ರಾಜಾಜಿ ನಗರ

ಬೆಂಗಳೂರು ನಗರ ಆಧುನಿಕವಾಗಿ ಎಷ್ಟೇ ಬೆಳೆದು ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಸರು ಪಡೆದಿದ್ದರೂ, ಬೆಂಗಳೂರಿನಲ್ಲಿರುವ ಕೆಲವು ಪ್ರದೇಶಗಳು ಇನ್ನೂ ತನ್ನ ಹಳೆಯ ಸಂಸ್ಕೃತಿ ಮತ್ತು ಸೊಗಡುಗಳನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡು ಬೆಂಗಳೂರಿನ ಪರಂಪರೆಯ ಅಸ್ಮಿತೆಯ ಭಾಗವಾಗಿರುವ ರಾಜಾಜಿನಗರದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ 4ನೇ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

rajaji

ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಎಂಟನೇ ಪಟ್ಟಾಭೀಷೇಕದ ಅಂಗವಾಗಿ ಬೆಂಗಳೂರಿನ ದಕ್ಷಿಣ ಭಾಗದದಲ್ಲಿ 20/08/1948ರಂದು ಭಾರತದ ಕೊನೆಯ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರಿಂದ ಶಂಕುಸ್ಥಾಪನೆಗೊಂಡು ಜಯನಗರ ಬಡಾವಣೆ ಉದ್ಘಾಟನೆಗೊಂಡು ಯಶಸ್ವಿಯಾದ ನಂತರ, ಮುಂದಿನ ವರ್ಷ ತಮ್ಮ ಒಂಭತ್ತನೇ ಪಟ್ಟಾಭಿಷೇಕದ ಅಂಗವಾಗಿ ಬೆಂಗಳೂರಿನ ಉತ್ತರದ ಭಾಗದಲ್ಲಿ ಮತ್ತೊಂದು ಕೈಗಾರಿಕೆ ಮತ್ತು ಮಧ್ಯಮವರ್ಗದ ಜನರು ವಾಸಿಸುವಂತಹ ಸುಂದರವಾದ ಯೋಜಿತವಾದ ಬಡಾವಣೆಯನ್ನು ನಿರ್ಮಾಣ ಮಾಡಲು ಅಂದಿನ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (CITB) ಅವರಿಗೆ ಆದೇಶ ನೀಡಿದ ಫಲವಾಗಿ ಕೇತಮಾರನಹಳ್ಳಿ, ಜೂನಹಳ್ಳಿ, ನಾಗಪುರ, ಶಿವನಹಳ್ಳಿ, ಸಾಣೇಗುರವನಹಳ್ಳಿಯ ಒಂದು ಭಾಗ, ಲಕ್ಷ್ಮೀನಾರಾಯಣ ಪುರ, ಸುಬ್ರಹ್ಮಣ್ಯನಗರ, ಮರಿಯಪ್ಪನ ಪಾಳ್ಯ ಸೇರಿದಂತೆ ಸುಮಾರು 1,000 ಎಕರೆ ಭೂಮಿಯನ್ನು ಕೈಗಾರಿಕಾ ಮತ್ತು ವಸತಿ ಪ್ರದೇಶಗಳಾಗಿ ವಿಂಗಡಿಸಲಾಯಿತು. ಮೊದಲನೆಯದು ಜವಳಿಗಾಗಿ 140 ಎಕರೆ, ಯಂತ್ರೋಪಕರಣಗಳಿಗೆ 220 ಎಕರೆ, ರಾಸಾಯನಿಕ ಸಸ್ಯಗಳಿಗೆ 100 ಎಕರೆ ಮತ್ತು ಆಹಾರ ಕ್ಷೇತ್ರಕ್ಕೆ 40 ಎಕರೆಗಳನ್ನು ಒಳಗೊಂಡಿತ್ತು. ಉಳಿದ 500 ಎಕರೆಯಲ್ಲಿ 1 ರಿಂದ 6ಬ್ಲಾಕ್ ಗಳನ್ನು ಒಳಗೊಂಡ ಸುಮಾರು 4,000 ವಸತಿ ಪ್ಲಾಟ್‌ಗಳನ್ನು ಅಂದಿನ ಕಾಲಕ್ಕೆ ಸುಮಾರು 50 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಯಿತು.

pi

ಜಯನಗರದ ಅಡಿಗಲ್ಲನ್ನು ಕನಕನ ಪಾಳ್ಯದ ಅಶೋಕಸ್ಥಂಭದ ಬಳಿ ನಿರ್ಮಾಣ ಮಾಡಿದರೆ, ಈ ಹೊಸಾ ಬಡವಾಣೆಯ ಅಡಿಗಲ್ಲನ್ನು ಕೇತಮಾರನಹಳ್ಳಿಯ ಆರಂಭದಲ್ಲಿ (ಕರ್ನಾಟಕ ಸೋಪ್ ಕಾರ್ಖಾನೆ ಮತ್ತು ಓರಿಯನ್ ಮಾಲ್ ಬಳಿ) 03/07/1949 ರಂದು ಮೈಸೂರಿನ ಮಹಾರಾಜರಾಗಿದ್ದ ಶ್ರಿ ಜಯಚಾಮರಾಜ ಒಡೆಯರ್ ತಮ್ಮ ಬಡಾವಣೆಯನ್ನು ಉಧ್ಘಾಟಿಸಿ, ಈ ಹೊಸಾ ಬಡಾವಣೆಗೆ ಜಯನಗರವನ್ನು ಉದ್ಘಾಟನೆ ಮಾಡಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಗಳ(ಜನರು ಪ್ರೀತಿಯಿಂದ ರಾಜಾಜಿ ಎಂದು ಕರೆಯುತ್ತಿದ್ದರು) 70ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ರಾಜಾಜಿ ನಗರ ಎಂದು ನಾಮಕರಣ ಮಾಡಿದರು.

kirloskar

ಹಾಗೆ ಅಡಿಗಲ್ಲನ್ನು ಹಾಕಿದ ಅಕ್ಕ ಪಕ್ಕದಲ್ಲೇ ಕರ್ನಾಟಕ ಸೋಪ್ ಕಾರ್ಖಾನೆ, ಕಿರ್ಲೋಸ್ಕರ್ ಎಲೆಕ್ಟ್ರಿಕಲ್ಸ್ ಮತ್ತು ಪಶ್ಚಿಮ ಬಂಗಾಳದ ಹೌರಾದಲ್ಲಿ 1920 ರಲ್ಲಿ ಹೆನ್ರಿ ವಿಲಿಯಂ ಪ್ರಾರಂಭಿಸಿದ್ದ ಗೆಸ್ಟ್ ಕೀನ್ ವಿಲಿಯಮ್ಸ್(GKW Ltd) ಎಂಬ ಭಾರತೀಯ ಎಂಜಿನಿಯರಿಂಗ್ ಸಂಸ್ಥೆಗಳು ಇದ್ದರೆ, ರಾಜಾಜಿನಗರ ಮತ್ತೊಂದು ಬದಿಯಲ್ಲಿ ಹೆಸರಾಂತ ಮಿರ್ನವ ಮಿಲ್ ಮತ್ತು ರಾಮ್ ಕುಮಾರ್ ಮಿಲ್ ಎಂಬ ಬಟ್ಟೆಯ ಗಿರಣಿಗಳು ಸರ್ಕಾರಿ ಕೆಲಸಕ್ಕಿಂತಲೂ ಈ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಪಡೆಯುವುದಕ್ಕಿಂತಲೂ ಹೆಚ್ಚಿನ ಸಂಬಳವವನ್ನು ತೆಗೆದುಕೊಳ್ಳುತ್ತಿದ್ದ ಕಾರಣ, ತಮ್ಮ ಹೆಣ್ಣು ಮಕ್ಕಳನ್ನು ನಾಮುಂದು ತಾಮುಂದು ಎಂದು ಮದುವೆ ಮಾಡಿಕೊಡಲು ಮುಂದಾಗುವಂತಹ ಉಚ್ಘ್ರಾಯ ಸ್ಥಿತಿಯನ್ನು ಹೊಂದಿತ್ತು. ಇದೇ ರಾಜಾಜಿನಗರ ಅಂತ್ಯ ಭಾಗದಲ್ಲಿ ಕೈಗಾರಿಕಾ ಎಸ್ಟೇಟ್ ಆರಂಭವಾಗಿ ಯಂತ್ರೋಪಕರಣಗಳ ಸಣ್ಣ ಪುಟ್ಟ ಕಂಪನಿಗಳು ಆರಂಭವಾಗಿ ಸಾವಿರಾರು ಜನರಿಗೆ ಉದ್ಯೋಗವನ್ನು ಕೊಡುವಂತಹ ಕೈಗಾರಿಕಾ ಕ್ಷೇತ್ರವಾಗಿಯೇ ಹೆಚ್ಚು ಪ್ರಖ್ಯಾತವಾಗಿತ್ತು.

MEI_polytechnic

ಹೀಗೆ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರುಗಳೇ ರಾಜಾಜಿನಗರದ 1 ರಿಂದ 6ನೇ ಬ್ಲಾಕ್ ಗಳ ಮಧ್ಯೆ ಹಂಚಿ ಹೋದ ಕಾರಣ, ರಾಜಾಜಿನಗರ ಬೆಂಗಳೂರಿನ ಮಧ್ಯಮ ವರ್ಗದವರಿಗೆ ಸ್ವರ್ಗ ಎನಿಸಿಕೊಂಡಿದ್ದರಲ್ಲಿ ಅತಿಶಯೋಕ್ತಿಯೇನಿಲ್ಲ. ಇಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಮತ್ತು ಅವರ ಕುಟುಂಬದ ಕ್ಷೇಮಕ್ಕಾಗಿಯೇ ಭಾರತದ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಯ ಅಡಿಯಲ್ಲಿ 2ನೇ ಬ್ಲಾಕಿನಲ್ಲಿ ESI ಆಸ್ಪತ್ರೆ ಆರಂಭವಾದರೆ, ಅಲ್ಲಿನ ಕೈಗಾರಿಕೆಗಳಿಗೆ ನುರಿತ ಕೆಲಸಗಾರರನ್ನು ಕೊಡುವ ಸಲುವಾಗಿ ITI & ಮತ್ತು ಸರ್ಕಾರಿ ಅನುದಾನಿತ MEI polytechnic ಆರಂಭವಾದವು. ಅದರ ಮುಂಭಾಗದಲ್ಲೇ ಇದ್ದ ರಾಮಮಂದಿರದ ಪಕ್ಕದಲ್ಲಿ ಮಕ್ಕಳ ಆಟಕ್ಕಾಗಿ ವಿಶಾಲವಾದ ಆಟದ ಮೈದಾನವೂ ಸಿಧ್ಧವಾಗಿ ಮಕ್ಕಳ ಸರ್ವಾಂಗೀಣ ಏಳಿಕೆಗೆ ಪೂರಕವಾಗುವಂತಹ ವ್ಯವಸ್ಥೆ ರಾಜಾಜಿನಗರದಲ್ಲಿ ಸಿದ್ಧವಾಯಿತು.

iskon_Temple

ಆಲದ ಮರ ಬೆಳೆದು ದೊಡ್ಡದಾಗಿ ಅದರ ಸುತ್ತಲೂ ಬಿಳಿಲುಗಳು ಬಿಟ್ಟು ಮರಕ್ಕೆ ಶಕ್ತಿ ಕೊಡುವಂತೆ ರಾಜಾಜಿನಗರ ಬೆಳೆಯ ತೊಡಗಿದಂತೆಯೇ ಅದರ ಅಕ್ಕ ಪಕ್ಕದಲ್ಲೇ ಬಸವೇಶ್ವರನಗರ, ಮಹಾಲಕ್ಷ್ಮಿಪುರ, ವಿಜಯನಗರ (ಹೊಸಳ್ಳಿ) ಸಹಾ ಅಗಾಧವಾಗಿ ಬೆಳೆದರೂ ತನ್ನ ಗ್ರಾಮೀಣ ಸೊಗದು ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡ ಪರಿಣಾಮವಾಗಿಯೇ ರಾಜಾಜಿನಗರದ ಸುತ್ತಮುತ್ತಲು ರಾಮಮಂದಿರ, ಗಣೇಶ ದೇವಸ್ಥಾನಗಳು, ಹನುಮಂತ ಮತ್ತು ರಾಘವೇಂದ್ರಸ್ವಾಮಿ ಮಠ ಶನೀಶ್ವರ ದೇವಸ್ಥಾನ (ನವರಂಗ್ ಸರ್ಕಲ್) ಕರುಮರಿಯಮ್ಮನ್ ದೇವಸ್ಥಾನ, ಇಸ್ಕಾನ್ ಶ್ರೀ ಕೃಷ್ಣ ದೇವಾಲಯ, ಮುತ್ಯಾಲಮ್ಮನ ದೇವಾಲಯದ ಜೊತೆಯಲ್ಲೇ 2ನೇ ಬ್ಲಾಕಿನಲ್ಲಿ ಅಸ್ಸಂಷನ್ ಚರ್ಚ್ ಇದ್ದರೆ, 4ನೆ ಬ್ಲಾಕಿನಲ್ಲಿ ಬೆಥೆಸ್ದ ಏ ಜಿ ಚರ್ಚ್ ಇದ್ದು ಸರ್ವಧರ್ಮಗಳಿಗೂ ಆಶ್ರಯ ತಾಣವಾಗಿದೆ. ಬೆಂಗಳೂರಿಗೆ ಹೊರವರ್ತುಲ ರಸ್ತೆಗಳು ಬರುವ ಮುನ್ನಾ ರಾಜಾಜಿನಗರದಿಂದ ವಿಜಯನಗಕ್ಕೆ ಹಾದು ಹೋಗುವ ಸುಮಾರು 8 ಕಿ.ಮಿ ಉದ್ದದ ಪಶ್ಚಿಮಕಾರ್ಡ್ ರಸ್ತೆಯೇ ಬೆಂಗಳೂರಿನ ಅತ್ಯಂತ ಉದ್ದದ ರಸ್ತೆಗಳಲ್ಲಿ ಒಂದಾಗಿತ್ತು ಎನ್ನುವುದು ಗಮನಾರ್ಹ. ಇದೇ ಕಾರ್ಡ್ ರಸ್ತೆಯ ಇಕ್ಕೆಲಗಳಲ್ಲಿಯೇ ಸರಿ ಸುಮಾರು 100ಕ್ಕೂ ಹೆಚ್ಚಿನ ಸಣ್ಣ ಮತ್ತು ದೊಡ್ಡ ದೊಡ್ಡ ಐಶಾರಾಮಿ ಕಲ್ಯಾಣ ಮಂಟಪಗಳು ಇದ್ದು ಬೆಂಗಳೂರಿನಲ್ಲೇ ಗರಿಷ್ಠ ಸಂಖ್ಯೆಯ ಕಲ್ಯಾಣ ಮಂಟಪಗಳನ್ನು ಹೊಂದಿರುವ ಪ್ರದೇಶ ಎಂಬ ಹೆಗ್ಗಳಿಯೂ ರಾಜಾಜಿನಗರಕ್ಕಿದೆ.

ರಾಜಾಜಿನಗರದ ಬಹುತೇಕ ರಸ್ತೆ ಮತ್ತು ವೃತ್ತಗಳಿಗೆ ಕನ್ನಡ ನಾಡಿನ ಖ್ಯಾತನಾಮರ ಹೆಸರುಗಳನ್ನು ಇಡುವ ಮೂಲಕ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿರುವುದಕ್ಕೆ ಉದಾಹರಣೆಯಾಗಿ ಮಹಾಕವಿ ಕುವೆಂಪು ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ – ವರಕವಿ ದ ರಾ ಬೇಂದ್ರೆ ರಸ್ತೆಯಾದರೆ, ವರನಟ ಡಾ.ರಾಜ್‌ಕುಮಾರ್ ರಸ್ತೆ, ಮೋದಿ ಆಸ್ಪತ್ರೆ ರಸ್ತೆ, ಗೊರೂರು ರಾಮಸ್ವಾಮಿ ಐಯ್ಯಂಗಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆಯ ಜೊತೆ ಭಾಷ್ಯಂ ವೃತ್ತವೂ ಸಹಾ ರಾಜಾಜಿನಗರದಲ್ಲಿದೆ.

vidyavardhaka

ಕೈಗಾರಿಕೆಗಳಂತೆ ಶೈಕ್ಷಣಿಕವಾಗಿಯೂ ರಾಜಾಜಿನಗರ ಹೆಸರುವಾಸಿಯಾಗಿದ್ದು ಅನೇಕ ಪ್ರಖ್ಯಾತ ಶಾಲೆ ಮತ್ತು ಕಾಲೇಜುಗಳು ಇಲ್ಲಿದ್ದು ಅವುಗಳಲ್ಲಿ ಪ್ರಮುಖವಾಗಿ ವಿದ್ಯಾ ವರ್ಧಕ ಸಂಘ, ವಿವೇಕಾನಂದ ಕಾಲೇಜು, ಈಸ್ಟ್-ವೆಸ್ಟ್ ಶಿಕ್ಷಣ ಸಂಸ್ಥೆಗಳು, ಶ್ರೀ ವಾಣಿ ಶಿಕ್ಷಣ ಕೇಂದ್ರ, ಕೆ.ಎಲ್.ಈ. ಸಮಾಜದ ನಿಜಲಿಂಗಪ್ಪ ಕಾಲೇಜು, ಬಸವೇಶ್ವರ ಶಾಲೆ ಮತ್ತು ಕಾಲೇಜು, ವೆಂಕಟ್ ಅಂತರ್ರಾಷ್ಟ್ರೀಯ ಪಬ್ಲಿಕ್ ಶಾಲೆ. ಶ್ರೀ ಅರಬಿಂದೊ ವಿದ್ಯಾ ಮಂದಿರ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಗಳು, ಕಾರ್ಮಲ್ ಹೈಸ್ಕೂಲ್, ಮರಿಯಪ್ಪ ಪ್ರಥಮ ದರ್ಜೆ ಕಾಲೇಜು ಮುಂತಾದವುಗಳಾಗಿವೆ.

navarajg

ಇನ್ನು ಅಲ್ಲಿನ ಜನರ ಮನೋರಂಜನೆಗಾಗಿ 30, 1961 ರಂದು ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ ಡಿ ಜತ್ತಿ ಅವರಿಂದ ಅಡಿಪಾಯ ಹಾಕಲ್ಪಟ್ಟು, ವಾಸ್ತುಶಿಲ್ಪಿ ಐಸಾಕ್ ವಿನ್ಸೆಂಟ್ ಅವರಿಂದ ವಿನ್ಯಾಸಗೊಂಡು, ಆಗಸ್ಟ್ 22, 1963 ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಎಸ್ ನಿಜಲಿಂಗಪ್ಪ ಅವರಿಂದ ಡಾ. ರಾಜ್‌ಕುಮಾರ್ ಅಭಿನಯದ ವೀರ ಕೇಸರಿ ಚಿತ್ರದ ಮೂಲಕ ಉದ್ಘಾಟಿಸಲ್ಪಟ್ಟ ನವರಂಗ್ ಚಿತ್ರಮಂದಿರ ಇಂದಿಗೂ ಅಲ್ಲಿನ ಹಿರಿಯರ ನೆಚ್ಚಿನ ತಾಣವಾಗಿದ್ದರೆ, ಸುಜಾತಾ ಟಾಕೀಸ್ ಮುಚ್ಚಿಹೋದ ನಂತರ, ಇಂದಿನ ಯುವಜನತೆಗಾಗಿ 2012ರಲ್ಲಿ ಕಿರ್ಲೋಸ್ಕರ್ ಕಂಪನಿ ಇದ್ದ ಜಾಗದಲ್ಲಿ ಓರಿಯಾನ್ ಮಾಲ್ ಆರಂಭವಾದರೆ, 2021ರಲ್ಲಿ ಮಿನರ್ವ ಮಿಲ್ ಇದ್ದ ಜಾಗದಲ್ಲಿ ಲುಲು ಮಾಲ್ ಆರಂಭವಾಗಿ ಅಲ್ಲಿರುವ ಮಲ್ಟಿಪ್ಲೆಕ್ಸ್ ಥಿಯೇಟರ್ಗಳಿಗೆ ಯುವ ಜನತೆಯ ಆಕರ್ಷಣೀಯವಾದ ತಾಣವಾಗಿದೆ.

gokul_veg

ಮರಿಯಪ್ಪನ ಪಾಳ್ಯದಲ್ಲಿರುವ ಜ್ಯೋತಿ ಬೇಕರಿಯಿಂದ ಆರಂಭವಾಗಿ, ನೂರಾರು ಹೋಟೆಲ್ ಮತ್ತು ಉಪಹಾರ ಗೃಹಗಳು ರಾಜಾಜಿನಗರದಲ್ಲಿದ್ದು ಅವುಗಳಲ್ಲಿ ಪ್ರಮುಖವಾಗಿ ನಂದಿನಿ ಪ್ಯಾಲೆಸ್, ಕೇಕ್ ಪ್ಯಾಲೆಸ್, ನಳಪಾಕ ಈಟ್‌-ಔಟ್, ಗೋಕುಲ್ ವೆಜ್, ಈಟ್‌-ಔಟ್, ನ್ಯೂ ಶಾಂತಿ ಸಾಗರ್,ಉತ್ತರ ದ್ರುವ, ಜಲ್ ಪಾನ್,ಹೊಟೆಲ್, ಸ್ವಾತಿ, ಕದಂಬ,ಗಂಗಾಸಾಗರ್, ವೈಶಿಷ್ಟ್ಯವಾದ ಬೇಕರಿ ಉತ್ಪನ್ನಗಳಿಗೆ ಹೆಸರುವಾಸಿಯಾದ ವಾರಿಯರ್ ಬೇಕರಿ ಮುಂತಾದವುಗಳು ದಕ್ಷಿಣ ಮತ್ತು ಉತ್ತರ ಭಾರತೀಯ ತಿನಿಸುಗಳನ್ನು ಉಣಬಡಿಸುತ್ತಿದ್ದರೆ, ಕೆಫೆ ಕಾಫಿ ಡೇ, ಚುಂಗ್ಸ್, ಟಮ್ಮೀಸ್, ಬಾರ್ಬೆಕ್ಯು ನೇಶನ್ ಮುಂತಾದವುಗಳು ಇಂದಿನ ಯುವಜನತೆಯ ಮೆಚ್ಚಿನ ಅಡ್ಡಾಗಳಾಗಿವೆ.

ESI

ESI ಆಸ್ಪತ್ರೆಯ ನಂತರ 1980 ರಲ್ಲಿ ಪದ್ಮಭೂಷಣ ಡಾ. ಎಂ.ಸಿ. ಮೋದಿ ಅವರಿಂದ ಶಿಬಿರ ಆಧಾರಿತವಾದ ಕಣ್ಣಿನ ಆಸ್ಪತ್ರೆಯಾಗಿ ಆರಂಭವಾದ ಮೋದಿ ಆಸ್ಪತ್ರೆ ಈಗ ಸುಸಜ್ಜಿತ ಆಸ್ಪತ್ರೆಯಾಗಿದ್ದರೆ, ಅದರ ಜೊತೆಯಲ್ಲಿಯೇ, ನಾರಾಯಣ ನೇತ್ರಾಲಯ, ಸಂತ ತೆರೇಸಾ ಆಸ್ಪತ್ರೆ (ಗುಡ್ಡೇ ಅಸ್ಪತ್ರೆ), ಡೈಯಾಕಾನ್ ಆಸ್ಪತ್ರೆ, ಅನನ್ಯ ಆಸ್ಪತ್ರೆ, ಕಣ್ವ ಡಯಾಗ್ನಾಸ್ಟಿಕ್ಸ್, ವರಲಕ್ಷ್ಮಿ ನರ್ಸಿಂಗ್ ಹೋಂ, ಸುಗುಣ ಆಸ್ಪತ್ರೆ, ಜಿಂಕ ನರ್ಸಿಂಗ್ ಹೋಂ, ಪನೆಸಿಯ ಆಸ್ಪತ್ರೆ ಮುಂತಾದ ಆಸ್ಪತ್ರೆಗಳು ಅಲ್ಲಿನ ಜನರ ಆರೋಗ್ಯವನ್ನು ಕಾಪಾಡಿಕೊಂಡು ಬರುತ್ತಿವೆ.

96_rootno

ಕೆಂಪೇಗೌಡ ಬಸ್ ನಿಲ್ಡಾಣದಿಂದ ಆರಂಭವಾಗಿ ಮತ್ತೇ ಅದೇ ಬಸ್ ನಿಲ್ದಾಣಕ್ಕೆ ಹಿಂದಿರುಗುವಂತಹ ಮೊತ್ತ ಮೊದಲ ರೌಂಡ್ ಟ್ರಿಪ್ ರೂಟ್ ನಂಬರ್ 96 ಅರಂಭವಾಗಿದ್ದೇ ರಾಜಾಜಿನಗರವನ್ನು ಪ್ರದಕ್ಷಿಣೆ ಹಾಕುತ್ತಾ ಜನರಿಗೆ ಸಾರಿಗೆ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿಯೇ ಎನ್ನುವುದು ಹೆಗ್ಗಳಿಗೆ. ಇಂದು ರಾಜಾಜಿನರಗದಲ್ಲಿ ಮೆಟ್ರೋ ಸಹಾ ತನ್ನ ಕಾರುಬಾರವನ್ನು ತೋರಿಸುತ್ತಿದೆ.

pustakamane

ಕನ್ನಡನಾಡಿನ ಅನೇಕ ಖ್ಯಾತ ನಾಮರು ರಾಜಾಜಿನಗರದಲ್ಲಿದ್ದು ಅವರುಗಳಲ್ಲಿ ಪ್ರಮುಖವಾದವರುಗಳೆಂದರೆ, ಗೊರೂರಿನಿಂದ ಬೆಂಗಳೂರಿಗೆ ಬಂದ ರಾಮಸ್ವಾಮಿ ಐಯ್ಯಂಗಾರರು ರಾಜಾಜಿನಗರದಲ್ಲೇ ಮನೆ ಮಾಡಿದ್ದರು, ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪರಾಗಿದ್ದ ಶ್ರೀ ವೀರಾಸ್ವಾಮಿ ಮತ್ತು ಅವರ ಮಗ ನಟ ನಿರ್ದೇಶಕ ನಿರ್ಮಾಪಕ ರವಿಚಂದ್ರನ್ ಅವರ ಮನೆ ರಾಜಕುಮಾರ್ ರಸ್ತೆಯಲ್ಲೇ ಇತ್ತು. ಗೌರೀ ಗಣೇಶ ಖ್ಯಾತಿಯ ನಿರ್ದೇಶಕ ಫಣಿ ರಾಮಚಂದ್ರ, ಅದೇ ರೀತಿ ಚಲನಚಿತ್ರರಂಗದಲ್ಲಿ ಪ್ರಾಧಾನ್ಯಕ್ಕೆ ಬರುವ ಮುನ್ನಾ ನವರಂಗ್ ಬಳಿಯ ರಾಕ್ ಲೈನ್ ಬಾರ್ ನಡೆಸುತ್ತಿದ್ದ ವೆಂಕಟೇಶ್ ನಂತರ ಖ್ಯಾತ ನಟ ಮತ್ತು ನಿರ್ಮಾಪರಾಗಿ ಪ್ರಸಿದ್ದಿ ಪಡೆದರು. ಪುಸ್ತಕಮನೆ ಎಂಬ ಹೆಸರಿನಲ್ಲಿ ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿ, ಸತತ ಐದು ವರ್ಷಗಳ ಕಾಲ ತಮ್ಮ ಮನೆಯಲ್ಲಿಯೇ ಪುಸ್ತಕ ಪ್ರದರ್ಶನ ನಡೆಸಿದ ಅಪರೂಪದ ದಾಖಲೆ ಹೊಂದಿರುವ ಹರಿಹರಪ್ರಿಯ ಎಂಬ ಅಂಕಿತ ನಾಮದಿಂದಲೇ ಪ್ರಖ್ಯಾತವಾಗಿದ್ದ ಸಾತವಲ್ಲಿ ವೇಂಕಟ ವಿಶ್ವನಾಥ ಭಟ್ಟ ಅವರ ಮನೆ ಇದ್ದದ್ದೂ ಕೆ.ಎಲ್.ಈ ಕಾಲೇಜಿನ ಹಿಂಭಾಗದಲ್ಲೇ.

vishyಈ ಲೇಖನ ಓದಿದ ಓದುಗ K V ಪ್ರದೀಪ್ ಅವರು ತಿಳಿಸಿದಂತೆ ಭಾರತ ಕ್ರಿಕೆಟ್ ತಂಡದ ದಂತ ಕತೆ ಜಿ ಆರ್ ವಿಶ್ವನಾಥ್ ಅವರೂ ಸಹಾ 1969ರಲ್ಲಿ ಭಾರತ ತಂಡಕ್ಕೆ ಆಡಲು ಆಯ್ಕೆಯಾದಾಗ ತಮ್ಮ ಪೋಷಕರೊಂದಿಗೆ ಇದೇ ರಾಜಾಜಿನಗರದ 2ನೇ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದರಂತೆ. ಈಗ ವಿಶ್ವನಾಥ್ ಅವರು ಜೆ.ಪಿ.ನಗರದಲ್ಲಿ ವಾಸಿಸುತ್ತಿದ್ದರೆ, ಅವರ ಸಹೋದರ ಇನ್ನೂ ಸಹಾ ರಾಜಾಜಿನಗರದಲ್ಲಿಯೇ ವಾಸಿಸುತ್ತಿದ್ದಾರಂತೆ.

ಕೈಗಾರಿಕಾ ಪ್ರದೇಶವಾಗಿದ್ದ ಕಾರಣ ಅಲ್ಲಿನ ಕಾರ್ಮಿಕರ ಸಂಘಟನೆಗಳಿಗಾಗಿ ಅನೇಕ ಕಾರ್ಮಿಕ ಸಂಘಟನೆಗಳು ಬೆಳೆದ ಕಾರಣ ರಾಜಕೀಯವಾಗಿಯೂ ಕಾರ್ಮಿಕ ನಾಯಕರಾಗಿದ್ದ ಶ್ರೀ ಮಳ್ಳೂರು ಆನಂದ ರಾವ್ ಒಮ್ಮೆ ಮತ್ತು ಕಮ್ಯೂನಿಸ್ಟ್ ಸಂಘಟನೆಯ ಕಾರ್ಮಿಕ ನಾಯಕರಾಗಿದ್ದ ಶ್ರೀ ಎಂ. ಎಸ್. ಕೃಷ್ಣನ್ ಎರಡು ಬಾರಿ ರಾಜಾಜಿನಗರದಿಂದ ಆಯ್ಕೆಯಾಗಿದ್ದು 90ರ ದಶಕದ ನಂತರ ಅಲ್ಲಿನ ಬಹುತೇಕ ಕೈಗಾರಿಕೆಗಳು ಪೀಣ್ಯಾ ಪ್ರದೇಶಕ್ಕೆ ಸ್ಥಳಾಂತರಗೊಂಡೋ ಇಲ್ಲವೇ ಮುಚ್ಚಿ ಹೋದ ಪರಿಣಾಮ ಕಾರ್ಮಿಕ ನಾಯಕರುಗಳ ಜಾಗದಲ್ಲಿ ಉಳಿದ ರಾಜಕೀಯ ಪಕ್ಷಗಳ ನಾಯಕರುಗಳು ರಾಜಾಜಿನಗರವನ್ನು ಪ್ರತಿನಿಧಿಸುತ್ತಿದ್ದಾರೆ.

ಎಪ್ಪತ್ತು, ಎಂಭತ್ತು ಮತ್ತು ತೊಂಭತ್ತರ ದಶಕಗಳವರೆಗೂ ರಾಜಾಜಿನಗರದ ಸುತ್ತಮುತ್ತಲೂ ಪುಡಿ ರೌಡಿಗಳದ್ದೇ ಹಾವಳಿ ಇದ್ದು ಕತ್ತಲಾಗುತ್ತಿದ್ದಂತೆಯೇ ಮನೆಯಿಂದ ಹೊರೆಗೆ ಬರಲು ಭಯಪಡುವಂತಹ ವಾತಾವರಣ ಇದ್ದದ್ದು ನಂತರ ದಿನಗಳಲ್ಲಿ ಸ್ಥಳೀಯ ರಾಜಕೀಯ ನಾಯಕರುಗಳ ಮುತ್ಸದ್ದಿತನ ಮತ್ತು ಫೋಲೀಸರ ದಕ್ಷ ನಿರ್ವಹಣೆಯಿಂದ ಅಂತಹ ಸಮಾಜ ವಿದ್ರೋಹಿಗಳ ನಿಗ್ರಹವಾಗಿ ರಾಜಾಜಿನಗರ ಅತ್ಯಂತ ಶಾಂತ ವಾತಾವರಣದಿಂದ ಕೂಡಿದೆ.

prabhu_book_house

ಹೀಗೆ 50ರ ದಶಕದಲ್ಲಿ ಕೇತಮಾರನಹಳ್ಳಿ ರಾಜಾಜಿನಗರವಾಗಿ ಪ್ರಧಾನ್ಯತೆ ಪಡೆದು ಮಧ್ಯಮವರ್ಗದ ಜನರ ಸ್ವರ್ಗವಾಗಿದ್ದ ಪ್ರದೇಶ 90 ರ ದಶಕದಲ್ಲಿ ಜಾಗತೀಕರಣದಿಂದಾಗಿ ಅಲ್ಲಿನ ವಿದ್ಯಾವಂತರು ದೇಶ ವಿದೇಶಗಳನ್ನು ಸುತ್ತಿ ಬಂದ ಪರಿಣಾಮವಾಗಿ, ಸೀಮೇ ಎಣ್ಣೆ, ಅಕ್ಕಿ ಸಕ್ಕರೆಗಾಗಿ ಸಹಕಾರಿ ಮುಂದೆ ಸಾಲು ಗಟ್ಟಿ ನಿಲ್ಲುತ್ತಿದ್ದ ಜನ, ಪ್ರಭು ಬುಕ್ ಹೌಸಿನಲ್ಲಿ ಪಠ್ಯಪುಸ್ತಕ ಖರೀದಿಸುತ್ತಾ, Xerox, Book Binding, Spiral Binding ಮಾಡಿಸುತ್ತಿದ್ದ ಮಧ್ಯಮವರ್ಗದ ಜನರು,

rajainagar

ನಿಧಾನವಾಗಿ ಆಧುನಿಕ ಐಶಾರಾಮ್ಯಕ್ಕೆ ಒತ್ತಾಸೆ ತೋರುತ್ತಿರುವ ಪರಿಣಾಮ ಇಂದು ಅಲ್ಲಿದ್ದ ಜವಳಿ ಉದ್ಯಮ ಸಂಪೂರ್ಣವಾಗಿ ಸ್ಥಬ್ಧವಾಗಿ ಆ ಪ್ರದೇಶಗಳಲ್ಲಿ ಮಾಲ್ ಗಳು ತಲೆ ಎತ್ತಿದ್ದರೆ, ಕಮ್ಯೂನಿಸ್ಟ್ ಕಾರ್ಮಿಕಸಂಘಟೆನೆಗಳ ಧೋರಣೆಯಿಂದಾಗಿ ಬೇಸತ್ತು ಅನೇಕರು ತಮ್ಮ ಕಾರ್ಖಾನೆಗಳನ್ನು ಮುಚ್ಚಿ ಅಲ್ಲೆಲ್ಲಾ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿದ್ದರೆ,. ಸಣ್ಣ ಸಣ್ಣ ಮನೆಗಳು ಇದ್ದ ಪ್ರದೇಶದಲ್ಲಿ ಇಂದು ದೊಡ್ಡ ಅಪಾರ್ಟ್ಮೆಟ್ ಗಳು ತಲೆ ಎತ್ತುವ ಮೂಲಕ ಮಧ್ಯಮ ವರ್ಗದ ಸ್ವರ್ಗವಾಗಿದ್ದ ರಾಜಾಜಿನಗರವೂ ಸಹಾ ಈಗ ಐಶಾರಾಮ್ಯದ ಪ್ರದೇಶವಾಗುತ್ತಿರುವುದು ವಾಣಿಜ್ಯಾತ್ಮಕವಾಗಿ ಉತ್ತಮ ಬೆಳವಣಿಗೆ ಎಂದು ಎನಿಸಿದರೂ, ಸಾಂಸ್ಕೃತಿಕವಾಗಿ ಬೆಂಗಳೂರಿನ ಸೊಗಡು ಮಾಯವಾಗುತ್ತಿರುವುದು ಬೇಸರವನ್ನು ತರಿಸುತ್ತಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ರಾಜಾಜಿ ನಗರ

 1. ಧನ್ಯವಾದಗಳು. ತುಂಬಾ ಚೆನ್ನಾಗಿದೆ. ಈ ಲೇಖನ ದಿಂದ ರಾಜಾಜಿನಗರ ದ ಬಗ್ಗೆ ಬಹಳಷ್ಟು ಮಾಹಿತಿ ತಿಳಿದುಕೊಂಡಂತಾಯಿತು.

  Liked by 1 person

  1. ಧನ್ಯೋಸ್ಮಿ. ಬೆಂಗಳೂರು ಇತಿಹಾಸದ ಉಳಿದ ಲೇಖನಗಳನ್ನು ದಯವಿಟ್ಟು ಓದಿ ಹತ್ತಾರು ಜನರಿಗೆ ತಲುಪಿಸಿದಲ್ಲಿ ನಮ್ಮ ಶ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ

   Like

 2. It is worth mentioning that our past legendary batsman G R Vishwanath was living with his parents when he got selected to play for
  india in 1969. They lived in 2nd Block and if I am correct, his brother still lives there.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s