ವೈಯ್ಯಾಳೀಕಾವಲ್

ಒಂದು ಕಡೆ, ಮತ್ತೊಂದೆಡೆ ಅರಮನೆ, ಗುಟ್ಟಹಳ್ಳಿ, ಮಲ್ಲೇಶ್ವರ ಹೀಗೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳ ಮಧ್ಯದಲ್ಲೇ ಬಹುತೇಕ ಉನ್ನತ ಮಧ್ಯಮ ವರ್ಗದ ಜನರೇ ವಾಸಿರುವ ಪ್ರದೇಶವೇ ವೈಯ್ಯಾಳೀಕಾವಲ್ . ಕಳೆದ ವಾರ ಚೌಡಯ್ಯ ಸ್ವಾರಕ ಭವನದ ಬಗ್ಗೆಯ ಲೇಖನದಲ್ಲಿ ಗಾಯತ್ರಿಪಾರ್ಕ್ ಬಗ್ಗೆ ಪ್ರಸ್ತಾಪ ಮಾಡಿದ್ದಾಗ, ಬಹುತೇಕರು ಈ ಗಾಯತ್ರೀ ಪಾರ್ಕ್ ಎಲ್ಲಿದೇ? ಎಂಬುದಾಗಿ ಕೇಳಿದ್ದರು. ಹಾಗಾಗಿಯೇ ಗಾಯತ್ರೀ ಪಾರ್ಕ್ ಮತ್ತು ಚೌಡಯ್ಯ ಸ್ವಾರಕ ಭವನ ಎರಡೂ ಇರುವ ವೈಯ್ಯಾಳೀಕಾವಲ್ ಪ್ರದೇಶಕ್ಕೆ ಆ ಹೆಸರು ಬರಲು ಒಂದು ಐತಿಹಾಸಿಕವಾದ ಕಥೆಯಿದ್ದು ಅದನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

vijayanagara

ನಮಗೆಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತದ ಅನೇಕ ರಾಜರುಗಳು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ, ರಾಜ್ಯಭಾರವನ್ನು ನಡೆಸಿಕೊಂಡು ಹೋಗುತ್ತಿದ್ದರು. ಅಂತಹ ಸಾಮಂತರುಗಳಲ್ಲಿ ಬೆಂಗಳೂರು ನಗರದ ನಿರ್ಮಾತರಾದ ಶ್ರೀ ಕೆಂಪೇಗೌಡರೂ ಸಹಾ ಒಬ್ಬರಾಗಿದ್ದು, ವಿಜಯ ನಗರ ಸಾಮ್ರಾಜ್ಯದಲ್ಲಿದ್ದ ಹಂಪೆಯನ್ನು ನೋಡಿ ಬಂದ ನಂತರ ಅಂತಹದ್ದೇ ಒಂದು ಸುಂದರವಾದ ಸುಸಜ್ಜಿತವಾದ ಮತ್ತು ಉತ್ತಮವಾಗಿ ಯೋಜಿತವಾದ ನಗರವೊಂದನ್ನು ಕಟ್ಟಬೇಕೆಂಬ ಆಸೆಯಿಂದ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆ ಬೆಂಗಳೂರನ್ನು ನಿರ್ಮಿಸುತ್ತಾರೆ. ರಾಜಾ ಪ್ರತ್ಯಕ್ಷ ದೇವತ ಎಂಬುದಲ್ಲಿ ಬಹಳವಾಗಿ ನಂಬಿಕೆ ಇಟ್ಟಿದ್ದ ಕೆಂಪೇಗೌಡರು, ವಿಜಯನಗರ ಸಾಮ್ರಾಜ್ಯಕ್ಕೆ ಬಹಳ ಗೌರವಯುತವಾಗಿ ನಡೆದುಕೊಳ್ಳುತ್ತಿರುತ್ತಾರೆ. ವಿಜಯನಗರದ ಅತ್ಯಂತ ದಕ್ಷ ಮತ್ತು ಹೆಮ್ಮೆಯ ರಾಜರಾದ ಶ್ರೀ ಕೃಷ್ಣದೇವರಾಯರ ನಂತರ ವಿಜಯನಗರದ ಆಡಳಿತ ಚುಕ್ಕಾಣಿ ಹಿಡಿದವರು ದಕ್ಷರಾಗಿಲ್ಲದಿದ್ದ ಕಾರಣ ಬಹುತೇಕ ಸಾಮಂತರು ವಿಜಯನಗರ ಸಾಮ್ರಾಜಯದ ವಿರುದ್ಧ ಸಿಡಿದೆದ್ದು ಸ್ವತಂತ್ರರಾಗುತ್ತಾರೆ. ಅಂತಹ ಸಿಡಿದೆದ್ದು ಸ್ವತ್ರಂತ್ರವಾದ ರಾಜ್ಯಗಳಲ್ಲಿ ನಮ್ಮ ಮೈಸೂರು ರಾಜ್ಯವೂ ಸಹಾ ಒಂದಾಗಿದ್ದರೂ, ಶ್ರೀ ಕೆಂಪೇಗೌಡರ ನಿಯತ್ತು ವಿಜಯನಗರದ ಪರವಾಗಿಯೇ ಇದ್ದು, ಬಹಳ ನಿಯತ್ತಿನಿಂದ ಕಾಲ ಕಾಲಕ್ಕೆ ಕಪ್ಪ ಕಾಣಿಕೆಗಳನ್ನು ಕೊಡುತ್ತಾ ಬಹಳ ಪ್ರಾಮಾಣಿಕತೆಯಿಂದ ರಾಜ್ಯಭಾರ ಮಾಡುತ್ತಿರುತ್ತಾರೆ.

kempegowda

ದುರಾದೃಷ್ಟವಷಾತ್ ಚನ್ನಪಟ್ಟಣದ ಅಂದಿನ ಪಾಳೇಗಾರರಾಗಿದ್ದ ಶ್ರೀ ಜಗದೇವರಾಯರು, ಬೆಂಗಳೂರಿನ ನಾಡಪ್ರಭು ಕೆಂಪೇಗೌಡರ ಮೇಲಿನ ವಯಕ್ತಿಕ ದ್ವೇಷದಿಂದಾಗಿ, ಕೆಂಪೇಗೌಡರು ವಿಜಯನಗರದ ಸಾಮಂತಿಕೆಯಿಂದ ದೂರ ಸರಿಯುವ ಉದ್ದೇಶದಿಂದ ತಮ್ಮದೇ ಭೈರವ ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ನಾಣ್ಯಗಳ ಚಲಾವಣೆ ಮಾಡುತ್ತಿದ್ದಾರೆ ಎಂದು ವಿಜಯನಗರದ ಸಾಮ್ರಾಜ್ಯರ ಬಳಿ ದೂರನ್ನು ಹೇಳಿದಾಗ, ಅಂದಿನ ರಾಜರು ಆ ದೂರಿನ ಹಿಂದಿರುವ ಸತ್ಯಾಸತ್ಯತೆಯನ್ನು ಕೂಲಂಕುಶವಾಗಿ ಪರೀಕ್ಷಿಸದೇ, ರಾಜದ್ರೋಹದ ಆರೋಪದ ಮೇರೆಗೆ ಶ್ರೀ ಕೆಂಪೇಗೌಡರನ್ನು ಬಂಧಿಸಿ ಅನೇಗುಂದಿಯ ಸೆರೆಮನೆಯಲ್ಲಿ ಕೂಡಿ ಹಾಕಿ ಸುಮಾರು ಐದು ವರ್ಷಗಳ ನಂತರ ತನ್ನ ತಪ್ಪಿನ ಅರಿವಾಗಿ, ಹಿರಿಯ ಕೆಂಪೇಗೌಡರನ್ನು ಸಕಲ ಮರ್ಯಾದೆಯೊಂದಿಗೆ ಯಲಹಂಕಕ್ಕೆ ಮರಳಿ ಕಳುಹಿಸಿಕೊಡಲಾಗುತ್ತದೆ.

ತಮ್ಮದೇನೂ ತಪ್ಪಿಲ್ಲದಿದ್ದರೂ ಬಂಧಿಯಾಗಿ, ನಂತರ ಬಂಧ ಮುಕ್ತರಾಗಿ ತಮ್ಮ ರಾಜ್ಯಕ್ಕೆ ಹಿಂದಿರುಗಿದ ಕೆಂಪೇಗೌಡರು ತಮ್ಮ ಅನುಪಸ್ಥಿತಿಯಲ್ಲಿ, ಇಡೀ ರಾಜ್ಯವನ್ನು ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಚನ್ನಾಗಿಯೇ ಸಂಭಾಳಿಸಿದ್ದನ್ನು ಪ್ರಜೆಗಳಿಂದ ತಿಳಿದ ನಂತರ, ಹೇಗೂ ತಮಗೆ ವಯಸ್ಸಾಗಿರುವ ಕಾರಣ, ಇನ್ನು ಮುಂದೆ ರಾಮಕೃಷ್ಣಾ ಗೋವಿಂದಾ ಎಂದು ಭಗವಂತನ ಧಾನ್ಯದಲ್ಲಿ ಕಳೆಯೋಣ ಎಂದು ನಿರ್ಧರಿಸಿ, ಇಡೀ ರಾಜ್ಯವನ್ನು ಸಂತೋಷದಿಂದ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ವಹಿಸಿ ತಮ್ಮ ರಾಜ್ಯದಲ್ಲಿ ಇದ್ದ ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರದ ಜೊತೆಗೆ ದೇವಾಲಯಗಳು ಇಲ್ಲದಿದ್ದ ಜಾಗದಲ್ಲಿ ಹೊಸಾ ದೇವಸ್ಥಾನಗಳ ನಿರ್ಮಾಣಕ್ಕಾಗಿ ತಮ್ಮೆಲ್ಲಾ ಸಮಯವನ್ನು ಮೀಸಲಾಗಿಡುತ್ತಾರೆ.

ಸುಮಾರು ವರ್ಷಗಳ ಕಾಲ ಪ್ರಜೆಗಳ ಸಂಪರ್ಕದಿಂದ ದೂರವಿದ್ದ ಕೆಂಪೇಗೌಡರು ಅದೊಮ್ಮೆ ಯಲಹಂಕದಿಂದ ಮಲ್ಲೇಶ್ವರದಲ್ಲಿ ತಾವೇ ಜೀರ್ಣೋದ್ಧಾರ ಮಾಡಿಸಿದ್ದ, ಶ್ರೀ ಕಾಡುಮಲ್ಲೇಶ್ವರ ದೇವಸ್ಥಾದ ಸ್ವಾಮಿಯ ದರ್ಶನಕ್ಕೆ ಬರುವುದಾಗಿ ತಮ್ಮ ಭಟರ ಮೂಲಕ ಅಲ್ಲಿನ ಅರ್ಚಕರಿಗೆ ಹೇಳಿ ಕಳುಹಿಸಿದ ವಿಷಯ ಅರ್ಚಕರು ತಮ್ಮ ಆಪ್ತ ಬಳಿ ಸಂತೋಷದಿಂದ ಹಂಚಿಕೊಂಡಿದ್ದು ಬಾಯಿಂದ ಬಾಯಿಗೆ ಹರಡುತ್ತದೆ. ನಾಡ ಪ್ರಭುಗಳೇ ತಮ್ಮ ದೇವಾಲಯಕ್ಕೆ ಬರುತ್ತಿರುವುದರಿಂದ ಅವರನ್ನು ಹತ್ತಿರದಿಂದ ನೋಡಿ ಅವರಿಗೆ ತಮ್ಮ ಭಕ್ತಿಪೂರ್ವಕ ನಮಸ್ಕಾರಗಳನ್ನು ಸಲ್ಲಿಸುವ ಸಲುವಾಗಿ ಬೆಳಗ್ಗಿನಿಂದಲೇ ದೇವಾಲಯದ ಬಳಿ ಜನಸಂದಣಿಯಾಗುತ್ತದೆ. ಕೆಂಪೇಗೌಡರು ಯಲಹಂಕದಿಂದ ಬೆಳಿಗ್ಗೆ ಹೊರಟು ಶ್ರೀ ಕಾಡುಮಲ್ಲೇಶ್ವರ ದೇವಾಲಯದಿಂದ ಸುಮಾರು ಒಂದು ಮೈಲಿ ಇರುವಷ್ಟು ದೂರ ತಲುವಷ್ಟರಲ್ಲಿ ಮಧ್ಯಾಹ್ನವಾಗಿದ್ದರೂ, ಅಲ್ಲಿಂದಲೇ ಪ್ರಭುಗಳನ್ನು ನೋಡಲು ಭಾರೀ ಜನಸಾಗರವೇ ಅಲ್ಲಿ ನೆರೆದಿದ್ದಲ್ಲದೇ, ಪ್ರಭುಗಳಿಗೆ ಜೈಕಾರ ಹಾಕುತ್ತಾ ಅವರಿಗೆ ಸಕಲ ರಾಜ ಮರ್ಯಾದೆಗಳಿಂದ ಬೆಳ್ಳಿ ಫಲಕದ ಉಯ್ಯಾಲೆಯ ಮೇಲೆ ಕೂರಿಸಿ ಹಾಲಿನ ಅಭಿಷೇಕ ಮಾಡಿಸಿ ನಂತರ ಆ ಇಡೀ ಜನಸ್ತೋಮದೊಂದಿಗೇ ಕೆಂಪೇಗೌಡರು ಕಾಡುಮಲ್ಲೇಶ್ವರನ ದರ್ಶನ ಮಾಡಿಸುತ್ತಾರೆ. ಅಂದು ಕೆಂಪೇಗೌಡರನ್ನು ಉಯ್ಯಾಲೆ ಮೇಲೆ ಸಮ್ಮಾನಿಸಿದ ಸ್ಥಳವೇ ಮುಂದೆ ಉಯ್ಯಾಲೆ ಕಾವಲು ಎಂದು ಪ್ರಸಿದ್ಧಿಯಾಗಿ ನಂತರದ ದಿನಗಳಲ್ಲಿ ಆಡು ಭಾಷೆಯಲ್ಲಿ ಅಪಭ್ರಂಷವಾಗಿ ವೈಯ್ಯಾಳೀಕಾವಲ್ ಎಂದಾಗಿದೆ ಎಂದು ಬಲ್ಲವರು ಹೇಳುವುದು ಗಮನಾರ್ಹವಾಗಿದೆ.

WhatsApp Image 2023-06-29 at 22.26.36ನಮ್ಮ ಭಾಷೆ ಮತ್ತು ದೇಶದಲ್ಲಿ ಪ್ರತಿಯೊಂದು ಪದ ಮತ್ತು ಪ್ರದೇಶಕ್ಕೂ ವಿವಿಧ ಅರ್ಥ ಮತ್ತು ವಿವಿಧ ಕತೆಗಳು ಇದ್ದು ವಯ್ಯಾಳೀಕಾವಲ್ ಹೆಸರು ಬರಲು ಗ್ರಾಂಥಿಕವಾಗಿ ಮತ್ತೊಂದು ಇತಿಹಾಸವಿದೆ. ಅದೇ ರೀತಿ ಇಗೋ ಕನ್ನಡ ಪ್ರಖ್ಯಾತಿಯ ಶತಾಯುಷಿಗಳಾದ ಪ್ರೋ. ವೆಂಕಟಸುಬ್ಬಯ್ಯನವರ ಗ್ರಂಥದಲ್ಲಿ ವೈಯ್ಯಾಳೀಕಾವಲ್ ಹೆಸರು ಹೇಗೆ ಬಂದಿರಬಹುದೆಂಬುದನ್ನು ಹೀಗೆ ತಿಳಿಸಲಾಗಿದೆ

ಸಂಸ್ಕೃತದಲ್ಲಿ ವಯ್ಯಾಳಿ ಎಂದರೆ ಕುದುರೆ, ಆನೆ, ಒಂಟೆ, ಟಗರು ಮುಂತಾದವುಗಳ ಮೇಲೆ ಕುಳಿತು ಮಾಡುವ ಸವಾರಿ ಎಂಬರ್ಥ ಬರುತ್ತದೆ ವಯ್ಯಾಳಿ ಎಂಬ ಪದ ಕನ್ನಡದ ಕಾವ್ಯಗಳಲ್ಲಿ ಅನೇಕ ಕಡೆ ಬಳಕೆಯಾಗಿದ್ದು. ಅದು ವೈಹಾಳಿ, ಒಯ್ಯಾಳಿ, ವೈಹಳಿ ಮುಂತಾದ ರೂಪದಲ್ಲಿ ಉಪಯೋಗಿಸಲ್ಪಟ್ಟಿದೆ. ಬಸವಪುರಾಣದಲ್ಲಿ ವಸುಮತೀಶ್ವರನ್ ಅಖಿಲ ಪರಿವಾರ ಸಹಿತಂ ವಯ್ಯಾಳಿಗೆಯ್ವಾವಸರದಲಿ ಎಂದಿದೆ. ಹರಿಹರನ(1200) ನಂಬಿಯಣ್ಣನ ರಗಳೆಯಲ್ಲಿ ರಂಜಿಸುವ ಮಹಿಷಯುದ್ಧಂಗಳಂ ಕಾಣುತುಂ ಕರಿತುರಗ ವೈಹಾಳಿಯೊಳ್ ಬೆರಸಿ ಬಳೆವುತುಂ ಎಂಬ ಸೊಗಸಿನ ವರ್ಣನೆಯೂ ಇದೆ.

ವೈಯ್ಯಾಳಿ ಎಂದರೆ ಕುದುರೆ ಸವಾರಿಯನ್ನು ಪ್ರದರ್ಶಿಸುವ ಸ್ಥಳ ಅಥವಾ ಮೈದಾನ ಎಂಬುದಾಗಿಯೂ ಇದ್ದು, ವೈಹಳಿಗ ಎಂದರೆ ಕುದುರೆಸವಾರ ಎಂಬರ್ಥವೂ ಬರುತ್ತದೆ. ಹಾಗಾಗಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಪ್ರಸ್ತುತವಾದ ವೈಯ್ಯಾಳಿ ಕಾವಲ್ ಇದ್ದ ಜಾಗದಲ್ಲಿ ಕುದುರೆ ಸವಾರಿ ಮಾಡುವ ವಿಶಾಲವಾದ ಮೈದಾನವಿದ್ದಿತಂತೆ. ಹಾಗಾಗಿ ವೈಯ್ಯಾಳಿ ಎಂದರೆ ಕುದುರೆ, ಕಾವಲ್ ಎಂದರೆ ಕಾವಲು ಇರುವ ಸ್ಥಳ ಇವೆರಡೂ ಸೇರಿ ವೈಯ್ಯಾಳಿಕಾವಲ್ ಎಂದು ಪ್ರದೇಶಕ್ಕೆ ಕರೆಯಲಾಯಿತು ಎಂದೂ ಸಹಾ ಹೇಳಲಾಗುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ, ವಯ್ಯಾಳಿಕಾವಲ್ ಬಳಿಯ ಗುಟ್ಟಹಳ್ಳಿಯ ಮತ್ತು ಇಂದಿನ ಮಲ್ಲೇಶ್ವರಂ ಸರ್ಕಲ್ ಬಳಿ ಈ ಹಿಂದೆ ದೊಡ್ಡ ಜಟಕಾ ಸ್ಟಾಂಡ್ ಇತ್ತು.

ಇನ್ನು ವಯಕ್ತಿಕವಾಗಿ ನಮ್ಮ ತಾತನವರಾದ ಶ್ರೀ ಗಮಕಿ ನಂಜುಂಡಯ್ಯನವರು ನಮ್ಮೂರು ಬಾಳಗಂಚಿಯಿಂದ ಬೆಂಗಳೂರಿಗೆ ಕುದುರೆಯ ಮೇಲೇ ಬಂದು ಇಂದಿನ ಟಾಟಾ ಇನಿಸ್ಟಿಟ್ಯೂಟ್ ನಲ್ಲಿದ್ದ ಅವರ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಾಗ, ತಮ್ಮ ಕುದುರೆ ಮೇಯಲೆಂದು ಇದೇ ಕಾಡುಮಲ್ಲೇಶ್ವರ ದೇವಾಸ್ಥಾನದ ಎದುರಿಗಿನ ಜಾಗವನ್ನು ಖರೀದಿಸಿದ್ದ ರೋಚಕ ಕಥೆ ಈ ಕೊಂಡಿಯ ಮೂಲಕ ಓದಿದದಲ್ಲಿ ವಯ್ಯಾಳೀಕಾವಲ್ ಮತ್ತು ಕುದುರೆ ಮೈದಾನಕ್ಕೂ ಇದ್ದ ಅವಿನಾಭಾವದ ಸಂಬಂಧ ಅರಿವಾಗುತ್ತದೆ

TTD_Temple

ಕೆಂಪೇಗೌಡರ ಕಾಲದ ಉಯ್ಯಾಲೆ ಕಾವಲ್ ಇಂದು ವೈಯ್ಯಾಳೀಕಾವಲ್ ಆಗಿ ಭಾರೀ ಬೆಳವಣಿಗೆಯನ್ನು ಕಂಡಿದೆ. ವಿಶ್ವದಲ್ಲಿ ಅತ್ಯಂತ ಸಿರಿವಂತ ದೇವರು ಎಂದರೆ ತಿರುಪತಿ ತಿಮ್ಮಪ್ಪ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆ ಸಪ್ತಗಿರಿವಾಸ ವೇಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುವುದು ಎಲ್ಲರಿಗೂ ಸಲೀಸಾಗಿರದ ಕಾರಣ, ತಿರುಪತಿಯ ದೇವಾಲಯದ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಸಮಿತಿಯೇ ಚೌಡಯ್ಯಾ ಸ್ಮಾರಕದಿಂದ ಕೂಗಳತೆಯ ದೂರದಲ್ಲೇ, 2010 ರಲ್ಲಿ ಭವ್ಯವಾದ ವೇಂಕಟೇಶ್ವರ ಸ್ವಾಮಿಯ ದೇವಾಲಯವನ್ನು ನಿರ್ಮಿಸಿದೆ. ಈ ದೇವಾಲಯದಲ್ಲಿ ವೆಂಕಟೇಶ್ವರ ಸ್ವಾಮಿ, ಪದ್ಮಾವತಿದೇವಿ , ಆಂಡಾಳ್ ಅಮ್ಮನವರು, ರಾಮ, ಸೀತಾ ದೇವಿ, ಲಕ್ಷ್ಮಣ, ಹನುಮಾನ್, ಗಣೇಶ, ರಾಧಾ ಮತ್ತು ಕೃಷ್ಣ ಹೀಗೆ ಒಟ್ಟು 7 ದೇವತೆಗಳ ಕಲ್ಲಿನ ಕೆತ್ತನೆಗಳು ನಯನ ಮನೋಹರವಾಗಿದ್ದು. ತಿರುಮಲದಲ್ಲಿ ಮಾಡುವ ಪೂಜಾ ವಿಧಿ ವಿಧಾನದ ರೀತಿಯಲ್ಲಿಯೇ ಇಲ್ಲಿಯೂ ಸಹಾ ನಡೆಯುವುದು ವಿಶೇಷವಾಗಿದೆ

ಹಬ್ಬ ಹರಿ ದಿನಗಳು, ಶ್ರಾವಣ ಶನಿವಾರ ಮತ್ತು ವೈಕುಂಠ ಏಕದಶಿಯಂದು ಸ್ವಾಮಿಯ ದರ್ಶನಕ್ಕೆ ವಿಪರೀತ ಜನಸಮೂಹ ಇಲ್ಲಿ ಸೇರುತ್ತದೆ. ಅದೇ ರೀತಿಯಲ್ಲಿ ತಿರುಮಲದಲ್ಲಿರುವ ತಿಮ್ಮಪ್ಪನ ದರ್ಶನಕ್ಕೆ ಮತ್ತು ವಿವಿಧ ಸೇವೆಗಳಿಗೆ ಟಿಕೆಟ್‌ಗಳನ್ನು ಮುಂಗಡವಾಗಿ ಇಲ್ಲಿರುವ ಕಾರ್ಯಾಲಯದಿಂದ ಕಾಯ್ದಿರಿಸಬಹುದಾಗಿದೆ.

ಚೌಡಯ್ಯ ಸಭಾಂಗಣದ ಬಲ ಭಾಗದಲ್ಲಿ ಟಿಟಿಡಿ ಇದ್ದರೆ, ಎಡ ಭಾಗದಲ್ಲಿ, ಹಿಂದೂಗಳ ಅಪರಕರ್ಮಗಳಿಗಾಗಿ ವೈದಿಕ ಧರ್ಮ ಸಭಾ ಇದೆ. ಈ ಸಭೆ ಬರುವ ಮುನ್ನಾ ಆ ಜಾಗದಲ್ಲಿ ಟೆಂಟ್ ಚಿತ್ರಮಂದಿರ ಇದ್ದು ಅದರಲ್ಲಿ ಸಿನಿಮಾ ನೋಡಿರುವುದನ್ನೂ ಇಂದಿಗೂ ಹಿಂದಿನ ತಲೆಮಾರಿನವರು ನೆನಪಿಸಿಕೊಳ್ಳುತ್ತಾರೆ. ಆದೇ ರೀತಿಯಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಲಾದ ಸ್ಯಾಂಕಿ ಆಂಜನೇಯ ದೇವಾಲಯ ಇದ್ದರೆ, ವೈಯಾಲಿಕಾವಲ್ ಮುಖ್ಯ ರಸ್ತೆಗೆ ಅಂಟಿಕೊಂಡೇ ಇರುವ ಭಾಷ್ಯಂ ವೃತ್ತ ಮತ್ತು ಸ್ಯಾಂಕಿ ಕೆರೆಯ ಏರಿ ಇಂದು ಪ್ರಮುಖ ರಸ್ತೆಯಾಗಿದ್ದರೆ, ಎರಡು ಮೂರು ದಶಕಗಳ ಹಿಂದೆ ಆ ಏರಿಯ ಅಕ್ಕಪಕ್ಕದಲ್ಲಿ ಹಾಕಿದ್ದ ಕಲ್ಲಿನ ಬೆಂಚುಗಳ ಮೇಲೆ ಸಂಜೆಯ ಹೊತ್ತು ಸುತ್ತಮುತ್ತಲಿನ ಜನರು ಕುಟಂಬ ಸಮೇತರಾಗಿ ಬಂದು ಕುಳಿತುಕೊಂಡು ಕೆರೆಯ ಸೌಂದರ್ಯದ ಜೊತೆ ಆಹ್ಲಾದಕರ ಗಾಳಿಯನ್ನು ಸವಿಯುತ್ತಾ, ಕಡಲೇ ಕಾಯಿ, ಚುರುಮುರಿ ತಿನ್ನುತ್ತಿದ್ದದ್ದನ್ನೂ ಅನೇಕರು ಮೆಲುಕು ಹಾಕುತ್ತಾರೆ. ಇಲ್ಲಿಯೂ ಸಹಾ ಕನ್ನಡದ ಅನೇಕ ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ.

rama_vyallikava

ಇದೇ ವೈಯ್ಯಾಳೀ ಕಾವಲ್ 14 ಕ್ರಾಸ್, 9 ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಮ ಮಂದಿರ ಅತ್ಯಂತ ಜನಪ್ರಿಯ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದ್ದುರ್ಷದ 365 ದಿನಗಳೂ ಒಂದಲ್ಲಾ ಒಂದು ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಅಸ್ಥಿಕರ ಪಾಲಿನ ನೆಚ್ಚಿನ ಕ್ಷೇತ್ರವಾಗಿರುವುದು ವಿಶೇಷವಾಗಿದೆ. ಇದೇ ರಾಮ ಮಂದಿರದ ಎದುರಿಗಿನ ರಸ್ತೆಯ ಬಾಡಿಗೆ ಮನೆಯಲ್ಲೇ ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಹಿಂದಿನ ಶಕ್ತಿಯಾಗಿದ್ದ ಅವರ ತಮ್ಮ ವರದಪ್ಪನವರು ಬಹಳ ವರ್ಷಗಳ ಕಾಲ ಜೀವಿಸಿದ್ದರು. ಅದೆಷ್ಟೋ ಬಾರಿ ಪಾರ್ವತಮ್ಮನವರು ಕೆಲಸ ಮೇಲೆ ಹೋಗುವಾಗಿ ಸಣ್ಣವನಾಗಿದ್ದ ಲೋಹಿತ್ (ಪುನೀತ್ ರಾಜಕುಮಾರ್) ಅವರನ್ನು ವರದಪ್ಪನವರ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದ ಕಾರಣ, ಪವರ್ ಸ್ಟಾರ್ ಪುನೀತ್ ಸಹಾ ತಮ್ಮ ಬಾಲ್ಯದ ಬಹುತೇಕ ದಿನಗಳನ್ನು ಇದೇ ವೈಯ್ಯಾಳೀ ಕಾವಲ್ಲಿನಲ್ಲಿ ಕಳೆದಿದ್ದಾರೆ. ವರದಪ್ಪನವರ ಎದುರಿಗಿನ ಮನೆಯೇ ನಮ್ಮ ಸೋದರತ್ತೆಯವರದ್ದಾಗಿದ್ದರಿಂದ, ಅತ್ತೆಯ ಮನೆಗೆ ಹೋದಾಗ ಅದೆಷ್ಟೋ ಬಾರಿ ಸಣ್ಣ ವಯಸ್ಸಿನ ಪುನೀತ್ ಅವರೊಂದಿಗೆ ಅದೇ ರಸ್ತೆಯಲ್ಲಿ ಆಟವಾಡಿರುವ ನೆನಪು ಹಚ್ಚ ಹಸಿರಾಗಿದೆ.

ಅದೇ ರೀತಿ ವಯ್ಯಾಳೀಕಾವಲ್ ರಾಮಮಂದಿರದ ಎದುರಲ್ಲೇ ಇದ್ದ ಸಣ್ಣದಾದ ಷೀಟ್ ಮನೆಯಲ್ಲೇ ಕನ್ನಡದ ಮತ್ತೊಬ್ಬ ಖ್ಯಾತ ಖಳನಟ ಸುಧೀರ್ ಸಾಗರ್ ಅನೇಕ ವರ್ಷಗಳ ವಾಸಿಸುತ್ತಿದ್ದದನ್ನೂ ನೋಡಿದ್ದೇನೆ. ವಯ್ಯಾಳೀಕಾವಲ್ಲಿನ 14ನೇ ಅಡ್ಡರಸ್ತೆಯಲ್ಲೇ ಖ್ಯಾತ ಗೀತರಚನೆಕಾರ ಮತ್ತು ನಿರ್ದೇಶಕರಾದ ಶ್ರೀ ಗೀತಪ್ರಿಯ ಅವರು ವಾಸಿಸುತ್ತಿದ್ದರೆ, ಕನ್ನಡ ಚಲನಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ತಮ್ಮ‌ ಆರಂಭಿಕ ಜೀವನವನ್ನು ಇಲ್ಲೇ‌ ಕಳೆದಿದ್ದರು

ಇನ್ನು ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕೆಲಕಾಲ ಮಿಂಚಿ ನಂತರ ಈಗ ವಿವಿಧ ಧಾರಾವಾಹಿಯಲ್ಲಿ ನಟಿಯಾಗಿರುವ ಭವ್ಯಶ್ರೀ ರೈ, ಕಾಶೀನಾಥ್ ಅವರ ಚಿತ್ರದ ಮೂಲಕ ಪ್ರವರ್ಧಮಾನಕ್ಕೆ ಬಂದ ಅಂಜಲಿ ಕೂಡಾ ಸಹಾ ಇದೇ ವಯ್ಯಾಳೀಕಾವಲ್ಲಿನಲ್ಲಿರುವ ಸ್ಟೆಲ್ಲಾ ಮೇರೀಸ್ ಶಾಲೆಯಲ್ಲೇ ಓದಿ ಬೆಳೆದವರು. ಹೀಗೆ ಈ ಬಡಾವಣೆ ನಾಡಿಗೆ ಅನೇಕ ಖ್ಯಾತನಾಮರನ್ನು ನೀಡಿದೆ.

ಭವ್ಯಶ್ರೀ ರೈ ಅವರಂತೂ ಅದೇ ಸ್ಟೆಲ್ಲಾ ಮೇರೀಸ್ ಶಾಲೆಯಲ್ಲಿ ಗಣಿತದ ಅಧ್ಯಾಪಕಿಯಾಗಿದ್ದ ಮತ್ತು ವಯ್ಯಾಳೀ ಕಾವಲ್ ಮುಖ್ಯರಸ್ತೆಯಲ್ಲಿಯೇ ಇರುವ ಮನೆಯಲ್ಲೇ ವಾಸವಾಗಿರುವ ಖ್ಯಾತ ಸಂಸ್ಕೃತ ಪರಿಣಿತೆಯಾದ ಶ್ರೀಮತಿ ಅನಂತಲಕ್ಷ್ಮಿ ನಟರಾಜ್ ಅವರ ಬಳಿ ಸಂಸ್ಕೃತ ಮತ್ತು ಶ್ಲೋಕಗಳನ್ನು ಕಲಿತಿದ್ದದ್ದಲ್ಲದೆ, ಅವರ ನೂರಾರು ನೃತ್ಯ ರೂಪಕಗಳಲ್ಲಿ ಅಭಿನಯಿಸುವುದರ ಮೂಲಕ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದಿರುವುದು ಗಮನಾರ್ಹವಾಗಿದೆ.

rajesh-restaurant-sadashivanagar-bangalore-home-delivery-restaurants-glfxgf

ವಯ್ಯಾಳೀಕಾವಲ್ ಮುಖ್ಯರಸ್ತೆಯಲ್ಲೇ 80ರ ದಶಕದಿಂದಲೂ ಇರುವ ಹೋಟೆಲ್ ರಾಜೇಶ್ ದಕ್ಷಿಣ ಭಾರತೀಯ ಆಹಾರ ತಿನಿಸುಗಳು ಮತ್ತು ಚಾಟ್ಸ್ ಪದಾರ್ಥಗಳಿಗೆ ಅತ್ಯಂತ ಹೆಸರುವಾಸಿಯಾಗಿದೆ. ಒಂದು ಕಾಲದಲ್ಲಿ ರಾಜೇಶ್ ಹೋಟೆಲ್ಲಿನ ಮಸಾಲೆ ದೋಸೆ, ಬೊಂಡಾ ಸೂಪ್ ಮತ್ತು ವಿವಿಧ ಬಗೆಯ ಬಜ್ಜಿಗಳು ಮತ್ತು ಬಿಸಿ ಬಿಸಿ ನೊರೆಭರಿತ ಫಿಲ್ಟರ್ ಕಾಫಿಯ ಸವಿರುಚಿಯನ್ನು ಅನುಭವಿಸಲು ಬೆಂಗಳೂರಿನ ನಾನಾ ಬಡಾವಣೆಗಳಿಂದಲೂ ಅಲ್ಲಿಗೆ ಬರುತ್ತಿದ್ದರಂತೆ.

ವಯ್ಯಾಳೀಕಾವಲ್ ಪೋಲೀಸ್ ಠಾಣೆಯಿಂದ ಗುಟ್ಟಳ್ಳಿಯ ವೃತ್ತದ ಮದ್ಯದಲ್ಲಿ 60 ರ ದಶಕದಿಂದಲೂ ಇರುವ ಶ್ರೀನಿವಾಸ ಐಯ್ಯಂಗಾರ್ ಬೇಕರಿಬ್ರೆಡ್, ಬನ್, ಖಾರಾ ಬನ್ ಪಪ್ಸ್, ಆಲೂಬನ್ನುಗಳು ಅತ್ಯಂತ ಜನಪ್ರಿಯವಾಗಿದ್ದು ಈ ಬೇಕರಿಯ ಪದಾರ್ಥಗಳನ್ನು ಸವಿಯುವ ಸಲುವಾಗಿ ಅಕ್ಕ ಪಕ್ಕದ ಸದಾಶಿವನಗರ, ಗುಟ್ಟಹಳ್ಳಿ ಮತ್ತು ಪ್ಯಾಲೇಸ್ ಆರ್ಚರ್ಡ್ಸ್ ಪ್ರದೇಶಗಳ ಜನರೂ ಬರುವಷ್ಟು ಬಹಳ ಜನಪ್ರಿಯವಾಗಿತ್ತು.

ಇನ್ನು ಬೆಂಗಳೂರಿನ ಬಹುತೇಕ ಔಷಧಿ ಅಂಗಡಿಗಳಿಗೆ ವಿವಿಧ ರೀತಿಯ ಔಷಧಿಗಳನ್ನು ಸರಬರಾಜು ಮಾಡುವ ಖ್ಯಾತ ಜಾಹ್ನವಿ ಮೆಡಿಕಲ್ಸ್ ಇರುವುದೂ ಸಹಾ ವಯ್ಯಾಳೀ ಕಾವಲಿನ ಮುಖ್ಯರಸ್ತೆಯಲ್ಲಿಯೇ. 80-90ರ ದಶಕದಲ್ಲಿ ಕ್ಯಾಷ್ ಫಾರ್ಮಸಿಯಲ್ಲಿ ಸಿಗದೇ ಇರುವ ಔಷಧಿಗಳೂ ಸಹಾ ಜಾಹ್ನವಿ ಮೆಡಿಕಲ್ಸ್ ನಲ್ಲಿ ಸಿಗುತ್ತಿದ್ದದ್ದದ್ದು ಗಮನಾರ್ಹವಾಗಿತ್ತು. ಒಂದು ಪಕ್ಷ ಅವರ ಬಳಿ ಇಲ್ಲದಿದ್ದಲ್ಲಿ ಕೆಲವೇ ಗಂಟೆಗಳಲ್ಲಿ ಆದನ್ನು ತರಿಸಿಕೊಡುವಂತಹ ಜಾಲಬಂಧ ಅವರದ್ದಾಗಿತ್ತು. ನಂತರದ ದಿನಗಳಲ್ಲಿ ಅವರು ಚಿಲ್ಲರೇ ವ್ಯಾಪಾರಕ್ಕಿಂತಲೂ ಸಗಟು ವ್ಯಾಪಾರಕ್ಕೆ ಒತ್ತುಕೊಟ್ಟು ಇಂದು ನಗರದ ಪ್ರತಿಷ್ಟಿತ ಔಷಧ ವಿತರಕರಾಗಿದ್ದಾರೆ.

ground

90 ರ ದಶಕದಲ್ಲಿ, ಸ್ವಲ್ಪ ತಗ್ಗಿನ ಪ್ರದೇಶದಲ್ಲಿದ್ದರೂ ಅತ್ಯಂತ ಸುಂದರವಾಗಿದ್ದ ವೈಯಾಲಿಕಾವಲ್ ಆಟದ ಮೈದಾನವು ಚಟುವಟಿಕೆಯ ಜೇನುಗೂಡು ಆಗಿತ್ತು, ಈ ಪ್ರಸಿದ್ಧ ವೈಯಾಲಿಕಾವಲ್ ಮೈದಾನವು ಫುಟ್ಬಾಲ್ ಆಟಗಾರರಿಗೆ ಮೆಚ್ಚಿನ ತಾಣವಾಗಿ, ಬೆಂಗಳೂರಿನ ಹೆಸರಾಂತ ವಿನಾಯಕ ಫುಟ್ಬಾಲ್ ಕ್ಲಬ್ಬಿಗೆ ಇದೇ ಮೈದಾನ ತವರಾಗಿತ್ತು. ಅವರ ಆಶ್ರಯದಲ್ಲೇ ಈ ಮೈದಾನದಲ್ಲಿ ರಾಜ್ಯ ಮತ್ತು ಅಂತರಾಜ್ಯ ಮಟ್ಟದ ಅನೇಕ ಪುಟ್ಭಾಲ್ ಪಂದ್ಯಾವಳಿಗಳು ಅಲ್ಲದೇ ಅನೇಕ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ಮತ್ತು ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳು ಅಯೋಜಿಸಲ್ಪಟ್ಟು ಸಾವಿರಾರು ಕ್ರೀಡಾ ಪ್ರೇಮಿಗಳ ನೆಚ್ಚಿನ ತಾಣವಾಗಿತ್ತು. ಕನ್ನಡ ಅನೇಕ ಚಿತ್ರಗಳು ಇದೇ ಮೈದಾನದಲ್ಲಿ ಚಿತ್ರೀಕರಣಗೊಂಡಿರುವುದು ಈ ಮೈದಾನದ ಮತ್ತೊಂದು ಹೆಗ್ಗಳಿಗೆಯಾಗಿತ್ತು. ಆದರೆ 90 ರ ದಶಕದ ನಂತರ ಎಲ್ಲರ ಮನೆಗಳಲ್ಲಿ ಟಿವಿ ಬಂದ ನಂತರ ಹೊರೆಗೆ ಮೈದಾನದಲ್ಲಿ ಆಟವಾಡುವುದೇ ಕಡಿಮೆ ಆದಾಗ, ನಿಧಾನವಾಗಿ ಈ ಮೈದಾನಕ್ಕೆ ಬರುವ ಆಟಗಾರರ ಸಂಖ್ಯೆ ಕಡಿಮೆಯಾಗಿ, ಕತ್ತಲಾಗುತ್ತಿದ್ದಂತೆಯೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟರೆ, ಇನ್ನು ಅಲ್ಲಿನ ನಾಗರೀಕರು ಕಸ ಕಡ್ಡಿಗಳನ್ನು ಹಾಕುವ ಮೂಲಕ ಅತ್ಯಂತ ಚಟುವಟಿಕೆಗಳಿಂದ ಕೂಡಿದ್ದ ಮೈದಾನ ತಿಪ್ಪೇ ಗುಂಡಿಯಂತೆ ಪಾಳುಬೀಳುವಂತಹ ದುಸ್ಥಿತಿ ತಲುಪಿದಾಗ ಸ್ಥಳೀಯ ನಾಗರೀಕರು ಎಚ್ಚೆತ್ತುಕೊಂಡು ಅವರ ಶ್ರಮದಾನದಿಂದ ಈಗ ಮೈದಾನ ಹಿಂದಿನಂತಲ್ಲದಿದ್ದರೂ, ಮಕ್ಕಳುಗಳು ಆಟವಾಡುವಂತಹ ಸ್ಥಿತಿಗೆ ತಲುಪಿರುವುದು ಮೆಚ್ಚುಗೆ ಪಡುವಂತಹದ್ದಾಗಿದೆ.

ಆರೋಗ್ಯಕ್ಕಾಗಿ ರಾಮಕೃಷ್ಣ ನರ್ಸಿಂಗ್ ಹೋಮ್ ಇದ್ದರೆ ಶಿಕ್ಷಣಕ್ಕಾಗಿ, ವೈಯ್ಯಾಳೀಕಾವಲ್ ಅಸೋಸಿಯೇಷನ್ ಶಾಲೆ ಇದೆ. ಪುಸ್ತಕ ಪ್ರಿಯರಿಗಾಗಿ ಈ ಹಿಂದೆ ಗಂಗಾರಾಮ್ ಬುಕ್ ಹೌಸ್ ಇದ್ದದ್ದು ಈಗ ಅದು ಮುಚ್ಚಿ ಹೋದರೂ, ಸಪ್ನಾ ಬುಕ್‌ ಹೌಸ್ ಒಂದು‌ ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ಓದುಗರ ಹಸಿವನ್ನು ನೀವಾರಿಸುತ್ತಿದೆ.

ವಯ್ಯಾಳೀಕಾವಲ್ ಕುರಿತಾಗಿ ಇಷ್ಟೆಲ್ಲಾ ಮಾಹಿತಿ ತಿಳಿದ ನಂತರ ಇನ್ನೇಕೇ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ವಯ್ಯಾಳಿಕಾವಲ್ ಕಡೆಗೆ ಹೋಗಿ ಶ್ರೀರಾಮ ಮಂದಿರ ಮತ್ತು ಶ್ರೀ ವೇಂಕಟೇಶ್ವರಸ್ವಾಮಿಯ ದರ್ಶನವನ್ನು ಪಡೆದು ಹಾಗೇ ರಾಜೇಶ್ ಹೋಟೆಲ್ಲಿನಲ್ಲಿ ತಿಂಡಿಯನ್ನು ತಿಂದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತಿರೀ ತಾನೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

9 thoughts on “ವೈಯ್ಯಾಳೀಕಾವಲ್

    1. ಹಿರಿ ಕಿರಿಯ ಕೆಂಪೇಗೌಡರ ಬಗ್ಗೆ ಮಾಹಿತಿ ಇದೆ… ಉಯ್ಯಾಲೆ ಕಾವಲು ಸೊಗಸಾಗಿದೆ….

      Liked by 1 person

    1. ಹೌದು ಗೀತಪ್ರಿಯ ಅವರು ವಯ್ಯಾಳೀಕಾವಲ್ ನಲ್ಲಿಯೇ ಇದ್ದಿದ್ದು ಗೊತ್ತಿತ್ತು ಅದನ್ನು‌ ಲೇಖನದಲ್ಲಿ ಸೇರಿಸುತ್ತಢನೆ. ಚರಣ್ ರಾಜ್ ‌ಮತ್ತು ಅರವಿಂದ್ ಇದ್ದದ್ದು ‌ಮಲ್ಲೇಶ್ವರಂ 15-16th crosd ಗಣೇಶ ಲಾಡ್ಜ್ ಹಾಗಾಗಿ ಅವರನ್ನು ಇದರಲ್ಲಿ ಸೇರಿಸಿಲ್ಲ.

      ನಿಮ್ಮೀ‌ ಮಾಹಿತಿಗಾಗಿ ಧನ್ಯವಾದಗಳು

      Like

  1. Enjoyed reading your wonderful Article about the place I live and love. Just to add a few interesting trivia:
    *Next to Chowdiah hall used to be a Tent Cinema for many years which later got demolished where Vaidica Dharma Sabha stands today.
    *Other old temple is the Sankey Anjaneya Temple which was built in the time of Mysore Maharaja.
    *Bhashyam Circle, the intersection of Vyalikaval Main Road and Sankey Road actually had a Circle with benches on the periphery and was a very popular evening hangout for families. Many Kannada movie scenes were filmed there.
    *For decades , right from the 60’s , Vyalikaval had the first Iyengar Bakery which was very popular amongst Sadashivnagar, Guttahalli and Palace Orchards area.

    Liked by 1 person

Leave a comment