ಅತಿಯಾಗ್ತಾ ಇಲ್ವೇ, ಅಭಿವ್ಯಕ್ತಿ ಸ್ವಾತ್ರಂತ್ರ್ಯ?

ನಮ್ಮ ದೇಶದ ಮಾನವ ಹಕ್ಕುಗಳ ಕಾಯಿದೆಯ 10 ನೇ ವಿಧಿಯಂತೆ ಈ ದೇಶದ ಪ್ರತಿಯೊಬ್ಬ ನಾಗರೀಕರಿಗೂ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಈ ಹಕ್ಕು ಸಾರ್ವಜನಿಕ ಪ್ರಾಧಿಕಾರದ ಹಸ್ತಕ್ಷೇಪವಿಲ್ಲದೆ ಮತ್ತು ಗಡಿಗಳನ್ನು ಲೆಕ್ಕಿಸದೆ ಅಭಿಪ್ರಾಯಗಳನ್ನು ಹಿಡಿದಿಟ್ಟುಕೊಳ್ಳುವ ಮತ್ತು ಮಾಹಿತಿ ಮತ್ತು ಆಲೋಚನೆಗಳನ್ನು ಸ್ವೀಕರಿಸುವ ಮತ್ತು ನೀಡುವ ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ ಎಂದಿರುವಾಗ, ಲೇಖನದ ಶೀರ್ಷಿಕೆಗೆ ಉತ್ತರ ಅಗತ್ಯವೇ? ಎಲ್ಲ ದೇಶಗಳಲ್ಲೂ ವಾಕ್ ಸ್ವಾತಂತ್ರ್ಯ ಬೇಕು. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದೀವಲ್ಲ ಎಂಬ ಪ್ರಶ್ನೆ ಏಳುವುದು ಸಹಜವಾದರೂ, ಈ ಅಭಿವ್ಯಕ್ತಿ ಸ್ವಾತ್ರಂತ್ರ್ಯದ ದುರ್ಬಳಕೆ ಆಗುತ್ತಿರುವುದನ್ನು ಗಮನಿಸಿದಾಗ ಖಂಡಿತವಾಗಿಯೂ ಇಲ್ಲಿ ಕೇಳುತ್ತಿರುವ ಅತ್ಯಂತ ಸಮಂಜಸವಾಗಿದೆ ಎಂದೆನಿಸುತ್ತಿದೆ.

ನಮ್ಮ ಸಂವಿಧಾನದಲ್ಲಿರುವ ವಾಕ್ ಸ್ವಾತ್ರಂತ್ರ್ಯ ಎಂಬುದು ಏನು? ಎಂಬುದನ್ಣೇ ಅರಿಯದೇ, ಸುಖಾಸುಮ್ಮನೆ ತಾವು ನಂಬಿರುವ ಸಿದ್ಧಾಂತ ಮತ್ತು ನಂಬಿಕೆಗಳನ್ನೇ ಇತರರ ಮೇಲೆ ಹೇರಲು ಹೊರಟಿರುವವರ ಸಂಖ್ಯೆಯೇ ಇತ್ತೀಚೆಗೆ ನಮ್ಮ ದೇಶದಲ್ಲಿ ಹೆಚ್ಚಾಗಿ ಹೋಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ವಾಕ್ ಸ್ವಾತಂತ್ರ್ಯ ಎಂದರೆ ಅವರು ಆಡುವ ಮಾತುಗಳಿಗೆ ಒಂದು ತೂಕವಿರಬೇಕು ಮತ್ತು ಅದು ನಂಬುವಂತಿರಬೇಕು. ಅವರಾಡುವ ಮಾತುಗಳು ವೈಜ್ಞಾನಿಕವಾಗಿಯೂ ಇಲ್ಲವೇ ಐತಿಹಾಸಿಕವಾಗಿ ಪೂರಕವಾಗಿರಬೇಕು. ಸುಖಾ ಸುಮ್ಮನೇ ಜಗತ್ತು ದುಂಡಗಿಲ್ಲ ಚಪ್ಪಟೆಯಾಗಿದೆ, ಲಸಿಕೆಗಳು ಮನುಷ್ಯರನ್ನು ಕೊಲ್ಲುತ್ತವೆ ಇಲ್ಲವೇ ಹಿಂದೂ ಎಂಬ ಧರ್ಮವೇ ಇಲ್ಲಾ ಎನ್ನುತ್ತಾ ಕೇವಲ ಸುಳ್ಳು ಸುಳ್ಳು ಸುದ್ದಿಗಳನ್ನೇ ದೊಡ್ಡದನಿಯಲ್ಲಿ ಹಾದಿ ಬೀದಿಯಲ್ಲಿ ಹೋಗುವ ನಾಲಯಕ್ಕುಗಳು ಹೇಳುತ್ತಾ ಅದನ್ನೇ ಸತ್ಯ ಮಾಡಲು ಮುಂದಾದಾಗ, ಇಂತಹವರಿಂದ ಅಭಿವ್ಯಕ್ತಿ ಸ್ವಾತ್ರಂತ್ರ್ಯ ಹರಣವಾಗುತ್ತಿದೆಯೇ? ಎಂಬ ಪ್ರಶ್ನೆ ಮೂಡುತ್ತಿದ್ದು ಅದಕ್ಕೆ ಜ್ವಲಂತ ಉದಾಹರಣೆಯಾಗಿ ಈ ಕೆಲವು ಪ್ರಕರಣಗಳ ಬಗ್ಗೆ ಕೂಲಕುಂಶವಾಗಿ ಪ್ರತಿಯೊಬ್ಬರೂ ಯೋಚಿಸಲೇ ಬೇಕಾಗಿದೆ.

ಇಡೀ ವಿಶ್ವದಲ್ಲೇ ಅತ್ಯಂತ ಹಳೆಯದಾದ ಮತ್ತು ಇಂದಿಗೂ ಅತ್ಯಂತ ಹೆಚ್ಚಿನ ಜನರಿಂದ ಅಚರಿಸಲ್ಪದುತ್ತಿರುವ ಧರ್ಮವೆಂದರೆ ಅದು ಹಿಂದೂ ಧರ್ಮ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಳ್ಳುತ್ತದೆ. ಉಳಿದ ಎಲ್ಲಾ ಧರ್ಮಗಳಿಗೂ ಒಬ್ಬ ಧರ್ಮ ಪ್ರವರ್ತಕರಿರುವ ಕಾರಣ, ಆ ಧರ್ಮದ ಆರಂಭವು ಜಗತ್ತಿಗೆ ತಿಳಿದಿದ್ದರೆ, ಹಿಂದೂ ಧರ್ಮದ ಸ್ಥಾಪಕರು ಯಾರು? ಯಾವಾಗ ಆರಂಭವಾಯಿತು ಎಂಬುದೇ ಯಾರಿಗೂ ತಿಳಿದಿಲ್ಲವಾದ ಕಾರಣ ಮತ್ತು ತ್ರೇತಾಯುಗ, ಸತ್ಯಯುಗ, ದ್ವಾಪರಯುಗದಲ್ಲೂ ಅಸ್ತಿತ್ವದಲ್ಲಿ ಇದ್ದು ಈಗ ಕಲಿಯುಗದಲ್ಲೂ ಅಸ್ತಿತ್ವದಲ್ಲಿ ಇರುವ ಕಾರಣ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದೇ ಉಲ್ಲೇಖಿಸುತ್ತಾರೆ. ಬೌದ್ಧ, ಜೈನ, ಸಿಖ್ ಮುಂತಾದ ಧರ್ಮಗಳಿಗೆ ಹಿಂದೂ ಧರ್ಮವೇ ಮೂಲವಾಗಿದೆ.

buddha1ಅನೇಕ ಇತಿಹಾಸಕಾರರೇ ತಿಳಿಸಿರುವಂತೆ ಬೌದ್ಧ ಧರ್ಮವು ಭಾರತದಲ್ಲಿ 2,500 ವರ್ಷಗಳ ಹಿಂದೆ ಮಗಧ ಸಾಮ್ರಾಜ್ಯದ (ಈಗ ಬಿಹಾರದಲ್ಲಿದೆ) ಸಿದ್ಧಾರ್ಥ ಗೌತಮ ನಂತರದ ದಿನದಲ್ಲಿ ಬುದ್ಧ ಎಂದೇ ಪ್ರಖ್ಯಾತಿ ಪಡೆದವರಿಂದ ಸ್ಥಾಪಿಸಿದ್ದು ಸದ್ಯಕ್ಕೆ ಜಗತ್ತಿನಾದ್ಯಂತ ಸುಮಾರು 470 ಮಿಲಿಯನ್ ಜನರು, ಬೌದ್ಧಧರ್ಮವನ್ನು ಅನುಸರಿಸುತ್ತಿದ್ದು ಈ ಧರ್ಮವನ್ನು ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಬುದ್ಧ ಎಂದರೆ ಎಚ್ಚರಗೊಂಡವನು ಎಂಬ ಅರ್ಥ ಬರುತ್ತದೆ.

ನಂತರದ ದಿನಗಳಲ್ಲಿ ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬರಾದ ಅಶೋಕ ಚಕ್ರವರ್ತಿ ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಪಶ್ಚಿಮದಲ್ಲಿ ಇಂದಿನ ಅಫ್ಘಾನಿಸ್ತಾನದಿಂದ ಪೂರ್ವದಲ್ಲಿ ಇಂದಿನ ಚೀನಾ, ಜಪಾನ್, ಜಾವಾ, ಮಲಯ ಸುಮಾತ್ರಾ ವರೆಗೂ ತನ್ನ ಮಕ್ಕಳು ಮತ್ತು ಅನುಯಾಯಿಗಳನ್ನು ಕಳುಹಿಸಿ ಬೌದ್ಧಧರ್ಮವನ್ನು ಪ್ರಚುರ ಪಡಿಸಿದ್ದರೆ, ಅಚ್ಚರಿಯ ವಿಷಯವೆಂದರೆ, ಬೌದ್ಧ ಧರ್ಮವು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಭಾಗಗಳನ್ನು ಹೊರತುಪಡಿಸಿ ಭಾರತದ ಬಹುತೇಕ ರಾಜ್ಯಗಳನ್ನು ಆವರಿಸಿತ್ತು.

mahisiadaraದುರಾದೃಷ್ಟವಷಾತ್ಇ ಇತ್ತೀಚೆಗೆ ನವ ಬೌದ್ಧರ ಚೀರಾಟ ಮತ್ತು ಆಟಾಟೋಪಗಳು ಹೆಚ್ಚಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಹಿಂದೂ ಧರ್ಮದ ಆಚರಣೆಗಳು ಮತ್ತು ಹಬ್ಬ ಹರಿದಿನಗಳ ವಿಶೇಷತೆಗಳನ್ನು ಮೌಢ್ಯವೆಂದು ಕಪೋಲ ಕಲ್ಪಿತ ಸುಳ್ಳುಗಳ ಸರಮಾಲೆಗಳ ಕಥಾ ಹಂದರವನ್ನು ಹೆಣೆಯುತ್ತಿದ್ದಾರಲ್ಲದೇ, ಇಡೀ ಭಾರತದಲ್ಲಿ ಬೌದ್ಧ ಧರ್ಮವೇ ಮೂಲವೆಂದೂ ಬೌದ್ಧರೇ ಈ ದೇಶದ ನಿಜವಾದ ಮೂಲನಿವಾಸಿಗಳು ಉಳಿದವರೆಲ್ಲರೂ ಹೊರಗಿನಿಂದ ಬಂದವರು ಎಂಬ ಹಸೀ ಸುಳ್ಳನ್ನು ಪ್ರಚುರಪಡಿಸಿ ಒಂದು ನಿರ್ಧಿಷ್ಟ ಸಮುದಾಯದವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದುವರೆದು ಮಹೇಶ್ ಚಂದ್ರ ಮತ್ತು ಭಗವಾನ್ ತರಹದ ಸ್ವಘೋಷಿತ ಬುದ್ಧಿಜೀವಿಗಳು ಮತ್ತು ದಲಿತೋದ್ದಾರಕರು, ಇತ್ತೀಚಿನ ಕೆಲವು ವರ್ಷಗಳಿಮ್ದ ಮೈಸೂರು ದಸರಾ ಉತ್ಸವದದ ಸಮಯದಲ್ಲಿ ಚಾಮುಂಡೇಶ್ವರಿಯ ಉತ್ಸವಕ್ಕೆ ಸರಿ ಸಮಾನವಾಗಿ ಮಹಿಷ ದಸರಾವನ್ನು ಆಚರಿಸಲು ಮಂದಾಗಿದ್ದು ಇದೇ ರೀತಿಯ ಆಚರಣೆಯನ್ನು ದೆಹಲಿಯ ಜೆಎನ್ಯು ವಿಶ್ವವಿದ್ಯಾನಿಲಯದ ತುಕ್ಡೇ ತುಕ್ಡೇ ಗ್ಯಾಂಗ್ ಸಹಾ ಮಾಡಲು ಮುಂದಾಗಿರುವುದು ಅಚ್ಚರಿ ಮತ್ತು ಕಳವಳಕಾರಿಯಾಗಿದೆ. ಇತಿಹಾಸಕಾರರೇ ಹೇಳುವಂತೆ ಆಶೋಕನ ಸಾಮ್ರಾಜ್ಯ ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಇರಲೇ ಇಲ್ಲಾ ಎಂದಾದಾಗ, ಅಶೋಕನ ಕಳಿಂಗ ಯುದ್ಧದ ನಂತರದ ದಿನಗಳಲ್ಲಿ ನವರಾತ್ರಿ ಹಾಗೂ ವಿಜಯದಶಮಿಯ ಆಚರಣೆ ಆರಂಭವಾಯಿತು ಎನ್ನುವುದು ಕಪೋಲ ಕಲ್ಪಿತ ಕಥೆ ಎಂದಾಯಿತಲ್ಲವೇ?

ramleelaಅದೇ ರೀತಿ ಮಾತೆತ್ತಿದರೆ, ಬ್ರಾಹ್ಮಣರು ಈ ದೇಶದ ದಲಿತರನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡಿ ದಲಿತರನ್ನು ಕಗ್ಗತ್ತಲೆಯಲ್ಲಿಟ್ಟರು ಎಂದು ಆರೋಪಿಸುವ ಜನರೇ, ದೆಹಲಿಯಲ್ಲಿ ಸುಮಾರು ವರ್ಷಗಳಿಂದಲೂ ರಾವಣನ ದಹನ ನಡೆಯುತ್ತಿದ್ದರಿಂದಲೇ ರಾಮಲೀಲ ಮೈದಾನ ಎಂದೇ ಖ್ಯಾತಿಯಾಗಿರುವ ಕಡೆಯಲ್ಲೂ ಮೊನ್ನೆ ರಾಮಲೀಲಾ ಉತ್ಸವದಲ್ಲಿ ಮಹಾ ಬ್ರಾಹ್ಮಣ ರಾವಣನ ದಹನಕ್ಕೂ ಖ್ಯಾತೆ ತೆಗೆದು ರಾವಣನ ದಹನ ಮಾಡಿದರೆ ರಾಮನ ದಹನ ಮಾಡುವುದಾಗಿ ಅಸಂಬದ್ಧವಾಗಿ ವರ್ತಿಸುವ ಮೂಲಕ ಅವರೆಲ್ಲರೂ ತಮ್ಮ ಅಭಿವ್ಯಕ್ತಿ ಸ್ವಾತ್ರಂತ್ರ್ಯದ ಎಲ್ಲೆ ಮೀರುತ್ತಿದ್ದಾರೆ ಎಂದೆನಿಸುತ್ತಿಲ್ಲವೇ?

WhatsApp Image 2022-10-07 at 15.27.46ಅದೇ ರೀತಿ ಬಲವಂತವಾದ ಮತಾಂತರಕ್ಕೆ ಸರ್ಕಾರವೇ ನಿಷೇಧವನ್ನು ಹೇರಿದ್ದರೂ, ಮೊನ್ನೆ ಅಕ್ಟೋಬರ್ 5ರಂದು ದೆಹಲಿಯ ಅಂಬೇಡ್ಕರ್ ಭವನದಲ್ಲಿ ದೆಹಲಿ ಸರ್ಕಾರದ ಸಚಿವರ ನೇತೃತ್ವದಲ್ಲೇ ಹತ್ತು ಸಾವಿರಕ್ಕೂ ಅಧಿಕ ಹಿಂದೂಗಳು ಮಿಷನ್ ಜೈ ಭೀಮ್ ಬೆಂಬಲದೊಂದಿಗೆ ಬೌದ್ದ ಮತಕ್ಕೆ ಮತಾಂತರವಾಗಿರುವುದಲ್ಲದೇ ಸಾರ್ವಜನಿಕವಾಗಿ ತಾವು ಹಿಂದೂ ದೇವರುಗಳನ್ನು ಪೂಜಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಿರುವುದು ನಿಜಕ್ಕೂ ದೇಶದ ಏಕತೆಗೆ ಮತ್ತು ಕೋಮು ಸೌಹಾರ್ಧಕ್ಕೆ ಕಳವಳಕಾರಿಯಾಗಿದೆ.

WhatsApp Image 2022-10-06 at 23.11.27ಸ್ವಾತ್ರಂತ್ಯ್ರ ಬಂದು 75 ವರ್ಷಗಳು ಕಳೆದರೂ ದೇವಸ್ಥಾನ ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದಾರೆ. ಶಾಲೆ ಕಟ್ಟಲು ಎಂದಾದರೂ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆಯೇ? ಒಂದು ಗ್ರಾಮದಲ್ಲಿ ಶಾಲೆಯ ಗಂಟೆ ಶಬ್ಧಕ್ಕಿಂತ ದೇವಸ್ಥಾನದ ಗಂಟೆಯ ಶಬ್ಧ ಹೆ‍‍ಚ್ಚಾಗಿ ಕೇಳುತ್ತಿದೆ ಎಂದರೆ, ಅದು ಬಡತನ, ಅನಕ್ಷರಸ್ಥರ ಕೂಸಾಗಿದೆ ಎಂದರ್ಥ ಎಂದು ರವೀಂದ್ರ ಭಟ್ ಎಂಬ ಸ್ವಘೋಷಿತ ಹಿರ್ಯ ಪತ್ರಕರ್ತ ಹೇಳಿರುವುದೂ ಸಹಾ ಅಭಿವ್ಯಕ್ತಿ ಸ್ವಾತ್ರಂತ್ರ್ಯದ ದುರ್ಬಳಕೆಯಲ್ಲದೇ ಅ ವ್ಯಕ್ತಿಯ ಬೌದ್ಧಿಕ ದೀವಾಳಿತನವನ್ನು ಎತ್ತಿ ತೋರಿಸುತ್ತಿದೆ. ಭಾರತಕ್ಕೆ ಬಂದ ಬ್ರಿಟೀಷರು ತಮ್ಮ ಆಡಳಿತಕ್ಕೆ ಸಹಾಯಕ್ಕೆ ಎಲ್ಲರನ್ನೂ ಬ್ರಿಟನ್ನಿನಿಂದ ಕರೆತರುವುದು ಕಷ್ಟಕರ ಎಂದು ನಿರ್ಧರಿಸಿ, ಲಾರ್ಡ್ ಥಾಮಸ್ ಬಾಬಿಂಗ್ಟನ್ ಮೆಕಾಲೆ ಎಂಬುವರ ನೇತೃತ್ವದಲ್ಲಿ 1830 ರಲ್ಲಿ ಇಂಗ್ಲೀಶ್ ವಿದ್ಯಾಭ್ಯಾಸದ ಶಾಲೆಗಳನ್ನು ಭಾರತದಲ್ಲಿ ಆರಂಭಿಸಿದರು. ಹಾಗೆ ನೋಡಿದರೆ, ಇಂಗ್ಲೆಂಡಿನಲ್ಲಿ ಮೊದಲ ಶಾಲೆ ಆರಂಭವಾದದ್ದೇ 1811ರಲ್ಲಿ. ಅದೇ ಸಮಯದಲ್ಲಿ ಭಾರತದಲ್ಲಿ 7,32,000 ಗುರುಕುಲಗಳನ್ನು ಹೊಂದಿತ್ತು ಎಂದರೆ ಭಾರತ ಹೇಗೆ ಅನಕ್ಷರಸ್ಥ ದೇಶವಾಗುತ್ತದೆ? ಪ್ರತೀ ಹಳ್ಳಿ ಹಳ್ಳಿಯಲ್ಲಿದ್ದ ದೇವಾಲಯಗಳೇ ಗುರುಕುಲಗಳಾಗಿ, ಧಾರ್ಮಿಕ ಚಟುವಟಿಕಗಳೊಂದಿಗೆ ಅಲ್ಲಿನ ಜನರಿಗೆ ಓದು ಬರಹದ ಜೊತೆಗೆ ಅವಶ್ಯಕವಿದ್ದ ಗಣಿತ ಮತ್ತು ಸಾಮಾಜಿಕ ಜ್ಞಾನವನ್ನು ಕಲಿಸಿಕೊಡುತ್ತಿತ್ತು ಎಂದರೆ ಅಂದಿನ ಕಾಲದಲ್ಲೇ ಭಾರತದಲ್ಲಿ ಎಷ್ಟು ಸುಶಿಕ್ಷಿತ ಜನರಿದ್ದರು ಎಂಬುದರ ಅರಿವಾಗುತ್ತದೆ.

WhatsApp Image 2022-10-07 at 15.23.54ಇನ್ನು ಕಳೆದ ವಾರ ಕರಾವಳಿಯ ಸಂಸ್ಕೃತಿ, ಅಲ್ಲಿನ ಕಂಬಳದ ಸೊಬಗು, ಅಲ್ಲಿಯ ಭೂತದ ಕೋಲದ ಬಗ್ಗೆ ಮತ್ತು ಅಲ್ಲಿನ ಜನರ ನಂಬಿಕೆಯನ್ನು ಅಧ್ಭುತವಾಗಿ ತೆರೆ ಮೇಲೆ ರಿಷಬ್ ಶೆಟ್ಟಿಯವರು ತಮ್ಮ ಕಾಂತಾರ ಚಿತ್ರದ ಮೂಲಕ ತೋರಿಸಿರುವಾಗ ಜನರೂ ಸಹಾ ಅದಕ್ಕೆ ಅಧ್ಭುತವಾಗಿ ಸ್ಪಂದಿಸಿ ಸಿನಿಮಾ ನೋಡುವಾಗ ಕಾಲುಗಳಲ್ಲಿ ಚಪ್ಪಲಿಯನ್ನೂ ಧರಿಸದೇ, ದೈವ ಮತ್ತು ದೇವರುಗಳ ಬಗ್ಗೆ ನಂಬಿಕೆ ಹೆಚ್ಚಾಗುವಂತೆ ಮಾಡಿರುವ ಪರಿಣಾಮ ಕೋಟ್ಯಾಂತರ ಹಿಂದೂಗಳು ಆ ಸಿನಿಮಾವನ್ನು ನೋಡಿ ತನ್ಮೂಲಕ ಒಗ್ಗಟ್ಟಾಗುತ್ತಿದ್ದಾರೆ ಎಂಬ ವಿಷಯವನ್ನು ತಿಳಿಯುತ್ತಲೇ, ಮತಾಂಧ ಮುಸಲ್ಮಾನರ ಭಯೋತ್ಪಾದನೆ ಚಟುವಟಿಕೆಗಳಗೆ ಪೂರಕವಾಗುವಂತಹ ಸುದ್ದಿಗಳನ್ನೇ ಪ್ರಕಟಿಸುವ ವಾರ್ತಾ ಭಾರತಿ ಎಂಬ ಕರಾವಳಿಯ ದಿನಪತ್ರಿಕೆಯ ಸಂಪಾದಕ ಬಷೀರ ಮಾಂಸಾಹಾರ ಸೇವಿಸಿ ಕಾಂತಾರ ಸಿನಿಮಾ ನೋಡಬಹುದೇ? ರಿಷಭ್ ಶೆಟ್ಟಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದರೆ ಪ್ರೇಕ್ಷಕರಿಗೆ ಅನುಕೂಲವಾಗುತ್ತದೆ ಎಂದು ಕುಹಕವಾಡುವ ಮೂಲಕ ಪತ್ರಿಕಾ ವೃತ್ತಿ ಧರ್ಮಕ್ಕೆ ದ್ರೋಹ ಬಗೆದಿದ್ದಾನೆ ಎಂದೆನಿಸುವುದಿಲ್ಲವೇ? ಇದೇ ಭಷೀರನ ಸಮುದಾಯ ಅನೇಕ ಸಲ ಹೀಗೆ ದೈವ ದೇವಳದ ಅಂಗಳದಲ್ಲಿ ಅಶುದ್ಧ ಮಾಡುವುದು, ಕಾಣಿಕೆ ಡಬ್ಬಿಯಲ್ಲಿ ಕಾಂಡೊಮ್ ಹಾಕುವುದು ಹಿಂದೂ ದೇವರುಗಳ ಮೇಲೆ ಕಾಲಿಟ್ಟು ಕೊಂಡಿರುವಂತಹ ಚಿತ್ರಗಳನ್ನು/ವಿಡೀಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಕೋಮುಸೌಹಾರ್ಧತೆ ಧಕ್ಕೆ ತಂದಾಗ, ಅವರೆಲ್ಲರೂ ಅನಕ್ಷರಸ್ಥರು ಎಂದು ಸಮರ್ಥನೆ ಮಾಡಿಕೊಳ್ಳುವ ವಿದ್ಯಾವಂತ ಭಷೀರನೇ, ಈಗ ಹಿಂದೂ ಧಾರ್ಮಿಕ ನಂಬಿಕೆಯ ಸಿನಿಮಾದ ಬಗ್ಗೆ ಕುಹಕವಾಡುವ ಮೂಲಕ ತನ್ನ ಅಭಿವ್ಯಕ್ತಿ ಸ್ವಾತ್ರಂತ್ರ್ಯದ ಎಲ್ಲೆ ಮೀರಿರುವುದು ಎಷ್ಟು ಸರಿ?

WhatsApp Image 2022-10-06 at 23.06.57ಭಾರತದ ಎಲ್ಲಾ ರಾಜ್ಯಗಳಿಗಿಂತ ಅತೀ ಹೆಚ್ಚಿನ ದೇವಾಲಯಗಳನ್ನು ಹೊಂದಿರುವ ರಾಜ್ಯ ಎಂದರೆ, ಅದು ತಮಿಳುನಾಡಾಗಿದೆ. ಅಲ್ಲಿ ಸರಿ ಸುಮಾರು 40,000 ಕ್ಕೂ ಅಧಿಕ ಹಿಂದೂ ದೇವಾಲಯಗಳಿವೆ. ಅವುಗಳಲ್ಲಿ ಹಲವು ಕನಿಷ್ಠ 800 ವರ್ಷಗಳಷ್ಟು ಹಳೆಯದಾಗಿದ್ದರೇ ಇನ್ನೂ ಎಷ್ಟೋಂದು ದೇವಾಲಯಗಳು ಅತ್ಯಂತ ಪುರಾತನವಾಗಿದ್ದು, ತಮಿಳು ನಾಡನ್ನು ಆಳಿದ ವಿವಿಧ ರಾಜವಂಶಗಳು ಶತ ಶತಮಾನಗಳಿಂದ ಈ ಹಿಂದೂ ದೇವಾಲಯಗಳನ್ನು ನಿರ್ಮಿಸಿದ್ದಾರೆ ಎನ್ನುವುದು ನಿರ್ವಿವಾದವೇ ಆಗಿರುವಾಗ, ಇತ್ತಿಚೆಗೆ ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕರಾದ ತಿರುಮಾವಳವನ್ ಅವರ 60 ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಮತ್ತೊಬ್ಬ ನಿರ್ದೇಶಕ ವೆಟ್ರಿಮಾರನ್ ಅವರು ಚೋಳ ಅರಸರ ಕಾಲದಲ್ಲಿ ಹಿಂದೂ ಎನ್ನುವುದೇ ಇರಲಿಲ್ಲ ಎಂದು ಹೇಳಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದರೆ, ಇನ್ನು ಸ್ವಘೋಷಿತ ಬುದ್ಧಿಜೀವಿ ಮತ್ತು ಮದುವೆಯಾಗುವುದನ್ನೇ ಕಾಯಕ ಮಾಡಿಕೊಂಡಿರುವ ದಕ್ಷಿಣ ಭಾರತದ ಮತ್ತೊಬ್ಬ ಪ್ರ(ಕು)ಖ್ಯಾತ ನಟ ಮತ್ತು ಸದ್ಯಕ್ಕೆ ರಾಜಕಾರಣಿ ಕಮಲಹಾಸನ್ ಸಹಾ ಚೋಳರ ಕಾಲದಲ್ಲಿ ಶೈವ ಮತ್ತು ವೈಷ್ಣವ ಧರ್ಮ ಮಾತ್ರ ಪ್ರಚಲಿತದಲ್ಲಿತ್ತು, ಹಿಂದೂ ಧರ್ಮವಲ್ಲ. ನಮಗೆ ಆ ಹೆಸರನ್ನು ಬಿಳಿ ಜನರು ಮಾತ್ರ ನೀಡಿದರು ಎಂದು ಓತ ಪ್ರೋತವಾಗಿ ಹರಿಬಿಡುತ್ತಿದ್ದರೆ ಇಂತಹ ಎಡಬಿಡಂಗಿಗಳನ್ನೇ ಇಷ್ಟು ವರ್ಷ ತಲೆಯ ಮೇಲಿಟ್ಟುಕೊಂಡು ಮೆರೆಸಿದ್ದು ಎಂದೆನಿಸುತ್ತದೆ. ಈಗ ಯಾವುದೋ ಸಿದ್ದಾಂತಕ್ಕೆ ಕಟ್ಟು ಬಿದ್ದೋ ಇಲ್ಲವೇ ತಮಿಳುನಾಡಿನ ದ್ರಾವಿಡ ರಾಜಕಾರಣದಲ್ಲಿ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಪದೇ ಪದೇ ಅಭಿವ್ಯಕ್ತಿ ಸ್ವಾತ್ರಂತ್ರ್ಯದ ಹೆಸರಿನಲ್ಲಿ ಹಿಂದೂಗಳ ಅವಹೇಳನ ಕಂಡಿತವಾಗಿಯೂ ಒಪ್ಪತ್ತಕ್ಕಂತಹದಲ್ಲ ಆಲ್ಲವೇ?

ಚೋಳರ ಕಾಲದಲ್ಲಿ ಹಿಂದೂ ಧರ್ಮ ಇರದೇ ಹೋಗಿದ್ದರೆ, ಅವರೇ ನಿರ್ಮಿಸಿದಂತಹ ಬೃಹದೇಶ್ವರ, ಐರಾವತೇಶ್ವರ, ಗಂಗೇಯಕೊಂಡ ಚೋಳಪುರಂ ಶಿವ ದೇವಸ್ಥಾನವಲ್ಲದೇ, ಸಾವಿರಾರು ವರ್ಷಗಳ ಹಿಂದಿನದ್ದು ಎಂದು ಪ್ರಾಚ್ಯವಸ್ತು ತಜ್ಞರೇ ಹೇಳಿರುವ ಹಿಂದೂ ಧರ್ಮದ ಕುರುಹುಗಳನ್ನು ಈ ದೇಶದಲ್ಲಿ ತಂದಿಟ್ಟವರು ಯಾರು? ಬ್ರಹ್ಮ, ವಿಷ್ಣು, ಮಹೇಶ್ವರರು ಹಿಂದೂ ಧರ್ಮದ ಮೂಲ ದೇವರುಗಳಲ್ಲವೇ? ಎಂಬುದನ್ನು ಕಮಲ್ ಹಸನ್ ಅವರೇ ಹೇಳಬೇಕು.

ವಾಕ್ ಸ್ವಾತಂತ್ರ್ಯ ಇದೆ ಎಂದು ಪದೇ ಪದೇ ಯಾರನ್ನೋ ನಿಂದಿಸುವುದಾಗಲೀ ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ಕುಹಕವಾಡುವುದಲ್ಲ. ವಾಕ್ ಸ್ವಾತ್ರಂತ್ಯ ಎಂದು ಮತ್ತೊಬ್ಬರ ಮೇಲೆ ಜೀವ ಬೆದರಿಕೆಯನ್ನು ಹಾಕುವುದಲ್ಲ. ವಾಕ್ ಸ್ವಾತ್ರಂತ್ಯ ಎಂದು ಮತ್ತೊಬ್ಬರ ಮೇಲೆ ತಮ್ಮ ಸಿದ್ಧಾಂತಗಳನ್ನು ಹೇರುವುದಲ್ಲ ಎಂಬುದನ್ನು ಇಂತಹ ಕಿಡಿಗೇಡಿಗಳಿಗೆ ತಿಳಿ ಹೇಳಬೇಕಾಗಿರುವುದಲ್ಲದೇ ಕಾನೂನಾತ್ಮಕವಾಗಿ ಇಂತಹ ಹೇಳಿಕೆ ನೀಡುವವರ ವಿರುದ್ಧ ಜಾಮೀನು ರಹಿತ ಕಠಿಣ ಕಾನೂನನ್ನು ಜಾರಿಗೆ ತರಲೇ ಬೇಕಿದೆ,

ಇನ್ನು ಹಿಂದೂ ಧರ್ಮದಿಂದ ತಮ್ಮ ತೆವಲಿಗಾಗಿ ಮತಾಂತರಗೊಂಡ ಕೂಡಲೇ ಹಿಂದೂ ಧರ್ಮದ ಆಧಾರದಲ್ಲಿ ಅವರಿಗೆ ವಿಶೇಷವಾಗಿ ಸಿಗುತ್ತಿದ್ದ ಎಲ್ಲಾ ರೀತಿಯ ಸವಲತ್ತುಗಳನು ಕಡಿತಗೊಳಿಸಿದಾಗಲೇ ಮಾತ್ರಾ ಇಂತಹ ಗೋಸುಂಬೆಗಳ ಆಟಾಟೋಪಗಳನ್ನು ತಡೆಯಬಹುದಾಗಿದೆ. ಹಾಗಿಲ್ಲದೇ ಹೋದಲ್ಲಿ ಹಿಂದೂಸ್ಥಾನದಲ್ಲಿ ಹಿಂದೂಗಳು ಹಬ್ಬ ಹರಿದಿನಗಳನ್ನೂ ಆಚರಿಸಲು ಆತಂಕಪಡುವ ದಿನಗಳು ಬಿಡಿ, ತಮ್ಮ ಶ್ರದ್ದೆ ಮತ್ತು ಉಡುಗೆ ತೊಡುಗೆಗಳನ್ನೂ ಧರಿಸುವುದಕ್ಕೂ ಭಯಪಡಬೇಕಾದಂತಹ ಕಾಲ ಬಂದರೂ ಅಚ್ಚರಿ ಇಲ್ಲ ( ಇಂದಿಗೂ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ಹೆಣ್ಣುಮಕ್ಕಳು, ಕೈಗೆ ಬಳೆ, ಹಣೆಗೆ ಕುಂಕುಮ, ತಲೆಯಲ್ಲಿ ಹೂವು ಮುಡಿಯುವಂತಿಲ್ಲ) ಹಾಗಾಗಿ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಎಲ್ಲೆಲ್ಲಿ ಸಾಧ್ಯವೂ ಅಂತಹ ಕಡೆಯಲ್ಲೆಲ್ಲಾ ನಮ್ಮ ಆಚಾರ ವಿಚಾರಗಳನ್ನು ಪಾಲಿಸುವ ಮೂಲಕ ತಮ್ಮ ಧರ್ಮವನ್ನು ಉಳಿಸೋಣ ಅಲ್ಲವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s