ಯೋಗಾಚಾರ್ಯ ಶ್ರೀ ಬಿ.ಕೆ.ಎಸ್.ಐಯ್ಯಂಗಾರ್

bks3ಕೆಲ ದಿನಗಳ ಹಿಂದೆ ಯೋಗಶಾಲೆಯೊಂದರ ಜಾಹೀರಾತಿನ ಕರಪತ್ರದಲ್ಲಿ ಅಯ್ಯಂಗಾರ್ ಯೋಗಪದ್ದತಿಯಲ್ಲಿ ಹೇಳಿಕೊಡಲಾಗುತ್ತದೆ ಎಂಬುದನ್ನು ಓದಿದ ಗೆಳೆಯನೊಬ್ಬ, ಥೂ!! ಯೋಗದಲ್ಲೂ ಜಾತಿಯೇ? ಯೋಗದಲ್ಲೂ ಬ್ರಾಹ್ಮಣ್ಯತ್ವವೇ? ಎಂದು ಅಸಂಬದ್ಧವಾಗಿ ಹೇಳಿದಾಗ, ಆತನಿಗೆ ವಿಶ್ವದ ಅಗ್ರಗಣ್ಯ ಯೋಗ ಗುರುಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ, ಯೋಗದ ಕುರಿತಾಗಿ ಅನೇಕ ಪುಸ್ತಕಗಳ ಲೇಖಕರಾಗಿದ್ದ ಶ್ರೀ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಎಲ್ಲರ ಪ್ರೀತಿಯ ಬಿ.ಕೆ.ಎಸ್. ಐಯ್ಯಂಗಾರ್ ಅವರ ಕುರಿತಾಗಿ ಮಾಹಿತಿಯನ್ನು ಕೊಟ್ಟು ಮನೆಯಲ್ಲೇ ಇರಬಹುದಾದಂತಹ ಸಣ್ಣ ಪುಟ್ಟ ಪರಿಕರಗಳನ್ನು ಉಪಯೋಗಿಸಿಕೊಂಡು ಅತ್ಯಂತ ಪರಿಣಾಮಕಾರಿಯಾಗಿ ಕಠಿಣಾತೀತ ಯೋಗಗಳನ್ನೂ ಹೇಗೆ ಮಾಡಬಹುದು ಎಂಬ ಯೋಗದ ಶೈಲಿಯನ್ನು ಕಂಡು ಹಿಡಿದ ಕಾರಣ, ಅದಕ್ಕೆ ಅಯ್ಯಂಗಾರ್ ಯೋಗ ಎಂದು ಕರೆಯಲಾಗುತ್ತದೆ ಎಂದು ತಿಳಿಸುವುದರೊಳಗೆ ಸಾಕು ಸಾಕಾಗಿತ್ತು. ಹಾಗಾಗಿ ಇಂದಿನ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ವಿಶ್ವ ಕಂಡ ಅತ್ಯಂತ ಶ್ರೇಷ್ಠ ಮತ್ತು ಪರಿಣಾಮಕಾರಿ ಯೋಗ ಗುರು ಶ್ರೀ ಬಿ.ಕೆ.ಎಸ್. ಐಯ್ಯಂಗಾರ್ ಅವರ ಬಗ್ಗೆ ತಿಳಿಯೋಣ.

ಬೆಳ್ಳೂರು ಮೂಲದ ಆದರೆ ಮೈಸೂರಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಕೃಷ್ಣಮಾಚಾರ್ ಮತ್ತು ಶೇಷಮ್ಮ ದಂಪತಿಗಳಿಗೆ ಡಿಸೆಂಬರ್ 14, 1918ರಂದು ಮೈಸೂರಿನಲ್ಲಿ ಜನಿಸಿದ ಮಗುವಿಗೆ ಸುಂದರರಾಜ ಐಯ್ಯಂಗಾರ್ ಎಂದು ಹೆಸರಿಟ್ಟರು. ಶಾಲಾ ಕಾಲೇಜುಗಳಲ್ಲಿ ಅಧಿಕೃತವಾಗಿ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್ ಎಂಬುದಾಗಿದ್ದರೆ, ಎಲ್ಲರಿಗೂ ಸಿಕ್ಕದಾಗಿ ಬಿ.ಕೆ.ಎಸ್ ಅಯ್ಯಂಗಾರ್ ಎಂದೇ ಪ್ರಸಿದ್ಧಿಯಾಗಿದ್ದರು. ಸುಂದರರಾಜರಿಗೆ ಕೇವಲ 9ವರ್ಷ ವಯಸ್ಸಿದ್ದಾಗಲೇ ಅವರ ತಂದೆಯ ಮರಣ ಹೊಂದಿದಾಗ ಅಯ್ಯಂಗಾರ್ ಅವರ ಆರೋಗ್ಯ ಏನೂ ಚೆನ್ನಾಗಿರಲಿಲ್ಲ. ಇನ್ಫ್ಲೂಯೆಂಝಾ ಮತ್ತು ಟಿ.ಬಿ ರೋಗದಿಂದ ಬಳಲುತ್ತಿದ್ದರು. ಇನ್ನು ಮನೆಯಲ್ಲೂ ಕಿತ್ತು ತಿನ್ನುವ ಬಡತನವಿದ್ದ ಕಾರಣ, ಸರಿಯಾದ ಆಹಾರ ಸಿಗದ ಕಾರಣ ಅಪೌಷ್ಟಿಕತೆಯಿಂದ ನರಳುತ್ತಿದ್ದರು. ತಮ್ಮ ಆಹಾರದ ಕೊರತೆ ಸದಾ ಕಾಡುತ್ತಿತ್ತು. ತಮ್ಮ 15ನೇ ವಯಸ್ಸಿನಲ್ಲಿ ಮರಳಿ ಮೈಸೂರಿಗೆ ತಮ್ಮ ಯೋಗ ಗುರುಗಳಾದ ಶ್ರೀ ತಿರುಮಲೈ ಕೃಷ್ಣಮಾಚಾರ್ ಅವರ ಬಳಿ ಆಶ್ರಯ ಕೋರಿ ಬಂದದ್ದಲ್ಲದೇ ಅವರ ಮನೆಯಲ್ಲೇ ಸುಮಾರು ಎರಡು ವರ್ಷಗಳ ಕಾಲ ಇದ್ದು ಅವರ ಮಾರ್ಗದರ್ಶನದಲ್ಲೇ ಯೋಗಾಭ್ಯಾಸ ಮಾಡಿದರು. ಹೀಗೆ ಕಠಿಣ ಯೋಗ ತರಭೇತಿಯಿಂದ ಮತ್ತು ಒಳ್ಳೆಯ ಊಟದಿಂದ ಅವರ ಅರೋಗ್ಯದ ಸಮಸ್ಯೆ ಬಗೆ ಹರಿದಿತ್ತು.

ಹೀಗೆ ಧೃತಿಗೆಡದೆ ತಮ್ಮ ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನಗಳಿಂದ, ಕಟ್ಟುನಿಟ್ಟಾಗಿ ಯೋಗಾಭ್ಯಾಸವನ್ನು ಅಭ್ಯಾಸ ಮಾಡಿದ ಕಾರಣ ತಮ್ಮ ಬಾಲ್ಯದ ಅನಾರೋಗ್ಯವೆಲ್ಲರೂ ಮಾಯವಾಗಿ ಭೀಮ ಕಾಯರಾದದ ಕಾರಣ, ಅದೇ ಯೋಗಭ್ಯಾಸವನ್ನು ಜಗತ್ತಿನ ಲಕ್ಷಾಂತರ ಜನರ ಜೀವನವನ್ನು ಸದೃಢಗೊಳಿಸುವ ಸಲುವಾಗಿ ಅತ್ಯಂತ ವಿಧಿವತ್ತಾಗಿ ಮತ್ತು ವೈಜ್ಞಾನಿಕವಾಗಿ ಎಲ್ಲರಿಗೂ ಹೇಳಿಕೊಡುವ ನಿರ್ಧಾರಕ್ಕೆ ಬಂದಿದ್ದಲ್ಲದೇ ತಮ್ಮ ಜೀವನವನ್ನೇ ಯೋಗದ ಪ್ರಚಾರಕ್ಕಾಗಿ ಮೀಸಲಿಟ್ಟರು.

bks41937ರಲ್ಲಿ ಯೋಗ ತರಭೇತಿಗೆಂದು ಮಹಾರಾಷ್ಟ್ರದ ಪೂನಾಗೆ ಬಂದ ಐಯ್ಯಂಗಾರರು, 1943ರಲ್ಲಿ ರಮಾಮಣಿಯವರನ್ನು ವರಿಸಿದರು. ಅವರಿಬ್ಬರ ಸುಂದರ ದಾಂಪತ್ಯ ಕುರುಹಾಗಿ ಅವರಿಗೆ 5 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನು ಜನಿಸುತ್ತಾರೆ. 1950ರಲ್ಲೇ ಅವರು ವಿದೇಶಕ್ಕೆ ಹೋಗಿ ಅಲ್ಲಿನ ಜನರಿಗೆ ಯೋಗದ ಪ್ರಭಾವವನ್ನು ತಿಳಿಸಿಕೊಟ್ಟು ಯೋಗದ ಪ್ರಭಾವವನ್ನು ವಿದೇಶದಲ್ಲೂ ಸಾರಿದ ಪ್ರಥಮರೆಂದು ಎಂಬ ಕೀರ್ತಿಗೆ ಭಾಜನರಾಗುತ್ತಾರೆ. 1952 ರಲ್ಲಿ ವಿಶ್ವದ ಪ್ರಖ್ಯಾತ ಪಿಟೀಲ್ ವಾದಕರಾಗಿದ್ದ ಶ್ರೀ ಯೆಹೂದಿ ಮೆನುಹಿನ್ ಅವರಿಗೆ ಯೋಗವನ್ನು ಐಯ್ಯಂಗಾರರು ಕಲಿಸಿಕೊಡುತ್ತಾರೆ. ಅಯ್ಯಂಗಾರ್ ಅವರ ಯೋಗದಿಂದ ಫಲಾನುಭವಿಗಳಾದ ಮೆನುಹಿನ್ ಅವರು ಐಯ್ಯಂಗಾರ್ ಅವರನ್ನು ಲಂಡನ್, ಪ್ಯಾರಿಸ್, ಸ್ವಿಟ್ಜರ್ ಲ್ಯಾಂಡ್ ಮುಂತಾದ ವಿದೇಶಗಳಿಗೆ ಪರಿಚಯಿಸಿ ಆ ದೇಶದ ಜನರಿಗೆ ಯೋಗದ ಉಪಯೋಗಗಳನ್ನು ತಿಳಿಸಿಕೊಡುತ್ತಾರೆ. ಇದೇ ಗೆಳೆತನಂದಿದಾಗಿಯೇ 1965ರಲ್ಲಿ ಅಯ್ಯಂಗಾರ್ ಅವರು ಬರೆದ ಚೊಚ್ಚಲು ಕೃತಿ ಲೈಟ್ ಆನ್ ಯೋಗ ಪುಸ್ತಕಕ್ಕೆ ಮೆನುಹಿನ್ ಅವರೇ ಮುನ್ನುಡಿಯನ್ನು ಬರೆದುಕೊಡುತ್ತಾರೆ.

bks1ಹೀಗೆ ವಿದೇಶಕ್ಕೆ ಹೋದ ಐಯ್ಯಂಗಾರರು ಅಲ್ಲಿಂದ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಹೀಗೆ ಪ್ರಾರಂಭವಾದ ಅವರ ವಿದೇಶ ಪ್ರವಾಸ ಮತ್ತು ಮತ್ತು ಯಶಸ್ಸು ನಿರಂತರವಾಗಿ ಬೆಳೆಯುತ್ತಲೇ ಹೋಯಿತು. 1956ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಜನರಿಗೆ ಯೋಗ ಮತ್ತು ಧ್ಯಾನದ ಉಪಯುಕ್ತತೆ ಕುರಿತಾಗಿ ನೀಡಿದ ಪ್ರವಚನಗಳು ಮತ್ತು ಯೋಗ ಪ್ರದರ್ಶನ ಬಲು ಬೇಗನೆ ಅಮೇರಿಕನ್ನರ ಮನಸ್ಸಿಗೆ ತಟ್ಟಿದ ಕಾರಣ, ಅಲ್ಲಿನ ಜನರ ಮನಸ್ಸನ್ನು ಗೆಲ್ಲುತ್ತಾರೆ. ಯೋಗದ ಬಗ್ಗೆ ಐಯ್ಯಂಗಾರರಿಗೆ ಇದ್ದ ಜ್ಞಾನ, ತಿಳುವಳಿಕೆ, ಉತ್ಕಟ ಆಸಕ್ತಿ ಮತ್ತು ಕಠಿಣ ಪರಿಶ್ರಮದಿಂದಾಗಿ ಅವರು ಎಲ್ಲಿಗೇ ಹೋದರು ಜನರು ಅವರನ್ನು ಮುತ್ತ ತೊಡಗಿದರು. ಹಠ ಯೋಗವನ್ನು ನಿಯಮಿತವಾಗಿ ಕಲಿಸುತ್ತಿದ್ದ ಅಯ್ಯಂಗಾರ ಅವರ ತರಗತಿಯಲ್ಲಿ ಯೋಗದ ಹಲವಾರು ಭಂಗಿಗಳು, ನಿಯಂತ್ರಿತ ಉಸಿರಾಟ ಮತ್ತು ಮನಸ್ಸು, ದೇಹ ಮತ್ತು ಚೈತನ್ಯವನ್ನು ವಿಶ್ರಾಂತಿ ಮಾಡಲು ಮತ್ತು ಅಭಿವೃದ್ಧಿಪಡಿಸಲು ವಿನ್ಯಾಸಗೊಳಿಸಲಾದ ಧ್ಯಾನ ಮುಂತಾದವುಗಳನ್ನು ಕಲಿಸಿಕೊಡಲಾಗುತ್ತಿತ್ತು. ತಮ್ಮ ತರಗತಿಗಳ ಸಮಯದಲ್ಲಿ ನಿರಂತರವಾಗಿ ಯೋಗದ ಕುರಿತಾಗಿ ಮಾತನಾಡುತ್ತಿದ್ದದ್ದಲ್ಲದೇ, ವಿದ್ಯಾರ್ಥಿಗಳ ಮೈಕಟ್ಟುಗಳಿಗೆ ಅನುಗುಣವಾಗಿ ಸೂಕ್ಷ್ಮತೆಯಿಂದ ವೈಯಕ್ತಿಕ ವಿಧಾನವನ್ನು ಬಳಸುತ್ತಿದ್ದ ಕಾರಣ ಯೋಗದ ಹೆಚ್ಚಿನ ಫಲ ದೊರೆಯುತ್ತಿತ್ತು. ಯೋಗವನ್ನು ಕಲಿಯಲು ಹಿಂಜರಿಯುವ ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯರಿಗೆಂದೇ, ಮನೆಯಲ್ಲೇ ಇರುವಂತಹ ಅವರು ಹಗ್ಗ, ಬ್ಲಾಕ್‌ಗಳು, ಕುರ್ಚಿಗಳು ಮತ್ತು ಕಂಬಳಿಗಳು ಮುಂತಾದ ವಿವಿಧ ರಂಗಪರಿಕರಗಳನ್ನು ಬಳಸಿಕೊಂಡು ಅತ್ಯಂತ ಸುಲಭವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಹೇಗೆ ಯೋಗವನ್ನು ಮಾಡಬಹುದು ಎಂಬುದನ್ನು ಐಯ್ಯಂಗಾರ್ ಅವರು ತೋರಿಸುತ್ತಿದ್ದದ್ದೇ ಮುಂದೆ ಅಯ್ಯಂಗಾರ್ ಯೋಗ ಎಂದು ಪ್ರಸಿದ್ಧಿ ಪಡೆಯಿತು

bks8ಈ ರೀತಿಯ ಹೊಸ-ಹೊಸ ಯೋಗ ಶಿಕ್ಷಣದ ಶಿಬಿರ ಮತ್ತು ಶಾಲೆಗಳನ್ನು ತೆರೆಯಲು ವಿವಿಧ ಕಡೆಗಳಿಮ್ದ ಜನರು ಒತ್ತಾಯ ಮಾಡ ತೊಡಗಿದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎಂದು ಯೋ‍ಚಿಸುತ್ತಿರುವಾಗಲೇ, ಅವರ ಮಡದಿ ರಮಾಮಣಿಯವರು ಸಣ್ಣ ವಯಸ್ಸಿನಲ್ಲೇ ಅಕಾಲಿಕವಾಗಿ ಮರಣಹೊಂದಿದಾಗ, ಅವರ ಸವಿನೆನಪಿಲ್ಲಿಯೇ 1975ರಲ್ಲಿ ರಮಾಮಣಿ ಅಯ್ಯಂಗಾರ್ ಯೋಗ ಇನ್ಸ್ಟಿಟ್ಯೂಟ್ (RIMYI) ಅನ್ನು ಪುಣೆಯಲ್ಲಿ ಸ್ಥಾಪಿಸಿ, ಆ ಸಂಸ್ಥೆಯ ಮೂಲಕ ಸಾವಿರಾರು ಯೋಗಪಟುಗಳನ್ನು ತಯಾರು ಮಾಡಿದ ಕಾರಣ, 1984ರ ನಂತರ ಅವರು ಸಾರ್ವಜನಿಕವಾಗಿ ಯೋಗಪ್ರದರ್ಶನ ಮಾಡಿತೋರಿಸುವುದನ್ನು ನಿಲ್ಲಿಸೆ ಕೇವಲ ಪ್ರವವಚನವನ್ನು ಮಾಡಿದರೆ, ಅದರ ಪ್ರಾತ್ಯಕ್ಷತೆಯನ್ನು ಅವರ ಶಿಷ್ಯಂದಿರು ಮಾಡಿ ತೋರಿಸುತ್ತಿದ್ದರು.

bks7ನೋಡ ನೋಡುತ್ತಿದ್ದಂತೆಯೇ ಕೆಲವೇ ಕಲವು ವರ್ಷಗಳಲ್ಲಿಯೇ ಜಗತ್ತಿನ 40ಕ್ಕೂ ಹೆಚ್ಚಿನ ದೇಶಗಳಲ್ಲಿ 180ಕ್ಕೂ ಅಧಿಕ ತಮ್ಮ ಯೋಗಕೇಂದ್ರಗಳನ್ನು ಸ್ಥಾಪಿಸಿ. ಅದರ ಮೂಲಕ ಸಾವಿರಾರು ನುರಿತ ಯೋಗ-ಶಿಕ್ಷಕರು ಮತ್ತು ಯೋಗ ಪಟುಗಳಿಗೆ ತಮ್ಮ ಯೋಗವಿದ್ಯೆಯನ್ನು ದಾನಮಾಡಿ ಅವರುಗಳು ಮುಂದೆ ಅದೇ ಯೋಗ ವಿದ್ಯೆಯ ಮಹತ್ವವನ್ನು ಪ್ರಚಾರ ಮಾಡತೊಡಗಿದರು.

bks61965ರಲ್ಲಿ ಐಯ್ಯಂಗಾರ ಪ್ರಥಮ ಪುಸ್ತಕ Light on Yoga 17 ಭಾಷೆಗಳಿಗೆ ಭಾಷಾಂತರಗೊಂಡು ಸುಮಾರು 10 ಲಕ್ಷಕ್ಕೂ ಹೆಚ್ಚಿನ ಪ್ರತಿಗಳು ಪ್ರತಿಗಳು ಮಾರಾಟವಾಗಿ ಧಾಖಲೆಯನ್ನು ನಿರ್ಮಿಸಿತು. 2004 Light on Life ಎಂಬ ಹೆಸರಿನಲ್ಲೇ ಪ್ರಕಟಗೊಂಡ ಪುಸ್ತಕದಲ್ಲಿ ಅವರ ಸಮಗ್ರ ವ್ಯಕ್ತಿತ್ವ, ಸಾಧನೆಗಳ ದಾಖಲೆಗಳನ್ನೊಳಗೊಂಡ ವಿಶೇಷ ಕೃತಿಯಾಗಿದೆ. ಈ ಪುಸ್ತಕದ ಅವಲೋಕನ ನಡೆಸಿದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅಯ್ಯಂಗಾರ್ ಅವರ ಬಗ್ಗೆ ಬರೆಯುತ್ತಾ ಯೋಗವನ್ನು ಅತಿ ಗಹನವಾಗಿ ಅಭ್ಯಸಿಸಿ, ಅತ್ಯಂತ ಸಮರ್ಥವಾಗಿ ಬರೆದು ಪ್ರಚುರಪಡಿಸಿದ ಜೀವಂತ ವ್ಯಕ್ತಿಗಳಲ್ಲೊಬ್ಬರು ಎಂದು ವರ್ಣಿಸಿತು. ಹಾಗೆಯೇ ಲೇಖನದ ಮುಂದು ವರೆದ ಭಾಗದಲ್ಲಿ ಪ್ರಪಂಚದ ಅತಿ ಹೆಚ್ಚು ಜನರ ಮೇಲೆ ಪ್ರಭಾವ ಬೀರಿದ 100 ಪ್ರತಿಭಾನ್ವಿತ ವ್ಯಕ್ತಿಗಳಲ್ಲೊಬ್ಬರೆಂದು ಶ್ಲಾಘಿಸಿರುವುದು ಗಮನಾರ್ಹವಾಗಿದೆ. ಹೀಗೆ ಯೋಗ ಮತ್ತು ಪ್ರಾಣಾಯಾಮಗಳ ಕುರಿತಂತೆ ಸುಮಾರು 15 ಪುಸ್ತಕಗಳನ್ನು ಆಂಗ್ಲ ಭಾಷೆಯಲ್ಲಿ ಅಯ್ಯಂಗಾರರು ಬರೆದಿರುವುದಲ್ಲದೇ, ಯೋಗದ ಕುರಿತಾಗಿ ಮರಾಠಿ ಮತ್ತು ಕನ್ನಡಕ್ಕೂದಲ್ಲೂ ಯೋಗದ ಕುರಿತಾಗಿ ಕೆಲವು ಕೈಪಿಡಿಗಳನ್ನು ರಚಿಸಿದ್ದಾರೆ.
patanjali_temole
ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ಸಮಾಜದಲ್ಲಿ ಕಲಿತದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು ಎಂಬ ತತ್ವವನ್ನು ಬಲವಾಗಿ ನಂಬಿದ್ದ ಐಯ್ಯಂಗಾರರು, 2004ರಲ್ಲಿ ತಮ್ಮ ಊರಾದ ಬೆಳ್ಳೂರಿನಲ್ಲಿ ಪತಂಜಲಿ ಮಹರ್ಷಿಗಳ ದೇವಸ್ಥಾನವನ್ನು ಕಟ್ಟಿಸಿಸುವ ಮೂಲಕ ಇಡೀ ವಿಶ್ವದಲ್ಲೇ ಪತಂಜಲಿ ಮಹರ್ಷಿಗಳ ಪ್ರಪ್ರಥಮ ದೇವಾಲಯ ಎಂಬ ಹೆಗ್ಗಳಿಕೆಗೆ ಕಾರಣೀಭೂತರಾದರು. ಆಯ್ಯಂಗಾರರ ಯೊಗ ಶಿಕ್ಷಣದ ಪ್ರಭಾವಕ್ಕೆ ಒಳಗಾದವರಲ್ಲಿ, ಮಹಾ ದಾರ್ಶನಿಕ ಶ್ರೀ ಜಿಡ್ಡು ಕೃಷ್ಣಮೂರ್ತಿ, ಆಲ್ಡುಅಸ್ ಹಕ್ಸಲೀ , ಮೆನುಹಿನ್ ಮುಂತಾದ ಅನೇಕರಿದ್ದಾರೆ. ಅವರಲ್ಲಿ ಕೆಲವರು ಅಯ್ಯಂಗಾರರನ್ನು ‘Michelangelo of Yoga,’ ಎಂದು ಬಣ್ಣಿಸಿದರೆ, ಮತ್ತೆ ಹಲವರು King of Yoga ಎಂದು ಕರೆದಿರುವುದು ಅಯ್ಯಂಗಾರ್ ಅವರ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತವೆ.

ಯೋಗದಲ್ಲಿ ಅಯ್ಯಂಗಾರರು ಮಾಡಿದ ಅಸಾಧಾರಣ ಸಾಧನೆಗಳನ್ನು ಗುರುತಿಸಿ ಕೇಂದ್ರ ಸರ್ಕಾರವೂ ಮೂರು ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

  • 1991 ರಲ್ಲಿ ಪದ್ಮಶ್ರೀ
  • 2002 ರಲ್ಲಿ ಪದ್ಮ ಭೂಷಣ
  • 2014 ರಲ್ಲಿ ಪದ್ಮ ವಿಭೂಷಣ ಅಲ್ಲದೇ ನೂರಾರು ಸಂಘಸಂಸ್ಥೆಗಳು ಅಯ್ಯಂಗಾರ್ ಅವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಅನಾಯಾಸೇನ ಮರಣಂ ವಿನಾದೈನೇನ ಜೀವನಂ ಎಂಬ ಸುಭಾಷಿತದಂತೆ, ಐಯ್ಯಂಗಾರರು ಸದಾಕಾಲವೂ ಜನರಿಗೆ ಸಂತೋಷದಿಂದ ಬದುಕ ಬೇಕು ಮತ್ತು ಭವ್ಯವಾಗಿ ನಿಧನರಾಗ ಬೇಕು ಎಂದು ಹೇಳುತ್ತಿದ್ದರು. ತಮ್ಮ 95ನೆಯ ವಯಸ್ಸಿನಲ್ಲಿ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸ್ ಚಿಕಿತ್ಸೆಗೆ ಅವರ ದೇಹ ಸ್ಪಂದಿಸದ ಕಾರಣ, 2014ರ ಆಗಸ್ಟ್ 20ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗುವ ಮೂಲಕ ದೇಶದ ಯೋಗ ನಕ್ಷತ್ರವೊಂದು ಕಳಚಿ ಬಿತ್ತು.

bks5ಅತ್ಯಂತ ಕಡು ಬಡತನದ ಅನಾರೋಗ್ಯ ಪೀಡಿತ ಹುಡುಗನಾಗಿ ಹುಟ್ಟಿ ಧೃಢಮನಸ್ಸಿನಿಂದ ಯೋಗಾಭ್ಯಾಸವನ್ನು ಕಲಿತು ಸಾಧನೆಗೈದು ಅದೇ ಪತಂಜಲಿ ಯೋಗವನ್ನು ಮತ್ತಷ್ಟು ಸರಳೀಕರಿಸಿ, ಅಯ್ಯಂಗಾರ್ ಯೋಗ ಪದ್ದತಿ ಹೆಸರಿನಲ್ಲಿ ಇಡೀ ವಿಶ್ವಾದ್ಯಂತ ಯೋಗವನ್ನು ಪಸರಿಸಿದ ನಮ್ಮ ಬಿ.ಕೆ.ಎಸ್ ಅಯ್ಯಂಗಾರರು ನಿಜಕ್ಕೂ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s