ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು

ಕರ್ನಾಟಕ ರಾಜ್ಯದ ನಾಡಗೀತೆ ಯಾವುದು ಎಂದು ಯಾವುದೇ ನೈಜ ಕನ್ನಡಿಗರನ್ನು ಕೇಳಿದರೆ ಥಟ್ ಅಂತಾ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಎಂದು  ಹೇಳುತ್ತಾರೆ. ಅದೇ ಸ್ವಾತ್ರಂತ್ತ್ಯ ಪೂರ್ವದ ಮೈಸೂರು ಸಂಸ್ಥಾನದ ರಾಜ್ಯಗೀತೆ ಯಾವುದಿತ್ತು ಎಂದು ಕೇಳಿದರೆ ಬಹುತೇಕರಿಗೆ ಅದರ  ಅರಿವೇ ಇಲ್ಲದಿರುವುದು ವಿಷಾಧನೀಯವಾಗಿದೆ. ಮೈಸೂರಿನ ಮಹಾರಾಜರಾದ  ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಪ್ರಪ್ರಥಮವಾಗಿ ಮೈಸೂರು ಅರಸರ ಕುಲದೇವತೆಯಾದ ಶ್ರೀ ಚಾಮುಂಡೇಶ್ವರಿ ಅಥವಾ ಗೌರಿಯನ್ನು ಕುರಿತಾಗಿ ಪ್ರಾರ್ಥಿಸುವ  ರಾಜ್ಯಗೀತೆಯನ್ನು ಆಸ್ಥಾನದ ವಿದ್ವಾನರಾಗಿದ್ದ ಶ್ರೀ ಬಸವಪ್ಪ ಶಾಸ್ತ್ರಿಗಳು ರಚಿಸಿದ್ದರು.  ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲದೇ ಸಂಗೀತದಲ್ಲೂ ಅಪಾರವಾದ ಪಾಂಡಿತ್ಯವನ್ನು ಪಡೆದಿದ್ದ ಪ್ರಕಾಂಡ ಪಂಡಿತರು ಮತ್ತು ಪ್ರತಿಭಾಸಂಪನ್ನರಾಗಿದ್ದ ಅವರು  ಅಭಿನವಕಾಳಿದಾಸ ಎಂಬ ಬಿರುದಿಗೆ ಪಾತ್ರರಾಗಿದ್ದ ಶ್ರೀ ಬಸವಪ್ಪ ಶಾಸ್ತ್ರಿಗಳ ಕುರಿತಾಗಿ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

shastri1ಬಸವಪ್ಪ ಶಾಸ್ತ್ರಿಯವರು ಶುಭಕೃತುನಾಮ ಸಂವತ್ಸರದ ವೈಶಾಖ ಶುದ್ಧ ಬಿದಿಗೆಯಂದು ಅರ್ಥಾತ್ 1843ರ ಮೇ 2ರಂದು ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕ್ಕಿನ ನಾರಸಂದ್ರ ಗ್ರಾಮದ ಮೂಲದವರಾದ, ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ಶ್ರೀ ಮಹಾದೇವಶಾಸ್ತ್ರಿ ಮತ್ತವರ ಶ್ರೀಮತಿ ಬಸವಾಂಬಿಕೆ  ಅವರ ಸುಪುತ್ರನಾಗಿ ಜನಿಸಿದರು. ಬಸವಪ್ಪನವರ ತಾತನವರಾಗಿದ್ದ ನಾರಸಂದ್ರದ ರುದ್ರಾಕ್ಷಿಮಠದ ಮುರುಡು ಬಸವಸ್ವಾಮಿಗಳೂ ಸಹಾ  ಮುಮ್ಮಡಿ ಕೃಷ್ಣರಾಜ ಒಡೆಯರ ಸಮ್ಮುಖ ಪುರೋಹಿತರಾಗಿದ್ದರು ಮತ್ತು ಜಗದ್ಗುರು ರೇಣುಕಾಚಾರ್ಯ ಸಂಪ್ರದಾಯಕ್ಕೆ ಸೇರಿದ ವೀರಮಾಹೇಶ್ವರ ವಂಶಸ್ಥರು. ದುರಾದೃಷ್ಟವಷಾತ್ ಚಿಕ್ಕಂದಿನಲ್ಲಿಯೆ ತಂದೆತಾಯಿಗಳನ್ನು ಕಳೆದುಕೊಂಡ ಬಸವಪ್ಪಶಾಸ್ತ್ರಿಗಳು, ಅರಮನೆಯ ರಾಜಕವಿಗಳಾದ ಅಳಿಯ ಲಿಂಗರಾಜರ ಕೃಪಾಶೀರ್ವಾದ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು ರಾಜಾಶ್ರಯದಿಂದಾಗಿ ಮೈಸೂರು ಅರಮನೆಯಲ್ಲಿಯೇ ಬೆಳೆಯುತ್ತಾ, ಆಸ್ಥಾನ ಪಂಡಿತರಾಗಿದ್ದ ಗರಳಪುರಿ ಶಾಸ್ತ್ರಿಗಳ ಬಳಿ  ಹಳೆಗನ್ನಡ ಮತ್ತು  ಸಂಸ್ಕೃತ ಸಾಹಿತ್ಯವನ್ನು ಅಭ್ಯಾಸ ಮಾಡಿ ಅಪಾರ ಜ್ಞಾನ ಸಂಪತ್ತನ್ನು ಗಳಿಸುವುದರ ಜೊತೆಗೆ ಸಂಗೀತ ಮತ್ತು ವೇದಾಂತ ದರ್ಶನದಲ್ಲೂ ಅಪಾರ ಪಾಂಡಿತ್ಯ ಪಡೆದು ಕೇವಲ ತಮ್ಮ 18ನೇ ವಯಸ್ಸಿನಲ್ಲೇ ಒಡೆಯರ ಆಸ್ಥಾನದ ಕವಿಗಳಾಗಿ ನೇಮಕಗೊಂಡರು.

bandಹೀಗೆ ರಾಜಾಶ್ರಯದಲ್ಲಿ ಇದ್ದಾಗಲೇ, ಮೈಸೂರು ಸಂಸ್ಥಾನಕ್ಕೊಂದು ರಾಜ್ಯ ಗೀತೆಯನ್ನು ರಚಿಸಬೇಕೆಂದು ನಿರ್ಧರಿಸಿ, ಮೈಸೂರ ಅರಸರ ಮನೆದೇವಿ ಶ್ರೀ ಚಾಮುಂಡೇಶ್ವರಿ ಮತ್ತು ಗೌರಿಯ ಕುರಿತಾಗಿ ಕನ್ನಡದ ಉಡುಗೆ ತೊಟ್ಟ ಸಂಸ್ಕೃತದ ಈ ರಾಜ್ಯ ಗೀತೆ ಅಂದಿನ ಮೈಸೂರಿನ ಪ್ರಜಾಕೋಟಿಯ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಹೋಯಿತು. ಸ್ವಾತ್ರಂತ್ರ್ಯಾನಂತರ  ಒಕ್ಕೂಟ ಭಾರತಕ್ಕೆ ಮೊದಲ ರಾಜ್ಯವಾಗಿ ಮೈಸೂರು ಸಂಸ್ಥಾನ ಸೇರಿದ ನಂತರ  ಅಂದಿನಿಂದ ಇಂದಿನ ವರೆಗೂ ಈ ಹಾಡನ್ನು  ದಸರಾ ಮತ್ತು ವಿಶೇಷ ಸಂದರ್ಭಗಳಲ್ಲಿ ಅರಮನೆಯ ಬ್ಯಾಂಡ್ ಈ ಹಾಡನ್ನು ಖಡ್ಡಾಯವಾಗಿ ನುಡಿಸುತ್ತಾರೆ.

ಕಾಯೌ ಶೀಗೌರಿ ಕರುಣಾಲಹರೀ ತೋಯಜಾಕ್ಷಿ ಶಂಕರೀಶ್ವರೀ ||ಪ||
ವೈಮಾನಿಕ ಭಾಮಾರ್ಚಿತ ಕೋಮಲತರ ಪಾದೇ ಸೀಮಾತಿಗ ಭೂಮಾಸದೆ ಕಾಮಿಕ ಫಲದೇ ||1||
ಶುಂಭಾದಿಮದಾಂಬೋಧಿನಿ ಕುಂಭಜನಿಭೆ ದೇವೀ ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ ||2|
ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜ ಚಾಮ ನಾಮಾಂಕಿತ ಭೂಮೀಂದ್ರ ಲಾಮನ ಮುದದೇ ||3||”

Shastri3ತಮ್ಮ ಸಾಕು ತಂದೆಯಾಗಿದ್ದ ಅಳಿಯ ಲಿಂಗರಾಜು ಅರಸರ ಪ್ರೋತ್ಸಾಹ ಪ್ರೋತ್ಸಾಹದಿಂದಾಗಿಯೇ, ಚಿಕ್ಕವಯಸ್ಸಿನಲ್ಲಿಯೇ ಕೃಷ್ಣರಾಜಾಭ್ಯುದಯ ಎಂಬ ಕಾವ್ಯವನ್ನು ಚಂಪೂವಿನಲ್ಲಿ ರಚಿಸುವ ಮೂಲಕ  ರಾಜಮನ್ನಣೆಗೆ ಪಾತ್ರರಾಗಿದ್ದಲ್ಲದೇ, ಇದೇ ಕೃತಿಯ ಮೂಲಕ  ನಾಡಿನಾದ್ಯಂತ  ಪ್ರಖ್ಯಾತರಾದರು. ಸಂಗೀತದಲ್ಲೂ ಅಪಾರವಾದ ಜ್ಞಾನವನ್ನು ಪಡೆದಿದ್ದರಿಂದ ಕಾಳಿದಾಸ ಕವಿಯ  ಸಂಸ್ಕೃತದ ಅಭಿಜ್ಞಾನ ಶಾಕುಂತಲಾ ನಾಟಕವನ್ನು ಮೂಲ ಕೃತಿಗೆ ಕೊಂಚವೂ ಕುಂದು ಬಾರದಂತೆ ಕನ್ನಡಕ್ಕೆ  ಭಾಷಾಂತರಿಸುವ ಮೂಲಕ ಆಭಿನವ ಕಾಳಿದಾಸ ಎಂಬ ಬಿರುದಿಗೆ ಪಾತ್ರರಾದರು. ಈ ನಾಟಕವನ್ನು ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಅವರು ಮೊದಲ ಬಾರಿಗೆ ರಂಗಭೂಮಿಯ ಮೇಲೆ ಪ್ರದರ್ಶಿಸುವ ಮೂಲಕ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಬಸವಪ್ಪ ಶಾಸ್ತ್ರಿಗಳ ಹೆಸರನ್ನು ಚಿರಸ್ಥಾಯಿಯನ್ನಾಗಿಸಿತು.

shastri2ಬಸವಪ್ಪ ಶಾಸ್ತ್ರಿಗಳ  ವಿದ್ವತ್ ಪ್ರತಿಭೆಗೆ ಮತ್ತು ಪಾಂಡಿತ್ಯವನ್ನು ಅರಿತಿದ್ದ ಅಂದಿನ ದಿವಾನ್ ರಂಗಾಚಾರ್ಯರು  ಬಾಲಕರಾಗಿದ್ದ ಶ್ರೀ ಚಾಮರಾಜ ಒಡೆಯರಿಗೆ ಅವರಿಗೆ ಶಿಕ್ಷಣವನ್ನು ಹೇಳಿಕೊಡುವ ರಾಜಗುರುಗಳಾಗಿ ನೇಮಿಸಿದರು.  ಹೀಗೆ  ಮಹಾರಾಜರ ವಿದ್ಯಾಗುರುಗಳಾದ ನಂತರ ಶಾಸ್ತ್ರಿಗಳ ಅಭ್ಯುದಯದ ಬಾಗಿಲು ತೆರೆದು ಮುಂದೆ ಮೈಸೂರು ಅರಮನೆಯಲ್ಲಿ ಆಸ್ಥಾನ ವಿದ್ವಾಂಸರು, ರಾಜಪುರೋಹಿತರು ಆದರು. ಅಳಿಯ ಲಿಂಗರಾಜರಿಗೂ ದಿವಾನ್ ರಂಗಾಚಾರ್ಯರಿಗೂ ನಾಟಕದ ಗೀಳು ಬಹಳವಿದ್ದುದರಿಂದ, 1882ರಲ್ಲಿ ಸ್ಥಾಪಿತವಾದ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಎಂಬ ಕಂಪನಿಗೆ  ಕನ್ನಡದಲ್ಲಿ ಅಭಿನಯಿಸಲು ನಾಟಕಗಳೇ ಇಲ್ಲವೆನಿಸಿದಾಗ, ಶಾಸ್ತ್ರಿಗಳಿಗೆ ಕೆಲವು ನಾಟಕಗಳನ್ನು ಭಾಷಾಂತರಿಸಿ ಕೊಡಲು ವಿನಂತಿಸಿಕೊಂಡರು.  ಆಗ ಶಾಸ್ತ್ರಿಗಳು ರತ್ನಾವಳಿ ವಿಕ್ರಮೋರ್ವಶೀಯ, ಉತ್ತರರಾಮಚರಿತ ಮತ್ತು ಚಂಡಕೌಶಿಕ ಮುಂತಾದ ನಾಟಕಗಳನ್ನು ಸಂಸ್ಕೃತದಿಂದಲೂ, ಇಂಗ್ಲಿಷ್ ಭಾಷಾ ಜ್ಞಾನ ಇಲ್ಲದಿದ್ದರೂ ಶೇಕ್ಸ್ ಪಿಯರ್ ಬರೆದಿರುವ ಓಥೆಲೊ ನಾಟಕವನ್ನು ಸಿ.ಸುಬ್ಬರಾವ್ ಎಂಬುವರಿಂದ ಓದಿಸಿ ತಿಳಿದುಕೊಂಡು ಅದನ್ನು ಶೂರಸೇನ ಚರಿತ್ರೆ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿದ ನಂತರ ಈ ಎಲ್ಲಾ ನಾಟಕಗಳು  ರಂಗದ ಮೇಲೆ ಪ್ರದರ್ಶನಗೊಂಡು ಅಪಾರ ಜನರ ಮನ್ನಣೆ ಗಳಿಸಿತು. ಹೀಗೆ ಶಾಸ್ತ್ರಿಗಳು  ಕನ್ನಡ ರಂಗಭೂಮಿಗೂ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದರು.

ಶಾಕುಂತಲ, ವಿಕ್ರಮೋರ್ವಶೀಯ, ಭವಭೂತಿಯ ಉತ್ತರ ರಾಮಚರಿತೆ, ಮಾಲತೀ ಮಾಧವ, ಶ್ರೀ ಹರ್ಷನ ರತ್ನಾವಳಿ ಮುಂತಾದ  ಸಂಸ್ಕ್ರತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಲ್ಲದೇ, ಶಿವಾಷ್ಟಕಮ್, ತ್ರಿಷಷ್ಠಿ ಪುರಾತನಸ್ತವ, ಶಾರದಾ ದಂಡಕಮ್, ಬಿಲ್ವವೃಕ್ಷ, ಪೂಜಾವಿಧಿ, ಆರ್ಯ ಶತಕಮ್, ಶಿವಭಕ್ತಿ ಸುಧಾತರಂಗಿಣಿ, ಮುಂತಾದ ಕೃತಿಗಳನ್ನು ಸಂಸ್ಕೃತದಲ್ಲೂ  ದಮಯಂತಿ ಸ್ವಯಂವರ, ನೀತಿಸಾರ ಸಂಗ್ರಹ, ಕೃಷ್ಣರಾಜಾಭ್ಯುದಯ, ಸಾವಿತ್ರೀ ಚರಿತ್ರೆ ಮುಂತಾದ  ಕೃತಿಗಳನ್ನು ಕನ್ನಡದಲ್ಲಿ  ಸ್ವತಂತ್ರವಾಗಿ ರಚಿಸಿದ್ದಾರೆ.

ಕ್ಷೇಮೇಂದ್ರನ ಚಂಡ ಕೌಶಿಕ ನಾಟಕವನ್ನು ಭಾಷಾಂತರ ಮಾಡುತ್ತಿದ್ದ ಸಮಯದಲ್ಲೇ ವಾಯುವಿಹಾರಾರ್ಥವಾಗಿ ಕುದುರೆ ಗಾಡಿಯಲ್ಲಿ ಕುಳಿತು ಹೋಗುತ್ತಿರುವಾಗ 1891ರ ಫೆಬ್ರವರಿ ತಿಂಗಳಲ್ಲಿ ತಮ್ಮ48ನೇ ವಯಸ್ಸಿನಲ್ಲಿಯೇ ಅಪಘಾತಕ್ಕೊಳಗಾಗಿ ನಿಧನರಾದ ಕಾರಣ, ಅಪೂರ್ಣವಾಗಿದ್ದ ಆ ಕೃತಿಯನ್ನು ದೇವಶಿಖಾಮಣಿ ಅಳಸಿಂಗಾಚಾರ್ಯರು ಪೂರ್ಣಗೊಳಿಸಿದರು.

ಹೊಸಗನ್ನಡ ಕಾಲದ ನವೋದಯ ಕಾಲದಲ್ಲಿ ಬಸವಪ್ಪಶಾಸ್ತ್ರಿಗಳು ದೊರೆ ಮತ್ತು ಮಂತ್ರಿಗಳಿಂದ ಪ್ರೋತ್ಸಾಹದಿಂದ ಅನುವಾದಿಸಿದ ಅನೇಕ ಕೃತಿಗಳು ಅತ್ಯಂತ ಶ್ರೇಷ್ಠವಾದ ಅನುವಾದ ಕೃತಿ ಎಂದು ಹೆಸರು ಪಡೆದಿದ್ದಲ್ಲದೇ, ಶಾಸ್ತ್ರಿಗಳ ಪದ ಸಂಯೋಜನೆ ಸಹೃದಯರ ಮನ ಮಟ್ಟುವಂತಿದ್ದು, ಈ ನಾಟಕದಲ್ಲಿ ಅವರು ಬಳಸಿರುವ ಕಂದಪದ್ಯಗಳು ನಾಟಕಕ್ಕೆ ಒಂದು ವಿಶಿಷ್ಟ ಮೆರುಗನ್ನು ತಂದು ಕೊಟ್ಟಿತ್ತು ಎಂದರೂ ತಪ್ಪಾಗದು . ಬಸವಪ್ಪಶಾಸ್ತ್ರಿಗಳು ಮೂಲ ಕವಿ ಕಾಳಿದಾಸನಿಗಿಂತ ಬಿನ್ನವಾಗಿ ತಮ್ಮ ನಾಟಕಗಳಲ್ಲಿ  ಕೆಲವು ವಿಶಿಷ್ಟ ಪ್ರಯೋಗಗಳನ್ನು ಮಾಡಿ, ನಾಟಕದ ಆರಂಭದಲ್ಲಿ ಸೂತ್ರಧಾರನನ್ನು ತಂದಿದ್ದು ಅಂದಿನ ಕಾಲದ ವೀಕ್ಷಕರ ಮನವನ್ನು ಸೂರೆಗೊಂಡಿತ್ತು.

Shastri4ಮೈಸೂರು ಸಂಸ್ಥಾನದ ಶ್ರೇಷ್ಠ ವಿದ್ವಾಂಸರಾಗಿದ್ದ ಶ್ರೀ ಬಸವಪ್ಪ ಶಾಸ್ತ್ರಿಗಳ ಸ್ಮಾರಕ (ಸಮಾದಿ) ಎಲ್ಲರ ನಿರ್ಲಕ್ಷಕ್ಕೊಳಗಾದ ಸುದ್ದಿಯನ್ನು ತಿಳಿದ ಯುವಬ್ರಿಗೇಡ್ ಸದಸ್ಯರ ಶ್ರಮದಾನದಿಂದಾಗಿ ಜೀರ್ಣೋದ್ಧಾರವಾಗಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ಶಾಸ್ತ್ರಿಗಳು ಸರಸ ಕವಿತೆಗಳು, ಹತ್ತಾರು ಅನುವಾದ ಕೃತಿಗಳಲ್ಲದೇ, ತಮ್ಮದೇ ಸ್ವಂತ ಕೃತಿಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ ಪುಣ್ಯಪುರುಷರಾಗಿರುವ ಕಾರಣದಿಂದಲೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎನಿಸಿಕೊಳ್ಳುತ್ತಾರೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s