ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ

ಉಡುಪಿಯಿಂದ ಹಿರಿಯಡ್ಕಕ್ಕೆ ಹೋಗುವ ಮಾರ್ಗದಲ್ಲೇ ಸುಮಾರು 22 ಕಿಲೋ ಮೀಟರ್ ದೂರದಲ್ಲಿ ಸರಿ ಸುಮಾರು 2000ಕ್ಕೂ ಅಧಿಕ ಜನರು ವಾಸಿಸುವಂತಹ ಒಂದು ಸಣ್ಣ ಗ್ರಾಮವಾದ ಪೆರ್ಣಂಕಿಲದ ಹೊಲಗಳ ಮಧ್ಯದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಸ್ಥಳಪುರಾಣ ಮತ್ತು ಆ ದೇವಾಲಯದ ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ  ತಿಳಿಯೋಣ ಬನ್ನಿ.

ಈ ಗ್ರಾಮದಲ್ಲಿ ಎರಡು ಪ್ರಸಿದ್ಧ ದೇವಾಲಯಗಳು ಅಕ್ಕಪಕ್ಕದಲ್ಲೇ ಇದ್ದು, ಅವುಗಳಲ್ಲಿ ಕರಾಸುರ ಎಂಬ ರಾಕ್ಷಸನಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುವ ಈ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 2,000 ವರ್ಷಗಳ ಇತಿಹಾಸವಿದ್ದರೆ, ಈ ಗ್ರಾಮದ ಬಹು ಆಕರ್ಷಣೆಯ ಕೇಂದ್ರವಾದ ಗಣಪತಿಯ ದೇವಾಲಯಕ್ಕೆ ಸುಮಾರು 1,600 ವರ್ಷಗಳ ಇತಿಹಾಸವಿದ್ದು, ಇಲ್ಲಿರುವ ಗಣೇಶನ ವಿಗ್ರಹವನ್ನು ಉದ್ಭವ ಮೂರ್ತಿ ಎಂದು ಹೇಳಲಾಗುತ್ತಿದ್ದು, ಈ ಗಣೇಶನ ದೇವಾಲಯ ಇಲ್ಲಿ ನಿರ್ಮಣ ಆಗುವ ಹಿಂದೆ ಒಂದು ರೋಚಕವಾದ ಕತೆಯಿದೆ. ಸಾಮಾನ್ಯವಾಗಿ ಎಲ್ಲೆಡೆಯಲ್ಲಿಯೂ ನಾವು ಕಾಣುವ ಶಿವ ಮತ್ತು ಗಣೇಶನ ದೇವಾಲಯಗಳಲ್ಲಿ ಅಪ್ಪಾ ಮಗಾ ಒಂದೇ ದಿಕ್ಕಿನಲ್ಲಿ ಇರುವುದನ್ನು ಕಾಣುವುದು ಸಹಜವಾದರೇ ಇಲ್ಲಿರುವ ಬಲಮುರಿ ಮಹಾ ಗಣಪತಿ ತನ್ನ ತಂದೆ ಶಿವನ ವಿರುದ್ಧ ದಿಕ್ಕಿನಲ್ಲಿ ಇರುವುದು ಇಲ್ಲಿನ ವಿಶೇಷವಾಗಿದೆ. ಶಿವನ ವಿಗ್ರಹ ಪೂರ್ವಾಭಿಮುಖವಾಗಿದ್ದರೆ, ಗಣೇಶನ ವಿಗ್ರಹ ಪಶ್ಚಿಮಾಭಿಮುಖವಾಗಿದೆ.

pernaಈಗಾಗಾಲೇ ತಿಳಿಸಿರುವಂತೆ ಇಲ್ಲಿನ ಗಣೇಶನ ವಿಗ್ರಹ ಉದ್ಭವ ಗಣಪತಿಯಾಗಿದ್ದು, ಇಲ್ಲಿನ ಪೆರ್ಣ ಎಂಬ ಹೆಸರಿನ ದಲಿತ ರೈತರೊಬ್ಬರು ಅದೊಂದು ದಿನ ತನ್ನ ಜಮೀನಿನಲ್ಲಿ ನೇಗಿಲಿನಿಂದ ಉಳುಮೆ ಮಾಡುತ್ತಿದ್ದಾಗ ಆತನ ನೇಗಿಲಿಗೆ ಇದ್ದಕ್ಕಿದ್ದಂತೆ ಏನೋ ತಾಕಿದಂತಾದಾಗಾ, ಯಾವುದೋ ಕಲ್ಲು ಸಿಕ್ಕಿಕೊಂಡಿರಬೇಕು ಎಂದು ಆತ ಬಗ್ಗಿ ನೋಡಿದಾಗ ಅಲ್ಲಿನ ದೃಶ್ಯ ಆತನಿಗೆ ರೋಮಾಂಚನ ಗೊಳಿಸುತ್ತದೆ. ಆತನ ನೇಗಿಲಿಗೆ, ಗಣಪತಿಯ ವಿಗ್ರಹ ಸಿಕ್ಕಿಕೊಂಡಿರುತ್ತದೆ. ಅಚ್ಚರಿಯ ವಿಷಯವೇನೆಂದರೆ, ಆತನ ನೇಗಿಲು ವಿಗ್ರಹದ ತಲೆ ಭಾಗಕ್ಕೆ ತಾಕಿದ್ದರಿಂದ ಆ ಕಲ್ಲಿನ ವಿಗ್ರಹದಿಂದ ರಕ್ತ ಚಿಮ್ಮುತ್ತಿರುವುದನ್ನು ಕಂಡು ಭಯ ಭೀತನಾಗಿ ತನ್ನ ಅಂದಿನ ಕೆಲಸವನ್ನು ನಿಲ್ಲಿಸಿ ಮನೆಗೆ ಓಡಿಹೋಗುತ್ತಾನೆ.

ಅದೇ ಭಯದಲ್ಲಿಯೇ ರಾತ್ರಿ ನಿದ್ರಿಸುತ್ತಿರುವಾಗ, ಆತನಿಗೊಂದು ವಿಚಿತ್ರವಾದ ಕನಸು ಬೀಳುತ್ತದೆ. ಆತನ ಕನಸಿನಲ್ಲಿ ಈ ಕೂಡಲೇ ಎರಡು ಕೊಪ್ಪರಿಕೆಗಳನ್ನು ತೆಗೆದುಕೊಂಡು ಹೋಗಿ ಒಂದನ್ನು ಆತನ ಹೊಲದಲ್ಲಿ ಕಾಣಿಸಿಕೊಂಡ ಗಣಪತಿಯ ವಿಗ್ರಹದ ಮೇಲೆಯೂ ಮತ್ತೊಂದನ್ನು ಶಿವಾಲಯದಲ್ಲಿ ಬೋರಲು ಹಾಕಿ ನಂತರ ಮಾರನೇಯ ದಿನ ಬೆಳಿಗ್ಗೆ ಅದೇ ಪ್ರದೇಶಕ್ಕೆ ಹೋಗಿ ಬರುವಂತೆ ದೈವಾಜ್ಞೆಯಾಗುತ್ತದೆ. ಕನಸಿನಲ್ಲಿ ಕಂಡ ದೇವರ ಆಣತಿಯಂತೆಯೇ, ಎಲ್ಲವನ್ನೂ ಹಾಗೆಯೇ ಮಾಡಿ ಮರು ದಿನ ಆ ಗಣಪತಿಯ ವಿಗ್ರಹವಿದ್ದ ಜಾಗದಲ್ಲಿ ತಾನು ಬೋರಲು ಹಾಕಿದ್ದ ಕೊಪ್ಪರಿಕೆ ಕಾಣದೇ ಹೋದದ್ದನ್ನು ನೋಡಿ ಆ ರೈತ ಪೆರ್ಣ ಗಾಬರಿಯಾಗಿ ಆ ಕೊಪ್ಪರಿಕೆಯನ್ನೇ ಹುಡುಕಿಕೊಂದು ಬಂದಾಗ, ಶಿವನ ದೇವಾಲಯದ ಬಳಿ ತಾನು ಬೋರಲು ಹಾಕಿದ್ದ ಬಳಿ ವಿಗ್ರಹವು ಕಾಣಿಸಿಕೊಳ್ಳುತ್ತದೆ.

WhatsApp Image 2023-06-07 at 08.51.46ಸ್ವಲ್ಪ ಸಮಯದ ಬಳಿಕ ಅಲ್ಲಿಂದ ಮಾಯವಾದ ಆ ವಿಗ್ರಹ ಮತ್ತೆ ಆ ದೇವಾಲಯದ ಹತ್ತಿರದಲ್ಲೇ ಇದ್ದ ಬಾವಿಯ ಬಳಿ ಕೇವಲ ವಿಗ್ರಹದ ತಲೆ ಮಾತ್ರಾ ಕಾಣಿಸುತ್ತಿದ್ದದ್ದನ್ನು ನೋಡಿ ಕೂಡಲೇ ತನ್ನ ಊರಿನ ಎಲ್ಲರಿಗೂ ಅದುವರೆಗೂ ತನಗಾದ ಅನುಭವವನ್ನು ಹಂಚಿಕೊಳ್ಳುತ್ತಾನೆ. ಇದು ಭಗವಂತನ ಅನುಗ್ರಹ ಎಂದೇ ಭಾವಿಸಿದ ಆ ಊರಿನ ಜನರು ಆವನ ಜಮೀನಿನ ಮಧ್ಯಲ್ಲಿಯೇ ದೇವಾಲಯವನ್ನು ನಿರ್ಮಿಸಿ ಆ ದೇವಸ್ಥಾನಕ್ಕೆ ಪೆರ್ಣಂಕಿಲ ದೇವಾಲಯ ಎಂದು ಹೆಸರಿಸುತ್ತಾರೆ. ಹಾಗಾಗಿ ಇಂದಿಗೂ ಸಹಾ ಆ ದೇವಾಲಯ ಊರಿನ ಹೊಲದ ಮಧ್ಯದಲ್ಲಿಯೇ ಕೇವಲ ಮಹಾಗಣಪತಿಯ ಸುಂದರವಾದ ಶಿರವಷ್ಟೇ ಭಕ್ತಾದಿಗಳಿಗೆ ಕಾಣಿಸುವಂತಿದ್ದು, ದೇಹದ ಉಳಿದ ಭಾಗವು ಆ ಭಾವಿಯಲ್ಲಿ ಹುಡುಗಿ ಹೋಗಿರುವುದು ಗಮನಾರ್ಹವಾಗಿದೆ. ಅಂಕಿಲವೆಂದರೆ ನೇಗಿಲು ಪೆರ್ಣನ ನೇಗಿಲಿಗೆ ಸಿಕ್ಕಿದ ವಿಗ್ರಹವಾದ್ದರಿಂದ ಪೆರ್ಣ+ಅಂಕಿಲ ಸೇರಿ ಪೆರ್ಣಂಕಿಲ ಎಂದಾಯಿತು ಎಂದು ಸ್ಥಳೀಯರು ಹೆಮ್ಮೆಯಿಂದ ಹೇಳುತ್ತಾರೆ. ಅದೇ ರೀತಿಯಲ್ಲಿ ಮಹಾಗಣಪತಿಯ ದಲಿತ ರೈತ ಪೆರ್ಣನ ಮೂಲಕ ಇಲ್ಲಿ ಶಾಶ್ವತವಾಗಿ ನೆಲೆಸಿದ ಕಾರನ, ಆತನ ಹೆಸರು ಆಚಂದ್ರಾರ್ಕವಾಗಿ ಅಜರಾಮರವಾಗಿಸಲು ಆ ಊರಿಗೂ ಪೆರ್ಣಂಕಿಲ ಎಂದೇ ಹೆಸರು ಬಂದಿದೆ ಎಂಬ ನಂಬಿಕೆ ಇಲ್ಲಿಯ ಜನರದ್ದಾಗಿದೆ.

pejawar1ಪ್ರಸ್ತುತವಾಗಿ ಈ ಪೆರ್ಣಂಕಿಲ ಮಹಾ ಗಣಪತಿ ದೇವಸ್ಥಾನವು ಉಡುಪಿ ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ಆಡಳಿತಕ್ಕೆ ಒಳಪಟ್ಟಿದ್ದು, ಶ್ರೀ ವಿಶ್ವೇಶ್ವ ತೀರ್ಥ ಶ್ರೀಪಾದರ ದಿವ್ಯ ಮಾರ್ಗದರ್ಶನದಲ್ಲಿ ನಿರ್ವಹಿಸಲ್ಪಡುತ್ತಿದೆ. ಪ್ರತಿ ದಿನವೂ ಅತ್ಯಂತ ಶ್ರದ್ಧಾಭಕ್ತಿಗಳಿಂದ ಪೂಜೆ ಪುನಸ್ಕಾರಗಳು ನಡೆದು ಆ ಮಹಾಗಣಪತಿಯ ಅನುಗ್ರಹಕ್ಕೆ ಪಾತ್ರರಾಗಲು ನೂರಾರು ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಹಾಗೆ ಬರುವ ಭಕ್ತಾದಿಗಳಿಗೆ ಉಡುಪಿಯ ಪೇಜಾವರ ಮಠದ ವತಿಯಿಂದ ಪ್ರತಿ ದಿನವೂ ಅನ್ನ ಸಂತರ್ಪಣೆ ನಡೆಯುವುದು ಇಲ್ಲಿನ ವಿಶೇಷವಾಗಿದೆ. ಇನ್ನು ಹಬ್ಬ ಹರಿದಿನಗಳು ಮತ್ತು ಪ್ರತಿ ತಿಂಗಳ ಸಂಕಷ್ಟ ಚತುರ್ಥಿಯಲ್ಲದೇ, ಭಾದ್ರಪದ ಶುಕ್ಲ ಚೌತಿಯ ಗಣೇಶನ ಹಬ್ಬ ಮತ್ತು ಮೀನ ಮಾಸದಲ್ಲಿ ನಡೆಯುವ ರಥೋತ್ಸವಕ್ಕೆ ಸುತ್ತಮುತ್ತಲಿನ ಊರು ಮತ್ತು ಹೊರಗಿನ ಪ್ರದೇಶಗಳಿಂದಲು ಸಾವಿರಾರು ಭಕ್ತಾದಿಗಳು ಇಲ್ಲಿಗೆ ಬಂದು ಮಹಾಗಣಪತಿಯ ಉತ್ಸವದಲ್ಲಿ ಭಾಗಿಗಳಾಗುವುದು ವಿಶೇಷವಾಗಿದೆ.

appaಈ ಪೆರ್ಣಂಕಿಲ ಶ್ರೀ ಮಹಾಗಣಪತಿಗೆ ಅನ್ನ, ತೆಂಗಿನಕಾಯಿ, ತುಪ್ಪ ಮತ್ತು ಬೆಲ್ಲದಿಂದ ತಯಾರಿಸಿದ ಅಪ್ಪ ಎಂದರೆ ಬಲು ಇಷ್ಟ ಎಂಬ ಕಾರಣದಿಂದಾಗಿ ಗಣೇಶ ಚತುರ್ಥಿ ಮತ್ತು ವಾರ್ಷಿಕ ಜಾತ್ರೆಂದು ಲಕ್ಷಾಂತರ ಈ ಅಪ್ಪಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿದ ನಂತರ ಅದನ್ನೇ ನೆರದಿರುವ ಭಕ್ತಾದಿಗಳಿಗೆ ಹಂಚಲಾಗುತ್ತದೆ. ಇಷ್ಟೆಲ್ಲಾ ಪರಿಕರಗಳು ಸೇರಿಸಿ ತಯಾರಿಸಿ, ದೇವರಿಗೆ ನೈವೇದ್ಯ ಮಾಡಿದಂತಹ ಆ ದೇವರ ಪ್ರಸಾದದ ರುಚಿ ನಿಜಕ್ಕೂ ಅದ್ಭುತವಾಗಿರುತ್ತದೆ ಎನ್ನುವುದು ಅದನ್ನು ಸವಿದವರ ಅಭಿಪ್ರಾಯವಾಗಿದೆ.

ಈ ಬಲಮುರಿ ಗಣಪನಿಗೆ ಭಕ್ತಿಯಂದ ಹರಸಿಕೊಂಡು ಕೊಪ್ಪರಿಗೆ ಭರ್ತಿ ಅಪ್ಪವನ್ನು ನೈವೇದ್ಯ ರೂಪದಲ್ಲಿ ಒಪ್ಪಿಸಿದಲ್ಲಿ ಇಷ್ಟಾರ್ಥಗಳೆಲ್ಲವೂ ಈಡೇರುತ್ತದೆ ಎಂಬುದು ಇಲ್ಲಿನ ಭಕ್ತಾದಿಗಳ ನಂಬಿಕೆಯಾಗಿದೆ. ಇದಕ್ಕೆ ಪುರಾವೆಯಂತೆ ಇಲ್ಲಿಗೆ ಬಂದ ಅನೇಕ ಭಕ್ತಾದಿಗಳು ಕೋಟ್ಯಾಧಿಪತಿಗಳಾಗಿದ್ದಾರಂತೆ. ಅದೇ ರೀತಿಯಲ್ಲಿ ನಿರುದ್ಯೋಗಿಗಳಿಗೆ ಕೆಲಸದ ಭಾಗ್ಯ, ಅವಿವಾಹಿತರಿಗೆ ವಿವಾಹ ಭಾಗ್ಯ, ಸಂತಾನ ಹೀನರಿಗೆ ಸಂತಾನ ಭಾಗ್ಯ ಕರುಣಿಸಿಸುವುದಲ್ಲದೇ, ಅವರ ಎಲ್ಲಾ ಸಂಕಷ್ಟಗಳನ್ನೂ ಈಡೇರಿಸುತ್ತಾನೆ ಎಂಬುದು ಇಲ್ಲಿನ ಭಕ್ತಾದಿಗಳ ನಂಬಿಕೆಯಾಗಿದೆ.

per_Templeತಮ್ಮ ಸ್ವಂತ ವಾಹನಗಳ ಮೂಲಕ ಪೆರ್ಣಂಕಿಲಕ್ಕೆ ಬಹಳ ಸುಲಭವಾಗಿ ಹೋಗಿ ಬರಬಹುದಲ್ಲದೇ, ಉಡುಪಿಯಿಂದಲೂ ಪ್ರತೀ ಅರ್ಧ ಘಂಟೆಗೊಂದರಂತೆ ಸಾಕಷ್ಟು ಖಾಸಗಿ ಬಸ್ಸುಗಳು ಲಭ್ಯವಿದ್ದು, ಈ ಬಸ್ಸುಗಳ ಸೇವೆ ಬೆಳಿಗ್ಗೆಯಿಂದ ರಾತ್ರಿ 8 ಘಂಟೆಯವರೆಗೂ ಇರುತ್ತದೆ. ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕ ತಡಾ, ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಪೆಂರ್ಣಂಕಿಲಕ್ಕೆ ಭೇಟಿ ನೀಡಿ ಮಹಾಗಣಪತಿಯ ಮತ್ತು ಶಿವನ ದರ್ಶನ ಪಡೆದು ನಿಮ್ಮ ಅನುಭವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

One thought on “ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ

  1. Very usefull information about the temple and the past histroy of this lord Ganesha and Eshwara .. after reading the artical ..bro …i hv decided sure when i go to udupi without missing im going to visit this temple tooo ..thank u ..keep rocking with new new articals …❤🙏💐

    Liked by 1 person

Leave a comment