ಹೈಫಾ ಮುಕ್ತಿ ದಿನ ಮತ್ತು ಮೈಸೂರಿನ ಯೋಧರ ನಂಟು

hyfa1

ಇಸ್ರೇಲಿನ ಪ್ಯಾಲೇಸ್ಟೀನಿನ ಹೈಫಾ ನಗರಕ್ಕೂ ಕರ್ನಾಟಕದದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ಸುಮಾರು 4,800 km ದೂರದ ಅಂತರವಿದ್ದರೂ, ಪ್ರತೀವರ್ಷ ಸೆಪ್ಟೆಂಬರ್ 23 ರಂದು ಹೈಫಾ ನಗರದಲ್ಲಿ ನಡೆಯುವ ಹೈಫಾ ಡೇ ದಿನದಂದು ಆ ನಗರದ ಮೇಯರ್ ಮೈಸೂರು, ಹೈದರಾಬಾದ್ ಮತ್ತು ಜೋಧ್ ಪುರ ಸೈನಿಕರ ಸಾಹಸಗಳನ್ನು ನೆನೆಯುವ ಅಧ್ಭುತವಾದ ಸಂಪ್ರದಾಯವಿದೆ. ಹೈಫಾ ನಗರದ ವಿಮೋಚನೆಗಾಗಿ ನಡೆದ ಯುದ್ಧದಲ್ಲಿ ಮೈಸೂರಿನ ಯೋಧರ ಸಾಹಸಮಯ ಸಾಧನೆಯ ಕುರಿತಾಗಿ ಕನ್ನಡಿಗರಿಗೇ ಹೆಚ್ಚಿನ ಮಾಹಿತಿ ಲಭ್ಯವಿಲ್ಲದ ಕಾರಣ ಅದರ ಕುರಿತಾದ ಸವಿವರ ಇದೋ ನಿಮಗಾಗಿ

ಅದು ಮೊದಲ ವಿಶ್ವಯುದ್ಧದ ಸಮಯ ಬ್ರಿಟೀಷರಿಗೆ ಮಧ್ಯಪ್ರಾಚ್ಯದ ಮೇಲೆ ಪ್ರಭುತ್ವ ಸಾಧಿಸುವ ಸಲುವಾಗಿ ಮತ್ತು ಅಲ್ಲಿಯವರೊಂದಿಗೆ ಹೋರಾಟ ನಡೆಸಲು ಆಯಕಟ್ಟಿನ ಸ್ಥಳವನ್ನು ಹುಡುಕುತ್ತಿದ್ದಾಗಲೇ, ಅವರ ಕಣ್ಣಿಗೆ ಬಿದ್ದಿದ್ದೇ ಇಸ್ರೇಲ್‌ನ ಬಂದರು ನಗರವಾದ ಹೈಫಾ. ಹೈಫಾ ನಗರವು ಸರಕು ಸರಂಜಾಮು, ಆಯುಧಗಳು, ಸೈನಿಕರ ಚಲನೆಗೆ ಅನುಕೂಲಕರವಾಗಿದ್ದ ಆಯಕಟ್ಟಿನ ಜಾಗವಾಗಿದ್ದು ಅದರ ಸುತ್ತಲ ವಿಶಾಲ ಪ್ರದೇಶವನ್ನು ಸುಮಾರು 400 ವರ್ಷಗಳಂದಲೂ ಟರ್ಕಿಯ ಹಿಡಿದಲ್ಲಿದ್ದು ಆ ಸಮಯದಲ್ಲಿ ಒಟ್ಟೋಮನ್‌ ಟರ್ಕಿ ಅದನ್ನು ಆಳುತ್ತಿದ್ದನು. ಅಂದಿನ ಪ್ಯಾಲೆಸ್ಟೀನ್‌ನ ಭಾಗವಾಗಿದ್ದ ಹೈಫಾ ನಗರವನ್ನು ಬಿಡುಗಡೆಗೊಳಿಸಿ ಇಸ್ರೇಲಿಗರಿಗೆ ಕೊಡುತ್ತೇವೆ ಎಂದು ಬ್ರಿಟೀಷರು ಆಶ್ವಾಸನೆ ನೀಡಿದ್ದರು.

ಅದೇ ರೀತಿ ಬ್ರಿಟಿಷರಿಗೆ ಹೈಫಾವನ್ನು ಬಿಡುಗಡೆಗೊಳಿಸಲು ಇದ್ದ ಮತ್ತೊಂದು ಕಾರಣವೆಂದರೆ, 1917ರಲ್ಲಿ ಬ್ರಿಟಿಷ್‌ ವಿದೇಶಾಂಗ ಕಾರ್ಯದರ್ಶಿ ಆರ್ಥರ್‌ ಬಾಲ್‌ಫೋರ್‌ ತನ್ನ ಘೋಷಣಾ ಪತ್ರದಲ್ಲಿ ಪ್ಯಾಲೆಸ್ಟೀನ್‌ನಲ್ಲಿ ಯಹೂದಿಗಳಿಗಾಗಿ ಒಂದು ಸಣ್ಣ ರಾಜ್ಯವನ್ನು ಸ್ಥಾಪನೆ ಮಾಡಲು ಅರಸೊತ್ತಿಗೆಯು ಸಮ್ಮತಿಸಿದೆ ಎಂದು ಉಲ್ಲೇಖಿಸಿದ್ದ. ಹೀಗೆ ಬ್ರಿಟಿಷ್‌ ರಾಜಸತ್ತೆಯು ಯಹೂದಿಗಳ ಪರವಹಿಸಲು ಮುಖ್ಯಕಾರಣವೇನೆಂದರೆ, ಆಗ ನಡೆಯುತ್ತಿದ್ದ ಮೊದಲನೇ ಮಹಾ ಯುದ್ಧದಲ್ಲಿ ಬ್ರಿಟಿಷರ ಬಳಿಯಲ್ಲಿದ್ದ ಶಕ್ತಿಶಾಲಿ TNT ಅಸ್ತ್ರ ವನ್ನು ಕಂಡುಹಿಡಿದ ರಸಾಯನಶಾಸ್ತ್ರಜ್ಞ ಕೆಮ್‌ ಮೆಜ್‌ಮನ್‌ ಸಹಾ ಒಬ್ಬ ಯಹೂದಿಯಾಗಿದ್ದ. ಅವನಿಗೆ ಕೊಟ್ಟ ಮಾತಿನಂತೆ ಮುಂದೆ ಇಸ್ರೇಲ್ ಸ್ವತಂತ್ರವಾದಾಗ ಆತನೇ ಆ ದೇಶದ ಮೊದಲನೆ ರಾಷ್ಟ್ರಾಧ್ಯಕ್ಷನಾಗಿದ್ದ.

sainik

ಪೂರ್ಣ ನಾಶವನ್ನೇ ಗುರಿಯಾಗಿಸಿಕೊಂಡಿದ್ದ ಒಟ್ಟೋಮನ್ ತುರ್ಕರಿಂದ ಇಸ್ರೇಲಿನ ಹೈಫಾ ಪಟ್ಟಣವನ್ನು ಸ್ವತಂತ್ರಗೊಳಿಸುವುದಕ್ಕಾಗಿ ಬ್ರಿಟೀಷರು ಯುದ್ಧ ಮಾಡಲು ಮುಂದಾದಾಗ, ಭಾರತದಿಂದ ಮೈಸೂರು ಲ್ಯಾನ್ಸರ್ಸ್ ಸೈನಿಕ ದಳದ ಫೀಲ್ಡ್ ಮಾರ್ಷಲ್ ಆರ್ಕಿಬಾಲ್ಡ್ ವಾವೆಲ್ ಅವರ ಮಾರ್ಗದರ್ಶನದೊಂದಿಗೆ ಹೈಫಾ ವಿಮೋಚನೆಗೆ ಹೈದರಾಬಾದ್ ಮತ್ತು ಜೋಧಪುರದ ಅಶ್ವಪಡೆಗಳೊಂದಿಗೆ ಮೈಸೂರು ಲ್ಯಾನ್ಸರ್ಸ್ ತಂಡವೂ ಅಲ್ಲಿಗೆ ಹೋಗಿತ್ತು. ಭಾರತೀಯ ಸೈನಿಕರೆಂದರೆ ಧೈರ್ಯ, ಶೌರ್ಯ, ಚಾಣಾಕ್ಷತೆ, ಮತ್ತು ನಿಷ್ಠೆಗೆ ಮೊದಲಿನಿಂದಲೂ ಹೆಸರುವಾಸಿ. ಆಡಳಿತಗಾರರು ಯಾರೇ ಆಗಿದ್ದರೂ, ನಮ್ಮ ಸೈನಿಕರು ತಮ್ಮಲ್ಲಿರುವ ಕೆಚ್ಚು, ಧೈರ್ಯ,ಶೌರ್ಯಗಳು ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದರು. ಲ್ಯಾನ್ಸರ್ಸ್ ಪಡೆ ಎಂದರೆ, ಅವರು ಕುದುರೆಗಳ ಮೇಲೆ ಕುಳಿತುಕೊಂಡು ಕೇವಲ ಉದ್ದನೆಯ ಈಟಿ ಅಥವಾ ಭರ್ಜಿಗಳನ್ನು ಹಿಡಿದು ಯುದ್ಧವನ್ನು ನಡೆಸುವ ತಂಡವಾಗಿತ್ತು.

dalpath_singh

2018ರ ಸೆಪ್ಟಂಬರ್‌ 22ರಂದು ಬ್ರಿಟಿಷ್‌ ಸೇನೆಯು ಟರ್ಕಿ, ಆಸ್ಟ್ರೀಯಾ ಮತ್ತು ಹಂಗೇರಿಯ ಸಂಯುಕ್ತ ಸೇನೆಯನ್ನು ಯುದ್ಧದಲ್ಲಿ ಎದುರುಗೊಂಡು ಹಿಮ್ಮೆಟ್ಟಿತ್ತು. ಸುರಕ್ಷಿತ ನೆಲೆಯಲ್ಲಿ ನಿಂತು ಫಿರಂಗಿ, ಮಷಿನ್ ಗನ್‌ಗಳ ಸಹಾಯದಿಂದ ಕಾದಾಡುತ್ತಿದ್ದ ಸಂಯುಕ್ತ ಸೇನೆಯನ್ನು ಎದುರಿಸಲು ಕೇವಲ ಖಡ್ಗ, ಈಟಿಗಳನ್ನು ಹೊಂದಿದ್ದ ಮತ್ತು ಅಲ್ಲಿನ ದುರ್ಗಮ ಕಣಿವೆಗಳು, ಪರ್ವತಗಳು, ಕಂಡು ಕೇಳಿರದ ಅಪಾಯಕಾರಿ ಸ್ಥಳಗಳ ಪರಿಚಯವೇ ಇಲ್ಲದ ಸ್ಥಳದಿಂದ ಯುದ್ದ ಮಾಡಿ ಗೆಲ್ಲುವುದು ಅಸಾಧ್ಯದ ಮಾತೆಂದು ಅರಿತ ವಾವೆಲ್, ಆ ಯುದ್ಧದಿಂದ ಹಿಂದೆ ಸರಿಯಲು ನಿರ್ಧರಿಸಿದಾಗ, ಮೈಸೂರು, ಜೋಧಪುರ ಮತ್ತು ಹೈದರಾಬಾದ್‌ ಸೇನೆಯ ಸೇನಾಧಿಪತ್ಯದ ಹೊಣೆ ಹೊತ್ತ ಮೇ. ದಳಪತ್‌ ಸಿಂಗ್‌ ಶೇಖಾವತ್‌, ನಾವು ಕ್ಷತ್ರಿಯರು, ಕೇವಲ ಸಂಬಳಕ್ಕಾಗಿ ಹೋರಾಡುವ ಸೇವಕರಲ್ಲ. ಯುದ್ಧದಲ್ಲಿ ಫಲಿತಾಂಶ ಸಿಗದ ಹೊರತು ಹಿಂದುರಿಗೆ ಹೋಗುವವರಲ್ಲಾ. ನಮಗೆ ಯುದ್ಧವನ್ನು ಮುಂದುವರಿಸಲು ಅನುಮತಿ ನೀಡಿ, ಎಂದು ಬ್ರಿಟಿಷರಿಂದ ಅನುಮತಿ ಪಡೆದು ಸೆಪ್ಟಂಬರ್‌ 22ರ ನಡುರಾತ್ರಿ ಗೆರಿಲ್ಲಾ ಮಾದರಿಯಲ್ಲಿ ಯುದ್ಧವನ್ನು ನಡೆಸಲು ಸಜ್ಜುಗೊಂಡರು.

hyfa1

ಕಾರ್ಮೆಲ್‌ ಪರ್ವತದ ಮೇಲೆ ಅದಾಗಲೇ ಝಾಂಡ ಹೂಡಿದ್ದ ಜರ್ಮನಿ ಮತ್ತು ಆಸ್ಟ್ರಿಯಾದ ಸೇನೆಯನ್ನು ಅಲ್ಲಿಯೇ ಎದುರಿಸುವ ಕೆಚ್ಚದೆಯೊಂದಿಗೆ ಮೈಸೂರಿನ ತುಕಡಿಯು ಕತ್ತಲಲ್ಲಿ ಪರ್ವತವನ್ನೇರಿದರೆ, ಪರ್ವತದ ಕೆಳಗೆ ತೆರೆದ ಮೈದಾನದಲ್ಲಿ ನಿಂತಿದ್ದ ಟರ್ಕಿ ಸೇನೆಯನ್ನು ಮುಂಜಾನೆ ಮಣಿಸಲು ಜೋಧಪುರದ ಸೇನೆ ಖಡ್ಗ ಹಿರಿದು ನಿಂತಿತು. ಯುದ್ಧ ಕೈದಿಗಳಾಗಿ ಸೆರೆಸಿಕ್ಕವರನ್ನು ನಿಭಾಯಿಸುವ ಹೊಣೆಯನ್ನು ಹೈದರಾಬಾದ್‌ ಸೈನಿಕರು ಹೊತ್ತರು. ಕಾರ್ಮೆಲ್‌ ಪರ್ವತದಲ್ಲಿ ನಿದ್ದೆ ಮಾಡುತ್ತಿದ್ದ ಸಂಯುಕ್ತ ಸೈನಿಕರಿಗೆ ಕತ್ತಲಿನ ಈ ರೀತಿಯ ಆಕ್ರಮಣವು ಅಚ್ಚರಿ ಮತ್ತು ಆಘಾತವನ್ನುಂಟುಮಾಡಿತ್ತು. ಅವರೂ ಸಹಾ ಸಾವರಿಸಿಕೊಂಡು ಪ್ರತ್ಯುತ್ತರ ನೀಡುತ್ತಲೇ, ಜೋಧಪುರದ ಮೇ. ದಳಪತ್‌ ಸಿಂಗ್‌ ಶೇಖಾವತ್‌ ಅವರನ್ನು ಸಂಹರಿಸಿಬಿಟ್ಟರು. ತಮ್ಮ ನಾಯಕನನನ್ನು ಕಳೆದುಕೊಂಡರೂ ಕಂಗೆಡದ ಮೈಸೂರು ಸೇನೆ ಅದಕ್ಕೆ ಪ್ರತೀಕಾರವನ್ನು ಸೇರಿಸಿಕೊಳ್ಳುವ ಸಲುವಾಗಿ ಇಮ್ಮಡಿ ಉತ್ಸಾಹದಿಂದ ಸೈನಿಕರು ಶತ್ರುಗಳ ಮೇಲೆ ಮುಗಿಬಿದ್ದ ಪರಿಣಾಮ ಮೈಸೂರಿನ ಸೈನಿಕರು ಮೇಲುಗೈ ಸಾಧಿಸಿದ ಸುದ್ದಿ ಕೆಳಗೆ ತೆರೆದ ಮೈದಾನದಲ್ಲಿ ಸಿದ್ಧವಾಗಿದ್ದ ಜೋಧಪುರದ ಸೇನೆಗೆ ತಿಳಿಯುತ್ತಲೇ ಅವರೂ ಸಹಾ ಹರ್ ಹರ್ ಮಹಾದೇವ್ ಎಂದು ಟರ್ಕಿ ಸೈನಿಕರ ಮೇಲೆ ಆಗ್ರಮಣ ಮಾಡಿದ ಪರಿಣಾಮ ಸೂರ್ಯೋದಯಕ್ಕೆ ಮುನ್ನ ಆರಂಭವಾದ ಯುದ್ಧವು 1918ರ ಸೆಪ್ಟಂಬರ್‌ 23ರ ಮಧ್ಯಾಹ್ನ ಸುಮಾರು 3 ಗಂಟೆಗೆ ಭಾರತೀಯ ಸೈನಿಕರ ಗೆಲುವಿನೊಂದಿಗೆ ಮುಕ್ತಾಯಗೊಂಡಿತು. ಟರ್ಕಿ ಸಾಮ್ರಾಜ್ಯದ 402 ವರ್ಷಗಳ ಆಳ್ವಿಕೆಯು ಭಾರತೀಯರ 15 ಗಂಟೆಗಳ ಕ್ಷಿಪ್ರ ಯುದ್ದದಲ್ಲಿ ಅಂತ್ಯವಾಯಿತು. ಆ ಮೂಲಕ ಇಸ್ರೇಲ್ ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದರು.

haifa_city

ಶಾಶ್ವತವಾದ ನೆಲೆಯಿಲ್ಲದೇ ಪ್ರಪಂಚಾದ್ಯಂತ ಚದುರಿ ಹೋಗಿದ್ದ ಯಹೂದಿಗಳಿಗೆ ತಮ್ಮದೇ ಆದ ಒಂದು ಸ್ವತ್ರಂತ್ಯ್ರ ಮತ್ತು ಸದೃಢವಾದ ದೇಶವೊಂದು ಕಟ್ಟಿಕೊಳ್ಳಲು ಸಹಕರಿಸಿದ ಭಾರತೀಯ ಯೋಧರು ಅದರಲ್ಲೂ ಮೈಸೂರಿನ ಸೈನಿಕರ ಶೌರ್ಯ ಮತ್ತು ಸಾಹಸಗಳನ್ನು ಸ್ವತಃ ಇಸ್ರೇಲ್ ದೇಶದ ಅಧ್ಯಕ್ಷರೂ ಸೇರಿದಂತೆ ಎಲ್ಲ ಇಸ್ರೇಲಿಗರೂ ಇಂದಿಗೂ ಬಹಳ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಹೈಫಾ ನಗರವನ್ನು ಒಟ್ಟೋಮನ್ ಸಾಮ್ರಾಜ್ಯದ ಹಿಡಿತದಿಂದ 1918ರ ಸೆ. 23ರಂದು ಮುಕ್ತಗೊಳಿಸಿದ ದಿನವನ್ನು ಪ್ರತೀವರ್ಷವೂ ಹೈಫಾ ದಿನವನ್ನಾಗಿ ಆಚರಿಸಲಾಗುವುದಲ್ಲದೇ, ಅಂದು ಮೈಸೂರು ಅಶ್ವದಳ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಬಹಾಯಿ ಸಮುದಾಯ ಋಣಿಯಾಗಿದೆ.

3_moorthy

ಯುದ್ಧದ ನಂತರ ಮೇ. ದಳಪತಿ ಸಿಂಗ್‌ ಶೇಖಾವತ್‌ರಿಗೆ ಬ್ರಿಟಿಷ್‌ ಸರ್ಕಾರವು ಮರಣೋತ್ತರವಾಗಿ ಹೀರೋ ಆಫ್‌ ಹೈಫಾ ಎಂಬ ಬಿರುದು ನೀಡಿ ಗೌರವಿಸಿತು. ಈ ಅಭೂತಪೂರ್ವ ಗೆಲುವಿನ ಸ್ಮರಣಾರ್ಥ, ಮೂರೂ ಪಡೆಗಳ ಸಂಕೇತವಾಗಿ ಆಳೆತ್ತರದ ಮೂರು ಯೋಧರ ಪುತ್ಥಳಿಗಳನ್ನು ದೆಹಲಿಯಲ್ಲಿ ಸ್ಥಾಪಿಸಿ ಅಲ್ಲಿ ನಿರ್ಮಿಸಲಾದ ಭವನವನ್ನು ತೀನ್ ಮೂರ್ತಿ ಭವನ್ ಎಂದೇ ಕರೆಯಲಾಗುತ್ತದೆ. ಜೋಧಪುರದಲ್ಲಿ ತಮ್ಮ ನೆಲದ ಹೆಮ್ಮೆಯ ಪುತ್ರ ದಳಪತ್‌ ಸಿಂಗ್‌ರ ನೆನಪಿನಲ್ಲಿ ದಳಪತ್‌ ಮೆಮೋರಿಯಲ್‌ ನಿರ್ಮಾಣವಾಗಿದೆ. ಬೆಂಗಳೂರಿನ ದೂರದರ್ಶನ ಕೇಂದ್ರ ಕಚೇರಿಯ ಬಳಿ ಇರುವ ಕಲ್ಲುಕಂಬವು ಹೈಫಾ ಸ್ಮಾರಕವೇ ಆಗಿದೆ. ಸ್ವಾತಂತ್ರ್ಯ ದೊರೆಯುವ ವರೆಗೂ ತೀನ್ ಮೂರ್ತಿ ಭವನವು ಭಾರತದ ಕಮಾಂಡರ್ ಇನ್ ಚೀಫ್ ನಿವಾಸವಾಗಿ ಬಳಕೆಯಾಗಿದ್ದು, ನಂತರದಲ್ಲಿ ಅದು ದೇಶದ ಮೊದಲ ಪ್ರಧಾನಿ ನೆಹರೂ ರವರ ನಿವಾಸವಾಗಿ ಬದಲಾಯಿತು. ಅವರ ನಂತರ ಅದು ನೆಹರೂರವರ ಸ್ಮಾರಕವಾಗಿ ಬದಲಾಯಿತು. ಮೂರು ಪುತ್ಥಳಿಗಳಿರುವ ಆ ವೃತ್ತವನ್ನು ತೀನ್ ಮೂರ್ತಿ ಚೌಕ್ ಎಂದೂ, ಮತ್ತು ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತೀನ್ ಮೂರ್ತಿ ರಸ್ತೆ ಎಂದೂ ಕರೆಯಲಾಗುತ್ತಿತ್ತು.

hyfa4

2018 ಹೈಫಾ ಮುಕ್ತಿಗೊಂಡ 100ನೇ ವರ್ಷದ ಸವಿನೆನಪಿಗಾಗಿ 2018ರ ಜ. 14ರಂದು ಇಸ್ರೇಲ್ನ ಅಂದಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ತೀನ್ ಮೂರ್ತಿ ಚೌಕ್ ಅನ್ನು ತೀನ್ ಮೂರ್ತಿ ಹೈಫಾ ಚೌಕ ಮತ್ತು ತೀನ್ ಮೂರ್ತಿ ಮಾರ್ಗಕ್ಕೆ ತೀನ್ ಮೂರ್ತಿ ಹೈಫಾ ಮಾರ್ಗ ಎಂದೂ ಮರುನಾಮಕರಣ ಮಾಡಲಾಗಿದೆ.

hifya

ಮೊದಲನೇ ಯುದ್ದದ ಸಮಯದಲ್ಲಿ ಮೈಸೂರು ಸಂಸ್ಥಾನವು ಭಾರತದ ಯುದ್ಧ ನಿಧಿಗೆ 50 ಲಕ್ಷ ರೂಪಾಯಿಯನ್ನು ನೀಡಿದ್ದಲ್ಲದೇ, ಹೈಫಾ ಯುದ್ಧದಲ್ಲಿ ಹೋರಾಡಿದ ಮೈಸೂರು ಪಡೆಯ ನೇತೃತ್ವವನ್ನು ಮೈಸೂರು ಒಡೆಯರ್ ಅವರ ಸಂಬಂಧೀಕರೇ ಆಗಿದ್ದ ಕರ್ನಲ್‌ ದೇಶರಾಜ ಅರಸ್‌, ಕರ್ನಲ್‌ ಲಿಂಗರಾಜ ಅರಸ್‌ ಮತ್ತು ಕರ್ನಲ್‌ ಚಾಮರಾಜ ಅರಸ್‌ ವಹಿಸಿಕೊಂಡಿದ್ದರು. ಬಹುಶಃ ಹೀಗೆ ಆಧುನಿಕ ಮಶಿನ್‌ಗನ್‌ಗಳನ್ನು ಎದುರಿಸಿ ಜಯ ಸಾಧಿಸಿದ ಭರ್ಜಿ ಅಶ್ವದಳದ ಯುದ್ದು ಕತೆ ಇದೊಂದೇ ಇರಬೇಕು. ಅದಲ್ಲದೇ ಇದೇ ಯುದ್ದವೇ ಈಟೀ ಹಿಡಿದು ಯುದ್ದ ಮಾಡಿದ್ದ ಕಟ್ಟಪಡೆಯ ಯುದ್ದವಾಗಿರುವ ಕಾರಣ, ಇಂದಿಗೂ ಇತಿಹಾಸದ ಅಪರೂಪದ ಯುದ್ಧಗಳ ಗೆಲುವಿನಲ್ಲಿ ಈ ಯುದ್ಧವು ಮಹತ್ತರವಾದ ಸ್ಥಾನವನ್ನು ಗಳಿಸಿದೆ.

nalwadi

ನಮ್ಮ ಮೈಸೂರಿನ ಅರಸರ ಕೊಡುಗೆಗಳು ಕೇವಲ ಅಂದಿನ ಮೈಸೂರಿನ ಸಂಸ್ಥಾನಕ್ಕೆ ಮಾತ್ರವೇ ಸೀಮಿತಗೊಳ್ಲದೇ ದೇಶ ವಿದೇಶಗಳಲ್ಲಿ ತಮ್ಮ ಸಹಾಯ ಹಸ್ತವನ್ನು ಚಾಚಿರುವುದರಿಂದಲೇ ಸ್ವಾತ್ರಂತ್ರ್ಯ ಬಂದು 75 ವರ್ಷಗಳಾದರೂ ಮೈಸೂರಿನ ಮಹಾರಾಜರನ್ನು ರಾಜಾ ಪ್ರತ್ಯಕ್ಷ ದೇವತಾ ಎಂದು ದೇವರಂತೆ ಪ್ರಾಥಸ್ಮರಣೀಯರನ್ನಾಗಿ ಪೂಜಿಸುತ್ತಿರುವುದು. ಗೌರವವನ್ನು ತಮ್ಮ ಸಾಧನೆಗಳಿಂದ ಪಡೆದುಕೊಳ್ಳ ಬೇಕೇ ಹೊರತು, ಅಧಿಕಾರದ ದಬ್ಬಾಳಿಕೆಯಿಂದಲ್ಲಾ ಎನ್ನುವುದಕ್ಕೆ ಈ ಹೈಫಾ ವಿಮುಕ್ತಿ ದಿನವೇ ಜ್ವಲಂತ ಉದಾಹರಣೆಯಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s