ಶ್ರೀಮತಿ ದ್ರೌಪದಿ ಮುರ್ಮು

ನಮ್ಮ ಭಾರತ ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಒಂದು ರೀತಿಯ ಅಧ್ಯಕ್ಷ ಪದವಿಯನ್ನು ಹೊಂದಿರುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತೀಯ ಮೂರೂ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್) ದಂಡನಾಯಕರಾಗಿದ್ದು, ಸಂಸತ್ತಿನ ಉಭಯ ಸಭೆಗಳಲ್ಲಿ ಬಹುಮತದಿಂದ ರೂಪಿಸಲ್ಪಟ್ಟ ಹೊಸಾ ಮಂಡಿಸಲ್ಪಟ್ಟ ಮಸೂದೆಗಳು ರಾಷ್ಟ್ರಪತಿಗಳ ಅಂಗೀಕಾರದ ನಂತರವೇ ಅಧಿಕೃತವಾದ ಕಾನೂನಾಗಿ ಜಾರಿಗೆ ತರಲ್ಪಡುತ್ತದೆ. ಇಂತಹ ರಾಷ್ಟ್ರಪತಿಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯ ಸಾಂಸದರು ಮತ್ತು ದೇಶದ ಎಲ್ಲಾ ರಾಜ್ಯಗಳ ಮತ್ತು ಪ್ರಾಂತ್ಯಗಳ ವಿಧಾನಸಭೆಯ ಶಾಸಕರು ನೇರವಾಗಿ ಚುನಾಯಿಸಲ್ಪಟ್ಟು ಐದು ವರ್ಷಗಳ ಕಾಲ ರಾಷ್ಟಪತಿಗಳಾಗಿ ಸೇವೆ ಸಲ್ಲಿಸುತ್ತಾರೆ.

ಪ್ರಸ್ತುತ ರಾಷ್ಟ್ರಪತಿಗಳಾಗಿರುವ ಶ್ರೀ ರಾಮ್ ನಾಥ್ ಕೋವಿಂದ್ ಅವರ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದ್ದು ಅವರ ಜಾಗಕ್ಕೆ ಹೊಸಾ ರಾಷ್ಟ್ರಪತಿಗಳ ಆಯ್ಕೆಗಾಗಿ ಕಳೆದ ಮೂರ್ನಾಲ್ಕು ವಾರಗಳಿಂದಲೂ ಆಡಳಿತ ಪಕ್ಷವಾದ ಬಿಜೆಪಿ ಮತ್ತು ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ವಿರೋಧ ಪಕ್ಷಗಳಲ್ಲಿ ತೀವ್ರವಾದ ಪೈಪೋಟಿ ಏರ್ಪಟ್ಟಿದೆ.

ಎಂದಿನಂತೆ ದೇಶದ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲದೇ, ವಯಕ್ತಿಯ ಅಂಹನಿಂದಾಗಿ ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತಂತೆ ಎನ್ನುವಂತೆ, ಶರದ್ ಪವಾರ್, ಫರೋಕ್ ಅಬ್ದುಲ್ಲಾ, ದೇವೇಗೌಡ, ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣಗಾಂಧಿ ಇನ್ನೂ ಮುಂತಾದ ಹೆಸರುಗಳು ಚಾಲ್ತಿಯಲ್ಲಿದ್ದು ಅಂತಿಮವಾಗಿ 84 ವರ್ಷದ ಬಿಹಾರ್ ಮೂಲದ ಮಾಜಿ ಐ.ಎ.ಎಸ್‌ ಅಧಿಕಾರಿ ಮತ್ತು ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಗಳನ್ನು ಬದಲಿಸುತ್ತಾ ಅಧಿಕಾರ ಸವಿದು ಈ ಇಳೀ ವಯಸ್ಸಿನಲ್ಲಿಯೂ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೇಸ್ಸಿನಲ್ಲಿ ರಾಜಾಶ್ರಯ ಪಡೆದಿದ್ದ ಮಾಜೀ ಕೇಂದ್ರ ವಿದೇಶಾಂಗ ಸಚಿವ, ಕೇಂದ್ರ ಹಣಕಾಸಿನ ಸಚಿವರಾಗಿದ್ದ ಯಶ್ವಂತ್‌ ಸಿನ್ಹಾ ಆಯ್ಕೆಯಾಗಿದ್ದಾರೆ. ಎಷ್ಟೇ ಜಾತ್ಯಾತೀತ ಎಂದು ಅಬ್ಬಿರಿದು ಬೊಬ್ಬಿರಿದರೂ ಅಂತಿಮವಾಗಿ ನಡೆಯುವ ಜಾತಿಯ ಲೆಕ್ಕದಲ್ಲಿ ಮೇಲ್ವರ್ಗದ ಕಾಯಸ್ಥ ಸಮುದಾಯಕ್ಕೆ ಸೇರಿದವರಾಗಿದ್ದು ಗೆಲ್ಲಲು ಅಗತ್ಯವಾದ ಸಂಖ್ಯೆ ಇಲ್ಲದಿದ್ದರೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

murmu4ಇವರ ಎದುರಿನಲ್ಲಿ ಆಡಳಿತ ಪಕ್ಷವಾದ ಬಿಜೆಪಿಯು ತಮ್ಮ ರಾಷ್ಟ್ರಪತಿಯ ಅಭ್ಯರ್ಥಿಯಾಗಿ 64 ವರ್ಷದ ಒರಿಸ್ಸಾ ಮೂಲದ ಸಂಥಾಲ್‌ ಬುಡಕಟ್ಟು ಸಮುದಾಯದ (ಆದಿವಾಸಿ) ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಅಚ್ಚರಿಯ ಬೆಳವಣಿಗೆಯಲ್ಲಿ ಆಯ್ಕೆ ಮಾಡುವ ಮೂಲಕ ವಿರೋಧ ಪಕ್ಷದವರಿಗೆ ಒಂದು ರೀತಿ ಮರ್ಮಾಗಾಥವನ್ನೇ ನೀಡಿದ್ದಾರೆ ಎಂದರೂ ತಪ್ಪಾಗದು.

kovindಸಾಧಾರಣವಾಗಿ ಬಿಜೆಪಿ ಎಂಬುದು ಮೇಲ್ವರ್ಗದ ಜನಾಂಗದ ಪಕ್ಷ ಬ್ರಾಹ್ಮಣರು ಮತ್ತು ಬನಿಯಾಗಳ ಪಕ್ಶ ಎಂದು ಬಿಂಬಿಸುತ್ತಿದ್ದ ಪ್ರತಿಪಕ್ಷಗಳ ಆರೋಪವನ್ನುಸ ಸುಳ್ಳು ಮಾಡುವ ಸಲುವಾಗಿ ಕಳೆದ ಬಾರಿ ದಲಿತರಾಗಿದ್ದ ಶ್ರೀ ಕೋವಿಂದ್ ಆವರನ್ನು ಆಯ್ಕೆ ಮಾಡಿದರೆ, ಈ ಬಾರಿ ಪ್ರಪ್ರಥಮ ಬಾರಿಗೆ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಪರೋಕ್ಷವಾಗಿ ಓರಿಸ್ಸಾದ ಬಿಜು ಜನತಾದಳದವರೂ ಬೆಂಬಲಿಸುವಂತೆ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದ್ದಾರೆ ಎಂದರೂ ಅತಿಶಯವಾಗದು

ಪ್ರದಾನಿಗಳು ಸದಾ ಕಾಲವೂ ಜಪಿಸುವ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮೂಲಕ, ಪಕ್ಷದ ಅತ್ಯಂತ ತಳಮಟ್ಟದವರನ್ನೂ ಗುರುತಿಸಿ, ಸರ್ವಸ್ಪರ್ಶೀ ಸಾಮಾಜಿಕ ದೃಷ್ಟಿಕೋನಕ್ಕೆ ಬದ್ಧವಾಗಿ ನಮ್ಮ ದೇಶದ ಹಿರಿಮೆ, ಗರಿಮೆ, ಪರಂಪರೆ, ವೈವಿಧ್ಯವನ್ನು ಗೌರವಿಸುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಅಪೂರ್ವವೇ ಸರಿ.

ದ್ರೌಪದಿ ಮುರ್ಮು ಅವರಉ 20 ಜೂನ್ 1958 ರಂದು ಭಾರತದ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಶ್ರೀ ಬಿರಂಚಿ ನಾರಾಯಣ ತುಡು ಅವರ ಮಗಳಾಗಿ ಜನಿಸುತ್ತಾರೆ. ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲೇ ಮುಗಿಸಿದ ನಂತರ ಒರಿಸ್ಸಾದ ರಾಜಧಾನಿ ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲೆಯಲ್ಲಿ ಪದವಿಯನ್ನು ಪಡೆದು ಕೆಲ ಕಾಲ, ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಗೌರವ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಕೆಲ ಕಾಲ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಕೆಲಸ ಮಾಡಿದ್ದಾರೆ.

ತಮ್ಮ ಜೀವನ ಉದ್ದಕ್ಕೂ ಬಡತನದಿಂದಾಗಿ ಕಷ್ಟಗಳನ್ನೇ ಅನುಭವಿಸಿ ಬೆಳೆದ ದ್ರೌಪದಿಯವರು ತಮ್ಮ ಮುಂದಿನ ಜೀವನವನ್ನು ಬಡವರು, ದೀನದಲಿತರ ಸಬಲೀಕರಣಕ್ಕಾಗಿ ಮೀಸಲಾಗಿಡಲು ನಿರ್ಧರಿಸಿ ಸಮಾಜ ಸೇವೆಯನ್ನು ಮಾಡುವ ಸಲುವಾಗಿ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸುತ್ತಾರೆ.

  • 1997 ರಲ್ಲಿ ಬಿಜೆಪಿ ಪಕ್ನದಿಂದ ರಾಯರಂಗ್‌ಪುರ ನಗರ ಪಂಚಾಯತ್‌ನಲ್ಲಿ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸುತ್ತಾರೆ. 2000ದಲ್ಲಿ ಅದೇ ಪಂಚಾಯಿತಿಯ ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾಗುತ್ತಾರೆ.
  • murmu1ಅದೇ 2000ರಲ್ಲಿ ನಡೆದ ಒರಿಸ್ಸಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕಿಯಾಗಿ, ಬಿಜೆಡಿ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ನವೀನ್ ಪಟ್ನಾಯಕ್ ಅವರ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ, ಮೀನುಗಾರಿಕೆ ಮತ್ತು ಪಶು ಸಂಗೋಪನೆಯಂತಹ ಪ್ರಭಲ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ.
  • 2002ರಿಂದ 2009ರ ವರೆಗೂ ಮಯೂರ್ ಭಂಜ್ ಜಿಲ್ಲಾ ಬಿಜೆಪಿ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
    2004ರಲ್ಲಿ ಮತ್ತೊಮ್ಮೆ ರಾಯ್ ರಂಗಪುರ್ ವಿಧಾನ ಸಭೆಯ ಶಾಸಕಿಯಾಗಿ ಮರು ಆಯ್ಕೆಯಾಗಿದ್ದಲ್ಲದೇ, 2006ರಿಂದ 2009 ತನಕ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ
  • ಎರಡನೇ ಬಾರಿಗೆ ಶಾಸಕಿಯಾಗಿದ್ದಾಗ, ತಮ್ಮ ನಿಸ್ವಾರ್ಥ ಜನಸೇವೆಯಿಂದಾಗಿ ಅತ್ಯುತ್ತಮ ಶಾಸಕಿ ಎಂದು ನೀಲಕಂಠ ಪ್ರಶಸ್ತಿಗೂ ಸಹಾ ಭಾಜನರಾಗಿದ್ದಾರೆ.
  • urmu5ಪಕ್ಷದ ಶಿಸ್ತಿನ ಸಿಪಾಯಿಯಂತೆ ಚಿಕ್ಕವಯಸ್ಸಿನಲ್ಲೇ ಸಕ್ರೀಯ ರಾಜಕಾರಣದಿಂದ ಹಿಂದೆ ಸರಿದು 2015ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ, 2017ರಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಪಟ್ಟಿಯಲ್ಲಿ ಅವರ ಹೆಸರನ್ನೂ ಸಹಾ ಪರಿಗಣಿಸಲಾಗಿದ್ದದ್ದು ಗಮನಾರ್ಹವಾಗಿದೆ.

ದ್ರೌಪದಿ ಮುರ್ಮು ಅವರು ಜಾರ್ಖಂಡ್‌ನಲ್ಲಿ ರಾಜ್ಯಪಾಲೆಯಾಗಿ, ಅಲ್ಲಿನ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿದ್ದ ಸಂಧರ್ಭದಲ್ಲಿ ಅಲ್ಲಿನ ವಿಶ್ವವಿದ್ಯಾನಿಲಯಗಳಿಗಾಗಿ ಕುಲಪತಿಗಳ ಪೋರ್ಟಲ್ ಅನ್ನು ಪ್ರಾರಂಭಿಸಿದಲ್ಲದೇ ಅದರ ಮೂಲಕ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ಏಕಕಾಲದಲ್ಲಿ ವಿದ್ಯಾರ್ಥಿಗಳ ಆನ್‌ಲೈನ್ ದಾಖಲಾತಿ ಮೊತ್ತ ಮೊದಲಿಗೆ ಪ್ರಾರಂಭ ಮಾಡಿದ ಹೆಗ್ಗಳಿಕೆ ಅವರದ್ದಾಗುತ್ತದೆ. ಇದದಿಂದ ವಿದ್ಯಾರ್ಥಿಗಳು ದಾಖಲಾತಿಯ ಪಾರದರ್ಶಕವಾದ ವ್ಯವಸ್ಥೆಯನ್ನು ಕಾಣುವಂತಾಗಿದೆ. ಅದೇ ರೀತಿಯಲ್ಲೇ ರಾಜ್ಯ ಸರ್ಕಾರ ಪ್ರಜೆಗಳ ಹಿತಕ್ಕಿಂತಲೂ ತಮ್ಮ ರಾಜಕೀಯ ಹಿತಕ್ಕಾಗಿ ಬಿಜೆಪಿಯ ರಘುವರ್ ದಾಸ್ ಸರ್ಕಾರದ ಸಿಎನ್‌ಟಿ-ಎಸ್‌ಪಿಟಿ ತಿದ್ದುಪಡಿ ಮಸೂದೆ, ಹೇಮಂತ್ ಸೋರೆನ್ ಅವರ ಸರ್ಕಾರ ಮಂಡಿಸಿದ್ದ ಬುಡಕಟ್ಟು ಸಲಹಾ ಸಮಿತಿಯ ರಚನೆಗೆ ಸಂಬಂಧಿಸಿದ ಕಡತವನ್ನು ಸಹಾ ಹಲವು ಆಕ್ಷೇಪಗಳೊಂದಿಗೆ ಮರುಪರಿಶೀಲನೆಗಾಗಿ ಸರ್ಕಾರಕ್ಕೆ ಹಿಂದಿರುಗಿಸುವ ಕಠಿಣ ಮತ್ತು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದು ಅವರ ಗರಿಮೆಯಾಗಿದೆ.

murmu2ಮುರ್ಮುರವರು ವಯಕ್ತಿಯ ಜೀವನದಲ್ಲಿ ತಮ್ಮ ಪತಿ ಮತ್ತು ಇಬ್ಬರು ಪುತ್ರರನ್ನು ಕಳೆದುಕೊಂಡ ನಂತರ ತಮ್ಮ ಪುತ್ರಿಯೊಂದಿಗೆ ಜೀವನದಲ್ಲಿ ಆದ ಅಡೆ ತಡೆಗಳನ್ನೆಲ್ಲವನ್ನೂ ದಿಟ್ಟತನದಿಂದ ಎದುರಿಸುತ್ತಲೇ, ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಬುಡಕಟ್ಟು ಜನಾಂಗದ ಅಭ್ಯುದಯಕ್ಕಾಗಿ ದುಡಿದ ಅನುಭವ ಹೊಂದಿದ್ದಾರೆ.

2022ರ ಜುಲೈ ತಿಂಗಳಿನಲ್ಲಿ ನಡೆಯಲಿರುವ 15ನೇ ರಾಷ್ಟ್ರಪತಿ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ, ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಭಾರತದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುವಷ್ಟರ ಮಟ್ಟಿಗೆ ಮುಂದುವರಿದಿದ್ದಾರೆ. ಮುರ್ಮು ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದಲ್ಲಿ ಸರ್ವಪಲ್ಲಿ ರಾಧಾಕೃಷ್ಣರ ನಂತರ ರಾಷ್ಟ್ರಪತಿ ಪದವಿಯನ್ನುಆಲಂಕರಿಸಿದ ಎರಡನೇ ಶಿಕ್ಷಕಿ ಎನಿಸಿಕೊಳ್ಳಲಿದ್ದಾರೆ. ಈ ರೀತಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿ ದೇಶದ ಪ್ರಥಮ ಪ್ರಜೆಯಾಗುವಷ್ಟರ ಮಟ್ಟಿಗೆ ಏರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿದಂತಾಗುತ್ತದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

rashtrapathi

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s