ಶಿವಪುರದ ಸತ್ಯಾಗ್ರಹ ಸೌಧ

sp6ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ  ಸುಮಾರು 80 ಕಿಮಿ ದೂರ ಪ್ರಯಾಣಿಸಿ ಇನ್ನೇನು ವಿಶ್ವವಿಖ್ಯಾತ ಮದ್ದೂರು ತಲುಪುವ ಕೆಲವೇ ಕೆಲವು ಕಿಮೀ ದೂರದಲ್ಲಿ ಹೆದ್ದಾರಿಯಿಂದ ಬಲಗಡೆ ಕೂಗಳತೇ ದೂರದಲ್ಲೇ,  ದೇಶದ ರಾಜಧಾನಿ ದೆಹಲಿಯಲ್ಲಿರುವ ಸಂಸತ್ ಭವನದ ಮಾದರಿಯಂತೆ (ಐಹೊಳೆಯ ದುರ್ಗಾ ದೇವಾಲಯದ ಪ್ರತಿರೂಪ)  ಕಾಣುವ ವಿಶಾಲವಾದ ಕಟ್ಟಡ ಕಣ್ಣಿಗೆ ಬೀಳುತ್ತದೆ. ಕುತೂಹಲದಿಂದ  ಹತ್ತಿರ ಹೋಗಿ ವಿಚಾರಿಸಿದಲ್ಲಿ ಸ್ವಾತಂತ್ರ್ಯ ಸಂಗ್ರಮದ ಕಾಲದಲ್ಲಿ ಮಂಡ್ಯ ಜಿಲ್ಲೆಯ ಈ ಶಿವಪುರ ಕರ್ನಾಟಕದಲ್ಲಿ  ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಇತಿಹಾಸದಲ್ಲಿ ಅಗ್ರ ಸ್ಥಾನ ಪಡೆದುಕೊಂಡ ಕಾರಣ, ಅದರ ನೆನಪಿಗಾಗಿ ಈ ಸತ್ಯಾಗ್ರಹ ಸೌಧವನ್ನು ಕಟ್ಟಲಾಗಿದೆ.

ಅದು ಸ್ವಾತಂತ್ಯ ಪೂರ್ವ 1938ರ ಸಮಯದಲ್ಲಿ ದೇಶಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹತ್ತಿದ್ದಾಗಲೇ, ಇತ್ತ ಮೈಸೂರು ಸಂಸ್ಥಾನದಲ್ಲೂ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಿದ್ಧತೆ  ಆರಂಭವಾಗಿ  ಮೈಸೂರಿನಲ್ಲಿಯೂ ಜಿಲ್ಲಾ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದು ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುವ ಸಲುವಾಗಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದರು. ಅದೇ ಸಮಯದಲ್ಲಿ ಬ್ರಿಟಿಷ್ ಸರ್ಕಾರವು ರೈತರ ಮೇಲೆ ಹೇರಿದ ತೆರಿಗೆಯ ವಿರುದ್ಧ  ಪ್ರತಿಭಟನೆ ನಡೆಸುವ ಯೋಜನೆಯನ್ನು ಸೇರಿಸಿಕೊಂಡು. ಇದೇ  ಚಳವಳಿಯ ಭಾಗವಾಗಿ ಮೈಸೂರಿನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಹಿನ್ನಲೆಯಲ್ಲಿ ಅನೇಕ ಮುಖಂಡರನ್ನು ಬಂಧಿಸಲಾಯಿತು.  ಸ್ವಾತ್ರಂತ್ರ್ಯ ಹೋರಾಟಗಾರರನ್ನು ಬಂಧಿಸಿದ್ದರ ವಿರುದ್ಧ ಆಕ್ರೋಶ ಭರಿತರಾದ  ಹೋರಾಟಗಾರರು ಈ ಧ್ವಜ ಸತ್ರ್ಯಾಗ್ರಹ ಚಳುವಳಿಯನ್ನು ಮೈಸೂರಿನ ಹೊರಗೆಯೂ ನಡೆಸಲು ತೀರ್ಮಾನಿಸಿದ ಕಾರಣ, ಮದ್ದೂರಿನ ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದರು. ಅದಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಶಿವಪುರ ಗ್ರಾಮದ ಶ್ರೀ ತಿರುಮಲಗೌಡ ಅವರ ಕೃಷಿ ಜಮೀನಿನಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸಿ ಅಲ್ಲಿಯೇ  ತ್ರಿವರ್ಣ ಧ್ವಜವನ್ನು ಹಾರಿಸಲು ಸಿದ್ಧತೆ ನಡೆಸುತ್ತಿದ್ದ ಸುದ್ದಿಯನ್ನು ತಿಳಿದ  ಮೈಸೂರಿನ ಮ್ಯಾಜಿಸ್ಟ್ರೇಟರು ಮದ್ದೂರು ಮತ್ತು ಸುತ್ತ ಮತ್ತಲಿನ ಪ್ರದೇಶಗಳಲ್ಲಿ ಒಂದು ತಿಂಗಳ ಕಾಲ ಯಾವುದೇ ರೀತಿಯ ಸಭೆ ಸಮಾರಂಭಗಳು,  ಮೆರವಣಿಗೆ, ಧ್ವಜಾರೋಹಣ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಿದರು

sp3ನ್ಯಾಯಾಲಯದ ನಿಷೇಧಾಜ್ಞೆ ಇದ್ದರೂ ಸಹಾ, 1938 ರ ಏಪ್ರಿಲ್ 9 ರಂದು  ಮದ್ದೂರು ಬಳಿಯ ಶಿಂಷಾ ನದಿ ದಂಡೆಯ ಮೇಲಿರುವ ಶಿವಪುರ ಗ್ರಾಮದಲ್ಲಿ ತಿರುಮಲೇಗೌಡ ಎಂಬವರ ಹೊಲದಲ್ಲಿ ತ್ರಿವರ್ಣ ಧ್ವಜವನ್ನು  ಹಾರಿಸುವ ಮೂಲಕ ಮೈಸೂರು ಅರಸರ ಮೂಲಕ ಬ್ರಿಟಿಷ್ ಸರ್ಕಾರವು ರೈತರ ಮೇಲೆ ಹೇರಿದ ತೆರಿಗೆಯನ್ನು ಪ್ರತಿಭಟಿಸಿದ್ದಲ್ಲದೇ ಮೈಸೂರಿನಲ್ಲಿ ತ್ರಿವರ್ಣಧ್ವಜವನ್ನು ಹಾರಿಸಿದ್ದವರ ಬಂಧನ ವಿರುದ್ದ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು  ಹೊಡೆಯುವಂತೆ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

sp1ತ್ರಿವರ್ಣ ಧ್ವಜವನ್ನು ಹಾರಿಸುವುದೇ ಅಪರಾಧವಾಗಿದ್ದ ಆ ಕಾಲದಲ್ಲಿಯೂ  ಶಿವಪುರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಿಂದ ಮಹಿಳೆಯರು ಸೇರಿದಂತೆ ಸುಮಾರು 10 ಸಾವಿರ ಮಂದಿ ಅಲ್ಲಿ ಜಮಾಯಿಸಿದ್ದರು. ಶ್ರೀ ಸಿದ್ದಲಿಂಗಯ್ಯನವರು ಅಧ್ಯಕ್ಷತೆ ವಹಿಸಿದ್ದ ಆ ಹೋರಾಟದಲ್ಲಿ  ಕೆ.ಸಿ.ರೆಡ್ಡಿ, ಕೆ.ಟಿ.ಭಾಷ್ಯಂ, ಎಚ್.ಸಿ.ದಾಸಪ್ಪ, ಎಂ.ಎನ್. ಜೋಯಿಸ್, ಯಶೋಧಮ್ಮ, ಬಳ್ಳಾರಿ ಸಿದ್ಧಮ್ಮ, ಭಾಗೀರಥಮ್ಮ, ಚಟ್ಟೋಪಾಧ್ಯಾಯ ಮುಂತಾದ ಧುರೀಣರು ಭಾಗವಹಿಸಿದ್ದಾಗ, ಮುನ್ನೆಚರಿಕೆಯ ಕ್ರಮವಾಗಿ ಇವರಲ್ಲಿನ  ಅನೇಕರನ್ನು ಪೊಲೀಸರು ಬಂಧಿಸಲು ಮುಂದಾದಾಗ, ಪೋಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ಸಂಧರ್ಭದಲ್ಲೇ, ದಿಟ್ಟ ಮತ್ತು ಚುರುಕಿನ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಎಂ.ಎನ್.ಜೋಯಿಸ್ ಅವರು, ಕ್ಷಣಾರ್ಧದಲ್ಲಿ ಧ್ವಜಸ್ಥಂಭಕ್ಕೆ ಕಟ್ಟಿದ್ದ ಹಗ್ಗವನ್ನು ಎಳೆಯುವ ಮೂಲಕ ಧ್ವಜ ಹಾರಿಸಿಯೇ ಬಿಟ್ಟರು. ಇಂತಹ ಸಂಭ್ರಮ ಕ್ಷಣಕ್ಕಾಗಿಯೇ ಕಾಯುತ್ತಿದ್ದ ಹೋರಾಟಗಾರರು ವಂದೇ ಮಾತರಂ ಘೋಷಣೆ ಮುಗಿಲು ಮುಟ್ಟುವಂತೆ ಮೊಳಗತೊಡಗಿದ್ದನ್ನು ಕೇಳಿ ಸಿಟ್ಟಿಗೆದ್ದ ಪೊಲೀಸರು ಅಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಬಂಧಿಸಲು ಮುಂದಾಗಿದ್ದಲ್ಲದೇ, ಹೋರಾಟಗಾರರ ವಿರುದ್ಧ ಲಾಠಿ ಪ್ರಹಾರ ನಡೆಸಿದರೂ ಅದ್ಯಾವುದಕ್ಕೂ ಬಗ್ಗದ ಜನರು ಉತ್ಸಾಹದಿಂದಲೇ ಭಾಗವಹಿಸಿ ಮುಂದಿನ ಎರಡು ದಿನಗಳ ಕಾಲ ತುಂಬು ಹೃದಯದ ಸ್ವಾತಂತ್ರ್ಯ ಪ್ರೇಮ, ಸಂಯಮ ಮತ್ತು ಶಿಸ್ತಿನಿಂದ ವರ್ತಿಸಿ ಸಭೆಯ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿದರು.

sp4ಶಿವಪುರದ ಧ್ವಜ ಸತ್ಯಾಗ್ರಹದ ನಂತರ  ರಾಜ್ಯದ ವಿವಿಧೆಡೆಯಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚು ಹೊತ್ತಿ ಕೊಂಡಿತು. ಇವೆಲ್ಲದರ ನೆನಪಿಗಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ  ದೇವರಾಜ್ ಅರಸ್ ಅವರ ನೇತೃತ್ವದಲ್ಲಿ  ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ಸೌಧವನ್ನು ನಿರ್ಮಿಸಿ 1979ರ ಸೆಪ್ಟೆಂಬರ್ 26ರಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆಂಗಲ್ ಹನುಮಂತಯ್ಯ ಅವರಿಂದ  ಉದ್ಘಾಟನೆಗೊಂಡಿದ್ದಲ್ಲದೇ ಆ ಸಭಾಗಂಣದಲ್ಲಿ ಮುಂದಿನ ಪೀಳಿಗೆಯವರಿಗೆ ಪ್ರೇರಣೆಯಾಗುವ ಸಲುವಾಗಿ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಅಳವಡಿಸಲಾಗಿತ್ತು.

sp5ಮುಂದೆ ಶ್ರೀ ಎಂ.ಎಸ್.ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ಈ ಸೌಧದ ಪುನರುಜ್ಜೀವನಕ್ಕೆ ಕೈ ಹಾಕಿ ಸೌಧದ ಪಕ್ಕದಲ್ಲೇ ಮತೊಂದು ಸಭಾಂಗಣವನ್ನು ನಿರ್ಮಾಣ ಮಾಡಲಾಯಿತಾದರೂ, ಸೂಕ್ತವಾದ ನಿರ್ವಹಣೆ ಕೊರತೆಯಿಂದಾಗಿ ಅದರ ಮುಂದಿದ್ದ ಸುಂದರ ಕೈತೋಟ ಒಣಗಿ ಹೋಗಿ, ಅಲ್ಲಿದ್ದ ಬಹುತೇಕ ಅಲಂಕಾರಿಕ ಗಿಡಗಳು ನಾಶವಾಗಿವೆ. ಧ್ವಜ ಸ್ಮಾರಕ ಸೌಧ ಮತ್ತು ಪಕ್ಕದ ಕಟ್ಟಡ ಈಗ ಪಾಳು ಬಿದ್ದು ಬೀದಿ ನಾಯಿಗಳ ವಾಸಸ್ಥಾನವಾಗಿರುವುದಲ್ಲದೇ, ಅನೇಕ ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಬೇಸರದ ಸಂಗತಿಯಾಗಿದೆ. ಸ್ವಾತ್ರಂತ್ರ್ಯ ಪೂರ್ವದಲ್ಲಿ ನಡೆದ ಅಭೂತಪೂರ್ವ ಹೋರಾಟದ ನೆನಪಿಗಾಗಿ ಕಟ್ಟಲಾದ  ಈ ಅಪರೂಪದ ಸ್ಮಾರಕ ಅನಾಥವಾಗಿ ಉಳಿದಿರುವುದು ದುರದೃಷ್ಟಕರವಾಗಿದ್ದು, ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಸ್ವಲ್ಪ ಆಸ್ಥೆ ವಹಿಸಿಕೊಂಡು ಅಭಿವೃದ್ಧಿ ಪಡಿಸಿ, ಸೂಕ್ತವಾಗಿ ನಿರ್ವಹಣೆ ನಡೆಸಿ, ನಮ್ಮ ಮುಂದಿನ ಪೀಳಿಗೆಯವರಿಗೆ, ಸ್ವಾತ್ರಂತ್ಯ ಎನ್ನುವುದು ಕೇವಲ ಕೆಲವು ಜನರ ಉಪವಾಸ ಸತ್ಯಾಗ್ರಹದಿಂದ ದೊರೆತಿದ್ದಲ್ಲ. ಇಂತಹ ಲಕ್ಷಾಂತರ ನಿಸ್ವಾರ್ಥ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳಿಂದ ದೊರೆತಿದೆ ಎಂಬುದನ್ನು ನೆನಪಿಸುವ ಸಲುವಾಗಿಯಾದರೂ, ಈ ಸೌಧವನ್ನು ಕಾಪಾಡಿ ಕೊಳ್ಳಬೇಕಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಂಪದ ಸಾಲು ಪತ್ರಿಕೆಯ ಜುಲೈ 2022 ರ ಸಂಚಿಕೆಯಲ್ಲಿ ಪ್ರಕಟವಾಗಿದೆ

sampa

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s