ಚಿಕ್ಕಮಗಳೂರು ಚಿಲ್ಲೆಯ ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದ ಆ ಪುಟ್ಟ ಹುಡುಗಿಗೆ ಇನ್ನೂ ಕೇವಲ 17ವರ್ಷ ವಯಸ್ಸಷ್ಟೇ. ಕೆಲವೇ ತಿಂಗಳುಗಳ ಹಿಂದೆಯಷ್ಟೇ ಎಸ್.ಎಸ್.ಎಲ್.ಸಿ ಪಾಸ್ ಮಾಡಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾಭ್ಯಾಸಕ್ಕಾಗಿ ಚಿಕ್ಕಮಗಳೂರಿಗೆ ಪ್ರತೀ ದಿನ ಬಸ್ಸಿನನಲ್ಲಿ ಬಂದು ಹೋಗುತ್ತಿದ್ದ ಚುರುಕಿನ ಮತ್ತು ಅಷ್ಟೇ ಸುರದ್ರೂಪಿ ಹುಡುಗಿಯಾಗಿದ್ದಳು. ಬದುಕಿನಲ್ಲಿ ಬೆಟ್ಟದಷ್ಟು ಆಸೆಗಳನ್ನು ಹೊತ್ತಿದ್ದ ಆಕೆಗೆ, ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ, ಕಾಲ ಬಂದಾಗಾ, ವಿಧಿಯಾಟದ ಮುಂದೆ ನಮ್ಮದೇನೂ ನಡೆಯುವುದಿಲ್ಲ ಎನ್ನುವಂತಹ ಕರುಣಾಜನಕವಾದರೂ, ಅಷ್ಟೇ ಹೃದಯವಿದ್ರಾವಕದ ಜೊತೆಗೆ ಪ್ರೇರಣಾತ್ಮಕವಾದ ಕಥೆ-ವ್ಯಥೆ ನಿಮ್ಮೊಂದಿಗೆ ಹಂಚಿಕೊಳ್ತಾ ಇದ್ದೀನಿ.
ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದ ಶೇಖರ್ ನಾಯಕ್ ಮತ್ತು ಲಕ್ಷ್ಮಿ ಬಾಯಿ ದಂಪತಿಗಳ 17ವರ್ಷದ ಪುತ್ರಿ ರಕ್ಷಿತಾ ಬಾಯಿ ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ. ಎಂದಿನಂತೆ 2022ರ ಸೆಪ್ಟಂಬರ್ 18ರಂದು ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಬಸ್ ಹತ್ತಿದ ರಕ್ಷಿತಾ, ಎಐಟಿ ವೃತ್ತದ ಸಮೀಪದಲ್ಲಿ ಬಸ್ ನಿಂತಿದೆ ಎಂದು ಇಳಿಯಲು ಅನುವಾದಾಗ, ಚಾಲಕನ ಅಜಾಗರೂಕತೆಯೋ, ಉದ್ಧಟನವೋ ಇಲ್ಲವೇ ನಿಲಕ್ಷತನದಿಂದಲೋ ಏನೋ, ನಿಂತಿದ್ದ ಬಸ್ ಇದ್ದಕ್ಕಿದ್ದಂತೆಯೇ ಚಲಿಸಲಾರಂಭಿಸಿದಾಗ ಅಯತಪ್ಪಿದ ರಕ್ಷಿತ ಬಸ್ ನಿಂದಾ ಏಕಾಏಕಿ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಳು. ಕೂಡಲೇ ಸ್ಥಳೀಯರ ನೆರವಿನಿಂದ ಹತ್ತಿರದ ಸರ್ಕಾರೀ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ದುರಾದೃಷ್ಟವಷಾತ್, ದೇಹದ ಬಾಹ್ಯ ಅಪಘಾತಕ್ಕಿಂತಲೂ, ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ಆಕೆಯ ಮೆದುಳು ನಿಷ್ಕ್ರಿಯಗೊಂಡ ಕಾರಣ ಆ ಪುಟ್ಟ ವಯಸ್ಸಿನ ರಕ್ಷಿತಾ ಬಾಯಿ ಜೀವಂತ ಶವವಾಗಿ ಹೋಗಿದ್ದು ನಿಜಕ್ಕೂ ದುಃಖಕರವಾದ ಸಂಗತಿಯಾಗಿತ್ತು. ದೇಹದ ಇತರೇ ಯಾವುದೇ ಭಾಗಗಳಿಗೆ ಪೆಟ್ಟಾದರೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸರಿಪಡಿಸುವ ಸೌಲಭ್ಯ ವೈದ್ಯಕೀಯ ವ್ಯವಸ್ಥೆಯಲ್ಲಿದ್ದರೆ, ಇಮ್ಮೆ ಮೆದುಳು ನಿಶ್ಕ್ರಿಯೆಗೊಂಡ ನಂತರ ಸರಿಪಡಿಸಲಾಗದು. ಇದೇ ಪರಿಸ್ಥಿತಿಯಲ್ಲಿ ಆಕೆ ವರ್ಷಾನುಗಟ್ಟಲೆ ಮಲಗಿದ್ದ ಜಾಗದಲ್ಲೇ ಇರಬೇಕಾಗುತ್ತದೆ ಎಂಬ ವಿಷಯವನ್ನು ರಕ್ಷಿತಾಳ ಕುಟುಂಬದವರಿಗೆ ವೈದ್ಯರು ಬಹಲ ವಿಷಾಧದಿಂದ ತಿಳಿಸಿದಾಗ, ಇಡೀ ಕುಂಟುಂಬವೇ ಮಮ್ಮಲ ಮರುಗಿತಾದರೂ, ನಂತರ ಆ ಕುಟುಂಬ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವೇ ಸರಿ.
ಅದಾವ ಗಳಿಗೆಯಲ್ಲಿ, ಅದಾವ ಕಾರಣದಿಂದ ಆಕೆಗೆ ಅವರ ತಂದೆ ಮತ್ತು ತಾಯಿಯರು ರಕ್ಷಿತಾ ಎಂದು ಹೆಸರಿಟ್ಟರೋ ಕಾಣೇ, ಆಕೆ ನಿಜ ಜೀವನದಲ್ಲೂ 9 ಜನರನ್ನು ರಕ್ಷಿಸುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಳು. ಪುತ್ರಿಯ ಈ ರೀತಿಯ ಅಕಾಲಿಕ ಅಘಾತ ಅವರ ಕುಟುಂಬಕ್ಕೆ ತೀವ್ರವಾದ ದುಃಖವನ್ನುಂಟು ಮಾಡಿದರೂ, ಇನ್ನು ಆಕೆ ಬದುಕಲು ಸಾಧ್ಯವಿಲ್ಲ ಎಂಬುದನ್ನು ಅರಿತ ಆಕೆಯ ಕುಟುಂಬದವರು, ಆಕೆಯ ಅಂಗಾಂಗಗಳನ್ನು ದಾನ ಮಾಡಲು ಮುಂದಾಗುವ ಮೂಲಕ ರಕ್ಷಿತಾಳ ಸಾವಿನಲ್ಲೂ ಸಾರ್ಥಕತೆ ಭಾವ ಮೂಡಿಸಲು ಮುಂದಾದರು.
ರಕ್ಷಿತಾಳ ಅಂಗಾಂಗ ದಾನಕ್ಕೆ ಪೋಷಕರು ಸಮ್ಮತಿ ನೀಡುತ್ತಲೇ, ಜಿಲ್ಲಾಸ್ಪತ್ರೆಯ ವೈದ್ಯರು, ಜೀವನ ಸಾರ್ಥಕ ಸಂಸ್ಥೆಯಿಂದ (ಸ್ಟೇಟ್ ಆರ್ಗನ್ ಅಂಡ್ ಟಿಶ್ಯು ಟ್ರಾನ್ಸ್‌ಪ್ಲಾಂಟೇಷನ್ ಆರ್ಗನೈಸೆಷನ್– ಎಸ್‌ಒಟಿಟಿಒ)ಯನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಂತೆ ದೇಶದ ವಿವಿದೆಡೆಯಲ್ಲಿ ವಿವಿಧ ಅಂಗಾಂಗಗಳ ಅಗತ್ಯವಿರುವವರ ಪಟ್ಟಿಯನ್ನು ಪಡೆದು ರಕ್ಷಿತಾಳ ಅಂಗ ಅವರ ದೇಹದೊಂದಿಗೆ ಜೋಡಿಸಲು ಸಾಧ್ಯವೇ ಎಂಬ ಮೂಲಭೂತ ಪರೀಕ್ಷೆಯನ್ನು ಆ ಕೂಡಲೇ ನಡೆಸಿ, ತಜ್ಞರ ತಂಡವು ಸೆಪ್ಟಂಬರ್ 22ರ ಬೆಳಿಗ್ಗೆ 8 ರಿಂದ ಮಧ್ಯಾಹ್ನದ 1 ಗಂಟೆವರೆಗೆ ಅಂಗಾಂಗಳನ್ನು ತೆಗೆಯುವ ಪ್ರಕ್ರಿಯೆ ನಡೆಸಿದರು.
ರಕ್ಷಿತಾಳ ದೇಹದಿಂದ ಹಾಗೆ ತೆಗೆದ ಪ್ರತಿಯೊಂದು ಅಂಗಗಳೂ ಮತ್ತೊಂದು ವ್ಯಕ್ತಿಗೆ ಇಂತಿಷ್ಟು ಸಮಯದಲ್ಲೇ ಜೋಡಿಸಬೇಕೆಂಬ ಅನಿವಾರ್ಯವಿರುವ ಕಾರಣ, ಸ್ಥಳೀಯ ಜಿಲ್ಲಾಡಳಿತ ಅದಕ್ಕೆ ಸೂಕ್ತವಾಗಿ ಸ್ಪಂದಿಸಿತು. ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಲಿಕಾಪ್ಟರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಒಯ್ಯಲಾಯಿತು. ಯಕೃತ್ತನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಮೂತ್ರಕೋಶವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳಿಸಲಾಯಿತು. ಆಂಬುಲೆನ್ಸ್ ಸಂಚಾರಕ್ಕೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಕಣ್ಣುಗಳನ್ನು ಸಹಾ ಅತ್ಯಂತ ಜತನದಿಂದ ತೆಗೆಯಲಾಗಿದ್ದು ಅದನ್ನೂ ಸಹಾ ಸದ್ಯದಲ್ಲೇ ಅಗತ್ಯ ಇರುವವರಿಗೆ ಜೋಡಿಸಲಾಗುವುದು ಎಂದು ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನ್ ಕುಮಾರ್ ತಿಳಿಸಿದ್ದಲ್ಲದೇ, ಈ ರೀತಿಯಾಗಿ ಅಂಗಾಂಗ ತೆಗೆಯುವ ಪ್ರಕ್ರಿಯೆ ಯಶಸ್ವಿಯಾಗಿ ನಡೆಸಿದ ರಾಜ್ಯದ ಪ್ರಥಮ ಜಿಲ್ಲಾಸ್ಪತ್ರೆ ಇದು ಎಂದು ಹೇಳಿದಾಗ ಹೆಮ್ಮೆಗಿಂತಲೂ ಹೃದಯವಿದ್ರಾವಕವಾಗಿತ್ತು. ರಕ್ಷಿತಾಳ ಹೃದಯವನ್ನು ಬೆಂಗಳೂರಿನಲ್ಲಿ 12 ವರ್ಷದ ಬಾಲಕಿಗೆ ಜೋಡಿಸಲು ಒಯ್ದಿದ್ದರೆ, ರಕ್ಷಿತಾ ತನ್ನ ಹೆಸರಿಗೆ ಅರ್ನ್ವರ್ಥದಂತೆ ಆಕೆಯ ನೇತ್ರಗಳು, ಮೂತ್ರ ಕೋಶ, ಯಕೃತ್ತನ್ನು ಒಟ್ಟು ಒಂಬತ್ತು ಮಂದಿಗೆ ಮರು ಜೀವ ನೀಡಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
ರಕ್ಷಿತಾಳ ಪ್ರತಿ ಅಂಗಾಂಗವನ್ನು ಆಂಬುಲೆನ್ಸ್ ನಲ್ಲಿ ಇಟ್ಟು ಸಾಗಿಸುವಾಗ ಜಿಲ್ಲಾ ಆಸ್ಪತ್ರೆ ಬಳಿ ಸೇರಿದ್ದ ಆಕೆಯ ಸಂಬಂಧಿಕರು ಹಾಗೂ ಸಾರ್ವಜನಿಕರು ರಕ್ಷಿತಾ ಅಮರಳಾಗಲಿ ಎಂದು ಘೋಷಣೆ ಕೂಗಿ ಭಾವುಕವಾಗಿ ಬೀಳ್ಕೊಡುತ್ತಿದ್ದರೆ, ಅಲ್ಲೇ ಇದ್ದಾ ರಕ್ಷಿತಾಳ ತಾಯಿ ಲಕ್ಷ್ಮೀಬಾಯಿ ಹಾಗೂ ತಂದೆ ಶೇಖರ್ ನಾಯಕ್ ಅವರ ಕುಟುಂಬ ವರ್ಗ ಗದ್ಗಧಿತರಾಗಿ ಯಾರೊಂದಿಗೂ ಮಾತನಾಡದೆ ಮೌನಕ್ಕೆ ಶರಣಾಗಿದ್ದದ್ದು ಹೃದಯವಿದ್ರಾವಕವಾಗಿತ್ತು.
ಅಂಗಾಂಗಗಳನ್ನೆಲ್ಲಾ ತೆಗೆದ ಬಳಿಕ ಆ ಪುಟ್ಟ ಯುವತಿಯ ಮೃತದೇಹವನ್ನು ಪೋಷಕರಿಗೆ ಒಪ್ಪಿಸಿದಾಗ, ಸ್ಥಳೀಯರು ಮತ್ತು ಆಕೆಯೊಂದಿಗೆ ಸಹಪಾಠಿಗಳ ಇಚ್ಚೆಯಂತೆ, ರಕ್ಷಿತಾಳ ಮೃತದೇಹವನ್ನ ಸರ್ಕಾರಿ ಆಸ್ಪತ್ರೆಯಿಂದ ಮೆರವಣಿಗೆ ಮೂಲಕ ರಕ್ಷಿತ ಓದುತ್ತಿದ್ದ ಚಿಕ್ಕಮಗಳೂರಿನ ಬಸವನಹಳ್ಳಿಯ ಪಿಯು ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಟ್ಟಾಗ, ಸಾವಿರಾರು ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ವರ್ಗದ ಜೊತೆ ಸಾರ್ವಜನಿಕರು ಸಹಾ ಅಂತಿಮ ದರ್ಶನ ಪಡೆದ್ದದ್ದಲ್ಲದೇ, ಅಚಾನಕ್ಕಾಗಿ ಅವಸಾನವಾದರೂ, ಸಾವಿನಲ್ಲೂ ಸಾರ್ಧಕತೆ ಮೆರೆದ ರಕ್ಷಿತಾಳಿಗೆ ಅಶ್ರುತರ್ಪಣವನ್ನು ಸುರಿಸುತ್ತಿದ್ದದ್ದು ನಿಜಕ್ಕೂ ಹೃದಯವನ್ನು ಕಲುಕುವಂತಿತ್ತು.
ತಮ್ಮೊಂದಿಗೆ ಓದುತ್ತಿದ್ದ ರಕ್ಷಿತಾಳನ್ನು ಈ ರೀತಿಯಾಗಿ ಕಳೆದುಕೊಂಡ ಆಕೆಯ ಸ್ನೇಹಿತೆಯರೂ ಮತ್ತು ಅಲ್ಲಿ ನೆರದಿದ್ದ ಸಾವಿರಾರು ವಿದ್ಯಾರ್ಥಿನಿಯರು ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣೀರು ಸುರಿಸುವುವ ಮೂಲಕ ಅಂತಿಮ ವಿದಾಯವನ್ನು ಹೇಳುತ್ತಿದ್ದರೆ, ರಕ್ಷಿತಾಳ ಸಹೋದರ ಅಭಿ, ತನ್ನ ಸಹೋದರಿಗಾಗಿ ದಿ.ಪುನೀತ್ ರಾಜಕುಮಾರ್ ಆವರ ರಾಜಕುಮಾರ ಚಿತ್ರದ ಗೊಂಬೇ ಹೇಳುತೈತೇ ಹಾಡನ್ನು ಹಾಡಿದಾಗ ಅದರಲ್ಲೂ ಆ ಹಾಡಿನಲ್ಲಿ ಬರುವ ಒಂದು ಸಾಲು ಒಂದು ಮುತ್ತಿನ ಕಥೆಯ ಹೇಳಿತು ಈ ಗೊಂಬೇ.. ಎಂಬ ಸಾಲನ್ನು ಹಾಡಿದಾಗಲಂತೂ ಅಲ್ಲಿ ನೆರೆದಿದ್ದ ಎಂತಹ ಕಲ್ಲು ಹೃದಯವು ಅ ಕ್ಷಣದಲ್ಲಿ ಕರಗುವಂತೆ ಮಾಡಿತು ಎಂದರೂ ಸುಳ್ಳಲ್ಲ. ಎಲ್ಲರ ಅಂತಿಮ ದರ್ಶನ ಮುಗಿದ ಬಳಿಕ ಸ್ವಗ್ರಾಮವಾದ ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯಾದಲ್ಲಿ ಅಂತಿಮ ವಿಧಿ-ವಿಧಾನ ನಡೆಸಿ ಆಕೆಯ ದೇಹವನ್ನು ಪಂಚಭೂತಗಳಲ್ಲಿ ಲೀನ ಗೊಳಿಸಲಾಯಿತು.
ಸಾವಿನಲ್ಲೂ ಒಂಬತ್ತು ಜನರಿಗೆ ಜೀವ ನೀಡಿ ಹುಟ್ಟಿನ ಸಾರ್ಥಕತೆ ಮೆರೆದ ರಕ್ಶಿತಾಳಿಗೂ ಮತ್ತು ಬೆಳೆದು ನಿಂತಿದ್ದ ಒಬ್ಬ ಮಗಳನ್ನು ಕಳೆದುಕೊಂಡ ನೋವಿನಲ್ಲೂ, ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಒಂಬತ್ತು ಜನರಿಗೆ ಅಪ್ಪ-ಅಮ್ಮನಂತಾದ ಅಪರೂಪದ ಸಂಗತಿಗೆ ಕಾರಣೀಭೂತರಾದ ರಕ್ಷಿತಾಳ ಪೋಷಕರು ನಿಜಕ್ಕೂ ಎಲ್ಲರಿಗೂ ಅನುಕರಣಿಯರೇ ಸರಿ.
ಅದೇ ರೀತಿ ರಕ್ಷಿತಾಳ ಸಾವು ಬಸ್ಸಿನಲ್ಲಿ ಅಥವಾ ವಾಹನಗಳಲ್ಲಿ ಪ್ರಯಾಣಿಸುವ ಕೋಟ್ಯಾಂತರ ಜನರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಪ್ರಯಾಣದ ಸಮಯದಲ್ಲಿ ಅನಾವಶ್ಯಕವಾಗಿ ತಾಳ್ಮೆ ಕಳೆದುಕೊಂಡು ಚಲಿಸುವ ವಾಹನಗಳನ್ನು ಹತ್ತುವುದಾಗಲೀ, ಇಳಿಯುವುದಾಗಲೀ ಮಾಡದೇ, ಸ್ವಲ್ಪ ಸಂಯಮದಿಂದ ವರ್ತಿಸಿದಲ್ಲಿ ಇಂತಹ ಅವಘಡಗಳನ್ನು ತಪ್ಪಿಸಬಹುದಾಗಿದೆ. ಇನ್ನು ದ್ವಿಚಕ್ರ ವಾಹನವನ್ನು ಓಡಿಸುವವರು ತಲೆಗೆ ಸೂಕ್ತವಾದ ರಕ್ಷಣಾ ಕವಚವನ್ನೂ ಕಾರ್ ಓಡಿಸುವವರು ಸೀಟ್ ಬೆಲ್ಟ್ ಗಳನ್ನು ಖಡ್ಡಾಯವಾಗಿ ಧರಿಸಿಕೊಂಡು ವಾಹನಗಳನ್ನು ಓಡಿಸುವುದು ಉತ್ತಮವಾಗಿದೆ.
ಹಾಂ!! ಕಡೇ ಮಾತು,
ಸಂಚಾರೀ ವಿಭಾಗದವರು, ಅತಿ ವೇಗ, ತಿಥಿ ಬೇಗ ಎನ್ನುವ ಫಲಕಗಳನ್ನು ಸುಖಾ ಸುಮ್ಮನೇ ಎಲ್ಲೆಂದರರಲ್ಲಿ ಹಾಕಿರದೇ, ಇಂತಹ ಅವಘಡಗಳು ಸಂಭವಿಸದೇ ಇರಲಿ ಎನ್ನುವ ಮುನ್ನಚ್ಚರಿಕಾ ಕ್ರಮವಾಗಿದೆ ಎಂಬುದನ್ನು ಅರಿತು, ಸ್ಪೀಡಾಗಿದೇ ಜಮಾನಾ ಎಂಬುದನ್ನು ಪಕ್ಕಕ್ಕಿಟ್ಟು, ನಿಧಾನವೇ ಪ್ರಧಾನಾ, ಜೀವದ್ ಕಡೇ ಜೋಪಾನಾ ವಹಿಸುವುದು ಸೂಕ್ತ ಎಂದೆನಿಸುತ್ತದೆ ಅಲ್ವೇ? ಜೀವ ಇದ್ದಲ್ಲಿ ಮಾತ್ರವೇ ಜೀವನ.
ಏನಂತೀರೀ?
ನಿಮ್ಮವನೇ ಉಮಾಸುತ
Good writing full of tears my eyes after reading the story.
LikeLiked by 1 person
ನಿಜ ಹೇಳಬೇಕೆಂದರೆ, ಈ ಲೇಖನವನ್ನು ಬರೆಯುವಾಗ ನನಗೂ ಸಹಾ ಕಣ್ಣೀರನ್ನು ತಡೆಯಲಾಗಲಿಲ್ಲ. ಅಳುತ್ತಾ ಅಳುತ್ತಾ ಕಣ್ಣಿರು ಸುರಿಸುತ್ತಲೇ ನಾನೂ ಸಹಾ ಈ ಲೇಖನವನ್ನು ಪೂರ್ತಿಗೊಳಿಸಿದ್ದೆ.
LikeLike
ಈ ಮಗುವಿನ ತಂದೆ ತಾಯಿ ಧನ್ಯರು. ಇದು ನಮ್ಮ ಸ್ವಾರ್ಥ ತುಂಬಿದ ಸಮಾಜಕ್ಕೆ ಒಂದು ಪ್ರೇರಣೆ.
ಈ ಮಗುವಿನ ಅತ್ಮಕ್ಕೆ ಶಾಂತಿ ನೀಡಲಿ ಎಂದು ಆ ದೇವರಲ್ಲಿ ತುಂಬುಮನಸ್ಸಿನಿಂದ ಪ್ರಾರ್ಥನೆ.
LikeLiked by 1 person