಾರು 140ಕ್ಕೂ ಹೆಚ್ಚು ರಾಷ್ಟ್ರಗಳೂ ಒಕ್ಕೊರಿಲಿನಿಂದ ಬೆಂಬಲಿಸಿದ ಪರಿಣಾಮವಾಗಿಯೇ ಪ್ರತೀ ವರ್ಷ ಜೂನ್ 21ರಂದು ವಿಶ್ವ ಯೋಗದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು. ಇದರ ಭಾಗವಾಗಿಯೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಬೆಂಗಳೂರು ಆಶ್ರಯದಲ್ಲಿ ವಿದ್ಯಾರಣ್ಯಪುರದಲ್ಲೂ ಸತತವಾಗಿ 5 ವರ್ಷಗಳ ಕಾಲ ನಿರಂತರವಾಗಿ ಬಹಳ ಅದ್ದೂರಿಯಿಂದ ಆಚರಿಸಲ್ಪಟ್ಟಿತ್ತು. ಕರೋನ ಮಹಾಮಾರಿಯ ಲಾಕ್ಡೌನ್ ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮ ನಡೆಯದಿದ್ದರಿಂದ ಈ ಬಾರಿಯ ಯೋಗ ದಿನಾಚರಣೆ ಬಹಳ ವಿಶೇಷವಾಗಿತ್ತು.
ಪ್ರತಿ ಬಾರಿಯಂತೆ ಯೋಗದಿನಾಚರಣೆ ಆಚರಿಸಲು ಬೈಠಕ್ ಮಾಡಲು ಮುಂದಾದಾಗ, ನಮ್ಮೊಂದಿಗೆ ಸಂಘ ಪರಿವಾರದ ಅಂಗ ಸಂಸ್ಥೆಗಳಾದ ಆರೋಗ್ಯ ಭಾರತಿ, ಕ್ರೀಡಾಭಾರತಿ, ಸಂಸ್ಕಾರ ಭಾರತಿಯ ಜೊತೆ ವಿದ್ಯಾರಣ್ಯಪುರದ ಆಶಾ ಯೋಗ ಸಂಸ್ಥೆಯವರೂ ಕೈ ಜೋಡಿಸಿ, ಕಾರ್ಯಕ್ರಮದ ರೂಪುರೇಷುಗಳನ್ನು ಸಿದ್ಧಪಡಿಸಿಕೊಂಡು ವಿದ್ಯಾರಣ್ಯಪುರದ ಸುವರ್ಣಮಹೋತ್ಸವ ಕ್ರೀಡಾಂಗಣದದಲ್ಲಿ ಕಾರ್ಯಕ್ರಮ ನಡೆಸಲು ಬಿಬಿಎಂಪಿ ಅವರನ್ನು ಕೇಳಲು ಹೋದಲ್ಲಿ ಅದಾಗಲೇ ಮತ್ತೊಬ್ಬರು ಅದೇ ಸಮಯದಲ್ಲೇ ಅಲ್ಲಿ ಯೋಗ ನಡೆಸಲು ಅನುಮತಿ ಪಡೆದ ವಿಷಯ ಕೇಳಿ ಆಘಾತವಾಯಿತಾದರೂ, ನಿಧಾನವೇ ಪ್ರಧಾನ, ಹೊಂದಿಕೊಂಡು ನೆಡೆಯುವುದೇ ಜೀವನ ಎಂದು ಹಾಗೆ ಅನುಮತಿ ಪಡೆದವರು ಯಾರು? ಅವರೊಂದಿಗೆ ನಾವೂ ಸೇರಿಕೊಳ್ಳಬಹುದೇ? ಎಂದು ವಿಚಾರಿಸಿದಾಗ, ಆರಂಭದಲ್ಲಿ ತುಸು ಹಿಂದು ಮುಂದು ನೋಡಿದರೂ ಆನಂತರ ಒಪ್ಪಿಕೊಂಡ ಕಾರಣ, ಕಾರ್ಯಕ್ರಮದ ವಕ್ತಾರರು, ಅಧ್ಯಕ್ಷರ ಹುಡುಗಾಟದಲ್ಲಿ ತೊಡಗಿಕೊಳ್ಳುವಷ್ಟರಲ್ಲಿ, ಅದಾಗಲೇ ಅನುಮತಿ ಪಡೆದಿದ್ದವರೇ ತಮ್ಮ ಕಾರ್ಯಕ್ರಮದ ಸ್ಥಳವನ್ನು ಬದಲಿಸಿದ್ದರಿಂದ ತುಸು ನೆಮ್ಮದಿಯಾಯಿತು.
ಕಾರ್ಯಕ್ರಮದ ಫ್ಲೆಕ್ಸ್ ಎಲ್ಲಾ ಕಡೆ ಕಟ್ಟಿ ಮತ್ತು ಕರಪತ್ರವನ್ನು ಎಲ್ಲರಿಗೂ ವಿತರಿಸಿ ಪರಿಸರವನ್ನು ಹಾಳು ಮಾಡುವ ಬದಲು ಸಾಮಾಜಿಕ ಜಾಲತಾಣ ಮತ್ತು ಪರಸ್ಪರ ಕರೆಗಳ ಮೂಲಕ ಡಿಜಿಟಲ್ ಮೂಲಕವೇ ಸಂಪರ್ಕವನ್ನು ಆರಂಭಿಸಿ ಎಲ್ಲವೂ ನಿರ್ವಿಘ್ನವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆ ನಮ್ಮೆಲ್ಲರ ಆಸೆಗೆ ತಣ್ಣೀರು ಸುರಿಸುವುದರ ಜೊತೆಗೆ ಮುಂದಿನ 5 ದಿನಗಳ ಕಾಲ ನಗರದಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಹವಾಮಾನ ಇಲಾಖೆಯ ವರದಿಯೂ ಸಹಾ ತುಸು ಬೇಸರ ತರಿಸಿತ್ತು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿರುವಂತೆ ಕರ್ಮಾಣ್ಯೇವಾಧಿಕಾರಸ್ತೇ, ಮಾಫಲೇಷು ಕದಾಚಾನ. ನಮ್ಮ ಕೆಲಸವನ್ನು ನಾವು ಶ್ರದ್ದೆಯಿಂದ ಮಾಡಿ ಫಲಾ ಫಲಗಳನ್ನು ಭಗವಂತನ ಮೇಲೆ ಬಿಡೋಣ ಎಂದು ನಿರ್ಧರಿಸಿ ಸೋಮವಾರ ರಾತ್ರಿ ವೇದಿಕೆಯನ್ನು ಸಿದ್ಧಪಡಿಸುವಾಗಲೂ ನಾಲ್ಕಾರು ಹನಿ ಬಿದ್ದಾಗ ಅಯ್ಯೋ ದೇವರೇ ನಾಳೆ ಬೆಳ್ಳಗ್ಗೆ ವರೆಗೂ ಮಳೆ ಸುರಿಸದಿರಪ್ಪಾ ಎಂದು ಮನಸ್ಸಿನಲ್ಳೇ ಕೇಳಿಕೊಂಡಿದ್ದಂತೂ ಸುಳ್ಳಲ್ಲ.
ಅದೇ ಗುಂಗಿನಲ್ಲೇ ಮನೆಗೆ ಬಂದು ಮಲಗಿದರೂ ಎಷ್ಟು ಹೊತ್ತಾದರೂ ನಿದ್ದೇಯೇ ಬಾರದೇ ಕಡೆಗೆ ಬೆಳಿಗ್ಗೆ 3 ಘಂಟೆಗೆಲ್ಲಾ ಎಚ್ಚರವಾಗಿ ಮತ್ತೊಮ್ಮೆ ಕಾರ್ಯಕ್ರಮಕ್ಕೆ ತೆಗೆದುಕೊಂಡು ಹೋಗಬೇಕಿದ್ದ ಎಲ್ಲಾ ವಸ್ತುಗಳನ್ನೂ ಜೋಡಿಸಿಕೊಂಡು 4:30 ಕ್ಕೆಲ್ಲಾ ಮೈದಾನಕ್ಕೆ ಹೋಗಿ ಸ್ವಲ್ಪ ವ್ಯಾಯಾಮ ಮತ್ತು ಚುರುಕಾದ ನಡಿಗೆಯನ್ನು ಮಾಡಿ ಘಂಟೆ 5 ಆಗುತ್ತಿದ್ದಂತೆಯೇ ಮತ್ತೆ ಶಾಮಿಯಾನಾದವರನ್ನು ಎಬ್ಬಿಸಿ, ಉಳಿದ ಕೆಲಸವನ್ನು ಆರಂಭಿಸಿ ಧ್ವನಿವರ್ಥಕಗಳನ್ನು ಸಿದ್ದಪಡಿಸುತ್ತಿದ್ದಂತೆಯೇ ಮೂಡಣದಲ್ಲಿ ಸೂರ್ಯ ನಿಧಾನವಾಗಿ ಕಣ್ಣಾಮುಚ್ಚಾಲೆ ಆಟವಾಡುತ್ತಾ ಹೊರ ಬರಲೋ ಬೇಡವೋ ಎನ್ನುತ್ತಿರುವಂತೆಯೇ ನಿಧಾನವಾಗಿ ಒಬ್ಬೊಬ್ಬರೇ ಯೋಗಪಟುಗಳು ಮೈದಾನಕ್ಕೆ ಬಂದು ನಿಗಧಿತ ಸಮಯಕ್ಕೆ ಸರಿಯಾಗಿ ಅಧ್ಯಕ್ಷರು ವಕ್ತಾರರು ಎಲ್ಲರೂ ಸೇರಿದ ಕೂಡಲೇ, 6:05 ನಿಮಿಷಕ್ಕೆ ಎಲ್ಲರೂ ಚಪ್ಪಲಿಗಳನ್ನು ಸಾಲಾಗಿ ವೇದಿಕೆಯ ಎಡಭಾಗದಲ್ಲಿ ಬಿಟ್ಟು, ಸಾಲಾಗಿ ಒಂದು ಕೈ ಅಳತೆ ಅಂತರದಲ್ಲಿ ಯೋಗ ಮ್ಯಾಟ್ ಹಾಕಿಕೊಂಡು ಕುಳಿತುಕೊಳ್ಳಬೇಕು. ಕಾರ್ಯಕ್ರದ ಏಕಾಗ್ರತೆಗೆ ಭಂಗವಾಗದಿರಲೆಂದು, ಎಲ್ಲರೂ ತಮ್ಮ ಜಂಗಮವಾಣಿ ಅರ್ಥಾತ್ ಮೋಬೈಲ್ ಸ್ಥಬ್ಧವಾಗಿಸಿ, ಕಾರ್ಯಕ್ರಮದ ಮಧ್ಯದಲ್ಲಿ ಆಗತ್ಯವಾಗಿ ಓಡಾಡದೇ, ಕಾರ್ಯಕ್ರಮ ಪೂರ್ತಿ ಅವಧಿಯವರೆಗೂ ಶಾಂತ ಚಿತ್ತದಿಂದ ಇದ್ದು ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದು ಕೊಳ್ಳೋಣ ಎಂಬ ಸೂಚನೆಯನ್ನು ಕೊಟ್ಟು. ಭಾರತ ಮಾತೆಗೆ ಪುಷ್ಪಾರ್ಚನೆಯನ್ನು ಮಾಡುತ್ತಿದ್ದಂತೆಯೇ ಎಲ್ಲರಲ್ಲೂ ಉತ್ಸಾಹ ಮೂಡಿಸಲೆಂದು ಕಾರ್ಯಕ್ರಮದ ನಿರೂಪಕರಾದ ಶ್ರೀಕಂಠ ಬಾಳಗಂಚಿಯವರು ತಮ್ಮ ವಿಭಿನ್ನ ಶೈಲಿಯಲ್ಲಿ ಬೋಲೋ……. ಭಾರತ್ ಮಾತಾ ಕೀ… ಎಂದು 20-30 ಸೆಕೆಂಡುಗಳ ಸುಧೀರ್ಘವಾಗಿ ಘೋಷಣೆ ಹಾಕುತ್ತಿದ್ದಂತೆ ನೆರೆದಿದ್ದವರೆಲ್ಲರೂ ಮುಗಿಲು ಮುಟ್ಟುವ ಹಾಗೆ ಜೈಕಾರ ಹಾಕಿದ ನಂತರ ಎಲ್ಲರಿಗೂ ಸ್ವಾಗತವನ್ನು ಕೋರುವ ಮೂಲಕ ವಿದ್ಯಾರಣ್ಯಪುರದ ಯೋಗ ದಿನಾಚರಣೆ ಅಧಿಕೃತವಾಗಿ ಆರಂಭವಾಯಿತು.
ಶ್ರೀಮತಿ ಸುಧಾ ಸೋಮೇಶ್ ಮತ್ತು ಸಿಂಧು ನಂದಕೀಶೋರ್ ಅವರಿಂದ ಸುಮಧುರ ಯೋಗ ಗೀತೆ ಮುಗಿಯುತ್ತಿದ್ದಂತೆಯೇ, ನಿರೂಪಕರು ಇಂದಿನ ಕಾರ್ಯಕ್ರಮದ ವಕ್ತಾರರಾಗಿದ್ದ ಮತ್ತೀಕೆರೆಯ ನಿವಾಸಿಗಳಾದ, ಬಾಲ್ಯದಿಂದಲೂ ರಾಷ್ಟ್ತೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಸಂಘದ ಅನ್ಯಾನ್ಯ ಜವಾಬ್ಧಾರಿಗಳನ್ನು ನಿಭಾಯಿಸಿ ಸದ್ಯಕ್ಕೆ ಸಂಘ ಪರಿವಾರದ ಧರ್ಮ ಜಾಗರಣಾದ ಪ್ರಾಂತ ನಿಧಿ ಪ್ರಮುಖ್ ಆಗಿ ಜವಾಬ್ಧಾರಿಯನ್ನು ಪ್ರವೃತ್ತಿಯಾಗಿ ನಿಭಾಯಿಸುತ್ತಾ ವೃತ್ತಿಯಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಶ್ರೀ ರಾಘವೇಂದ್ರ ಅವರ ಪರಿಚಯ ಮಾಡಿಕೊಟ್ಟು, ಶ್ರೀಯುತರನ್ನು ಈ ಯೋಗ ದಿನಾಚರಣೆಯ ಯೋಗಾ ಯೋಗದ ಕುರಿತಾಗಿ ಮಾತನಾಡಬೇಕೆಂದು ಕೋರಿಕೊಂಡರು
ರಾಘವೇಂದ್ರರವರು ಯೋಗ ಎಂಬುದು ನಮ್ಮ ಪೂರ್ವಜರು ನಮಗೆ ಕೊಟ್ಟು ಹೋದ ಅಪೂರ್ವವಾದ ವಿದ್ಯೆಯಾಗಿದ್ದು, ಯೋಗ ಮಾಡುವುದರಿಂದ ಕೇವಲ ದೈಹಿಕವಾಗಿ ಅಲ್ಲದೇ ಮಾನಸಿಕವಾಗಿಯೂ ಸಧೃಢರಾಗಬಹುದು ಎಂಬುದನ್ನು ಬಹಳ ಮನ್ಯೋಜ್ಞವಾಗಿ ವಿವರಿಸಿದರು. ಮಾತನ್ನು ಮುಂದುವರೆಸುತ್ತಾ, ಈಶಾವಾಸ್ಯೋಪನಿಷತ್ತಿನ ಶ್ಲೋಕದ ಒಂದು ಸಾಲಾದ ತೇನ ತ್ಯಕ್ತೇನ ಭುಂಜೀಥಾ ಎಂಬುದನ್ನು ಉಲ್ಲೇಖಿಸುತ್ತಾ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡುವುದರ ಮೂಲಕ ಮನಸ್ಸಿಗೆ ನೆಮ್ಮದಿ ದೊರೆತು ಶ್ಲೋಕದಲ್ಲಿ ಹೇಳಿರುವಂತೆ ತನ್ನಲ್ಲಿರುವುದನ್ನೆಲ್ಲಾ ಅವಶ್ಯಕತೆ ಇರುವವರಿಗೆ ಕೊಟ್ಟು ಅದರಲ್ಲಿ ಉಳಿದದ್ದರಲ್ಲಿ ಜೀವಿಸುವಂತಹ ಧನ್ಯತಾಭಾವ ಮೂಡುವಂತಾಗುತ್ತದೆ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಂತಹ ಸಹಕಾರ ನಗರದ ಟಾಟಾ ನಗರದ ನಿವಾಸಿಗಳಾದ, ತಮ್ಮ ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಪ್ರಸ್ತುತ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮೂಳೆ ರೋಗ ತಜ್ನರಾಗಿ ಸೇವೆ ಸಲ್ಲಿಸುತ್ತಿರುವ ಜೊತೆಯಲ್ಲೇ, ತಮ್ಮ ಬಹುಮುಖಿ ಸಮಾಜ ಸೇವೆಗಳಿಂದಲೇ ಹೆಚ್ಚು ಪ್ರಖ್ಯಾತರಾಗಿರುವುದಲ್ಲದೇ, ಸಮಾಜ ಸೇವೆಯನ್ನು ಮಾಡುವ ಉತ್ಕಟ ಬಯಕೆಯಿಂದಾಗಿ ಸಂಘ ಪರಿವಾರದ ಮತ್ತೊಂದು ಅಂಗ ಸಂಸ್ಥೆಯಾದ ಆರೋಗ್ಯ ಭಾರತಿ ಬೆಂಗಳೂರು ಘಟಕದ ಆರೋಗ್ಯ ವಿಭಾಗದ ಕಾರ್ಯಕ್ರಮುಖರಾಗಿ ಜವಾಭ್ಧಾರಿಯನ್ನು ನಿಭಾಯಿಸುತ್ತಿರುವ ಜನಾನುರಾಗಿ ಶ್ರೀ ನಿರಂತರ ಗಣೇಶ್ ಅವರು ಸಭೆಯನ್ನು ಉದ್ದೇಶಿಸಿ ಸುಧೀರ್ಘವಾಗಿ ಮಾತನಾಡಿದರು.
ತಮ್ಮ ವೈದ್ಯಕೀಯ ವೃತ್ತಿಯ ಅನುಭವದಲ್ಲಿ ಅದರಲ್ಲೂ ಮೂಳೆ ತಜ್ಞರಾದರೂ ಕೆಲವೊಂದು ಸಂಧಿ ಸಂಬಂಧಿತ ತೊಂದರೆಗಳಿಗೆ ಯೋಗಾಸನ ಮಾಡಲು ಸೂಚಿಸುವುದಾಗಿ ಹೇಳಿದರು. ಅದೇ ರೀತಿ ಕೋವಿಡ್ ಸಂದರ್ಭದಲ್ಲಿ ಬಹಳ ಜನರು ಶ್ವಾಸಕೋಶ ಸಂಬಂಧಿತ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದವರಿಗೆ ಶ್ರೀಯುತರು ನಿಯಮಿತವಾಗಿ ಪ್ರಾಣಾಯಾಮವನ್ನು ಮಾಡಲು ಸೂಚಿಸುವ ಮೂಲಕ ಅವರನ್ನು ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡರು. ದೇಹ ಸಧೃಢರಾಗಿರುವುದಕ್ಕೆ ನಿರಂತರ ವ್ಯಾಯಾಮ ಅತ್ಯಗತ್ಯವಾಗಿದ್ದು, ಸಾಧಾರಣ ಜಿಮ್ ಗಿಂತಲೂ ಯೋಗ ಮತ್ತು ಪ್ರಾಣಾಯಾಮಗಳು ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೇ ಹೆಚ್ಚು ಪರಿಣಾಮಕಾರಿಯಗಿದೆ ಎಂದು ಹೇಳಿದರು.
ಇದಾದ ನಂತರ ಕಾರ್ಯಕ್ರಮದ ಮುಖ್ಯ ಘಟ್ಟವಾದ ಯೋಗಾಭ್ಯಾಸದ ಮೊದಲು ಸುಮಾರು ಐದು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ಯೋಗ ಕಲೆಯನ್ನು ಜಗತ್ತಿಗೆ ಪರಿಚಯಿಸಿದ ಹಿರಿಮೆ ನಮ್ಮ ದೇಶದ್ದಾಗಿದ್ದು, ಕೇವಲ ದೈಹಿಕ ಪರಿಶ್ರಮವಲ್ಲದೆ, ಮಾನಸಿಕ ಸ್ಥಿಮಿತೆಯನ್ನು ಕಾಪಾಡಿಕೊಳ್ಳುವುದಕ್ಕೂ ಸಹಾಯಕಾರಿಯಾಗಿದ ಇಂತಹ ಅಭೂತಪೂರ್ವವಾದ ಯೋಗ ಕಲೆಯನ್ನು ಎಲ್ಲರಿಗೂ ಪರಿಚಯಿಸಿದ ಶ್ರೀ ಪತಂಜಲಿ ಮಹರ್ಷಿಗಳನ್ನು ಯೋಗೇನ ಚಿತ್ತಸ್ಯ ಪದೇನ ವಾಚಾ… ಶ್ಲೋಕದ ಮೂಲಕ ಸ್ಮರಿಸಿಕೊಂಡು ಧನ್ಯವಾದಗಳನ್ನು ಅರ್ಪಿಸಿ, ವಿದ್ಯಾರಣ್ಯಪುರದಲ್ಲಿ ಆಶಾ ಯೋಗ ಕೇಂದ್ರವನ್ನು ನಡೆಸುತ್ತಿರುವ ಶ್ರೀಮತಿ ಆಶಾರವರು ಮತ್ತು ಅವರ ತಂಡದವರು, ನೆರೆದಿದ್ದ ಎಲ್ಲಾ ಯೋಗಪಟುಗಳಿಗೆ, ಆರಂಭದಲ್ಲಿ ಲಘುವ್ಯಾಯಾಮ, ನಂತರ ನಿಂತು, ಕುಳಿತು, ಮಲಗಿ ಆಸನಗಳನ್ನು ಮಾಡಿಸಿ, ಕಡೆಯದಾಗಿ ಕಪಾಲಭಾತಿ, ನಾಡಿ ಶೋಧ ಮತ್ತು ಭ್ರಾಮರಿ ಮುಂತಾದ ಪ್ರಾಣಾಯಾಮಗಳನ್ನು ಮಾಡಿಸುವುದರ ಜೊತೆಗೆ, ಪ್ರತಿಯೊಂದು ಆಸನದ ವಿವರಗಳು ಮತ್ತು ಅದರ ಉಪಯುಕ್ತತೆಯನ್ನು ತಿಳಿಸಿಕೊಟ್ಟು ಮೂರು ಬಾರಿ ಓಂಕಾರದೊಂದಿಗೆ ಯೋಗಾಭ್ಯಾಸವನ್ನು ಮುಗಿಸಿದಾಗ ಯೋಗ ದಿನಾಚರಣೆಗೆ ಬಂದಿದ್ದವರೆಲ್ಲರಿಗೂ ತೃಪ್ತಿ ತಂದಿತು ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಇಂದಿನ ಈ ಕಾರ್ಯಕ್ರಮ ಯಶಸ್ವಿಯಾಗಲು ಬಹಳಷ್ಟು ಜನರ ಸುಮಾರು ದಿನಗಳ ಪರಿಶ್ರಮವೇ ಕಾರಣವಾಗಿದ್ದು ಈ ಕಾರ್ಯಕ್ರಮವನ್ನು ಆಯೋಜಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಕಂಚಿನ ಕಂಠದಲ್ಲಿ ಸುಶ್ರಾವ್ಯವಾಗಿ ವಂದೇ ಮಾತರಂ ಹಾಡಿದ ಶ್ರೀಮತಿ ಶೃತಿಕೀರ್ತಿ ಸುಬ್ರಹ್ಮಣ್ಯ ಅವರು ನೆರೆದಿದ್ದರೆಲ್ಲರಿಗೂ ವಿಶೇಷವಾದ ಧನಾತ್ಮಕ ಕಂಪನಗಳನ್ನು ಹರಿಸಿದ್ದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮ ಮುಗಿದು ಎಲ್ಲರೂ ಹೊರಡುವ ಮೊದಲು ಈ ಯೋಗಾಭ್ಯಾಸವನ್ನು ಕೇವಲ ಒಂದೇ ದಿನಕ್ಕೆ ಮೀಸಲಿಡದೆ ಪ್ರತೀದಿನವೂ ಅಭ್ಯಾಸ ಮಾಡುವುದರ ಮೂಲಕ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿ ಇರುವಂತೆ ಪ್ರತಿಜ್ಞೆ ಮಾಡ ಬೇಕು ಎಂದು ಕಾರ್ಯಕ್ರಮದ ಆಯೋಜಕರು ಕೊರಿದ್ದಲ್ಲದೇ, ಮತ್ತೊಮ್ಮೆ ನಿರೂಪಕರು ಭಾರತ ಮಾತೆಗೆ ಜೈ ಕಾರ ಹಾಕಿಸುವ ಮೂಲಕ ಇಂದಿನ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಪ್ರತೀ ಬಾರಿಯೂ 600-800 ಜನರ ಎರಡು ತಂಡಗಳಲ್ಲಿ (ಹಿರಿಯರಿಗೆ ಮತ್ತು ಶಾಲಾಮಕ್ಕಳಿಗೆ) ಯೋಗದಿನಾಚರಣೆಯನ್ನು ನಡೆಸುತ್ತಿದ್ದು ಈ ಬಾರಿ 100-120 ಜನರಿಗೆ ಸೀಮಿತಗೊಂಡಿದ್ದಕ್ಕೆ, ಯೋಗ ದಿನಾಚರಣೆ ಈಗ ಸಮಾಜದ ಅಂಗವಾಗಿ ಹೋಗಿದ್ದು, ಎಲ್ಲರೂ ಒಂದೇ ಕಡೆ ಸೇರಿ ಯೋಗಾಭ್ಯಾಸ ಮಾಡುವ ಬದಲು ಅವರವರ ಬಡಾವಣೆಗಳಲ್ಲಿ ಅವರ ಅನುಕೂಲಕ್ಕೆ ತಕ್ಕಂತಹ ಸಮಯದಲ್ಲಿ ಯೋಗದಿನಾಚರಣೆಯನ್ನು ಆಚರಿಸಿದ್ದನ್ನು ಸಂಘಟಕರು ವಿವರಿಸಿ, ಅಂತಿಮವಾಗಿ ಯೋಗ ಕೆಲವರಿಗಷ್ಟೇ ಸೀಮಿತವಾಗಿರದೇ ಸಮಾಜ ಮುಖಿಯಾಗಿ ಎಲ್ಲರೂ ಮಾಡುವಂತಾಗುವುದೇ ಯೋಗ ದಿನಾಚರಣೆಯ ಉದ್ದೇಶ ಅದು ಈ ಬಾರಿ ವಿದ್ಯಾರಣ್ಯಪುರದಿಂದಲೇ ಆರಂಭವಾಗಿರುವುದು ಗಮನಾರ್ಹ ಎಂದಾಗ ನೆರೆದಿದ್ದವರ ಮನದಲ್ಲಿ ಮೂಡಿದ್ದ ಸಂದೇಹ ಮಂಜಿನಂತೆ ಕರಿಗಿ ನೀರಾಗಿ ಹೋಗಿತ್ತು ಎಂದು ವಿಶೇಷವಾಗಿ ಹೇಳ್ಬೇಕಿಲ್ಲಾ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ