ಅದು ಎಂಭತ್ತರ ದಶಕ, ಆಗಿನ್ನೂ ಮಿಡಲ್ ಸ್ಕೂಲಿನಲ್ಲಿ ಓದುತ್ತಿದ್ದ ನಾನು ಸಂಘದ ಶಾಖೆಯಲ್ಲಿ ಕಲಿಸಿಕೊಟ್ಟಿದ್ದ ಧರೆಗವ ತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು, ನಮ್ಮೀ ತಾಯ್ನೆಲವೂ.. ಎಂಬ ಹಾಡನ್ನು ಗುನುಗುತ್ತಿದ್ದನ್ನು ಕೇಳಿಸಿಕೊಂಡ ನಮ್ಮ ತಂದೆಯವರು, ವಾರೆ ವಾಹ್!! ನಮ್ಮ ಭಾರತದ ವಿವಿಧ ಪ್ರದೇಶಗಳನ್ನು ಎಷ್ಟು ಅದ್ಭುತವಾಗಿ ವರ್ಣಿಸಿದ್ದಾರೆ. ಈ ಹಾಡನ್ನು ಬರೆದಿದ್ದು ಯಾರು? ಎಂದು ಕೇಳಿದಾಗ, ಆ ಹಾಡಿನ ಅರ್ಥವನ್ನು ಅರಿಯುವ ಮನಸ್ಸು ಮತ್ತು ನಮ್ಮ ತಂದೆಯವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಆಗಿರಲಿಲ್ಲ. ಅದೇ ವರ್ಷದ ಬೇಸಿಗೆಯಲ್ಲಿ ಪಾಣೇಮಂಗಳೂರಿನ ಬಳಿಯ ನರಿಕೊಂಬು ಎಂಬ ಪ್ರದೇಶದಲ್ಲಿ ದಿ. ಶ್ರೀ ಕೃಷ್ಣ ಸೋಮಯಾಜಿಗಳು ನಡೆಸುತ್ತಿದ್ದ ವೇದ ಶಿಭಿರದಲ್ಲಿ ಬೌದ್ಧಿಕ್ ಆರಂಭವಾಗುವ ಮೊದಲು ವಯಕ್ತಿಕ ಗೀತೆಯಲ್ಲಿ ಅದೇ ಧರೆಗವ ತರಿಸಿದೆ ಹಾಡನ್ನು ಹಾಡಿದ ನಂತರ ಅಂದಿನ ಬೌದ್ಧಿಕ್ ನಡೆಸಿಕೊಡಲು ಬಂದಿದ್ದ ಸಣ್ಣಗೆ ಎತ್ತರದ ಅತ್ಯಂತ ಸುರದ್ರೂಪಿಗಳಾಗಿದ್ದ ಸದಾಕಾಲವೂ ಬಿಳೀ ಪಂಚೆ, ಬಿಳೀ ಶರ್ಟ್ ಜೊತೆಗೆ ಕೈವರೆಸಿಕೊಳ್ಳು ಒಂದು ಸಣ್ಣ ಕರವಸ್ತ್ರವನ್ನು ಹಿಡಿದಿರುತ್ತಿದ್ದ ಆ ವಕ್ತಾರರನ್ನು ಪರಿಚಯಿಸುವಾಗ, ಶ್ರೀಯುತ ಚಂದ್ರಶೇಖರ ಭಂಡಾರಿಗಳು, ಮೂಲತಃ ಮಂಗಳೂರಿನವರು, ಬಾಲ್ಯದಿಂದಲೂ ಸ್ವಯಂಸೇವಕರು, ಸಂಘದ ಹಿರಿಯ ಪ್ರಚಾರಕರು ಎಂದು ಪರಿಚಯಿಸುತ್ತಾ, ಈಗಷ್ಟೇ ನೀವೆಲ್ಲ್ಲರೂ ಕೇಳಿದ ವಯಕ್ತಿಕ ಗೀತೆಯೂ ಸಹಾ ಅವರದ್ದೇ ಕೃತಿಯಾಗಿದೆ ಎಂದಾಗ, ಆರ್ಕಿಮಿಡೀಸ್ ನಂತೆ ಯುರೇಕಾ.. ಯುರೇಕಾ.. ಎಂದು ಮನಸ್ಸಿನಲ್ಲೇ ಅಂದುಕೊಂಡು, ಅದೇ ರಾತ್ರೀ ಈ ವಿಷಯವನ್ನು ನಮ್ಮ ತಂದೆಯವರಿಗೆ ಪ್ರತ್ರ ಮುಖೇನ ಬರೆದು ತಿಳಿಸಿದ್ದೆ.
ನಂತರದ ದಿನಗಳಲ್ಲಿ ತಿಳಿದ ಬಂದ ವಿಷಯವೆಂದರೆ ಶ್ರೀಯುತ ಚಂದ್ರಶೇಖರ ಭಂಡಾರಿ ಅವರು ಕೇವಲ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಾತ್ರವಲ್ಲದೇ, ಕನ್ನಡ ಸಾಹಿತ್ಯ ವಲಯದಲ್ಲಿ ಅತ್ಯಂತ ಚಿರಪರಿಚಿತವಾದವರು. ತಮ್ಮ ಅವಿಶ್ರಾಂತ ಸಂಘಟನಾತ್ಮಕ ಚಟುವಟಿಕೆಯ ಜೊತೆಗೆ ತಮ್ಮ ಆಳವಾದ ಅಧ್ಯಯನ, ವಿಸ್ತಾರವಾದ ವಿಮರ್ಶೆ ಹಾಗೂ ನಿರಂತರ ಬರವಣಿಗೆಯೊಂದಿಗೆ ಸಮಾಜಕಾರ್ಯದಲ್ಲಿನ ಅನುಭವಗಳಿಂದ ಅಕ್ಷರಲೋಕಕ್ಕೆ ಮೆರುಗು ನೀಡಿದವರು. ತಮ್ಮ ಭಂಡಾರಿ ಹೆಸರಿಗೆ ಅನ್ವರ್ಥದಂತೆ ಜ್ಞಾನದ ಭಂಡಾರವನ್ನೇ ಹೊಂದಿದ್ದಂತಹವರು ಎಂದರೂ ಅತಿಶಯೋಕ್ತಿ ಆಗದು.
ಇಂತಹ ಚಂದ್ರಶೇಖರ ಭಂಡಾರಿಯವರು ಮಂಗಳೂರಿನ ಸೇವಗೂರ್ ವಿಟ್ಟಪ್ಪ ಭಂಡಾರಿ ಮತ್ತು ಕಮಲಾವತಿ ದಂಪತಿಗಳ ಐದನೆಯ ಹಾಗೂ ಕೊನೆಯ ಮಗನಾಗಿ ಮೇ 4, 1935ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ಇಬ್ಬರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರ ಜೊತೆಯಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರಂಭಿಸಿ, ಮಂಗಳೂರಿನ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಹೈಸ್ಕೂಲು ಮುಗಿಸಿದ ನಂತರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಹಾಗೂ 1958ರಲ್ಲಿ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇಡಿ. ಪದವಿ ಪೂರೈಸಿ, 1958ರಿಂದ 1961ರ ವರೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್‌ನಲ್ಲಿ ಹಾಗೂ ಉಡುಪಿ ಸಮೀಪದ ಕಲ್ಯಾಣಪುರದಲ್ಲಿನ ಮಿಲಾಗ್ರಿಸ್ ಹೈಸ್ಕೂಲ್‌ನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
ಶಾಲಾ ದಿನಗಳಿಂದಲೇ ಸಂಘದ ಒಡನಾಟವಿದ್ದ ಕಾರಣ, 1961ರಲ್ಲಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಪ್ರಚಾರಕರಾಗಿ ಜೀವನವನ್ನು ರಾಷ್ಟ್ರಕಾರ್ಯಕ್ಕೆ ಮುಡಿಪಾಪಾಗಿಟ್ಟು, ಸಮಾಜಕಾರ್ಯದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿ ಅಲ್ಲಿಂದ ಸುದೀರ್ಘವಾಗಿ 62 ವರ್ಷಗಳ ಕಾಲ ಸಂಘದ ಪ್ರಚಾರಕರಾಗಿದ್ದರು. ಈ ಅವಧಿಯಲ್ಲಿ ಅವರು ಮಂಗಳೂರು, ತುಮಕೂರು ಹಾಗೂ ಮೈಸೂರು ವಿಭಾಗಗಳ ವಿವಿಧ ಪ್ರದೇಶಗಳಲ್ಲಿ ವಿಭಾಗ ಪ್ರಚಾರಕ್ ಸೇರಿದಂತೆ ವಿವಿಧ ಹಂತಗಳಲ್ಲಿ ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಿಸಿದರು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭೂಗತರಾಗಿ ಕೆಲಸ ಮಾಡಿದ ಅವರು 1984ರಲ್ಲಿ, ಸಂಘದ ಹಿರಿಯ ಪ್ರಚಾರಕರಾಗಿದ್ದ ಮತ್ತು ಚಿಂತಕರಾಗಿದ್ದ ಶ್ರೀ ಹೊ.ವೆ. ಶೇಷಾದ್ರಿ ಅವರ ಅಪೇಕ್ಷೆಯಂತೆ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1994ರಲ್ಲಿ ಕರ್ನಾಟಕದ (ಎರಡೂ ಪ್ರಾಂತದ) ಪ್ರಚಾರ ಪ್ರಮುಖರಾಗಿ 2012ರ ತನಕ ಜವಾಬ್ದಾರಿ ನಿರ್ವಹಿಸಿದ್ದರು. 2000ರಲ್ಲಿ ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಸಂಸ್ಥಾಪಕ ವಿಶ್ವಸ್ಥರಾಗಿ ಕಾರ್ಯನಿರ್ವಹಿಸಿದರು. 2012ರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿಯೂ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
1984ರಲ್ಲಿ ಪ್ರಕಟಗೊಂಡ ಕದಡಿದ ಪಂಜಾಬ್ ಎಂಬ ಚೊಚ್ಚಲ ಕೃತಿಯ ಮೂಲಕ 80ರ ದಶಕದಲ್ಲಿ ಪಂಜಾಬ್ನಲ್ಲಿ ಉಲ್ಪಣಗೊಂಡಿದ್ದ ಪ್ರತ್ಯೇಕತಾವಾದದ ವಿದ್ಯಮಾನಗಳ ಕುರಿತ ಸಂಪೂರ್ಣ ವಿವರಗಳನ್ನು ಒಳಗೊಂಡಿದ್ದ ಕೃತಿಯ ಮೂಲಕ ಸಾಹಿತ್ಯ ಚಟುವಟಿಕೆಯನ್ನು ಆರಂಭಿಸಿದ ಶ್ರೀಯುತರು ಮುಂದೆ ಸಾಹಿತ್ಯ ಲೋಕದಲ್ಲಿ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಸಂಘಟನೆಯ ಹಿರಿಯರ ಅಪೇಕ್ಷೆಯಂತೆ ರಾಷ್ಟ್ರೀಯ ಚಿಂತನೆಯುಳ್ಳ ಧನಾತ್ಮಕವಾದ ಸಾಹಿತ್ಯ ಕೃಷಿಯಲ್ಲಿ, ಸೇವೆ ಎಂಬ ಯಜ್ಞದಲ್ಲಿ ಸಮಿದೆಯಂತೇ ಉರಿಯುವ ಎನ್ನುವಂತೆ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಈ ನಿಟ್ಟಿನಲ್ಲಿ ಅವರೊಬ್ಬ ಇತಿಹಾಸಕಾರರಾಗಿ, ಅನುವಾದಕರಾಗಿ, ವೈಚಾರಿಕ ವಿಷಯಗಳ ಪ್ರತಿಪಾದಕರಾಗಿ, ಸಂಶೋಧಕರಾಗಿ, ಪತ್ರಕರ್ತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.
ಸಂಘದ ಸ್ವಯಂಸೇವಕರಾಗಿ ಮತ್ತು ಪ್ರಚಾರಕರಾಗಿ ಸಂಘವನ್ನು ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದ ಶ್ರೀ ಭಂಡಾರಿಯವರು ರಾಜ್ಯದಲ್ಲಿ ಸಂಘ ಬೆಳೆದು ಬಂದ ದಾರಿಯನ್ನು ಅಧಿಕೃತವಾಗಿ ದಾಖಲಿಸಿದ ಸಂಘದ ಚರಿತ್ರಕಾರರಾಗಿ, ಕಡಲತಡಿಯ ಸಂಘವಟ, ವಿದ್ಯಾರಣ್ಯರ ಭೂಮಿಯಲ್ಲಿ ಶ್ರೀ ಮಾಧವ, ಕರ್ನಾಟಕದಲ್ಲಿ ಸಂಘ ಮುಂತಾದ ಕೃತಿಗಳ ಮೂಲಕ ಸಂಘದ ಇತಿಹಾಸವನ್ನು ಮುಂದಿನ ಪೀಳಿಗೆಗೆ ನೀಡಿದ್ದಾರೆ. 1857ರ ಸಮರ, ನಾನಾನಿಂದ ನೇತಾಜಿಯವರೆಗೆ ಮುಂತಾದ ಕೃತಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಅನೇಕ ಮಜಲುಗಳನ್ನು ಪರಿಚಯಿಸಿದರೆ, ಕಾರ್ಗಿಲ್ ಕಂಪನ, ಡಂಕೆಲ್ ಪ್ರಸ್ತಾವನೆಗಳು, ಅಯೋಧ್ಯೆಯ ಕರಸೇವೆ, ಗೋಧ್ರಾ ದುರಂತ ದಂತಹ ಪುಸ್ತಕದ ಮೂಲಕ ಸಮಕಾಲೀನ ಪ್ರಸಂಗಗಳನ್ನೂ ಇತಿಹಾಸ ಭಾಗವಾಗಿ ಚಿತ್ರಿಸಿದ್ದರು.
ಕೇವಲ ಲೇಖಕರಾಗಿಯಷ್ಟೇ ಅಲ್ಲದೇ, ವಿಕ್ರಮ, ಹೊಸದಿಗಂತ, ಉತ್ಥಾನ, ಪುಂಗವ, ಅಸೀಮಾ ಮುಂತಾದ ಪತ್ರಿಕೆಗಳಿಗೆ ವೈಚಾರಿಕ ಲೇಖನಗಳನ್ನು ಅಲ್ಲದೇ, ನಿಯಮಿತವಾಗಿ ಅಂಕಣ ಮತ್ತು ಅನೇಕ ಲೇಖನಗಳ ಮೂಲಕ ಸಂಘ ಮತ್ತು ಸಮಾಜ ಸಮರ್ಪಿತ ವ್ಯಕ್ತಿಗಳ ಜೀವನಾದರ್ಶನದ ಕ್ಷಣಗಳನ್ನು ಅಕ್ಷರಗಳ ಮೂಲಕ ಸೆರೆ ಹಿಡಿದಿಡುವ ಮೂಲಕ ಇವರು ಪತ್ರಕರ್ತರಾಗಿಯೂ ಸಹಾ ಸೇವೆ ಸಲ್ಲಿಸಿದ್ದರು. ಕನ್ನಡ ನಾಡಿನ ಸಣ್ಣಪತ್ರಿಕೆಗಳಿಗೆ ಸುದ್ಧಿಮೂಲವಾಗಿ ಕಾರ್ಯವೆಸಗುವ ಆಪ್ತಸಂವಾದ ಸಾಪ್ತಾಹಿಕ ವಾರ್ತಾಪತ್ರವು ಇವರ ಸಂಪಾದಕತ್ವದಲ್ಲಿ ಹೊರಬರುತ್ತಿತ್ತು. ರಾಜ್ಯದ ವಿವಿಧೆಡೆಗಳಿಂದ ಪ್ರಕಟಗೊಳ್ಳುತ್ತಿದ್ದ ಜಿಲ್ಲಾ ಮಟ್ಟದ ಅನೇಕ ಪತ್ರಿಕೆಗಳಿಗೆ ಅನುಕೂಲವಾಗಿದ್ದಲ್ಲದೇ, ಇದರಿಂದ ರಾಷ್ಟ್ರೀಯ ವಿಚಾರ ಹೊಸ ಮಾಧ್ಯಮಗಳ ಮೂಲಕ ಹೆಚ್ಚು ಜನರನ್ನು ತಲುಪುವಂತಾಯಿತು ಎಂದರೂ ಅತಿಶಯವಲ್ಲ.
ವಿವಿಧ ಭಾಷೆಗಳಲ್ಲಿರುವ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ, ಅನುವಾದ ಸಾಹಿತ್ಯಕ್ಕೊಂದು ಮಾದರಿಯನ್ನು ಶ್ರೀಯುತರು ಸೃಷ್ಟಿಸಿದರು ಎಂದರೂ ತಪ್ಪಲ್ಲ. ದತ್ತೋಪಂತ ಠೇಂಗಡಿಯವರು ರಚಿಸಿದ ಡಾ.ಅಂಬೇಡ್ಕರ್ ಕುರಿತ ಕೃತಿಯನ್ನು ಸಾಮಾಜಿಕ ಕ್ರಾಂತಿ ಸೂರ್ಯ ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರು. ಸಾಮಾಜಿಕ ವಲಯದಲ್ಲಿ ಸಂಚಲನ ಸೃಷ್ಠಿಸಿದ ಈ ಅಭೂತಪೂರ್ವ ಕೃತಿಯನ್ನು ಕುವೆಂಪು ಭಾಷಾ ಭಾರತಿಯು 2011ನೇ ಸಾಲಿನ ಅನುವಾದ ಸಾಹಿತ್ಯ ವಿಭಾಗದ ಅತ್ಯುತ್ತಮ ಕೃತಿಯೆಂದು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. 1990-91ನೆ ವರ್ಷದಲ್ಲಿ ಡಾ. ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಎಸ್. ಆರ್. ರಾಮಸ್ವಾಮಿಯವರ ಜೊತೆಗೂಡಿ ರಚಿಸಿದ ಸಮಾಜ ಚಿಕಿತ್ಸಕ ಅಂಬೇಡ್ಕರ್ ಪುಸ್ತಕವು ಬಾಬಾಸಾಹೇಬರ ಸಮಾಜಪ್ರೇಮವನ್ನು ಚಿತ್ರಿಸುವಲ್ಲಿ ಸಫಲವಾಯಿತು. ಹೀಗೆ ಸ್ವತಂತ್ರ ಕೃತಿಗಳು ಮತ್ತು ಅನುವಾದನಾ ಸಾಹಿತ್ಯಗಳ ಮೂಲಕ ಸುಮಾರು ನಲವತ್ತಕ್ಕೂ ಹೆಚ್ಚಿನ ಕೃತಿಗಳ ಕತೃಗಳಾಗಿದ್ದರು.
ಸಾರಸ್ವತ ಲೋಕದಲ್ಲಿ ಇಷ್ಟೆಲ್ಲಾ ಸಾಧನೆಗಳನ್ನು ಸಲ್ಲಿಸಿದ್ದರೂ, ಎಂದೂ ಸಹಾ ತಮ್ಮ ವಯಕ್ತಿಕ ಪ್ರಚಾರ, ಪ್ರಸಿದ್ಧಿ ಮತ್ತು ಪ್ರಂಶಸೆಗಳಿಗೆ ಅನುವು ಮಾಡಿಕೊಡದೇ, ಎಲೆ ಮರೆಕಾಯಿಯಂತೆಯೇ ಸಂಘದ ಕಾರ್ಯಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಸಂಘದ ಸ್ವಯಂಸೇವಕನಾಗಿ ನನಗೆ ವಹಿಸಿದ ಹೊಣೆಯನ್ನು ನಿರ್ವಹಿಸಿದ್ದೇನೆಯೇ ಹೊರತು ಗುರುತಿಸಿ ಸನ್ಮಾನ ಮಾಡಿಸಿಕೊಳ್ಳುವ ಯಾವ ಕಾರ್ಯವನ್ನೂ ಮಾಡಿಲ್ಲ ಎಂದು ಹೇಳುವ ಮೂಲಕ ರಾಜಕೀಯ, ಜಾತೀಯತೆ, ಪ್ರಶಸ್ತಿ, ಆಮೀಷಗಳಿಂದ ದೂರವೇ ಉಳಿದಿದ್ದ ಭಂಡಾರಿಯಂತಹವರು ಇಂದಿನ ಕಾಲಘಟ್ಟದಲ್ಲಿ ಅನುರೂಪ ಮತ್ತು ಅಪರೂಪವೇ ಸರಿ. ಎಂಭತ್ತೈದರ ಪ್ರಾಯದಲ್ಲೂ ವೈಚಾರಿಕ, ಬೌದ್ಧಿಕ ಚಟುವಟಿಕೆಗಳಲ್ಲಿ ಸದಾಕಾಲವೂ ತೊಡಗಿಸಿಕೊಂಡು ಕ್ರಿಯಾಶೀಲ ಜೀವನ ನಡೆಸುತ್ತಿದ್ದ ಉತ್ಸಾಹಿ ಶ್ರೀ ಚಂದ್ರಶೇಖರ ಭಂಡಾರಿಯವರು, ಅಕ್ಟೋಬರ್ 30, 2022 ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ವಯೋಸಹಜವಾಗಿ ನಿಧನರಾದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ಸಂಪೂರ್ಣ ಸಮರ್ಪಣೆ ಮಾಡಿಕೊಂಡಿದ್ದಲ್ಲದೇ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು ಚಂದ್ರಶೇಖರ್ ಭಂಡಾರಿಯವರು ನಿಜವಾಗಿಯೂ ನಮ್ಮ ಕನ್ನಡದ ಕಲಿಗಳೇ ಸರಿ. ಅವರಿಂದು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಅವರ ಸಾಧನೆ ಮತ್ತು ಸಾಹಿತ್ಯ ಕೃತಿಗಳ ಮೂಲಕ ಅಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರ್ತಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ