ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್

ಎಂಭತ್ತರ ದಶಕದವರೆಗೂ ಕನ್ನಡ ಚಿತ್ರರಂಗ ಎಂದರೆ ಕೇವಲ BKT ಪ್ರದೇಶಗಳಿಗಷ್ಟೇ ಸೀಮಿತವಾಗಿ ಮಿಕ್ಕೆಲ್ಲಾ ಭಾಗಗಳಲ್ಲೂ ಪರಭಾಷೆಯ ಚಿತ್ರಗಳದ್ದೇ ಆರ್ಭಟವಿದ್ದ ಕಾಲದಲ್ಲಿ ಉತ್ತಮವಾಗಿ ಚಿತ್ರವನ್ನು ತಯಾರಿಸಿದಲ್ಲಿ ಸಮಸ್ತ ಕರ್ನಾಟಕದಲ್ಲಷ್ಟೇ ಅಲ್ಲದೇ, ಹೊರ ರಾಜ್ಯಗಳಲ್ಲಿಯೂ ಯಶಸ್ವಿಯಾಗಿ ಪ್ರದರ್ಶಿಸಬಹುದು ಎಂದು ಕನ್ನಡ ಚಿತ್ರರಂಗದ ವ್ಯಾಪ್ತಿಯನ್ನು ವಿಸ್ತೀರ್ಣಗೊಳಿಸಿದವರು ಯಾರು? ಎಂಬ ಪ್ರಶ್ನೆಯನ್ನು ಯಾವುದೇ ಕನ್ನಡಿಗರನ್ನು ಕೇಳಿದರೂ, ಒಂದು ಚೂರೂ ಹಿಂದೂ ಮುಂದು ಯೋಚಿಸದೇ ಥಟ್ ಎಂದು ರವಿಚಂದ್ರನ್ ಅವರ ಹೆಸರನ್ನು ಒಕ್ಕೊರಲಿನಿಂದ ಹೇಳುತ್ತಾರೆ. ಕನ್ನಡ ಸಿನಿಮಾದಲ್ಲಿ ಅಧ್ದೂರಿತನ, ತಾಂತ್ರಿಕ ಕೌಶಲ್ಯ, ಕನ್ನಡ ಸಿನಿಮಾಗಳ ಆಡಿಯೋ ರೈಟ್ಸ್ ಮುಂತಾದವುಗಳಿಗೆ ನಿಜವಾದ ಕಾಯಕಲ್ಪ ನೀಡಿ, ಸಾವಿರಾರು ಕಲಾವಿದರುಗಳನ್ನು ಬೆಳಕಿಗೆ ತಂದ, ಹತ್ತು ಹಲವು ಮೊದಲುಗಳಿಗೆ ನಾಂದಿ ಹಾಡಿದ ಕನಸುಗಾರ, ಕ್ರೇಜಿಸ್ಟಾರ್ ವೀರಾಸ್ವಾಮಿ ರವಿಚಂದ್ರನ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರಾಗಿದ್ದಾರೆ.

ರವಿಚಂದ್ರನ್ ಅವರ ತಂದೆ ವೀರಾಸ್ವಾಮಿಯವರು ಗಾಂಧಿನಗರದಲ್ಲಿ ರೀಲ್ಸ್ ಗಳನ್ನು ಸಾಗಿಸುವ ಕೆಲಸಕ್ಕೆ ಸೇರಿಕೊಂಡು ನಂತರ ಪ್ರದರ್ಶಕರಾಗಿ, ನಂತರದ ದಿನಗಳಲ್ಲಿ ಹೆಸರಾಂತ ನಿರ್ಮಾಪಕರಾಗಿ ತಮ್ಮ ಈಶ್ವರೀ ಪ್ರೊಡಕ್ಷನ್ ಮೂಲಕ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಲೋಕೇಶ್ ಮುಂತಾದ ಕನ್ನಡ ಮೇರು ನಟರುಗಳ ಹತ್ತು ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದು ಅವರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಕೊಂಡಿಯ ಮೂಲಕ ತಿಳಿಯಬಹುದಾಗಿದೆ. ಇಂತಹ ವೀರಾಸ್ವಾಮಿ ಮತ್ತು ಪಟ್ಟಮ್ಮಾಳ್ ದಂಪತಿಗಳಿಗೆ ಹಿರಿಯ ಪುತ್ರನಾಗಿ 1961ರ ಮೇ 30 ರಂದು ರುಚಿ ರುಚಿಯಾದ ಹಲ್ವಾಗಳಿಗೆ ಖ್ಯಾತಿ ಪಡೆದಿರುವ ತಿರುನಲ್ವೇಲಿಯಲ್ಲಿ ಜನಿಸುತ್ತಾರೆ. ಮನೆಯ ಮಾತೃಭಾಷೆ ತಮಿಳು ಆದರೂ ರವಿಚಂದ್ರನ್ ಅವರ ಕುಟುಂಬ ಅಪ್ಪಟ ಕನ್ನಡಿಗರು ಎಂದರೂ ತಪ್ಪಾಗದು. ರವಿಚಂದ್ರನ್ ಅವರ ತಂದೆ, ತಮ್ಮ ಮತ್ತು ಅವರ ಮಕ್ಕಳು ಎಲ್ಲರೂ ಸಹಾ ಕನ್ನಡ ಚಿತ್ರರಂಗದಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವುದಲ್ಲದೇ ಕನ್ನಡ ಚಿತ್ರರಂಗದ ಅನೇಕ ದಾಖಲೆಗಳಿಗೆ ಕಾರಣೀಭೂತರಾಗಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

ravi_veeraಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡೇ ಜನಿಸಿದರು ರವಿಚಂದ್ರನ್. ಗುಂಗುರು ಕೂದಲಿನ ಮಾದಕ ಕಣ್ಗಳನ್ನು ಹೊಂದಿದ್ದ ರವಿ ಚಿಕ್ಕವಯಸ್ಸಿನಲ್ಲಿ ಅತ್ಯಂತ ಮುದ್ದು ಮುದ್ದಾಗಿದ್ದ ಕಾರಣ, ಸಹಜವಾಗಿಯೇ ಅಪ್ಪನಿಗೆ ಮುದ್ದಿನ ಮಗನಾಗಿದ್ದರು. ಇದೇ ಕಾರಣಕ್ಕಾಗಿಯೋ ಏನೋ? ರಾಜಕುಮಾರ್ ಅವರನ್ನು ಹಾಕಿಕೊಂಡು ತಮ್ಮ ಚೊಚ್ಚಲು ನಿರ್ಮಾಣದ ಧೂಮಕೇತು ಚಿತ್ರದಲ್ಲಿ ರವಿಚಂದ್ರನ್ ಅವರನ್ನು ಬಾಲನಟರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಮತ್ತೆ ತಮ್ಮ ಮುಂದಿನ ಚಿತ್ರವಾದ ಕುಲ ಗೌರವದಲ್ಲಿಯೂ ಸಹಾ ಬಾಲನಟನಾಗಿ ಬೆಳ್ಳಿ ಪರದೆಯಮೇಲೆ ಕಾಣಿಸಿಕೊಂಡಿದ್ದರು. ವೀರಾಸ್ವಾಮಿಯವರು ತಮ್ಮ ಮುದ್ದಿನ ಮಗ ಕೇಳಿದ್ದೆಲ್ಲವನ್ನೂ ಕೊಡಿಸಿದರೂ, ಹಿರಿಯರನ್ನು ಕಂಡರೆ ಗೌರವ ನೀಡುವ ಸಂಸ್ಕಾರ ಮತ್ತು ಶಿಸ್ತನ್ನು ಚನ್ನಾಗಿಯೇ ಕಲಿಸಿದರು. SSLC ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಎಂ.ಇ.ಎಸ್ ಕಾಲೇಜಿಗೆ ಸೇರಿಕೊಂಡರೂ ಓದು ಅಷ್ಟಾಗಿ ಹತ್ತದೇ ಹೋದ ಕಾರಣ, ತಮ್ಮ ತಂದೆಯವರ ಜೊತೆ ತಮ್ಮದೇ ನಿರ್ಮಾಣ ಸಂಸ್ಥೆಗೆ ಹೋಗಿ ಚಿತ್ರರಂಗದ ಕುರಿತಾದ ಚಟುವಟಿಕೆಗಳ ಅ ಆ ಇ ಈ ಕಲಿಯತೊಡಗಿದರು. ಹೊಸ ಹೊಸ ವಿಷಯಗಳ ಬಗ್ಗೆ ಬಹಳ ಕುತೂಹಲ ಮತ್ತು ಆಸಕ್ತಿ ಹೊಂದಿದ್ದ ರವಿಚಂದ್ರನ್ ಅಂದಿನ ದಿನಗಳಲ್ಲಿ ಉದಯ್ ಜಾದೂಗಾರ್ ಅವರ ಮ್ಯಾಜಿಕ್ ಕಲೆಗೆ ಮನಸೋತು ಕೆಲ ಕಾಲ ಉದಯ್ ಜಾದೂಗಾರ್ ಅವರ ಬಳಿ ಜಾದೂಕಲೆಯಲ್ಲಿ ಕಲಿತಿದ್ದ ವಿಷಯ ಬಹಳ ಜನರಿಗೆ ಗೊತ್ತಿಲ್ಲ.

ತಮ್ಮ ತಂದೆಯವರು ನಿರ್ಮಿಸುತ್ತಿದ್ದ ಚಿತ್ರಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳತೊಡಗಿದ ರವಿ, 1982ರಲ್ಲಿ ಅಂಬರೀಷ್ ಅಭಿನಯದ ಪ್ರೇಮ ಮತ್ಸರ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲೇ ಮತ್ತೆ ಅಂಬರೀಶ್ ಅವರನ್ನೇ ಹಾಕಿಕೊಂಡು ಅವರೇ ನಿರ್ಮಿಸಿದ ಖದೀಮ ಕಳ್ಳರು ಸಿನಿಮಾದಲ್ಲಿ ಖಳನಟನೆ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 1983ರಲ್ಲಿ ಅಂಬರೀಷ್ ಮತ್ತು ಅಂಬಿಕಾ ಜೋಡಿಯಾಗಿ ನಟಿಸಿದ ಚಕ್ರವ್ಯೂಹ ಚಿತ್ರದಲ್ಲೂ ನಟಿಸಿದ್ದಲ್ಲದೇ ಆ ಚಿತ್ರದ ಸಹನಿರ್ಮಾಕರಾಗಿಯೂ ತೊಡಗಿಸಿಕೊಂಡಿದ್ದರು. ಇಷ್ಟೆಲ್ಲಾ ಆಗುವ ಹೊತ್ತಿಗೆ ಅವರಿಗೆ ಕಥೆ, ಚಿತ್ರಕಥೆ, ಸಂಗೀತ, ಸಾಹಿತ್ಯದ ಜೊತೆಗೆ ನಿರ್ಮಾಣ ಮತ್ತು ನಿರ್ದೇಶನದ ಒಳಹೊರವುಗಳನ್ನು ಅಭ್ಯಾಸ ಮಾಡಿಕೊಂಡರು.

14 ಫೆಬ್ರವರಿ 1986 ಪ್ರೇಮಿಗಳ ದಿನದಂದು ತಮಿಳುನಾಡಿನ ಸಿರಿವಂತ ಕುಟುಂಬದ ಸುಮತಿಯವರನ್ನು ಮದುವೆಯಾದ ನಂತರ ಅವರೇ ಹೇಳಿಕೊಂಡಿರುವಂತೆ ಸುಮತಿಯವರು ರವಿ ಅವರ ಬಾಳಿನಲ್ಲಿ ಭಾಗ್ಯವಂತೆಯಾಗಿ ಬಂದರು. ಅವರಿಬ್ಬರ ಅನ್ಯೋನ್ಯ ದಾಂಪತ್ಯ ಜೀವನದ ಕುರುಹಾಗಿ. ಗೀತಾಂಜಲಿ ಎಂಬ ಮಗಳು, ಮನೋರಂಜನ್ ಮತ್ತು ವಿಕ್ರಮ್ ಎಂಬ ಇಬ್ಬರು ಪುತ್ರರಿದ್ದು ಮಗಳು ಮದುವೆಯಾಗಿ ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದರೆ, ಮಕ್ಕಳಿಬ್ಬರೂ ತಮ್ಮ ತಂದೆಯಂತೆಯೇ ಕನ್ನಡ ಚಿತ್ರರಂಗದಲ್ಲಿಯೇ ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಾ, ಸ್ವತಂತ್ರವಾಗಿ ತಮ್ಮ ಸಿನಿಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸಹೋದರ ಬಾಲಾಜಿ ಸಹಾ ಒಂದೆರಡು ಸಿನಿಮಾದಲ್ಲಿ ನಟಿಸಿದರೂ ನಂತರದ ದಿನಗಳಲ್ಲಿ ತಮ್ಮ ಈಶ್ವರೀ ಪ್ರೊಡಕ್ಷನ್ ಸಂಸ್ಥೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಒಂದು ಕಡೆ ಬಾಳ ಸಂಗಾಗಿಯಾಗಿ ಸುಮತಿಯವರು ರವಿಚಂದ್ರನ್ ಅವರ ಜೀವನದಲ್ಲಿ ಬಂದರೇ ಅದೇ ಸಮಯದಲ್ಲೇ ವೃತ್ತಿ ಜೀವನದ ಸಂಗಾಗಿಯಾಗಿ ಅವರಿಗೆ ಗಂಗರಾಜು ಎಲ್ಲರ ಪ್ರೀತಿಯ ಹಂಸಲೇಖ ಅವರ ಪರಿಚಯ ಕನ್ನಡದ ಮತ್ತೊಬ್ಬ ಖ್ಯಾತ ಹಾಸ್ಯನಟ ಎನ್.ಎಸ್. ರಾವ್ ಅವರ ಮೂಲಕ ಪರಿಚಯವಾಗಿತ್ತದೆ. ಆರಂಭದಲ್ಲಿ ಈಶ್ವರೀ ಸಂಸ್ಥೆಯ ಚಿತ್ರವೊಂದಕ್ಕೆ ಸಂಭಾಷಣೆ ಬರೆಯಲು ಎನ್.ಎಸ್. ರಾವ್ ಅವರೊಂದಿಗೆ ಬಂದ ಹಂಸಲೇಖ ಅವರಿಗೆ, ಸಂಗೀತ ಮತ್ತು ಸಾಹಿತ್ಯ ಎರಡಲ್ಲೂ ಪ್ರಭುತ್ವ ಇದೆ ಎಂಬುದನ್ನು ಗುರುತಿಸಿ, 1987 ರವಿಚಂದ್ರನ್ ಮತ್ತು ಜೂಹಿ ಚಾವ್ಲಾ ಅವರ ಜೋಡಿಯಲ್ಲಿ ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯದಲ್ಲಿ ರವಿಚಂದ್ರನ್ ಅವರೇ ನಿರ್ದೇಶನ ಮತ್ತು ನಿರ್ಮಾಣ ಮಾಡಿದ ಪ್ರೇಮಲೋಕದ ಮೂಲಕ ಅದ್ದೂರಿ ಮತ್ತು ಹೊಸತನದೊಂದಿಗೆ ಹೇಗೆ ಯಶಸ್ವಿಯಾಗಬಹುದು ಎಂಬುದನ್ನು ಕನ್ನಡ ಚಿತ್ರೋದ್ಯಮಕ್ಕೆ ಪರಿಚಯಿಸಿದರು.

ಆಡು ಭಾಷೆಯ ಸಾಹಿತ್ಯ ಹೊಂದಿದ್ದ ಸುಮಾರು ಮತ್ತು ವಿಭಿನ್ನ ಶೈಲಿಯ ಸಂಗೀತದೊಂದಿಗೆ 11 ಹಾಡುಗಳು, ಆ ಹಾಡಿನಲ್ಲಿ ಅಂದಿನ ಖ್ಯಾತ ನಟರುಗಳಾದ ವಿಷ್ಣುವರ್ಧನ್, ಅಂಬರೀಷ್, ಟೈಗರ್ ಪ್ರಭಾಕರ್ ಅವರನ್ನು ಬಳಸಿಕೊಂಡು ಅಂದಿನ ಕಾಲದಲ್ಲೇ 1 ಕೋಟಿ ಬಜೆಟ್‌ನಲ್ಲಿ ತಯಾರಿಸಿದ್ದ ಸಿನಿಮಾ ಆ ಕಾಲಕ್ಕೇ ಸೂಪರ್ ಡ್ಯೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 15 ಕೋಟಿ ಗಳಿಸಿತ್ತು. ಪ್ರೇಮಲೋಕ ಆರಂಭದ ಕೆಲವು ವಾರಗಳು ಅಷ್ಟ ಕಷ್ಟೇ ಇದ್ದಾಗ, ಅದರ ಹಾಡುಗಳನ್ನು ಕನ್ನಡ ದೂರದರ್ಶನದಲ್ಲಿ ಪ್ರತೀ ಗುರುವಾರ ಪ್ರಸಾರವಾಗುತ್ತಿದ್ದ ಚಿತ್ರಮಂಜರಿ ಕಾರ್ಯಕ್ರಮದಲ್ಲಿ ಪ್ರಾಯೋಜಿತ ಗೀತೆಯಾಗಿ ಪ್ರಾಯೋಗಿವಾಗಿ ಪ್ರದರ್ಶಿಸುವ ಮೂಲಕ ಆ ಹಾಡುಗಳೆಲ್ಲವೂ ಕನ್ನಡಿಗರ ಬಾಯಿಯಲ್ಲಿ ಗುನುಗುವಂತಾಗಿದ್ದಲ್ಲೇ, ಮುಂದು ಸುಮಾರು ಒಂದು ವರ್ಷಗಳ ಕಾಲ ಕರ್ನಾಟಕಾದ್ಯಂತ ಪ್ರದರ್ಶನಗೊಂಡಿತು. ಇದೇ ಸಮಯದಲ್ಲೇ ತಮ್ಮದೇ ಈಶ್ವರೀ ಆಡಿಯೋ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕವೇ ಬಿಡುಗಡೆ ಮಾಡಿದ ಪ್ರೇಮಲೋಕ ಕ್ಯಾಸೆಟ್ ಬಿಸಿ ಬಿಸಿ ಮಸಾಲೆ ದೋಸೆಯಂತೆ ಖರ್ಚಾಗುವ ಮೂಲಕ ಕನ್ನಡ ಸಿನಿಮಾಗಳ ಆಡಿಯೋ ರೈಟ್ಸ್ ಗಳಿಗೆ ಬೆಲೆಯನ್ನು ತಂದು ಕೊಟ್ಟಿತು.

ಅದೇ ಸಮಯದಲ್ಲೇ ಹಿಂದಿಯಲ್ಲಿ ಸುಭಾಷ್ ಘಯ್ ನಿರ್ದೇಶದನ ಜಾಕಿಶ್ರಾಫ್ ಮತ್ತು ಮೀನಾಕ್ಷಿ ಅಯ್ಯರ್ ನಟಿಸಿದ್ದ ಹೀರೋ ಚಿತ್ರ ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾಗಿತ್ತು. ಆ ಸಿನಿಮಾವನ್ನು ನೋಡಿ ಮೆಚ್ಚಿಕೊಂಡ ರವಿ ಅದರ ರೀಮೇಕ್ ಹಕ್ಕನ್ನು ಖರೀದಿಸಿ ಖುಷ್ಬೂಳನ್ನು ನಾಯಕಿಯಾಗಿ ಹಾಕಿಕೊಂಡು ಮತ್ತೆ ಹಂಸಲೇಖ ಸಂಗೀತ ಸಾಹಿತ್ಯ ಮತ್ತು ತಮ್ಮದೇ ನಿರ್ದೇಶನದಲ್ಲಿ ತಯಾರಿಸಿದ ರಣಧೀರ ಸಿನಿಮಾ ರವಿಚಂದ್ರನ್ ಎಂಬ ಅಪ್ಪಟ ಕಲಾವಿದನ ಮೂಸೆಯಲ್ಲಿ ರೀಮೇಕ್ ಚಿತ್ರವೂ ಮೂಲ ಸಿನಿಮಾಕ್ಕಿಂತ ವಿಭಿನ್ನವಾಗಿ ಹೇಗೆ ಮೂಡಬಹುದು ಎಂಬುದನ್ನು ತೋರಿಸಿ ಕೊಟ್ಟಿತು. ಈ ಸಿನಿಮಾ ನೋಡಿದ ಮೂಲ ನಿರ್ದೇಶಕರೇ ರವಿಚಂದ್ರನ್ ಅವರ ನಿರ್ದೇಶನವನ್ನು ಕೊಂಡಾಡಿದ್ದರು. ಅನ್ಯಭಾಷೆಯ ಸಿನಿಮಾಗಳನ್ನು ಯಥಾವತ್ ಭಟ್ಟಿ ಇಳಿಸದೇ ಅದನ್ನು ತಮ್ಮದೇ ಶೈಲಿಯಲ್ಲಿ ಸ್ಥಳೀಯಗೊಳಿಸುವುದಲ್ಲದೇ ವಿಭಿನ್ನವಾದ ಸಂಗೀತ ಮತ್ತು ಸಾಹಿತ್ಯಗಳೊಂದಿಗೆ ಚಿತ್ರವನ್ನು ಗೆಲ್ಲಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಲ್ಲದೇ, ರೀಮೇಕ್ ಚಿತ್ರಗಳಿಗೆ ಸಡ್ಡು ಹೊಡೆಯುವಂತೆ ರವಿಮೇಕ್ ಸಿನಿಮಾಗಳಾಗಿ ಮೂಡಿಬಂದವು ಎಂದರೆ ತಪ್ಪಾಗಲಾರದು..

ಅಲ್ಲಿಂದ ಸುಮಾರು ಸುಮಾರು ಎರಡು ದಶಕಗಳ ಕಾಲ ರವಿಚಂದ್ರನ್-ಹಂಸಲೇಖ ಜೋಡಿ ಚಂದನವನದಲ್ಲಿ ಅತಿ ಯಶಸ್ವಿ ಜೋಡಿಯೆನಿಸಿ ಕೊಂಡು ಉಚ್ವ್ರಾಯದ ಪರ್ವ ಕಾಲವನ್ನು ಅನುಭವಿಸಿದರು. ಆನೆ ನಡೆದದ್ದೇ ದಾರಿ ಎಂಬಂತೆ ಇವರಿಬ್ಬರ ಜೋಡಿ ಕನ್ನಡ ಚಿತ್ರರಂಗಕ್ಕೆ ಅನುರೂಪ ಮತ್ತು ಅಪರೂಪದ ಅನರ್ಘ್ಯ ಕೊಡುಗೆಗಳನ್ನು ನೀಡಿತು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಲ್ಲದೇ, ತಮ್ಮ ಬಹುಮುಖಿ ಕೆಲಸಗಳಿಂದಾಗಿ ಕನ್ನಡ ಚಿತ್ರರಂಗದ ಶೋ ಮ್ಯಾನ್ ಎಂಬ ಕೀರ್ತಿಯನ್ನು ಪಡೆದರು.

1991ರಲ್ಲಿ ಕನ್ನಡ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ರಜನಿಕಾಂತ್, ನಾಗಾರ್ಜುನ ಜೂಹಿ ಚಾವ್ಲರಂತಹ ಹೆಸರಾಂತ ನಟ ನಟಿಯರನ್ನು ಬಳಸಿಕೊಂಡು ತಮ್ಮ ಆಸೆಯ ಶಾಂತಿ ಕ್ರಾಂತಿ ಎಂಬ ಬಹುಭಾಷಾ ಚಿತ್ರವನ್ನು ನಿರ್ಮಾಣ ಮಾಡಿದಾಗ ಹಾಡು ಮತ್ತು ಗಿಮಿಕ್ ಗಳಿಂದಲೇ ಕೂಡಿ ಕಥೆಯೇ ಇಲ್ಲದಿದ್ದ ಕಾರಣ ಸಿನಿಮಾ ಅತ್ಯಂತ ಹೀನಾಯವಾಗಿ ಸೋತಾಗ ಮೊತ್ತ ಮೊದಲಬಾರಿಗೆ ರವಿ ಚಂದ್ರನ್ ಅವರಿಗೆ ಸೋಲು ಎಂದರೆ ಹೇಗಿರುತ್ತದೆ ಎಂಬುದನ್ನು ಅರಿತುಕೊಂಡರು. ಎಷ್ಟೇ ಹಸಿವಾದರೂ ಹುಲಿ ಎಂದಿಗೂ ಹುಲ್ಲನ್ನು ತಿನ್ನಲಾರದು ಎನ್ನುವಂತೆ ಕಳೆದುಕೊಂಡ ಜಾಗದಲ್ಲೇ ವಸ್ತುವನ್ನು ಮತ್ತೆ ಮತ್ತೆ ಹುಡುಕುವ ಮೂಲಕ ಕಳೆದು ಹೋದದ್ದನ್ನು ಮರಳಿ ಪಡೆಯಬೇಕು ಎಂಬ ನಿಯಮದಂತೆ ಅದೇ ಸಮಯದಲ್ಲಿ ಪಿ. ವಾಸುವರ ಚಿನ್ನತಂಬಿ ಎಂಬ ತಮಿಳು ಚಿತ್ರದ ರಿಮೇಕ್ ರೈಟ್ಸ್ ಪಡೆದುಕೊಂಡು ಅಂದಿನ ಕಾಲದಲ್ಲಿ ಅತ್ಯಂತ ಬ್ಯುಸಿ ನಟಿ ಎಂದೇ ಖ್ಯಾತಳಾಗಿದ್ದ ಮಾಲಾಶ್ರೀಯನ್ನು ಹಾಕಿಕೊಂಡು ನಿರ್ಮಿಸಿದ ಹಳ್ಳಿಯ ಸೊಗಡಿನ ಇಂಪಾದ ಸಂಗೀತ ಮತ್ತು ಸಾಹಿತ್ಯದ ರಾಮಾಚಾರಿ ಸಿನಿಮಾ ಅಭೂತಪೂರ್ವವಾಗಿ ಯಶಸ್ವಿಯಾಗುವ ಮೂಲಕ ಬಹುತೇಕ ಶಾಂತಿ ಕ್ರಾಂತಿ ಚಿತ್ರದಲ್ಲಿ ಕಳೆದದ್ದನ್ನು ಮರಳಿ ಪಡೆದುಕೊಳ್ಳಲು ಸಹಾಯ ಮಾಡಿತು ಎಂದರೂ ತಪ್ಪಾಗದು.

ಇಷ್ಟರ ನಡುವೆ ತಮ್ಮ ನಿರ್ದೇಶನ ಮತ್ತು ನಿರ್ಮಾಣವಲ್ಲದೇ ಬೇರೆ ನಿರ್ಮಾಪಕರು ಮತ್ತು ನಿರ್ದೇಶಕರುಗಳ ಜೊತೆಯಲ್ಲಿ, ಜಗ್ಗೇಶ್, ಶಿವರಾಜಕುಮಾರ್, ರಮೇಶ್ ಮುಂತಾದ ನಾಯಕ ನಟರುಗಳ ಜೊತೆಯಲ್ಲೂ ನಟಿಸಿ ಯಶಸ್ಸನ್ನು ಕಂಡಿದ್ದಲ್ಲದೇ ತನ್ಮೂಲಕ ಗಳಿಸಿದ ಹಣವನ್ನು ಬಹಳ ಆಸೆಯಿಂದ ಏಕಾಂಗಿ ಸಿನಿಮಾಕ್ಕೆ ಹೂಡಿದರು. ರಮ್ಯಾಕೃಷ್ಣ ನಾಯಕಿಯಾಗಿದ್ದ ಕೋಟಿ ಕೋಟಿಗಟ್ಟಲೆ ಹಣ ಸುರಿದು ನಿರ್ಮಿಸಿದ್ದ ಸೆಟ್ಟುಗಳಲ್ಲಿ ಅತ್ಯಂತ ವೈಭವೋಪೇತವಾಗಿ ನಿರ್ಮಿಸಿದ್ದ ಆಚಿತ್ರ ಯಶಸ್ವಿಯಾಗದೇ ಅವರು ಬಹಳ ಕಾಲ ಅಕ್ಷರಶಃ ಏಕಾಂಗಿಯಾಗಿರಬೇಕಾಕಿತು.

ಇವೆಲ್ಲದರ ಮಧ್ಯೆ ಸಣ್ಣದಾಗಿ ಅವರ ಮತ್ತು ಹಂಸಲೇಖರವರ ನಡುವೆ ಹುಟ್ಟಿಕೊಂಡ ಅಹಂ, ನನ್ನಿಂದ ನೀನೋ? ನಿನ್ನಿಂದ ನಾನೋ? ನಾನು ಹೆಚ್ಚೋ, ನೀನು ಹೆಚ್ಚೋ ಎಂಬ ಪ್ರಶ್ನೆಯಿಂದಾಗಿ ಅವರಿಬ್ಬರ ಗೆಳೆತನದಲ್ಲಿ ಮೂಡಿದ ಬಿರುಕು ವಯಕ್ತಿಯವಾಗಿ ಆವರಿಬ್ಬರೂ ನಷ್ಟವನ್ನು ಅನುಭವಿಸಿದ್ದಲ್ಲದೇ ಕನ್ನಡ ಚಿತ್ರರಂಗಕ್ಕೂ ತುಂಬಲಾರದ ನಷ್ಟವಾಗಿದ್ದಂತೂ ಸತ್ಯ. ನಂತರದ ದಿನಗಳಲ್ಲಿ ಅವರಿಬ್ಬರೂ ವಯಕ್ತಿಕವಾಗಿ ಅನೇಕ ಸಿನಿಮಾಗಳಲ್ಲಿ ತೊಡಗಿಸಿಕೊಂಡರೂ ಅವರಿಬ್ಬರ ಜೋಡಿಯಲ್ಲಿದ್ದ ಮಾಂತ್ರಕತೆ ಮಾಯವಾಗಿ ಜನರ ಮನ್ನಣೆಯನ್ನು ಗಳಿಸಲು ವಿಫಲರಾಗಿದ್ದು ವಿಪರ್ಯಾಸ.

ಈ ಹಂಸಲೇಖರ ಜೊತೆಗಿನ ವಿರಸವನ್ನೇ ಸವಾಲಾಗಿ ಸ್ವೀಕರಿಸಿದ ರವಿಚಂದ್ರನ್ ತಮ್ಮಲ್ಲಿದ್ದ ಬಹುಮುಖ ಪ್ರತಿಭೆಯ ಅನಾವರಣಕ್ಕೆ ನಾಂದಿ ಹಾಡಿದರು. ಅದುವರೆಗೂ ನಟನೆ, ಚಿತ್ರ ನಿರ್ಮಾಣ ಮತ್ತು ನಿರ್ದೇಶನವನ್ನು ಮಾತ್ರ ಮಾಡಿದ್ದ ರವಿ, ನಂತರ ಕಥೆ, ಚಿತ್ರಕತೆ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಹೀಗೆ ಎಲ್ಲದ್ದರಲ್ಲೂ ಕೈ ಆಡಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದರು. ಅದಾಗಲೇ ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿದ್ದ ರವಿಯವರು ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಆಡು ಮುಟ್ಟದ ಸೊಪ್ಪಿಲ್ಲ ಕನ್ನಡ ಸಿನಿಮಾರಂಗದಲ್ಲಿ ರವಿಚಂದ್ರನ್ ಮಾಡದ ಕೆಲಸವಿಲ್ಲ ಎಂಬ ಹೆಗ್ಗಳಿಕೆ ಪಾತ್ರರಾದರು.

ವಯಸ್ಸಾದಂತೆಲ್ಲಾ ಬಿಟ್ಟು ಬಿಡದೇ ಕಾಡುತ್ತಿದ್ದ ಬೆನ್ನುನೋವಿನಿಂದಾಗಿ ವಿಪರೀತ ದಪ್ಪಗಾದಾಗ, ಜನರು ಅವರನ್ನು ಹೀರೋ ಆಗಿ ನೋಡಲು ಸಹಿಸದಾದಾಗ, ಕನ್ನಡ ಮತ್ತೊಬ್ಬ ಮೇರು ನಟ ಸುದೀಪ್ ಅವರ ಪ್ರೀತಿಪೂರ್ವಕ ಒತ್ತಾಯಕ್ಕೆ ಕಟ್ಟು ಬಿದ್ದು ಆವರ ಮಾಣಿಕ್ಯ ಚಿತ್ರದಲ್ಲಿ ಸುದೀಪ್ ತಂದೆಯವರ ಪಾತ್ರವನ್ನು ನಿರ್ವಹಿಸುವ ಮೂಲಕ ಮೊತ್ತ ಮೊದಲಬಾರಿಗೆ ಪೋಷಕ ನಟನಾಗಿ ಅದ್ಭುತವಾಗಿ ನಟಿಸುವ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಲ್ಲಿ ಫಿನೀಕ್ಸ್ ಪಕ್ಷಿಯಂತೆ ಮರಳಿದ ರವಿಚಂದ್ರನ್, ದೃಶ್ಯ, ಹೆಬ್ಬುಲಿ, ಚಿತ್ರಗಳ ಮೂಲಕ ಕನ್ನಡಿಗರ ಮನಸೆಳೆಯುತ್ತಿದ್ದಾರೆ. 2019ರಲ್ಲಿ ಮುನಿರತ್ನಂ ನಿರ್ಮಾಣದ ಬಹುತಾರಾಗಣದ ಕುರುಕ್ಷೇತ್ರ ಎಂಬ ಪೌರಾಣಿಕ ಚಿತ್ರದಲ್ಲಿ ಕೃಷ್ಣನ ಪಾತ್ರವನ್ನು ರವಿಚಂದ್ರನ್ ನಿರ್ವಹಿಸುವ ಮೂಲಕ ತಾನು ಎಲ್ಲ ರೀತಿಯ ಪಾತ್ರಗಳನ್ನೂ ನಿರ್ವಹಿಸಬಲ್ಲೇ ಎಂಬುದನ್ನು ಸಾಭೀತು ಮಾಡಿದರು.ಇಷ್ಟೆಲ್ಲಾ ಕೆಲಸ ಕಾರ್ಯಗಳ ಮಧ್ಯೆಯೂ ಸಮಯ ಮಾಡಿಕೊಂಡು ಕೆಲ ಕಾಲ ಖಾಸಗಿ ಎಫ್.ಎಂ. ಛಾನೆಲ್ಲಿನಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ಅನುಭವವನ್ನು ಕೇಳುಗರ ಕಷ್ಟದ ನಷ್ಟದ ಪರಿಹಾರಕ್ಕೆ ಬಳಸಿಕೊಂಡಿದ್ದಲ್ಲದೇ ಇತ್ತೀಚಿನ ಕೆಲ ವರ್ಷಗಳಲ್ಲಿ ಖಾಸಗೀ ಛಾನೆಲ್ಲಿನ ನೃತ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ದೊಡ್ಡ ದೊಡ್ಡ ಬಜೆಟ್ ಗಳ ಮೂಲಕ ದೃಶ್ಯ ಶ್ರೀಮಂತಿಕೆಯನ್ನು ತೋರಿಸಿದ್ದಲ್ಲದೆ ಕನ್ನಡ ಚಿತ್ರರಂಗಕ್ಕೆ ಹೊರ ರಾಜ್ಯಗಳಲ್ಲೂ ಬೇಡಿ ತಂದು ಕೊಟ್ಟಿದ್ದಲ್ಲದೇ ತಮ್ಮ ಸಂಸ್ಥೆಯ ಮೂಲಕ ಸಾವಿರಾರು ಕಲಾವಿದರುಗಳು ಮತ್ತು ತಂತ್ರಜ್ಞರಿಗೆ ಬೆಳಕನ್ನು ನೀಡಿದ ರವಿ ಚಂದ್ರನ್ ಅವರಿಗೆ ಬೆಂಗಳೂರು ಸಿಟಿ ಯೂನಿವರ್ಸಿಟಿಯ ಮೊದಲ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಹೊರತಾಗಿ ಮತ್ಯಾವುದೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹೇಳಿಕೊಳ್ಳುವಂತಹ ಪ್ರಶಸ್ತಿಗಳು ಬಾರದೇ ಹೋಗಿರುವುದು ನಿಜಕ್ಕೂ ಅಚ್ಚರಿ ಮತ್ತು ಬೇಸರದ ಸಂಗತಿಯಾಗಿದೆ

ಸರ್ಕಾರ ಮತ್ತು ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿ ಪುರಸ್ಕಾರಗಳು ಕಲಾವಿದರುಗಳಿಗೆ ಕ್ಷಣಿಕ ಖುಷಿಯನ್ನು ಕೊಟ್ಟರೂ, ರಾಜ್ಯದ ಆರು ಕೋಟಿ ಜನರ ಮನೆ ಮತ್ತು ಮನಗಳಲ್ಲಿ ರವಿಚಂದ್ರನ್ ಅವರಿಗೆ ಶಾಶ್ವತವಾದ ಸ್ಥಾನವನ್ನು ಗಳಿಸಿರುವುದರ ಮುಂದೆ ಈ ಪ್ರಶಸ್ತಿ ಪ್ರರಸ್ಕಾರಗಳೆಲ್ಲವು ಗೌಣ ಎನಿಸಿಕೊಳ್ಳುತ್ತದೆ. ಸಾಹಿತ್ಯ ಲೋಕದಲ್ಲಿ ಕನ್ನಡಕ್ಕೊಬ್ಬನೇ ಕೈಲಾಸಂ ಎನ್ನುವಂತೆ ಕನ್ನಡ ಚಿತ್ರರಂಗಕ್ಕೊಬ್ಬನೇ ರವಿಚಂದ್ರನ್ ಎಂದರೂ ಅತಿಶಯವಲ್ಲ. ಹಾಗೆ ನೋಡಿದರೆ ಅವರಿಬ್ಬರ ಮಾತೃಭಾಷೆ ತಮಿಳಾಗಿದ್ದರೂ, ಸಾಧನೆ ಮಾಡಿದ್ದೆಲ್ಲವೂ ಕನ್ನಡಕ್ಕಾಗಿಯೇ. ಅವರಿಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಅಜಾತಶತ್ರುಗಳೇ. ಹಾಗಾಗಿಯೇ ರವಿಚಂದ್ರನ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎನ್ನುವುದರಲ್ಲಿ ತಪ್ಪೇನಿಲ್ಲ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s