ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರಗಳೆಂದರೆ ಮೂಗು ಮುರಿಯುವ ಕಾಲವಿತ್ತು. ಅತ್ಯಂತ ಪ್ರತಿಭಾವಂತ ನಿರ್ದೇಶಕರ ಚಿತ್ರಗಳು ಕೇವಲ ಪ್ರಶಸ್ತಿಗಷ್ಟೇ ನಿರ್ಮಾಣ ಮಾಡಿ ವರ್ಷಾನುವರ್ಷ ಸ್ವರ್ಣ ಕಮಲಗಳನ್ನು ಬಾಚುತ್ತಿದ್ದರೂ, ಕನ್ನಡಿಗರ ಮನೋರಂಜನೆಗಾಗಿ ರಾಜಕುಮಾರು ವಿಷ್ಣುವರ್ಧನ್, ಅನಂತ್ ನಾಗ್, ರಮೇಶ್ ಅರವಿಂದ್ ಮುಂತಾದವರ ಪ್ರಬುದ್ಧ ನಟನೆಯ ಹೊರತಾಗಿ ಕನ್ನಡಿಗರು, ಅದೇ ತೆಲುಗು ಮತ್ತು ತಮಿಳು ಭಾಷೆಗಳ ಹಳಸಲು ರಿಮೀಕ್ ಚಿತ್ರಗಳಿಗೇ ತೃಪ್ತಿ ಪಟ್ಟುಕೊಳ್ಳಬೇಕಿತ್ತು. ಆದರೆ ಕಳೆದ ಎರಡು ದಶಕಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ಹೊಸಾ ಪೀಳಿಗೆಯಿಂದಾಗಿ ಇಡೀ ಸಿನಿಮಾ ಜಗತ್ತೇ ಕನ್ನಡ ಚಿತ್ರಗಳತ್ತ ನೋಡುವಂತಾಗಿದೆ. ಹಾಗಾಗಿ ಈ ಬದಲಾದ ಕಾಲಘಟ್ಟದಲ್ಲಿ ಕನ್ನಡ ಸಿನಿಮಾಗಳನ್ನು ತೆಗಳುವವರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತಹ ಸಿನಿಮಾಗಳು ಬರುತ್ತಿದ್ದು ಈಗ ಅದರ ಸಾಲಿಗೆ ಸೆಪ್ಟೆಂಬರ್ 30ರ ಶುಕ್ರವಾರ ರಿಲೀಸ್ ಆದ ರಿಷಬ್ ಶೆಟ್ಟಿಯವರ ರಚನೆ, ನಟನೆ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಸೇರಿದೆ.
ಕನ್ನಡ ಚಿತ್ರರಂಗದಲ್ಲಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂದರೆ ಕೇವಲ ದ್ವಂದಾರ್ಥ ಬರುವ ಸಂಭಾಷಣೆಯ ಕೆಟ್ಟ ಸಂಭಾಷಣೆಗಷ್ಟೇ ಮೀಸಲಿಟ್ಟು ಆ ಎರಡೂ ಪ್ರಾಂತ್ಯಗಳ ನಿಜವಾದ ಪರಿಚಯವೇ ಕನ್ನಡಿಗರಿಗೆ ಇಲ್ಲದೇ ಇದ್ದಾಗ, ರಕ್ಷಿತ್ ಶೆಟ್ಟಿಯವರ ಉಳಿದವರು ಕಂಡಂತೆ ಸಿನಿಮಾದ ನಂತರ ಬಂದ ಭಂಡಾರಿ ಸಹೋದರರು ನಟಿಸಿ/ನಿರ್ದೇಶಿಸಿದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ರಂಗಿತರಂಗ ಸಿನಿಮಾ ಕನ್ನಡದ ಚಿತ್ರರಂಗದ ದಿಕ್ಕನ್ನೇ ಬದಲಿಸಿತು ಎಂದರೂ ತಪ್ಪಾಗದು. ಮತ್ತೆ ರಕ್ಷಿತ್ ರಿಷಬ್ ಜೊತೆಗಾರಿಕೆಯಲ್ಲಿ ರಿಕ್ಕಿ, ಕಿರಿಕ್ ಪಾರ್ಟಿ, ರಾಜ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅಭಿನಯದ ಗರುಡಗಮನ ವೃಷಭವಾಹನ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಮೂಲಕ ಬೆಂಗಳೂರಿನ ಗಾಂಧಿನಗರದ ಆಚೆಯೂ, ಕರಾವಳಿ ಪ್ರಾಂತ್ಯದಲ್ಲಿಯೂ ಅದ್ಭುತವಾದ ಪ್ರತಿಭಾವಂತ ಕನ್ನಡ ನಟ ನಟಿಯರು ಮತ್ತು ತಂತ್ರಜ್ಞರಿದ್ದಾರೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಎಲ್ಲರೂ ತಮ್ಮ ತಮ್ಮ ಚಿತ್ರಗಳಲ್ಲಿ ಕರಾವಳಿಯ ಮೂಲದ ಅನೇಕ ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿರುವುದಲ್ಲದೇ, ಅಲ್ಲಿಯ ಮೂಲ ಸಂಸ್ಕೃತಿಯನ್ನು ಅತ್ಯಂತ ಮನೋಜ್ಞವಾಗಿ ತೋರಿಸುವ ಮೂಲಕ ತುಳುನಾಡಿನಲ್ಲಿಯೂ ತುಳು ಸಿನಿಮಾ ಉದ್ಯಮ ಕೂಡ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದರೂ ತಪ್ಪಾಗದು.
ರಿಷಬ್ ಶೆಟ್ಟಿ ನಟಿಸಿ ಮತ್ತು ನಿರ್ದೇಶಿಸಿರುವ ದಕ್ಷಿಣ ಕನ್ನಡದ ಬಹುತೇಕರ ನಂಬಿಕೆಯ ಭೂತದ ಕೋಲ ಮತ್ತು ಕಂಬಳದ ಹಿನ್ನೆಲೆಯ ಸ್ಥಳೀಯ ಸಾಂಸ್ಕೃತಿಕ ಕಥಾಹಂದರವನ್ನು ಹೊಂದಿರುವ ಕಾಂತಾರ ಚಿತ್ರ ಪ್ರಸ್ತುತ ಕನ್ನಡ ಸಿನಿಮಾರಂಗದಲ್ಲಿ ವಿಶೇಷವಾಗಿ ಗಮನಸೆಳೆಯುತ್ತಿದೆ. 2022, ಸೆಪ್ಟೆಂಬರ್ 30 ಶುಕ್ರವಾರ ಸುಮಾರು 250ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆಯಾದ ಬಳಿಕ, ಚಿತ್ರವನ್ನು ನೋಡಿದ ಬಹುತೇಕರು ಇದೊಂದು ಅದ್ಭುತವಾದ ದೃಶ್ಯಕಾವ್ಯ. ಕನ್ನಡದಲ್ಲೊಂದು ಈ ರೀತಿಯ ಅಪರೂಪದ ಪ್ರಯತ್ನವನ್ನು ಖಂಡಿತವಾಗಿಯೂ ಎಲ್ಲರೂ ನೋಡಲೇ ಬೇಕು ಎಂದು ಹೇಳುತ್ತಿದ್ದಂತೆಯೇ, ವಾರಾಂತ್ಯದಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚಿನ ಶೋಗಳು ನಡೆಯತೊಡಗಿದ್ದಲ್ಲದೇ, ಕೇವಲ ಕರ್ನಾಟಕವಲ್ಲದೇ, ಭಾರತಾದ್ಯಂತ ವಿವಿಧ ರಾಜ್ಯಗಳಲ್ಲಿ, ಅಮೇರಿಕಾ, ಇಂಗ್ಲೇಡ್, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲೂ ಕಾಂತಾರ ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುವ ಮೂಲಕ ಕನ್ನಡ ಬಾರದಿರುವ ಪ್ರೇಕ್ಷಕರನ್ನೂ ಸೆಳೆಯುವ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆಯಲ್ಲಿ ಪಸರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
ಈಗಾಗಲೇ ಮಚ್ಚು-ಲಾಂಗು ಹಿಡಿದ ಕತ್ತಲೆ ಕತ್ತಲೆಯ ಕನ್ನಡ ಸಿನಿಮಾಗಳು ದೇಶದ ವಿವಿಧ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಬಿಡುಗಡೆಯಾಗಿದ್ದರೂ ಅವೆಲ್ಲವೂ ಅಯಾಯಾ ಭಾಷೆಗೆ ಡಬ್ ಅಗಿತ್ತು ಇಲ್ಲವೇ ಇಂಗ್ಲೀಷ್ ಸಬ್ ಟೈಟಲ್ ಇರುತ್ತಿತ್ತು. ಆದರೆ ಈ ಸಿನಿಮಾ ಮಾತ್ರಾ ಅಪ್ಪಟ ಕನ್ನಡ ಭಾಷೆಯಲ್ಲಿಯೇ ಎಲ್ಲಾ ಕಡೆಯಲ್ಲೂ ಬಿಡುಗಡೆಯಾಗುವ ಮೂಲಕ ಕುಂದಾಪುರ ಭಾಷೆಯನ್ನು ಹೊಂದಿರುವ ಕರಾವಳಿ ಗ್ರಾಮೀಣ ಹಿನ್ನೆಲೆಯ ಕಥಾ ವಸ್ತು ಮತ್ತು ಅಲ್ಲಿನ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಗಳನ್ನು ಕೇವಲ ಕರಾವಳಿ ಪ್ರದೇಶಕ್ಕೆ ಸೀಮಿತಗೊಳಿಸದೇ ತಮ್ಮ ತಮ್ಮ ಪ್ರದೇಶದ ಗ್ರಾಮೀಣ ಆಚರಣೆಗಳೊಂದಿಗೆ ಸಂಬಂಧಿಸಿಕೊಂಡು ನೋಡುತ್ತಿರುವ ಕಾರಣ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತಿದೆ.
ಸೋಮವಾರ ರಾತ್ರಿ ಕುಟುಂಬದೊಡನೆ ಸಿನಿಮಾ ನೋಡಲು BooKMyShow APP ನೋಡಿದರೆ ನಮ್ಮ ಸುತ್ತಮುತ್ತಲಿನ ಎಲ್ಲಾ ಮಲ್ಟೀಪ್ಲೆಕ್ಸ್ ಗಳು ತುಂಬಿ ತುಳುಕುತ್ತಿದ್ದ ಕಾರಣ ಸದಾ ಕಾಲವೂ ಆರಾಮವಾಗಿ ಟಿಕೆಟ್ ಸಿಗುವ ಹತ್ತಿರದ ಥಿಯೇಟರಿಗೆ ಹೋದರೆ, ಬಾಲ್ಕಾನಿ ಸೀಟ್ ಎಲ್ಲವೂ ಭರ್ತಿಯಾಗಿ ಗಾಂಧಿಕ್ಲಾಸ್ ಟಿಕೆಟ್ ಇದೆ ಎಂದಾಗ, ನಾಳೆ ನಾಡಿದ್ದು ನೋಡಿದರಾಯ್ತು ಎಂದು ಹಿಂದಿರುಗಲು ಮುಂದಾದಾಗ, ಹೇಗೂ ಬಂದಾಗಿದೆ, ಹಬ್ಬದ ದಿನಗಳಲ್ಲಿ ನೋಡಲು ಆಗದು ಹಾಗಾಗಿ ಅಲ್ಲೇ ಕುಳಿತು ನೋಡೋಣ ಎಂದು ಟಿಕೆಟ್ ತೆಗೆದುಕೊಂಡು ಒಳಗೆ ಕುಳಿತು ಸಿನಿಮಾ ಆರಂಭವಾಗಿ ಸಿನಿಮಾ ಮುಗಿಯುವವರೆಗೂ ಅಧ್ಭುತವಾದ ಮಾಯಾಲೋಕಕ್ಕೇ ಕೊಂಡೊಯ್ದಿತು. ಕೋಲವನ್ನು ನೋಡುತ್ತಿದ್ದಾಗ, ನಾವೇ ಕೋಲಕ್ಕೆ ಹೋಗಿದ್ದೇವೆಯೋ ಎಂಬ ಭಾಸವಾಗಿ, ನಮಗೇ ಅರಿವಿಲ್ಲದಂತೆ, ಕಾಲಿನಿಂದ ಚಪ್ಪಲಿಗಳು ಕಳಚಿದ್ದು ಚಿತ್ರದ ತನ್ಮಯತೆಯನ್ನು ಎತ್ತಿ ತೋರಿಸುತ್ತದೆ.
ಕೋವಿಡ್ ದಿನಗಳಲ್ಲಿ ರಿಛಬ್ ಶೆಟ್ಟಿಯವರ ಮನದಲ್ಲಿ ಮೂಡಿದ ಕತೆಗೆ ಕೆಜಿಎಫ್ ಸರಣಿ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಚಿತ್ರ ಸಂಸ್ಥೆಯ ವಿಜಯ್ ಕಿರಗಂದೂರು ಜೊತೆಗೆ, ರಿಷಬ್ ಶೆಟ್ಟಿಯವರ ಎಂದಿನ ಸ್ಥಳೀಯ ನೆಚ್ಚಿನ ಚಿತ್ರತಂಡದ ಜೊತೆಗೆ ನಟ ಕಿಶೋರ್, ಅಚ್ಯುತ್ ಕುಮಾರ್ ಮತ್ತು ಮಾನಸೀ ಸುಧೀರ್ ಅವರು ಪ್ರಮುಖ ಪಾತ್ರಗಳನ್ನು ನಿರೀಕ್ಷೆಗೂ ಮೀರಿ ನಿಭಾಯಿಸುವ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದ್ದರೆ ಇನ್ನು ಅಜನೀಶ್ ಬಿ. ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಒಂದು ಕಡೆಯಾದರೇ, ಕಲಾ ನಿರ್ದೇಶಕರಾದ ದಾರಣಿ ಗಂಗೆಪುತ್ರ ಅವರು ಕಾಡಿನೊಳಗೆ 90 ದಶಕಕ್ಕೆ ಅನುಗುಣವಾಗಿ ಹೊಂದಿಕೆಯಾಗುವಂತಹ ಹಳ್ಳಿಯ ಸೆಟ್ ಅನ್ನು ಅಧ್ಭುತವಾದ ಮಾಯಾಲೋಕವನ್ನಾಗಿ ಸೃಷ್ಟಿಮಾಡಿರುವುದು ಗಮನಾರ್ಹವಾಗಿದೆ.
ಈಗಾಗಲೇ ಅನೇಕರು ಚಿತ್ರದ ಕಥೆಯನ್ನು ಹೇಳಿರುವ ಕಾರಣ, ಮತ್ತು ಚಿತ್ರಕಥೆಯನ್ನು ಹೇಳಿದರೆ ಇನ್ನೂ ನೋಡಿಲ್ಲದವರಿಗೆ ಬೇಸರ ಬರಿಸುವ ಕಾರಣದಿಂದ ಕಥೆಯನ್ನು ಹೇಳಲು ಬಯಸದೇ ಹೋದರೂ, ಇಡೀ ಚಿತ್ರದಲ್ಲಿ ಗಂಭೀರವಾದ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಸ್ಥಳೀಯ ಕಲಾವಿದರುಗಳ ಹಾಸ್ಯ ಸಂಭಾಷಣೆಯ ಮೂಲಕವೇ ಹೇಳಿಸಿರುವುದು ಮೆಚ್ಚಬಹುದಾಗಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಗಾದೆ ಮಾತು ಸತ್ಯವಾದರೂ, ಅದೇ ಮಹಿಳೆಯೇ ಗಂಡಸಿನ ದೌರ್ಭಾಗ್ಯ ಎನ್ನುವುದನ್ನು ಅತ್ಯಂತ ಮನೋಜ್ಞವಾಗಿ ತೋರಿಸಿದ್ದಾರೆ.
ಚಿತ್ರದಲ್ಲಿ ಜಮೀನ್ದಾರ, ಹಳ್ಳಿಯ ಮುಗ್ದ ಜನರ ಜಮೀನನ್ನು ಸುಲಭವಾಗಿ ಕಸಿದುಕೊಳ್ಳುವ ಸಲುವಾಗಿ ದಲಿತ ಕೋಲದ ನರ್ತಕನಿಗ ಆಮೀಷವನ್ನು ಒಡ್ಡಿ ಆತನ ಬಾಯಿಯಿಂದ ಜನರು ನಂಬುವಂತಹ ಸುಳ್ಳನ್ನಾಡಿಸಲು ಪ್ರಯತ್ನಿಸಿದಾಗ ನಮ್ಮೂರಿನ ಹೆಬ್ಬಾರಮ್ಮ ಮತ್ತು ಚಾವಟಿಯಮ್ಮ ನೆನಪಾಗಿದ್ದಂತೂ ಸುಳ್ಳಲ್ಲ. ಕರಾವಳಿಯ ಕೋಲ ಅಥವಾ ನಮ್ಮೂರ ಹೆಬ್ಬಾರಮ್ಮ/ಚಾವಟಿಯಮ್ಮನ ಆ ದೈವವನ್ನು ಹೊರುವ ಮೊದಲು ಆವರು ಅನುಸರಿಸುವ ಕಠಿಣ ಪದ್ದತಿ, ಆಹಾರ, ಆಚಾರ ವಿಚಾರಗಳ ಬಗ್ಗೆ ಅರಿವಿಲ್ಲದ ಇಲ್ಲವೇ, ಸರಿಯಾದ ತಿಳುವಳಿಕೆ ಇಲ್ಲದೇ ಬಾಯಿಗೆ ಬಂದಂತೆ ಮಾತನಾಡುವವರಿಗೆ ಈ ಸಿನಿಮಾ ಖಂಡಿತವಾಗಿಯೂ ಉತ್ತರ ನೀಡಬಲ್ಲದು. ಇಡೀ ಸಿನಿಮಾದ ಮೊದಲ ಎರಡುವರೆ ಗಂಟೆ ಘಂಟೆಗಳು ಒಂದು ತೂಕವಾದರೆ ಕೊನೆಯ ಅರ್ಧ ಘಂಟೆಯೇ ತಕ್ಕಡಿಯಲ್ಲಿ ಅಧಿಕ ತೂಕವಾಗುತ್ತದೆ. ಅದರಲ್ಲೂ ಭೂತದ ವೇಷಧಾರಿಯಾಗಿ ರಿಶಬ್ ಶೆಟ್ಟಿಯವರ ಕೊನೆಯ 15 ನಿಮಿಷಗಳ ನಟನೆ ಮೈಮನಗಳನ್ನು ರೋಮಾಂಚನಗೊಳಿಸುವುದಲ್ಲದೇ, ಚಿತ್ರ ಇಷ್ಟು ಬೇಗ ಮುಗಿದು ಹೋಯಿತೇ? ಈ ಚಿತ್ರದ ನಂತರ ಮುಂದೇನೂ? ಎಂಬ ಭಾವನೆ ಮೂಡಿಸುತ್ತದೆ.
ಮಾನವ ಹಾಗೂ ಪರಿಸರದ ನಡುವಿನ ಸಂಘರ್ಷ, ಜಮೀನ್ದಾರರ ಕಾಡು ಒತ್ತುವರಿ, ಅರಣ್ಯಾಧಿಕಾರಿಗಳ ಕಿರಿಕಿರಿಯ ಜೊತೆಗೆ ಕರಾವಳಿಯ ಸಂಸ್ಕೃತಿ, ಕಂಬಳದ ಸೊಬಗು, ಭೂತಕೋಲದ ಬಗ್ಗೆ ಜನರ ನಂಬಿಕೆಯನ್ನು ಅಧ್ಭುತವಾಗಿ ಕಥೆಯ ರೂಪದಲ್ಲಿ ತೆರೆಮೇಲೆ ತರಲಾಗಿರುವ ಈ ಸಿನಿಮಾದದ ಬಗ್ಗೆಯೂ ಕೆಲವರು ಕಮ್ಯೂನಿಸ್ಟ್ , ಜಾತೀ ಮತ್ತು ಧರ್ಮದ ಕೊಂಕನ್ನು ತೆಗೆದಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಎಲ್ಲದಕ್ಕೂ ಮಿಗಿಲಾಗಿ, ಕಾಂತಾರ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಚಿತ್ರದಲ್ಲಿ ಗೋಮುಖವ್ಯಾಘ್ರದ ಜಮೀನ್ದಾರನಾಗಿ ಅಧ್ಭುತವಾಗಿ ನಟಿಸಿರುವ ಅಚ್ಯುತ್ ಕುಮಾರ್ ಕಾಂತಾರ ಚಿತ್ರದ ಬಗ್ಗೆ ಮಾತಾಡುತ್ತಾ ಮಧ್ಯದಲ್ಲಿ ಒಂದು ಮೆಸೇಜ್ ಓದುತ್ತಾ ಅದರಲ್ಲಿ ಕಾರ್ಲ್ ಮಾರ್ಕ್ಸ್, ಪೆರಿಯಾರ್ ಆದರ್ಶಗಳನ್ನು ಒತ್ತಿ ಹೇಳುವ ಮೂಲಕ ಅವರ ಸಿದ್ಧಾಂತವನ್ನೂ ಈ ಸಿನಿಮಾದಲ್ಲಿ ತೋರಿಸಿದ್ದೇವೆ ಎಂದದ್ದು ತೀರಾ ಹಾಸ್ಯಾಸ್ಪದವೆನಿದ್ದಂತೂ ಸುಳ್ಳಲ್ಲ. ವಯಕ್ತಿಕವಾಗಿ ದೇವರು ಮತ್ತು ಆಚಾರ ವಿಚಾರಗಳನ್ನು ಹೆಚ್ಚಾಗಿ ನಂಬದ ನಟ ಕಿಶೋರ್ ಅವರು ಈ ಚಿತ್ರದಲ್ಲೂ ಅದೇ ರೀತಿಯ ಅರಣ್ಯಾಧಿಕಾರಿ ಪಾತ್ರವನ್ನು ವಹಿಸಿದ್ದರೆ, ಇನ್ನು ದೇಶದ ಬಗ್ಗೆ ಕಮ್ಮಿ ನಿಷ್ಟೆ ಹೊಂದಿರುವ ಕಮ್ಯೂನಿಸ್ಟ್ ಮನಸ್ಥಿತಿಯ ಅಚ್ಚುತ್ ಖೂಳ ಜಮೀನ್ದಾರನ ಪಾತ್ರ ವಹಿಸಿರುವುದರಿಂದಲೇ ಸಿನಿಮಾವನ್ನು ನಾಸ್ತಿಕತೆಯೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎನಿಸುತ್ತದೆ. ಸಿನಿಮಾದ ಕಡೆಯಲ್ಲಿ ಜಮೀನ್ದಾರ ಅಚ್ಚುತ್ ಸಣ್ಣ ಮಗುವಿನತ್ತ ಗುಂಡನ್ನು ಹಾರಿಸಲು ಮುಂದಾದಾಗ, ಪಾಪ ಮಗು ಅದರ ಮೇಲೇಕೆ ಗುಂಡನ್ನು ಹಾರಿಸುತ್ತೀರೀ? ಬಿಟ್ಟು ಬಿಡಿ ಎಂದಾಗ, ಮುಂದೇ ಇದೇ ಮಗು ದೊಡ್ಡದಾಗಿ ನನಗೆ ನನ್ನ ಜಮೀನು ಬಿಟ್ಟುಕೊಡಿ ಎಂದು ಕೇಳಬಹುದು ಎಂದು ಹೇಳಿ ಗುಂಡನ್ನು ಹಾರಿಸಿದ್ದು ಚಿತ್ರದಲ್ಲಿ ಜಮೀನ್ದಾರನ ಕೌರ್ಯತೆಯನ್ನು ತೋರಿಸಿದರೆ, ಈ ಸಿನಿಮಾವನ್ನು ನಾಸ್ತಿಕತೆಯೊಂದಿಗೆ ಹೋಲಿಸಿ ನಿಜ ಜೀವನದಲ್ಲಿಯೂ ಅಚ್ಚುತ್ ಅದೇ ಕೌರ್ಯವನ್ನು ಮೆರೆದಿದ್ದಾರೆ ಎನಿಸಿದ್ದಂತು ಸತ್ಯ.
ರಿಷಭ್ ಶೆಟ್ಟಿ ಮತ್ತು ಅವರ ಇಡೀ ಚಿತ್ರತಂಡದವರೇ ಹೇಳಿರುವಂತೆ ಇಡೀ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಅತ್ಯಂತ ಭೂತಾರಾಧನೆಯ ಬಗ್ಗೆ ಅತ್ಯಂತ ನೇಮ ನಿಷ್ಠೆಯಿಂದ ನಡೆದುಕೊಂಡು ಚಿತ್ರೀಕರಣ ನಡೆಸಿದ ಸುತ್ತ ಮುತ್ತಲಿನ ಎಲ್ಲಾ ದೈವಕ್ಕೂ ಪೂಜೆ ಗೈದು ಅಲ್ಲಿಯ ಎಲ್ಲಾರ ಸಲಹೆ ಪಡೆದು ನಿರ್ಮಿಸಿರುವ ಈ ಚಿತ್ರವನ್ನು ತಮ್ಮ ತಮ್ಮ ರಾಜಕೀಯ ಸಿದ್ಧಾಂತ ಮತ್ತು ನಂಬಿಕೆಗಳ ತೆವಲುಗಳಿಗಾಗಿ ದೇವರು ಮತ್ತು ಹಿಂದೂ ಧರ್ಮವನ್ನು ಎಂದೂ ನಂಬದ ಕಾರ್ಲ್ ಮಾರ್ಕ್ಸ್ ಮತ್ತು ಪೆರಿಯಾರ್ ಅವರುಗಳಿಗೆ ಹೋಲಿಸಿದ್ದು ಸರಿಕಾಣಲಿಲ್ಲ.
ಕರಾವಳಿಯ ಜನರು ಈಗಲೂ ದೇವರು, ದೈವಗಳ ಸಂಪ್ರದಾಯಕ್ಕೆ ಬದ್ಧರಾಗಿ ನಂಬಿಕೆಯಿಂದ ಜೀವನ ಸಾಗಿಸುತ್ತಿರುವುದನ್ನೇ ಅತ್ಯಂತ ಶ್ರದ್ಧಾ ಭಕ್ತಿಯಿಂದ ತೆರೆಯ ಮೇಲೇ ತೋರಿಸಿರುವ ರಿಷಬ್ ಶೆಟ್ಟಯವರ ಈ ಕಾಂತಾರಾ ಸಿನಿಮಾವನ್ನು ಅತ್ಯಂತ ದೊಡ್ದ ಮಟ್ಟದಲ್ಲಿ ಯಶಸ್ವಿಗೊಳಿಸುವ ಮೂಲಕ ನಮ್ಮ ಹಿಂದೂ ಧರ್ಮ ಮತ್ತು ನಂಬಿಕೆಗಳ ಕುರಿತಾದ ಇಂತಹ ಹತ್ತಾರು ಸಿನಿಮಾಗಳು ನಿರ್ಮಾಣವಾಗಿ ನಮ್ಮ ಮುಂದಿನ ಪೀಳಿಗೆಯವರಿಗೂ ನಮ್ಮ ಧರ್ಮ, ಸ್ಥಳೀಯ ಅಚಾರ, ವಿಚಾರ ಮತ್ತು ನಂಬಿಕೆಗಳನ್ನು ಅರ್ಥ ಮಾಡಿಸುವಂತಾಗಲಿ, ತನ್ಮೂಲಕ ನಮ್ಮ ಕನ್ನಡದ ನಾಡಿನ ಹಿರಿಮೆ ಗರಿಮೆ ವಿಶ್ವವಿಖ್ಯಾತವಾಗಲೀ ಎನ್ನುವುದೇ ಎಲ್ಲರ ಆಶಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ