ಕನ್ನಡದ ಅಮ್ಮ ಪಂಡರೀಬಾಯಿ, ನಾಯಕಿಯಿಂದ ತಾಯಿಯ ಪಾತ್ರದವರೆಗೆ ಸುದೀರ್ಘ ಪಯಣ
“ತಾಯಿಗಿಂತ ದೇವರಿಲ್ಲ” ಎಂಬ ಮಾತು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಬೆಳ್ಳಿತೆರೆಯಲ್ಲೂ ತಾಯಿಯ ಪಾತ್ರಕ್ಕೆ ಒಂದು ವಿಶಿಷ್ಟ ಭಾವನಾತ್ಮಕ ಸ್ಥಾನವಿದೆ. ಆದರೆ ನಾಯಕಿಯಾಗಿ ಜನಪ್ರಿಯರಾಗಿ, ತಮ್ಮ ಜೊತೆ ನಾಯಕನಾಗಿ ನಟಿಸಿದ್ದ ಮಹಾನ್ ನಟರಿಗೇ ನಂತರ ತಾಯಿಯಾಗಿ ಅಭಿನಯಿಸಿದ ಅಪರೂಪದ ಕಲಾವಿದೆಯರ ಪೈಕಿ ಪಂಡರೀಬಾಯಿ ಅವರ ಹೆಸರು ಅತ್ಯಂತ ಗೌರವದಿಂದ ನೆನಪಾಗುತ್ತದೆ.
ನಾಯಕಿಯರ ಪಾತ್ರಗಳು ಕಾಲಕ್ರಮೇಣ ಬದಲಾಗುತ್ತಿದ್ದರೂ, ನಾಯಕನ ಪಾತ್ರಕ್ಕೆ ವಯಸ್ಸಿನ ಮಿತಿ ಕಡಿಮೆಯೇ. ಆದರೆ ನಟಿಯರಿಗೆ ಮದುವೆ ಅಥವಾ ವಯಸ್ಸಿನ ನಂತರ ನಾಯಕಿಯಿಂದ ಅಕ್ಕ, ಅತ್ತಿಗೆ, ತಾಯಿ ಪಾತ್ರಗಳಿಗೆ ಬದಲಾಗಬೇಕಾದ ಪರಿಸ್ಥಿತಿ ಬಹುಕಾಲ ಇತ್ತು. ಆ ಪರಿವರ್ತನೆಯನ್ನು ಅತ್ಯಂತ ಯಶಸ್ವಿಯಾಗಿ ಸ್ವೀಕರಿಸಿ, ಸುಮಾರು ಆರು ದಶಕಗಳ ಕಾಲ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಪಂಡರೀಬಾಯಿ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಪ್ರಸಿದ್ಧ ನಾಯಕರುಗಳ ಜೊತೆಯಲ್ಲಿ ನಾಯಕಿಯಾಗಿ ನಟಿಸಿ ಖ್ಯಾತಿ ಪಡೆದು ನಂತರ ಅದೇ ನಾಯಕರಿಗೇ ಅಮ್ಮನಾಗಿ ನಟಿಸಿದ ಕೀರ್ತಿಯನ್ನೂ ಹೊಂದಿರುವ ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿದ್ದು, ಅಂತಿಮವಾಗಿ ಕನ್ನಡದ ಅಮ್ಮ ಎಂದೇ ಪ್ರಖ್ಯಾತರಾಗಿದ್ದ ಪಂಚಭಾಷಾ ತಾರೆ ಶ್ರೀಮತಿ ಪಂಡರೀಬಾಯಿಯವರು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ
ಹರಿಕಥೆಯಿಂದ ಬೆಳ್ಳಿತೆರೆಗೆ
ಪಂಡರೀಬಾಯಿ ಅವರು 1928ರ ಸೆಪ್ಟೆಂಬರ್ 18ರಂದು ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದರು. ಅವರ ಮೂಲ ಹೆಸರು ಗೀತಾ. ರಂಗರಾವ್ ಮತ್ತು ಕಾವೇರಿ ಬಾಯಿ ದಂಪತಿಯ ಪುತ್ರಿಯಾದ ಅವರಿಗೆ ಮೈನಾವತಿ ಎಂಬ ಸಹೋದರಿಯೂ ಇದ್ದರು. ಮೈನಾವತಿಯವರೂ ಮುಂದೆ ಪ್ರಸಿದ್ಧ ನಟಿಯಾದರು. ಪಂಡರೀಬಾಯಿಯವರ ಕುಟುಂಬದ ಬೇರುಗಳು ಮಹಾರಾಷ್ಟ್ರದೊಂದಿಗೆ ಸಂಬಂಧ ಹೊಂದಿದ್ದದ್ದು, ಮನೆಯ ಮಾತೃಭಾಷೆ ಮರಾಠಿಯಾಗಿರುತ್ತದೆ. ಪಾಂಡುರಂಗನ ಭಕ್ತರಾಗಿದ್ದ ಕುಟುಂಬದಲ್ಲಿ ಗೀತಾಳನ್ನು ಚಿಕ್ಕಂದಿನಿಂದಲೇ ಪಂಡರೀಬಾಯಿ ಎಂದು ಕರೆಯಲು ಆರಂಭಿಸಿದ್ದು, ಅದೇ ಹೆಸರು ಮುಂದೆ ಅವರ ಕಲಾಜೀವನದ ಶಾಶ್ವತ ಹೆಸರಾಯಿತು.
ಅವರ ತಂದೆ ಕೇವಲ ಚಿತ್ರಕಲಾ ಶಿಕ್ಷಕರಲ್ಲದೇ, ಉತ್ತಮ ಗಾಯಕ, ಸ್ಥಳೀಯ ರಂಗಭೂಮಿ ಕಲಾವಿದ ಹಾಗೂ ಹರಿಕಥಾ ದಾಸರೂ ಆಗಿದ್ದರು. ಹೀಗಾಗಿ ನಟನೆ, ಸಂಗೀತ ಮತ್ತು ಹರಿಕಥೆಯ ಸಂಸ್ಕಾರ ಪಂಡರೀಬಾಯಿಗೆ ಬಾಲ್ಯದಲ್ಲೇ ಮನೆಯಲ್ಲಿಯೇ ದೊರೆಯಿತು. ತಂದೆಯ ಹರಿಕಥೆಗಳನ್ನು ಕೇಳುತ್ತಾ ಬೆಳೆದ ಅವರು, ಕೇವಲ 8–9ನೇ ವಯಸ್ಸಿನಲ್ಲಿಯೇ ತಂದೆಯವರ ಅನೇಕ ಹರಿಕಥೆಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಸಂದರ್ಭ ಸಿಕ್ಕಾಗ ತಾವೇ ಕಾರ್ಯಕ್ರಮ ನೀಡುವಷ್ಟು ಪ್ರತಿಭೆ ಬೆಳೆಸಿಕೊಂಡಿದ್ದರು.
ಪಿಟೀಲು ಚೌಡಯ್ಯ ಕಂಡ ಪ್ರತಿಭೆ

ಒಮ್ಮೆ ಮೈಸೂರಿನಲ್ಲಿ ತಂದೆಯ ಹರಿಕಥಾ ಕಾರ್ಯಕ್ರಮದ ಸಂದರ್ಭದಲ್ಲಿ ಅನಿರೀಕ್ಷಿತ ಪರಿಸ್ಥಿತಿ ಎದುರಾದಾಗ, ಪುಟ್ಟ ಪಂಡರೀಬಾಯಿಯೇ ಕಾರ್ಯಕ್ರಮವನ್ನು ಮುಂದುವರಿಸಬೇಕಾಯಿತು. ಅಲ್ಲಿದ್ದ ಕರ್ನಾಟಕ ಸಂಗೀತದ ದಿಗ್ಗಜ ಪಿಟೀಲು ಚೌಡಯ್ಯ ಅವರ ಪ್ರತಿಭೆಯನ್ನು ಗುರುತಿಸಿದರು. ಕೆ.ಹಿರಣ್ಯಯ್ಯ ಹಾಗೂ ಎಂಎನ್ ಗೋಪಾಲ್ ಅವರ ಜಂಟಿ ನಿರ್ದೇಶನದಲ್ಲಿ ತಾವು ನಿರ್ಮಿಸುತ್ತಿದ್ದ ವಾಣಿ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡುವ ಮೂಲಕ, ಅನಿರೀಕ್ಷಿತವಾಗಿ ಪಂಡರೀಬಾಯಿಯವರು ತಮ್ಮ 13ನೇ ವಯಸ್ಸಿನಲ್ಲಿ ನಟಿಯಾಗಿ ಚಲನಚಿತ್ರರಂಗವನ್ನು ಪ್ರವೇಶಿಸುತ್ತಾರೆ. ಮುಂದೆ ಹೊನ್ನಪ್ಪ ಭಾಗವತರ್ ಅವರ ‘ಗುಣಸಾಗರಿ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡರು. ಮೊದಲ ಎರಡೂ ಚಿತ್ರಗಳೂ ಹೇಳುವಂತಹ ಹೆಸರನ್ನು ತಂದು ಕೊಡಲಿಲ್ಲ.
ಆದರೆ ಅವರ ನಿಜವಾದ ತಿರುವು 1944ರ ತಮಿಳು ಚಿತ್ರ ‘ಹರಿದಾಸ್’. ಎಂ.ಕೆ. ತ್ಯಾಗರಾಜ ಭಾಗವತರ್, ಟಿ.ಆರ್. ರಾಜಕುಮಾರಿ ಮತ್ತು ಎನ್.ಸಿ. ವಸಂತಕೋಕಿಲಂ ಅಭಿನಯಿಸಿದ್ದ ಈ ಚಿತ್ರ ಅಪಾರ ಯಶಸ್ಸು ಕಂಡಿತು. ಮದ್ರಾಸಿನ ಒಂದೇ ಚಿತ್ರಮಂದಿರದಲ್ಲಿ 110 ವಾರಗಳ ಕಾಲ ಪ್ರದರ್ಶನಗೊಂಡ ದಾಖಲೆ ಈ ಚಿತ್ರಕ್ಕಿದೆ. ಪಂಡರೀಬಾಯಿಯವರ ತಮಿಳು ಚಿತ್ರರಂಗದ ಪಯಣಕ್ಕೂ ಇದು ಪ್ರಮುಖ ಆರಂಭವಾಯಿತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿಯೂ ಭರ್ಜರಿ ಗೆಲುವು ಕಂಡ ನಂತರ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಊರತೊಡಗಿ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಾ ಬಂದರು.
ರಾಜಕುಮಾರ್ ಅವರ ನಾಯಕಿ

1954ರಲ್ಲಿ ಎಚ್.ಎಲ್.ಎನ್. ಸಿಂಹ ನಿರ್ದೇಶಿಸಿದ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಮುತ್ತುರಾಜ್—ಮುಂದೆ ಕನ್ನಡದ ವರನಟ ಡಾ. ರಾಜಕುಮಾರ್—ಅವರ ನಾಯಕಿಯಾಗಿ ಪಂಡರೀಬಾಯಿ ಅಭಿನಯಿಸಿದರು. ಇದು ಕೇವಲ ಯಶಸ್ವಿ ಚಿತ್ರವಷ್ಟೇ ಅಲ್ಲ; ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮಹತ್ವದ ಚಿತ್ರ. ವಿಶೇಷವೆಂದರೆ, ಮುಂದೆ ರಾಜಕುಮಾರ್ ಅವರ ತಾಯಿಯಾಗಿ ಕೂಡ ಪಂಡರೀಬಾಯಿ ಅಭಿನಯಿಸಿದರು.
ಇದೇ ರೀತಿಯ ಮತ್ತೊಂದು ಅಪರೂಪದ ಸಂಗತಿ ಎಂದರೆ, ತಮಿಳು ಚಿತ್ರರಂಗದ ದಿಗ್ಗಜ ಶಿವಾಜಿ ಗಣೇಶನ್ ಅವರ ಚೊಚ್ಚಲ ಚಿತ್ರ ‘ಪರಾಶಕ್ತಿ’ಯಲ್ಲಿಯೂ ಪಂಡರೀಬಾಯಿ ಅಭಿನಯಿಸಿದ್ದರು. ಹೀಗಾಗಿ ಇಬ್ಬರು ಮಹಾನ್ ನಟರ ನಾಯಕಿಯಾಗಿ ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲೇ ಗುರುತಿಸಿಕೊಂಡ ಅಪರೂಪದ ಸ್ಥಾನ ಅವರಿಗೆ ದೊರೆಯಿತು.
ನಂತರ ‘ಸೋದರಿ’, ‘ಹರಿಭಕ್ತ’, ‘ರಾಯರ ಸೊಸೆ’, ‘ಬಂಗಾರದ ಹೂವು’, ‘ಜೇನುಗೂಡು’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದರು. ನಮ್ಮ ಮಕ್ಕಳು ಚಿತ್ರದಲ್ಲಿ ಆ ಪುಟ್ಟ ಮಕ್ಕಳ ತಾಯಿಯಾಗಿ ನಿನ್ನೋಲುಮೆ ನಮಗಿರಲಿ ತಂದೆ ಎಂದು ತನ್ನ ಕುಟುಂಬದ ಹಿತಕ್ಕಾಗಿ ದೇವರನ್ನು ಬೇಡಿಕೊಳ್ಳುವ ಹಾಡಿನಲ್ಲಿ ಮೂಡಿಸುವ ಅವರ ತನ್ಮಯತೆ ಕನ್ನಡಿಗರ ಹೃದಯವನ್ನು ಮೀಟಿತ್ತು.ತಮ್ಮ ಸಹೋದರಿ ಮೈನಾವತಿಯವರನ್ನೂ ಚಿತ್ರರಂಗಕ್ಕೆ ಕರೆತಂದು ಅವರ ವೃತ್ತಿಜೀವನಕ್ಕೂ ದಾರಿ ಮಾಡಿಕೊಟ್ಟರು. ಆಕೆಯೂ ಕೂಡ ಅನೇಕ ಯಶಸ್ವಿ ಚಿತ್ರಗಳ ಭಾಗವಾಗುತ್ತಾರೆ.
ಕಲಾವಿದೆ ಮಾತ್ರವಲ್ಲ, ನಿರ್ಮಾಪಕಿಯೂ ಹೌದು

ಪಂಡರೀಬಾಯಿ ನಟನೆಯಲ್ಲಷ್ಟೇ ನಿಲ್ಲಲಿಲ್ಲ. 1957ರಲ್ಲಿ ನಿರ್ಮಾಪಕಿಯಾಗಿಯೂ ಹೊಸ ಹೆಜ್ಜೆ ಇಟ್ಟರು. ‘ರಾಯರ ಸೊಸೆ’ ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಿಸಿದರು. ಆದರೆ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ನಂತರ ‘ಅನುರಾಧ’ ಸೇರಿದಂತೆ ಇನ್ನೂ ಕೆಲವು ಚಿತ್ರಗಳನ್ನು ನಿರ್ಮಿಸಿದರೂ ಆ ಪ್ರಯತ್ನಗಳಲ್ಲಿಯೂ ಆರ್ಥಿಕ ಯಶಸ್ಸು ಸಿಗಲಿಲ್ಲ. ನಿರ್ಮಾಣ ಕ್ಷೇತ್ರದಲ್ಲಿ ಹಣ ಕಳೆದುಕೊಂಡ ನಂತರ ‘ಶ್ರೀ ಕೃಷ್ಣ ಚೈತನ್ಯ ಸಭಾ’ ಎಂಬ ನಾಟಕ ಮಂಡಳಿಯನ್ನು ಕಟ್ಟಿಕೊಂಡು ಊರೂರು ಸುತ್ತಿ ನಾಟಕಗಳನ್ನು ಪ್ರದರ್ಶಿಸಿದರು. ಹೀಗೆ ರಂಗಭೂಮಿಯ ಮೂಲಕ ಜೀವನವನ್ನು ಮತ್ತೆ ಕಟ್ಟಿಕೊಳ್ಳುವ ಪ್ರಯತ್ನ ಮಾಡಿದರು.
‘ಅಮ್ಮ’ ಪಂಡರೀಬಾಯಿ

ನಾಯಕಿಯಾಗಿ ಮಿಂಚಿದ್ದ ಪಂಡರೀಬಾಯಿ ನಂತರ ಕ್ರಮೇಣ ಪೋಷಕ ಪಾತ್ರಗಳಿಗೆ ಬಂದರು. ಆದರೆ ಅದು ಅವರ ವೃತ್ತಿಜೀವನದ ಅಂತ್ಯವಾಗಲಿಲ್ಲ; ಬದಲಾಗಿ ಹೊಸ ಅಧ್ಯಾಯದ ಆರಂಭವಾಯಿತು. ಎಂ.ಜಿ. ರಾಮಚಂದ್ರನ್, ಎನ್.ಟಿ. ರಾಮರಾವ್, ಶಿವಾಜಿ ಗಣೇಶನ್, ಡಾ. ರಾಜಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ರಾಜೇಶ್ ಖನ್ನಾ, ರಜನಿಕಾಂತ್ ಸೇರಿದಂತೆ ಹಲವು ತಲೆಮಾರುಗಳ ನಾಯಕ ನಟರಿಗೆ ತಾಯಿಯಾಗಿ ಅಭಿನಯಿಸಿದರು. ಇಲ್ಲಿ ಅವರ ಜೀವನದ ಅತ್ಯಂತ ವಿಶಿಷ್ಟ ಸಂಗತಿ ಅಡಗಿದೆ.
ಯಾರೊಂದಿಗೆ ಒಮ್ಮೆ ನಾಯಕಿಯಾಗಿ ನಟಿಸಿದ್ದರೋ, ಅದೇ ನಟರಿಗೆ ನಂತರ ತಾಯಿಯಾಗಿ ನಟಿಸಿದರು!
ಈ ಕಾರಣಕ್ಕಾಗಿಯೇ ಪಂಡರೀಬಾಯಿ ಕೇವಲ ನಟಿಯಲ್ಲ; ದಕ್ಷಿಣ ಭಾರತೀಯ ಚಿತ್ರರಂಗದ ಹಲವು ತಲೆಮಾರುಗಳನ್ನು ಸಂಪರ್ಕಿಸುವ ಒಂದು ಸೇತುವೆಯಂತಿದ್ದರು. ಕನ್ನಡದಲ್ಲಿ ಸತ್ಯ ಹರಿಶ್ಚಂದ್ರ ಚಿತ್ರದ ಚಂದ್ರಮತಿ ಪಾತ್ರದಲ್ಲಿ ಮಗ ಲೋಹಿತಾಶ್ವನ ಸಾವಿನ ಸಂದರ್ಭದಲ್ಲಿ ಅವರು ತೋರಿಸಿದ ಭಾವನಾತ್ಮಕ ಅಭಿನಯ ಇಂದಿಗೂ ನೆನಪಿನಲ್ಲಿ ಉಳಿದಿದೆ.
ವೈಯಕ್ತಿಕ ಬದುಕಿನ ತಿರುವುಗಳು
ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಕುಟುಂಬದ ಜವಾಬ್ದಾರಿಯೂ ಅವರ ಮೇಲೆಯೇ ಇತ್ತು. ಮದ್ರಾಸಿನ ವಡಪಳನಿಯಲ್ಲಿ ಮನೆ ನಿರ್ಮಿಸಿಕೊಂಡ ಅವರು, ಪಾಂಡುರಂಗನ ಭಕ್ತೆಯಾಗಿದ್ದ ಕಾರಣ ಮನೆಯ ಆವರಣದಲ್ಲೇ ಪಾಂಡುರಂಗನ ದೇವಸ್ಥಾನವನ್ನೂ ನಿರ್ಮಿಸಿದ್ದರು. ನಂತರ ತಮ್ಮ 50ನೇ ವಯಸ್ಸಿನಲ್ಲಿ ವೈದ್ಯರಾದ ಪಿ.ಎಚ್. ರಾಮಾರಾವ್ ಅವರನ್ನು ವಿವಾಹವಾದರು. ದಂಪತಿಗೆ ಮಕ್ಕಳಿರಲಿಲ್ಲ.
ಆದರೆ ಜೀವನದ ಕೊನೆಯ ಹಂತ ಸುಲಭವಾಗಿರಲಿಲ್ಲ. 1994ರ ರಸ್ತೆ ಅಪಘಾತದಲ್ಲಿ ಅವರು ಎಡಗೈ ಕಳೆದುಕೊಂಡರು. ನಂತರ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡತೊಡಗಿದವು. ಆದರೂ ಚಿತ್ರರಂಗ ಅವರನ್ನು ಕೈಬಿಡಲಿಲ್ಲ. ಕನ್ನಡದ ಹಲವು ಕಲಾವಿದರು ಅವರಿಗೆ ತಮ್ಮ ಚಿತ್ರಗಳಲ್ಲಿ ಪಾತ್ರಗಳನ್ನು ನೀಡಿದರು. ಡಾ. ರಾಜಕುಮಾರ್ ಅಭಿನಯದ ಅನುರಾಗ ಸಂಗಮ ಚಿತ್ರದಲ್ಲಿಯೂ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡರು.

ಅದುವರೆಗೂ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸರಿ ಸುಮಾರು 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರೂ ಈ ರೀತಿಯಾಗಿ ಅಸಹಾಯಕತೆಯ ಪರಿಸ್ಥಿತಿಗೆ ತಲುಪಿದಾಗ, ಕನ್ನಡ ಚಿತ್ರರಂಗದ ಅನೇಕರು ಅವರಿಗೆ ತಮ್ಮ ಚಿತ್ರಗಳಲ್ಲಿ ಪಾತ್ರಗಳನ್ನು ನೀಡುವ ಮೂಲಕ ಅವರಿಗೆ ಗೌರವಪೂರಿತ ಸಹಾನುಭೂತಿ ಸೂಚಿಸಿದ್ದು, ಅವರ ಕಷ್ಟ ಮತ್ತು ನೋವನ್ನು ಸ್ವಲ್ಪ ಮಟ್ಟಿಗೆ ಮರೆಯುವಂತೆ ಮಾಡಿತ್ತದೆ. ಅವರ ತಂಗಿ ಮೈನಾವತಿ ಅವರು ನಿರ್ಮಿಸಿದ್ದ ಅಮ್ಮ ಮತ್ತು ಮನೆತನ ಎಂಬ ದೂರದರ್ಶನದ ಧಾರವಾಹಿಗಳಲ್ಲಿಯೂ ಸಹಾ ಪಂಡರೀಬಾಯಿ ಕಾಣಿಸಿಕೊಂಡಿದ್ದರು. ರಾಜಕುಮಾರ್ ಅವರು ತಮ್ಮ ಅನುರಾಗ ಸಂಗಮ ಚಿತ್ರದಲ್ಲಿ ಅವರ ತಾಯಿಯ ಪಾತ್ರವನ್ನು ನೀಡಿದ್ದಲ್ಲದೇ ಶ್ರೀಕಂಠಾ.. ವಿಷಕಂಠಾ.. ಎಂಬ ಹಾಡಿನಲ್ಲಿ ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ತಮ್ಮ ತಾಯಿ ಪಾತ್ರಧಾರಿಯಾಗಿದ್ದ (ಅದಾಗಲೇ ಒಂದು ಕೈ ಮುರಿದಿತ್ತು) ಪಂಡರೀಬಾಯಿಯರನ್ನು ಹೊತ್ತು ತಿರುಗುವ ಸನ್ನಿವೇಷ ಹೃದಯ ಕಿತ್ತು ಬರುವಂತಿತ್ತು ಎಂದರೂ ತಪ್ಪಾಗದು.
ಜಯಲಲಿತಾ ನೆರವು
ಆರೋಗ್ಯ ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ, ಅಂದಿನ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅನ್ನಾ ಟ್ರಸ್ಟ್ ಮೂಲಕ ಪಂಡರೀಬಾಯಿಯವರ ಚಿಕಿತ್ಸೆಗೆ ನೆರವು ನೀಡಿದ್ದರು ಎಂದು ಆ ಕಾಲದ ವರದಿಗಳು ದಾಖಲಿಸಿವೆ. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. 2003ರ ಜನವರಿ 29ರಂದು ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಅವರು ನಿಧನರಾದರು. ಆ ಸಮಯದಲ್ಲಿ ಅವರಿಗೆ 73 ವರ್ಷ ವಯಸ್ಸಾಗಿತ್ತು . ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳ 1,000ಕ್ಕೂ ಅಧಿಕ ಚಿತ್ರಗಳು ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದರು
ಪಂಡರೀಬಾಯಿಯವರ ಬದುಕು ಕೇವಲ ಒಬ್ಬ ನಟಿಯ ಯಶೋಗಾಥೆಯಲ್ಲ. ಹರಿಕಥೆ ಹೇಳುತ್ತಿದ್ದ ಪುಟ್ಟ ಬಾಲಕಿ → ನಾಯಕಿ → ನಿರ್ಮಾಪಕಿ → ನಾಟಕ ಕಲಾವಿದೆ → ತಾಯಿ ಪಾತ್ರಗಳ ಜನಪ್ರಿಯ ಮುಖ → ಜೀವನದ ಕಠಿಣ ಪರೀಕ್ಷೆಗಳನ್ನು ಎದುರಿಸಿದ ಕಲಾವಿದೆ—ಇದು ಅವರ ಸುದೀರ್ಘ ಪಯಣ.

ನಾಯಕಿಯಾಗಿ ಪಂಡರೀಬಾಯಿ ಪಡೆದ ಖ್ಯಾತಿಗಿಂತಲೂ, ‘ಅಮ್ಮ’ನಾಗಿ ಕನ್ನಡಿಗರ ಮನಸ್ಸಿನಲ್ಲಿ ಗಳಿಸಿದ ಸ್ಥಾನವೇ ಅವರ ಶಾಶ್ವತ ಹೆಗ್ಗಳಿಕೆ. ಡಾ. ರಾಜಕುಮಾರ್ ಅವರ ನಾಯಕಿಯಾಗಿಯೂ, ನಂತರ ಅವರ ತಾಯಿಯಾಗಿಯೂ ನಟಿಸಿದ ಅಪರೂಪದ ಕಲಾವಿದೆ ಎಂಬ ಸ್ಥಾನವೂ ಅವರದೇ. ಅವರನ್ನು ಸ್ಮರಿಸುವಾಗ ಒಂದು ಮಾತು ನೆನಪಾಗುತ್ತದೆ.
ಬೆಳ್ಳಿತೆರೆಯಲ್ಲಿ ತಾಯಿಯ ಪಾತ್ರವನ್ನು ನೂರಾರು ಬಾರಿ ನಿರ್ವಹಿಸಿದ ಕಲಾವಿದರು ಹಲವರಿದ್ದಾರೆ. ಆದರೆ ನಾಯಕಿಯಾಗಿ ಗೆದ್ದ ನಂತರ, ತಾಯಿಯಾಗಿ ಮತ್ತಷ್ಟು ದೊಡ್ಡ ಗೆಲುವು ಕಂಡವರು ಬಹಳ ವಿರಳ. ಆ ವಿರಳ ಸಾಲಿನಲ್ಲಿ ಪಂಡರೀಬಾಯಿ ಅಗ್ರಗಣ್ಯರು. ಅದಕ್ಕಾಗಿಯೇ ಕನ್ನಡಿಗರ ಮನಸ್ಸಿನಲ್ಲಿ ಅವರು ಕೇವಲ ಪಂಡರೀಬಾಯಿ ಅಲ್ಲ. ನಿಜಕ್ಕೂ ಹೆಮ್ಮೆಯ ಕನ್ನಡದ ಅಮ್ಮ ಪಂಡರೀಬಾಯಿ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ