ರಾಮ ಭಕ್ತ ಶ್ರೀ ಪಾಚಾಸಾಬ್

pacha3

ಇತ್ತೀಚಿನ ದಿನಗಳಲ್ಲಿ ಪ್ರತೀ ದಿನವೂ ಯಾವುದೇ ನ್ಯೂಸ್ ಛಾನೆಲ್ಲುಗಳನ್ನು ನೋಡಿದರೂ, ಇಲ್ಲವೇ ವೃತ್ತಪತ್ರಿಕೆಯ ಮುಖಪುಟದಲ್ಲೇ ಕಣ್ಣಿಗೆ ಕಾಣುವುದೇ ದೇಶದಲ್ಲಿ ಒಂದಲ್ಲಾ ಒಂದು ಕಡೆ ನಡೆದಿರಬಹುದಾದ ಕೋಮು ಸಂಘರ್ಷ. ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ಧಾಳಿ. ರಸ್ತೆಯಲ್ಲೇ ಮುಸಲ್ಮಾನರಿಂದ ನಮಾಜ್, ಹಿಂದೂ ಯುವತಿಯನ್ನು ಪ್ರೀತಿಸಿದಂತೆ ನಾಟಕವಾಡಿ ಮೋಸ ಮಾಡಿದ ಮುಸ್ಲಿಂ ಯುವಕ, ಹಿಂದೂ ಯುವತಿಯನ್ನು ಬರ್ಬರವಾಗಿ ಕೊಂದು ೩೨ ತುಂಡುಗಳನ್ನಾಗಿಸಿದ ಮುಸ್ಲಿಂ ಯುವಕ, ಮಂಗಳೂರಿನಲ್ಲಿ ಕುಕ್ಕರ್ ಬಾಂಪ್ ಸ್ಪೋಟ, ಸ್ವಾತ್ರಂತ್ರ ದಿನಾಚರಣೆ, ಮತ್ತು ಗಣರಾಜ್ಯೋತ್ಸವದಂದು ದೇಶಾದ್ಯಂತ ಕೋವು ದಳ್ಳುತಿ ಮತ್ತು ಬಾಂಬ್ ಸ್ಪೋಟವನ್ನು ನಡೆಸಲು ಹೊಂಚು ಹಾಕಿದ್ದ ಉಗ್ರರನ್ನು ಭೇಟೆಯಾಡಿದ ಸೇನೆ. ಕಾಶ್ಮೀರದಲ್ಲಿ ೩ ಉಗ್ರರನ್ನು ನರಕ್ಕಕ್ಕೆ ಆಟ್ಟಿದ್ ಸೇನೆ ಎಂಬ ವಿಷಯಗಳೇ ಓದಿ ಓದಿ ಧರ್ಮಾಧಾರಿತವಾಗಿ ಈ ದೇಶ ಇಬ್ಬಾಗವಾಗಿ ಮುಸಲ್ಮಾನರಿಗೆಂದೇ ಪ್ರತ್ಯೇಕವಾದ ದೇಶವನ್ನು ಕೊಟ್ಟರೂ, ಹಿಂದೂಸ್ಥಾನದ ಬಹುಸಂಖ್ಯಾತ ಹಿಂದೂಗಳ ಮೇಲೇ ಈ ರೀತಿಯ ಕೋಮು ದಾಳಿಗಳು ಏಕ್? ಇದಕ್ಕೆ ಪರಿಹಾರವಿಲ್ಲವೇ? ಎಂದು ಯೋಚಿಸುತ್ತಿರುವ ಸಂಧರ್ಭದಲ್ಲಿ ಜನ್ಮತಃ ಮುಸಲ್ಮಾನರಾದರೂ, ಪರಮ ರಾಮ ಭಕ್ತರಾಗಿ ಕೋಮು ಸೌಹಾರ್ಧತೆಗೆ ಪ್ರತೀಕವಾಗಿದ್ದ ಮತ್ತು ಇತ್ತೀಚೆಗಷ್ಟೇ ನಿಧನರಾದ ಶ್ರೀ ಪಾಚಾಸಾಬ್ ಅವರ ಸಂಪೂರ್ಣ ಪರಿಚಯ ಇದೋ ನಿಮಗಾಗಿ.

pacha8

ಪಾಚಾ ಸಾಬ್ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ 1923ರಲ್ಲಿ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿಸುತ್ತಾರೆ. ಬಾಲ್ಯದಿಂದಲೂ ನೆರೆಹೊರೆಯ ಹಿಂದೂ ಹುಡುಗರೊಂದಿಗೆ ಬಹಳ ಅತ್ಮೀಯತೆಯಿಂದಿದ್ದ ಪಾಚಾಸಾಬ್ ಅದೇ ಹುಡುಗರೊಂದಿಗೆ ಗಣೇಶೋತ್ಸವ, ರಾಮೋತ್ಸವಗಲಲ್ಲಿ ಪಾಲ್ಗೊಳ್ಳುತ್ತಿದ್ದದ್ದಲ್ಲದೇ, ಪ್ರತೀ ಶನಿವಾರ ಸಂಜೆ ರಾಮಭಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಿಂದೂ ದೇವರಗಳ ಬಗ್ಗೆ ವಿಶೇಷವಾದ ಭಕ್ತಿ ಮತ್ತು ಗೌರವಗಳನ್ನು ಬೆಳಸಿಕೊಳ್ಳುತ್ತಾರೆ. ಆಗಿನ ಲೋಯರ್ ಸೆಕೆಂಡರಿ ಅರ್ಥಾತ್ 8ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಅಭ್ಯಾಸ ನಡೆಸಿದ್ದ ಪಾಚಾ ಸಾಬ್ ಅವರಿಗೆ ತಕ್ಕ ಮಟ್ಟಿಗಿನ ಇಂಗ್ಲೀಷ್ ಕೂಡಾ ಬರುತ್ತಿತ್ತು.

ಜೀವನೋಪಾಯಕ್ಕಾಗಿ ಮೈಸೂರು ಮಹಾರಾಜರ ಕಾಲದಲ್ಲಿ ಕೋಲಾರ ಜಿಲ್ಲೆಯ ಜಕ್ಕರಸಕುಪ್ಪ, ರಾಮನಗರ ಜಿಲ್ಲೆಯ ಅಂಚೆಕೆಂಪನದೊಡ್ಡಿ ಸೇರಿ ರಾಜ್ಯದ ಹಲವು ಕಡೆಗಳಲ್ಲಿ ಉಪಾಧ್ಯಾಯರಾಗಿ ನಂತರ ಮುಖ್ಯಶಿಕ್ಷಕರಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹೀಗೆ ಸೇವೆಯಲ್ಲಿದ್ದಾಗಲೇ ಅದೊಮ್ಮೆ ಇದ್ದಕ್ಕಿದ್ದಂತೆಯೇ ಶಾಲೆಗೆ ರಜೆ ಹಾಕಿ ಮನೆ ಮಠವನ್ನೆಲ್ಲಾ ಬಿಟ್ಟು ದೇಶಾಂತರ ಹೊರಟು ಸುಮಾರು 20 ವರ್ಷಗಳ ಕಾಲ ನೂರಾರು ಹಿಂದೂ ಸಾಧು ಸಂತರ ಜತೆ ದೇಶ ಸುತ್ತಾಡುತ್ತಾರೆ. ಹಾಗೆ ದೇಶ ಪರ್ಯಟನೆಯ ಸಂದರ್ಭದಲ್ಲಿ ಈಗಿನ ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಪ್ರಭು ಶ್ರೀ ರಾಮನಚಂದ್ರ ದರ್ಶನ ಪಡೆದು ಹೊರವಾಗಲೇ ಅವರ ಜೀವನದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ.

pacha2

ಗರ್ಭಗುಡಿಯಲ್ಲಿ ದೇವರ ದರ್ಶನ ಪಡೆದು ದೇವಾಲಯದ ಪ್ರಾಂಗಣಕ್ಕೆ ಬಂದಾಗ ಅಲ್ಲೊಬ್ಬ ಭಕ್ತನೊಬ್ಬ ಭಕ್ತಿಯಿಂದ ಏನನ್ನೋ ಬರೆಯುತ್ತಿದ್ದದ್ದನ್ನು ಗಮನಿಸಿ ಅದೇನೆಂದು ಕುತೂಹಲದಿಂದ ವಿಚಾರಿಸಿದಾಗ ಆತ ರಾಮನಾಮವನ್ನು ಬರೆಯುತ್ತಿದ್ದ ವಿಷಯ ತಿಳಿಯುತ್ತದೆ. ಹಾಗೆ ಭಕ್ತಿಯಿಂದ ರಾಮನಾಮವನ್ನು ನಿರಂತರವಾಗಿ ಬರೆದಲ್ಲಿ ಮನಸ್ಸಿಗೆ ಸುಖಃ ಮತ್ತು ಶಾಂತಿ ದೊರೆಯುದಲ್ಲದೇ, ಮನಸ್ಸಿನಲ್ಲಿ ಎಣಿಸಿದ ಸಂಕಲ್ಪವೆಲ್ಲವೂ ನೆರೆವೇರುತ್ತದೆ ಎಂದು ಆತ ಹೇಳಿದ್ದನ್ನು ಕೇಳಿ, ಕುತೂಹಲಗೊಂಡು ತಾವೂ ಸಹಾ ಆ ಕ್ಷಣದಿಂದಲೇ ರಾಮಕೋಟಿ ಬರೆಯಲು ದೃಢ ಸಂಕಲ್ಪ ಮಾಡಿ, ಅಲ್ಲಿಯೇ ಒಂದು ಖಾಳಿ ಪುಸ್ತಕವೊಂದನ್ನು ಖರೀದಿಸಿ ಭಕ್ತಿಯಿಂದ ಶ್ರೀರಾಮನನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ಶ್ರೀರಾಮನಾಮವನ್ನು ಬರೆಯಲು ಆರಂಭಿಸುತ್ತಾರೆ.

pacha4

ಹಾಗೆ ರಾಮನಾಮ ಬರೆಯಲು ಆರಂಭಿಸಿದ್ದೇ ತಡಾ ಅವರಿಗೆ ಜ್ಞಾನೋದಯವಾಗಿ ಮನೆಬಿಟ್ಟು ಪರಿವ್ರಾಜಕರಾಗಿ ಊರೂರು ಅಲೆಯುತ್ತಿದ್ದವರು ತಮ್ಮ ಊರಿಗೆ ಹಿಂದಿರುಗಿದ್ದಲ್ಲದೇ, ಮತ್ತೆ ತಮ್ಮ ಶಿಕ್ಷಕವೃತ್ತಿಯನ್ನು ಮುಂದುವರೆಸಿ, ಒಟ್ಟು 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಂತರ ನಿಬೃತ್ತಿ ಹೊಂದುತ್ತಿದ್ದಂತೆಯೇ ರಾಮನಾಮ ಬರೆಯುವುದನ್ನೇ ಕಾಯಕ ಮಾಡಿಕೊಳ್ಳುತ್ತಾರೆ. ಸಿಕ್ಕ ಸಿಕ್ಕ ಪುಸ್ತಕಗಳಲ್ಲಿ ವಿವಿಧ ಎಲೆಗಳು, ತಾಮ್ರದ ತಗಳುಗಳ ಮೇಲೆ ಹೀಗೆ ಎಲ್ಲೆಂದರೆರಲ್ಲಿ ಭಗವಂತನ ಹೆಸರನ್ನು ಬರೆಯಲು ಆರಂಭಿಸುತ್ತಾರೆ. ಹೀಗೆ ರಾಮನಾಮ ಬರೆಯಲು ಆರಂಭಿಸಿದ ನಂತರ ತಮ್ಮೂರು ಮಾಗೊಂದಿ ಮತ್ತು ಬಂಗಾರಪೇಟೆ ಸುತ್ತಮುತ್ತಲೂ ಅವರ ನಿಜನಮ ಪಾಚಾಸಾಬ್ ಎನ್ನುವುದಕ್ಕಿಂತಲು ಪಂಡಿತ ಪಾಚಾಸಾಬಿ ಎಂದಲೇ ಚಿರಪರಿಚಿತರಾಗುತ್ತಾರೆ.

pacha5

ಮುಸಲ್ಮಾನರಾಗಿದ್ದೂ ಹೀಗೆ ರಾಮನಾಮವನ್ನು ಬರೆಯುವುದನ್ನು ಆರಂಭದಲ್ಲಿ ಅವರ ಸಮುದಾಯದವರು ಆಕ್ಷೇಪಣೆ ಮಾಡಿದರೂ ಅದಕ್ಕೆ ಸೊಪ್ಪು ಹಾಕದ ಪಂಡಿತರು ಭಕ್ತಿಯಿಂದ ಕೋಟಿ ರಾಮನಾಮ ಬರೆಯುವ ತಮ್ಮ ಧೃಢ ಸಂಕಲ್ಪವನ್ನು ಮತ್ತಷ್ಟು ಗಟ್ಟಿ ಗೊಳಿಸುತ್ತಾರೆ. ಪ್ರತಿ ದಿನವೂ ತಮ್ಮ ಧರ್ಮದಂತೆ ಐದು ಬಾರಿ ನಮಾಜ್ ಮಾಡುತ್ತಲೇ, ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಮಾಡುತ್ತಾ, ದೇವನೊಬ್ಬ ನಾಮ ಹಲವು. ಹಿಂದೂ ಮತ್ತು ಮುಸಲ್ಮಾನರು ಈ ದೇಶದ ಎರಡು ಕಣ್ಣುಗಳಾಗಿದ್ದು ಯಾವುದೇ ಸಂಘರ್ಷವಿಲ್ಲದೇ ಸೌಹಾರ್ಧತೆಯಿಂದ ಅಣ್ಣ ತಮ್ಮಂದಿರಂತೆ ಜೀವಿಸಬೇಕು ಎಂಬ ಕಿವಿ ಮಾತನ್ನು ಎರಡೂ ಕೋಮಿನವರಿಗೂ ಹೇಳುತ್ತಿದ್ದದ್ದು ವಿಶೇಷವಾಗಿತ್ತು. ತಮ್ಮ ಯೌವ್ವನದಲ್ಲಿ ಪಾಚಾಸಾಭ್ ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದ ಕಾರಣ, ಅವರಿಗೆ ಸರ್ಕಾರದಿಂದ ಸ್ವಾತ್ರಂತ್ರ ಹೋರಾಟಗಾರರಿಗೆ ಕೊಡುವ ಮಾಶಾಸನ ಮತ್ತು ತಮ್ಮ ಶಿಕ್ಷಕವೃತ್ತಿಯಿಂದ ಬರುವ ಪಿಂಚಣಿ ಹಣದಲ್ಲೇ ಶ್ರೀರಾಮ ನಾಮ ಬರೆಯುವ ಮಹತ್ತರ ಕಾರ್ಯವನ್ನು ನಿಭಾಯಿಸಿರುವುದು ಮತ್ತೊಂದು ವಿಶೇಷ

pacha

ಹಾಗೂ ಹೀಗೂ ಸುಮಾರು ಸುಮಾರು 20 ವರ್ಷಗಳ ಕಾಲ ರಾಮನಾಮವನ್ನು ಬರೆಯುತ್ತಾ 2020ರ ಅಗಸ್ಟ್ ಮಾಸಾಂತ್ಯಕ್ಕೆ ತಮ್ಮ 97ನೇ ವಯಸ್ಸಿನಲ್ಲಿ ಕೋಟಿ ರಾಮನಾಮವನ್ನು ಸಂಪೂರ್ಣಗೊಳಿಸಿದ ನಂತರ ಅದನ್ನು ತಮ್ಮ ಮನೆಯಲ್ಲಿ ಸಂರಕ್ಷಿಸಲು ಆಗದ ಕಾರಣ ಅದನ್ನು ತಮ್ಮ ಆರಾಧ್ಯ ದೈವ ಆಂಧ್ರಪ್ರದೇಶದ ಭದ್ರಾಚಲಂನಲ್ಲಿರುವ ಶ್ರೀರಾಮನಿಗಾಗಲೀ, ಇಲ್ಲವೇ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ಪ್ರಭು ಶ್ರೀರಾಮ ಮಂದಿರಕ್ಕೆ ತಲುಪಿಸುವ ಆಸೆಯನ್ನು ವ್ಯಕ್ತಪಡಿಸ್ತುತ್ತಾರೆ. ಪಾಚಾಸಾಬ್ ಅವರ ವಯಸ್ಸನ್ನು ಮನಸ್ಸಿನಲ್ಲಿ ಇಟ್ಟು ಕೊಂಡ ಅವರ ಗ್ರಾಮಸ್ಥರು, ಪಾಚಾ ಸಾಬ್ ಅವರು ತಾಮ್ರದ ತಗಡು ಹಾಗೂ ಪುಸ್ತಕಗಳಲ್ಲಿ ಬರೆದಿದ್ದ ರಾಮನಾಮಗಳೊಂದಿಗೆ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಮಂದಿ ಒಂದು ಮಿನಿ ಬಸ್ ಮಾಡಿಕೊಂಡು ಎಲ್ಲರೂ ಅವರೊಂದಿಗೆ ಭದ್ರಾಚಲಂಗೆ ತೆರಳಿದ್ದಾರೆ ಅಲ್ಲಿ ಅದನ್ನು ಭಕ್ತಿಪೂರ್ವಕವಾಗಿ ಸಮರ್ಪಿಸುವ ಮೂಲಕ ಪಾಚಾಸಾಬ್ ಅವರ ಆಸೆಯನ್ನು ಪೂರೈಸಿರುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.

pacha3

ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿ ರಾಮನಾಮವನ್ನು ಕಂಠದಲ್ಲಿ ಉಚ್ಚರಿಸುತ್ತಾ ನೀನೆ ರಾಮ, ನೀನೆ ಶ್ಯಾಮ, ನೀನೇ ಅಲ್ಲಾ ಎಂದು ಜಪಿಸುತ್ತಾ, ತನ್ನ ಮನೆ ಮತ್ತು ಮನದಲ್ಲಿ ರಾಮನನ್ನು ಆಹ್ವಾನ ಮಾಡಿಕೊಂಡು ಬಹಳ ಭಕ್ತಿಯಿಂದ ಕೋಟಿ ಬಾರಿ ರಾಮನಾಮವನ್ನು ಬರೆಯುವ ಮೂಲಕ ಹಿಂದೂ ಮುಸ್ಲಿಂ ಸಮುದಾಯದ ಭಾವೈಕ್ಯತೆಗೆ ಮಾದರಿಯಾಗಿದ್ದರು ಎಂದರೂ ತಪ್ಪಾಗದ್ಲು. ಒಂದು ಒಳ್ಳೆಯ ಕೆಲಸಕ್ಕೆ ಸಂಕಲ್ಪ ಮಾಡಿಕೊಂಡರೆ ಅದಕ್ಕೆ ಭಗವಂತನ ಪ್ರೇರಣೆ ಮತ್ತು ಅನುಗ್ರಹ ಇರುತ್ತದೆ ಎನ್ನುವುದಕ್ಕೆ, 97 ವರ್ಷವಾದರೂ ಅವರಿಗೆ ವಯೋಸಹಜ ಮಧುಮೇಹ ಅಥವಾ ರಕ್ರದೊತ್ತಡದಂತಹ ಸಮಸೆಗಳಿಲ್ಲದೇ, ಕಣ್ಗಳು ಸಹಾ ಚೆನ್ನಾಗಿದ್ದು ಕೈಯಲ್ಲಿ ಬರೆಯಲು ಶಕ್ತಿಯನ್ನು ಖಂಡಿತವಾಗಿಯೂ ಆ ರಾಮನೇ ಕೊಟ್ಟಿದ್ದಾನೆ ಎನ್ನುತ್ತಿದ್ದದ್ದು ಗಮನಾರ್ಹವಾಗಿತ್ತು.

pacha7

ಅವರು ರಾಮನ ಹೆಸರನ್ನು ಬರೆಯಲು ಪ್ರಾರಂಭಿಸಿದ ನಂತರ, ಅವರೆ ನೆರೆಹೊರೆಯವರು ಮತ್ತು ಅಕ್ಕ ಪಕ್ಕದ ಊರಿನವರು ಅವರ ಮೇಲೆ ಅಪಾರವಾದ ಗೌರವನ್ನು ನೀಡುತ್ತಿದ್ದದ್ದಕ್ಕೆ ಪ್ರತಿಯಾಗಿ ಪಾಚಾಸಾಬ್ ಅವರೂ ಸಹಾ, ಸದಾ ಕಾಲವೂ ಪ್ರಭು ಶ್ರೀರಾಮ ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ ಎಂದು ಹೃದಯಪೂರ್ವಕವಾಗಿ ಹರಸುತ್ತಿದ್ದಲ್ಲದೇ, ಹಾಗೆ ಅವರು ಹರಸುವಾಗ ಹೇಳಿದ್ದೆಲ್ಲವೂ ನಿಜವಾಗಿ ಹೋಗುತ್ತಿದ್ದ ಕಾರಣ ಸ್ಥಳೀಯರಿಗೆ ಅವರ ಮೇಲೆ ವಿಶೇಷವಾದ ನಂಬಿಕೆ ಏರ್ಪಟ್ಟಿತ್ತು. ಧಾರ್ಮಿಕ ಸೌಹಾರ್ದತೆಯನ್ನು ಸಾರುವುದೇ ತನ್ನ ಮುಖ್ಯ ಉದ್ದೇಶವಾಗಿದ್ದು, ತನ್ನೂರಿನಲ್ಲಿ ರಾಮಾಂಜನೇಯನಿಗೆ ಸಮರ್ಪಿತವಾದ ದೇವಾಲಯವನ್ನು ನಿರ್ಮಿಸಲು ಅವರು ಇಚ್ಚಿಸಿದ್ದರಾದರೂ, 21 ನವೆಂಬರ್ 2022 ಸೋಮವಾರದಂದು ತಮ್ಮ 99ನೇ ವಯಸ್ಸಿನಲ್ಲಿ ವಯೋಸಹಜವಾಗಿ ಇಹಲೋಕವನ್ನು ತ್ಯಜಿಸುವ ಮೂಲಕ ಹಿಂದೂ ಮುಸ್ಲಿಂ ಭಾವೈಕತೆಯ ಅಪೂರ್ವ ಕೊಂಡಿಯೊಂದು ಕಳಚಿಬಿದ್ದು ಹೋಗಿದ್ದು ನಿಜಕ್ಕು ವಿಷಾಧನೀಯ. ಪ್ರಭು ಶ್ರೀರಾಮನ ಅನನ್ಯ ಭಕ್ತರಾಗಿದ್ದ ಪಾಚಾ ಸಾಬ್ ಅವರ ಆತ್ಮಕ್ಕೆ ಆ ಶ್ರೀರಾಮನೇ ಸದ್ಗತಿಯನ್ನು ನೀಡಲಿ.WhatsApp Image 2022-11-23 at 10.26.22
ರಾಮಭಕ್ತ, ಕೋಲಾರದ ಪಾಚಾಸಾಬಿ ಅವರ ಭಧ್ರಾಚಲಂ ಪ್ರವಾಸದ ಕನಸನ್ನು ಅಲ್ಲಿನ ಗ್ರಾಮಸ್ಥರು ನನಸು ಮಾಡಿದಂತೆ ಅವರ ಕಡೆಯ ಆಸೆಯಾಗಿ ಅವರ ಊರಿನಲ್ಲೊಂದು ಭವ್ಯವಾದ ಶ್ರೀ ರಾಮಾಂಜನೇಯ ದೇವಸ್ಥಾನವವೊಂದನ್ನು ಕಟ್ಟಿಸುವ ಮೂಲಕ ಹಿಂದೂ-ಮುಸ್ಲಿಂ ಸಾಮರಸ್ಯ ಮೆರೆಸುವ ಕಾರ್ಯ ನಡೆಯಲಿ ಇಂತಹ ಸಜ್ಜನರ ಸಂಖ್ಯೆ ಅಗಣಿತವಾಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದ ಶ್ರೀ ಪಾಚಾಸಾಬ್ ಸುಮಾರು 20 ವರ್ಷಗಳ ಕಾಲ ರಾಮನ ಜಪ ಮಾಡುತ್ತಾ, ಕೋಟಿ ಸಾರಿ ರಾಮನಾಮವನ್ನು ಬರೆಯುವ ಮೂಲಕ ಎರಡೂ ಧರ್ಮಗಳ ಧರ್ಮದ ಗಡಿಯನ್ನು ಮೀರಿದ ವ್ಯಕ್ತಿಯಾಗಿದ್ದಲ್ಲದೇ, ಎರಡೂ ಧರ್ಮದ ನಡುವೆ ಸ್ನೇಹ ಸೌಹಾರ್ಧತೆಗಳನ್ನು ಬೆಳೆಸಿದ್ದು, ಅವರ ಶ್ರೀರಾಮನ ಮೇಲಿನ ಭಕ್ತಿ ಮತ್ತು ಧಾರ್ಮಿಕ ನಂಬಿಕೆಗಳು ಅನೇಕರಿಗೆ ಸ್ಫೂರ್ತಿ ನೀಡಿರುವ ಕಾರಣದಿಂದಾಗಿ ಖಂಡಿತವಾಗಿಯೂ ಪಾಚಾಸಾಬ್ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಶ್ರೀ ಪಾಚಾ ಸಾಬ್ ಅವರ ನಿಧನದ ಸುದ್ದಿಯನ್ನು ತಿಳಿಸಿ ಅವರ ಕುರಿತಾಗಿ ಲೇಖನವನ್ನು ಬರೆಯಲು ಪ್ರೋತ್ಸಾಹಿಸಿದ ಆತ್ಮೀಯರೂ ಮತ್ತು ಹಿರಿಯರಾದ ಶ್ರೀ ಮೋಹನ್ ಕೊಲ್ಲಂಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

2 thoughts on “ರಾಮ ಭಕ್ತ ಶ್ರೀ ಪಾಚಾಸಾಬ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s