ಗಣತಂತ್ರ ದೇಶವಾದ ನಮ್ಮ ಭಾರತದಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಎಂಬುದು ಮೂರು ಆಧಾರ ಸ್ಥಂಭಗಳಾಗಿದ್ದು. ಆ ಶಾಸಕಾಂಗದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾದ ಸಾಂದರು ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಲೋಕಸಭೆಯ 543 ಸದಸ್ಯರನ್ನು ಭಾರತದ ಪ್ರಜೆಗಳು ನೇರವಾಗಿ ಆಯ್ಕೆ ಮಾಡಿದರೆ, ರಾಜ್ಯಸಭೆಯ 238 ಸದಸ್ಯರನ್ನು ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಆಯ್ಕೆಯಾದ ಶಾಸಕರುಗಳು ಆಯ್ಕೆ ಮಾಡಿದರೆ, ಉಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ಕೇಂದ್ರಸರ್ಕಾರದ ಶಿಫಾರಸ್ಸಿನ ಮೇರೆಗೆ ನಾಮಕರಣ ಮೂಲಕ ಆಯ್ಕೆ ಮಾಡುತ್ತಾರೆ. ಈ ರೀತಿಯ ನಾಮಕರಣವಾದ ಸದಸ್ಯರುಗಳು ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರು ಇರುತ್ತಾರೆ. ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು (Nominating Member) ಕರೆಯಲಾಗುತ್ತದೆ. ಉಳಿದ ಚುನಾಯಿತ ಸದಸ್ಯರಿಗೆ ಇರುವಷ್ಟೇ ಹಕ್ಕು ಮತ್ತು ಗೌರವಗಳು ಈ ನಾಮ ನಿರ್ದೇಶನಗೊಂಡ ಸದಸ್ಯರಿಗೂ ಇರುವುದು ಗಮನಾರ್ಹವಾಗಿದೆ.
ರಾಜ್ಯ ಸಭೆಯ ಸದಸ್ಯರ ಅವಧಿ 6 ವರ್ಷಗಳದ್ದಾಗಿದ್ದು, ರಾಜ್ಯಸಭೆಯ 1/3ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ಹೀಗಾಗಿ ರಾಜ್ಯಸಭೆಗೆ ನಿಂತರವಾಗಿ ಹೊಸಾ ಸದಸ್ಯರು ಸೇರಿಕೊಳ್ಳುತ್ತಲೇ ಇರುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದಿರುವವರೇ ರಾಜ್ಯ ಸಭೆಯ ಸದಸ್ಯರಾಗುವ ಆಯ್ಕೆಯ ಮಾನದಂಡವಾಗಿರುವ ಕಾರಣ ಇದನ್ನು ಮೇಲ್ಮನೆ ಎಂದು ಕರೆಯಲಾಗುವುದಲ್ಲದೇ, ಇದೊಂದು ಚಿಂತಕರ ಚಾವಡಿ ಎನಿಸಿದೆ. ರಾಜ್ಯಸಭೆಯು ಸಹಾ ಲೋಕಸಭೆಯಂತೆಯೇ ಸಮನಾದ ಅಧಿಕಾರವನ್ನು ಹೊಂದಿದ್ದು, ಲೋಕಸಭೆಯಲ್ಲಿ ಮಂಡನೆಯಾಗಿ ಬಹುಮತದಿಂದ ಅಂಗೀಕೃತವಾದ ಮಸೂದೆಗಳು ಮತ್ತೊಮ್ಮೆ ರಾಜ್ಯಸಭೆಯಲ್ಲಿಯೂ ಸವಿವರವಾಗಿ ಚರ್ಚೆ ನಡೆದು ಅದರ ಸಾಧಕ ಬಾಧಕಗಳನ್ನು ಸಂಪೂರ್ಣವಾಗಿ ನಿರ್ಧರಿಸಿದ ನಂತರ ಸರ್ವ ಸಮ್ಮತದ ಆಯ್ಕೆಯಾದ ಮೇಲಷ್ಟೇ ರಾಷ್ಟಪತಿಗಳ ಅಂಗೀಕಾರಕ್ಕೆ ಕಳುಹಿಸಿ, ರಾಷ್ಟ್ರಪತಿಗಳ ಅಂಗೀಕಾರವಾದ ಮಸೂದಗಷ್ಟೇ ಕಾನೂನಾಗಿ ಅಧಿಕೃತವಾಗಿ ದೇಶಾದ್ಯಂತ ಜಾರಿಗೆ ಅಗುತ್ತದೆ. ಬಹಳಷ್ಟು ಬಾರಿ ವಿವಿಧ ರಾಜಕೀಯ ಹಿತಾಸಕ್ತಿಗಳಿಂದ ಲೋಕಸಭೆಯಲ್ಲಿ ಬಹುಮತ ಪಡೆದಿದ್ದರೂ, ರಾಜ್ಯಸಭೆಯ ಚರ್ಚೆಯ ಸಮಯದಲ್ಲಿ ತಿರಸ್ಕತವಾದ ಉದಾಹಣೆಗಳೂ ಇರುವ ಕಾರಣ ರಾಜ್ಯಸಭೆಗೆ ಅತ್ಯಂತ ಗೌರವವಿದೆ. ಇತ್ತೀಚಿನ ದಿನಗಳಲ್ಲಿ ಈ ಚಿಂತಕರ ಚಾವಡಿಯೂ ಜನರಿಂದ ನೇರವಾಗಿ ಗೆಲ್ಲಲಾಗದ ಅಥವಾ ಸೋಲಿಸಲ್ಪಟ್ಟ ರಾಜಕಾರಣಿಗಳ ನಿರಾಶ್ರಿತತಾಣವಾಗಿ ಮಾರ್ಪಾಡಾಗಿರುವುದು ದೇಶದ ಹಿತದೃಷ್ಟಿಗೆ ಮಾರಕವಾಗಿದೆ.
ಇದುವರೆವಿಗೂ ಈ ರಾಜ್ಯಸಭೆಯ ನಾಮನಿರ್ದೇಶನಗಳೂ ಸಹಾ ರಾಜಕೀಯದ ವಾಸನೆ ಬಡಿದು ತಮ್ಮ ಪಕ್ಷಗಳ ಕಾರ್ಯಕರ್ತರನ್ನೇ ಆಯ್ಕೆಮಾಡುವ ಮೂಲಕ ಹಿಂಬಾಗಿಲಿನ ರಾಜಕಾರಣ ಮಾಡುತ್ತಿದ್ದರು. ಈ ಬಾರಿ ಅನುರೂಪ ಮತ್ತು ಅಪರೂಪ ಎನ್ನುವಂತೆ ಈ ಚಿಂತಕರ ಚಾವಡಿಗೆ ಯಾವುದೇ ರಾಜಕೀಯ ಸೋಂಕಿಲ್ಲದ್ದಿದ್ದ ವಿವಿಧ ಕ್ಷೇತ್ರಗಳಲ್ಲಿ ಗುರುತರವಾದ ಸಾಧನೆ ಮಾಡಿದ್ದ ಚಲುವಾದವರನ್ನೇ ಆಯ್ಕೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ಈ ಬಾರಿ 4 ಸ್ಥಾನಗಳಿಗೆ ದಕ್ಷಿಣ ಭಾರತ ನಾಲ್ಕು ರಾಜ್ಯಗಳಿಂದ ಆಯ್ಕೆ ಮಾಡಲಾಗಿದೆ ಕರ್ನಾಟಕದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು, ತಮಿಳುನಾಡಿನಿಂದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕರಾದ ಶ್ರೀ ಇಳಯರಾಜ, ಅವಿಭಜಿತ ಆಂಧ್ರದಿಂದ ಚಲನಚಿತ್ರ ಸಾಹಿತಿಗಳಾದ ಶ್ರೀ ವಿಜೇಂದ್ರರವರಾದರೆ, ಕೇರಳದಿಂದ, ತನ್ನ ಕ್ರೀಡಾ ಸಾಧನೆಯ ಮೂಲಕ ದೇಶ ವಿದೇಶದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ಪಯ್ಯೋಳಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿಪಡೆದಿರುವ ಶ್ರೀಮತಿ ಪಿ.ಟಿ.ಉಷಾರವರು ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯನ್ನು ತರಿಸುತ್ತಿರುವುದಲ್ಲದೇ, ಪ್ರಸ್ತುತ ಸರ್ಕಾರ ಮಹೋನ್ನತ ಸಾಥನೆ ಮಾಡಿದ ಭಾರತೀಯರನ್ನು ಗುರುತಿಸಿ ಅವರಿಗೆ ಅವಕಾಶವನ್ನು ಕಲ್ಪಿಸಿ ಕೊಡುತ್ತಿರುವುದು ದೇಶವಾಸಿಗಳ ಮೆಚ್ಚುಗೆಯನ್ನು ಪಡೆಯುತ್ತಿವೆ.
ನಾಲ್ಕು ನಾಮನಿರ್ದೇಶಿತ ಸದಸ್ಯರುಗಳು ಸಹಾ ತಮ್ಮ ತಮ್ಮ ವೃತ್ತಿಜೀವನದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ಅವರವರ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆದವರಾಗಿದ್ದು, ರಾಜ್ಯಸೆಭೆಯಲ್ಲಿ ಅವರ ಉಪಸ್ಥಿತಿಯಿಂದಾಗಿ ರಾಜ್ಯಸಭೆಗೆ ಮತ್ತಷ್ಟು ಶೋಭೆಯನ್ನು ತಂದು ಕೊಡುತ್ತದೆ ಎಂದರೂ ಅತಿಶಯವಲ್ಲ. ಈ ಪಟ್ಟಿಯಲ್ಲಿ ಇಬ್ಬರು ಪದ್ಮವಿಭೂಷಣ ಮತ್ತು ಒಬ್ಬರು ಪದ್ಮಶ್ರೀ ಪುರಸ್ಕೃತರು ಇದ್ದಾರೆ ಎಂದರೆ ಈ ಬಾರಿಯ ಆಯ್ಕೆಯ ಗುಣಮಟ್ಟ ಗುಣಮಟ್ಟ ಎಂತಹದ್ದು ಎಂಬುದರ ಅರಿವಾಗುತ್ತದೆ ಹೀಗೆ ನಾಮ ನಿರ್ದೇಶಿತರಾದ ನಾಲ್ವರ ಕಿರುಪರಿಚಯ ಹೀಗಿದೆ.
ಪಿ. ಟಿ. ಉಷಾ
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಪುಟ್ಟ ಹಳ್ಳಿಯಾದ ಪಯ್ಯೋಳಿಯಲ್ಲಿ ಜನಿಸಿ ಗುರು ಓಂ ನಂಬಿಯಾರ್ ಅವರ ಗರಡಿಯಲ್ಲಿ ಪಳಗಿ ಭಾರತದ ಅತ್ಯಂತ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದದ್ದು ನಿಜಕ್ಕೂ ದೇಶದ ಕೋಟ್ಯಾಂತರ ಜನರಿಗೆ ಮಾದರಿ ಮತ್ತು ಸ್ಫೂರ್ತಿಯಾಗಿದ್ದಾರೆ ಎಂದರೂ ತಪ್ಪಾಗದು. ಅದರಲ್ಲೂ ಪುರುಷಪ್ರಧಾನವಾದ ಈ ಸಮಾಜದಲ್ಲಿ ಹೆಣ್ಣುಗಳನ್ನು ಕೇವಲ ಮನೆ ಮುಸುರೆ ತೊಳೆಯುವುದಕ್ಕಷ್ಟೇ ಸೀಮಿತ ಎಂದು ತಿಳಿದಿದ್ದಂತಹ ಕಾಲದಲ್ಲಿ ಒಂದು ಹೆಣ್ಣು ಮಗಳಾಗಿ ಮೈದಾನಕ್ಕೆ ಇಳಿದು, 100, 200, 400, 100×4, 400×4 ಓಟ ಮತ್ತು ಹರ್ದಲ್ಸ್ ಹೀಗೆ ಮೈದಾನದ ಓಟದಲ್ಲಿ ಅದುವರೆವಿಗೂ ಇದ್ದ ಎಲ್ಲಾ ದಾಖಲೆಗಳನ್ನು ಮುರಿದು ಪಯ್ಯೋಳಿ ಎಕ್ಸ್‌ಪ್ರೆಸ್ ಎಂದು ಜನಪ್ರಿಯವಾಗಿ ದೇಶ ವಿದೇಶಗಳ ಹತ್ತಾರು ಕ್ರೀಡಾಕೂಟಗಳಲ್ಲಿ ನೂರಾರು ಪದಕಗಳನ್ನು ಗಳಿಸಿದ ಖ್ಯಾತಿ ಹೊಂದಿದ್ದಾರೆ, 1984ರ ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕೂದಲೆಳೆಯಲ್ಲಿ ಕಂಚಿನ ಪದಕದಿಂದ ವಂಚಿತಳಾದಾಗ ದುಃಖಿಸದ ಭಾರತೀಯರೇ ಇಲ್ಲ.
ನಂತರದ ದಿನಗಳಲ್ಲಿ ದೇಶಿಯ ಮತ್ತು ಏಷ್ಯನ್ ಮಟ್ಟದಲ್ಲಿ ಇಂದಿಗೂ ಮುರಿಯಲಾಗದಂತಹ ದಾಖಲೆಗಳನ್ನು ಮಾಡಿ ಕ್ರೀಡೆಯಿಂದ ನಿವೃತ್ತಿಯ ನಂತರ ತಮ್ಮದೇ ಆದ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಅನ್ನು ಆರಂಭಿಸಿ, ಉದಯೋನ್ಮುಖ ಕ್ರೀಡಾಪಟುಗಳಿಗೆ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ. ತಮ್ಮ ಕ್ರೀಡಾ ವಿಶಿಷ್ಟ ಸಾಧನೆಗಳಿಗಾಗಿ ಈಗಾಗಲೇ ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ಗಿಗಳಿಗೆ ಭಾಜನರಾಗಿದ್ದಾರೆ.
ಇಳಯರಾಜ
ತಮಿಳು ನಾಡಿನ ಮಧುರೈನ ಹಳ್ಳಿಯೊಂದರ ದಲಿತರ ಮನೆಯಲ್ಲಿ ಜನಿಸಿದ ಅಪ್ಪಟ ದೇಸೀ ಪ್ರತಿಭೆ ಇಂದು ಕನ್ನಡ, ತಮಿಳು ಸೇರಿದಂತೆ ವಿವಿಧ ಭಾಷೆಯಲ್ಲಿ ೧೦೦೦ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸುವ ಮೂಲಕ ದೇಶ ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಲ್ಯದಿಂದಲೇ ಸಂಗೀತದಲ್ಲಿ ಅಪಾರವಾದ ಆಸಕ್ತಿ ಇದ್ದ ಕಾರಣ ಸಹೋದರರೊಂದಿಗೆ ತಮ್ಮ ಊರಿನಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳು ಮತ್ತು ಭಜನೆಗಳನ್ನು ನೋಡಿ ಮತ್ತು ಕೇಳಿಯೇ ಕಲಿತುಕೊಂಡು ಅದನ್ನು ಎಲ್ಲರ ಮುಂದೆ ಪ್ರದರ್ಶಿಸಲು ಮುಂದಾದಾಗ, ಅಪಾರವಾದ ಜಾತಿ ಆಧಾರಿತ ತಾರತಮ್ಯಗಳನ್ನು ಎದುರಿಸಬೇಕಾದದ್ದಲ್ಲದೇ, ತಮ್ಮ ಕಲಾ ಸಾಧನೆಗಾಗಿ ಊರು ಊರಿನಲ್ಲಿ ಅಲೆದಾಡುತ್ತಾ ನಾಟಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಾ, ಅಂತಿಮವಾಗಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಅವರ ಬಳಿ ಗಿಟಾರ್ ವಾದಕರಾಗಿ ಸೇರಿಕೊಂಡ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಐದು ದಶಕಗಳ ಸಿನಿಮಾ ವೃತ್ತಿ ಜೀವನದಲ್ಲಿ, 1000ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವುದಲ್ಲದೇ, 7000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವುದಲ್ಲದೇ, ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತಿತರ ಖ್ಯಾತ ಗಾಯಕ ಗಾಯಕಿಯೊಂದಿಗೆ ದೇಶ, ವಿದೇಶದಲ್ಲಿ 20000 ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ.
ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಡಿಎಂಕೆ ಆಡಳಿತದ ಸರ್ಕಾರವು ಅವರ ಪಕ್ಷದ ಹಿರಿಯ ನಾಯಕರಾಗಿದ್ದ ಶ್ರೀ ಪೆರಿಯಾರ್ ಅವರ ಜೀವನ ಚರಿತ್ರೆ ಆಧಾರಿತ ಚಲನಚಿತ್ರವನ್ನು ತಯಾರಿಸಲು ನಿರ್ಧರಿಸಿ ಅಂತಹ ಮಹತ್ವಾಕಾಂಶೆಯ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ಇಳೆಯರಾಜ ಅವರನ್ನು ಕೋರಿಕೊಂಡಾಗ, ನನ್ನ ಸಂಗೀತದಲ್ಲಿ ಸರಸ್ವತಿ ಮಾತೆ ನೆಲೆಸಿದ್ದಾಳೆ, ದೇವರೇ ಇಲ್ಲ ಎಂದು ಪ್ರತಿಪಾದಿಸಿದ ಪೆರಿಯಾರ್ ಅವರ ಚಲನಚಿತ್ರದಲ್ಲಿ ನಾನು ಹೇಗೆ ಭಾಗವಾಗಬಲ್ಲೆ? ಎಂದು ಹೇಳುವ ಮೂಲಕ ಕೈ ತುಂಬಾ ಹಣ ಮತ್ತು ಖ್ಯಾತಿ ಸಿಗುತ್ತಿದ್ದ ಚಿತ್ರವನ್ನು ಧಿಕ್ಕರಿಸುವ ಮೂಲಕ ಮತ್ತಷ್ಟು ಖ್ಯಾತಿಯನ್ನು ಪಡೆದಂತಹ ಕೀರ್ತಿ ಅವರದ್ದಾಗಿದೆ. ಇಂದಿಗೂ ಸಹಾ ವರ್ಷಕ್ಕೆ ಐದಾರು ಬಾರಿ ಕೊಲ್ಲೂರಿನ ಮೂಕಾಂಬಿಕೆಯ ದರ್ಶನವನ್ನು ಪಡೆಯುತ್ತಾರೆ ಎನ್ನುವುದು ಗಮನಾರ್ಹವಾಗಿದೆ. 2018 ರಲ್ಲಿ ನಾಡಿನ ಶ್ರೇಷ್ಠ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆ. ವಿ. ವಿಜಯೇಂದ್ರ ಪ್ರಸಾದ್
ಅವಿಭಜಿತ ಆಂಧ್ರಪ್ರದೇಶದ ಕೊವ್ವೂರಿನಲ್ಲಿ ಜನಿಸಿದ ಕೆ.ವಿ.ವಿಜಯೇಂದ್ರ ಪ್ರಸಾದ್ ಪ್ರಸ್ತುತ ದೇಶ ಕಂಡ ಅತ್ಯುತ್ತಮ ಚಿತ್ರಕಥೆಗಾರರು ಮತ್ತು ಚಲನಚಿತ್ರ ನಿರ್ದೇಶಕರಾಗಿದ್ದಾರೆ. ಭಾರತೀಯ ಚಲನಚಿತ್ರರಂಗದಲ್ಲಿ ವಿಶಿಷ್ಟವಾದ ದಾಖಲೆಗಳನ್ನು ಬರೆದಿರುವ ಮಗಧೀರ, ಮಣಿಕರ್ಣಿಕಾ ಜಾನ್ಸಿರಾಣಿ, RRR, ಬಾಹುಬಲಿ 1 & 2 ಮತ್ತು ಬಜರಂಗಿ ಭಾಯಿಜಾನ್ ಸೇರಿದಂತೆ ಹತ್ತು ಹಲವಾರು ಚಿತ್ರಗಳಿಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆಯುವ ಮೂಲಕ ಕಲಾವಿದರ ಕಣ್ಮಣಿಯಾಗಿದ್ದಾರೆ. ಅವರ ಚಿತ್ರ ಕಥೆಗಳಲ್ಲಿ ನಾಡು, ನುಡಿ, ದೇಶ ಪ್ರೇಮ, ಧರ್ಮ ಆಧಾರಿತ ವಿಷಯಗಳನ್ನೇ ಆಯ್ಕೆಮಾಡಿಕೊಳ್ಳುವ ಮೂಲಕ ಇಂದಿನ ಯುವಜನತೆಯಲ್ಲಿ ದೇಶ ಪ್ರೇಮ, ಸಾಂಸ್ಕೃತಿಕ ಏಕತೆ ಮತ್ತು ಹೆಮ್ಮೆಯನ್ನು ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು ತಪ್ಪಾಗದು. ಅವರ ಮಗ S.S. ರಾಜಮೌಳಿಯವರು ಸಹಾ ಈ ದೇಶ ಕಂಡ ಅತ್ಯಂತ ಶ್ರೇಷ್ಠರಲ್ಲಿ ನಿರ್ದೇಶಕರಲಿ ಒಬ್ಬರಾಗಿರುವುದು ಗಮನಾರ್ಹವಾಗಿದೆ. ತಮ್ಮ ಕಥೆ ಮತ್ತು ಚಿತ್ರಕಥೆಗಳಿಗಾಗೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳಲ್ಲದೇ, ಫಿಲ್ಮ್ ಫೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸಮಸ್ತ ಕನ್ನಡಿಗರಿಗೆ ಹೆಮ್ಮೆ ತರುವಂತಹ ವಿಷಯವೆಂದರೆ ಶ್ರೀ ವಿಜಯೇಂದ್ರ ಪ್ರಸಾದ್ ಅವರು ಬಳ್ಳಾರಿಯ ಮೂಲದವರಾಗಿದ್ದು ಅವರ ಮನೆಯ ಮಾತು ಕನ್ನಡವಾಗಿದೆ. ಹಾಗಾಗಿಯೇ ಅವರ ಮಗ ರಾಜಮೌಳಿಯವರು ಸಹಾ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕನ್ನಡದಲ್ಲೇ ವ್ಯವಹರಿಸುವುದು ಮೆಚ್ಚುಗೆಯ ಅಂಶವಾಗಿದೆ
ವೀರೇಂದ್ರ ಹೆಗ್ಗಡೆ
ತಮ್ಮ ತಂದೆ ರತ್ನಾಕರ ಹೆಗ್ಗಡೆಯವರ ಅಕಾಲಿಕವಾಗಿ ಮರಣ ಹೊಂದಿದಾಗ ಪದವಿಯನ್ನು ಓದುತ್ತಿದ್ದ ಶ್ರೀ ವೀರೇಂದ್ರ ಹೆಗ್ಗಡೆಯವರು ತಮ್ಮ 20ನೇ ವಯಸ್ಸಿನಲ್ಲಿಲೇ ಧರ್ಮಸ್ಥಳದ ದೇವಸ್ಥಾನದ ಧರ್ಮಾಧಿಕಾರಿಗಳಾಗಿ ಅಧಿಕಾರವನ್ನು ವಹಿಸಿಕೊಂಡು ಸುಮಾರು 5 ದಶಕಗಳಿಗೂ ಅಧಿಕ ಸಮಯದಲ್ಲಿ ಧರ್ಮಸ್ಥಳದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವುದರ ಜೊತೆಯಲ್ಲಿಯೇ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗದ ಉತ್ತೇಜನದ ಅರಿವು ಮೂಡಿಸುವ ಸಲುವಾಗಿ ಗ್ರಾಮೀಣ ಯುವಕರಿಗೆ ತರಬೇತಿ ನೀಡವ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯನ್ನು (RDSETI) ಪ್ರಾರಂಭಿಸಿ ಅದರ ಮೂಲಕ ಲಕ್ಷಾಂತರ ಕುಟಂಬದ ಆಶಾಕಿರಣವಾಗಿದ್ದಾರೆ.
ರಾಜ್ಯದ ನಾನಾ ಭಾಗಗಳಲ್ಲಿ ಸುಮಾರು 25ಕ್ಕೂ ಅಧಿಕ ಶಾಲಾ ಮತ್ತು ಕಾಲೇಜುಗಳನ್ನು ಆರಂಭಿಸುವ ಮೂಲಕ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಒದಗಿಸುತ್ತಿರುವುದು ಶ್ಲಾಘಾನೀಯವಾಗಿದೆ. ದೇಸೀ ಆರೋಗ್ಯ ಆಯುರ್ವೇದ ಪದ್ದತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವ ಸಲುವಾಗಿ ಹತ್ತಾರು ಕಡೆಯಲ್ಲಿ ಉತ್ತಮ ಗುಣಮಟ್ಟದ ಅಧುನಿಕ ಶೈಲಿಯ ಆಯುರ್ವೇದ ಆಸ್ಪತ್ರೆಗಳು ಮತ್ತು ಕಲಿಕಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಸಾಮಾಜಿಕ ಕಳಕಳಿಯನ್ನೂ ಮೆರೆದಿದ್ದಾರೆ.
ಪ್ರತಿವರ್ಷ ಮೂರ್ನಾಲ್ಕು ದಶಕಗಳಿಂದಲೂ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಉಚಿತ ಕಲ್ಯಾಣ ಕಾರ್ಯಕ್ರಮದಲ್ಲಿ ಲಕ್ಶಾಂತರ ಸತಿಪತಿಗಳಾಗಿ ಸರಳ ಮತ್ತು ಸಂತೋಷಕರ ಜೀವನವನ್ನು ನಡೆಸುತ್ತಿದ್ದಾರೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಕಣ್ಮನ ತಣಿಸಲು ಮಂಜುನಾಥಸ್ವಾಮಿಯಾದರೆ, ಅವರ ಉದರವನ್ನು ತಣಿಸಲು ಶುಚಿ ರುಚಿಯ ಆಧುನಿಕ ಪದ್ದತಿಯ ಪಾಕಶಾಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ಖಾವಂದರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸೇವೆಗಾಗಿ ಕೇಂದ್ರ ಸರ್ಕಾರ 2015ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ, ದೇಶ ವಿದೇಶಗಳ ಸಾವಿರಾರು ಸಂಘ ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಒತ್ತುವ ಮೂಲಕ ತಿಳಿಯಬಹುದಾಗಿದೆ.
ಸಿನಿಮಾ ಕ್ಷೇತ್ರ ಎಂದರೆ ಕೇವಲ ಬಾಲಿವುಡ್ ಹಿಂದಿ ಸಿನಿಮಾ, ಕ್ರೀಡೆ ಎಂದರೆ ಕ್ರಿಕೆಟ್ ಎಂದೇ ಭಾವಿಸಿ ಆ ಕ್ಷೇತ್ರದ ಸಾಧಕರಿಗಷ್ಟೇ ರಾಜ್ಯ ಸಭೆಗೆ ನಾಮನಿರ್ದೇಶನ ಮಾಡುತ್ತಿದ್ದ ಸಂಪ್ರದಾಯವನ್ನು ಮುರಿಯುವುದರ ಜೊತೆಗೆ ದಾವಿಡ ಪ್ರಾದೇಶಿಕ ಅಸ್ಮಿತೆ ಮತ್ತು ಅಸ್ಥಿತ್ವ ಎಂದು ಭಾರತದ ಒಕ್ಕೂಟ ರಾಷ್ಟ್ರದ ಏಕತೆಯ ವಿರುದ್ಧವೇ ಜನರನ್ನು ಪ್ರೇರೇಪಿಸುತ್ತಾ ಸ್ವಾಯುತ್ತತೆಯನ್ನು ಬಯಸುತ್ತಿದ್ದ ದಕ್ಷಿಣ ಭಾರತದ ಕೆಲವು ರಾಜಕೀಯ ನಾಯಕರಿಗೆ ಈ ರೀತಿಯಾಗಿ ದಕ್ಷಿಣ ಭಾರತದ ಸಾಧಕರನ್ನೇ ರಾಜ್ಯಸಭೆಗೆ ನಾಮಕರಣ ಮಾಡಿ ಅವರೆಲ್ಲರಿಗೂ ಮುಟ್ಟಿ ನೋಡಿ ಕೊಳ್ಳುವಂತಹ ಆಘಾತವನ್ನು ನೀಡಿದ್ದಾರೆ. ಇನ್ನು ಆಯ್ಕೆಯಾದ ನಾಲ್ವರಲ್ಲಿ ಇಬ್ಬರು ಕನ್ನಡಿಗರು ಎಂಬುದು ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸುವಂತಿದೆ. ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯ ಮತ್ತು ಭಾಷೆಗಳ ವಿವಿಧ ಜಾತಿ ಮತ್ತು ಧರ್ಮದರಾಗಿದ್ದರೂ ಅಪಾರವಾದ ದೇಶ ಪ್ರೇಮವನ್ನು ಇಟ್ಟುಕೊಂಡು ದೇಶವಾಸಿಗಳಿಗೆ ಪ್ರೇರಣೆ ನೀಡಬಲ್ಲಂತಹವರನ್ನು ಆಯ್ಕೆ ಮಾಡುವ ಮೂಲಕ ಪ್ರಸ್ತುತ ಸರ್ಕಾರ ಮತ್ತೊಂದು master stroke ಬಾರಿಸುವ ಮೂಲಕ ದೇಶವಾಸಿಗಳ ಹೃದಯದಲ್ಲಿ ಮತ್ತಷ್ಟು ಮಗದಷ್ಟು ಆಶಾವಾದವನ್ನು ಹುಟ್ಟು ಹಾಕುವ ಮೂಲಕ ಹತ್ತಿರವಾಗಿದ್ದಾರೆ ಎಂದರೂ ತಪ್ಪಾಗದು.
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಅಪಾರವಾದ ಸಾಧನೆಗಳನ್ನು ಮಾಡಿ ವಿಶ್ವವಿಖ್ಯಾತರಾಗಿರುವ ಈ ನಾಲ್ವ ಮಹನೀಯರು, ಹೀಗೆ ಅಚಾನಕ್ಕಾಗಿ ಅಪರೂಪವಾಗಿ ಸಿಕ್ಕಿರುವಂತಹ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜನಪರ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಮಗದಷ್ಟು ಮಾಡುವಂತಾಗಲಿ ಎಂದು ನಮ್ಮ ನಿಮ್ಮೆಲ್ಲರ ಆಶಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಸಮಯೋಚಿತ ಸಂದರ್ಭೋಚಿತ ಬರಹ ಧನ್ಯವಾದಗಳು
LikeLiked by 1 person
ಧನ್ಯೋಸ್ಮಿ
LikeLike