ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

lohit5

ಕನ್ನಡ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಮುಖ್ಯಮಂತ್ರಿ, ನ್ಯಾಯಾಧೀಶ, ಪೊಲೀಸ್ ಪಾತ್ರ ಅಂದ ತಕ್ಷಣ, ನಿರ್ದೇಶಕರ ಮನಸ್ಸಿನಲ್ಲಿ ಥಟ್ ಅಂತಾ ಮೂಡುತ್ತಿದ್ದದ್ದೇ, ಲೋಹಿತಾಶ್ವ ಅವರ ಹೆಸರು. ಎಂತಹ ಪಾತ್ರದಲ್ಲೂ ಅದ್ಭುತವಾದ ಅಮೋಘವಾಗಿ ನಟನೆ ಮಾಡುವಂತಹ ಶಕ್ತಿಯನ್ನು ಹೊಂದಿದ್ದ, ತಮ್ಮ ಕಂಚಿನ ಕಂಠದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದ, ಮತ್ತು ಖಳನಟನಾಗಿ ನಟಿಸಿ ಜನರಿಂದ ತೀವ್ರವಾಗಿ ಶಾಪವನ್ನು ಹಾಕಿಸಿಕೊಳ್ಳುತ್ತಿದ್ದ ಲೋಹಿತಾಶ್ವ ನಿಜ ಜೀವನದಲ್ಲಿ ದೇಶದ ಭಾವೀ ಪ್ರಜೆಗಳನ್ನು ರೂಪಿಸುವ ಗುರುತರವಾದ ಜವಾಬ್ಧಾರಿಯನ್ನು ಹೊಂದಿದ್ದ ಕಾಲೇಜಿನ ಪ್ರಾಧ್ಯಾಪಕರಾಗಿದ್ದರು ಎಂದರೆ ಅಚ್ಚರಿ ಯಾಗುತ್ತದೆ. ಅಂತಹ ಹಿರಿಯ ರಂಗಕರ್ಮಿ ಲೋಹಿತಾಶ್ವ ಅವರೇ ನಮ್ಮ ಇಂದಿನ ಕನ್ನಡ ಕಲಿಗಳು ಕಥಾ ನಾಯಕರು.

lohit2

ಹವ್ಯಾಸಿ ರಂಗಭೂಮಿಯಲ್ಲಿ ನಟನೆ ನಿರ್ದೇಶನವಲ್ಲದೇ, ದೂರದರ್ಶನದ ಧಾರವಾಹಿಗಳಲ್ಲದೇ 500ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದ ಟಿ. ಎಸ್. ಲೋಹಿತಾಶ್ವ ಅವರು 5 ಮೇ 1942ರಲ್ಲಿ ತುಮಕೂರು ಬಳಿಯ ತೋಂಡಗೇರೆ ಗ್ರಾಮದಲ್ಲಿ ಜನಸಿದರು. ತಮ್ಮ ಹುಟ್ಟೂರು ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ, ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಸಂಶೋಧನೆಯನ್ನು ಪೂರ್ಣಗೊಳಿಸಿದ ನಂತರ ಕಾಲೇಜು ಪ್ರಾಧ್ಯಾಪಕರಾದರು ನಂತರದ ದಿನಗಳಲ್ಲಿ Phd ಕೂಡಾ ಮಾಡಿದ್ದರು. ಚಿಕ್ಕ ವಯಸ್ಸಿನಿಂದಲೂ ಅವರಿಗೆ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ, ವಿದ್ಯಾರ್ಥಿ ದೆಸೆಯಿಂದಲೂ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಲ್ಲದೇ, ಓದು ಮುಗಿಸಿ ಪ್ರಧ್ಯಾಪಕ ವೃತ್ತಿಗೆ ಸೇರಿಕೊಂಡ ನಂತರವೂ ರಂಗಭೂಮಿಯ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಿ, ಪ್ರತೀ ದಿನವೂ ಕಾಲೇಜು ಪ್ರಾಧ್ಯಾಪಕ ವೃತ್ತಿ ಮುಗಿಸಿದ ನಂತರ ನೇರವಾಗಿ ಮನೆಗೆ ಹೋಗುವುದಕ್ಕಿಂತಲೂ, ನಾಟಕದ ತಾಲೀಮಿಗಾಗಿ ರಂಗಭೂಮಿಯನ್ನು ಎಡತಾಕಿದ್ದೇ ಹೆಚ್ಚು.

lohi1

ಲೋಹಿತಾಶ್ವವರು 1971ರಲ್ಲಿ ವತ್ಸಲ ಅವರೊಂದಿಗೆ ವಿವಾಹವಾಗಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಮೂವರು ಗಂಡು ಮಕ್ಕಳಿದ್ದು ಅವರಲ್ಲಿ ಹಿರಿಯ ಮಗ ಶರತ್ ಲೋಹಿತಾಶ್ವ ಆವರೂ ಸಹಾ ಸಕ್ರೀಯವಾಗಿ ರಂಗಭೂಮಿ ಮತ್ತು ಕನ್ನಡ ಚಿತ್ರರಂಗದಲ್ಲಿ ಪ್ರಮುಖ ಖಳನಟನಾಗಿರುವುದಲ್ಲದೇ ಲೋಹಿತಾಶ್ವ ಅವರಂತೆಯೇ ಕಂಚಿನ ಕಂಠವನ್ನು ಹೊಂದಿರುವುದು ವಿಶೇಷವಾಗಿದೆ. ಬರಗೂರು ರಾಮಚಂದ್ರಪ್ಪ ಅವರ ಹೊಸ ಅಲೆಯ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಲೋಹಿತಾಶ್ವ ಅವರಿಗೆ ಕನ್ನಡ ಚಿತ್ರರಂಗ ಕಂಡ ಮತ್ತೊಬ್ಬ ಶ್ರೇಷ್ಠ ನಟ ಮತ್ತು ನಿರ್ದೇಶಕರಾಗಿದ್ದ ಶಂಕರ್ ನಾಗ್ ಅವರು ತಮ್ಮ ಗೀತಾ ಚಿತ್ರದ ಮೂಲಕ ಕಮರ್ಷಿಯಲ್‌ ಸಿನಿಮಗಳಲ್ಲಿ ನಟಿಸುವಂತಾದರು. ಅಲ್ಲಿಂದ ಮುಂದೆ ಕನ್ನಡ ಚಿತ್ರರಂಗದ ಖ್ಯಾತ ನಟರುಗಳಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅವರ ಜೊತೆಯಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿವಿಧ ಪೋಷಕ ಪಾತ್ರಗಳಲ್ಲಿ ಲೋಹಿತಾಶ್ವ ಅವರು ನಟಿಸಿದ್ದರು. ಹಿರಿಯ ನಿರ್ದೇಶಕ ಬಿ ಸೋಮಶೇಖರ್ ಅವರ ಅಚ್ಚು ಮೆಚ್ಚಿನ ನಟರಾಗಿದ್ದ ಕಾರಣ ಅವರ ಬಹುತೇಕ ಸಿನಿಮಾಗಳಲ್ಲಿ ಲೋಹಿತಾಶ್ವ ಅವರು ಖಡ್ಡಾಯವಾಗಿ ನಟಿಸುತ್ತಿದ್ದದ್ದು ಗಮನಾರ್ಹವಾಗಿತ್ತು.

lohi4

ಕೇವಲ ಚಿತ್ರರಂಗವಲ್ಲದೇ ಹವ್ಯಾಸಿ ರಂಗಭೂಮಿಯಲ್ಲಿ ಸದಾಕಾಲವೂ ಸಕ್ರೀಯವಾಗಿರುತ್ತಿದ್ದ ಲೋಹಿತಾಶ್ವ ಅವರು ಆರಂಭದಲ್ಲಿ ನಟನಾಗಿ ನಂತರ ನಿರ್ದೇಶಕರಾಗಿ, ತದನಂತರ ನಾಟಕ ರಚನೆಗಳಲ್ಲೂ ತೊಡಗಿಸಿಕೊಂಡಿದ್ದಲ್ಲದೇ, ಅವರಲ್ಲಿದ್ದ ಕವಿ ಮನಸ್ಸಿನಿಂದ ಹತ್ತಾರು ಕವನ ಸಂಕಲನಗಳನ್ನು ಪ್ರಕಟಿಸುವ ಜೊತೆಗೆ ಐದಾರು ಪುಸ್ತಕಗಳನ್ನು ಪ್ರಕಟಿಸಿದ್ದರು. ಸಿದ್ದಗಂಗೆಯ ಸಿದ್ದಪುರುಷ ಎಂಬ ಪುಸ್ತಕ ಅಪಾರವಾದ ಮನ್ನಡೆಯನ್ನು ಗಳಿಸಿತ್ತು. ಇವೆಲ್ಲವುಗಳ ಜೊತೆ ಜೊತೆಯಲ್ಲೇ ಹಲವಾರು ಇಂಗ್ಲಿಷ್ ನಾಟಕಗಳನ್ನು ಕನ್ನಡಕ್ಕೆ ಅನುವಾದ ಕೂಡ ಮಾಡಿದ್ದರು. ಬಹುತೇಕರಿಗೆ ಗೊತ್ತಿರದ ಒಂದು ಸಂಗತಿ ಎಂದರೆ, ಮುಖ್ಯಮಂತ್ರಿ ಎಂಬ ನಾಟಕದಲ್ಲಿ ಮುಖ್ಯಮಂತ್ರಿಯಾಗಿ ನಟಿಸಿ ಆ ಪಾತ್ರ ಅತ್ಯಂತ ಜನಪ್ರಿಯತೆ ಪಡೆದುಕೊಂಡ ಕಾರಣ, ಚಂದ್ರಶೇಖರ್ ಅವರು ಮುಖ್ಯಮಂತ್ರಿ ಚಂದ್ರು ಎಂದೇ ಪ್ರಖ್ಯಾತರಾಗಿದ್ದಾರೆ. ನಿಜ ಹೇಳಬೇಕೆಂದರೆ ಆ ಮುಖ್ಯಮಂತ್ರಿ ನಾಟಕದಲ್ಲಿ ಲೋಹಿತಾಶ್ವರೇ ರಿಹರ್ಸಲ್ ದಿನಗಳಲ್ಲಿ ಮುಖ್ಯಮಂತ್ರಿ ಪಾತ್ರವಹಿಸುತ್ತಿದ್ದು, ಅನಿವಾರ್ಯ ಕಾರಣದಿಂದ ನಾಟಕದ ಪ್ರದರ್ಶನ ಸಮಯದಲ್ಲಿ ಭಾಗವಹಿಸಲು ಸಾಧ್ಯವಾಗದೇ ಹೋದಾಗ, ಅಚಾನಕ್ಕಾಗಿ ಅದೇ ನಾಟಕದ ಭಾಗವಾಗಿದ್ದ ಚಂದ್ರು ಅವರು ನಿರ್ವಹಿಸಿ ಕರ್ನಾಟಕದ ಶಾಶ್ವತ ಮುಖ್ಯಮಂತ್ರಿ ಪಟ್ಟವನ್ನು ಪಡೆದದ್ದು ಈಗ ಇತಿಹಾಸ. ಎಲ್ಲವೂ ಸರಿಯಾಗಿ ಹೋಗಿದ್ದಲ್ಲಿ ಲೋಹಿತಾಶ್ವರೇ ಆ ಪಟ್ಟವನ್ನು ಪಡೆಯುತ್ತಿದ್ದರೇನೋ?
ನಾಟಕ ಮತ್ತು ಸಿನಿಮಾಗಳ ಜೊತೆಯಲ್ಲೇ ದೂರದರ್ಶನ ಮತ್ತು ಖಾಸಗೀ ಛಾನೆಲ್ಲಿನ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಅಪಾರವಾದ ಜನಪ್ರಿಯತೆ ಗಳಿಸಿದ್ದರು. ಎಸ್. ಎಲ್. ಭೈರಪ್ಪನವರ ಗೃಹಭಂಗ ಕಾದಂಬರಿ ಆಧಾರಿತ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಧಾರಾವಾಹಿಯಲ್ಲಿ ಲೋಹಿತಾಶ್ವರವರು ನಿರ್ವಹಿಸಿದ್ದ ಕಂಠೀ ಜೋಯಿಸರ ಪಾತ್ರವನ್ನು ಅವರ ಹೊರತು ಪಡಿಸಿ ಮತ್ತೊಬ್ಬರಿಂದ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅದ್ಭುತವಾಗಿ ಅಭಿನಯಿಸಿ ಎಲ್ಲರ ಮನಸ್ಸೂರೆಗೊಂಡಿದ್ದರು. ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಮತ್ತು ಹಿರಿಯ ನಿರ್ದೇಶಕರಾದ ಜಿ.ವಿ. ಅಯ್ಯರ್ ನಿರ್ದೇಶನದ ನಾಟ್ಯರಾಣಿ ಶಾಂತಲಾ ಧಾರಾವಾಹಿಯಲ್ಲೂ ನೆನಪಿನಲ್ಲಿ ಉಳಿಯುವಂತಹ ಪಾತ್ರದಲ್ಲಿ ನಟಿಸಿದ್ದರು.

ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿನ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈ ಕೆಳಕಂಡ ಪ್ರಶಸ್ತಿಗಳಿಂದ ಗೌರವಿಸಿದ್ದರೆ, ಅನೇಕ ಸಂಘ ಸಂಸ್ಥೆಗಳು ಸಹಾ ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮೂಲಕ ವರ ಸೇವೆಯನ್ನು ಗುರುತಿಸಿದ್ದರು.

  • 1997 ರಲ್ಲಿ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ
  • 2006 ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

lohi2

ಇತ್ತೀಚಿನ ಕೆಲವರ್ಷಗಳಿಂದ ವಯಸ್ಸಿನ ಕಾರಣದಿಂದಾಗಿ ರಂಗಭೂಮಿ ಮತ್ತು ಚಿತ್ರರಂಗದಿಂದ ಬಹುತೇಕ ನಿವೃತ್ತಿ ಪಡೆದು ತಮ್ಮ ಮುದ್ದಿನ ಮೊಮ್ಮಕ್ಕಳೊ ಲಾಲಾನೆ ಪಾಲನೆ ಮತ್ತು ಅವರ ಆಟ ಪಾಠಗಳೊಂದಿಗೆ ಕಾಲ ಕಳೆಯುತ್ತಿದ್ದಲ್ಲದೇ ತಮ್ಮ ಹುಟ್ಟೂರಿನಲ್ಲಿ ಕೃಷಿ ಚಟುವಟಿಕೆಗಳು, ಬರವಣಿಗೆ ಮತ್ತು ತಮ್ಮ ನೆಚ್ಚಿನ ಟೈಲರಿಂಗ್ ಮಾಡುತ್ತಾ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. 80 ವರ್ಷ ವಯಸ್ಸಿನ ಲೋಹಿತಾಶ್ವ ಅವರಿಗೆ ಕೆಲವಾರಗಳ ಹಿಂದೆ ತೀವ್ರವಾಗಿ ಹೃದಯಾಘಾತವಾದ ಕಾರಣ, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಅಪೋಲೋ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ನಂತರ ಉಸಿರಾಟದ ಸಮಸ್ಯೆ ಕಾಡಿದ್ದರಿಂದ ಕೆಲ ದಿನಗಳ ಕಾಲ ಕೃತಕ ಉಸಿರಾಟ ವ್ಯವಸ್ಥೆ (ವೆಂಟಿಲೇಟರ್) ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 8, 2022 ಮಂಗಳವಾರ ಹೃದಯಾಘಾತದಿಂದ ನಿಧನರಾಗಿರುವುದು ನಿಜಕ್ಕೂ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

lohi3

ಕಲಾವಿದರುಗಳಿಗೆ ಎಂದೂ ಸಾವಿಲ್ಲ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಹೋದರೂ ಅವರು ವಿವಿಧ ಚಿತ್ರಗಳಲ್ಲಿ ನಟಿಸಿರುವ ಹತ್ತಾಋಉ ವಿಭಿನ್ನ ಪಾತ್ರಗಳ ಮೂಲಕ ಆಚಂದ್ರಾರ್ಕವಾಗಿ ಜೀವಂತವಾಗಿಯೇ ಇರುತ್ತಾರೆ. ತಮ್ಮ ಸಹಜ ಅಭಿನಯದ ಮೂಲಕ ನೂರಾರು ನಾಟಕಗಳು, ಲೆಕ್ಕವಿಲ್ಲದಷ್ಟು ಧಾರಾವಾಹಿಗಳು ಮತ್ತು ಸುಮಾರು 500 ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಹಚ್ಚ ಹಸುರಾಗಿರುವ ಕಂಚಿನ ಕಂಠದ ಶ್ರೀ ಟಿ.ಎಸ್. ಲೋಹಿತಾಶ್ವ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s