ವಿಧಾನಸೌಧ

vs7ವಿಧಾನಸೌಧ ಕರ್ನಾಟಕ ರಾಜ್ಯದ ಶಕ್ತಿಕೇಂದ್ರವಾಗಿದ್ದು, ನಮ್ಮ ರಾಜ್ಯವನ್ನು ಮುನ್ನಡೆಸುವ ಜನಪ್ರತಿನಿಧಿಗಳು ಈ ಕಟ್ಟಡದಿಂದಲೇ ಆಡಳಿತ ನಡೆಸುವ ವಿಷಯ ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಇಡೀ ಭಾರತದಲ್ಲಿ ಅತ್ಯಂತ ಸುಸಜ್ಜಿತ ಮತ್ತು ಸುಂದರವಾಗಿರುವ ಆಡಳಿತ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ವಿಧಾನಸೌಧದ ಕುರಿತಾದ ಕುತೂಹಲಕಾರಿ ವಿಷಯಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

WhatsApp Image 2023-06-08 at 11.02.50ಸಾಮಾನ್ಯವಾಗಿ ಯಾವುದೇ ಸಿನಿಮಾಗಳಲ್ಲಿ ಬೆಂಗಳೂರನ್ನು ತೋರಿಸಬೇಕು ಎಂದಾಕ್ಷಣ, ಬೆಂಗಳೂರು ರೈಲ್ವೇ ನಿಲ್ಡಾಣ ಮತ್ತು ವಿಧಾನ ಸೌಧದ ಚಿತ್ರವನ್ನು ತೋರಿಸುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಬೆಂಗಳೂರು ನಗರಕ್ಕೆ ಕಿರೀಟಪ್ರಾಯವಾಗಿರುವ ಈ ವಿಧಾನಸೌಧದ ನಿರ್ಮಾಣದ ಹಿಂದಿರುವ ಇತಿಹಾಸವೂ ಅಷ್ಟೇ ರೋಚಕವಾಗಿದ್ದು ಅನೇಕ ಜನರ ಪರಿಶ್ರಮ ಅದರ ಹಿಂದಿದೆ. 1947ರಲ್ಲಿ ಭಾರತಕ್ಕೆ ಸ್ವಾತ್ರಂತ್ರ್ಯ ಬಂದು 565 ರಾಜ್ಯಗಳು ಒಕ್ಕೂಟ ಭಾರತದ ಸದಸ್ಯರಾಗಿ ಪ್ರಜಾಸತ್ತಾತ್ಮಕವಾಗಿ ಮೊದಲ ಚುನಾವಣೆ ನಡೆದು ಕೆಸಿ ರೆಡ್ಡಿಯವರ ನೇತೃತ್ವದಲ್ಲಿ ಮೊದಲ ರಾಜ್ಯಸರ್ಕಾರ ಆರಂಭವಾಗಿದ್ದು ಅಟ್ಟಾರ ಕಛೇರಿ ಅರ್ಥಾತ್ ಇಂದಿನ ಹೈಕೋರ್ಟ್ ಕಟ್ಟದಲ್ಲಿ. ಬ್ರಿಟಿಷರು 1868 ರಲ್ಲಿ ನಿರ್ಮಿಸಿದ್ದ ಈ ಕಛೇರಿಯಲ್ಲಿ ಆರಂಭವಾದ ಆಡಳಿತ ಕಛೇರಿಗಳಿಗೆ ಸ್ಥಳಾವಕಾಶ ಇಲ್ಲದಿದ್ದ ಸಂದರ್ಭದಲ್ಲಿ ಹೊಸದಾದ ಭವ್ಯವಾದ ಕಟ್ಟಡವನ್ನು ನಿರ್ಮಿಸಬೇಕೆಂದು ನಿಶ್ಚಯಿಸಲಾಯಿತು. ಅದೇ ಸಮಯದಲ್ಲೇ ಯಾರೋ ಒಬ್ಬ ಮಹಾನುಭಾವರು ಅಂದಿನ ಹಿರಿಯ ರಾಜಕಾರಣಿಗಳು ಸಚಿವರಾಗಿದ್ದ ಶ್ರೀ ಕೆಂಗಲ್ ಹನುಮಂತಯ್ಯನವರ ಬಳಿ ಭಾರತೀಯರಿಗೆ ಸ್ವಾಭಿಮಾನವೇ ಇಲ್ಲಾ. ದೇಶಾದ್ಯಂತ ಸರ್ಕಾರೀ ಕಛೇರಿಗಳೆಲ್ಲವೂ ಪರಕೀಯರಿಂದ ನಿರ್ಮಿತವಾದ ಕಟ್ಟಡಗಳಲ್ಲಿಯೇ ನಡೆಯುತ್ತಿದೆ ಎಂದು ಹಂಗಿಸಿದ್ದರಂತೆ. ಹಾಗಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆ ಸಿ ರೆಡ್ಡಿ ಅವರ ಅವಧಿಯಲ್ಲಿ ಶಾಸಕಾಂಗವನ್ನು ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಯಿತು.

ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಕೆಂಗಲ್ ಹನುಮಂತಯ್ಯನವರು ಅದೇ ಅಟ್ಟಾರ ಕಚೇರಿಯ ಎದುರಿನಲ್ಲೇ ಅದಕ್ಕಿಂತಲೂ ಎತ್ತರವಾಗಿ ಭಾರತೀಯ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ಭವ್ಯವಾದ ಆಡಳಿತ ಕಛೇರಿಯನ್ನು ನಿರ್ಮಿಸಲು ಯೋಚಿಸಿ ಹನುಮಂತಯ್ಯ ರಾವ್ ನಾಯ್ಡು (ಲಂಡನ್‌ನ ಆರ್ಕಿಟೆಕ್ಚರಲ್ ಅಸೋಸಿಯೇಷನ್‌ನ ಪದವೀಧರರು) ಅಂದಿನ ಹೆಸರಂತ ಸಿವಿಲ್ ಇಂಜಿನಿಯರ್ ಆಗಿದ್ದ ಬಿ ಆರ್ ಮಾಣಿಕ್ಯಂ ಅವರಿಬ್ಬರ ವಾಸ್ತುಶಿಲ್ಪದಲ್ಲಿ ವಿಧಾನಸೌಧದ ನೀಲ ನಕ್ಷೆಯನ್ನು ತಯಾರಿಸಿ ಅದನ್ನು ನಾಡಿನ ಮತ್ತೊಬ್ಬ ಹಿರಿಯ ಇಂಜಿನಿಯರ್ ಆದ ಸರ್. ಎಂ. ವಿಶ್ವೇಶ್ವರಯ್ಯನವರಿಗೂ ತೋರಿಸಿ ಅವರ ಸಲಹೆ ಮತ್ತು ಸೂಚನೆಗಳನ್ನು ಸ್ವೀಕರಿಸಿ ಅಂದಿನ ಕಾಲಕ್ಕೆ ಸುಮಾರು 33 ಲಕ್ಷಗಳಲ್ಲಿ ಪೂರ್ಣಗೊಳಿಸಲು ನಿರ್ಧಸಿದ್ದರು. ಇದು ಪ್ರಜಾಸೌಧವಾದ್ದರಿಂದ ಇಷ್ಟು ಭವ್ಯವಾದ ಕಟ್ಟದಲ್ಲಿ ಒಂದು ಇಟ್ಟಿಗೆ, ಸಿಮೆಂಟ್ ಚೀಲ ಅಥವಾ ಕಬ್ಬಿಣವೂ ಪೋಲಾಗದಂತೆ ಬಹಳ ಪ್ರಾಮಾಣಿಕವಾಗಿ ಕಟ್ಟಬೇಕು ಎಂದು ಕಟ್ಟಡದ ಕಂಟ್ರಾಕ್ಟರ್ ಅವರ ಕೈಗೆ ಹಾಲಿನ ಲೋಟವನ್ನು ಕೊಟ್ಟು ಪ್ರಮಾಣವನ್ನು ಸ್ವೀಕರಿಸಿದ್ದರಂತೆ ಕೆಂಗಲ್ ಹನುಮಂತಯ್ಯನವರು.

vs2ರಾಜ್ಯದ ಬಹುದೊಡ್ಡದಾದ ಈ ಆಡಳಿತಸೌಧದ ಶಂಕುಸ್ಥಾಪನೆಯನ್ನು ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಜವಾಹರಲಾಲ್ ನೆಹರು ಆವರ ಅಮೃತ ಹಸ್ತದಲ್ಲಿ ಜುಲೈ 13, 1951 ರಂದು ಮಾಡಿಸಿದರು. 1952ರ ಚುನಾವಣೆಯಲ್ಲಿ ಮುಖ್ಯಮಂತ್ರಿಗಳಾಗಿ ನಿಯುಕ್ತರಾದ ಹನುಮಂತಯ್ಯನವರು, ಆರಂಭದಲ್ಲಿ ಸರಳವಾದ ಅಮೇರಿಕನ್ ವಾಸ್ತುಶಿಲ್ಪದ ರೀತಿಯಲ್ಲಿದ್ದ ನೀಲನಕ್ಷೆಯನ್ನು ತಿರಸ್ಕರಿಸಿ, ನಮ್ಮ ಮೈಸೂರು ರಾಜ್ಯದ ಸಂಪ್ರದಾಯಕ್ಕೆ ಅನುಗುಣವಾಗಿ ಕಲಾಕೃತಿಯ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದಿದ್ದಲ್ಲದೇ, ವಿಶಾಲವಾದ ವಿಧಾನಸಭೆ, ವಿಧಾನ ಪರಿಷತ್ತು ಅಲ್ಲದೇ ವಿಶಾಲವಾದ ಸರ್ಕಾರಿ ಕಚೇರಿಗಳು, ಅದರ ದಾಖಲೆಗಳನ್ನು ಇಡಲು ವಿಶಾಲವಾದ ಕೊಠಡಿಗಳಲ್ಲದೇ, ಗ್ರಂಥಾಲಯ ಮತ್ತು ಔತಣಕೂಟಗಳನ್ನು ಏರ್ಪಡಿಸಲು ವಿಶಾಲವಾದ ಬ್ಕಾಂಕ್ವೆಟ್ ಹಾಲ್ ಸಹಾ ಒಳಗೊಂಡಿತ್ತು. ಹೀಗೆ ಮೂರು ಅಂತಸ್ತಿನ ವಿಧಾನಸೌಧ 700 ಅಡಿ ಅಗಲ ಮತ್ತು 350 ಅಡಿ ಉದ್ದವಿದ್ದು ಪ್ರತೀ ಅಂತಸ್ತಿನ ವಿಸ್ತೀರ್ಣ 1,32,400 ಚದುರ ಅಡಿಗಳಾಗಿದದ್ದು ಮೇಲಿನ ಮಹಡಿ (1,01,165 ಚದರ ಅಡಿಯೂ ಸೇರಿ ಒಟ್ಟು ವಿಸ್ತೀರ್ಣವು ಸುಮಾರು 5,05,505 ಚದರ ಅಡಿಯಾಗುತ್ತದೆ. ನೆಲ ಮಟ್ಟದಿಂದ ಕೇಂದ್ರ ಗುಮ್ಮಟದ ಮೇಲಿನ ಉದ್ದವೇ ಸುಮಾರು 150 ಅಡಿಯಾಗಿದ್ದು, ಇಡೀ ವಿಧಾನಸೌಧವನ್ನು ಸುತ್ತು ಹಾಕಿದರೆ 7 ಕಿಲೋ ಮೀಟರ್ ನಡೆದಷ್ಟು ಅನುಭವವಾಗುತ್ತದೆ ಇನ್ನು ಇಂತಹ ಭವ್ಯವಾದ ಕಟ್ಟಡವನ್ನು ಗುಡುಗು ಮತ್ತು ಸಿಡಿಲಿನಿಂದ ರಕ್ಷಿಸುವ ಸಲುವಾಗಿ ತಾಮ್ರದ ಪದರುಗಳನ್ನು ಇಡೀ ಕಟ್ಟಡಕ್ಕೆ ಹಾಕಿ ಅದನ್ನು ಸೂಕ್ತವಾದ ರೀತಿಯಲ್ಲಿ ಗ್ರೌಂಡಿಂಗ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು.

vs1ಈ ಭವ್ಯವಾದ ಸೌಧಕ್ಕೆ ನಿರ್ಮಿಸಲು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಮಲ್ಲಸಂದ್ರ, ಬೆಟ್ಟಹಲಸೂರು ಮತ್ತು ಹೆಸರಘಟ್ಟದ ​​ಸುತ್ತಮುತ್ತಲಿನ ಪ್ರದೇಶಗಳಿಂದ ಬಿಳಿಯ ಕಲ್ಲಗಳನ್ನು ತರಿಸಲಾಗಿದ್ದು. ಇನ್ನೂ ಕಟ್ಟಡ ಚಂದವನ್ನು ಹೆಚ್ಚಿಸಲು ಮಾಗಡಿ ಗುಲಾಬಿ ಮತ್ತು ತುರುವೇಕೆರೆ ಕಪ್ಪು ಕಲ್ಲುಗಳನ್ನು ಸಹ ಬಳಸಲಾಗಿದೆ. ಇನ್ನು ಕಟ್ಟದ ಮರಮುಟ್ಟಿನ ಅವಶ್ಯಕತೆಗಾಗಿ ರಾಜ್ಯದ ನಾನಾ ಜಿಲ್ಲೆಗಳಿಂದ ಉತ್ತಮ ದರ್ಜೆಯ ತೇಗದ ಮರಗಳಗಳನ್ನು ತರಿಸಿಕೊಂಡು ಬಳಸಲಾಗಿದೆ.

vs3ಈ ಭವ್ಯವಾದ ಸೌಧದ ನಿರ್ಮಾಣಕ್ಕಾಗಿ ಸುಮಾರು 1500 ನುರಿತ ಕಾರ್ಮಿಕರಾದ ಕಲ್ಲುಕುಟ್ಟಿಗರು, ಮೇಸ್ತ್ರಿಗಳು ಮತ್ತು ಮರದ ಕೆತ್ತನೆಗಾರರನ್ನು ಬಳಸಿಕೊಂಡು ಕೇವಲ ಕರ್ನಾಟಕವಲ್ಲದೇ, ಕಾರೈಕಾಲ್ (ಪುದುಚೇರಿ) ಮತ್ತು ತಿರುಚಿರಾಪಳ್ಳಿ (ತಮಿಳುನಾಡು)ನಿಂದ ಕರೆಸಿಕೊಳ್ಳಲಾಗಿತ್ತು. ಇನ್ನು ನಿರ್ಮಾಣದ ವೆಚ್ಚವನ್ನು ಕಡಿಮೆಗೊಳಿಸುವ ಸಲುವಾಗಿ ಮತ್ತು ಕೂಲಿ ಕಾರ್ಮಿಕರ ಕೊರತೆ ಇದ್ದ ಕಾರಣ, ಮಹಿಳಾ ಕೈದಿಗಳೂ ಸೇರಿದಂಟೆ ಸುಮಾರು ಐದು ಸಾವಿರದಷ್ಟು ಕೈದಿಗಳನ್ನು ಸೂಕ್ತ ಮೇಲ್ವಿಚಾರಕರ ಸುಪರ್ದಿಯ ಮೇರೆಗೆ ಈ ಮಹತ್ತರ ಕಾರ್ಯದಲ್ಲಿ ಕಟ್ಟಡದ ನಿರ್ಮಾಣದ ಕೂಲಿ ಕೆಲಸಕ್ಕೆ ಬಳಸಿಕೊಂಡಿದ್ದಲ್ಲದೇ, ಅವರಿಗೆ ಪ್ರತಿ ದಿನವೊಂದಕ್ಕೆ 1 ರೂಪಾಯಿ ಕೂಲಿಯನ್ನು ಸಹಾ ನೀಡಲಾಗಿತ್ತು. ಕಟ್ಟಡ ಪೂರ್ಣಗೊಂಡ ನಂತರ ಆ ಎಲ್ಲ ಕೈದಿಗಳನ್ನೂ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಗೊಳಿಸಲಾಗಿತ್ತು. ಕಟ್ಟಡ ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ಪ್ರತೀ ದಿನವೂ ತಮ್ಮ ಸ್ವಂತ ಕಟ್ಟಡವೇನೋ ಎನ್ನುವಂತೆ ಸರಿಸುಮಾರು 4 ಗಂಟೆಗಳ ಕಾಲ ಹನುಮಂತಯ್ಯನವರು ವೈಯಕ್ತಿಕವಾಗಿ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಾ, ಕಾಲ ಕಾಲಕ್ಕೆ ಸೂಕ್ತವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಕಟ್ಟಡ ನಿರ್ವಿಘ್ನವಾಗಿ ಮತ್ತು ಅತ್ಯಂತ ವೇಗವಾಗಿ ಕಟ್ಟುವಂತೆ ನೋಡಿಕೊಂಡರು.

vsoudhaಇಂತಹವರೆಲ್ಲರ ಶ್ರಮದಾನದಿಂದ ಅಂತಹ ಭವ್ಯವಾದ ವಿಧಾನ ಸೌಧವನ್ನು ಧಾಖಲೆಯ ಸಮಯವಾದ ಕೇವಲ ನಾಲ್ಕು ವರ್ಷಗಳಲ್ಲಿಯೇ ಪೂರ್ಣಗೊಳಿಸಲಾಯಿತು. ಕಟ್ಟಡದ ನಿರ್ಮಾಣವು 1952 ರಲ್ಲಿ ಆರಂಭವಾಗಿ 1956 ರಲ್ಲಿ ಪೂರ್ಣಗೊಂಡಿತು. ಕಟ್ಟಡ ಆರಂಭಿಸಿದಾಗ ಸುಮಾರು 50 ಲಕ್ಷದ ಅಂದಾಜು ಮಾಡಲಾದರೂ, ವಿಧಾನಸೌಧದ ಕಟ್ಟಡ ಮುಗಿಯುವಷ್ಟರಲ್ಲಿ ಅದರ ವೆಚ್ಚ ಸುಮಾರು ಮೂರು ಪಟ್ಟು ಹೆಚ್ಚಾಗಿ ಸುಮಾರು ಒಂದು ಕೋಟಿ 80 ಲಕ್ಷ ರೂಪಾಯಿ ಹಣ ಖರ್ಚಾಗಿರುತ್ತದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡ ಕೆಂಗಲ್ ಹನುಮಂತಯ್ಯನವರ ಸ್ವಪಕ್ಷೀಯ ಹಿತಶತ್ರುಗಳು ಅವರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದನ್ನು ಕಂಡು ಮನನೊಂದ ಹನುಮಂತಯ್ಯನವರು ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆಯನ್ನು ಕೊಡುತ್ತಾರೆ.

vs8ಅವರ ನಂತರ ಹಂಗಾಮಿ ಮುಖ್ಯಮಂತ್ರಿಗಳಾಗಿದ್ದ ಕಡಿದಾಳ್ ಮಂಜಪ್ಪನವರು ಅಕ್ಟೋಬರ್ 10, 1956ರಂದು ತುರಾತುರಿಯಲ್ಲಿ ವಿಧಾನಸೌಧದ ಉದ್ಘಾಟಿಸಿದರೂ, ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ನೀಡಿರುವ ಅಧಿಕೃತ ಉತ್ತರದ ಪ್ರಕಾರ, ವಿಧಾನಸೌಧದ ಕಾಮಗಾರಿ 1956ರಲ್ಲಿ ಪೂರ್ಣಗೊಂಡಿದ್ದರೂ ಅದನ್ನು ಯಾವಾಗ ಉದ್ಘಾಟನೆ ಮಾಡಲಾಯಿತು ಮತ್ತು ಯಾರು ಉದ್ಘಾಟನೆ ಮಾಡಿದರು ಎಂಬ ಮಾಹಿತಿ ಇಲ್ಲ ಎಂದು ತಿಳಿಸಿರುವುದು ಚಿದಂಬರ ರಹಸ್ಯವಾಗಿಯೇ ಉಳಿದಿದೆ. ವಿಧಾನಸೌಧದ ಕಲ್ಪನೆಯನ್ನು ಕಟ್ಟಿಕೊಂಡು ಅದರ ಸಾಕಾರಕ್ಕಾಗಿ ಹಗಲು ಇರಳೂ ನಿಸ್ವಾರ್ಥವಾಗಿ ಶ್ರಮಿಸಿ ಇಡೀ ದೇಶವೇ ತಿರುಗಿ ನೋಡುವಂತಹ ಸೌಧವನ್ನು ನಿರ್ಮಾಣ ಮಾಡಿದ, ಕೆಂಗಲ್ ಹನುಮಂತಯ್ಯನವರು ಯಾವುದೇ ತಪ್ಪನ್ನು ಮಾಡದೇ ಹೋದರೂ, ಕೆಲವರ ಕುತಂತ್ರದಿಂದಾಗಿ ಅವರ ಮಹದಾಸೆಯ ಕಟ್ಟಡದಲ್ಲಿ ಕುಳಿತು ಒಂದು ದಿನವೂ ರಾಜ್ಯಭಾರವನ್ನು ನಡೆಸಲು ಆಗದೇ ಹೋದದ್ದು ಈ ರಾಜ್ಯಕಂಡ ವಿಪರ್ಯಾಸಗಳಲ್ಲಿ ಒಂದಾಗಿದ್ದು ಅದನ್ನು ನೆನಸಿಕೊಂಡು ಇಂದಿಗೂ ಕನ್ನಡಿಗರು ಬೇಸರವನ್ನು ವ್ಯಕ್ತಪಡಿಸುವುದು ಕೆಂಗಲ್ ಹನುಮಂತಯ್ಯನವರ ಪ್ರಾಮಾಣಿಕತೆ ಹಿಡಿದ ಕೈಗನ್ನಡಿಯಾಗಿದೆ.

vs1060 ಎಕರೆಯಷ್ಟು ವಿಶಾಲವಾದ ಭೂಮಿಯಲ್ಲಿ ಹರಡಿರುವ, ಭವ್ಯವಾದ ಬಿಳಿ ಕಟ್ಟಡವು ಪುರಾತನ ಮತ್ತು ಆಧುನಿಕ ವಾಸ್ತುಶೈಲಿಗಳ ಕೌಶಲ್ಯಪೂರ್ಣ ಮಿಶ್ರಣದೊಂದಿಗೆ ನಿರ್ಮಾಣವಾದ ಬೃಹತ್ ವಿಧಾನ ಸೌಧದ ಮುಂಭಾಗದಲ್ಲಿ ಹನ್ನೆರಡು ನಲವತ್ತು ಅಡಿ ಎತ್ತರದ ಕಂಬಗಳು ಕೇಂದ್ರ ಗುಮ್ಮಟಕ್ಕೆ ಮತ್ತು ಆರು ಚಿಕ್ಕದಕ್ಕೆ ಭವ್ಯವಾದ ಹಿನ್ನೆಲೆಯನ್ನು ಒದಗಿಸಿವೆ. ಎಂಟು ಕಂಬಗಳಿಂದ ಬೆಂಬಲಿತವಾಗಿರುವ ಮಧ್ಯದ ಗುಮ್ಮಟವು ಅರವತ್ತು ಅಡಿ ವ್ಯಾಸವನ್ನು ಹೊಂದಿದ ಈ ಭವ್ಯವಾದ ಕಟ್ಟಡದ ಮಧ್ಯದಲ್ಲಿ ಬಹಳು ದೂರದಿಂದಲೂ ಚನ್ನಾಗಿಯೇ ಕಾಣುವಂತೆ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕೆತ್ತಿಸಲಾಗಿರುವುದು ಗಮನಾರ್ಹವಾಗಿದೆ. 204 ಅಡಿ ಅಗಲ, 70 ಅಡಿ ಉದ್ದದ ಸುಮಾರು 45 ಆಕರ್ಷಕವಾದ ಮೆಟ್ಟಿಲುಗಳನ್ನು ಹೊಂದಿದ್ದು, ವಿಧಾನಸೌದದ ಮಧ್ಯದ ಗುಮ್ಮಟದ ಮೇಲೆ ಭಾರತದ ರಾಷ್ಟ್ರೀಯ ಲಾಂಛನವಾದ ನಾಲ್ಕು ತಲೆಯ ಸಿಂಹದಿಂದ ಕಿರೀಟವನ್ನು ಹೊಂದಿದ್ದರೆ, ಮುಂಭಾಗದಲ್ಲಿ ನಾಲ್ಕು ಮತ್ತು ಹಿಂಭಾಗದಲ್ಲಿ ಎರಡು ಹೀಗೆ ಒಟ್ಟು ಆರು ಸಣ್ಣ ಗುಮ್ಮಟಗಳಿಂದ ಆವೃತವಾಗಿದ್ದು ನೋಡಲು ಬಹಳ ಆಕರ್ಷಣೀಯವಾಗಿದೆ

vs4ವಿಧಾನಸೌಧಕ್ಕೆ ಶಾಸಕರು ಮತ್ತು ಆಡಳಿತ ಕಛೇರಿಗೆ ಸಂಬಂಧಪಟ್ಟವರನ್ನು ಹೊರತು ಪಡಿಸಿ ಉಳಿದವರಿಗೆ ಕಟ್ಟಡದ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ವಿಶೇಷವಾದ ಪೂರ್ವಾನುಮತಿಯ ಮೇರೆಗೆ ಒಳಾಂಗಣಕ್ಕೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಭವ್ಯವಾದ ಕಟ್ಟಡವನ್ನು ಹೊರಗಿನಿಂದಲೇ ನೋಡಿ ಕಣ್ತುಂಬಿಸಿಕೊಳ್ಳಲು ದೇಶ ವಿದೇಶಗಳಿಂದ ಪ್ರತಿದಿನವೂ ಸಾವಿರಾರು ಪ್ರವಾಸಿಗಳು ಬರುವುದು ವಿಶೇಷವಾಗಿದೆ. ಭಾನುವಾರ ಸಂಜೆ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಸಂಜೆ 6 ರಿಂದ ರಾತ್ರಿ 8:30 ರವರೆಗೆ ಇಡೀ ಕಟ್ಟಡಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದನ್ನು ನೋಡಲು ಎರಡು ಕಣ್ಗಳೇ ಸಾಲದಾ ಗಿವೆ.

ಇಂತಹ ಭವ್ಯಕಟ್ಟಡದಲ್ಲಿ ಅನೇಕ ಸಮ್ಮೇಳನಗಳು ನಡೆದು ದೇಶ ವಿದೇಶಗಳಿಂದ ಗಣ್ಯವ್ಯಕ್ತಿಗಳು ಈ ಕಟ್ಟಡಕ್ಕೆ ಭೇಟಿ ನೀಡಿ ಕಟ್ಟಡ ಸೌಂದರ್ಯ ಮತ್ತು ವಾಸ್ತುಶಿಲ್ಪಕ್ಕೆ ಬರೆಗಾಗಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. 1986 ನವೆಂಬರ್ 16 ಮತ್ತು 17 ರಂದು ಇದೇ ವಿಧಾನಸೌಧದಲ್ಲಿ ಅಂದಿನ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರ ನೇತೃತವದಲ್ಲಿ ಸಾರ್ಕ್ ಶೃಂಗಸಭೆ ನಡೆದದ್ದು ಗಮನಾರ್ಹವಾಗಿದೆ.

ಕಾಲ ಕ್ರಮೇಣ ಹಲವು ಕೆಲವು ಸಚಿವಾಲಯಗಳು ಮತ್ತು ಶಾಸಕಾಂಗ ಕಚೇರಿಗಳು ಹೆಚ್ಚುವಾರಿ ಆದಾಗ, ವಿಧಾನ ಸೌಧದ ಪಕ್ಕದಲ್ಲೇ ಅದರ ಮಾದರಿಯಲ್ಲೇ ಫೆಬ್ರವರಿ 2005ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್. ಎಂ. ಕೃಷ್ಣ ಅವರು ವಿಕಾಸ ಸೌಧವನ್ನು ಕಟ್ಟಿಸಿದ್ದಾರೆ.

ನಮ್ಮ ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧದ ಕುರಿತಾಗಿ ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ, ಸ್ವಲ್ಪ ಸಮಯ ಮಾಡಿಕೊಟ್ಟು ಕುಟುಂಬ ಸಮೇತ ಅಲ್ಲಿಗೆ ಭೇಟಿ ನೀಡಿ ಚಂದನೆಯ ಭಾವಚಿತ್ರವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

ಇದೇ ಲೇಖನ ವಿಕ್ರಮ ವಾರಪತ್ರಿಕೆಯ ಜುಲೈ 9, 2023 ರ ಸಂಚಿಕೆಯಲ್ಲಿ ಪ್ರಕಟವಾಗಿದೆ

vidhanasoudha_Vikrama

One thought on “ವಿಧಾನಸೌಧ

  1. ಅತ್ಯಂತ ಪ್ರಾಮಾಣಿಕ ಕೆಂಗಲ್ ಹನುಮಂತಯ್ಯ ನವರು ಕಟ್ಟಿದ ಕಟ್ಟಡದಲ್ಲಿ ——–, ಬೇಡಬಿಡಿ.

    Liked by 1 person

Leave a comment