ಸಾಮಾನ್ಯವಾಗಿ ಕಲಾವಿದರುಗಳಿಗೆ ಮತ್ತು ಗುರುಗಳಿಗೆ ಸಾವಿಲ್ಲ ಎಂದು ಹೇಳುತ್ತಾರೆ. ಗುರುಗಳು ತಮ್ಮ ಶಿಷ್ಯಂದಿರ ಮೂಲಕ ಮತ್ತು ಕಲಾವಿದರುಗಳು ತಮ್ಮ ಕಲಾಕೃತಿಗಳ ಮೂಲಕ ತಮ್ಮ ಮರಣಾನಂತರವೂ ನೂರಾರು ವರ್ಷಗಳ ಜನ ಮಾನಸದಲ್ಲಿ ವಿರಾಜಮಾನರಾಗಿಯೇ ಉಳಿಯುತ್ತಾರೆ. ಹಾಗಾಗಿಯೇ ಇಂದಿಗೂ ಸಹಾ ಸನಾತನ ಧರ್ಮದಲ್ಲಿ ಗುರು ದ್ರೋಣಾಚಾರ್ಯರಿಂದ ಆದಿಯಾಗಿ ಆಚಾರ್ಯತ್ರಯರುಗಳಲ್ಲದೇ ನೂರಾರು ಗುರುಗಳನ್ನು ಇಂದಿಗೂ ಸಹಾ ನನಪಿಸಿಕೊಳ್ಳುತ್ತೇವೆ. ಇದನ್ನೇ ಅತ್ಯಂತ ಸರಳವಾಗಿ ಪುರಂದರ ದಾಸರು ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದಿದ್ದಾರೆ. ಕನ್ನಡ ಕಲಾ ಪ್ರಪಂಚದಲ್ಲಿ ತಮ್ಮದೇ ವೈಶಿಷ್ಟ್ಯಗಳಿಂದ ಗುರುತಿಸಿಕೊಂಡು ಈ ನಾಡು ಕಂಡ ಶ್ರೇಷ್ಠ ಚಿತ್ರಕಲಾವಿದ ಕುಂಚಬ್ರಹ್ಮ ಶ್ರೀ ಬಿ.ಕೆ.ಎಸ್. ವರ್ಮ ಅವರು ಇದೇ ಫೆಬ್ರವರಿ 6, 2023 ರಂದು ನಮ್ಮೆಲ್ಲರನ್ನೂ ಅಗಲಿದ ಪರಿಣಾಮ ಅವರ ಲಕ್ಷಾಂತರ ಅಭಿಮಾನಿಗಳು ದೇಶಾದ್ಯಂತ ಸಾವಿರಾರು ಕಡೆಯಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಅವರಿಗೆ ನುಡಿ ನಮನಗಳನ್ನು ಸಲ್ಲಿಸುತ್ತಿದ್ದರೆ, ಬೆಂಗಳೂರಿನ ಹೆಬ್ಬಾಳ ಭಾಗದ ಸಂಸ್ಕಾರ ಭಾರತೀ ವತಿಯಿಂದ ದಿನಾಂಕ 26.02.2023ರಂದು ಬಹಳ ವಿಶೇಷವಾಗಿ ಮತ್ತು ಆಷ್ಟೇ ಅರ್ಥಪೂರ್ಣವಾಗಿ ಅಕಾಲಿಕವಾಗಿ, ಅಗಲಿದ ಸಂಸ್ಕಾರ ಭಾರತೀಯೊಂದಿಗೆ ಸದಾಕಾಲವೂ ಒಡನಾಟವನ್ನು ಇಟ್ಟುಕೊಂಡಿದ್ದ ಶ್ರೀ ಬಿ.ಕೆ.ಎಸ್. ವರ್ಮ ಅವರಿಗೆ ಅವರ ಶಿಷ್ಯೆಯಾದ ಶ್ರೀಮತಿ ಅರ್ಚನಾ ಶ್ರೀರಾಮ್ ಅವರು ಸುಮಾರು 90 ಘಂಟೆಗಳ ಪರಿಶ್ರಮದೊಂದಿಗೆ 12×24 ಆಡಿ ಅಗಲ ಮತ್ತು ಉದ್ದದ ಶ್ರೀ ಶೀನಿವಾಸನ ಅದ್ಭುತವಾದ ರಂಗೋಲಿಯನ್ನು ಬಿಡಿಸುವ ಮೂಲಕ ಸಂಸ್ಮರಣೆ ಮಾಡಿದ್ದದ್ದು ನಿಜಕ್ಕೂ ಅದ್ಭುತವಾಗಿದ್ದು ಆ ಕಾರ್ಯಕ್ರಮದ ಕುರಿತಾದ ವರದಿ ಇದೋ ನಿಮಗಾಗಿ
ಬೆಂಗಳೂರಿನ ವಿದ್ಯಾರಣ್ಯಪುರದ ವಿಶ್ವೇಶ್ವರ ಬಡಾವಣೆಯ ಶ್ರೀಮತಿ ಅರ್ಚನಾ ಮತ್ತು ಶ್ರೀರಾಮ್ ದಂಪತಿಗಳಿಗೆ ಕರೋನ ಸಮಯದಲ್ಲಿ ಕಾಲ ಕಳೆಯುವ ಸಲುವಾಗಿ ಆರಂಭವಾದ ರಂಗೋಲಿಯ ಗೀಳು, ಸತತ ಆಭ್ಯಾಸ ಮತ್ತು ಪರಿಶ್ರಮದ ಮೂಲಕ ಶ್ರೀಮತಿ ಅರ್ಚನಾ ಅವರು ಈಗ ನಾಡಿನ ಉದಯೋನ್ಮುಖ ರಂಗೋಲಿ ಕಲಾವಿದರಾಗಿದ್ದಾರೆ. ಆರಂಭದಲ್ಲಿ ಸಭೆ ಮತ್ತು ಸಮಾರಂಭಗಳಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ರಂಗೋಲಿ ಬಿಡಿಸುವಿಕೆ ಕರೋನ ಸಮಯದಲ್ಲಿ ತಮ್ಮ ಮನೆಯ ಹಾಲ್ ಪೂರ್ತಿ ಅದ್ಭುತವಾದ ರಂಗೋಲಿಯನ್ನು ಬಿಡಿಸುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದ್ದಂತೂ ಸುಳ್ಳಲ್ಲ. ನಂತರದ ದಿನಗಳಲ್ಲಿ ಸಂಸ್ಕಾರ ಭಾರತಿಯ ವತಿಯಿಂದಲೇ ಶ್ರೀ ವರ್ಮ ಅವರ ಪರಿಚಯವಾಗಿ ಅವರಿಂದ ಪ್ರೇರಣೆ ಪ್ರೋತ್ಸಾಹದ ಜೊತೆಗೆ ಒಬ್ಬ ಉತ್ತಮ ಕಲಾವಿದೆಯಾಗಲು ಬೇಕಾಗುವ ಸಲಹೆಗಳು ಮತ್ತು ತಂತ್ರಗಳು ದೊರೆತಿದ್ದಲ್ಲದೇ ಆವರ online & offline ತರಗತಿಗಳಲ್ಲಿ ಕೆಲ ಕಾಲ ಆಭ್ಯಾಸ ಮಾಡುವ ಸುಯೋಗ ಶ್ರೀಮತಿ ಅರ್ಚನಾ ಅವರಿಗೆ ದೊರೆತಿದ್ದ ಆಕೆಯ ಪೂರ್ವಜನ್ಮದ ಸುಕೃತವೇ ಸರಿ. ಹೀಗೆ ಗುರು ಶಿಷ್ಯೆಯರ ಸಂಬಂಧ, ಅನುಬಂಧವಾಗುವಷ್ಟರಲ್ಲೇ ಅಕಾಲಿಕವಾಗಿ ಆಗಲಿದ ಶ್ರೀನಿವಾಸರು ಬರೆದ ಶ್ರೀನಿವಾಸರ ಚಿತ್ರಕ್ಕೆ, ನಾರಾಯಣ ಭಟ್ಟರ ಸುಪುತ್ರಿ, ಶ್ರೀರಾಮನ ಧರ್ಮಪತ್ನಿಯಾಗಿ, ಶ್ರೀನಿವಾಸನ ರಂಗೋಲಿಯನ್ನೇ ಬಿಡಿಸಿ ಶ್ರದ್ದಾಂಜಲಿಯನ್ನು ಅರ್ಪಿಸುವ ಆಲೋಚನೆ ಮಾಡಿ ಅದನ್ನು ಸಂಸ್ಕಾರ ಭಾರತೀ ಉತ್ತರ ಸಮಿತಿ ತಂಡದವರಿಗೆ ತಿಳಿಸಿದ ತಕ್ಷಣವೇ ಅದಕ್ಕೆ ಸ್ಪಂದಿಸಿ ವಿದ್ಯಾರಣ್ಯಪುರದ ರಕ್ಷಣಾ ಬಡಾವಣೆಯಲ್ಲಿರುವ ಶಕ್ತಿಗಣಪತಿ ದೇವಾಲಯದ ಪ್ರವಚನ ಮಂದಿರದಲ್ಲಿ ರಂಗೋಲಿ ಬಿಡಿಸಲು ಅನುವು ಮಾಡಿಕೊಡಿಸಿತು. ಹೀಗೆ ಶಿವರಾತ್ರಿಯಂದು ಆರಂಭಗೊಂಡ ತಿರುಪತಿ ವೆಂಕಟರಮಣ ರಂಗೋಲಿ ಸುಮಾರು 12×24 ಆಡಿ ಅಗಲ ಮತ್ತು ಉದ್ದದ 90 ಘಂಟೆಗಳ ಪರಿಶ್ರಮದೊಂದಿಗೆ ಅದ್ಭುತವಾಗಿ ಮೂಡಿಬರುತ್ತಿದ್ದಂತೆಯೇ 26.02.23ರಂದು ಬೆಳಿಗ್ಗೆ 10ಘಂಟೆಗೆ ಅದೇ ಸ್ಥಳದಲ್ಲಿ ಶ್ರೀ ಬಿ.ಕೆ.ಎಸ್. ವರ್ಮ ಅವರಿಗೆ ಸಂಸ್ಕಾರ ಭಾರತೀ ಯ ಉತ್ತರ ಸಮಿತಿ ವತಿಯಿಂದ ಸಂಸ್ಮರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಕಾರ್ಯಕ್ರಮಕ್ಕೆ ಸಂಸ್ಕಾರ ಭಾರತೀಯ ಕಡೆಯಿಂದ ಹೆಸರಾಂತ ಚಲನಚಿತ್ರ ನಟರಾದ ಶ್ರೀ. ಸುಚೀಂದ್ರಪ್ರಸಾದ್ ಅವರಲ್ಲದೇ ಶ್ರೀ ರಾಮಚಂದ್ರ, ಶ್ರೀ ಆಶೋಕ್ ಕುಮಾರ್ , ಶ್ರಿ ಜಯಸಿಂಹ, ಅನಂತಕೃಷ್ಣರು ಉಪಸ್ಥಿತರಿದ್ದರೆ, ಬಿ.ಕೆ.ಎಸ್ ವರ್ಮರವರ ಸುಪುತ್ರ ಶ್ರೀ ಪ್ರದೀಪ್ ವರ್ಮ ಮತ್ತು ಅವರ ಧರ್ಮಪತ್ನಿ ಮತ್ತು ಖ್ಯಾತ ಮರಳು ಕಲೆಯ ಕಲಾವಿದ ಶ್ರೀ ರಾಘವೇಂದ್ರ ಹೆಗಡೆಯವರು ಉಪಸ್ಥಿತರಿದ್ದರು. ಕಾರ್ಯಕ್ರಮವು ಸಂಸ್ಕಾರ ಭಾರತೀ ಕರ್ನಾಟಕ ಪ್ರಾಂತ ಚಿತ್ರ ವಿಧಾ ಸಹಸಂಯೋಜಕರಾದ ಶ್ರೀ ನರಸಿಂಹಮೂರ್ತಿಯವರ ಅತ್ಯಂತ ಸರಳ ಮತ್ತು ಸುಂದರವಾದ ನಿರೂಪಣೆಯೊಂದಿಗೆ ಸಭಾಂಗಣದಲ್ಲಿ ಭವ್ಯವಾದ ರಂಗೋಲಿಯ ಒಂದು ಬದಿಯಲ್ಲಿದ್ದ ಶ್ರೀ ವರ್ಮಾರವರ ಬಳಿ ಮುಖ್ಯ ಅತಿಥಿಗಳ ದೀಪಪ್ರಜ್ವಲನೆ ಮತ್ತು ನೆರೆದಿದ್ದ ಎಲ್ಲರ ಪುಷ್ಪಾರ್ಚನೆಯೊಂದಿಗೆ ಆರಂಭವಾದ ನಂತರ, ತಮ್ಮ ಮತ್ತು ತಮ್ಮ ಗುರುಗಳ ಒಡನಾಟದ ಬಗ್ಗೆ ಅತ್ಯಂತ ಮನೋಜ್ಞವಾಗಿ ಶ್ರೀ ರಾಘವೇಂದ್ರ ಹೆಗಡೆಯವರು ನೆರೆದಿದ್ದವರ ಬಳಿ ಹಂಚಿಕೊಂಡರು.
ಸಾಮಾನ್ಯವಾಗಿ ಬಹುತೇಕ ಕಲಾವಿದರು ತಮ್ಮ ಎಲ್ಲಾ ಅನುಭವಗಳನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುವುದಿಲ್ಲ. ಕೆಲವು ತಂತ್ರಗಳನ್ನು ವಿಶೇಷವಾಗಿ ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ ವರ್ಮಾರವರು ತಮ್ಮೆಲ್ಲಾ ಅನುಭವಗಳು ಮತ್ತು ತಂತ್ರಗಳನ್ನು ತಮ್ಮ ಶಿಷ್ಯಂದಿರಿಗೆ, ಪರಿಚಿತರಿಗೆ ಮತ್ತು ಉದಯೋನ್ಮುಖ ಕಲಾವಿದರುಗಳಿಗೆ ಸಂತೋಷದಿಂದ ಧಾರೆ ಎರೆಯುತ್ತಿದ್ದದ್ದಲ್ಲದೇ, ವೃತ್ತಿ ಮತ್ತು ಪ್ರವೃತ್ತಿಗಳನ್ನು ಹೇಗೆ ನಡೆಸಿಕೊಂಡು ಹೋಗಬೇಕು. ಕಲೆಯನ್ನೇ ವೃತಿಯನ್ನಾಗಿ ಮಾಡಿಕೊಂಡವರು ಕಲೆಯಿಂದ ಯಾವ ರೀತಿಯಲ್ಲಿ ತಮ್ಮ ಜೀವನವನ್ನು ನೆಮ್ಮದಿಯಾಗಿ ನಡೆಸಿಕೊಂಡು ಹೋಗಬಹುದು? ಕಲಾವಿದರುಗಳು ತಮ್ಮ ಕಲಾರಸಿಕರು ಮತ್ತು ಗ್ರಾಹಕರ ಬಳಿ ಹೇಗೆ ತಮ್ಮ ಕಲಾಕೃತಿಗೆ ಬೆಲೆಯನ್ನು ಕಟ್ಟಬೇಕು? ಕೇವಲ ಬಾಹ್ಯಜಗತ್ತಲ್ಲದೇ, ಕುಟುಂಬದ ಸದಸ್ಯರು ಅದರಲ್ಲೂ ಕುಟುಂಬವನ್ನು ನಿರ್ವಹಿಸುವ ತಾಯಿ ಮತ್ತು ಮಡದಿಯೊಂದಿಗೆ ಹೇಗೆ ನಡೆದುಕೊಂಡು ಹೋಗಬೇಕು ಎಂಬುವಂತಹ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ವರ್ಮರವರು ತಿಳಿಸಿಕೊಡುತ್ತಿದ್ದ ರೀತಿಯನ್ನು ನೆನೆದು ಭಾವುಕರಾದರು.
ಬಹುಶಃ ಇಡೀ ಪ್ರಂಪಂಚದಲ್ಲಿ ಸಭಾಂಗಣದಲ್ಲಿ ಸಭಿಕರೆಲ್ಲರ ಮುಂದೇ ನೇರವಾಗಿ ನಾನಾ ರೀತಿಯ ಪರಿಕರಗಳನ್ನು ಬಳಸಿಕೊಂಡು ಕ್ಷಣಾರ್ಧದಲ್ಲಿ ಚಿತ್ರಗಳನ್ನು ಬಿಡಿಸುವಂತಹ ಕಲೆಯನ್ನು ಆವಿಷ್ಕರಿಸಿದವರೇ ಶ್ರೀ ವರ್ಮರವರು ಎಂದು ಹೇಳಿದ್ದಲ್ಲದೇ, ಶತಾವಧಾನಿ ಗಣೇಶ್ ಅವರ ಸಾಂಗತ್ಯದಲ್ಲಿ ಅವರು ಅವಧಾನದಲ್ಲಿ ತೊಡಗಿಕೊಂಡರೆ ಅವರ ಸರಿಸಮನಾಗಿ ಕಲಾವಧಾನಿಗಳಾಗಿ ಶ್ರೀ ವರ್ಮಾರವರು ಪ್ರಸಿದ್ಧರಾದರು. ಚಿತ್ರವನ್ನು ಬಿಡಿಸುವಾಗ ಅತ್ಯಂತ ಶಿಸ್ತುಬದ್ಧವಾಗಿ ತಮ್ಮ ಶುಭ್ರವಸ್ತ್ರಕ್ಕೆ ಒಂದು ಚೂರೂ ಬಣ್ಣ ತಗಲುಸಿಕೊಳ್ಳದೇ ಅತ್ಯಂತ ಮನೋಜ್ಞವಾಗಿ ಚಿತ್ರ ಬಿಡಿಸುತ್ತಿದ್ದದ್ದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಲ್ಲದೇ, ಕಲಾವಿದರ ಕೃತಿಗಳು ಕೇವಲ ಸಭಾಂಗಣದಲ್ಲಿ ಪ್ರೇಕ್ಷಕರ ಮುಂದೆಯಷ್ಟೇ ಸೀಮಿತವಾಗಿ ಬಿಟ್ಟಲ್ಲಿ ಉತ್ಸವ ಮೂರ್ತಿ ಸುತ್ತಾಡಿದಷ್ಟೂ ಮೂಲ ಮೂರ್ತಿಯ ಪ್ರಭಾವ ಕಡಿಮೆಯಾಗುತ್ತದೆ ಎನ್ನುವಂತಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಕಲಾವಿದರುಗಳು ತಮ್ಮ ಮನೆಗಳಲ್ಲಿ ನಿರಂತವಾಗಿ ನಾನಾರೀತಿಯ ಕಲಾಕೃತಿಗಳನ್ನು ಬಿಡಿಸುವಂತಾಗಬೇಕು ಎನ್ನುತ್ತಿದ್ದರಲ್ಲದೇ, ತಮಗೆ ಸಿಕ್ಕ ಪ್ರತಿಯೊಬ್ಬ ಕಲಾವಿದರುಗಳಿಗೂ ಒಂದೊಂದು ಕೆಲಸ ಕಾರ್ಯಗಳನ್ನು ಕೊಟ್ಟು ಬಾರಿ ಬಾರಿ ಅವರುಗಳು ತಾವು ನೀಡಿದ ಕೆಲಸವನ್ನು ಹೇಗೆ ಮಾಡುತ್ತಿದ್ದಾರೆ ಎಂದು ವಿಚಾರಿಸುತ್ತಿದ್ದ ರೀತಿ ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ ಎಂದು ತಮ್ಮ ಗುರುಗಳನ್ನು ಕೊಂಡಾಡಿದರು.
ಸದಾಕಾಲವೂ ಜನರೇ ಜನರೇಟರ್ ಅವರೇ ತಮ್ಮ ಶಕ್ತಿ ಎಂದು ಹೇಳುತ್ತಿದ್ದದ್ದನ್ನು ಸ್ಮರಿಸಿದ ರಾಘವೇಂದ್ರರು, ಕಲಾವಿದರುಗಳಿಗೆ ತಮ್ಮ ಕಲಾಕೃತಿ ಮೆರವಣಿಗೆಯಲ್ಲಿ ಹೋಗುವಾಗ ಆಗುವ ಆನಂದಕ್ಕೆ ಎಣೆ ಇಲ್ಲಾ ಎನ್ನುವುದಕ್ಕೆ ಸ್ಮರಿಸಿದ ಪ್ರಸಂಗ ನಿಜಕ್ಕೂ ರೋಮಾಂಚನವಾಯಿತು. ಕೆಲವು ವರ್ಷಗಳ ಹಿಂದೆ ಚನ್ನೈನಿಂದ ವರ್ಮರವರಿಗೆ ಕರೆ ಮಾಡಿದ ಕಲಾರಸಿಕರು ತಮ್ಮನ್ನು ಶಿವಾಜಿರಾವ್ ಎಂದು ಪರಿಚಯಿಸಿಕೊಂಡು ವರ್ಮಾರವರು ಬೆಂಗಳೂರಿನ ಹನುಮಂತ ನಗರದಲ್ಲಿ ಬಂಡೆಗಳ ಮೇಲೆ ಚಿತ್ರಗಳನ್ನು ಬಿಡಿಸುತ್ತಿದ್ದಾಗ, ತಾವೂ ಸಹಾ ಪೇಲೆಟ್ ಹಿಡಿದುಕೊಂಡು ವರ್ಮಾವರವರಿಗೆ ಸಹಕರಿಸಿದ್ದಾಗಿ ಹೇಳಿದಾಗ, ಕ್ಷಮಿಸಿ ನನ್ನ ಜೊತೆ ನೂರಾರು ಜನರು ಸಹಕರಿಸಿದ್ದಾರೆ. ಹಾಗಾಗಿ ತಮ್ಮ ನೆನಪಾಗುತ್ತಿಲ್ಲಾ ಎಂದು ನಯವಾಗಿ ಹೇಳಿದಾಗ, ಆ ಕಡೆಯಿಂದ ಕರೆ ಮಾಡುತ್ತಿದ್ದ ವ್ಯಕ್ತಿ, ಹೌದು ನಿಜ ಆಗ ನಾನು ಹೆಚ್ಚು ಜನರಿಗೆ ಪರಿಚಯವಿರಲಿಲ್ಲ. ಈಗ ಜನರು ನನ್ನನ್ನು ರಜನೀಕಾಂತ್ ಎಂದು ಗುರುತಿಸುತ್ತಾರೆ ಎಂದಾಗ, ಒಂದು ಕ್ಷಣ ಅವಾಕ್ಕಾದ ವರ್ಮರು ಓಹೋ! ನೀವು ನನಗೆ ಸಹಾಯ ಮಾಡಿದ್ದಿರೇ ಎಂದು ಭಕ್ತಿ ಪೂರ್ವಕವಾಗಿ ವಂದಿಸಿ ಅವರಿಬ್ಬರ ಸ್ನೇಹದ ಕುರುಹುವಾಗಿಯೇ ರಜನೀಕಾಂತರು ಚನ್ನೈನಲ್ಲಿ ನಿರ್ಮಿಸಿದ್ದ ರಾಘವೇಂದ್ರ ಕಲ್ಯಾಣ ಮಂಟಪಕ್ಕಾಗಿ ವರ್ಮಾರವರ ಕುಂಚದಲ್ಲಿ ಅರಳಿದ ಶ್ರೀ ರಾಘವೇಂದ್ರ ಸ್ವಾಮಿಗಳ ಭವ್ಯವದ ಚಿತ್ರವನ್ನು ಚನ್ನೈಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಮೆರವಣಿಗೆ ಮಾಡಿಕೊಂಡು ತೆಗೆದುಕೊಂಡು ಹೋಗಿ ಅನಾವರಣ ಮಾಡಿದ್ದನ್ನು ನೆನಪಿಸಿಕೊಂಡರು. ಅದೇ ರೀತಿ ತೆಲುಗು ಚಿತ್ರರಂಗದ ಮಹಾನ್ ಹಾಸ್ಯನಟ ಬ್ರಹ್ಮಾನಂದರಿಗೂ ಶ್ರೀನಿವಾಸರ ಚಿತ್ರವನ್ನು ಬಿಡಿಸಿಕೊಟ್ಟಿದ್ದರ ನೆನಪಿಗಾಗಿ ಬ್ರಹ್ಮಾನಂದರ ವರ್ಮಾರವರ ಚಿತ್ರವನ್ನು ಬಿಡಿಸಿಕೊಟ್ಟಿದ್ದನ್ನು ಸ್ಮರಿಸಿಕೊಂಡರು.
ಇವೆಲ್ಲದರದ ನಡುವೆ ವರ್ಮರವರು ಅಗಲಿದ ನಂತರ ಅವರ ಹೆಸರಿನಲ್ಲಿ ಅನೇಕರು ತಮ್ಮ ತಮ್ಮ ವಿಚಾರ ಧಾರೆಗಳನ್ನು ಹರಿಬಿಡುವುದು ಗುರುಗಳಿಗೆ ಮಾಡುವ ಅಪಚಾರ ಎಂದು ವಿಷಾಧ ವ್ಯಕ್ತ ಪಡಿಸಿದರು. ವರ್ಮಾರವರು ಹಾಗಿದ್ದರು. ಹೀಗಿದ್ದರು. ಅವರಿಗೆ ಅಂತಹ ಪ್ರಶಸ್ತಿಯ ಮೇಲೆ ಆಸೆ ಇತ್ತು. ಅವರಿಗೆ ಈ ಪ್ರಶಸ್ತಿ ಬಾರದೇ ಹೋಗಿದ್ದಕ್ಕೆ ವಿಷಾಧವಿತ್ತು ಎಂಬೆಲ್ಲಾ ವಿಚಾರಗಳನ್ನು ಹರಿಬಿಡುವವರಿಗೆ ಮಾರ್ಮಿಕವಾಗಿ ಎಚ್ಚರಿಕೆ ನೀಡಿದರು.
ರಾಘವೇಂದ್ರ ನಂತರ ವರ್ಮರವರ ಮಗ ಪ್ರದೀಪ್ ವರ್ಮರವರು ತಮ್ಮ ತಂದೆಯವರ ನೆನಪನ್ನು ಮೆಲುಕು ಹಾಕುತ್ತಾ ಅತ್ಯಂತ ಭಾವುಕರಾದ ಕ್ಷಣ ನಿಜಕ್ಕೂ ಅಲ್ಲಿ ನೆರೆದಿದ್ದ ಅನೇಕರ ಕಣ್ಣಂಚಿನಲ್ಲಿ ನೀರನ್ನು ತರಿಸಿತು ಎಂದರೂ ತಪ್ಪಾಗದು. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಅಂತಹ ಶ್ರೇಷ್ಟ ಕಲಾವಿದರ ಮಗನಾಗಿ ಅವರಿಂದ ಹೆಚ್ಚಾಗಿ ಕಲಿಯಲಿಲ್ಲವಲ್ಲಾ! ಎಂಬ ಬೇಸರ ವ್ಯಕ್ತಪಡಿಸಿದರೂ, ಅವರ ಮಗನಾಗಿ ಜನಿಸಿದ್ದಕ್ಕಾಗಿ ಹೆಮ್ಮೆ ಇದೆ ಎಂದು ಹೇಳಿದರು. ಶ್ರೇಷ್ಠ ಕಲಾವಿದರಾಗಿ ನಾಡಿಗೆ ಪರಿಚಿತವಾಗಿರುವ ವರ್ಮರವರು ಒಬ್ಬ ಹೇಗೆ ಒಬ್ಬ ಶ್ರೇಷ್ಠ ತಂದೆಯಾಗಿದ್ದರು ಎಂಬುದಕ್ಕೆ ತಿಳಿಸಿದ ಪ್ರಸಂಗ ಬಲು ರೋಚಕವಾಗಿದ್ದಲ್ಲದೇ ಕಲಾವಿದರುಗಳು ಸದಾಕಾಲವೂ ಉಳಿದವರಿಗಿಂತಲೂ ಹೇಗೇ ವಿಭಿನ್ನವಾಗಿ ಇರುತ್ತಾರೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿತ್ತು. ಪ್ರದೀಪರು ಬೆಂಗಳೂರಿನ ಮಾಗಡಿ ರಸ್ತೆಯ ಜನಸೇವ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾಗ ಪರೀಕ್ಷೆಯಲ್ಲಿ ಫೇಲ್ ಆದ ಅಂಕಪಟ್ಟಿ ನೇರವಾಗಿ ಮನೆಗೆ ತಲುಪಿದಾಗ ಮನೆಯಲ್ಲಿ ಒಂದು ರೀತಿಯ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಹೊರಗೆ ಆಟವಾಡಲು ಹೋಗಿದ್ದ ಪ್ರದೀಪ್ ಮನೆಗೆ ಬಂದ ಕೂಡಲೇ ವರ್ಮಾರವರು ಪ್ರದೀಪ್ ತಾವು ಫೇಲ್ ಆದ ಸುದ್ದಿ ಕೇಳಿ ಇಂದು ಸರಿಯಾದ ಶಿಕ್ಷೆ ಕಾದಿರುತ್ತದೆ ಎಂದು ಭಾವಿಸಿರುವಾಗಲೇ, ತಮ್ಮ ಮನಗನ್ನು ಬೆನ್ನ ಹಿಂದೆ ಎಳೆದುಕೊಂಡು ಮನೆಯಲ್ಲಿ ಇರುವವರು ಯಾರೂ ಸಹಾ ಅವನಿಗೆ ಏನೂ ಹೇಳಬಾರದು ಎಂದು ತಾಕೀತು ಮಾಡಿ ಮಗನನ್ನು ತಮ್ಮ ಕೊಠಡಿಗೆ ಕರೆದುಕೊಂಡು ಚಿಲುಕ ಹಾಕಿದಾಗ ಪ್ರದೀಪ ಎದೆಯ ಬಡಿತ ಹೆಚ್ಚಾಗ ತೊಡಗಿದ್ದಲ್ಲದೇ ಅವರಿಗೇ ಅರಿವಿಲ್ಲದಂತೆ ಧಾರಾಕಾರವಾಗಿ ಕಣ್ಣೀರು ಸುರಿಯತೊಡಗಿದ್ದನ್ನು ನೋಡಿದ ವರ್ಮರವರು ಇದ್ದಕ್ಕಿದ್ದಂತೆಯೇ ನಗಲು ಆರಂಭಿಸಿದ್ದನ್ನು ಕಂಡ ಮಗನಿಗೆ ಮತ್ತಷ್ಟೂ ಭಯವಾಗಿ ಅಪ್ಪನಿಂದ ಇನ್ನೇ ಜ್ವಾಲಾಮುಖಿ ಸ್ಪೋಟಗೊಳ್ಳಲಿದೇ ಎಂದೇ ನಿರೀಕ್ಷಿಸಿರುವಾಗ, ಚಿನ್ನಾ ಯಾಕೋ ಅಳ್ತಾ ಇದ್ಯಾ? ಎಲ್ಲರೂ 9ನೇ ಕ್ಲಾಸಿನಿಂದ 10ನೇ ಕ್ಲಾಸಿಗೆ ಹೋಗಿದ್ದಾರೆ ಆದರೆ ಅವರ್ಯಾರಿಗೂ ಫೇಲ್ ಆದ ಅನುಭವವವೇ ಗೊತ್ತಿಲ್ಲ. ಅವರೆಲ್ಲಾ 9ನೇ ತರಗತಿಯನ್ನು ಕೇವಲ ಒಂದು ಬಾರಿ ಮಾತ್ರಾ ಓದುವ ಅವಕಾಶ ದೊರೆತರೆ ನಿನಗೆ ಮಾತ್ರಾ 9ನೇ ತರಗತಿಯನ್ನು ಎರಡೆರಡು ಬಾರಿ ಓದುವ ಸುವರ್ಣಾವಕಾಶ ದೊರೆತಿರುವ ಕಾರಣ ನೀನು ವಿಷಯ ತಜ್ಞನಾಗಬಹುದು. ಈಗ ಆದ ತಪ್ಪನ್ನು ಇನ್ನೆಂದೂ ಮಾಡಬೇಡ ಇನ್ನು ಮುಂದೆ ಚೆನ್ನಾಗಿ ಓದಬೇಕು ಎಂದು ನಯವಾಗಿ ಮಗನ ಕಣ್ಣೊರೆಸಿ ಬೆನ್ನು ತಟ್ಟಿದ ಪರಿಣಾಮ ಅದೇ ಪ್ರದೀಪ್ ಮುಂದೆ 10ನೇ ತರಗತಿಯಲ್ಲಿ ಇಡೀ ಶಾಲೆಗೆ ಮೊದಲಿಗನಾಗಿ ಬರುವಂತಾಗಿದ್ದು ಈಗ ಇತಿಹಾಸ. ಆಂದು ಆ ಕ್ಷಣದಲ್ಲಿ ಅಪ್ಪಾ ಹೊಡೆದು ಬಿಟ್ಟಿದ್ದಲ್ಲಿ ಅದರ ನೋವು ಕೆಲವು ಕ್ಷಣಗಳ ನಂತರ ಮಾಯವಾಗಿ ಬಿಡುತ್ತಿತ್ತು ಆದರೆ ಆವರು ದೈಹಿಕವಾಗಿ ಹೊಡೆಯದೇ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಕೊಟ್ಟ ಪೆಟ್ಟು ಜೀವನ ಪೂರ್ತಿ ಅಂತಹ ತಪ್ಪು ಮಾಡದಂತೆ ಎಚ್ಚರಿಸುತ್ತಿರುತ್ತದೆ ಎಂದು ಹೇಳಿದ್ದದ್ದು ನಿಜಕ್ಕೂ ಎಲ್ಲಾ ಪೋಷಕರಿಗೂ ಮತ್ತು ಬೆಳೆಯುವ ಮಕ್ಕಳಿಗೂ ಪ್ರೇರಣಾದಾಯಕವಾಗಿದೆ.
ತಾವು ಎಷ್ಟೇ ದೊಡ್ಡ ಕಲಾವಿದರಾದರೂ ಸದಾಕಾಲವೂ ಒಂದಲ್ಲಾ ಒಂದು ಕೆಲಸದಲ್ಲೇ ನಿರತರಾಗಿರುತ್ತಿದ್ದ ವರ್ಮರವರಿಗೆ ತಮ್ಮ 75ನೇ ವರ್ಷದ ಜನ್ಮದಿನವನ್ನು ಎಲ್ಲರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳಬೇಕು ಎಂಬ ಆಸೆ ಇತ್ತಂತೆ. ಅದಕ್ಕೆ ಪೂರಕವಾಗಿ ಮನೆಯವರೂ ಸಹಾ ಸ್ಲಂದನೆ ಮಾಡಿದ್ದದ್ದು ಅವರಿಗೆ ಹೆಚ್ಚಿನ ಮುದನೀಡಿತ್ತಾದರೂ ಇತ್ತೀಚೆಗೆ ವಯೋಸಜವಾಗಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ತಮ್ಮ ಹುಟ್ಟು ಹಬ್ಬದ ಸಮಯಕ್ಕೆ ಚೇತರಿಸಿಕೊಳ್ಳಬೇಕೆಂಬ ಆಸೆ ಅವರಲ್ಲಿತ್ತು. ಅನೇಕ ಬಾರಿ ಚಿಕ್ಕ ಮಕ್ಕಳ ರೀತಿ ಔಷಧಿ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳಲು ರಚ್ಚೆ ಹಿಡಿದಾಗ, ನೀವು ಹೀಗೆ ಮಾತ್ರೆ ತೆಗೆದುಕೊಳ್ಳದೇ ಹೋದಲ್ಲಿ ನಿಮ್ಮ ಹುಟ್ಟು ಹಬ್ಬವನ್ನು ಮಾಡುವುದೇ ಇಲ್ಲಾ ಎಂದು ಮನೆಯವರು ಹೆದರಿಸಿದರೆ, ಹೇ.. ಬೇಡಾ ಬೇಡಾ. ನಾನು ಔಷಧಿ ತೆಗೆದುಕೊಳ್ಳುತ್ತೇನೆ ಎನ್ನುತ್ತಿದ್ದರಂತೆ. ಅದೇ ರೀತಿಯಲ್ಲಿ ಮನೆಯಲ್ಲಿ ಓಡಾಡುವಾಗ ಇಲ್ಲವೇ ಮನೆಯ ಮೆಟ್ಟಿಲುಗಳನ್ನು ಹತ್ತಲು ಆಯಾಸವಾದಾಗ, ಅವರೇ ಇಲ್ಲಾ ನನ್ನ ಹುಟ್ಟಿದ ಹಬ್ಬದ ಹೊತ್ತಿಗೆ ಸರಿಯಾಗಿ ಚೇತರಿಸಿಕೊಳ್ಳಬೇಕು. ನನಗೆ ಮೆಟ್ಟಿಲು ಹತ್ತುವ ಚೈತನ್ಯವಿದೇ ಎಂದು ತಮಗೆ ತಾವೇ ಸಮಾಧಾನ ಪಟ್ಟುಕೊಳ್ಳುತ್ತಿದ್ದದ್ದು, ಕಡೇ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದರೂ ತಾವು ಯಾವುದೋ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತೆ ಬಡಬಡಿಸುತ್ತಿದ್ದದ್ದನ್ನು ತಿಳಿಸಿದ್ದಲ್ಲದೇ, Restriction, Restriction ಬರೀ Restriction ನೀವೆಲ್ಲರೂ ನನ್ನ ಕೈಕಾಲುಗಳನ್ನು ಭಾರವಾಗಿ ಕಟ್ಟು ಹಾಕಿಬಿಟ್ಟಿದ್ದೀರಿ. ದಯವಿಟ್ಟು ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ. ನಾನು ಸ್ವಚ್ಚಂದವಾಗಿ ಹಾರಿಕೊಂಡು ನನ್ನೆಲ್ಲಾ ಅಳಿದದಿರುವ ಕೆಲಸಗಳನ್ನು ಮಾಡಿಕೊಂಡು ಬರುತ್ತೇನೆ. ದಯವಿಟ್ಟು ಈ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದದನ್ನು ನೆನೆದು ಭಾವುಕರಾದರು. ಅಂತಿಮವಾಗಿ ತಮ್ಮ ತಂದೆಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲಾ ಎನ್ನುವುದನ್ನು ನೆನೆಸಿಕೊಳ್ಳುವುದು ಕಷ್ಟ ಎನಿಸಿದರೂ, ಅರ್ಚನಾರಂತಹ ಅದ್ಭುತವಾದ ಕಲಾವಿದರುಗಳು ಈ ರೀತಿಯಾಗಿ ತಮ್ಮ ತಂದೆಯವರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸಿಡುತ್ತಾರೆ ಎಂದಿದ್ದಲ್ಲದೇ, ತಮ್ಮ ತಂದೆ ಮತ್ತು ಸಂಸ್ಕಾರ ಭಾರತಿಯ ಒಡನಾಟ, ತಮ್ಮ ತಂದೆಯವರ ಅಂತಿಮ ದಿನಗಳಲ್ಲಿ ಸಂಸ್ಕಾರ ಭಾರತೀಯ ಪ.ರಾ.ಕೃಷ್ಣಮೂರ್ತಿಯವರ ಸಹಕಾರ ಮತ್ತು ಈ ರೀತಿಯಾಗಿ ವೈಶಿಷ್ಟ್ಯವಾಗಿ ತಮ್ಮ ತಂದೆಯವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸಂಸ್ಕಾರ ಭಾರತಿ ತಂಡಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಕಾರ ಭಾರತೀ ಯ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷರಾದ ಶ್ರೀ ಸುಚೇಂದ್ರ ಪ್ರಸಾದ್ ಅವರು ಯಸ್ಮಿನ್ ಜೀವತಿ ಜೀವಂತಿ ಬಹವಃ ಸ ತು ಜೀವತಿ ಅಂದರೆ ವ್ಯಕ್ತಿಗಳು ತಾವು ಬದುಕಿದ್ದಾಗಲೇ ಇತರರನ್ನೂ ಬದುಕುವಂತೆ ಮಾಡುವುವುದೇ ಮನುಷ್ಯ ಧರ್ಮ ಎಂಬ ಅರ್ಥದ ಈ ಸುಭಾಷಿತದೊಂದಿಗೆ ತಮ್ಮ ಭಾಷಣವನ್ನು ಆರಂಭಿಸಿದ ಪ್ರಸಾದ್ ಅವರು ವರ್ಮಾರವರು ಮಾತ್ರಾ ತಮ್ಮ ದೇಹಾಂತ್ಯವಾದ ನಂತರವೂ ಇತರರನ್ನು ಬದುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ ಎಂದು ಅರ್ಚನಾರವರ ರಂಗೋಲಿಯನ್ನು ತೋರಿಸಿದರು. ಸಾಮಾನ್ಯವಾಗಿ ಪುರದ ಹಿತವನ್ನು ಕಾಪಾಡುವವರನ್ನು ಪುರೋಹಿತ ಎನ್ನುವಂತೆ ಕಲಾ ಪ್ರಕಾರದಲ್ಲಿ ಕಲೆ ಮತ್ತು ಕಲಾವಿದಗಗಳ ಹಿತವನ್ನು ಸದಾಕಾಲವೂ ಕಾಪಾಡುತ್ತಲೇ ಬಂದ ವರ್ಮಾರವರು ಅಸಮಾನ್ಯ ಕಲಾಪುರೋಹಿತ ಎಂದರೂ ತಪ್ಪಾಗದು ಎಂದರು. ತಮ್ಮ ಕೆಲೆಯ ಮುಖಾಂತರ ನಿರಂತರವಾಗಿ ದೇಶ ವಿದೇಶಗಳಲ್ಲಿ ತಮ್ಮ ಕಲಾ ನಿಕ್ಷೇಪವನ್ನು ವರ್ಮರವರು ಉಳಿಸಿ ಹೋಗಿದ್ದಾರೆ ಎನ್ನುವುದಕ್ಕಾಗಿಯೇ ಜನರು ಅವರಿಗೆ ಕುಂಚಬ್ರಹ್ಮ ಎಂಬ ಬಿರುದನ್ನು ಕೊಟ್ಟಿರುವುದನ್ನು ನೆನಪಿಸಿದರು. (ಇತ್ತೀಚಿಗೆ ಅನೇಕರು ತಮಗೆ ತಾವೇ ಆ ಬ್ರಹ್ಮ ಈ ಬ್ರಹ್ಮ ಎಂಬ ಬಿರುದು ಬಾವಲಿಗಳನ್ನು ಕೊಟ್ಟುಕೊಳ್ಳುವ ಸಂಸ್ಕೃತಿ ಹೆಚ್ಚಾಗಿರುವುದು ವಿಷಾಧನೀಯ) ಜಾತಸ್ಯ ಮರಣಂ ಧೃವಂ ಎನ್ನುವುದು ಜೀವನದ ಕಠುಸತ್ಯವಾದರೂ, ಬದುಕಿದ್ದಾಗ ಅವರು ಹೇಗೆ ಜೀವಿಸಿದರು ಎಂಬುವುದು ಬಹಳ ಮುಖ್ಯವಾಗುತ್ತದೆ. ವರ್ಮರವರು ಒಬ್ಬ ಉತ್ತಮ ಕಲಾವಿದರಾಗಿ ಒಬ್ಬ ಉತ್ತಮ ತಂದೆಯಾಗಿ ಎಲ್ಲರಿಗೂ ಪ್ರೇರಣಾದಾಯಕವಾಗಿದ್ದರು ಎಂದು ಶ್ಲಾಘಿಸಿದರು. ತಮ್ಮ ಅನಾರೋಗ್ಯದ ನಡುವೆಯೂ ಕೆಲವು ದಿನಗಳ ಹಿಂದೆ ಸಂಸ್ಕಾರ ಭಾರತಿಯ ಕಾರ್ಯಕ್ರಮವೊಂದಕ್ಕೆ ಆಗಮಿಸಿ ನಿಂತುಕೊಳ್ಳಲಾಗದೇ ಕುಳಿತುಕೊಂಡೇ ಚಿತ್ರವನ್ನು ಬಿಡಿಸಿಕೊಟ್ಟಿದ್ದ ಕಲೆಗಾಗಿಯೇ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಂತಹ ಸಂತ ಎಂದು ಬಣ್ಣಿಸಿ ಅವರು ಅಗಲಿದ್ದಾರೆ ಎನ್ನುವುದಕ್ಕಿಂತ ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಮೂಲಕ ಶಾಶ್ವತವಾಗಿ ಅವರನ್ನು ಜೀವಂತವಾಗಿರಿಸಬೇಕೆಂದು ತಿಳಿಸಿದರು. ಅದೇ ರೀತಿ ಅನೇಕ ಕಲಾವಿದರುಗಳು ಕಣ್ಣು ಕೋರೈಸುವ ಬಣ್ಣಗಳ ಬಳಕೆಯ ಮೂಲಕ ತಮ್ಮ ಕಲಾಕೃತಿಯನ್ನು ಮುನ್ನಲೆಗೆ ತರುವುದರ ಮಧ್ಯೆ, ಅರ್ಚನಾ ಶ್ರೀರಾಮ್ ಅವರು ತಮ್ಮ ಕಲಾಕೃತಿಗ ಅವಶ್ಯಕವಾಗಿದ್ದಷ್ಟೇ ಬಣ್ಣಗಳನ್ನು ಗೌಣವಾಗಿ ಬಳಸಿಕೊಂಡು ತನ್ನೊಳಗಿದ್ದ ಕಲಾವಂತಿಕಿಯಿಂದ ಕೃತಿಗೆ ಜೀವವನ್ನು ತುಂಬಿರುವುದನ್ನು ಶ್ಲಾಘಿಸಿದರು.
ಅಂತಿಮವಾಗಿ ಕಾರ್ಯಕ್ರಮವು ಮತ್ತೊಬ್ಬ ಹಿರಿಯ ಕಲಾವಿದರು ಮತ್ತು ಸಂಸ್ಕಾರ ಭಾರತಿಯ ದಕ್ಷಿಣ ಪ್ರಾಂತ ಚಿತ್ರವಿಧಾ ಸಂಯೋಜಕರಾದ ಶ್ರೀ ಶಂಕರಪ್ಪನರು ತಮ್ಮ ಮತ್ತು ಶ್ರೀ ವರ್ಮರವರ ಒಡನಾಡ ಮತ್ತು ತಮ್ಮ ಕಲಾ ಜೀವನದಲ್ಲಿ ವರ್ಮಾರವರ ಕೊಡುಗೆಯನ್ನು ಮುಕ್ತಕಂಠದಿಂದ ಹಾಡಿ ಹೊಗಳಿದ್ದಲ್ಲದೇ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿತರಾಗಿದ್ದ ಎಲ್ಲಾ ಗಣ್ಯರಿಗೂ ಮತ್ತು ನೆರೆದಿದ್ದ ಕಲಾರಸಿಕರಿಗೆ ಸಂಸ್ಕಾರ ಭಾರತೀ ವತಿಯಿಂದ ಧನ್ಯವಾದಗಳನ್ನು ಅರ್ಪಿಸಿ, ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದರಿಗೆ ಕೃತಜ್ಞತೆಗಳನ್ನು ತಮ್ಮ ವಂದನಾರ್ಪಣೆಯಲ್ಲಿ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಮುಗಿಸಿದರು.
ಎಲ್ಲಾ ಕಾರ್ಯಕ್ರಮಗಳಂತೆ ಸಭಾಂಗಣದಲ್ಲಿ ವೇದಿಗೆ, ಅದರ ಮೇಲೆ ಗಣ್ಯರು ಅವರ ಮುಂದೆ ಕುರ್ಚಿಗಳಲ್ಲಿ ಕುಳಿತ ಸಭಿಕರು ಜೊತೆಗೆ ಮೈಕಾಸುರನ ಹಾವಳಿ ಇದಾವುದೂ ಇಲ್ಲದೇ, ಬಹಳ ವಿಶಿಷ್ಟವಾಗಿ ಅರ್ಚನಾರವರು ತಮ್ಮ ಗುರುಗಳಾದ ಶ್ರೀ ಬಿ.ಕೆ.ಎಸ್. ವರ್ಮ ಅವರಿಗಾಗಿಯೇ ಬಿಡಿಸಿದ್ದಂತಹ ಶ್ರೀ ವೆಂಕಟೇಶ್ವರ ಸ್ವಾಮಿಯೇ ವಿಶೇಷವಾದ ಆಕರ್ಷಣೆಯಾಗಿ ಅದರ ಸುತ್ತಲೂ ಎಲ್ಲರೂ ಭಕ್ತಿಪೂರ್ವಕವಾಗಿ ನಿಂತು ಕೊಂಡೇ ಸಹಜ ರೀತಿಯಲ್ಲೇ ಇಡೀ ಕಾರ್ಯಕ್ರಮ ನಡೆದ್ದದ್ದು ಕಲಾರಸಿಕರ ಮನವನ್ನು ಗೆಲ್ಲುವಂತಹ ಯಶಸ್ವಿ ಕಾರ್ಯಕ್ರಮವಾಯಿತು. ಇಂತಹ ಅದ್ಭುತವಾದ ರಂಗೋಲಿ ವಿದ್ಯಾರಣ್ಯಪುರದ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಶಕ್ತಿ ಗಣೇಶನ ದೇವಸ್ಥಾನದಲ್ಲಿ ಇನ್ನೂ ಒಂದು ವಾರಗಳ ಕಾಲ ಹಾಗೆಯೇ ಪ್ರದರ್ಶನಕ್ಕೆ ಇರುವುದನ್ನು ಎಲ್ಲಾ ಕಲಾರಸಿಕರೂ ವೀಕ್ಷಿಸುವ ಮೂಲಕ ಉದಯೋನ್ಮುಖ ಕಲಾವಿದೆ ಶ್ರೀಮತಿ ಅರ್ಚನಾ ಶ್ರೀರಾಮ್ ಅವರಿಗೆ ಪ್ರೋತ್ಸಾಹ ನೀಡಿದಂತಾಗುವುದಲ್ಲದೇ, ನಮ್ಮೆಲ್ಲರನ್ನೂ ಅಗಲಿದ ಕುಂಚ ಬ್ರಹ್ಮ ಕಲಾ ತಪಸ್ವಿ ಶ್ರೀ ವರ್ಮರವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸಿದಂತಾಗುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ